Saturday 29 March 2014

ಮುಗಿಯದ ಕವಿತೆ

ನಿನ್ನ ಬೆನ್ನಿಗಾನಿಸಿ
ಹಾಳೆ ಹಾರದಂತೆ ಹಿಡಿದು
ಗೀಚಿಕೊಂಡ ಪದ್ಯದಚ್ಚು
ಬೆನ್ನ ತುಂಬ ಮೂಡಿದೆ;
ಬರೆದುಕೊಂಡವೆಲ್ಲವನ್ನೂ
ಅರಿತುಕೊಂಡೆ ಆದ್ದರಿಂದ
ಮಡಿಸಿ ಜೇಬಿಗಿಟ್ಟುಕೊಂಡೆ
ಮರೆಸಿಕೊಂಡೆ ನೀಡದೆ

ಸೂಚ್ಯವಲ್ಲ ನನ್ನ ಹಾಡು
ಸುತ್ತಿ ಬಳಸಿ ಬಿಡಲುಬಹುದು
ಹೇಳಬಯಸಿದಂಥ ಮಾತು
ಭಾವತೀತವಾದೀತು
ಹೆಚ್ಚಿಗೇನೂ ಬಯಸಲೊಲ್ಲ
ಮನದ ಅಂತರಂಗದಲ್ಲಿ
ಹೆಚ್ಚು ಎಂಬಂತೆ ಹೆಜ್ಜೆ ಗುರುತ
ಬಿಟ್ಟರಾಯಿತು

ಗರಡಿಯಲ್ಲಿ ಪಳಗಲಿಲ್ಲ
ಜರಡಿ ಎಂದೂ ಹಿಡಿಯಲಿಲ್ಲ
ಕುರುಡು ಪ್ರೇಮ ಮಾತ್ರವಷ್ಟೇ
ನನ್ನ ಗುರುತು ಚೀಟಿಯು
ಯಾವ ಅದ್ಭುತಕ್ಕೆ ಹೋಲಿಸೋಕೆ
ಹೋದರಲ್ಲಿ ಸೋಲು
ಅಂಥ ವಿಸ್ಮಯ ಉಂಟು ಮಾಡಿತೆಮ್ಮ
ಬೇಟಿಯು

ತಾರಕಕೆ ನಿನ್ನ ಹಸಿವು
ಕಣ್ಣ ಮಿಂಚ ಮೇಲೆ ಒಲವು
ನಾನು ಅದರ ಪರಮ ವೈರಿ
ಹಿಂದೆ ಮೊದಲಿನಿಂದಲೂ
ಹೂವಿನೊಡನೆ ನಿತ್ಯ ಸಮರ
ನಿನ್ನ ಹೊಗಳಿ ಬರೆದುದಕ್ಕೆ
ನನ್ನ ಕಂಡು ಮುದುಡುತಾವೆ
ಮುನಿಸಿಕೊಂಡು ಈಗಲೂ

ಎದುರು ಬಿದ್ದರವರಿಗೆಲ್ಲ
ತರ್ಕ ನೀಡಲಾಗುತಿಲ್ಲ
ನಿನಗೆ ಸೋತ ಪರಿಯ ನಾನು
ಹೇಗೆ ತಾನೆ ಬಿಡಿಸಲಿ
ಎದುರು ಕಂಡದಕ್ಕೂ ಹೆಚ್ಚು
ಬೆವರುತೇನೆ ನಿನ್ನ ಎದುರು
ನಮ್ಮ ಗುಪ್ತ ಬೇಟಿ ಜಾಗ
ನಿಕುಂಜಮಾನ ಕನಸಲಿ

                    -- ರತ್ನಸುತ

2 comments:

  1. ಛಂದ.....
    "ಗರಡಿಯಲ್ಲಿ ಪಳಗಲಿಲ್ಲ
    ಜರಡಿ ಎಂದೂ ಹಿಡಿಯಲಿಲ್ಲ
    ಕುರುಡು ಪ್ರೇಮ ಮಾತ್ರವಷ್ಟೇ"
    ಬಹುತೇಕ ಬ್ಲಾಗಿಗರ ದನಿಯಿದು ...
    ವಂದನೆಗಳು ಭರತ್ ಛಂದದ ಸಾಲುಗಳಿಗೆ..

    ReplyDelete
  2. ಹಲವು ಬಾರಿ ನಾವೂ...
    ’ಬರೆದುಕೊಂಡವೆಲ್ಲವನ್ನೂ
    ಅರಿತುಕೊಂಡೆ ಆದ್ದರಿಂದ
    ಮಡಿಸಿ ಜೇಬಿಗಿಟ್ಟುಕೊಂಡೆ
    ಮರೆಸಿಕೊಂಡೆ ನೀಡದೆ’

    ReplyDelete

ಅತಿ ಮಧುರ ಅನುರಾಗ

ಅತಿ ಮಧುರ ಅನುರಾಗ  ನಿನ್ನೊಲವ ಮಳೆ ಹನಿಗೆ  ಮಿಂದಿರಲು ಮನಸಿದು     ನಿಂತು ನಿಂತು ಬೀಸಿದಂತೆ  ಸಂಜೆ ತಂಪು ಗಾಳಿ  ಅಂಕೆ ಮೀರಿ ಬರುವ ಮಾತು  ಹಾಕಬೇಕೇ ಬೇಲಿ  ಜೊತೆ ಇರಲು ...