Wednesday 25 June 2014

ಸ್ವಪ್ನ ಸ್ಖಲನ

ಒಂದೊಂದೇ ಪದ ಮುಟ್ಟಿ
ಮೈಲಿಗೆ ಆಗಿಸುವೆ
ಈಗಷ್ಟೇ ಮುಗಿಸಿದೆ ಮೈಥುನವನು;
ಪದ ಕಟ್ಟದ ಹೊರತು
ಒಣಗಿ ಮುಪ್ಪಾಗುವುದು
ಕೇಳಿ ಕೂರದೆ ಯಾವ ಕಾರಣವನು!!

ನುಲಿದಾಗ ನುಸುಳಿದವು
ತಿರುಳಿಲ್ಲದೆ ಬಲಿತು
ಹೊರಟವಾ ಗುಪ್ತಾಂಗವನ್ನು ಮೀರಿ;
ಇರುಳನ್ನು ಆವರಿಸಿ
ಕತ್ತಲೆಯ ನೇವರಿಸಿ
ಐಕ್ಯವಾದವು ಸ್ವಪ್ನ ಸ್ಖಲನ ಸೇರಿ!!

ಹಿಡಿಯಷ್ಟರ ಲೇಖನಿ
ಮುಗಿದ ಶಾಹಿ
ನೆಲ ಹಾಳೆ ಮೇಲೆಲ್ಲ ಮಸಿಯ ಛಾಯೆ;
ಸಾಗರದ ಅಲೆಯೊಂದು
ದಡ ಕಲ್ಲ ಅಪ್ಪಳಿಸಿ 
ತಲೆಯ ಒರೆಸಲು ಬೀಸು ಗಾಳಿ ಜಾಯೆ!!

ಮತ್ತೊಂದು ಸರತಿಗೆ
ಮತ್ತೊಮ್ಮೆ ಕಾಯುವುದು
ಆಗಾಗ ಹೊಳೆದವೋ ಸಣ್ಣ ಮೀನು;
ಗಾಳ ಸಣ್ಣದು ಚೂರು
ಬೀಸಿದರೂ ಬೀಳೊಲ್ಲ
ಒಣ ಮೀನಿಗುಸಿರನ್ನು ನೀಡಲೇನು?!!

ಬಟಾ ಬಯಲಿನ ಹೂವು
ಪಕ್ಕ ಉರಿಯದ ಹಣತೆ
ಎಣ್ಣೆ ಬತ್ತದ ಬಾವಿ ಬೆಳಕಿಗಲ್ಲ;
ಕೊರೆದು ನೋಡಿದೆ ಆಳ
ಕೊಳವೆಯೊಳಗಿಲ್ಲ ಜಲ
ಮಳೆಗಾಲ ಬರುವನಕ ಕಾಯಲಿಲ್ಲ!!

ಮೋಡ ಕೂಡುವ ಸಮಯ
ಭೂಮಿ ತೊಟ್ಟಳು ಬಳೆಯ
ಆಕಾಶಕೂ ಮತ್ತೆ ಸುರತ ಯೋಗ;
ತಣಿವು ತಟ್ಟಿದ ಗೋಡೆ
ಒಡಲ ಬಯಸಿದ ಕಾವು
ಮತ್ತೊಂದು ಕಾವ್ಯ ಸಸಿ ಮೊಳೆಯಿತಾಗ!!

ಅಲ್ಪಾಯುಷ್ಯ ಸಿರಿ
ಕಮರಿತುತ್ಸುಕತೆ ಗರಿ
ಗಂಡು ನವಿಲಿಗೆ ಈಗ ನಿತ್ರಾಣ ಪ್ರೀತಿ;
ನೆಲ ಚೂರು ಹಸಿಯಾಗಿ
ಹಾಳೆಯೊಳು ಮಸಿ ತಾಗಿ
ಸರ್ವ ಕಾರ್ಯಕೂ ಕಡೆಗೆ ವಿಶ್ರಾಂತಿ ಪಾಪ್ತಿ!!

                                         -- ರತ್ನಸುತ

1 comment:

  1. 'ಅಲ್ಪಾಯುಷ್ಯ ಸಿರಿ'ಯಲೇ ಕೆಲ್ವೋಮ್ಮೆ ಸಂತಾನೋತ್ಪತ್ತಿ ಮಾಯೆ! ಅಂತೆಯೇ ಕವಿಗೂ ಸಹ!!

    'ತಣಿವು ತಟ್ಟಿದ ಗೋಡೆ
    ಒಡಲ ಬಯಸಿದ ಕಾವು
    ಮತ್ತೊಂದು ಕಾವ್ಯ ಸಸಿ ಮೊಳೆಯಿತಾಗ'
    ಅಲ್ಲವೇ ಮತ್ತೇ.....

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...