Monday 13 May 2013

ಹಸಿವನೋಡಿಸುವ್ಹಸಿವು























ಹೊರ ಬನ್ನಿ ಮನೆ ಬಿಟ್ಟು, ಮನೆ ದೇವರಿಗೆ ಬೊಟ್ಟು -
-ಕೈ ಮುಗಿದು ಹೂವಿಟ್ಟು, ದೀಪ-ಧೂಪವ ಸುಟ್ಟು 
ಹಿಡಿದ ಕೊಡಲಿಯ ಹಲ್ಲು, ಮುರಿದು ಬೀಳಲಿ ಇಂದು 
ಬಳ್ಳ-ಪಾವಿನ ಅಳತೆ, ಬೆಸ್ತು ಬೀಳಲಿ ನೊಂದು 

ಒಲೆಯ ಕಾವಿಗೆ ಆಂಟಿ ಉಳಿದ ಮನೆ ಹೆಂಗಸರ -
- ಹೊರಡಿಸಿ, ಕೆಂಡ ಭೂದಿಯ ಕಂಡು ನಲಿಯಲಿ 
ತಂಗಲು ಗಂಜಿಗೆ ಬೆರೆಸಿ ತಿಳಿ ಮಜ್ಜಿಗೆ 
ಈರುಳ್ಳಿ, ಖಾರ ಮೆಣಸಿನಕಾಯಿ ನೆಂಜಿಗೆ 

ಮಾಸಲಂಗಿಯ ತೊಟ್ಟು, ತಲೆಗೆ ಪೇಟೆಯ ಸುತ್ತು 
ಹಸಿರು ಪಚ್ಚೆಯ ಕಂಡು, ಬಿರಿದ ಒಡೆಯನ ಘತ್ತು 
ಕೊಡಲಿ ಏಟಿಗೆ ಸಿಕ್ಕ, ಧಿಟ್ಟ ಪೈರಿನ ನಿಲುವು 
ಧೀರ್ಘ ದಂಡದ ವರಸೆ, ಭುವಿಗಪ್ಪುಗೆಯ ಒಲವು 

ಶಿರವೆರಿದನ್ನಪೂರ್ಣೆಯ ರೂಪಕ ದವಸ 
ಕಣದ ಶುಭ್ರ ನೆಲ, ಗುಡುಬಂಡೆಗೆ ಕೆಲಸ 
ತೆನೆ ಪೈರು ಒಣಗಿದೆ, ಬಡಿ-ಬಡಿಯೇ ಚೆಲ್ಲಿದೆ 
ಧಾನ್ಯ ರೂಪದ ಚಿನ್ನ ಹೊಳೆಯುವ ರಾಶಿ 

ಬಳ್ಳ ತೂಗಿತು ಹೊಟ್ಟೆ ತುಂಬಿಕೊಳ್ಳುವವರೆಗೆ 
ನೀಡಿತು ಮಿಕ್ಕವನು ಮತ್ತೊಂದು ಹೊಟ್ಟೆಗೆ 
ಧಿಕ್ಕು ಪಾಲಾಗಿ  ಹರಿದ ಬಂಜರು ಬಾಳು 
ಕೂಡಿಕೊಂಡಿತು ಸಧ್ಯ ತಾ ತಕ್ಕ ಮಟ್ಟಿಗೆ 

ಹೊಸ ಉಡುಗೆ ಹಬ್ಬಗಳ ಸಂಭ್ರಮಕೆ ಕಾರಣ 
ಹಸಿದ ಮಣ್ಣಿಗೆ ಚೆಲ್ಲಿ ಗೊಬ್ಬರದ ಹೂರಣ 
ಬರಲಿ ಮಳೆ ಕೈಸೇರಲಿ ಮತ್ತೆ ಫಸಲು 
ದೇಶ ಪುಷ್ಟಿಯಾಗಲಿ, ಇರದ್ಹಸಿವಿನ ದಿಗಿಲು 


                                           --ರತ್ನಸುತ 

4 comments:

  1. ಕೈ ಕೆಸರಾದರೆ ಬಾಯ್ ಮೊಸರು. ಎರಡು ಮಾತಿಲ್ಲ ದುಡಿಮೆಯ ಫಲ ವಿವರಿಸುವ ಕವನವಿದು. ಗ್ರಾಮೀಣವನ್ನು ಕಟ್ಟಿಕೊಟ್ಟ ಚಿತ್ರಗಳು ನೆಚ್ಚಿಗೆಯಾದವು.
    ಬಳ್ಳ-ಪಾವಿನ ಅಳತೆ ಓದಿ ನನ್ನ ಹಳ್ಳಿ ನೆನಪಾಯಿತು.

    ReplyDelete
    Replies
    1. ಜಾಗತೀಕರಣದ ಭರಾಟೆಯಲ್ಲಿ ನಶಿಸುತ್ತಿರುವ ನಮ್ಮತನದ ಒಂದು ಹೊರ ಅಂಚಿನ ರೇಖಾಚಿತ್ರ ಬಿಡಿಸಬೇಕೆಂಬುದು ಈ ಪ್ರಯತ್ನದ ಉದ್ದೇಶವಾಗಿತ್ತು ಬದರಿ ಸರ್. ನಿಮ್ಮ ಅನಿಸಿಕೆಗೆ ಧನ್ಯವಾದಗಳು :)

      Delete
  2. ಆಧುನಿಕತೆಯ ಅರ್ಭಟದ ನಡುವೆ ಈ ದಿನದ ಗ್ರಾಮೀಣ ಬದುಕು ಕಮರಿಹೋಗುವ ಮುನ್ನ ನಿಮ್ಮ ಕವನದ ಕೊನೆಯ ಎರಡು ಸಾಲುಗಳಲ್ಲಿರುವ ಆಶಯಗಳು ಈಡೇರಬೇಕು. ಮನಮುಟ್ಟುವ ವಸ್ತುವಿಷಯದ ಆಯ್ಕೆ ಪ್ರಶಂಸನೀಯ.

    ReplyDelete
    Replies
    1. ಧನ್ಯವಾದಗಳು ಪ್ರಶಾಂತ್

      ಅತ್ತಾಗಲೇ ಕಣ್ಣೇರು, ಬತ್ತಿ ಹೋದರೆ ಏನರ್ಥ?
      ಬಿತ್ತಗಲೇ ಬೆಳೆ, ಕೂತು ತಿಂದರೆನರ್ಥ?

      ರೈತರೆಲ್ಲರೂ ಮಾರಿಕೊಂಡು ಹಾಳಾಗುತ್ತಿದ್ದಾರೆ ನೆಲ
      ಯಾರು ಪೋಷಿಸುವವರು ಮುಂದಿನ ಪೀಳಿಗೆಗಳ?

      ಒಂದೂ ಪ್ರಶ್ನೆಯ ಪ್ರಸ್ತಾಪವಿರದಿದ್ದರೂ, ಬರೇ ಪ್ರಶ್ನೆಗಳೇ ಮೂಡಿಸುವ ಈ ಕವನದ ಅಂಚಿಗೆ ನಾನೂ ಉತ್ತರವಿರದೆ ಅತ್ತೆ!!

      Delete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...