Tuesday 15 July 2014

ಕವಿತೆ

ಕವಿಗೆ ಕವಿತೆಯೇ ಅಸ್ತ್ರ,
ತನ್ನಿಷ್ಟಕೆ ಬರೆಯಲು
ಇನ್ನಾರನೋ ಇರಿವುದು;
ಹಿತವಲ್ಲ ಪ್ರತಿ ಸಲವೂ
ಪ್ರತಿಯೋರ್ವರ ನಿಲುವಿಗೆ!!

ಬಿಕ್ಕಿದವರ ಕಣ್ಣೀರ
ಸಂಪಾದಿಸುವವುಗಳು,
ಬೋಳು ಬರದ ಛಾಯೆ
ಸತ್ವ ಕಳೆದವು ಹಲವು;
ಮಿಕ್ಕವೆಲ್ಲ ಲೆಕ್ಕವಷ್ಟೆ
ಮುರು ಮತ್ತೊಂದು!!

ಕನಸ ಕಿತ್ತು ತಿಂದ
ಬಕಾಸುರ ಭಾವಗಳು
ನಿದ್ದೆಯಲ್ಲೂ ಪ್ರಾಸ ಬದ್ಧ
ಕಾವ್ಯವಾಗಿ ಹೊಮ್ಮಿ
ಗಿಜುಗುಡುವ ಜೀರಂಗಿಯಂತೆ!!

ಕಸದಲೂ ಹಾಳೆಯ ಚೂರು
ಕೆಸರಲೂ ಪದ್ಮ ಪುಷ್ಪ
ಕುಸುರಿಯ ಹೆಸರನಿಟ್ಟು
ಜಾರಲಾನಂದ ಬಾಷ್ಪ;

ನೀಳ ಸಾಲ ನಡುವು
ಮಡದಿಯ ನಿತಂಬವೋ?
ಜನನನಿಯ ಮಡಿಲೋ?
ಗೆಳತಿಯ ಗೌಪ್ಯ
ಸೆರಗ ಹಿಂದಿನ ಸಿರಿಯೋ?!!
ಮಾರ್ಮಿಕ, ಪ್ರಚೋದಕ
ಪ್ರಚಾರಕ, ಪ್ರಭಾವಿಕ!!

ಗಿರಿ ಅಂಚಿನ ಹಿಮವು
ಗರಿ ಕುಂಚದ ಘಮವು
ಮನ ಮೈಲಿಗೆ ಸೂತಕವೂ
ಹೃದಯಾಂತರಾಳ ಪುಳಕವೂ;
ಮೌನ ಮುರಿವ ಸಿತಾರ
ಸದ್ದು ಗದ್ದಲ ಬಿಡಾರ
ಚಿಣ್ಣರ ಚಿಲಿಪಿಲಿ
ಬಣ್ಣದ ಓಕುಳಿ!!

ಮಧ್ಯಂತರ ಮುಗಿದು
ಮನ್ವಂತರ ದಾಟಿ
ವಾರಾಂತ್ಯದ ಬಿಡುವಿಗೆ
ಕಾಯದ ನಿರಾಧಾರ ಪದಗುಚ್ಚ
ಕೂಸು ಬಿಟ್ಟ ಹೆಜ್ಜೆ ಗುರುತು
ಬಾಣದಷ್ಟೇ ತೀಕ್ಷ್ಣ 
ಕಣ್ಣ ಕಾಡಿಗೆ ನೀರು
ಒಂದು ದೀರ್ಘ ಉಸಿರು!!

                       -- ರತ್ನಸುತ

1 comment:

  1. ಕವಿತೆಯ ಹುಟ್ಟು ಗುರ್ತಿಸುತ್ತಾ ತಾವು ಬರೆದಂತೆ:
    ’ವಾರಾಂತ್ಯದ ಬಿಡುವಿಗೆ
    ಕಾಯದ ನಿರಾಧಾರ ಪದಗುಚ್ಚ’
    ದಿಟ...

    ReplyDelete

ಅತಿ ಮಧುರ ಅನುರಾಗ

ಅತಿ ಮಧುರ ಅನುರಾಗ  ನಿನ್ನೊಲವ ಮಳೆ ಹನಿಗೆ  ಮಿಂದಿರಲು ಮನಸಿದು     ನಿಂತು ನಿಂತು ಬೀಸಿದಂತೆ  ಸಂಜೆ ತಂಪು ಗಾಳಿ  ಅಂಕೆ ಮೀರಿ ಬರುವ ಮಾತು  ಹಾಕಬೇಕೇ ಬೇಲಿ  ಜೊತೆ ಇರಲು ...