Friday 5 December 2014

ಯಾತಕ್ಕೆ ಕುಡಿಯ ಕೂಡದು?

ಆದದ್ದೆಲ್ಲ ಒಳ್ಳೆಯದಕ್ಕೇ;
ಈ ಹಿಂದೆ ಎಡವಿ
ಯಾರಲ್ಲೂ ಹೇಳಿಕೊಳ್ಳದ ನೋವಿಗೆ
ಪಟ್ಟ ಹಿಂಸೆ
ಈಗಾಗುವ ಸಂಭವವಿಲ್ಲ
ಅದಕ್ಕಾಗಿಯೇ ಕುಡಿಯುತ್ತೇನೆ
ಎಂದಿಗಿಂತ ಚೂರು ಹೆಚ್ಚಿಗೆ
ಎಲ್ಲವನ್ನೂ ಕಕ್ಕಿ ಬಿಡಲು!!
ನಾಲ್ಕು ಕೈಗಳು ಕಪಾಲಕ್ಕೆ ಬಿದ್ದು
ಬೆರಳ ಅಚ್ಚು
ಬಹಳವೆಂದರೆ ಮೂರು ದಿನ ಉಳಿಯಬಹುದು;
ಅಲ್ಲಿ ತನಕ ಮುಖ ಮುಚ್ಚಿಕೊಂಡು
ಕತ್ತಲ ಕೋಣೆಯಲ್ಲಿ ಬಿದ್ದಿದ್ದರೆ
ಅಪಾಯವಿಲ್ಲ!!
ಸತ್ಯದ ಕಹಿಯಲ್ಲಿಯ ನೆಮ್ಮದಿ
ಸುಳ್ಳಿನ ಆಲೆ ಮನೆಯಲ್ಲಿ ಸಿಗದು
ಇದು ಸರ್ವಕಾಲಿಕ ಸತ್ಯ;
ಹಿಂದೆ ಮಾಡಿದ ತಪ್ಪನ್ನು
ಮುಂದೆಂದೂ ಮಾಡದಷ್ಟು
ಪ್ರಬುದ್ಧತೆ ಪ್ರಾಪ್ತಿಯಾಗಿದ್ದಕ್ಕೆ
ಅನುಭವಗಳಿಗೆ ಒಂದು ಸಲಾಂ!!
ಮುಂದೆ ಆಡಿಕೊಂಡವರು
ಬೆನ್ನ ಬಿಡರೆಂಬುದು ಗೊತ್ತು;
ಅಪರಿಚಿತ ಮಿತ್ರನಿಗಿಂತ
ಪರಿಚಿತ ಶತ್ರು ಮೇಲೆಂದು
ಎದೆ ಮುಟ್ಟಿ ಹೇಳ ಬಲ್ಲೆ
ಅಷ್ಟರ ಮಟ್ಟಿಗೆ ಬೆಳೆದಿದ್ದೇನೆ!!
ನಗುವಿನ ಕೊರತೆಯಲ್ಲಿ
ಮತ್ತೇನನ್ನೋ ಗಳಿಸಿಕೊಂಡ ಖುಷಿಯ
ನೆನೆದು ಪುಳಕಿತನಾಗುತ್ತೇನೆ;
ಎಲ್ಲವೂ ಸಹಜವಾದಾಗ
ಕುಡಿತ ತಪ್ಪಿಸುವ ಸಾದ್ಯತೆ ಇದೆ,
ಅದಕ್ಕಾಗಿಯೇ ತಪ್ಪು ದಾರಿ ಹಿಡಿಯುತ್ತೇನೆ
ಬಿಟ್ಟು ಹೋದವುಗಳಲ್ಲಿ
ಯಾವುದು ಸರಿಯೆಂದು ಪ್ರಶ್ನೆ ಹಾಕಿಕೊಂಡು!!
                                       -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...