Friday 29 November 2019

ಅರೆಬೆಂದ ಪದ್ಯ

ಪೋಣಿಸಿ ಅರೆಬೆಂದ ಪದ್ಯ
ನಿನ್ನ ಓದಿಗೆ ಕೊಟ್ಟೆ
ನೀನೋ ಗೀಚುಹೊತ್ತಿಗೆ ಕಸಿದು
ಒಡೆದ ಸಾಲುಗಳನ್ನು ಮರು ಜೋಡಿಸಿಕೊಂಡು
ನಿನಗೆ ತೋಚಿದ ಹಾಗೆ ಅರ್ಥ ಕಲ್ಪಿಸಿಕೊಂಡೆ

"ವ್ಯರ್ಥ ಸಮಯ ಏಳು ಕತ್ತಲಾಯಿತು"
ದೀಪ ಹೊನಲಿಗೆ ನಿನ್ನ ನೆರಳು ಉತ್ತರಿಸಿತು
"ನನ್ನ ಕಲ್ಪಿಸಿಕೊಂಡವನ ಕಲ್ಪನೆಯ ಸುತ್ತ
ನನ್ನ ಮೀರಿದ ವ್ಯಾಪ್ತಿಯಾಳ ಅರಿವಾಯಿತು!"

ಅನುಮಾನ ಎಲ್ಲೆಲ್ಲೂ, ಒಮ್ಮೊಮ್ಮೆ ಹಿಗ್ಗು
ಇನ್ನೆಲ್ಲೋ ತೋಚದೆ ಸಂಕೋಚ, ಸಿಗ್ಗು
ಏನೋ ಗೊಂದಲ, ಪ್ರಶ್ನೆಗಳ ಗದ್ದಲ
ಕಣ್ಣ ಬಾಷ್ಪಗಳೆಲ್ಲಕೂ ಸಮಾನ ಉತ್ತರ

ಮೊನಚಿನ ಮೊಂಡು ಹಿಡಿ ಬಿಗಿದು
ಝಳಪಿಸಿದಂತೆ ಕಣ್ಣ ಪ್ರಭೆಗೆ
ದಿಗ್ಭ್ರಮೆಗೊಂಡು ನಿದ್ದೆ ಬರದಿರಲು
ಗಂಟಲೊಣಗಿ ಭಯವ ನುಂಗಿಕೊಂಡೆ

ಖಾಲಿ ಬಿಟ್ಟ ಪುಟಗಳಿಗಿಂತ
ಹರಿದು ಗೊಬ್ಬರವಾದವುಗಳೇ ಲೇಸು,
ಇತ್ತ ಏದುಸಿರು ಬಿಡುತ್ತ
ನನ್ನತ್ತ ದಿಟ್ಟಿಸುತ್ತಿವೆ ಒತ್ತ(ಡ)ಕ್ಷರಗಳು

ಪದ್ಯ ಬಿಡಿಸಿ ಹೇಳಲಾಗದು
ಹಾಗೆಂದು ಕಟ್ಟಿ ಹಾಕಲೂ ಕೂಡದು
ಕೆಟ್ಟು ಬರೆದವರೆಷ್ಟು ಮಂದಿಯೋ
ಬರೆದು ಕೆಟ್ಟವರದೆಷ್ಟೋ ....

ನನ್ನ ದೇವರು ನೀನು..ನಿನ್ನ ದೇವರ ಹುಡುಕು

ದಿನಗಳುರುಳಿ ದುರುಳ ರಾತ್ರಿಗಳು
ಹೊದ್ದ ಕಂಬಳಿಯೊಳಗೆ ಹೆಗ್ಗಣಗಳಂತೆ
ಮೈಯ್ಯೆಲ್ಲ ಪರಚಿ ಗಾಯವಾಗಿಸಿವೆ.
ಹತೋಟಿಗೆ ಸಿಗದ ಕನಸೊಂದರ ನೆರಳು
ಕಣ್ಣಿಗೆ ಕಟ್ಟಿದಂತೆ ಪಸೆಯ ಗುರುತು..
ಸೂಜಿಯಾಕಾರದ ಬಿಸಿಲು ಚಪ್ಪರ ಸೀಳಿ
ಮೀಟಿ ಎಚ್ಚರವಾದಾಗ
ನಿಜ ಲೋಕವೂ ಸಜೆಯೊಂದಿಗೆ ಸಜ್ಜಾಗಿತ್ತು

ಅಮಾನುಷ ದಾರಿಯಲ್ಲಿ ಸಾಗಿ
ಗುಡಿ ತಲುಪಿ ಕೈ ಮುಗಿವಷ್ಟರಲ್ಲಿ
ದೇವರು ತಮಾಷೆಯಂತೆಯೂ
ಹೂವು ಕುರೂಪವಾಗಿಯೂ ಕಂಡು
ನಾಸ್ತಿಕರ ಗುಂಪಲ್ಲಿ ಭಜನೆಗೆ ಕೂತೆ..
ಅಸಲಿಗೆ ಇಲ್ಲವೆಂಬಲ್ಲೇ ಹೆಚ್ಚು
ಇರುವನೆಂಬಲ್ಲಿ ಕಡಿಮೆ ಕಾಲ ಕಳೆವನಂತೆ..
ಊರಾಚೆ ನೆಟ್ಟ ಕಲ್ಲಿನ ಸೊಲ್ಲು

ರಾಕ್ಷಸನ ಅಂಗರಕ್ಷಕನ ಶತ್ರು ಯಾರು?
ಹಸಿದವರ ಪಾಲಿನ ದೇವರಾರು?
ರೂಪ ತಾಳುವ ಭ್ರಮೆಗಳ ಉಪಮೆಗೆ
ರುಚಿಗಿಷ್ಟು ಉಪ್ಪು ಸಿಕ್ಕಂತೆ ಏಕಾಂತ,
ಯಾವ ದಡ ತಲುಪಿಸುವುದೋ..
ಅಲೆಗಳಿಗೂ ಕಾಡಿದ ಪ್ರಶ್ನೆ!
ದೂರ ತೀರದ ನೀರವ ನೊಗಕೆ
ಜೋಡಿಯಾಗಲೊರಟಂತೆ ಸುಳುವು?

ಎಲ್ಲ ಇದ್ದವರಿಗಿಲ್ಲದಿರದವುಗಳ ಚಿಂತೆ
ಏನೂ ಇಲ್ಲದವರಲ್ಲಿ ಎಲ್ಲವೂ ಇದ್ದಂತೆ
ನಿನ್ನ ಕಿಸೆಯಿಂದ ನಾ ಕದ್ದ ನಿದ್ದೆಗೆ
ಬದಲಿ ನನ್ನ ಭ್ರಮೆಗಳ ಭಾರ ಹೊರೆಸುವೆ
ಆದರೆ ಸಹಿಸು, ಅಥವ ಮುಂದೆ ದಾಟಿಸು
ನನ್ನ ದೇವರು ನೀನು..
ನಿನ್ನ ದೇವರ ಹುಡುಕು..

ಕಣ್ಣೀರೇ ನೀನೆಷ್ಟು ಬಲಹೀನ

ಸಿಕ್ಕ ತೋಳಿಗೆ ಹೀಗೆ
ಮಿತಿ ಮೀರಿ ಹರಿವೆ
ಕಣ್ಣೀರೇ ನೀನೆಷ್ಟು ಬಲಹೀನ!
ಹೊಮ್ಮಿದಷ್ಟೂ ಪ್ರಾಣ
ಹಗುರಾಯಿತೆನ್ನುವರು
ನನಗೇಕೋ ಚೂರು ಅನುಮಾನ

ನಕ್ಕು ಮರೆಸುವ ಯತ್ನ
ಸಿಕ್ಕಿ ಬೀಳುವ ಶಂಕೆ
ನಕ್ಕಾರು ಸುತ್ತಲ ಆ ನಾಕು ಮಂದಿ
ಬೆವರಿನೊಟ್ಟಿಗೆ ನಿನ್ನ
ನೆಂಟಸ್ಥಿಕೆಯ ಛಾಯೆ
ಆಗಲೊಲ್ಲೆ ಏಕೆ ಕೆನ್ನೆಯಲಿ ಬಂದಿ

ನಿನ್ನ ಹರಿವೂ ಒಂದು
ಭಾಷೆಯ ರೂಪವೇ
ಭಾಷಾಂತರ ಗೊಳಿಸು ನನ್ನೆದೆಯ ನೋವ
ನೆನೆಪುಗಳು ಸಾಕಷ್ಟು
ಸಾಲುಗಟ್ಟಿವೆ ದುಃಖ-
-ಉಮ್ಮಳಿಸಿ ಆಗಿವೆ ಕಣ್ಣೆರಡೂ ತೇವ

ಕೋಡಿಯಾದೆ ಒಮ್ಮೆ
ಕಣ್ಣಂಚಲಿ ಜಿನುಗಿ
ಮರೆಯಾದ ಜ್ಞಾಪಕ ನಿನಗೂ ಇರಲಿ
ಸರಿಯಾದ ಸಮಯಕೆ
ಸವಿನಯದಿ ಕರೆಯುವೆ
ಮರೆಯದೇ ಬರಬೇಕು ಬರಗಾಲದಲ್ಲಿ

ರಂಗು ರಂಗಿನ ಅಂಗಿ
ತೊಡಿಸಿ ನಡೆಸುವರಂತೆ
ನಿನಗಿಲ್ಲ ನನ್ನೊಳಗೆ ಆ ಒಂದು ಪಾತ್ರ
ನಿನ್ನಿಷ್ಟಕೆ ನಾನಲ್ಲ
ನನ್ನಿಷ್ಟಕೆ ನೀನಲ್ಲ
ಆದರೂ ಹೃದಕ್ಕೆ ನೀ ಖಾಸ ಮಿತ್ರ

ಬರೆದ ಪತ್ರಗಳಲ್ಲಿ
ಅಳಿಸಿದಕ್ಷರಗಳನು
ಪೂರ್ತಿಗೊಳಿಸುವ ಶಕುತಿ ಕುಂದಿದೆ ಬೆರಳಿಗೆ
ದುಡುಕು ಸಂಜೆಗಳೆಷ್ಟು
ನಿಷ್ಕರುಣಿಯೆಂದರೆ
ಬಿಡಿಸಿ ಹೇಳದ ಹೊರತು ವಿಧಿಯಿಲ್ಲ ಕೊರಳಿಗೆ!

ಮೌನಕ್ಕೆ ಶರಣಾಗುವಾಗ

ಮೌನಕ್ಕೆ ಶರಣಾಗುವಾಗ
ಕೇಳಿತ್ತು ಆ ನಿನ್ನ ಗುನುಗು
ಕನಸಲ್ಲಿ ನೀ ಕಾಣುವಾಗ
ಕಣ್ಣಲ್ಲಿ ಯಾಕಿಷ್ಟು ಮೆರುಗು?
ಹೇಳಿ ಹೋದೆ ನೀನೊಂದು ಶಾಯರಿ
ಸೋಕಿದಂತೆ ಹೃದಕ್ಕೆ ಹೂಗರಿ
ಸಣ್ಣ ತಪ್ಪು ಮಾಡೋ ಆಸೆ
ಸಣ್ಣದೊಂದು ಸಂಕೋಚಕೆ.. 

ಒಂದೊಂದೇ ಎಳೆಯನ್ನು ಬಿಚ್ಚಿ 
ಹೇಳಿ ಕೊಡುವಾಗ ನೀ ಪ್ರೇಮ ಪಾಠ 
ಮಗುವಂಥ ಮನಸನ್ನು ಬಾಚಿ 
ತೂಗಿ ತೊನೆದಾಡಿದೆ ಪಾರಿಜಾತ 
ಕಾರಣವಿರದೆ ಮೂಡುವ ಮುಗುಳು 
ಹೆಜ್ಜೆಯ ಮೇಲೆ ಹೆಜ್ಜೆಯನಿಡಲು 
ಬಣ್ಣ ಹಚ್ಚಿ ಹೋದೆ ನೀನು 
ನೀನೇ ಬರೆದ ಚಿತ್ತಾರಕೆ.. 

ಆರಂಭಿಸು ಒಂದು ವಾದ 
ಸೋತು ತಲೆ ಬಾಗುವೆ ನಿನ್ನ ಮುಂದೆ 
ಆಲಂಗಿಸು ಮತ್ತೆ ಬೇಗ 
ಸಂಜೆ ಮೀರಿದ್ದು ಅರಿವಾಗದಂತೆ 
ಅನುಮತಿ ಇರದೆ ಹಣೆಗಿಡು ಮುತ್ತು 
ಹರೆಯದ ಬೇಲಿ ನಾಚುವ ಹೊತ್ತು 
ಕದ್ದು ದೀಪ ಆರೋ ಮುನ್ನ 
ಜಾರಿ ಹೋಗು ಆಂತರ್ಯಕೆ..


https://soundcloud.com/bharath-m-venkataswamy/dvsfcg0cwp1e

Monday 25 November 2019

ಕೊನೆಯ ತುತ್ತು ಬೇಡವೆಂದಾಗ

ಕೊನೆಯ ತುತ್ತು ಬೇಡವೆಂದಾಗ
ಕರಿಬೇವಿನ ಜೊತೆ ಉಣಿಸಿದ ಕೈ
ಆಟದಲ್ಲಿ ಬಿದ್ದು ಗಾಯಗೊಂಡಾಗ
ಸೋತ ಬೆನ್ನ ನೀವಿದ ಕೈ 
ಅಂಜಿದ ಇರುಳಿಗೆ ಬೆಳಕಿನ ಅಂಬಲಿ 
ರಕ್ಷೆಯ ಕಂಬಳಿ ಹೊದಿಸಿದ ಕೈ 
ನಡು ನೀರಲಿ ಈಜಲು ಕಲಿಸಿ
ಖಾಲಿ ಕಿಸೆಯನು ಹೊರೆಸಿದ ಕೈ 

ಒಲ್ಲದ ಬದುಕಿನ ಬಾಗಿಲ ತೆರೆಸಿ 
ಸಾಕ್ಷ್ಯ ರೂಪವ ಬಿಡಿಸಿದ ಕೈ 
ಬಸಿದ ಕನಸಿಗೆ ಕರಗಿದ ಕಣ್ಣಿಗೆ 
ಬೊಗಸೆ ಒಡ್ಡಿದ ಕರುಣೆಯ ಕೈ 
ಆತ್ಮದ ತತ್ವದ ಸತ್ವವ ಸಾರಿ
ಬಿಂಬವ ಬೀರಿದ ಕನ್ನಡಿ ಕೈ 
ನಿಲ್ಲದ ಕಾಲವ ನವೀಕರಿಸಿ 
ಕಾಲಾನುಸಾರ ನಡೆಸಿದ ಕೈ 

ಬೆಳೆಗೂ ಕಳೆಗೂ ಕುಡುಗೋಲಿಗೂ 
ಕಡಿವಾಣದ ಪಾಠವ ಕಲಿಸಿದ ಕೈ 
ಹೊತ್ತಿದ ಉರಿಗೆ ಮೆತ್ತಿದ ಮಸಿಯಲಿ 
ಚಿತ್ತಾರವನು ಬಿಡಿಸಿದ ಕೈ 
ನಿರ್ದಯಿ ದೇವರ ಮಾಡಲು ಕೈ 
ನಿರ್ಮಲ ರಕ್ಕಸಳಾಗಲೂ ಸೈ  
ಬಳೆಗಾರನ ಬೆಲೆಬಾಳುವ ಕೈ 
ಬಲಹೀನನ ಬಲವರ್ಧನ ಕೈ 

ಎಲ್ಲೋ ದೂರದ ಕರೆಗೆ

ಎಲ್ಲೋ ದೂರದ ಕರೆಗೆ
ಗಮನ ಹರಿಸುವ ಸರದಿ
ಕೊನೆಯ ಹೆಜ್ಜೆಯ ಗುರುತು
ಬಿಡುವ ಮನೆಯಂಗಳದಿ
ಹಿತ್ತಲ ಬಾಗಿಲು ಮುಂಬಾಗಿಲಿಗೆ ದೂರ
ಆರಿದ ಒಲೆಗೆ ಹಸಿದು ಮಂಕು ಹಜಾರ
ತೂಗುಯ್ಯಲೆಯ ಮೇಲೆ
ಮಾಗಿದ ಕನಸಿನ ನೆರಳು 
ಬಿರಿದ ಗೋಡೆಯ ತುಂಬ 
ಹಬ್ಬಿದ ಬೇರಿನ ಟಿಸಿಲು ... 

ಶಾಲೆಯ ಜಾಡಿನ ತಿರುವಲ್ಲಿ 
ಸಿಗುವುದು ನಮ್ಮ ಗ್ರಾಮ ಗುಡಿ
ತಣ್ಣಗೆ ಕುಂತ ಭಗವಂತ
ಹಳೆಯ ಪರಿಚಯ ನಮಗಲ್ಲಿ
ಹೇಳಿ ಬರುವ ಅವನಿಗೂ ಒಂದು ವಿದಾಯ
ಮುನಿದ ಬೀದಿ ದೀಪಗಳೇ
ಗುಮ್ಮನು ಬರದೆ ಕಾವಲಿರಿ
ಆಲದ ಮರದ ಕೊಂಬೆಗಳೇ 
ಎಟುಕುವ ಬಿಳಲನು ತೂಗಿ ಬಿಡಿ
ಹೊರಡುವ ಮುನ್ನ ಸವಿದು ಹೋಗುವೆ ಖುಷಿಯ.. 

ಅಟ್ಟದ ಧೂಳಿಗೆ ಒರಗಿ 
ಮಲಗಿತು ಅಜ್ಜನ ಕೋಲು 
ಕಬ್ಬಿಣ ಪೆಟ್ಟಿಗೆಯೊಳಗೆ 
ಮರುಗಿತು ಅಜ್ಜಿಯ ಶಾಲು 
ಮುರಿದ ಬಳಪಕೆ ಇನ್ನೂ ತಿದ್ದುವ ತವಕ  
ಹರಿದ ಸೀರೆಯು ಕೌದಿಯಾಗದೆ ಮರುಕ 
ಸವೆದ ಚಪ್ಪಲಿಗಿನ್ನೂ 
ದಾರಿ ಕಾಯುವ ಕೆಲಸ 
ಬೀಗ ಬಿಗಿದ ಕದಕೆ 
ಕಳೆದ ಕೀಲಿಯ ವಿರಸ...  

*ಹಾಡು*
https://soundcloud.com/bharath-m-venkataswamy/yozxzcgl0d3k


ಕಳೆದು ಹೋದ ನೆನ್ನೆಗೆ

ಕಳೆದು ಹೋದ ನೆನ್ನೆಗೆ
ನಾಳೆಯ ಬಲಿ ಕೊಡುವುದೇ?
ಸರಿದು ಹೋದ ಕ್ಷಣಗಳು
ನೆನಪು ತಾಳಿವೆ ಮರೆಯದೆ
ಹಾಡಬೇಕೆಂಬ ಬಯಕೆಗೆ
ಬೇಡಿ ಹಾಕಲು ಏತಕೆ?
ಹಾಳೆ ಹರಿದರೆ ಹೊರಳಿಸಿ
ಓದು ಬದುಕನು ಮುಂದಕೆ..

ಎಲ್ಲೋ ಗೂಡ ಕಟ್ಟುವ ಹಕ್ಕಿ
ಇನ್ನೆಲ್ಲೋ ಗುಟುಕ ಅರಸಿದಂತೆ
ಹಗಲು ಕನಸು ಕಾಣೋ ಚುಕ್ಕಿ
ರಾತ್ರಿ ವೇಳೆ ಮಿನುಗುವಂತೆ
ನಿನಗೂ ಒಂದು ಕಾಲ ಬಂದೇ ಬರುವುದು
ಅರಿವು ನಿಂತ ನೀರು ಆಗಲೇ ಬಾರದು
ನಿನಗೆ ನೀನೇ ಬೇಲಿ ಹಾಕೋ
ಹುಚ್ಚು ಕವಿಯೋ ಮುನ್ನ ಬೇಗ
ಎಚ್ಚರವಾಗು.. ಕನಸುಗಳು ಕಮರಿ ಹೊಗದಂತೆ..

ಕವಲು ದಾರಿ ಎದುರಾದರೇನು
ಗುರಿಯತ್ತ ಗಮನ ಹರಿಸು ನೀನು
ಎಡವಿ ಬೀಳುತ ಕಲಿತ ಪಾಠ
ತರುವ ಆತ್ಮವಿಶ್ವಾಸವನ್ನು
ಗಳಿಸು ಹಂಚುವಂತೆ ಎಲ್ಲವ ಎಲ್ಲೆಡೆ
ನಗುವೇ ನಿನ್ನ ಸ್ವಂತ ಸವಿದು ಮುನ್ನಡೆ
ತಿರುವು-ಮರುವು ದಾಟಿದಂತೆ
ಗೆಲುವು ಎದುರು ನೋಡುವಂತೆ
ಸಾಗರವಾಗು... ಅಲೆಗಳೆ ಒಲಿದ ಚಪ್ಪಾಳೆಯಂತೆ...

Friday 22 November 2019

ನಿನ್ನೊಂದಿಗೆ ಹೇಗಾದರೂ ಸಾಗೋದೇ ರೋಮಾಂಚಕ

ಪ್ರಾಣಾನೇ ಪಣವಾಗಿಟ್ಟು ಪ್ರೀತಿಗಾಗಿ

ಪ್ರಾಣಾನೇ ಪಣವಾಗಿಟ್ಟು ಪ್ರೀತಿಗಾಗಿ
ಜೋಪಾನ ಮಾಡಿಕೊಂಡ ಪ್ರೇಮಿ ನಾನು
ಕಣ್ಣಲ್ಲಿ ಕಣ್ಣ ಇಟ್ಟು ನೋಡು ಈಗ
ಕಣ್ಣೀರೂ ನಿನ್ನ ಧ್ಯಾನ ಮಾಡೋದನ್ನು

ತೀರದಂಥ ಈ ನೋವಲ್ಲೂ, ಮತ್ತೆ ಹೇಳುವೆ ನೀ ಕೇಳು
ಜೀವಮಾನಕೆ ನೀನಷ್ಟೇ ಬೇರೆ ಯಾರಿಲ್ಲ
ಗಾಳಿ ಮಾತಿಗೆ ಮರುಳಾಗಿ, ಗೇಲಿ ಮಾಡುವೆ ಹೀಗೇಕೆ
ನಿನ್ನ ಬಿಟ್ಟರೆ ಈ ಹೃದಯ ಮಿಡಿಯೋ ಹಾಗಿಲ್ಲ

ಸರಿಯಾ ಹೇಳು ಇದು ಸರಿಯಾ ಹೇಳು?
ಕೊಲ್ಲು ನನ್ನ ಒಂಟಿ ಮಾಡೋ ಬದಲು
ಸರಿಯಾ ಹೇಳು ಇದು ಸರಿಯಾ ಹೇಳು?
ಕೇಳೋರಿಲ್ಲ ಈ ಮನದ ಗೋಳು....


ಹಾಡೊಂದು ಮುಗಿದಾಗ, ಬಿಡದೆ ಕಾಡುವ ರಾಗ
ಅನುರಾಗವೇ ಅನುಮಾನಿಸಿ ಏಕೆ ದೂರವಾದೆ
ಸಾವೊಂದು ಎದುರಾಗಿ, ಕಷ್ಟ ಹೇಳಿಕೊಂಡಾಗ
ಆ ಸಾವಿಗೂ ಸಂತೈಸುತ ದುಃಖನ ತಂದೆ

ಜೋಡಿ ಹೆಜ್ಜೆಯ ಬೇಡಿಕೊಂಡಿದೆ ನಾನು ಹೊರಟಿರೋ ದಾರಿ
ನೀನು ಬಾರದೆ ಚೂರೂ ಸಾಗದು ಏನು ಮಾಡಲಿ ನಾ?
ಕಾದು ಬೆಂದಿರೋ ಮೂಖ ವೇದನೆ ಗೀಚಿ ಹೇಳುವೆ ನಿಲ್ಲು
ಕೋಪವನ್ನು ನೀ ಸಾಕು ಮಾಡದೆ ಹೇಗೆ ಉಳಿಯಲಿ ನಾ..?

ಸರಿಯಾ ಹೇಳು ಇದು ಸರಿಯಾ ಹೇಳು?
ನಿನ್ನ ವಿನಹ ಖಾಲಿ ನನ್ನ ಬಾಳು
ಸರಿಯಾ ಹೇಳು ಇದು ಸರಿಯಾ ಹೇಳು?
ಕೇಳಿ ಹೋಗು ನನ್ನ ಮನದ ಗೋಳು....

Thursday 21 November 2019

ಹೊಸತನ

ಹೊಸ ಪೊರಕೆಗೆ ಮನೆಯೆಲ್ಲ ಹೂವು 
ಹೊಸ ಎಕ್ಕಡ ಕಾಲ ಕಚ್ಚಿದವು 
ಹೊಸ ಮಡಿಕೆಯ ನೀರು ನೀರಸ 
ಹೊಸ ಒಲೆಗೆ ಸೌದೆ ಪಾಯಸ 
ಹೊಸ ಪಾತ್ರೆಯೂ ತಳ ಹಿಡಿಯಿತು 
ಹೊಸ ಮನೆಯಲೂ ಕಸ ಹೊಕ್ಕಿತು 

ಹೊಸ ಅಕ್ಕಿ ಮುದ್ದೆ ಕಟ್ಟಿತು 
ಕೆಂಪು ರಾಗಿ ಗಂಟು ಬಿಗಿಯಿತು
ಹೊಸ ಬಣ್ಣ ಬಳಿದ ಗೋಡೆಗೆ 
ಹಳೆ ಕನ್ನಡಿ ಜೋತುಕೊಂಡಿತು 
ಹೊಸ ಜೋಡಿಗೆ ಮರದ ಬಾಗಿಲು 
ಹಳೆ ಸೇರು ಹೊಸ್ತಿಲಾಯಿತು  

ಹೊಸ ಬೆಳಕು ಛಾಯೆ ಮೂಡಲು 
ಹೊಸ ಋಜುವು ಕನಸ ಕಾಣಲು 
ಹೊಸ ನಾಳೆಗೆ ಅದೇ ಕಣ್ಣು 
ಹೊಸತನವನು ಪಸರೋ ಮಣ್ಣು 
ಹಳೆ ಕಿಸೆಯಲಿ ಹೊಸ ಕಾಸು 
ಹಳೆ ಕಾಸಿಗೆ ಹೊಸ ಅಂಗಿ 

ಹಳೆ ಪದ್ಯಕೆ ಹೊಸ ರಾಗ 
ಹಳೆ ಹಕ್ಕಿಗೆ ಹೊಸ ಚಿಗುರು 
ದಾರಿ ತಿರುವಲಿ ಹೊಸ ಪರಿಚಯ 
ಹೊಸ ಒಲವು ಪ್ರತಿ ಸಲವೂ 
ಕೈ ತುತ್ತಿಗೆ ರುಚಿ ಇಮ್ಮಡಿ 
ಹುಸಿ ತೇಗು, ಹೊಸ ಹಸಿವು 

ಕಸಿಗೊಂಡರೆ ಹೊಸ ಮೊಗ್ಗು 
ಪಕಳೆ ಕೆನ್ನೆಗೆ ಹೊಸ ಸಿಗ್ಗು 
ಮುತ್ತು ಹಳೆಯದು ಮತ್ತು ಹೊಸತು 
ನಲ್ಮೆ ಬಾಳ್ಮೆಗೆ ಒಲಿದ ಸ್ವತ್ತು 
ಮಮತೆ, ಕರುಣೆ ಒಲುಮೆ ರೂಪ 
ನುರಿತ ಸಮಯಕೆ ನಾಳೆ ಹೊಸತು.... 

Wednesday 13 November 2019

ಅಮ್ಮ

ಅಮ್ಮ ಅಂದು ನಾ
ಮಣ್ಣು ತಿಂದ ತಪ್ಪಿಗೆ
ನೀನು ಇತ್ತ ದಂಡನೆ
ಇನ್ನೂ ನೆನಪಿದೆsssss 
ಅಮ್ಮ ಅಂದು ನಾ
ಎಡವಿ ಗಾಯಗೊಂಡರೆ
ನೀನು ಪಟ್ಟ ವೇಧನೆ
ಇನ್ನೂ ನೆನಪಿದೆsssss 
ಅಮ್ಮ ಈ ಕಂದನ
ಎದೆಗೆ ಅಪ್ಪಿ ಹಾಡಿದ
ಲಾಲಿ ಹಾಡಿನ ಸವಿ
ಇನ್ನೂ ನೆನಪಿದೆ... (೧)

ಹಗಲು ರಾತ್ರಿ ಕನಸ ಹೊಸೆದು
ಕೌದಿ ಮಾಡಿ ಹೊದ್ದಿಸಿ
ತೋರು ಬೆರಳ ಹಿಡಿದು ಮೆಲ್ಲ
ಹೆಜ್ಜೆ-ಹೆಜ್ಜೆ ಸೇರಿಸಿ 

ತಿದ್ದಿ ತೀಡಿ ಅಕ್ಷರಗಳ
ಅರ್ಥವನ್ನು ರೂಪಿಸಿ
ಗದ್ದಲವ ಗೆಲ್ಲುವಂಥ
ಮೌನವನ್ನು ಜ್ಞಾಪಿಸಿ

ಎಷ್ಟೇ ಜನುಮ ಕಳೆದು
ಲೋಕ ಗೆದ್ದು ಬಂದರೂ
ನಿನ್ನ ಮಡಿಲ ನಿದ್ದಿಗಿಂತ 
ಯಾವ ಸೊಗಸಿದೆ..  (೨)

ಅಮ್ಮ....

Friday 8 November 2019

ಬರೆದು ಕೆಟ್ಟವರದೆಷ್ಟೋ ....

ಪೋಣಿಸಿ ಅರೆಬೆಂದ ಪದ್ಯ
ನಿನ್ನ ಓದಿಗೆ ಕೊಟ್ಟೆ 
ನೀನೋ ಗೀಚುಹೊತ್ತಿಗೆ ಕಸಿದು 
ಒಡೆದ ಸಾಲುಗಳನ್ನು ಮರು ಜೋಡಿಸಿಕೊಂಡು 
ನಿನಗೆ ತೋಚಿದ ಹಾಗೆ ಅರ್ಥ ಕಲ್ಪಿಸಿಕೊಂಡೆ 

"ವ್ಯರ್ಥ ಸಮಯ ಏಳು ಕತ್ತಲಾಯಿತು" 
ದೀಪ ಹೊನಲಿಗೆ ನಿನ್ನ ನೆರಳು ಉತ್ತರಿಸಿತು 
"ನನ್ನ ಕಲ್ಪಿಸಿಕೊಂಡವನ ಕಲ್ಪನೆಯ ಸುತ್ತ 
ನನ್ನ ಮೀರಿದ ವ್ಯಾಪ್ತಿಯಾಳ ಅರಿವಾಯಿತು!"

ಅನುಮಾನ ಎಲ್ಲೆಲ್ಲೂ, ಒಮ್ಮೊಮ್ಮೆ ಹಿಗ್ಗು 
ಇನ್ನೆಲ್ಲೋ ತೋಚದೆ ಸಂಕೋಚ, ಸಿಗ್ಗು 
ಏನೋ ಗೊಂದಲ, ಪ್ರಶ್ನೆಗಳ ಗದ್ದಲ 
ಕಣ್ಣ ಬಾಷ್ಪಗಳೆಲ್ಲಕೂ ಸಮಾನ ಉತ್ತರ 

ಮೊನಚಿನ ಮೊಂಡು ಹಿಡಿ ಬಿಗಿದು 
ಝಳಪಿಸಿದಂತೆ ಕಣ್ಣ ಪ್ರಭೆಗೆ 
ದಿಗ್ಭ್ರಮೆಗೊಂಡು ನಿದ್ದೆ ಬರದಿರಲು 
ಗಂಟಲೊಣಗಿ ಭಯವ ನುಂಗಿಕೊಂಡೆ 

ಖಾಲಿ ಬಿಟ್ಟ ಪುಟಗಳಿಗಿಂತ 
ಹರಿದು ಗೊಬ್ಬರವಾದವುಗಳೇ ಲೇಸು 
ಇತ್ತ ಏದುಸಿರು ಬಿಡುತ್ತ 
ನನ್ನತ್ತ ದಿಟ್ಟಿಸುತ್ತಿವೆ ಒತ್ತ(ಡ)ಕ್ಷರಗಳು  

ಪದ್ಯ ಬಿಡಿಸಿ ಹೇಳಲಾಗದು 
ಹಾಗೆಂದು ಕಟ್ಟಿ ಹಾಕಲೂ ಕೂಡದು 
ಕೆಟ್ಟು ಬರೆದವರೆಷ್ಟು ಮಂದಿಯೋ 
ಬರೆದು ಕೆಟ್ಟವರದೆಷ್ಟೋ .... 

ಕರೆಯುವ ಮುನ್ನ ಕೈ ಚಾಚಲೇ?

ಕರೆಯುವ ಮುನ್ನ ಕೈ ಚಾಚಲೇ?
ಕೊರಳಲಿ ಏಕೋ ರಗಳೆ
ಮರುಗುವ ಮುನ್ನ ಮಗುವಾಗಲೇ?
ತುಳುಕುವ ಕಣ್ಣು ಕಡಲೇ?
ಅರಿವೇ ಇರದೆ ಅರಸಿ ಬಂದಿರೋ
ಮುಗಿಲ ತಡೆದು ಕರಗು ಎನ್ನಲೇ?
ಮಳೆ ಹನಿ ಹನಿಯೊಂದಕೂ ನಡುಕವಿದೆ
ಎದೆ ಕಡಲಲಲೆಯೊಂದರ ಪರಿಚಯಕೆ
ಬಿರಿವ ಭಯವೇ ದೂರ ಬಯಸಿದೆ..   


ಇಲ್ಲಿ ಕಾಲವು ಗಡಿಯಾರದ ಗಡಿ ದಾಟಿದೆ
ಹೋರಾಡುತ ಇದ್ದ ಪ್ರಾಣ ಸಾಯುತ್ತಿದೆ
ತನ್ ಮೇಲೆಯೇ ತನಗಾಗಿ ತಾತ್ಸಾರಕೆ
ಈ ಸಂಜೆಯು ತಾನಾಗೇ ಮಂಕಾಗಿದೆ
ಈ ಗಾಯವಿನ್ನೂ ಹಸಿಯಾಗಿರಲು ನೀ ಮತ್ತೆ
ಇನ್ನೊಂದು ಗಾಯಕ್ಕೆ ಬಯಕೆ ಇಡುವೆ ಮನವೇ, ಸರಿಯೇ?

ಪದೆ ಪದೆ ಅದೇ ಕಥೆ ಅನಂತವಾಗಿ ಸಾಗಿದೆ
ತರಾತುರಿ ಎಲ್ಲ ಕನಸ್ಸಿನಂತೆ ಉಳಿದು ಬಿಟ್ಟಿದೆ
ಸಮೀಪವನ್ನು ದೂರದಿಂದ ಮೌನದಲ್ಲಿ ಧ್ಯಾನಿಸಿ
ನಿರೂಪಮಾನವಾದ ಲೋಕವೊಂದು ಕೂಗಿ ಕರೆದಿದೆ
ನಿರೀಕ್ಷೆಯೊಂದು ಶಿಕ್ಷೆಯಂತೆ ಕೊಲ್ಲುವಂಥ ವೇಳೆಗೆ
ಪರೀಕ್ಷೆಯಲ್ಲಿ ಕೂತರಲ್ಲಿ ಎಲ್ಲ ಪ್ರಶ್ನೆ ನೀನೇ ಆಗುವೆ ಏಕೆ ನೀ ಹೇಳು...?

ಹಾಡಿನ ಕೊಂಡಿ:
https://soundcloud.com/bharath-m-venkataswamy/faitfnzi4a6c

Friday 1 November 2019

ಕನ್ನಡ... ಕನ್ನಡ... ಕನ್ನಡ

ಶ್ವಾಸ ಶುಚಿಗೊಳಿಸೋ ಭಾಷೆ
ಶಾಸನ ಸಮೃದ್ಧ ಭಾಷೆ
ದ್ವೇಷವನೊಲ್ಲದ ಭಾಷೆ
ಕೋಶಕೆ ಕಲಶದ ಭಾಷೆ
ಕಾವ್ಯ ದಾಸ್ಯಕೊಲಿದ ಭಾಷೆ
ನಿತ್ಯ ನಿರಂತರಮ್ಯ ಭಾಷೆ
ಮೌನದಿ ಝೇಂಕಾರ ಭಾಷೆ
ಅಕ್ಷರಶಃ ಕ್ಷೌಧ್ರ ಭಾಷೆ ....


ಆ ನುಡಿ, ಈ ನುಡಿ
ಏನಾದರೂ ನುಡಿ
ಮುನ್ನುಡಿಯಾಗಿಸು ಕನ್ನಡವ
ಮತ-ಮತಗಳ
ಒಮ್ಮತ ಸೇತುವೆಯಿದು
ವಿಂಗಡಿಸದು ನಮ್ಸಂಗಡವ ...

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...