ನಾ ಸತ್ತ ದಿನದಂದು !!

ಯಾರು ಹೆತ್ತ ಮಗನೋ ಏನೋ?
ನೆತ್ತರು ಮಾತ್ರ ನನ್ನಂತೆಯೇ ಇತ್ತು
ಕೆಂಪಾಗಿ ಹರಿದು, ಕಪ್ಪು ಹೆಪ್ಪಾಗಿ
ಒದ್ದಾಟ ನರಳಾಟವೂ ಜೊತೆಗೂಡಿ

ನನ್ನಂತವನೇ ಅಂದಮೇಲೆ
ನನ್ನವನೇ ತಾನೇ?
ಅಣ್ಣನೋ, ತಮ್ಮನೋ ಪರ ಜನ್ಮನದಲ್ಲಿ
ಇಹ ಜನ್ಮಕೆ ಆದನೊಂದಿಷ್ಟು ದೂರ

ತುಟಿ ಪಟಿಸುತಿತ್ತು ಅಮ್ಮ... ಅಮ್ಮ...
ಮುಷ್ಟಿಯಲಿ ಹಿಡಿದಿಟ್ಟ ಅಲ್ಪ ಪ್ರಾಣ
ಅರೆದೆರೆದ ಕಣ್ಣಿಗೆ ಕಂಡವರೇ ದೇ-
-ವರೂ ಎಚ್ಚರಗೊಳ್ಳದ ಹೀನನಾದ

ಮಾರುದ್ದ ದೂರದಲಿ ಸೈಕಲ್ಲು ಹಾರಿತ್ತು
ಡೊಂಕಾದ ಗಾಲಿಗಳು ಅಲ್ಲೆರಡು
ಜೇಬಿಂದ ಚೆಲ್ಲಿದ ಚಿಲ್ಲರೆಗೆ ಅರಳಿದವು 
ನರಳಿದವನ ಪಾಲಿಗೆ ಕಣ್ಕುರುಡು

ಜನ ಜಂಗುಳಿಯ ಲೊಚಗುಡುವ ಸದ್ದಲ್ಲಿ 
ಕೊನೆಯುಸಿರ ಸದ್ದೂ ಮರೆಯಾಗುತಿತ್ತು
ನಾನೂ ಸಾಮಾನ್ಯರಂತೆಯೇ,ಸರಿಯಿಲ್ಲ
ಜಾರಿಕೊಳ್ಳುವ ಬುದ್ಧಿ ನನ್ನಲ್ಲೂ ಇತ್ತು

ಪ್ರಾಣ ಹಾರಿತು ತಾನು ನನ್ನ ಛೇಡಿಸುತ
ನನ್ನೊಳಗೆ ತನ್ನತನವ ಕಂಡು ಬಿಕ್ಕಿ
ಬಡಪಾಯಿ ದೇಹವು ಅನಾಥವಾಯಿತು ಅಲ್ಲಿ 
ಇನ್ನು, ಒಂದೆರಡು ಹನಿ ಹರಿಸುವುದು ಬಾಕಿ

ಅಲ್ಲಿ ಸತ್ತವನು ಬೇರಾರೂ ಅಲ್ಲ
ನಾನು, ಅವನು, ಇವನು ಇಡೀ ಆವರಣ
ನಾಯಿ, ಕಾಗೆ, ಬಸ್ಸು, ಕಾರು, ರಸ್ತೆ
ಗಿಡ, ಮರ, ಚಪ್ಪಲಿ, ಮನಸ್ಸು ಎಲ್ಲ

ಇನ್ನೆಲ್ಲಿ ನಿದ್ದೆ ?
ಇದ್ದುದ್ದನ್ನೆಲ್ಲವ ನಿಶ್ಚಲ ಕಣ್ಣಿಗೆ ಧಾರೆಯೆರೆದು
ಎಚ್ಚರವಾಗಬೇಕು ಇನ್ನಾದರು ನಿಕ್ರುಷ್ಟ ಕಣ್ಣುಗಳು
ಕಣ್ಣೀರ ಕಾರಣವ ಹುಡುಕದೆ, ಕರುಣೆಯಿಂದ !!!

                                                 -- ರತ್ನಸುತ 

Comments

  1. ಸಮೀಕರಣ ಅನ್ವರ್ಥವಾಗಿದೆ. ಅಮೂರ್ತತೆಯನ್ನು ಮೂರ್ತತೆಗೆ ತರುವ ಪ್ರಯತ್ನ ಯಶಸ್ವಿಯಾಗಿದೆ.
    ಪ್ರತಿಮೆಯ ಅನಾವರಣ ಸ್ಪಷ್ಟವಾಗಿದೆ.

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩