Monday 13 January 2014

ನಿನ್ನೊಲುಮೆಯಿಂದಲೆ....

ಸ್ಪರ್ಶದಲೇ ಸೆರೆ ಹಿಡಿಯುವಾಸೆಯಲ್ಲಿ 
ನಿನ್ನ ಪಾಲಿಗೆ ನಾ ಕುರುಡಾಗಲೇನು?
ಜೇನಿನಧರದ ಸವಿಯ ಪರಿಚಯದ ಸಲುವೆ 
ಅಭಿರುಚಿಗಳ ಮರೆತು ಬರಡಾಗಲೇನು?
 
ಕಣ್ಣ ಹೊಳಪಿಗೆ ನನ್ನ ಮೈ ಮರೆಸುವ ಬಯಕೆ 
ತಾಮಸವ ಇನ್ನಷ್ಟು ಹೊತ್ತು ಪೂಜಿಸುವೆ 
ಮೌನದಲಿ ಆದಷ್ಟೂ ಲೀನನಾಗುವೆ
ನಂತರ ನಿನ್ನ ತೆಕ್ಕೆಗೆ ಸಿಕ್ಕ ಭೋರ್ಗರೆವೆ  
 
ಸಮಯ ಚುರುಕಾದಷ್ಟು ನನಗೆ ನಿಟ್ಟುಸಿರು 
ನಿನ್ನ ಸೇರುವ ಗಳಿಗೆ ಸನಿಹವಾಗಿರಲು 
ಕಿತ್ತಿಡುವೆ ಮುಳ್ಳನ್ನು ಹೆಜ್ಜೆ ಮುಂದಿಟ್ಟರೂ 
ಕ್ಷಮೆಯನ್ನೂ ನೀಡದೆ ಬೇಡಿಕೊಳಲು 
 
ನೀರಲ್ಲಿ ಅದ್ದಿದ ಚಂದಿರನ ಮೊಗದವಳೆ 
ಮುಂದಿಟ್ಟು ಹಾಳೆ ಹರಿದು ಗೀಚೊ ತವಕ 
ಬಿಡಿಸುತ್ತಲೇ ಬಂದಿಯಾಗುವೆ ನಿನ್ನೊಳಗೆ 
ಕಣ್ಣಿಂದ ಬಿಡುಗಡೆ ಸಿಗುವ ತನಕ 

ಎಳೆ ವೀಳೆಯದೆಲೆ ಮೇಲೆ ಸವರಿದ ಸುಣ್ಣ 
ಚೂರು ಚೂರಡಿಕೆ, ನಿನ್ನ ಸಿಹಿ ನಗೆಯೊಡನೆ 
ನನ್ನಾಸೆಯ ಬೆರೆಸಿ ನುರಿವಾಗ ಹೊಮ್ಮುವುದೇ 
ಒಲುಮೆಯ ಬಣ್ಣ, ನೀ ಅದೃಷ್ಟ ಚಿನ್ನ 

ಸಂಜೆ ಕತ್ತಲ ದಾಟಿ ಮುಂಜಾನೆಗೆ ನೆಗೆವೆ 
ನೀನಿರದ ಇರುಳುಗಳ ಕಲ್ಪನೆಯೂ ಘೋರ 
ನಿನ್ನಿರುವಿಕೆಯ ನಡುವೆ ನಾನು ಮದನನ ತುಂಡು 
ಇಲ್ಲವಾದರೆ ಅಲೆಗೆ ಕಾದ ತೀರ .... 

                                               -- ರತ್ನಸುತ

1 comment:

  1. ನನಗೆ ಈ ಕವನ ಕೆ.ಎಸ್.ನರಸಿಂಹಸ್ವಾಮಿಯವರನ್ನು ಜ್ಞಾಪಕಕ್ಕೆ ತಂದುಬಿಟ್ಟಿತು.
    'ನೀನಿರದ ಇರುಳುಗಳ ಕಲ್ಪನೆಯೂ ಘೋರ ' xerox ಅಭಿಪ್ರಾಯ ನನ್ನದೂನೂ..

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...