Friday 14 June 2013

ಅಮಂಗಳ ರಣರಂಗ


ಬಹು ಬೇಡಿಕೆಯ ಸರಕು 
ಬಹುಮುಖ ಪ್ರತಿಭೆಯ ಛಾಯೆ 
ಕಣ್ಣೊಳಗೆ ಬರೆಯದೆ ಸೆಳೆಯುವ 
ಕಾವ್ಯದ ಮಾಯೆ 
ಅಪರಿಚಿತ ಆಪ್ತತೆಯ ಬೀರುವ ನೋಟ 
ಧಕ್ಕಿಸಿಕೊಂಡವರ ಸ್ವಂತ ಮೈ-ಮಾಟ 

ಅಲ್ಪಾಯುಷ್ಯದ ಅರಮನೆಯ ಯೋಗ 
ಕಾಂಚಾಣಕೆ ಕೈ ಸೇರುವನುರಾಗ 
ಮೋಂಬತ್ತಿ ಬೆಳಕು, ಮೂಗುತ್ತಿ ಮಿನುಗು 
ಗೌಪ್ಯ ದ್ವಾರದ ಶೋಧನೆಯ ಗುಪ್ತ ಜಾಗ 


ಧಿಕ್ಕಾರದೊಂದಿಗೆ ಧೂಪ ಪರದೆಯ ಹಿಂದೆ 
ಧರ್ಮವನು ದಂಡೆತ್ತಿ ಕೊಂದ ಪತಿವ್ರತೆಯರು 
ಮನೆಯ ಜೇನನು ಜರಿದು, ಪಾಷಾಣ ಮೊರೆ ಹೋದ 
ಮೋಹ ರಣರಂಗದಲಿ ದಣಿದ ಸತ್ಪುರುಷರು 



ಅನುಮೋದಿಸದ ಮನದ ಒತ್ತಾಯದ ಕಸುಬು 
ಮುಂಬಾಗ ಹೊಂಗಿರಣ, ಹಿತ್ತಲಲಿ ಮಬ್ಬು 
ಹೊಸಕುವ ಕೈಗಳಿಗೆ ಗಂಧ ಸೋಕಿದ ಗುರುತು 
ಹೂಗಳಿಗೆ ಇದ್ದ ಗುರುತಿಗೆ ಅಳಿದ ಹೆಸರು 

ಇಲ್ಲಿ ಸೋತವರು ಮತ್ತೆಲ್ಲೋ ಗೆಲ್ಲುವರು 
ಗೆದ್ದೆವೆಂದುಕೊಂಡೇ ಮತ್ತಿಲ್ಲೇ ಸೊಲುವರು 
ಅಸಹಾಯಕತೆಯ ಕಥೆ ಕೆಲವರದ್ದಾದರೆ 
ದುರಂತ ಅಂತ್ಯದ ಕಥೆ ಇನ್ನುಳಿದವರದ್ದು...... 

ಮೌನದೊಳಗಿನ  ಕೂಗು ಅಲ್ಲಿಯವರೆಗೂ ಯಾರಿಗೂ ಕೇಳಿಸದು, ದೇವರಿಗೂ ಸಹಿತ!!!

                                  
                                                                                --ರತ್ನಸುತ 

1 comment:

  1. ದೇವರು ಕಿವುಡ ಸ್ವಾಮಿ, ಅವನಿಗೆ ಕೇಳಿಸದು ಮೌನ ಪ್ರಾರ್ಥನೆ - ಅಳಲು. ಅದು ಮುಚ್ಚಿ ಹೋಗಿದೆ ಗಂಟಲು ಹರಿದುಕೊಳ್ಳುವ ಮಂತ್ರ ಮತ್ತು ಗಂಟಾರವದಲ್ಲಿ! ಒಳ್ಳೆಯ ಕವನ...

    ReplyDelete

ಅತಿ ಮಧುರ ಅನುರಾಗ

ಅತಿ ಮಧುರ ಅನುರಾಗ  ನಿನ್ನೊಲವ ಮಳೆ ಹನಿಗೆ  ಮಿಂದಿರಲು ಮನಸಿದು     ನಿಂತು ನಿಂತು ಬೀಸಿದಂತೆ  ಸಂಜೆ ತಂಪು ಗಾಳಿ  ಅಂಕೆ ಮೀರಿ ಬರುವ ಮಾತು  ಹಾಕಬೇಕೇ ಬೇಲಿ  ಜೊತೆ ಇರಲು ...