Wednesday 15 January 2014

"ನಂಬಿಕೆ"ಯೇ ದೇವರು !!

ತೀರ್ಥಕ್ಕೆ ಶೀತ 
ಪ್ರಸಾದಕ್ಕೆ ಉಷ್ಣ 
ಕಣ್ಣೊಂದೇ ಸಾಕಯ್ಯ 
ಭಕ್ತಿ ಪರವಶಕೆ 
ಆರತಿಗೆ ದಕ್ಷಿಣೆ 
ಮೂರು ಪ್ರದಕ್ಷಿಣೆ- 
ಹಾಕದೆ ಕೈ ಮುಗಿಯುವೆ
ಬೇಡುತ ರಕ್ಷೆಗೆ 
 
ಮಂತ್ರಗಳ ಕಲಿತಿಲ್ಲ 
ವಿಧಿ ವಿಧಾನಗಳಾವೂ 
ಕರಗತ ಆಗಿರದ 
ಭಕ್ತ ನಾನಯ್ಯ 
ಸಂಕಟದಿ ನಿನ್ನ ತುಸು 
ಹೆಚ್ಚಿಗೇ ಬೇಡುವೆನು 
ಮಿಕ್ಕಂತೆ ನೀ ನನ್ನ 
ತಿದ್ದಿ ನಡೆಸೈಯ್ಯ 
 
ಎಲ್ಲೆಲ್ಲೂ ಇರುವೆಯೆಂಬ 
ಸತ್ಯವನು ನಾನು 
ಗಂಭೀರವಾಗಿಯೇ 
ಪರಿಗಣಿಸಿದವನು 
ನಿನ್ನ ಆಕಾರವದು 
ಊಹೆಗೂ ನಿಲುಕದ್ದು 
ಭಾವ ರೂಪಿಯೇ 
ಮನದಿ ಬಲ್ಲೆ ನಾನು 

ಹೆಸರಿಟ್ಟು ಕರೆವಷ್ಟು 
ಸುಜ್ಞಾನಿ ನಾನಲ್ಲ 
ತಾಯಿ, ತಂದೆ
ಅಂದರಷ್ಟೇ ಸಾಕೆ?
ಕಂದಮ್ಮ ನಾ ನಿನಗೆ 
ನನಗೇನು ಬೇಕಿದೆಯೋ 
ನಿನಗೇ ತಿಳಿದಿದೆ
ನಾ ಕೇಳಬೇಕೆ?

ಅಲ್ಲನೆನ್ನ ಬಲ್ಲ 
ಯೇಸು  ಮರೆವವನಲ್ಲ 
ಮುಕ್ಕಣ್ಣನ ಮಹಿಮೆ 
ತೀರದಲ್ಲ 
ಚರಾಚರಗಳ ಕಾಯೋ 
ದೇವನೊಬ್ಬನೇ
"ನಂಬಿಕೆ"ಯೇ ಅಲ್ಲವೇ 
ಅವನ ಮೂಲ?
 
              -- ರತ್ನಸುತ 

1 comment:

  1. ನಂಬಿಕೆ ಕೆಣಕದಿರು ಮನುಜ, ಪರದೆ ಹಿಂದಲ ದೇವರೆಲ್ಲರೂ ಕಲ್ಲುಗಳೇ ಸ್ವಭಾವದಲ್ಲಿ.

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...