Tuesday 16 September 2014

ಭ್ರಮೆ

ತುದಿಗಣ್ಣ ಕೋಪಕ್ಕೆ
ಬಣ್ಣಗಳ ಕೂಪಕ್ಕೆ
ರಂಗೇರಿದ ಕೆನ್ನೆ ಬಿಡಿಸಲೇನು?
ಬಂಗಾರವ ತೇದು
ಬೆಳದಿಂಗಳ ಕದ್ದು
ಸಿಂಗಾರಕೆ ಸಜ್ಜುಗೊಳಿಸಲೇನು?

ಮಂಜೂರು ಆದಂತೆ
ನಕ್ಷತ್ರವನ್ನಿಳಿಸಿ
ಮೋಂಬತ್ತಿಗೆ ಬಿಡುವು ನೀಡ ಬೇಕು;
ಒಂಚೂರು ಬೆವರುತ್ತ
ಹತ್ತಾರು ತೊಳಲಾಟ
ಮೊದಮೊದಲು ಹೀಗೇನೆ ಸೋಲಬೇಕು!!

ಕಿರುಪಾದ ಬೆರಳೊಮ್ಮೆ
ತಂತಾನೆ ಹೆಬ್ಬೆರಳ
ಹಿಂದಿಂದೆ ಸರಿದಾಗ ಒಂದು ರೇಖೆ;
ತುಟಿ ಮೇಲೆ ಬೆರಳಿಟ್ಟು
ಚಟವೊಂದು ಪುಟಿದಾಗ
ಪುಟಗಟ್ಟಲೆ ಪದ್ಯ ಬರೆಯಲೇಕೆ?

ಕತ್ತಿಂದ ಶುರುವಾಗಿ
ಮತ್ತೆಲ್ಲೋ ಕೊನೆಯಾಗಿ
ಅತ್ತಿತ್ತ ತಿರುಗೋಕೂ ಸಮಯವಿಲ್ಲ;
ಎಷ್ಟೆಲ್ಲ ಗೀಚಿದರೂ
ಇಷ್ಟಿಷ್ಟೇ ಉಳಿದಂಥ
ಸೂಕ್ಷ್ಮಾತಿ ಸೂಕ್ಷ್ಮಗಳು ಎಟುಕಲಿಲ್ಲ!!

ಈಗಷ್ಟೇ ಹೊಸತೊಂದು
ಹನಿಯುದ್ಭವಿಸಿತೆಂದು
ಆಕಾಶವಾಣಿಯಲಿ ಕೇಳಿ ಬಂತು;
ನಾನೊಬ್ಬನೇ ಅಲ್ಲ
ಆ ಮೋಡಕೂ ಮನಸು
ಆಕಾಶದ ದೋಸೆ ಕೂಡ ತೂತು!!

ಹಸಿ ಮಾತಿಗೆ ಒಂದು
ಬಿಸಿ ಒಪ್ಪಿಗೆ ಸಾಕು
ಮಸಿ ಕಸಿಯಲಿ ಕುಸುರಿ ಮೂಡಿ ಬರಲು;
ಎಲ್ಲಿದ್ದಳೋ ಆಕೆ
ಬಂದಿಳಿದಳೆನ್ನೆದೆಗೆ
ಬಲು ಭಾವುಕತೆಯಲ್ಲಿ ಭ್ರಮಿಸಿಕೊಳಲು!!

                                 -- ರತ್ನಸುತ

1 comment:

  1. ತಾರೆಗಳನೇ ಮಂಜೂರು ಮಾಡಿಸಿಕೊಂಡ ಕವಿಯೇ. ಭ್ರಮಿಸಿಕೊಳಲು ಹಲಾರ್ಥಗಳ ಸಂಚಯ!

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...