ಸೂತಕದ ಬೀದಿಯಲಿ

ಹೊರಗೆ ಯಾರದ್ದೋ ಸಾವಿನ ತಮಟೆ ಸದ್ದಿಗೆ
ಮನೆಯೊಳಗೆ ಹಸುಳೆಗೆ ನಿದ್ದೆಯಿಲ್ಲ;
ಅಮ್ಮಳ ಎದೆ ಆಗಲೇ ಖಾಲಿ,
ಒಲೆಯ ಹಾಲನ್ನ ಬೆಕ್ಕು ಕದ್ದಿರಬೇಕು?
ಅತ್ತ ಮಗುವಿನ ಕಂಠ ಬಿಕ್ಕುತಿದೆ ಚೂರು,
ಕೌದಿಗೂ ಸಂಬಾಳಿಸಿ ಸಾಕಾಗಿ ಹೋಗಿದೆ;
ಉಲುಲುಲುಲುಲು ಲಾಯೀ
ಬದುಕಿದ್ದವನೇ ಬಡಪಾಯಿ!!

ಹೆಣದ ಸುತ್ತ ಬಾಟಲಿ ಸೆಂಟು ಸಿಂಪಡಿಸಿ
ನಿಚ್ಚಳ ದೇಹದ ಮೇಲೆ ವಿವಿಧ ಹೂಗುಚ್ಚ,
ಮಧು ಹೀರಿ ತಿಳಿಗೇಡಿ ದುಂಬಿ
ಮಡಿ ಮೀರಿ ಹಾರಿತು ದೇವರ ಕೋಣೆಗೆ;
ಪಕ್ಕದ ಮನೆಯಿಂದ ಸಾಲ ಪಡೆದ ಹಾಲ
ಕಂದನ ಹೊಟ್ಟೆಗರಿಸಲು ಹಸಿವ ಶಮನ,
ಮೆರವಣಿಗೆ ಹೊರಟಿತು ಮಸಣದೆಡೆಗೆ 
ಹೊಟ್ಟೆ ತುಂಬಿದ ಮಣ್ಣಿಗೂ ಹಸಿವ ಧ್ಯಾನ!!

ಬೀದಿ ಬೀದಿಗೆ ಬಡಿಸಿ ಬಿಡಿ ಹೂವ ಪಕಳೆಗಳ
ಮಂಡಕ್ಕಿ, ಚಿಲ್ಲರೆ ಬಿಲ್ಲೆಗಳ ಚೆಲ್ಲಿ
ಪಾನ ಮತ್ತರು ತೂರಿ ಬಿದ್ದರಾ ಚರಂಡಿಗೆ!!
ಇಂದೇಕೋ ನಕ್ಕಂತೆ ಬೋಳು ತಲೆ ಕಳ್ಳಿ;
ಸೊಳ್ಳೆ ಪರದೆಯ ಒಳಗೆ ಸಣ್ಣ ಗೊರಕೆ
ನಿರ್ಗದ್ದಲದ ನಿದ್ದೆಗೆ ತಾಯ ಹರಕೆ,
ಮೌನ ತಾಳಿತು ಬೀದಿ, ಮನೆಯ ಕೊಠಡಿ
ಸ್ಥಿರತೆ ಕಂಡಿತು ಚೂರು ತೂಗು ತಕ್ಕಡಿ!!

ಸ್ವಚ್ಛಗೊಂಡಿತು ಬೀದಿ, ಏನೂ ಆಗಿರದಂತೆ
ಹೊಗೆಯ ಮೇಗಡೆ ಒಂದು ಗಡಿಗೆ ನೀರು,
ತಾಂಬೂಲ ಜಗಿದು ಉಗುಳುವ ಸಾಲಿನಲ್ಲಿ
ಒಳಗೆ ಬೆಂದ ಅನ್ನ, ಹಸಿ ಹುಣಸೆ ಸಾರು;
ಕದಲಿತೋ ಜೋಲಿ, ಅತ್ತನೋ ಕಂದ!!
ಆ ಬದಿಯಲೊಂದು ಕಣ್ಣನು ನೆಟ್ಟಳಮ್ಮ
ಆದದ್ದೆಲ್ಲವೂ ತನ್ನ ಪಾಡಿಗೆ ಮುಗಿದು
ಎಲ್ಲಿ? ಪತ್ತೆ ಇಲ್ಲ ಅಪರಿಚಿತ ಗುಮ್ಮ?!!

                                       -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩