ಕಣ್ಣೀರ ಬೆನ್ನೇರಿಕಣ್ಣೀರ ಅಷ್ಟು ಲಘುವಾಗಿ
ಪರಿಗಣಿಸಿ ಬಿಡಬಾರದು ನಾವ್ಗಳು,
ಅದು ಅಷ್ಟು ದುರ್ಬಲವಲ್ಲ;
ಸಲೀಸಾಗಿ ಹರಿಯುವುದಷ್ಟೇ
ಆದರೆ ಅಷ್ಟೇ ಮೊನಚು!!
ನೆನಪು ಮಾಡಿಕೊಳ್ಳಿ
ಸಣ್ಣವರಿದ್ದಾಗ ಹಠಕ್ಕೆ ಬೆಂಬಲವಾಗಿ
ನಿಂತದ್ದು ಇದೇ ಕಣ್ಣೀರು;
ಮೊಂಡರಲ್ಲೂ ಮೊಂಡು ಒಮ್ಮೊಮ್ಮೆ!!
ಪಸೆಯಾದ ಕೆನ್ನೆಗೆ
ಕಣ್ಣಲ್ಲಿ ಬಿದ್ದದ್ದು ಕಸವೋ
ಅಲ್ಲವೋ ಎಂದರಿತುಕೊಳ್ಳುಲು
ರೆಪ್ಪೆಯ ಸಪ್ಪಳವೇ ಸಾಕು;
ಸುಕಾ ಸುಮ್ಮನೆ ಸುಕ್ಕಾಗಲು
ಅದಕ್ಕೂ ಒಪ್ಪದ ಮನಸಿದೆ!!
ಹಲವು ಮೊದಲುಗಳ ನಾಂದಿ
ಎಲ್ಲ ಅಂತ್ಯಗಳ ತೆರೆ
ಈ ಕಣ್ಣೀರ ಪೊರೆ,
ನಾಟಕೀಯಕ್ಕೂ ಸೈ
ರಾಜಕೀಯಕ್ಕೂ ಸೈ!!
ಕಣ್ಣಿಂದ ಹೊಮ್ಮುವ ಹನಿಯ ಮೂಲ
ಕೊರಳೆಂದರಿತದ್ದು ಬಿಗಿದಿಟ್ಟಾಗಲೇ;
ಕರುಳಿಗೂ ಇದೆ ಕಾರಣ,
ಬೆರಳಿಗಂತೂ ತೀರದ ಋಣ!!
ತಲೆ ದಿಂಬುಗಳಿಗಂಟಿದ
ಕಲೆಗಳಳಿಯದುಳಿದು
ವಿರಕ್ತಿ ಹೊಂದಿದಂತೆ
ದಶಕಗಳ ನೋವ ಸಾರುತ್ತಿದ್ದು
ನೆರೆಯ ಕಸೂತಿಯನ್ನೂ ಕುಗ್ಗಿಸುವಷ್ಟು
ತೀಕ್ಷ್ಣವಾಗಿದ್ದವು
ಸದ್ದು ಮಾಡದಿರಿ
ಕಳ್ಳ ಹನಿಯೊಂದು ಸದ್ದಿಲ್ಲದೆ ಜಾರುತಿದೆ,
ತಡೆದು ವಿಚಾರಿಸುವ ವೇಳೆ
ಯಾರೂ ಇಲ್ಲದ ಮೂಲೆ ಹುಡುಕಬೇಕು!!
                                -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩