ಕಂಬನಿಯ ಕಾಣ್ತ

ಕಣ್ಸುತ್ತ ಕಣ್ಗಪ್ಪು ಕರಗಿತೇ ಹುಡುಗಿ?
ಕಣ್ಕುಂಭ ಕೈತಪ್ಪಿ ಕಂಬನಿಯು ಜಾರಲು
ಗದ್ದ ಎದೆಗೊರಗಿದೆ ಕೊರಳ ಬಾಯ್ಸೊರಗಿ
ಮೌನವಹಿಸಿ ಮಾತ ಮತ್ತೊಮ್ಮೆ ಗೆಲ್ಲಲು!!

ಗಲ್ಲ ಮೇಲೆಲ್ಲ ಹರಿದಾಡಿದಾ ತೊರೆಗೆ
ದಿಕ್ಕು ಸೂಚಕ ದಾರಿ ಇರದಾದರೇನು
ಮೆಲ್ಲ ತುಟಿ ಜಗ್ಗಿ ಬಿಡು ಬಿಕ್ಕಳಿಕೆ ಬದಿಗೆ
ಗುಳಿ ಬತ್ತಿ ಹೋದಂತೆ ಗೋಳಿಟ್ಟರೂನು!!

ಭಾರ ಹೊರೆಸು ನಿನ್ನ ಖಾಲಿ ಭುಜಗಳಿಗೆ
ರಜೆ ಘೋಶಿಸು ಚಿಂತೆ ಸಂತೆ ಜರುಗಿಸದೆ
ಶಿಕ್ಷೆ ವಿಧಿಸು ಕತ್ತಲಾಗಿಸುವ ಬಾಗಿಲಿಗೆ
ಮನದ ಕಿಟಕಿಯ ತೆರೆ ತೀರ ಯೊಚಿಸದೆ!!

ಗಮನ ಎತ್ತಲೋ ಮಾಯವಾದಂತೆ ತೋಚಿದರೆ
ಒಮ್ಮೆ ನನ್ನೆಡೆ ಬಳಸಿ ಕಣ್ಣೋಟ ಬೀರು
ನಿನ್ನ ನೋವಿನ ಬಳ್ಳಿಯೊಣಯೆಲೆಯ ಘಮಲು ತಾ
ಕ್ಷಣಮಾತ್ರದಲಿ ಕೆದಕಿ ಮುಂದಿಡುವೆ ಬೇರು!!

ಸುಕ್ಕುಗಟ್ಟಿದೆ ಸಾಕು ಮಾಡು ಮಾರಾಯ್ತಿ
ದಾವಣಿ ದುಃಖಿಸಿದೆ ಸದ್ದನ್ನು ನುಂಗಿ
ಮೋಡದ ಕೈ ಹಿಡಿದು ತಂದಾಯ್ತು ಪೂರ್ತಿ
ಅಚ್ಚಿರಿ ಮೂಡಿಸಿದೆ ಈ ನಿನ್ನ ಭಂಗಿ 

ಮುಂದಾದ ಬೆರಳು ತಾ ಹಿಂಜರಿಯುವಾಗ
ಹಿಡಿದಿಡುವ ಸಾಮರ್ಥ್ಯ ಸೋತಂತೆ ಕೊನೆಗೆ
ಬಾದಿಸುವವುಗಳ ಸದೆಬಡಿಯುವೆ ಕೇಳು
ನಿನ್ನ ನಗುಗಾಣದೆ ಮುದವಿಲ್ಲ ಎನಗೆ!!

                                           -- ರತ್ನಸುತ

Comments

  1. ನನಗೆ ತುಂಬಾ ಇಷ್ಟವಾದ ಪದ ಪ್ರಯೋಗ 'ಕಣ್ಕುಂಭ". ಒಳ್ಳೆಯ ಕವನ.

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩