Wednesday 2 January 2019

ಗಡಿಯಾರದ ಮುಳ್ಳಂತೆ ಮನಸು

ಗಡಿಯಾರದ ಮುಳ್ಳಂತೆ ಮನಸು
ಕ್ಷಣವಾದರೂ ಸುಮ್ಮನಿರದು
ಗಡಿಪಾರು ಆಗೋಕೂ ಮೊದಲೇ
ನಿನ್ನೆಲ್ಲ ಆಸೆಗಳ ತಿಳಿಸು
ಒಂದೊಮ್ಮೆ ಕೇಳಿಸದೆ ಇರಲು...

ಮತ್ತೊಮ್ಮೆ ಪಿಸುಗುಟ್ಟಿ ವಾಲು
ಹೃದಯಕ್ಕೆ ಬಿಗಿದು ಲಗಾಮು
ನೀಡು ಒಂದೊಂದೇ ಸವಾಲು



ಉಪಕಾರ ಬೇಕಿಲ್ಲ ಈಗ
ಸಹಕಾರ ನೀಡುತಿವೆ ಕನಸು
ಹಾಗೂ ಬೇಕೆಂದರಲ್ಲಿ
ನೀನಾಗೇ ಕೈ ಹಿಡಿದು ನಡೆಸು
ಹಿಂದೆಲ್ಲ ನಾ ಸುಮ್ಮನಿರಲು
ಸುಮ್ಮನೆ ಬಿಡುತಿತ್ತು ಕಾಲ
ಏತಕೋ ಈಗೀಗ ತಾನೂ
ಚೂರೇ ಬಿಚ್ಚುತಿದೆ ಬಾಲ



ಆ ರಾತ್ರಿ ನೆನಪಿದೆಯಾ ನಿನಗೆ
ಇಬ್ಬರೂ ಅತ್ತಿದ್ದೆವಲ್ಲಿ
ಕೊನೆಗೆ ಕಂಬನಿಯು ಬೆವೆತು
ಬೆವರಲ್ಲಿ ಬೆರೆತಷ್ಟೂ ಹೋಳಿ
ಅದೃಷ್ಟ ಮಾಡಿದವು ನೆನೆಪು
ಆಗಾಗ ಬಿಚ್ಚಿಕೊಂತಾವೆ
ಸಂಜೆಯ ಹೂವಿಂದ ಹಿಡಿದು
ಆಸೆಗಳೂ ಅರಳಿ ಕುಂತಾವೆ



ಎಷ್ಟುದ್ದ ಗೀಚಿದರೂ ಕೂಡ
ಕೊನೆ ಚುಕ್ಕಿಗೇ ಎಲ್ಲ ಘನತೆ
ಹಾಗಾಗಿ ಚುಕ್ಕಿಯನ್ನಿಟ್ಟೇ
ಪದ್ಯಕ್ಕೆ ಬಿಡುಗಡೆಯ ಕೊಟ್ಟೆ
ಕನ್ನಡಿಯೂ ಕಣ್ಣನ್ನು ಮುಚ್ಚಿ
ಬಾಗಿದೆ ನಮ್ಮೊಲವ ಎದುರು
ಆಟದಲಿ ಮೆರುಗಿರಲಿ ಎಂದೇ
ದೀಪವೂ ನಿಲ್ಲಿಸಿದೆ ಉಸಿರು!!

ಬಣ್ಣ ಬಳಿಯುತ


ಬಣ್ಣ ಬಳಿಯುತ ನಿನ್ನ ಕುರಿತು
ಹಾಡಿ ಹೊಗಳಿದ ಕವಿತೆಗೆ
ನೆನೆದ ಕುಂಚದ ಅಂಚು ಒಮ್ಮೆ
ಬಳುಕಿ ನಡುವನು ಬಿಡಿಸಿತು
ನೆರಳ ಘಮಲು ಸನಿಹ ಸುಳಿದು...

ಮೈಯ್ಯ ತಾಕಿ ಸಾಗುವಾಗ
ಯಾವ ರಾಗವೋ ತಿಳಿಯೆ ಆದರೆ
ಹಾಡುವುದನೂ ಕಲಿಸಿತು



ಕೊಚ್ಚಿ ಹೋದ ಆಸೆಗಳಿಗೆ
ಉಳಿದ ಆಸೆಗಳದ್ದೇ ಚಿಂತೆ
ನನ್ನ ಆಸೆ ನಿನ್ನ ಆಸೆ
ಎಲ್ಲ ಒಂದೆಡೆ ಕೂಡಿವೆ
ಕೂಡಿಕೆಯಲೂ ಬೇರ್ಪಡುವ
ಬೇರ್ಪಡಲು ಕೂಡಿಕೊಳುವ
ಹೃದಯದೊಳಗಿನ ನದಿಯ ದಡವ
ಊಹಿಸುತಲೇ ನಲಿಯುವೆ



ಉತ್ತರಿಸುವೆ ಸಿಕ್ಕ ಮೇಲೆ
ಸಿಗುವ ಮುನ್ನ ಪ್ರಶ್ನೆ ಕೇಳು
ಮೆತ್ತಿಕೊಳ್ಳುವೆ ನಿನ್ನ ಕನಸಿಗೆ
ಮತ್ತೇರಿದ ಇರುವೆಯಂತೆ
ನಂತರದ ಅಂತರವ ಹಂತವ
ಕೊಂಚ ಕೊಂಚವೇ ಕಳೆದುಕೊಂಡು
ನಿಂತುಕೊಳ್ಳುವ ಎದುರು-ಬದಿರು
ಮೋಹ ಕವಿದ ಮರುಳರಂತೆ



ಕರಗು ಒಮ್ಮೆ ನನ್ನ ಕಣ್ಣಲಿ
ಕೆನ್ನೆ ನಿನ್ನ ಬಯಸಿಕೊಂಡಿದೆ
ಮನದ ಹಿತ್ತಲ ಸಂಪಿಗೆಗೂ
ನಿನ್ನ ಸುತ್ತಲು ಕುಣಿವ ಹುರುಪು
ಮೊನ್ನೆ ನನ್ನ ಅಂಗಳದಲಿ
ಬೀಡು ಬಿಟ್ಟು ಹಾರಿ ಹೊರಟ
ಚಿಟ್ಟೆ ಗುರುತು ಮಾಸಿದಂತಿದೆ
ನೀನೇ ನಷ್ಟವ ತುಂಬಬೇಕು



ಸಲುಗೆಗೊಂದು ಹೆಸರನಿಡುವೆ
ಹೇಗೇ ಕೂಗಲು ಬರುವೆಯೆಂದು
ಮೌನದಲ್ಲೇ ಹೆಚ್ಚು ಗೆಲುವು
ಸಿಕ್ಕ ಖುಷಿಯಿದೆ ಆತ್ಮಕೆ
ಲೆಕ್ಕವಿಟ್ಟು ಮುಗಿದೇ ಹೋಗಿವೆ
ನಿತ್ಯ ಕನಸಿನ ನಮ್ಮ ಭೇಟಿ
ಚಿತ್ರವೊಂದನು ಬಿಡಿಸಿಕೊಳ್ಳುವೆ
ಪೂಜೆಗಲ್ಲದಿನ್ನೇತಕೆ...

ದಿಕ್ಕು ತೋಚದ ಬಾಳ ನಾವೆಗೆ ದಾರಿ ತೋರಿದ ನಾವಿಕ

ದಿಕ್ಕು ತೋಚದ ಬಾಳ ನಾವೆಗೆ
ದಾರಿ ತೋರಿದ ನಾವಿಕ
ಕ್ರಮಿಸಬೇಕಿದೆ ಬಹಳ ದೂರ
ನಿನ್ನ ನೆರಳನು ಬೆಸೆಯುತ
ಅಲೆಗಳೆಷ್ಟೇ ದ್ಯುತಿಗೆಡಿಸಲಿ...

ನಕ್ಷತ್ರಗಳಿವೆ ನಕ್ಷೆಗೆ
ಹೆಗಲ ಮೇಲೆ ಏರಿ ನಡೆಸು
ಮಾತು ಮಾತಿಗೂ ಕಿಸಿಯುತ



ವೃಕ್ಷವೊಂದು ಎಡವಿದಾಗ
ಹಚ್ಚು ಅಲ್ಲಿ ದೀಪವ
ನಿನ್ನ ಚಿಗುರು ನನಗೂ ಕಲಿಸಲಿ
ಆತ್ಮವನ್ನು ಹಬ್ಬಲು
ಸಾಕ್ಷಿಯಾಗು ಎಲ್ಲ ನಗುವಿಗೆ
ಅರ್ಥವಾಗಲಿ ಕಂಬನಿ
ಕಣ್ಣ ಭಾಷೆ ಅಷ್ಟೇ ಸಾಕು
ಎಲ್ಲ ಬಿಡಿಸಿ ಹೇಳಲು



ಗುರುವೇ ಇಲ್ಲದೆ ಕಲಿತ ನಡಿಗೆ
ಈಗ ಓಟವ ಬಯಸಿದೆ
ಶಾಂತವಾದ ಹಜಾರದಲ್ಲಿ
ಓಂಕಾರವೂ ನಿನ್ನದೆ
ಎರೆಡೆರಡು ಚಂದಿರರ
ನಡುವಲ್ಲಿ ಚಂದ ಸಮರದಿ
ನಿನ್ನ ಗೆಲುವಿಗೆ ಆತ ಕರಗಿದ
ಬೆಳಗೋ ಸರದಿ ನಿನ್ನದೇ!



ಬಯಲ ಹೆಜ್ಜೆ ಎದೆಗೆ ಇಟ್ಟು
ಹೊಸ ಶಾಸನ ಬರೆಯುವೆ
ಹಠವ ಗೆಲ್ಲಿಸಿ ತುಟಿಯ ಅರಳಿಸಿ
ಮನದ ತಂತಿಯ ಮೊಟಕುವೆ
ಸಕ್ಕರೆಯ ಸಜ್ಜಿಗೆಯ ಬಟ್ಟಲು
ನಿನ್ನ ತುಂಬು ನಗೆಯ ನೋಟ
ಪದವಿ ಕೊಟ್ಟು ತಿದ್ದಿ ಕಲಿಸುವೆ
ಎಷ್ಟು ಬಿನ್ನವೋ ನಿನ್ನ ಪಾಠ?



ಇಂದು ಇಡುವ ಹೆಜ್ಜೆ ಗುರುತಿಗೆ
ಎರಡು ಸಂವತ್ಸರದ ವಯಸು
ನೀನು ಸವಿದು ಜೊತೆಗೆ ನನಗೂ
ಬದುಕಿನುತ್ಸಾಹಗಳ ಬಡಿಸು
ಅಪ್ಪನೆಂದು ಕರೆದೆ ನನ್ನ
ಮಾಡಿದೆಲ್ಲ ತಪ್ಪ ಕ್ಷಮಿಸಿ
ನೀ ಆರಿಸೋ ದಾರಿಯಾಗುವೆ
ಮುನ್ನ ನನ್ನೇ ನಾನು ಸವೆಸಿ...

ನೆರಳು ಮೂಡಲು ಗೋಡೆಯೇ ಬೇಕೆಂದೇನಿಲ್ಲ

ನೆರಳು ಮೂಡಲು ಗೋಡೆಯೇ ಬೇಕೆಂದೇನಿಲ್ಲ
ನೆಲವಾದರೂ ಸಾಕು
ಆದರೆ ತುಳಿದವರ ಸಲುವಾಗಿ ಗೋಡೆ ಕಟ್ಟಿ
ಮತ್ತಷ್ಟು ತುಳಿತಕ್ಕೊಳಗಾಗಬಾರದು

...
ದಾಹ ನೀಗಿಸಿಕೊಳಲು ಬಾವಿಯೇ ತೋಡಬೇಕಿಲ್ಲ
ಕೊಡ ಹಿಡಿದು ಕೆರೆಗಂಟ ನಡೆದರಾಯಿತು
ಸ್ವಾರ್ಥದ ಬಾವಿಯಾಳಕ್ಕಿಳಿದು ಹೊರ ಬರಲಾಗದೆ
ಅಲ್ಲೇ ಮಣ್ಣಾಗಬಾರದಷ್ಟೇ



ಬಿಸಿಲು ಸುಡದಂತೆ ಚಪ್ಪಡಿ ಹಾಸಬೇಕೆಂದೇನಿಲ್ಲ
ಚಪ್ಪರ ಹೆಣೆದರಷ್ಟೇ ಸಾಕು
ಬೇಕೆಂದಾಗ ನಕ್ಷರಗಳ ಎದೆಗಿಳಿಸಿ, ಮಳೆಯನ್ನೂ ಸವಿಯಬೇಕು
ಹರಿದ ಚಪ್ಪರದ ಚಂಚಲತೆ ಅಸಹಾಯಕನನ್ನಾಗಿಸದಿರೆ ಸಾಕು



ಕತ್ತಲಿಗೆ ದೀಪವೇ ಬೇಕೆಂದಲ್ಲ
ಕತ್ತಲು ಕತ್ತಲನ್ನೇ ನುಂಗಬಹುದು
ಹಾಗಂದಮಾತ್ರಕ್ಕೆ ಬೆಂಕಿ ಗೀರದೆ ಕುಳಿತು
ಲೇಕದೆದುರು ಅಂಧರಾಗಬಾರದು



ಇದ್ದು ಬದುಕನ್ನ ಕಟ್ಟಿಕೊಳ್ಳಬೇಕು
ಸಿಕ್ಕ ಅನುಭವಗಳ ತೊಗಟು, ನಾರುಗಳಿಂದ
ಪುಟ್ಟ ಗೂಡೊಂದು ನೆಮ್ಮದಿಯ ತಾಣವಾಗಬೇಕು
ಕೆಂಡ ಹುದುಗಿದ ದೈತ್ಯ ಶಿಖರವಾಗದೆ!

ಚೂರು ನಿಲ್ಲು ಕಾಲವೇ

ಚೂರು ನಿಲ್ಲು ಕಾಲವೇ
ಏಕೆ ಇಷ್ಟು ಅವಸರ?
ನಿಂತು ಜಗವ ನೋಡಲು
ಇಲ್ಲವೇನು ಕಾತರ?

...
ನೀನು ಸುತ್ತಿ ಭೂಮಿಗೆ
ಇಷ್ಟು ದಣಿವು ತಂದೆಯಾ?
ಅಥವ ಭೂಮಿ ತಿರುವಿಗೆ
ವೇಗ ಕಂಡುಕೊಂಡೆಯಾ?



ಚುಚ್ಚು ಮದ್ದು ಸೂಜಿಯೂ
ನಿನ್ನ ಮುಳ್ಳಿನಂತೆಯೇ
ತಪ್ಪಿ ನಡೆದೆವೆಂದರೆ
ನೋವ ಕೊಡುವುದಲ್ಲಿಯೇ



ಆದರೀ ನೋವಲೂ
ಪಾಠ ನೂರು ಕಲಿತೆನು
ಆಗಲೆಂತು ಹೇಳು ನಾ
ನಿನಗೆ ತಕ್ಕ ಗೆಳೆಯನು?



ಬೇಡ ನಿನಗೆ ಆಣತಿ
ಬೇಡ ಯಾವ ಆಮಿಷ
ಕೀಲಿ ಕೊಟ್ಟು ಬಿಟ್ಟರೆ
ಅಷ್ಟೇ ನಿನಗೆ ಸಂತಸ



ಗೋಡೆಗಂಟಿಕೊಂಡಿರೋ
ದಾಡಿಯಿರದ ಸಂತ ನೀ
ಎಷ್ಟೇ ಕೆಟ್ಟ ಗಳಿಗೆಗೂ
ಜಾರಿ ಬಿಡದೆ ಕಂಬನಿ



ನಾನು ಮೈ ಮರೆತರೆ
ನೀಡಬೇಕು ಎಚ್ಚರ
ಸಮಯ ನೀನೇ ಮುಗಿಸಿದೆ
ನಿಲ್ಲಬೇಕು ಅಕ್ಷರ..

ಚಂದಿರನ್ನ ತಂದು ನಿನ್ನ ...

ಚಂದಿರನ್ನ ತಂದು ನಿನ್ನ
ಎದುರು ನಿಲ್ಲುವಂತೆ ಮಾಡಿ
ಹತ್ತು ಬಾರಿ ಬಸ್ಕಿ ಹೊಡಿಸಿ
ಕ್ಷಮೆ ಕೇಳ ಹೇಳಲೇ?
ಹೇ ಮುನಿದುಕೊಂಡ ಕಡಲೇ...

ಹೇಳು ಇನ್ನೇನು ಬೇಕು
ನಿನ್ನೊಲವ ಅಲೆಗೆ ಸಿಲುಕಿ
ಈಜು ಮರೆತು ಮುಳುಗಲೇ?



ಅಷ್ಟೂ ರಾತ್ರಿಯಲ್ಲೂ ನೀನು
ಕನಸಿನಲ್ಲಿ ಬಾರದಂತೆ
ನನ್ನ ನಿದ್ದೆ ಕೆಡಿಸದಂತೆ
ದೂರ ಉಳಿದೆ ಏತಕೆ?
ನೋಡೀಗ ಬೆಳಕು ಹರಿದು
ತಪ್ಪಿತಸ್ಥ ಎನ್ನುತಿದೆ
ಕುಗ್ಗಿ ಹೋಯಿತೀಗ ನೆರಳೂ
ಏರಿದೆದೆಯ ಭಾರಕೆ!



ತಲ್ಲಣಕ್ಕೆ ಸಿಕ್ಕಿ ಈಗ
ಬೆಲ್ಲದಚ್ಚು ಕಳೆದ ಹಾಗೆ
ಮೆಲ್ಲ ಜಾರಿಕೊಂತು ಋತುವು
ಸಾಂತ್ವಾನ ಹೇಳದೆ
ನಿನ್ನ ಮೌನ ಮುರಿಯದಿರಲು
ನನ್ನ ಮನದ ತೋಟದಲ್ಲಿ
ಚಿಟ್ಟೆಯೊಂದೂ ತಂಗದಂತೆ
ಮೂತಿ ಮುರಿದು ಹಾರಿವೆ!



ಉಗುರು ತಾಕಿ ಗಾಯವಾದ
ಹೃದಯವೊಂದ ಈಚೆ ತೆಗೆದು
ಉಗುರ ಕಚ್ಚಿಕೊಂಡೇ ಅದಕೆ
ಮುಲಾಮನ್ನು ಮೆಲ್ಲಿಸು!
ಆತುರಕ್ಕೆ ರೆಕ್ಕೆ ಕೊಟ್ಟು
ಹಾರ ಬೇಡ ಸಿಕ್ಕ ವೇಳೆ
ಗೋಜಲೆಂಬ ಗೀಜು ಒರೆಸಿ
ಕಣ್ಣಿಗುಸಿರ ಸಲ್ಲಿಸು!



"ಕಟ್ಟ ಕಡೆಯ ಬಯಕೆಯನ್ನು
ನೀಗಿಸೋಕೂ ನೀನೇ ಬೇಕು"
ಎಂಬ ಬಯಕೆಯನ್ನು ಹೊತ್ತು
ನನ್ನ ಹೆಗಲ ಏರಿಕೋ
ಗಾಳಿಯಲ್ಲಿ ಸುಪ್ತವಾಗಿ
ಜೀವ ಕಣದ ಶಕ್ತಿಯಾಗಿ
ಶ್ವಾಸ ಉಚ್ಚಾರವನ್ನು
ನಿನ್ನಿಷ್ಟಕೆ ತಿದ್ದಿಕೋ!

ಅಪ್ಪ, ಅಮ್ಮ

ಅಪ್ಪ
ನೀನು ಒರಗಿದ ಹಾಸಿಗೆ ಮೇಲೆ
ಒಮ್ಮೆ ಮಲಗಿ ನೋಡೋಣವೆಂದು
ಹಾಗೇ ಒಮ್ಮೆ ಹೊರಳಿಕೊಂಡೆ
ನಿದ್ದೆಯ ನಂಟೇ ತೊರೆದಂತಾಯ್ತು...

ಇರುಳು ತೀರದ ಸವಾಲಾಯ್ತು
ಬುದ್ಧಿಗೆ ಮಂಕು ಬಡಿದಂತಾಯ್ತು
ಆದರೂ ಹೇಗೆ ನಗುತಲೇ ಉಳಿವೆ?



ಅಮ್ಮ
ನೀನು ಸೌಟು ಹಿಡಿದು ಕಲೆಸಿ
ಮುಂಗೈ ರುಚಿಗೆ ಸಾರು ಸುರಿದದ್ದ ಪುನರಾವರ್ತಿಸಿದೆ
ಅದೆಷ್ಟು ಬಿಸಿ ಅಂಚು?
ಅದೆಷ್ಟು ಪಕ್ವ ರುಚಿ?
ಆದರೂ ನಿನಗೇಕೋ ಅಸಮಾದಾನ
ಎಂದೋ ಮಾಸಿದ ರುಚಿಯನ್ನೇ ನೆನೆಯುತ್ತ!

ದೂರ ನಿಂತು ನೋಡಿದಾಗ ಅನಿಸಿದ್ದು
ನಿಮ್ಮ ಕಷ್ಟಗಳೆಲ್ಲ ಸೊನ್ನೆ,
ನಿಮ್ಮಲ್ಲಿ ಬೆರೆತಾಗಲೇ ಪಾಠ ಕಲಿತೆ
ಕಂಡುಕೊಳ್ಳುತ್ತ ನನ್ನನ್ನೆ!

ಎಷ್ಟು ಸಾಧ್ಯವೋ ಅಷ್ಟು

ಎಷ್ಟು ಸಾಧ್ಯವೋ ಅಷ್ಟು
ಅಷ್ಟಕ್ಕಿಂತ ಒಂದಷ್ಟು ಹೆಚ್ಚು
ಪ್ರೀತಿಯನ್ನು ಕೇಳದೆಯೇ ಪಡೆದು
ಹೇಳದೆಯೇ ಕೊಟ್ಟುಕೊಳ್ಳುತ್ತ
ನಿತ್ಯ ಖುಷಿಯೊಂದ ಹಡೆದು...

ನೆನಪಿಗೊಂದು ಹೆಸರಿಟ್ಟು
ಬಾಳ ಪುಟಗಳ ಹೊರಳಿಕೊಳ್ಳೋಣ



ಅಲ್ಲಲ್ಲಿ ಹಾಳೆ ಗುರುತುಗಳಾಗಿ
ಒಂದೊಂದು ನವಿಲು ಗರಿಯಿಟ್ಟು
ಮರಿ ಹಾಕಿರಬಹುದೆಂಬ ನೆಪದಲ್ಲಿ
ತಲುಪಿ, ತಂಗಿ, ಮಿಂದು ಬರೋಣ
ಬಿಟ್ಟಷ್ಟೂ ಗುರುತುಗಳನ್ನು ಎಣಿಸಿ, ದಣಿದು
ಅದೇ ಗರಿಯ ನೆರಳಲ್ಲಿ ಒರಗಿಕೊಳ್ಳುತ್ತ
ಮತ್ತೆ ಹೊಸಬರಂತೆ ನಾಚಿಕೊಳ್ಳೋಣ



ನನ್ನೊಳ ನೀ ಬೆರೆತು ಚಿಗುರಿದ ಅಗ್ನಿಗೆ
ನಿನ್ನೊಳ ನಾ ಸುರಿದ ತಣ್ಣನೆ ಇರುಳನ್ನು
ಒಂದುಗೂಡಿಸುವಲ್ಲಿ ನಾವಾದೆವೆಂಬ
ನಿಟ್ಟುಸಿರ ಬಿಡುತಲೇ ಮನದ ಮೊಗಸಾಲೆಯಲಿ
ದೀಪವೊಂದನು ಇರಿಸಿ
ಹೂವ ಜೋಡಿಸಿ ಕೊಡುವೆ, ನೀ ಕಟ್ಟಿ ಮುಗಿಸು



ಸಗ್ಗಕೂ ಒಂದೊಮ್ಮೆ ಶಾಪವಿಟ್ಟೆವು ಹೇಗೆ?
ನರಕದಲಿ ನರಳಿಕೆಯೂ ಸಾಕಾಗದಂತೆ
ಮೌನದ ದಾಹವನು ಕಂಬನಿ ನೀಗಿಸಿದೆ
ಬಿಕ್ಕಳಿಕೆ ಜೋರಾಗಿ ಮೂಡಿ ಬರಲಿ
ಏದುಸಿರ ಸರಣಿಯಲಿ ಪ್ರಾಣ ಮಗುವಂತೆ
ಎದೆ ಸವರುವ ಕೈ ಪ್ರೀತಿಯೇ ಆಗಲಿ



ಜೋರು ಮಳೆ ನಿಂತಿದೆ
ಅಲ್ಲಲ್ಲಿ ಒಂದೊಂದು ತೊಟ್ಟು
ಮಳೆಯ ತೀವ್ರತೆಯನ್ನು ಬಣ್ಣಿಸಿವೆ
ಮೂಡಿಸಿದ ತರಂಗಗಳ ಮೇಲೆ
ಬಾ ಒಮ್ಮೆ ಎಲ್ಲವನೂ ದಾಟಿ ಬರುವ
ಸಾಧ್ಯವಾದರೆ ಕಳೆದು ಎಚ್ಚರದಲಿ
ನಿಂತ ಊರು ನಲುಮೆ ತವರಾಗಲಿ!

ಎಲ್ಲಿ ಸದ್ದು ಸಮರದಲ್ಲಿ ಸೋತಿತೋ

ಎಲ್ಲಿ ಸದ್ದು ಸಮರದಲ್ಲಿ ಸೋತಿತೋ
ಅಲ್ಲೇ ಮೌನ ವಿಜಯವನ್ನು ಹೊಂದಿತು
ಎಲ್ಲಿ ನಿಂತ ನೀರು ಚೂರು ಕದಲಿತೋ
ಅಲ್ಲಿ ಕೋಟಿ ಜೀವ ಉರಿಸ ಕಂಡಿತು

...
ಎಲ್ಲಿ ಕನಸು ನಿದ್ದೆಯನ್ನು ಕೆಡಿಸಿತೋ
ಇರುಳ ವ್ಯಾಪ್ತಿ ಪೂರ್ತಿ ಅರ್ಥವಾಯಿತು
ಎಲ್ಲಿ ಕ್ಷಣದ ಮುಳ್ಳು ಎದೆಯ ಹೊಕ್ಕಿತೋ
ಸವೆದ ಕಾಲ ಕೈಯ್ಯ ಹಿಡಿದು ಸವೆಸಿತು



ಯಾವ ದೀಪ ತನ್ನ ತಾನೇ ಜ್ವಲಿಸಿತೋ
ನೆರಳು ನಾಟ್ಯ ಕಲಿತು ಬಳುಕದೊಡಗಿತು
ಯಾವ ಕಣ್ಣ ಹನಿಯ ಶಾಪ ತಟ್ಟಿತೋ
ಮರುಕದಲ್ಲೂ ಕಣ್ಣು ಬಿರುಕು ಬಿಟ್ಟಿತು



ಹೂವು ಬಾಡಿದಷ್ಟೂ ಗಂಧ ಸೋತರೆ
ಕಳೆದ ಬಳ್ಳಿ ಬೇರು ಜಿನುಗದೊಡಗಿತು
ಬೇವು ಮರದ ಮೇಲೆ ಗೂಡ ಕಟ್ಟಿಯೂ
ಹಕ್ಕಿ ಹಾಡಿ ಕಿವಿಗೆ ಜೇನ ಉಣಿಸಿತು



ಸುಪ್ತವಾದ ಸಂಜೆಯಲ್ಲಿ ಮೂಡುವ
ಆತ್ಮ ಉತ್ಖನನ ಲೇಖ ಇಲ್ಲಿದೆ
ಶಕ್ತಿಹೀನ ಪರದೆ ಹಿಂದೆ ಅವಿತಿರೋ
ಪದಗಳನ್ನೂ ಕವಿತೆಯಾಗಿ ಮಾಡಿದೆ

ಕಣ್ಣು ಮಂಜಾಗಿದೆ


ಕಣ್ಣು ಮಂಜಾಗಿದೆ ಇನ್ನೂ ಚೂರು ಸನಿಹ ಬಾ
ಕಾಣಬೇಕು ನಿನ್ನ ಮುಖ ಕಣ್ಗಳ ಸಾಂತ್ವಾನಕೆ
ಆಗಲೇ ಮಿಂದಾಗಿದೆ ಇನ್ನಷ್ಟು ಮುಳುಗಲಾರೆ
ದೀಪ ಹಚ್ಚಿಕೊಂಡರೂ ದಿಗಿಲು ಅಂಧಕಾರಕೆ

...
ಕಾಡುಗಿಚ್ಚ ನಡುವೆ ಹೆಚ್ಚು ಮಾತುಗಳು ಮೂಡವು
ಬಿಕ್ಕಳಿಕೆಗೆ ಸಿಕ್ಕಿ ಒಡೆದ ಹಾಡು ಅರ್ಥವಾಗದು
ಸದ್ದಿನಲ್ಲಿ ಆದ ನೋವು ಹಾಗೇ ಉಳಿಯಿತಾದರೆ
ಮೌನವನ್ನೂ ಲಘುವಾಗಿ ಪರಿಗಣಿಸಬಾರದು



ಗೋಡೆ ತುಂಬ ಗೀಟು ಎಳೆದು ಲೆಕ್ಕೆವಿಟ್ಟೆ ಏತಕೆ?
ಆದ ಜಗಳ ಲೆಕ್ಕ ಮೀರಲೆಂಬುದೆನ್ನ ಕೋರಿಕೆ
ಮೇರು ತುದಿಯ ತಲುಪಿ ಆಯ್ತು ಜಾರೋ ಬಂಡಿ ಆಟದಿ
ಜಾರಿ ನೆಲವ ಮುಟ್ಟಲೇಕೆ ನಿಮಿಷಕೊಂದು ಪೀಠಿಕೆ?



ಹೂವ ಕಿತ್ತು ಕಟ್ಟಿ ಇಡುವೆ ಸಂಜೆಗೊಂದು ನೆಪವನು
ಯಾವ ಬಾಗಿಲಿಂದ ಹೊತ್ತು ತರುವೆ ಹೇಳು ನಗುವನು
ಸುಳ್ಳಿಗೊಂದು ಸುಳ್ಳು ಸೇರಿ ಬೆಲ್ಲದಚ್ಚು ಕರಗಿತು
ತೇಲೋ ಮೋಡವನ್ನು ತಬ್ಬಿ ತೊಲಗಿ ಬಿಡಲಿ ಚಂದ್ರನು



ತಾಳು ಒಂದು ಪ್ರಶ್ನೆಯಿದೆ ಹೇಳಿ ಹೋಗು ಉತ್ತರ
ಸಾಲು ಸಾಲು ಗೋಜಲನ್ನು ಬಿಡಿಸಿಕೊಂಡು ಕೂರುವ
ನನ್ನ ಕೈ ಎಂದೂ ಮುಂದು ನಿನ್ನ ಬೆವರ ತೀಡಲು
ನಿನ್ನ ಮೇಲೆ ನನಗೆ ಅಧಿಕಾರದಲ್ಲೂ ಗೌರವ!!

ಕಣ್ಣೀರ ಅಕ್ಷರ

ಕಣ್ಣೀರ ಅಕ್ಷರವು ಕಂಡೀತು
ಧರಿಸಿದ ಬಣ್ಣ ಕಳಚಿ ಬಂದಾಗ
ಕೆನ್ನೆಯೂ ಹಾಳೆ ಮಡಿಲಾದೀತು
ಜಾರಲು ಬಿಡದೆ ಹಿಡಿದಿಟ್ಟುಕೊಂಡಾಗ!


ಕಲ್ಲು ಚೂರುಗಳಂತೆ ನದಿಗೆ ಎಸೆದರು

ಕಲ್ಲು ಚೂರುಗಳಂತೆ ನದಿಗೆ ಎಸೆದರು
ಉರುಟುಗಲ್ಲಾಗಲು ಹರಿವಿಗೆ
ಜೊತೆಗೆ ಬಂದವು ಕೆಲವು
ತಿರುವುಗಳಲ್ಲಿ ಕಳೆದವೇ ಹೆಚ್ಚು

...
ಜೊತೆಗಿದ್ದವುಗಳೂ ಹೊಂದುತ್ತಿಲ್ಲ
ಬಣ್ಣ, ಭಾವ, ಆಕಾರಗಳು ಬಿನ್ನ
ಜೋಡಿಸಿಕೊಳ್ಳುವುದಕ್ಕೂ ಹಿಂದೇಟು
ಅವರೇ ನನ್ನ ಮುಟ್ಟಗೊಡದಿದ್ದರೆ?



ನನ್ನ ಬಣ್ಣ ಕಪ್ಪು
ನನ್ನ ಪಕ್ಕ ಕುಂತದ್ದೂ ಸಹ
ಬಿದ್ದಲ್ಲಿಯ ಗುರುತುಗಳ ಲೆಕ್ಕವಿಟ್ಟೆವು
ಅಂಕೆಗೆ ಸಿಗದೆ ಸುಮ್ಮನಾದೆವು
ಮೌನದಲ್ಲೇ ಇಬ್ಬರೂ
ಗೊತ್ತಿದ್ದೂ ಗೊತ್ತಿಲ್ಲದವರು
ನಿಜಕ್ಕೂ ಗೊತ್ತಿಲ್ಲದವರೇ ಆಗಿಬಿಟ್ಟೆವು..



ಮಾರು ದೂರದಲ್ಲಿ ತದ್ವಿರುದ್ಧ ಬಣ್ಣ
ಅದೇಕೋ ನನ್ನ ಕಾಡುತ್ತಿತ್ತು
ನನ್ನನ್ನೇ ಬಿಡದೆ ನೋಡುತ್ತಿತ್ತು
ಚೂರು ಹೆಚ್ಚೇ ಸವೆದು ನವಿರಾಗಿತ್ತು
ನಾನಿನ್ನೂ ಒರಟು-ಒರಟಾಗಿದ್ದು
ನನ್ನದಲ್ಲವೆಂದು ಸುಮ್ಮನಾದೆ..



ನಾನೋ ಗೋಲಾಕಾರದಲ್ಲಿ ಉರುಳಿದ್ದರೆ
ದುಂಡಗೆ ಸಾಲಿಗ್ರಾಮವಾಗುತ್ತಿದ್ದೆ
ಅಥವ ಬಿದ್ದಲ್ಲೇ ಸವಿದಿದ್ದರೆ
ಆಟಿಕೆ ಬಿಲ್ಲೆಯಾಗುತ್ತಿದ್ದೆ
ಒಮ್ಮೆ ಉರುಳಿ ಒಮ್ಮೆ ತಿರುಗಿ
ಒಮ್ಮೆ ಎಡವಿ ಮತ್ತೆ ಕರಗಿ
ಎಲ್ಲ ದಿಕ್ಕಿನಲ್ಲೂ ಅಪೂರ್ಣವಾಗಿ ಉಳಿದೆ
ಅಷ್ಟರಲ್ಲಿ
ನನ್ನವರೆಲ್ಲ ಕೊಚ್ಚಿ ಹೋಗಿ ದೂರ ಉಳಿದರು..



ಯಾರೊಂದಿಗೂ ಹೊಂದುಕೊಳ್ಳದೆ
ಪ್ರಯತ್ನಗಳು ಸೋತಾಗ
ಸುಮ್ಮನೆ ಕಲ್ಲಾಗೇ ಉಳಿದುಬಿಡೋಣವೆನಿಸುತ್ತೆ
ಮತ್ತೊಂದು ಹುಸಿ ಆಸೆ ಹುಟ್ಟಿಸುವ ಕಲ್ಲು
ಕೆಣಕಿ ಸಾಗುವ ತನಕ



ಎಲ್ಲೋ ಅನಾಥ ತೀರದಲ್ಲಿ
ತನ್ನ ಒಡಲೊಲ್ಲದೆ ಬೆಸಾಡಿತು ಅಲೆ
ನಾನೋ ಇನ್ನೂ ಸವೆಯಬೇಕಿತ್ತು
ಮೈಯ್ಯೆಲ್ಲ ಸುಕ್ಕು, ಅಂಕು-ಡೊಂಕು

ಹೇಗೋ ಮಣ್ಣು ಮುಕ್ಕಿದ್ದೇನೆ
ತೇವಗೊಂಡಿದ್ದೇನೆ
ಅಂತಃಕರಣದಿಂದ ಚಿಗುರೊಡೆದು
ನನಗೊಂದು ಗುರುತು ಕೊಡಬಹುದೇ ಬದುಕು?
ಕನಸ ಕಟ್ಟಿಕೊಳ್ಳುತ್ತೇನೆ...

ವಿಷದ ಬಟ್ಟಲನು ಕೊರೆದು

ವಿಷದ ಬಟ್ಟಲನು ಕೊರೆದು
ಅಂದವಾದ ರೇಖೆಗಳ ಬೆಸೆದು
ಸುರುಳಿ ತಂದ ಅಂಚಿನಿಂದ
ಮರಳಿ ಮತ್ತೆ ಸುರುಳಿಕೊಂಡು
ಎಲ್ಲೋ ಬಿಟ್ಟಂತೆ ಬಿಟ್ಟು...

ಮತ್ತೆಲ್ಲೋ ಮೂಡಿಸಿದ ಉಳಿಗೆ
ಬಟ್ಟಲು ತುಳುಕಿದಾಗ ಕಂಡದ್ದು
ಯರದ್ದೋ ಮನೆಯ ಸೂತಕದ ಛಾಯೆ..



ಕಾಯಿಸಿದ ಗಾಜಿನ ಬಳೆಗಳು
ನೋವನು ಹೇಳಿಕೊಂಡಾಗಲೆಲ್ಲ
ತೊಟ್ಟವಳ ಕಣ್ಣಲ್ಲಿ ಏನೋ ಆನಂದ..
ಅಷ್ಟಕ್ಕೆ ಸುಮ್ಮನಾಗದವಳು
ಮತ್ತಷ್ಟು ಕುಲುಕಿ ಅಳಿಸುತ್ತಾಳೆ..
ಖುಷಿ ಹೆಚ್ಚಾದಾಗ ಚೂರು!
ಚೂರುಗಳಲ್ಲಿ ಮತ್ತೆ ತುಡಿತ
ತನ್ನ ಹಳೆ ಬಳಗದ ನಂಟಿಗೆ..



ಗಡಿಯಾರದ ದಣಿವಾರದ ಕೈಗಳು
ಕ್ಷಣ ಕ್ಷಣಕ್ಕೂ ಪರಿತಪಿಸಿ
ಅದೇ ಕ್ಷಣಗಳ ಸಂಚಲನಕ್ಕೆ ದೂರಾಗಿ
ಎಷ್ಟೋ ಸಲ ಕೆಟ್ಟು ನಿಂತು
ಒಂದುಗೂಡಿ ಸುಖ ಪಡುವಾಗ
ದಪ್ಪ ದುರ್ಬೀನು ಹಿಡಿದು
ಸ್ಕ್ರೂ ಡ್ರೈವರ್ ತಿರುವುತಲೊಬ್ಬ
ಹೊಟ್ಟೆಗೆ ರೊಟ್ಟಿಯ ಗಿಟ್ಟಿಸಿಕೊಂಡ



ಗಂಧವಿಲ್ಲದ ಮನೆ ಬಾಗಿಲು
ಅದೇ ತೊಡಿಸಿದ ರೂಪ ತಾಳಿ
ಗಂಧಭರಿತ ಮರ ತೀಡಿಸಿಕೊಂಡು
ಆಕಾರವಿಲ್ಲದಂತಾಗಿಸಿಕೊಂಡಾಗ
ಜೀವನ ಸಮತೋಲನ ಕಂಡಿತು...
ಅಂದು ಬೀಗಿದ್ದು ನೆಲ ಕಚ್ಚಿದರೆ
ಇಂದು ಬೀಗುವಂತದ್ದು ನಾಳೆ..
ಎಲ್ಲವೂ ಕೊನೆಗೆ ಒಂದೇ..



ರಸ್ತೆಗಳು ಹಿಂದೆ ರಸ್ತೆಗಳಾಗಿರಲಿಲ್ಲ
ಯಾರದ್ದೋ ಹೊಲದ ದಿಬ್ಬಗಳಾಗಿ
ಕೆರೆಯ ಕಾಲುವೆಗಳಾಗಿ, ನೆರಳ ಮಡಿಲಾಗಿ
ಆಟದ ಬಯಲಾಗಿ, ಕೂಟದ ಒಡಲಾಗಿ
ಜಡವಾಗಿ, ಜಾಡಾಗಿ, ಕಣವಾಗಿ
ಈಗ ಊರು ಊರುಗಳನ್ನು ಒಂದಾಗಿಸಿ
ಸವೆಯುತ್ತ ಸಾಗುವಾಗೊಮ್ಮೆಲೆಗೆ
ಅಲ್ಲೊಂದು ಜೀವ ಬಲಿಯಾಗುವುದೂ ಜೀವನದ ಭಾಗವೇ...

Hani

ಕನಸಿನ
ಕವಲಲಿ
ಕಾವ್ಯ
ಕುಸುರಿ
...
ತುಡಿತದ
ಲೇಖನಿ
ತುಂಬು
ಬಸುರಿ!

ಒಂದಿಷ್ಟು ಹೂವನ್ನು ಒಂದು ಮಾಡಿ

ಒಂದಿಷ್ಟು ಹೂವನ್ನು ಒಂದು ಮಾಡಿ
ಖಾಲಿ ಪುಟವನ್ನು ತುಂಬುತಿರುವೆ
ಕಂಡಷ್ಟೂ ಕನಸಲ್ಲಿ ಹೆಕ್ಕಿ ತಂದ
ಬಣ್ಣಗಳ ಕುಂಚಕ್ಕೆ ಮಾರುತಿರುವೆ

...
ಮೂಡುವ ಚಿತ್ರದ ಅಡಿಯಲ್ಲಿ ಸಂಕೋಚ
ಗುರುತನ್ನು ಗೀಚದೆ ಬಿಟ್ಟು ಬಿಡುವೆ
ತಂಗಾಳಿ ಸೋಕಿದ ಮಧುವನ್ನು ಪರಿಚಯಿಸಿ
ಇಷ್ಟಕ್ಕೆ ಎಲ್ಲವನೂ ತೇಲಿ ಬಿಡುವೆ



ಬಣ್ಣ ತಾಳಿದ ಚಿತ್ರ ತಾಳಬಲ್ಲದೇ ನಿನ್ನ?
ಕೇವಲ ಬಣ್ಣನೆಗೇ ನಾಚುತಿತ್ತು
ಎಲ್ಲ ರೇಖೆಯ ಮೂಲ ನಿನ್ನ ನೆನೆಪಿನ ಹಿಂದೆ
ಇರುವೆ ಸಾಲಿನ ಹಾಗೆ ಸಾಗುತಿತ್ತು



ಮತ್ತೆ ಗಡಿಯಾರ ಕತ್ತಲನು ಕಾಯುತಿದೆ
ದಾಪುಗಾಲಿಗೆ ಅಂಗ ವೈಕಲ್ಯವೇ?
ಬಿಡಾರ ಹೂಡಿದ ಭಾವಗಳ ಸರಣಿಯಲಿ
ಮೌನವಾದರೂ ಅದು ಕೌಶಲ್ಯವೇ..



ಕಣ್ಣರಳಿಸಿಕೊಂಡ ಹೃದಯದ ಬಡಿತಕ್ಕೆ
ಲಯ ತಪ್ಪಿಸಿದ ಔದಾರ್ಯತೆ ನಿನದು
ಅರೆ ಹುಚ್ಚು ಹಿಡಿದವನ ಮೊಂಡು ಪದ್ಯಗಳನ್ನು
ಮನಸಾರೆ ನೀ ಸುಟ್ಟು ಸುಖಿಸಬಹುದು



ಮತ್ತೆ ಬರೆಯುತಲಿರುವೆ ನಿನ್ನ ಸಿಟ್ಟಿಗೆ ಸಿಗಲು
ಸಿಕ್ಕಾಗ ಸಲುಗೆಯನು ಕೊಡಲೇ ಬೇಡ
ನಸು ನಕ್ಕು ನಾಚಿಕೆಯ ಪಸರಿಸಿ ಬಿಡುವಂಥ
ಅಪರಾಧ ಕೃತ್ಯವನು ಎಸಗ ಬೇಡ...

ನಿನ್ನ ದನಿ ನನ್ನ ದನಿ

ನಿನ್ನ ದನಿ ನನ್ನ ದನಿ
ಏಕ ಮನ ಏಕ ಧಮನಿ
ನಿನ್ನ ಕುಲ ನನ್ನ ಕುಲ
ಪ್ರೇಮವಷ್ಟೇ ನಿರ್ಮಲ


ನಿನ್ನ ಅಳು ನನ್ನ ಅಳು
ಏಕ ಸ್ವರ ಏಕ ಮೌನ
ನಿನ್ನ ತುಮುಲ ನನ್ನದೂ
ಜೋಡಿ ಜೀವ ಬಂಧನ



ನಿನ್ನ ದಾರಿ ನನ್ನ ದಾರಿ
ಸೇರಿ ನಡೆವ ಆಟಕೆ
ನಿನ್ನ ಮೀರಿದೆಲ್ಲ ಸೇರಿ
ರದ್ದಿ ಕುಪ್ಪೆ ಜನ್ಮಕೆ



ನಿನ್ನ ಬಳಿ ನನ್ನ ಆಸೆ
ನನ್ನ ಮುಸಿ ಕೋಪವೂ
ಸಣ್ಣ ಗಾಳಿ ಸುಳಿಯದಷ್ಟು
ಜೋಡಿಸಿಟ್ಟ ಗಾಜಿದೋ
ನಾನು ನೀನು ಅನ್ನುವಷ್ಟು
ಅಂತರಕ್ಕೆ ಅಂಕವಿಲ್ಲ
ಅಂದವಾದ ಕವಿತೆ ನಿನ್ನ
ಸವಿದುಕೊಂಡೇ ಸವೆಯುವೆ



ನೀನು ನಾನು ಒಂದೇ ನೊಗ
ಬಾಳ ಬಂಡಿ ಕಟ್ಟುವ ಬಾ
ಏಳು ಬೀಳು ಎರಡಕ್ಕೂ
ನಾವೇ ಹೊಣೆಗಾರರು



ನೀನು ದೀಪ ಪ್ರೇಮ ರೂಪ
ಅಂತೆಯೇ ನಾ ನಿನಗೆ
ಹಾಡಿ ಮುಗಿಸೋ ವೇಳೆಗಲ್ಲಿ
ಸಿಹಿಯಾದ ಮಂಪರು

ಕಳೆದ ಕಾಲಿನ ಗೆಜ್ಜೆಯ ತುಣುಕು

ಕಳೆದ ಕಾಲಿನ ಗೆಜ್ಜೆಯ ತುಣುಕು
ಇನ್ನೂ ಗುನುಗಿದೆ ಎದೆಯಲ್ಲಿ
ಸೆಳೆದ ದೀಪವೇ ನಿನ್ನ ಬೆಳಕು
ಏಕೆ ಉಳಿಯದು ಇದ್ದಲ್ಲಿ?
ಹಬ್ಬಿ ಕುಳಿತ ಹಂಬಲ ಗರಿಯೇ...

ಚೂರು ತುಳುಕಿಸು ಕಾವನ್ನು
ಬಿರಿದು ಕಾಡೋ ಮೂಖ ಮುಗಿಲೇ
ಬೇಕಾ ಹೇಳು ಹೆಗಲಿನ್ನೂ!

ಸಪ್ಪೆ ಕಣ್ಣಿಗೆ ರೆಪ್ಪೆ ಸಿಕ್ಕಿದೆ

 ಮುಚ್ಚು ಮರೆಯಲಿ ಬಣ್ಣಗಳು
ಮಣ್ಣ ಮುಟ್ಟದ ಪಾದ ಏತಕೋ
ಎಣಿಸುತಿದೆ ಕಳೆದ ಇರುಳು
ಸಿಗದೇ ಹೋದರೆ ಸ್ವಪ್ನದ ಜಾಡು
ಮೊದಲ ಹೆಜ್ಜೆಯ ಗುರುತೆಲ್ಲಿ?
ಇಷ್ಟೇ ಸುಳ್ಳಿಗೆ ಅಷ್ಟೂ ಶಕ್ತಿಯ
ತುಂಬಿ ಹೊರಟರೆ ಉಳಿವೆಲಿ



ಮತ್ತೆ ಮೂಡುವ ಮೌನ ಜಾತ್ರೆಯ
ಸಾರ್ಥಕತೆಯೇ ನೀ ಕೇಳು
ನನ್ನ ಉಸಿರ ಏರು ಪಥದಿ
ನೀನೇ ಎಬ್ಬಿಸಿದೆ ಧೂಳು
ಕೊಲ್ಲಲಾಗದು ಹಿಂದೆ ನಿಂತು
ಎದೆಗೆ ಎದೆಯನು ಇರಿದು ಬಿಡು
ಗೆದ್ದೆನೆಂದು ಸದ್ದು ಮಾಡದೆ
ಬಿದ್ದ ಹೂವನು ಬಾಚಿ ಕೊಡು...

ಮರಳಿಗೆ ಹಂಚಿದ ಗುಟ್ಟನು ಕದ್ದು

ಮರಳಿಗೆ ಹಂಚಿದ ಗುಟ್ಟನು ಕದ್ದು
ಆಲಿಸಿ ಅಳಿಸಿತು ಅಲೆಯೊಂದು
ಖಾಲಿ ಉಳಿದ ದಡದಲಿ ಕೂತು
ತುಸು ಹಗುರಾಯಿತು ಮನಸಿಂದು...

ಕಟ್ಟು ಬಾ ಸೇತುವೆಯ ಮೌನಗಳ ನಡುವೆ

ಕಟ್ಟು ಬಾ ಸೇತುವೆಯ ಮೌನಗಳ ನಡುವೆ
ಆಡದ ಮಾತುಗಳು ಅರ್ಥವಾಗಿ ಸಾಯಲಿ
ಕಣ್ಣು ಬೆಸೆದರಷ್ಟೇ ಸಾಲದು ಸಂಭಾಷಣೆಗೆ
ದೃಷ್ಟಿಯೂ ಕೂಡಬೇಕು ಕಂಬನಿಗಳ ನಡುವಲಿ


ನೀಡು ನನಗೆ ನಿನ್ನ ಸದಾ ಸುಖಿಸೋ ಆ ನೋವನು
ಒಮ್ಮೆ ನನ್ನ ಹೃದಯದಲ್ಲೂ ನೆತ್ತರನ್ನು ಹರಿಸಲಿ
ತೋರು ಆ ನಿನ್ನ ಕನಸಿನೂರಿನಾಚೆ ಹೊಳೆಯನು
ಅಡ್ಡ ದಾರಿ ಹಿಡಿದ ಪಾದ ಪಾಪಗಳ ತೊಳೆಯಲಿ



ಬಿಗಿದಿಡು ಹಸ್ತವನ್ನು ನನ್ನ ಪ್ರಾಣ ಅಡಗಿಸಿಟ್ಟು
ಹುಡುಕಾಡಿ ನಿನ್ನನ್ನು ನಾ ಸೇರುವ ತನಕ
ಕೊಡೆಯನ್ನು ಇರಿಸಿಕೊಂಡ ಆ ನಿನ್ನ ನಂಬುಗೆಗೆ
ಅಚ್ಚರಿಯ ಹಂಗಾಮಿ ಮಳೆಯಾಗೋ ತವಕ



ಬರೆದು ಹೋಗು ಬೆನ್ನ ಮೇಲೆ ನಿನ್ನೆಲ್ಲ ಬಯಕೆಗಳ
ಬೆಂಬಿಡದೆ ಕಾಡುವಷ್ಟು ಕಟುವಾಗೇ ಇರಲಿ
ನಿನ್ನ ನೆನೆಪ ಸಾಂಗತ್ಯ ಇದ್ದರಷ್ಟೇ ಸಾಕು ಬಿಡು
ಏಕಾಂತಕೆ ಬಿಡುವು ಸಿಕ್ಕು ದೂರ ತೊಲಗಿ ಬಿಡಲಿ



ಬಾ ಚಾಚು ತೋಳುಗಳ, ಸಡಿಲಾಗಿಸಿ ಕೋಪವ
ತಬ್ಬಿಕೋ ಬೆಂದ ಜೀವ ನಿನ್ನ ಶಾಖ ಪಡೆಯಲಿ
ಗುಂಡಿಗೆ ಗುಂಡಿಗೆಗೆ ಮುತ್ತು ಕೊಟ್ಟು ಮೆರೆಯುವಾಗ
ಸಣ್ಣಗೆ ಮಂದಹಾಸ ಈರ್ವರಲ್ಲೂ ಮೂಡಲಿ...

ರೆಪ್ಪೆಯ ಚಿಪ್ಪಲಿ ಮುತ್ತಿನ ಹನಿಗಳು

ರೆಪ್ಪೆಯ ಚಿಪ್ಪಲಿ ಮುತ್ತಿನ ಹನಿಗಳು
ಕೆನ್ನೆಯ ಜಾಡಿಗೆ ಕಾಯುತ ಕುಳಿತು
ಒಡ್ಡಲೇ ಈಗಲೇ ಬೊಗಸೆಯ ಹಿಡಿದು
ನನ್ನಲಿ ಅವುಗಳು ಬೆರೆತರೆ ಒಳಿತು
ಕಲಿತೆನು ಈ ಥರ ಬರೆವುದ ಈಚೆಗೆ...

ತಪ್ಪಿದ್ದರೆ ಕೈ ಹಿಡಿದು ಬರೆಸು
ತಪ್ಪುವೆ ಬೇಕಂತಲೇ ತಾಳವನು
ಹಾಡಿಗೆ ನಿನ್ನ ಕೊರಳನೂ ಬೆರೆಸು!!

ಅವಳ ನೆನಪ ಗುಳಿಗೆ

ಅವಳ ನೆನಪ ಗುಳಿಗೆ ನುಂಗಿ ಕಣ್ ಮುಚ್ಚಿದೆ
ಕನಸುಗಳು ರೆಕ್ಕೆ ತೊಟ್ಟು ಸಾಲುಗಟ್ಟಿವೆ..

ಒಂದರ ಬೆನ್ನೇರಿ ವಿರಹಿ ವಿಹಾರಕ್ಕೆ ಹೊರಟ
ಅವಳೂ ಕನಸ ಹೊತ್ತು ಎದುರಾಗುತ್ತಾಳೆ


ಇಬ್ಬರೂ ಅಗಂತುಕರು ಮತ್ತೆ ಪ್ರೀತಿಗೆ ಪ್ರೇರಿತರಾಗಿ
ನಮಗೆ ನಮ್ಮನ್ನೇ ಪರಿಚಯಿಸಿಕೊಟ್ಟೆವು



ಸಿಗ್ಗು ತಡೆಯಲಾಗದೆ ಎದೆಯ ಬಡಿತ ಏರಿತು
ಅದುವೇ ಪ್ರೀತಿಯ ಸೂಚಕವೆಂದುಕೊಂಡೆವು...t

ಇರುಳ ದಾಟಿ ಬರಲು ನಿನಗೆ

ಇರುಳ ದಾಟಿ ಬರಲು ನಿನಗೆ
ಹೊಸತು ಕಥೆಯ ಹೊಸೆಯಬೇಕು
ನಿದ್ದೆಗಣ್ಣ ಕಟ್ಟುವಂಥ
ಪತ್ರವೊಂದ ವಹಿಸ ಬೇಕು
ಒಂದೂರಿನಿಂದ ಹಿಡಿದು...

ಅಲ್ಲಿಗೆ ಕಥೆ ಮುಗಿಯಿತೆಂದು
ನೂರು ಸುಳ್ಳು ದಾಖಲಿಸಿ
ನೀತಿ ರಸವ ತುಂಬಬೇಕು



ಒಮ್ಮೆ ಮಧ್ಯಂತರಕ್ಕೆ ತೂಕಡಿಕೆ
ಮತ್ತೊಮ್ಮೆ ಪಾತ್ರ ಪರಿಚಯಕ್ಕೂ ಮೊದಲೇ
ಒಮ್ಮೊಮ್ಮೆ ಹೊಸತನವ ಧಿಕ್ಕರಿಸಿ
ಹಳಸು ಕಥೆಗೆ ಮತ್ತೆ ತಲೆದೂಗುವೆ
ಎದೆಯ ತಟ್ಟಿ ತಾಳಕೆ
ಪರದೆ ಸರಿದು ನಾಟಕ
ಹೆದರಿಕೆಯಲೂ ನಗಿಸುತಾನೆ
ಮುದ್ದು ಗುಮ್ಮ ವಿಧೂಶಕ



ಕನಸಿನಲ್ಲಿ ಆ ಒಂದೂರಿನಲ್ಲಿ
ಯಾವ ಪಾತ್ರ ನಿನ್ನದು?
ನಿದ್ದೆಯಲ್ಲಿ ಒದ್ದಾಡುತ ಮೈ ಮುರಿವೆ
ದೊಂಬರಾಟ ಯಾವುದು?
ಮಂದಹಾಸ ಬೀರುತೀಯ
ಯುವರಾಣಿ ಕಂಡಳೇ?
ರಾಜ ಪಟ್ಟ ಏರೋ ಮೊದಲೇ
ಕಿರೀಟವನ್ನು ಕೊಳ್ಳಲೆ?



ಎಚ್ಚರಗೊಳ್ಳುವೆ ಬೆಚ್ಚುತ
ಯಾರು ದಾಳಿಗಿಳಿದರೋ!
ನಿನ್ನ ಕನಸಿನೊಳಗೆ ನಾನು
ಗಸ್ತು ತಿರುಗಿ ಕಾಯಲೇ?
ಹಸಿವ ಪೂರ್ತಿ ನೀಗಿಸದೆ
ಹಠಕೆ ಬಿದ್ದು ಮಲಗಿದೆ
ಹಾಲಾಡಿಗೆ ಅಸ್ತ್ರ ಇಗೋ
ಹೂಡು ಅಂಜಲಾರದೆ



ಮುಂಜಾವಿಗೆ ಎಷ್ಟು ದಣಿವು
ಪುಟ್ಟ ಕಣ್ಣು ಕಮರಿದೆ
ನೆನೆದ ಗೋಸಿಯಲ್ಲಿ ನಿನ್ನ
ಗಾಂಭೀರ್ಯಕೆ ನಮಿಸುವೆ
ಮಡಿಲಲಿರಿಸಿ ಬೆಚ್ಚಗಾದ
ಪಾದ ಕೆನ್ನೆಗೊರೆಸುತ
ಅಪ್ಪಿಕೊಂಡಾಡುವಾಗ
ದಣಿದ ಉಸಿರ ತಣಿಸುವೆ...

ಎರಡು ಮೂರು ದಿನಗಳಿಂದ ನನಗೆ ಹೀಗೆ ಆಗಿದೆ


ಎರಡು ಮೂರು ದಿನಗಳಿಂದ ನನಗೆ ಹೀಗೆ ಆಗಿದೆ
ಮರೆಯದಂತೆ ನೀನೇ ನನ್ನ ಕನಸಿನಲ್ಲಿ ನೆಲೆಸಿದೆ
ಮುಂದೆ ನೀನು ಹಿಂದೆ ನಾನು ಏನೂ ಅರ್ಥವಾಗದೆ
ಮೊನ್ನೆವರೆಗೂ ಹೇಗೋ ಇದ್ದೆ ಇನ್ನು ಮುಂದೆ ಕಾದಿದೆ


ಸೊನ್ನೆ ಸುತ್ತುವಲ್ಲಿ ಎಷ್ಟು ಸೊಗಸು ನೀನು ಬಲ್ಲೆಯಾ
ಒಮ್ಮೆ ಬಂದು ನನ್ನ ಬಾನಿಗಷ್ಟೂ ತಾರೆ ತುಂಬೆಯಾ
ತಪ್ಪು ತಿಳಿಯದಂತೆ ಮೆಲ್ಲ ಗಲ್ಲವನ್ನು ತಾಕುತ
ನನ್ನ ತುಟಿಗೆ ನಿನ್ನ ತುಟಿಯ ಮಿಂಚ ಕೊಂಚ ನೀಡೆಯಾ?



ನಲ್ಮೆಯಲ್ಲಿ ತಾಳ್ಮೆ ಕಮ್ಮಿ ಅನ್ನುತಾರೆ ಎಲ್ಲರೂ
ತಾಳುವವರ ನೋವ ಅವರು ಹೇಗೆ ತಾನೆ ಬಲ್ಲರು
ಇಲ್ಲ ಸಲ್ಲದಂಥ ಮಾತು ವ್ಯರ್ಥ ನಮ್ಮ ಪ್ರೀತಿಗೆ
ಮೌನದಲ್ಲಿ ಮುಂದುವರಿದು ಕವಿಯಬೇಕು ಮಂಪರು



ಈಗ ತಾನೆ ಬಿದ್ದ ಕನಸಿನಲ್ಲಿ ಮಿಂದು ಬಂದೆನು
ಅಲ್ಲಿ ನೆಟ್ಟ ಹೂವ ಬಳ್ಳಿ ಕಸಿಯ ಮಾಡಿ ತಂದೆನು
ಭಾವವನ್ನು ನೆಚ್ಚಿ ತಾನು ಬಣ್ಣ ತಾಳುವಂಥದು
ನಿನ್ನ ನಿತ್ಯ ನಗೆಯ ಸಾರ ಎರೆದು ಸುಖಿಸು ಬೇರನು



ಮತ್ತೆ ಬರುವ ಹುಣ್ಣಿಮೆಗೆ ದಾರಿ ಮಾಡಿ ಕೊಟ್ಟರೆ
ತಪ್ಪದಂತೆ ಜೊನ್ನ ಕೊಡುವ ದೀಪ ಮುಗಿದ ರಾತ್ರಿಗೆ
ಎಲ್ಲವನ್ನೂ ಒಂದೇ ಮಾತಿನಲ್ಲಿ ಹೇಳಿ ಮುಗಿಸುವೆ
ಮುಗಿಸಬೇಡವೆನುವೆಯೆಂದೇ ಮರವು ಕೊಟ್ಟೆ ಚುಕ್ಕಿಗೆ...

ಅಮ್ಮ ಎಂದರೆ

ಅಮ್ಮ ಎಂದರೆ
ಹೊಲ, ಗದ್ದೆ, ನೀರು
ಹೂವು, ಬಳ್ಳಿ, ಬೇರು
ಒಲೆ, ಗಂಜಿ, ಸೂರು
ಕೆರೆ, ತೊರೆ, ಹಸಿರು...

ಅಪ್ಪ ಎಂದರೆ
ಆ ಪ್ರಪಂಚಕೆ ಹೆಸರು...

ಎಲ್ಲ ಮುಗಿಯುವುದಿಲ್ಲ ಒಮ್ಮೆಗೆ

ಎಲ್ಲ ಮುಗಿಯುವುದಿಲ್ಲ ಒಮ್ಮೆಗೆ
ಅಂತ್ಯವೆಂಬುದು ತಾತ್ಕಾಲಿಕ
ಹಂಗಾಮಿ ಖುಷಿಯಂತೆ ನೋವೂ
ಹೊರಳಿ ಹೊರಳಿ ಬಾಳ ಕಥನ .
ಮುಂಬರುವ ಪುಟಗಳು ಕನಸು...

ಬೆರಳು ತಾಗಿಸಿಕೊಂಡ ನೆನಪು
ಕಂಬನಿಗೆ ಮಡಿಲಾದ ಹಾಳೆ
ಬಂದೇ ಬರುತಾವೆ ನಾಳೆ



ಎಲ್ಲ ಕೊನೆಗಳೂ ಕೊನೆಗಳಲ್ಲ
ಕೆಲವು ಮೊದಲುಗಳು, ಮಧ್ಯಂತರಗಳು
ತಿರುವುಗಳು, ಎಡವಿಸಿಕೊಂಡವುಗಳು
ಅವರವರ ಭಾವಕ್ಕೆ ಒಂದು ಹೆಸರು.
ಮೈಲಿಗಲ್ಲಿನ ಮೇಲೆ ಬರೆದ ಮಾತ್ರಕ್ಕೆ
ಊರು ಊರಾಗದು, ದೂರವೂ ಅಂತೆ
ಮಂಡಿ ಊರಿದೆಡೆ ನಿದ್ದೆ
ಪಾದ ತಾಕಿಸುವುದೇ ಪಯಣ



ಚಿತ್ತದಾಚೆ ಮೆತ್ತಗೆಯ ಹಾಸಿಗೊರಗಿ
ಗುಟ್ಟಾಗಿ ಸಜ್ಜುಗೊಂಡಂತೆ ಸುಣ್ಣ ಬಳಪ
ಕೊರೆದ ಒರಟು ಪಲಕದ ಹಣೆ ಮೇಲೆ
ಒಂದೊಂದಾಗಿ ತಿದ್ದುವ ಅಕ್ಷರಕೆ
ಅರ್ಥವೊದಗಿಸಲು ಜಡವಾಗಿರದೆ
ಚೂರಾದರೂ ಜರುಗಬೇಕು ಜೀವನ.
ಪಾತ್ರಗಳೆಲ್ಲ ಮುಂದುವರಿಯುತ್ತಾವೆ
ನನ್ನ ಪಾತ್ರ ಬೇರಾರೋ ನಿಭಾಯಿಸಿ ಬೀಗುತ್ತಾರೆ...



ಹಂಗು ತೊರೆವುದರಲ್ಲಿ ಸ್ವಾರ್ಥವಿದೆ,
ನೀಗಿದ ದಾಹಕ್ಕೆ ನೀರು ಭಾರವಾದಾಗ
ಕೆರೆ ಕಟ್ಟೆಗಳನ್ನ ಕೆಡವಿ ಬಿಡಬೇಕನಿಸಿ
ಇನ್ನೂ ದಣಿದಲ್ಲೇ ಉಳಿದವನ ಕಂಡು
ಮರುಕ ಪಟ್ಟವನಲ್ಲಿ ನಾನೂ ಒಬ್ಬ.
ಚೂರು ಜೋರಾಗಿ ಓಡಿ ಗೆಲ್ಲಬಹುದು
ಆದರೆ ಗೆದ್ದಾಗ ಯಾರೂ ಇರದೆ
ಸೋಲುವುದಕ್ಕಿಂತ ಸೋತು ಗೆದ್ದರೆ?



ಇರುಳಿಗೆ ದೀಪ ಬೆಳಗಿಸುವ ಮನ
ಗೋಡೆಯ ಚಿತ್ತಾರ ಛಾಯೆಯ ಬಳುಕಾಟ
ನರಳಾಟವೆಂದನಿಸುತ್ತಿಲ್ಲವಾದರೂ
ಒಮ್ಮೆ ತಲೆ ಸವರಿ ನೋಡಬೇಕು,
ಬಿಕ್ಕಿ ಅತ್ತರದಕೆ ಸಾಂತ್ವನ
ಅಥವ ನಟಿಸಿದ ಪಾತ್ರಕ್ಕೆ ಬಹುಮಾನ
ಏನಿಲ್ಲವೆಂದರೂ ಕತ್ತಲ ದಾಟಿದ ಯತ್ನಕ್ಕೆ
ಸಮರ್ಥನೆಗಳ ಸನ್ಮಾನ!

ನೀರಲ್ಲಿ ಅಲೆಯಂತೆ ನೀ ಬಂದೆ

ನೀರಲ್ಲಿ ಅಲೆಯಂತೆ ನೀ ಬಂದೆ
ತೀರಕ್ಕೆ ನೀ ನನ್ನೇಕೆ ದೂಡಿದೆ?
ಮೋಹಕ್ಕೆ ಮಳೆಯೊಂದ ನೀ ತಂದೆ
ಭಾವಕ್ಕೆ ನೀ ಹೆಸರನ್ನೂ ನೀಡಿದೆ..


ಅರಳಿದ ಆಸೆಯಲಿ, ಎರಚುತ ಬಣ್ಣವ
ಮನಸಿನ ಸೂರಿನಡಿ, ಪರಿಚಯವಾದೆಯಾ..
ಹೃದಯವೇ ಅನುಮಾನವಿಲ್ಲದೆ
ಪ್ರಣಯವ ಬರಮಾಡಿಕೊಂಡಿದೆ
ಉಳಿವುದಾದರೆ, ಉಲಿಯಬೇಕಿದೆ
ಒಲವಿನ ರಾಗ ಈಗ...



ಮುಗಿಲಿನ ಜೊತೆಗೂಡಿ, ನಲಿಯುತ ಅಲೆದಾಡಿ
ಸುಮಧುರ ಹಾಡೊಂದ ಹಾಡುತ
ಕೊನೆಯೇ ಇಲ್ಲದ ಕನಸಾಗುತ...
ಮುಂದುವರಿದ ಕ್ಷಣಕೆ, ಮಂದಹಾಸ ನೀಡುವ
ಹಿಂದಿರುಗಿ ಹೆಜ್ಜೆಗಳ ಲೆಕ್ಕವಿಡುವ



ತೆರೆದಿದೆ ಹೊಸದೊಂದು ಹಾಳೆಯು
ಬರೆಯುವ ಮನದಾಸೆ ಸಾಲನು
ಇರುಳ ಕಾಣದ, ಹೊನಲು ಸಂಭ್ರಮ
ಮುಗಿಯದ ಮಾಯೆ ಪ್ರೀತಿ...

ಅಪ್ಪನನ್ನು "ಅಮ್ಮ"ಯೆನುವ ಕಂದ

ಅಪ್ಪನನ್ನು "ಅಮ್ಮ"ಯೆನುವ ಕಂದ
ನಿನ್ನ ಮನಸು ಏಕಿಷ್ಟು ಚಂದ?!
"ಆಡಿಕೊಂಡಾರು ನೋಡಿದವರು!"
ಆತಂಕ ಅಮ್ಮನೆದೆಯ ತುಂಬ


ಆಡಿಕೊಂಡವರು ಹೇಗೆ ಬಲ್ಲರೇಳು
ಅಮ್ಮ ಆಗುವ ಆ ಪರಮ ಸುಖವ?!
ಕರೆಸಿಕೊಂಡಾಗ ಹರಿದು ಬಿಡರು
ಹರಿತವಾದ ವ್ಯಂಗ್ಯವಾಡೋ ಪದವ



ನಾ ಅಪ್ಪ ಆದರೂ ಅಮ್ಮ ಅವಗೆ
ಅವ ಮಗ ಆದರೂ ಅಮ್ಮ ನನಗೆ
"ಅಮ್ಮ" ಎಂಬುದು ಭಾವ ಸೇತು
ಸ್ತ್ರೀ ಅದಕೆ ಸುಪ್ತ ರಾಯಭಾರಿ



ಹನಿವ ಕಣ್ಣ ಒರೆಸುವುದು ತಾಯ್ತನ
ಉದರ ಕಿಚ್ಚ ತಣಿಸುವುದು
ಅಧರ ಸ್ವಚ್ಛ ಅರಳುವುದು
ಎದೆಯ ಬೆಚ್ಚಗಿರಿಸುವುದು



ಕನಸ ಪಹರೆ ಕಾಯುವುದು
ಸುಲಿದು ಬಿಡಿಸಿ ಕಲಿಸುವುದು
ಕಲೆತು ಬೆರೆತು ತಿದ್ದುವುದು
ಹಾಗೇ ತಿದ್ದಿಕೊಳ್ವದೂ ತಾಯ್ತನವೇ..



ನಾ ಅಮ್ಮ ಎಂಬ ಭಾವ ಅವನಲಿ
ಚಿಗುರಿ, ಅರಳಿ, ಚೆದುರುವ ತನಕ
ಅಮ್ಮನಾಗೇ ಉಳಿಯುವ ಹಂಬಲ
ನಂತರ "ಅಪ್ಪ"ನೆಂಬ ಹಿಂಬಡ್ತಿ ಇದ್ದೇ ಇದೆ!

ಕ್ರಮಿಸಬೇಕು ಇನ್ನೂ ದೂರ

ಕ್ರಮಿಸಬೇಕು ಇನ್ನೂ ದೂರ
ಮೂರೇ ಹೆಜ್ಜೆ ಇರಿಸಿ ಕೂತೆವು
ಮಡಿಲ ತುಂಬ ಹಬ್ಬಿಕೊಂಡ
ಒಲವ ಬಳ್ಳಿಯ ಹೂವ ಸವರಿ
ಹೊರಳಿ ನೋಡಿದ ದಾರಿಯಲ್ಲಿ...

ತಿರುವು ತಿರುವುಗಳಲ್ಲೂ ಸೋತೂ
ನಿನ್ನ ಜೊತೆಗೆ ನಾನು ಮತ್ತು
ನನ್ನ ಜೊತೆಗೆ ನೀನು ಎಂಬ
ಸಂಭ್ರಮಕ್ಕೆ ಶುಭಾಶಯ!



ಇರುಳ ದಾಟಲು ಕಿಡಿಯ ಹೊತ್ತಿಸೆ
ಹಗಲು ಮೂಡಲು ಇರುಳ ಮುಟ್ಟಿಸೆ
ಹವಣಿಸಿದ ದಿನಗಳಿಗೆ ಮೀಸಲು
ಇನ್ನು ಮುಂದೆ ಇರಿಸೋ ಹೆಜ್ಜೆ
ನಿಂತ ಕಾಲಕೆ ಕಾಲ ನಿಲ್ಲದೆ
ಕಣ್ಣ ನೀರಲಿ ಬೇಳೆ ಬೇಯದೆ
ಹಸಿದ ಮನಸೊಳಗಾದ ಗಾಯಕೆ
ಇದೋ ನಗೆಯ ಶುಭಾಶಯ!

ಅಚ್ಚರಿಯ ಅಕ್ಷರವ ಕಲಿಸಿ

 ಮತ್ಸರವ ಮುತ್ತಲ್ಲಿ ಮರೆಸಿ
ನಂಟು-ನೆಂಟರ ಭಾರ ಹೊರೆಸಿ
ನಲ್ಮೆ ದೋಣಿಯ ಅಂಚಿಗಿರಿಸಿ
ಆಚೆ ಅಂಚಲಿ ದೋಣಿ ನಡೆಸಿ
ಇಟ್ಟ ಒಗಟುಗಳನ್ನು ಬಿಡಿಸಿ
ಹೊಸ ಗೋಜಲು ಹುಟ್ಟು ಹಾಕುವ
ಬಾಳ ಗಂಟಿಗೆ ಶುಭಾಶಯ!



ಕೆಡವಿದ ಕೈಗನ್ನಡಿಯನು
ತಡವಿದ ಆ ಕೆನ್ನೆಗಳನು
ತಡೆದ ಮಾತನು, ಕೊಡದ ಮಾತನು
ಮತ್ತೆ ಹೊಸತಾಗಿಸುವ ಬಯಕೆ
ಸ್ವಪ್ನದ ಸಂಕೋಲೆಯಲ್ಲಿ
ಸಾಗಿದ ಉತ್ಸವವ ತ್ಯಜಿಸಿ
ದಾರಿ ಮುಳ್ಳನು ಹಿಂದಿಕ್ಕಿದ
ಒಲವ ಜಾಣ್ಮೆಗೆ ಶುಭಾಶಯ!



ದಿನವೂ ಬಾರದ ಹುಣ್ಣಿಮೆ
ಕರಗುವುದನೂ ಕಲಿಸಿದಂತೆ
ಬಿಸಿಲಿನೊಂದಿಗೆ ಶಿಶಿರವನ್ನೂ
ಸಹಿಸಿದ ಭೂ ತಾಯಿ ನೀನು
ಬೆಚ್ಚಿ ಬೀಳುವ, ನೆಚ್ಚಿ ಬಾಳುವ
ಇಚ್ಛೆಗಳನೂ ಸುಟ್ಟು ಮರುಗುವ
ಮತ್ತೆ ಚಿಗುರುವ ಸ್ವಚ್ಛ ಪ್ರೇಮಕೆ
ತುಂಬು ಮನದ ಶುಭಾಶಯ!

ಸಂಪಿಗೆಯ ಸಸಿಯೊಂದ

ಸಂಪಿಗೆಯ ಸಸಿಯೊಂದ
ನಿನ್ನ ಮನೆಯಂಗಳದಿ
ನೆಟ್ಟು ಹೋಗುವೆನಿಂದು
ಹಿಂದಿರುಗಿ ನೋಡದೆ
ಸ್ವಾರ್ಥವೇನಿಹುದಲ್ಲಿ...

ಮೊದಲ ಹೂ ಮುಡಿಗಿರಿಸು
ಕಂಪು ಉಸಿರಿಗೆ ಸೋಂಕಿ
ಎದೆ ಭಾರ ಕುಗ್ಗಲಿ



ನೂಲಿಂದ ಬೇರ್ಪಟ್ಟ
ಗಾಳಿಪಟದಂತೆ ಮನ
ಇಷ್ಟ ಬಂದಂತೆ ತೇಲುತ್ತ
ಸಾಗುತಲಿಹುದು
ತಡೆದೊಮ್ಮೆ ಹಿಡಿತದಲಿ
ಬಿಡದಂತೆ ಸೆಳೆದುಕೋ
ಕ್ರಮಿಸುವುದು ಬಚ್ಚಿಟ್ಟ
ಭಾವಗಳ ಸರಣಿಗೆ



ನಿನ್ನದೇ ಹಣತೆ
ನಿನ್ನದೇ ಬತ್ತಿ
ನೀನೇ ಎರೆದ ಎಣ್ಣೆಗೆ
ಹೊತ್ತಿದ ಕಿಡಿಯಷ್ಟು ನಾನು
ಉರಿವುದು ಧನ್ಯತೆಗೆ
ಕೊನೆಗುಳಿವೆ ಕಾಡಿಗೆಗೆ
ತೀಡು ಕಣ್ಣಿಗೆ ಬರಲಿ
ಇನ್ನಷ್ಟು ಬೆರಗು



ಸೆರಗಿನಂಚು ಬಂಧಿಖಾನೆ
ಬೆಳದಿಂಗಳಿಗೆ
ಮಳೆಬಿಲ್ಲೇ ಎರಗಿಹುದು
ಉಗುರು ಬಣ್ಣದ ಮೇಲೆ
ಎಲ್ಲ ಸುಳಿವುಗಳಲ್ಲೂ
ಪ್ರಶ್ನೆಯೊಂದನು ಇಡುವ
ನಿನ್ನ ಕಣ್ಣಿನ ಭಾಷೆಗಾವ
ನಿಘಂಟು?



ಊರಾಚೆ ಪೊದೆಗಳಿಗೆ
ಮೆದುಳು ಬಹಳ ಚುರುಕು
ಯಾರಿಗಾವುದು ಎಂದು
ಮೊದಲೇ ನಿಶ್ಚಯಗೊಂಡು
ಹಾದು ಹೋಗುವ ಸರದಿ
ಕೈ ಬೀಸಿ ಕರೆಯುವುದು
ನಾನಲ್ಲ ಕಿವಿಗೊಟ್ಟು
ವಶವಾಗೋ ಪೋಲಿ



ಮಳೆಗಾಲವೇ ಶೀತ
ಆದರೂ ಬೆವರಿಸುತ
ನಿದ್ದೆ ಕದ್ದ ಕುರುಹು
ಹಾಸಿಗೆಯ ತುಂಬ
ಕನಸೊಳಗೆ ಇಳಿಜಾರಿ
ತಳ ಮಟ್ಟ ನಲಿದವಳು
ಎದುರು ಬಂದರೆ ಮಾತ್ರ
ಮೌನ ಗೌರಿ!!

ಅರಿವಿನಿಂದೊಂದಿಷ್ಟು ದೂರ


ಅರಿವಿನಿಂದೊಂದಿಷ್ಟು ದೂರ
ಚೆಲ್ಲಿ ಹೋಗಿ ಸಕ್ಕರೆ
ಚೂರಾದರೂ ಉರುಳದೆ
ಜಡವಾಗಿಹೆ ಉಳಿದಲ್ಲೇ


ಅಂಜಿಕೆಯ ನೆರಳನೊಡ್ಡಿ
ಜೂಟಾಟವ ಆಡ ಬನ್ನಿ
ಮಂಜು ಗಡ್ಡೆ ಹೃದಯವೊಮ್ಮೆ
ಕರಗಿ ಹರಿದು ಹೋಗಲಿ



ನಾಲಿಗೆಯ ಬೆನ್ನಿಗೆ
ಕಚಗುಳಿ ಇಡಲು ಬಲ್ಲಿರಾ?
ಬದುಕಿ ಬಹಳ ಕಾಲವಾಯ್ತು
ನಗುವನ್ನೇ ಇರಿದು ಕೊಲ್ಲಿ!



ಕಣ್ಣೀರಿಗೆ ರೆಕ್ಕೆ ಸಿಕ್ಕು
ಹೇಳಿಯೇ ಹಾರಿ ಹೊರಟು
ಕಣ್ಣು ನೋಡು ನೋಡುತಿರಲು
ಹಾಗೇ ಮಬ್ಬು ಮುಸುಕಿತು?



ದೀಪ ಹಚ್ಚದಿರಿ ಇಂದು
ನಾಳೆಗಾಗಿ ಕಾಯುವೆ
ಕೋಪ ಶಾಂತಗೊಳ್ಳುವನಕ
ದೂರವೇ ನಿಲ್ಲುವೆ

ನಿಮ್ಮಂಥವರಿರಬೇಕು
ಇಲ್ಲದೆ
ನಮ್ಮಂಥವರಿಗೆ ನಮ್ಮರಿವಾಗದು...

ಆಕೆ ಕರುಳು ಕೊಟ್ಟಳು

ಆಕೆ ಕರುಳು ಕೊಟ್ಟಳು
ನಾನು ಬೆರಳು ಕೊಟ್ಟೆ
ಸ್ವೀಕಾರಕ್ಕೂ ಔದಾರ್ಯತೆ ಬೇಕು
ಅದು ಅವನಲ್ಲಿ ಬೆಟ್ಟದಷ್ಟಿದೆ


ಆಕೆ ಉಸಿರು ತುಂಬಿದಳು
ನಾನು ಹೆಸರನಿಟ್ಟೆ
ಪ್ರಿಯವಾಗಿ ಇರಿಸಿಕೊಂಡ
ನಯವಾಗಿ ಬೆರೆತುಹೋದ



ಅಮ್ಮ ಗದರುವಾಕೆ ಮುದ್ದಿನಲ್ಲೂ
ಮೆದುವಾಗಿ ತಿದ್ದುವವಳು..
ಬಲು ಸೂಕ್ಷ್ಮ ಆತ!
ಒಮ್ಮೆ ಮುನಿಸು, ಒಮ್ಮೆ ಅಳು
ಅಪ್ಪನಂಗಿಯ ಮೇಲೆ
ಗೀಚಿದ್ದೇ ಹನಿಯ ಸಾಲು



ಎದೆಯ ಮೇಲೆ ಅವನ ಪಾದ
ಕನಸಿನಲ್ಲೂ, ಮಗ್ಗಲಲ್ಲೂ
ರೆಪ್ಪೆ ಮುಂದೆ ಅವನ ನಾಳೆ
ಹಿಂದಿರುಗಿ ನೋಡೋ ವೇಳೆ
ಅವನೆಂದೂ ಪುಟ್ಟ ಪಾಪು
ನಾನವನ ತದ್ರೂಪು..



ನನ್ನ ಅವಳ ಹೃದಯದೊಂದೊಂದು
ಮಿಡಿತದಲ್ಲೂ ಅವನೇ ಕವಿತೆ
ಲಯ ತಪ್ಪಿದ ಹಾಡಿನಲ್ಲೂ
ಮಿರಿಯುತಿದ್ದ ಭಾವದಂತೆ
ಉತ್ಸಾಹದ ಕೈಪಿಡಿ
ಜೋಡಿ ಬದುಕ ಬೆನ್ನುಡಿ...



ಎಡವಿದಲ್ಲೂ ಒಂದು ಪಾಠ
ಹಠದಲ್ಲಿ ಅಷ್ಟೇ ದಿಟ್ಟ
ಅವನಂತೇ ಕತ್ತಲು
ಅವನಷ್ಟೇ ಪುಕ್ಕಲು
ಅವನಿಂದಲೇ ಸಂಜೆ ಬೆಳಗು
ಅವನೇ ಬೆಳದಿಂಗಳು!!

ಬುಲ್ ಬುಲ್ ಹಕ್ಕಿಗಳು

ಜೋಡಿಯಾಗಿ ಮನೆಗೆ ನುಗ್ಗಿದ ಬುಲ್ ಬುಲ್ ಹಕ್ಕಿಗಳು
ಹೊರಗೆ ದಾರಿ ತೋಚದೆ ಪರದಾಡಿದವು
ಕಿಟಕಿಗಳನ್ನೆಲ್ಲ ತೆರೆದಿಟ್ಟೆ
ಒಂದಕ್ಕೆ ಮಾತ್ರ ದಾರಿ ಸುಗಮವಾಗಿ ಹಾರಿ ಹೋಯಿತು
ಮತ್ತೊಂದು ಒಳಗೇ ಉಳಿದು ಅಳುತ್ತಿದೆ..


ಅರೆ.. ಎಷ್ಟು ಹುಂಬ ಹಕ್ಕಿಯದು!
ಬಂದ ದಾರಿ ಮರೆತಿದೆ ಸರಿ
ಮುಂದೆ ದಾರಿಯಿದೆಯೆಂಬುದಾದರೂ ತಿಳಿಯದಿದ್ದರೆ?
ಒಂದೇ ಸಮ ಚೀರುತ್ತಿದೆ
ಹೊರಗಿಂದ ಒಂದು ಸರದಿ ಮತ್ತೆ ಒಳಗಿಂದ..



ದಣಿವಾಗಿರಬಹುದೆಂದು ನೀರಿಟ್ಟೆ
 ನಾಲ್ಕು ಕಾಳು ಅಕ್ಕಿ ಚೆಲ್ಲಿ ದಾರಿ ಮಾಡಿ ಕೊಟ್ಟೆ
ಯಾವುದೋ ಮೂಲೆಯಲ್ಲಿ ಉಳಿದು
ತನ್ನ ಬಾನೊಡನಾಡಿಯನ್ನು ಕೂಗುತ್ತಿದೆ
ಹೊರಗಿಂದ ಸಿಕ್ಕ ಪ್ರತಿಸ್ಪಂದನೆಗೆ ಮತ್ತೂ ಜೋರಾಗಿ...



ಸಂಜೆ ಮಂಪರು ಆವರಿಸಿ
ಗಂಜಿ ಬೆಂದು ಹೊಟ್ಟೆ ತಣ್ಣಗಾಸಿಸುವಾಗ
ಯಾಕೋ ಹಕ್ಕಿಯ ಸದ್ದು ಕ್ಷೀಣಿಸತೊಡಗಿತು..
ಹೊರಗೂ ಯಾವ ಸದ್ದು ಇಲ್ಲ
ಬಹುಶಃ ಋಣ ತೀರಿತೆಂದೇ?



ಎಷ್ಟು ದೊಡ್ಡ ಮನೆ ನನ್ನದುsss
ಅದಕ್ಕೆ ಇಷ್ಟಾದರೂ ಹಿಡಿಸದೆ
ಹೊರ ಜಗತ್ತಿನ ಚಪಲಕ್ಕೆ ಗಂಟಲಾರಿ
ತೊಟ್ಟು ನೀರು.. ಊಹಂ
ಕಾಳು ಅಕ್ಕಿ.. ಮುಟ್ಟೇ ಇಲ್ಲ
ಸತ್ತರದಕ್ಕೆ ಹೊಣೆ ನಾನಂತೂ ಅಲ್ಲ.
ಛೇ.. ಹಾಗೆಲ್ಲ ಆಗಿರಲಿಕ್ಕಿಲ್ಲ..



ಅಷ್ಟರಲ್ಲೇ ಸಾಮಾನು -ಸರಂಜಾಮು ಸಿದ್ಧವಾಗಿ
ಒಂದು ವಾರ ತವರಿಗೆ ಹೋಗುವ ಮಾತಾಡುತ್ತಾಳೆ ಮನದನ್ನೆ
ಆಗಸವೇ ಕುಸಿದು ಬಿದ್ದಂತೆ ನನಗೆ..
ಒಂಟಿ ಬುಲ್ ಬುಲ್ಗೆ ಸಾತ್ ಕೊಡಲಿದ್ದೇನೆ
ನರಕದಲಿ ಉಳದಷ್ಟು ಹೊತ್ತು..

ಏಣಿಗೆ ತಲೆ ತಳಗಳೆಂಬುದಿಲ್ಲ

ಏಣಿಗೆ ತಲೆ ತಳಗಳೆಂಬುದಿಲ್ಲ
ಯಾವ ಕಡೆ ನೆಟ್ಟರದೇ ಕಾಲು
ಏರಿನಲ್ಲಿರುವುದೇ ತಲೆ
ಹೀಗೆ ಬೇಕಾದವರ ಬೇಡಿಕೆಗೆ ತಕ್ಕಂತೆ
ಪಲ್ಲಟಗೊಳ್ಳುವ ಏಣಿಗೆ ...

ನಡು ಮೆಟ್ಟಿಲುಗಳ ಲೆಕ್ಕವಿಲ್ಲ
ಆದಿ-ಅಂತ್ಯಗಳೇ ತಾನೆಂಬ ಅಹಂ ಆವರಿಸಿತ್ತು



ರಾತ್ರಿಯಿಡಿ ನಕ್ಷತ್ರಗಳ ಎಣಿಸುತ್ತ ಮೈ ಮರೆತಿದ್ದ
ಬಾನಿನಾಚೆಗಿನ ತುದಿ ಉಬ್ಬುತ್ತಲೇ
ನಡುವೆಲ್ಲೋ ಸೀಳು ಶಬ್ಧವಾಗಿದ್ದು ಬುಡಕ್ಕೆ ಬಡಿದು
ಒಂದೊಂದೇ ಹೆಜ್ಜೆ ನಿತ್ರಾಣಗೊಂಡು ಸೋತವು.
ಬಿದಿರಿಗೆ ಮುಪ್ಪು ದಾಟಿ ಮತ್ತೊಂದು ಮುಪ್ಪು
ಇತ್ತ ಕಾಲುಗಳು ಮಣ್ಣು ಮುಕ್ಕುತ್ತಾ ಬಿಕ್ಕುತ್ತಾ..



ಬೆಳಕು ಒಂದೊಂದೇ ಹೆಜ್ಜೆಯಿಟ್ಟು
ನೇಸರನ ನೆತ್ತಿಯ ಮೇಲೆ ತಂದಿರಿಸಿ
ರಾತ್ರಿ ಉಬ್ಬಿದೆದೆಯ ಕಮರಿಸುತ್ತಲೇ
ಮತ್ತೊಂದು ಸೀಳು
ಹೀಗೆ ಹತ್ತಾರು ಒಂದಾಗಿ ಜೊತೆಯಲ್ಲಿ ಮುಂದಾಗಿ
ತಲೆ ತಳಗಳ ಒಂದು ಮಾಡಿದವು



ಮುಟ್ಟಿಸಿಕೊಂಡು, ಮೆಟ್ಟಿಸಿಕೊಂಡು
ಅದೆಷ್ಟೋ ಅಸ್ಪೃಶ್ಯ ಮನಸುಗಳ ಸೋಲಿಸಿದ್ದ
ಒಂದೊಂದೇ ದಾಟು ಉರುಳಿ ಬಿದ್ದು
ಅಲ್ಲಿಗೆ ಏಣಿಗೇಣಿಯೇ ಸಮವಾಗಿ
ಒಲೆಯೊಳಗೆ ಕಿಡಿಯಾಗಿ, ಧೂಪದಲ್ಲೊಂದಾಗಿ
ತಿಪ್ಪೆಯ ಕಣವಾಗಿ, ಮಣ್ಣಲ್ಲಿ ಗುಣವಾಗಿ...



ಬಿದಿರುಗಾಡಿನೊಳಗೆ ವಿವಿಧ ಗಾತ್ರದ ಬಿದಿರು
ಏಣಿಯಾಗಿ, ಬುತ್ತಿಯಾಗಿ, ಬೀಸಣಿಕೆಯಾಗಿ
ಕೊಳಲಾಗಿ, ಗುಡಿಸಲಾಗಿ, ಕುಸುರಿಯಾಗಿ
ಮೇಲಾಗಿ, ಕೀಳಾಗಿ, ನಡುವೆಲ್ಲೋ ಮೌನವಾಗಿ
ಎಲ್ಲವೂ ಆಗಿ... ಕೊನೆಗೇನೂ ಇಲ್ಲವಾಗಿ...

ಕೆನ್ನೆ ಮರೆಯಲಿ ಚುಕ್ಕಿಯೊಂದಿದೆ


ಕೆನ್ನೆ ಮರೆಯಲಿ ಚುಕ್ಕಿಯೊಂದಿದೆ
ಕುರುಳ ಸರಿಸುತ ಹುಡುಕಬೇಕಿದೆ
ಹುಡುಕಿ ಸಿಕ್ಕರೆ ಮುತ್ತ ನೀಡುವೆ
ಅಥವ ಸೋತರೆ ಮತ್ತೂ ಕಾಡುವೆ


ಎದೆಯ ಬಡಿತಕೆ ಮಾತು ಬಂದಿದೆ
ಪ್ರೀತಿಯಿಂದಲೇ ಹೃದಯ ಮಿಂದಿದೆ
ತಬ್ಬಿಕೊಂಡರೆ ತಬ್ಬಿಬ್ಬುಗೊಳ್ಳುವೆ
ಮೂಖ ಭಾವನೆ ಮಧುರವಲ್ಲವೇ?



ದೀಪವಿಲ್ಲದೆ ಕವಿದ ಕತ್ತಲು
ಮೈ ಮಿಂಚಿಗೆ ಬೆಳಕು ಸುತ್ತಲೂ
ಕೃಷ್ಣೆ ನನ್ನ ನೀ ಮುರಳಿ ಮಾಡಿದೆ
ಕೊಳಲು ನುಡಿಸದೆ ನಾದ ಹೊಮ್ಮಿದೆ



ಸ್ವಪ್ನದಲ್ಲಿಯೂ ನೀ ಗಸ್ತು ತಿರುಗುವೆ
ನಿನ್ನ ನೆರಳಿಗೆ ನೀನೇ ಬೆಚ್ಚುವೆ
ಸುಳ್ಳು ಹೇಳುವ ಕಣ್ಣಲ್ಲ ನಿನ್ನವು
ಹಿಡಿತವಿಲ್ಲದ ಹನಿ ಉರುಳಿ ಬಿಟ್ಟವು



ರಂಗು ರಂಗಿನ ನಿನ್ನ ಗುಂಗಲಿ
ತಂಗಿ ಬಂದೆನು ಇನ್ನೂ ಈಗಲೇ
ಬೆನ್ನ ಹಿಂದೆಯೇ ಬಿಂದಿ ಅಂಟಿದೆ
ಕೊಟ್ಟು ಹೋಗಲು ಬಂದೆ ಕೂಡಲೆ



ಬಿದ್ದ ಎಲೆಗಳು ಮತ್ತೆ ಚಿಗುರಿವೆ
ಪ್ರೇಮವೆಂಬುದೂ ಇಷ್ಟೇ ಅಲ್ಲವೇ?
ಕೊಟ್ಟು ಉತ್ತರ ನೀ ಮೌನ ದಾಟಿಸು
ಚೂರು ಕಾಯಿಸು ಮತ್ತೆ ತಣ್ಣಗಾಗಿಸು!!
ನಿನಗೆ ತಿಳಿಯದಿದ್ದೇನಿದೆ ಹೇಳು
ರಾತ್ರಿ ಗೊರಕೆ ಹೊಡೆಯುವೆನೆಂದು
ಶಪಿಸುತ್ತಲೇ ನಿದ್ದೆಗೆ ಜಾರುವ ನೀನು
ನನ್ನ ಕನಸಿನ ರಾಯಭಾರಿ ಎಂದರೆ
ನಸುನಕ್ಕು ಮೊಟಕುತ್ತೀಯ...

ಅದು ಸುಳ್ಳೆಂದು ಗೊತ್ತಿದ್ದರೂ
ಚೂರು ನಾಚುತ್ತಲೇ ಮೈ ಮರೆಯುತ್ತೀಯ
ನನಗೆ ಅರ್ಥವಾಗುವ ಭಾಷೆಯಲ್ಲಿ ಲೇವಡಿ ಮಾಡಿ...



ನಿನಗೆ ತಿಳಿಯದಿದ್ದೇನಿದೆ ಹೇಳು
ಪ್ರತಿ ಸಲ ಬೇಕಂತಲೇ ವಾದ ಮಂಡಿಸಿ
ನಿನ್ನ ಸೋಲಿಸಲು ಹುರುಪು ತುಂಬುವವಳು ನೀನೇ
ಎಂಥ ಮೂರ್ಖನನ್ನಾಗಿಸಿದ್ದೀಯ ಗೊತ್ತೇ ನನ್ನ?
ಒಮೊಮ್ಮೆ ಜಗಳದಲ್ಲಿ ಗೆದ್ದ ಅಹಮ್ಮಿನಾಚೆ
ನಿನ್ನ ಚಿವುಟಿದ ನೋವಿನೊಳಗೆ ನೀ ನಗುತ್ತೀ
ನನಗಷ್ಟೇ ಸಾಕು ಬಿಕ್ಕಿ-ಬಿಕ್ಕಿ ಅಳಲಿಕ್ಕೆ
ತೋರಿಸಿಕೊಳ್ಳದ ಗುಟ್ಟನ್ನು ಅದು ಹೇಗೆ ಬಿಡಿಸುವೆ?



"ಹೌದು ನಾನು ಇರುವುದೇ ಹೀಗೆ"
ಹೀಗಂದ ಪ್ರತಿ ಬಾರಿ ಮರೆಯುತ್ತೇನೆ
ನಾನು ನಿನಗೆ ಬೇಕಾದ ಹಾಗೆ ಬದಲಾಗಿದ್ದೇನೆಂದು
ಇದು ನಿನಗೆ ತಿಳಿದೂ ತಳಮಳಗೊಳ್ಳುತ್ತೀಯಲ್ಲ
ಅಷ್ಟು ಸಾಕು ಕೆಸರೆರಚಾಟಕ್ಕೆ
ನನಗೇ ಸೋತವಳು, ನನ್ನ ಮಾತಿಗೆ ಸೋತರೆ ಬೇಜಾರೇ?



ಬಿಡು, ಎಷ್ಟೋ ಸಲ ಮಾತು ಕೊಟ್ಟು ತಪ್ಪಿದ್ದೇನೆ
ಅಷ್ಟಕ್ಕೂ ನನ್ನ ನಂಬಿದ್ದು ನಿನ್ನ ತಪ್ಪು
ಆಸೆ ಗೋಪುರದೊಳಗಿಟ್ಟು ಪೂಜೆಗೈದಿದ್ದು ಸಾಕು
ವಾಸ್ತವಕ್ಕೆ ಮರಳಿ ನನ್ನ ಇನ್ನಷ್ಟು ಕೆಣಕು
ನಿನಗೆ ಬೇಕಾದ ಫಲ ತಪಸ್ಸಿಗೆ ಸಿದ್ಧಿಸುವಂತದ್ದಲ್ಲ
ಅದು ಬಲವಂತಕ್ಕೇ ದಕ್ಕುವುದೆಂದು ನಿನಗೂ ತಿಳಿದಿದೆ



ನೀ ದೂರ ಸರಿದಷ್ಟೂ ಹತ್ತಿರವಾಗುವೆ
ನೀ ಜೋರು ಮಾಡಿದಷ್ಟೂ ಮೆದುಗೊಳ್ಳುವೆ
ನನ್ನ ಗೆದ್ದ ನಿನಗೆ ಶರಣಾಗಿದ್ದೇನೆ
ನಿನಗೆ ಬೇಕಾದ ಹಾಗೆ ತಿದ್ದಿಕೋ
ಆದರೆ ನೆನಪಿಡು.. ನಾ ಸುಲಭಕ್ಕೆ ತಿದ್ದಿಕೊಳ್ಳುವವನಲ್ಲ
ನಿನಗೆ ತಿಳಿಯದಿದ್ದೇನಿದೆ ಹೇಳು...

Feb 14

ದಿನವೂ ಸಿಡುಕಿದಂತೆ😡
ಇಂದಿಗೂ ಸಿಡುಕುವೆ 😅
ಅದೇ ನಾ ಪ್ರೀತಿಯ ತೋರುವ ಪರಿ
ಯಾರೋ ಬೆಳೆದ ಹೂವ🌹
ಮಾರಿಕೊಂಡ ಸುಖವ🎁...

ನಮ್ಮದಾಗಿಸಿಕೊಳ್ಳುವುದದೆಷ್ಟು ಸರಿ?

ಹೆಣ ಹೊರುವವರಿಗಾಗೇ


ಹೆಣ ಹೊರುವವರಿಗಾಗೇ
ಹಣ ಮಾಡಿಟ್ಟುಕೋ
ಋಣ ತೀರಿತೆಂದರಲ್ಲಿ
ಜನ ಹೆಸರ ಮರೆವರು
ದಿನ ಒಂದು ದಳ ನೆಟ್ಟು...

ಪುನಃ ನೀರುಣಿಸುತಿರು
ಎದೆಗಂಟ ಬೇರು ಇಳಿದು
ಮನ ಮನವ ಬೆಸೆಯಲಿ



ಇದೇ ಹೂವೆಂದು ಮೂಸಿ
ಅದೋ ಅದನು ಜರಿಯದಿರು
ಮದ ಏರಿದಾಗ ಎಲ್ಲ
ವಿಧ ವಿಧವೇ ಕಣ್ಣಿಗೆ
ಅಡಿಯಿಂದ ಮುಡಿಗಂಟ
ಹತ್ತಾರು ಮತ್ತೂ ಬಣ್ಣ
ದಾರಿ ಉದ್ದಕೂ ಪಸರು
ಕೊನೆಗುರುಳುವೆ ಮಣ್ಣಿಗೇ



ಧೂಪದ ಘಮಲಿದ್ದೆರೇನು
ದೀಪದ ಬೆಳಕಿದ್ದರೇನು
ಪಾಪದ ಕಾಣದ ಮೂಟೆ
ಹೆಗಲ ತೊರೆಯಲಿಲ್ಲ
ಹೆಪ್ಪುಗಟ್ಟಿದ ದುಃಖ
ತಪ್ಪಿತಸ್ಥರಲ್ಲೇ ಹೆಚ್ಚು
ಹಂಚಿ ತಿಂದವರು ಯಾರೂ
ಉಸಿರ ಹಂಚಲಿಲ್ಲ



ಮಲಗಿದ್ದಲ್ಲೇ ಮಜ್ಜನ
ನೂಕುನುಗ್ಗಲಲ್ಲಿ ಜನ
ಕೊನೆಗೊಮ್ಮೆ ನಿನ್ನ ಕಂಡು
ಕೊಂಡಾಡುವ ಸಮಯ
ಗಳಿಸಿ ಉಳಿಸಿ ಹೋದೆ
ಅದಕೇ ಸಿಂಗಾರಗೊಂಡಿದೆ
ಯೋಗ್ಯತೆಗೆ ತಕ್ಕ ತೇರು
ಅದಕೆ ನೀನೇ ಒಡೆಯ



ಅತ್ತು ಸುರಿದು ಬೀಳ್ಗೊಟ್ಟರು
ಮಣ್ಣ ಮುಚ್ಚಿ ಕಣ್ಣ ಒರೆಸಿ
ಜಳಕ ಮಾಡಿ ಮನೆ ಗುಡಿಸಿ
ನಿನ್ನ ನೆನಪ ಸುಟ್ಟರು
ಅವರ ಪಾಲಿಗೆ ನೀ
ನಿನ್ನ ಪಾಲಿಗವರು ಸತ್ತು
ಅಲ್ಲಿಗೆ ವಿಮುಕ್ತಿಗೊಂಡ
ನೀನೇ ಅಸಲಿ ದೇವರು!!

ಮೌನ ಉಲಿವಾಗ


ಉಲಿವಾಗ ಮೌನ
ಉಳಿದೆಲ್ಲ ಮಾತು
ಶರಣಾಗಿ ನಿನ್ನ
ನೇವರಿಸಿದಂತೆ
ಮರೆಯಲ್ಲೇ ಹಾಡು...

ಮಿರಿಯುತ್ತಲಿತ್ತು
ನೀ ಜಾರಿ ಬಿಟ್ಟ
ನುಡಿ ಮುತ್ತಿನಂತೆ



ಕಲಿತಷ್ಟೂ ಶೂನ್ಯ
ಮರೆತಷ್ಟೂ ಧನ್ಯ
ಮನಸಾರೆ ಕೂಡು
ಎಚ್ಚರಿಕೆಯಿಂದ
ಕಿರಿದಾದ ನನ್ನ
ಅರಮನೆಯ ತುಂಬ
ಹೊತ್ತಿಸು ಪ್ರಣತಿ
ಕಣ್ಣಂಚಿನಿಂದ



ಒಪ್ಪತ್ತಿಗಿಂದು
ಒಬ್ಬಟ್ಟಿನೂಟ
ಹಸಿವಲ್ಲೇ ಸಾವು
ಹಸಿದಲ್ಲೇ ಜನನ
ಹುದುಗಿಟ್ಟ ಪ್ರೀತಿ
ಹದಗೆಟ್ಟಿತಂತೆ
ಬಯಲಾಗಿಸಿದ್ದು
ಬರೆದಿಟ್ಟ ಕವನ



ನಂಜೆಂಬ ಸಿರಿಯ
ಹೊಂದದ ಬಡವ
ಕಿತ್ತ ಜೇನನ್ನೂ
ಬಿಟ್ಟು ಬಂದಿರುವೆ
ನಿನ್ನಿರಿಸಿಕೊಂಡ
ನನ್ನರಿವಿನೊಳಗೆ
ನೀ ಗೀಚಿದಂತೆ
ರೂಪುಗೊಂಡಿರುವೆ



ಇನ್ನಷ್ಟೇ ಬದುಕು
ಈಗಷ್ಟೇ ನಡಿಗೆ
ನಿನ್ನಷ್ಟು ತಿದ್ದಿದ
ನೆರಳಾವುದಿಲ್ಲ
ಎದುರಿದ್ದೂ ಕೂಡ
ಕನಸಲ್ಲಿ ಕರೆವೆ
ನಿಜವ ತಬ್ಬುವೆ ಕ್ಷಮಿಸು
ಬರಲಾಗಲಿಲ್ಲ!!

ಹೆಗಲ ಏರಿದ ಚಿಂತೆ ಹಗುರಾಗುವಾಗ

ಹೆಗಲ ಏರಿದ ಚಿಂತೆ ಹಗುರಾಗುವಾಗ
ಮೊಗವ ಹಿಡಿಯುತ ನಿಂತೆ ಕಣ್ಣಿನೊಳಗೆ
ಬಿಗಿ ಹಿಡಿದ ಅಳುವೊಂದು ಎದೆಯಲ್ಲಿ ಇಣುಕಿದೆ
ತಡೆಯಿರದ ಕಂಬನಿ ಕಣ್ಣ ಹೊರಗೆ


ಮುತ್ತಿಡುವ ಕೆನ್ನೆಗೆ ಮೆತ್ತಿರುವ ಪಸೆಯನು
ಹುಸಿಗೊಳಿಸುವಂತೆ ಆಟವ ಕಟ್ಟುವೆ
ಎಲ್ಲ ಕಥೆ ಮೊದಲಾದದ್ದೊಂದಾನೊಂದೂರಿಂದ
ಊರಾಚೆಗೆ ನಿನ್ನ ಗಮನವಿಡುವೆ



ದೂರದ ಬೆಟ್ಟವು ನುಣ್ಣಗೆ ಕಂಡರೂ
ನಿನಗೋ ಕಾಲಡಿಯ ಮಣ್ಣ ವ್ಯಾಮೋಹ
ಬೆಲೆಗೆ ನಿಲುಕದ ಆಟಿಕೆ ಎದುರಿಟ್ಟರೂ
ಅಡುಗೆ ಬಟ್ಟಲು-ಸೌಟೆಡೆಗೆ ನಿನ್ನ ಸ್ನೇಹ



ಗೂಡು ಕಟ್ಟುವಾತುರಕ್ಕೆ ರೆಕ್ಕೆ ಕೊಟ್ಟವ
ಚಿಂತೆಯೆಂಬ ಸಂತೆಯಲ್ಲಿ ಬೇರ ನೆಟ್ಟವ
ಆಕಾಶದ ತುತ್ತ ತುದಿಗೆ ಬೆರಳ ಅಂಚಲೇ
ಅಂಚೆ ಕಳಿಸಿದಂತೆ ನಿಟ್ಟುಸಿರು ಬಿಟ್ಟವ



ನಿದ್ದೆಯಲ್ಲಿ ಒರಗಿತೊಂದು ಕನಸು ಮೆಲ್ಲಗೆ
ಉಸಿರ ಸವರಿದಂತೆ ಮೆಲ್ಲ ಮೃಧು ಮಲ್ಲಿಗೆ
ಆಕಳಿಕೆಯ ಬೀಳ್ಗೊಡುಗೆಗೆ ಒಂದು ಜೋಗುಳ
ಹೊದ್ದಿಸೋಕೆ ಚಂದ್ರ ಕಳಿಸಿಕೊಟ್ಟ ತಿಂಗಳ...

ಗುಡಿಯ ದೇವರು

ಗುಡಿಯ ದೇವರು ಕೂಡ
ಬಡವನಾಗಿರುವಾಗ
ಮುಖ್ಯ ದ್ವಾರಕೆ ಚಿಲಕ ಏಕೆ ಬೇಕು?
ಕತ್ತಲಲ್ಲುಳಿವುದೇ
ಪಥ್ಯವಾಗಿಸಿಕೊಂಡ...
ಅಲ್ಲಿಗೆ ಅಮುಖ್ಯವೇ ದೀಪ ಬೆಳಕು!!

ನಿನ್ನ ಕಣ್ಣೊಳಗೆ ನಿದ್ದೆಯಾಗುವಾಸೆ ಗೆಳೆಯ

ನಿನ್ನ ಕಣ್ಣೊಳಗೆ ನಿದ್ದೆಯಾಗುವಾಸೆ ಗೆಳೆಯ
ಅದೆಷ್ಟು ಮುದ್ದು ನೀ ಮಲಗಿರುವಾಗ?!
ಅದಕ್ಕೂ ಮೇಲೆ ನೀ ಎಚ್ಚರವಾಗಿ ಮೈ ಮುರಿವಾಗ
ಆಗಸ ನಿನ್ನ ಕೈ ಬೆರೆಳ ತಾಕಲು ಹವಣಿಸಿ
ಸೋತು ತಲೆ ಬಾಗಿದಂತೆ ಬೆಚ್ಚನೆಯ ಭಾವ

...
ಕಿರಿದಾದ ಅಂಗೈಯ್ಯ ತುಂಬ ಬಾಚಿ ಕೊಟ್ಟೆ
ಹಿಡಿಯಷ್ಟು ನಲ್ಮೆಯ, ಅದು ಜೀವಮಾನಕ್ಕಾಗುವಷ್ಟು.
ಅಸಲೆಲ್ಲ ನಿನ್ನದೇ, ಒಲವ ಬಡ್ಡಿ ಸಂದಾಯ ಮಾಡಲಾಗದೆ
ನಿನ್ನ ಋಣದಲ್ಲೇ ಬದುಕುವ ಸಾಲಗಾರನಾಗಿ
ಹೆಗಲನ್ನೇ ಮೀಸಲಿಡುವೆ ನಿನ್ನ ಕನಸುಗಳಿಗೆ



ಮಾತಿಗೆ ಮರು ಮಾತು ಬೆಳೆಸುವವನಾಗಿರುವೆ
ಭಾವಕ್ಕೆ ಅನುಭಾವ ಬೆರೆಸುವ ಕವಿಯೇ
ನಿನ್ನ ಅಳುವಲ್ಲಿಯ ರಾಗವೂ ಶೃತಿ ಶುದ್ಧವಾಗಿ
ಕರಣಗಳನ್ನೇ ಕರಗಿಸುತ್ತಿರುವಾಗ, ಮನಸಿನ್ನು ಯಾವ ಲೆಕ್ಕ?
ನಿನ್ನ ಆಟೋಪಚಾರದಿಂದಲೇ ಆಟಿಕೆಗಳಿಗೆ ರೆಕ್ಕೆ-ಪುಕ್ಕ!!



ಸ್ವಲ್ಪ ತಾಳೆನ್ನುವಷ್ಟರಲ್ಲಿ ಎಲ್ಲೊ ತೇಲುವ ಮೇಘ
ತಾಳಕ್ಕೆ ಮಣಿದವನಂತೆ ಇಳಿದು ಬರುವ ವರುಣ
ರುಚಿಯೇನೆಂಬುದರ ಪರಿಚಯವಿತ್ತ ಮಣ್ಣು
ಶುಚಿಯನ್ನೇ ಒಪ್ಪದ ಕಲ್ಮಶರಹಿತ ಕೆಸರು/ಮಸಿ
ಗೆಳೆಯ-ಗೆಳತಿಯರೆಲ್ಲ ನಿನಗೆ ಅಚ್ಚು ಮೆಚ್ಚು!!



ಬೆಣ್ಣೆ ಕಡಿಯುವ ಕೋಲು, ನಿನ್ನ ಕೈಯ್ಯಲಿ ಬಿನ್ನ
ಕೊಳಲು ಗಾಳಿಯ ಕಡಿದು, ನಿನ್ನ ತಲುಪುವ ಮುನ್ನ
ಹಿತ್ತಲ ಹೂ ಗಿಡ, ಬಚ್ಚಲ ಊದುಗೊಳವೆ
ಅಡಿಗೆ ಕೋಣೆಯ ಕಣಜ, ಪಡಸಾಲೆ ರಂಗೋಲಿ
ಎಲ್ಲವನ್ನೂ ದಿನಕ್ಕೊಮ್ಮೆ ಮುಟ್ಟಿ ಬರಬೇಕೆ?



ಬರಿಗಾಲಲಿ ನಡೆದ ನೆಲಕಿಲ್ಲ ಬರಗಾಲ
ಒದ್ದೆ ಹಾಸಿಗೆಯೊಳಗೆ ನಿನ್ನವೇ ನೆನಪೆಲ್ಲ
ಬೆತ್ತಲಾಗಲು ಬಿಡದ ಬಟ್ಟೆ ವೈರಿ ನಿನಗೆ
ಕತ್ತಲೆಂದರೆ ಗುಮ್ಮನೆನ್ನುವ ನಿನ್ನೊಳಗೆ
ದಿನಕೊಂದು ಹೊಸ ರೂಪ, ಹೊಸ ಬಣ್ಣ, ಹೊಸ ಕಾಂತಿ
ಗೆಳೆಯ, ನೀನೊಂದು ಅಪರೂಪದ ನೈಜ್ಯ ಸ್ವಪ್ನ!!

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...