Sunday 23 February 2020

ನಿನ್ನ ನಗುವಿಗೆ ಇಡೀ ಹೃದಯ ಸಾಲದು

ನಿನ್ನ ನಗುವಿಗೆ ಇಡೀ ಹೃದಯ ಸಾಲದು 
ನಿನ್ನ ಮುನಿಸಿಗೆ ಎದೆ ಬಡಿತ ತಾಳದು 
ನಿನ್ನ ಮೌನವೇ ಆಕರ್ಷಕ ಆದರೂ ಮಾತನಾಡು 
ನಿನ್ನ ಧ್ಯಾನ ಹಾನಿಕಾರಕ ಇನ್ನೂ ಚೂರು ಹಾನಿ ಮಾಡು 
ನಿನ್ನ ತೋಳಿನಲ್ಲಿ ನನ್ನ ಬೇಗ ಬಂಧಿ ಮಾಡು... 

ಕಣ್ಣ ಸಂತೆಯಲ್ಲಿ ಕೊಳ್ಳಲೆಂದು ಬಂದೆ ನಾ 
ಬುಟ್ಟಿ ತುಂಬ ಭಿನ್ನ ಭಿನ್ನವಾದ ಬಣ್ಣವ 
ಸಾಕು ಇನ್ನು ಏಕೆ ರೆಪ್ಪೆಯನ್ನು ಚಾಚುವೆ 
ಹೇಗೆ ತಾನೇ ಸುತ್ತಿ ಬರಲಿ ಹೇಳು ಸ್ವರ್ಗವ 
ಬೇಡೆಂದರೂ ಮತ್ತೆ ಬೇಕೆಂದರೂ 
ನಿನ್ನದೇ ಮಾತು, ನಿನ್ನದೇ ಧಾಟಿ 
ಊರಾದರೂ ಊರಾಚೆಯಿದ್ದರೂ 
ನೆನೆದ ಕೂಡಲೇ ಮಾಡು ಮನದಿ ಭೇಟಿ.... 

ಭಾರಿ ಸಭ್ಯನಲ್ಲ ತುಂಟ ಪೋಲಿ ನಿನ್ನವ 
ತಿದ್ದಿಕೊಳ್ಳಬೇಕು ಹೇಗೋ ನೀನೇ ಆದರೆ
ದಾರಿ ತಪ್ಪಿ ಹೋಗೋದಕ್ಕೆ ಇಲ್ಲ ಸಂಭವ 
ಪ್ರೀತಿ ಎಂಬ ಲಾಗ ಕಟ್ಟು ಬೇಕು ಎಂದರೆ 
ಪಾರದರ್ಶಕ ಗಾಜಿನಂಥ ಪ್ರೇಮಕೆ 
ಮಾಯಾವಿ ಮಂಜು, ಸಂಚು ಹೂಡಿದಂತೆ
ಜೀವ ಜೀವದ ನಂಟು ಗಾಢವಾದರೆ
ಏನೇ ಆದರೂ ಪ್ರೀತಿ ಸೋಲದಂತೆ... 

****ಹಾಡು****
https://soundcloud.com/bharath-m-venkataswamy/meucebfmnl6j

Friday 21 February 2020

ರೈತ ಸಂತೆಗಳೆಲ್ಲ ದಲ್ಲಾಳಿಗಳ ಬಾಲ

ಬಿರುಸಾಗಿ ನಡೆದು ತಣ್ಣಗಾಯಿತು ಸಂತೆ
ಕೊಂಡವರಲಿ, ಮಾರಿಕೊಂಡವರಲಿ
ಕೊಂಡು-ಮಾರಿದ ತೃಪ್ತಿ ಜೇಬಿಗಿಲ್ಲ 
ಮಧ್ಯವರ್ತಿಗಳಷ್ಟೇ ಲಾಭ ಎಣಿಸಿದರು 
ಮೂಟೆ ಹೊತ್ತವರಿಗೆ ಗಿಟ್ಟಿದ್ದು ಚಿಲ್ಲರೆ 

ಯಾರೋ ಹೆಸರಿಲ್ಲದ ಊರಿನವನು 
ಬೆಳೆದನಂತೆ ಯಾವುದೋ ವಿದೇಶಿ ಬೆಳೆ 
ಕಾರು ಕೊಂಡನಂತೆ ವರ್ಷ ದಾಟುವ ಮೊದಲೇ 
ಕಟ್ಟುತಿಹನಂತೆ ದೊಡ್ಡದೊಂದು ಬಂಗಲೆ 
ಹೀಗೆ ಜಾಹೀರಾಯಿತೊಂದು ಹಸಿ ಸುಳ್ಳು 

ದೇಸಿ ಬೆಳೆ ಬೆಲೆ ಹತ್ತಲಿಲ್ಲ ಇಳಿಯಲಿಲ್ಲ 
ಮಾಡಿದ ಸೊಸೈಟಿ ಸಾಲ ಇನ್ನೂ ತೀರಿಲ್ಲ 
ಮನ್ನಾ ಆಗುವುದಿಲ್ಲ ಪಡೆದ ಕೈ ಸಾಲ 
ಚಿನ್ನ ಬೆಳೆದರೂ ಮನೆಗೆ ಬರಗಾಲ 
ರೈತ ಸಂತೆಗಳೆಲ್ಲ ದಲ್ಲಾಳಿಗಳ ಬಾಲ 

ಹೇಳಿದವರ ಮಾತ ಕೇಳಿ ಕೊಂಡನು ಮೂರ್ಖ 
ಯಾವುದೋ ವಿದೇಶಿ ತಳಿಯ ನಾರನ್ನು 
ಬೆಳೆಗೂ ಮೊದಲೇ ಬೆಲೆಯ ಒಪ್ಪಂದ 
ಟೋಕನ್ನು ನೂರಾಒಂದು ಕೊಟ್ಟು ಹೋದವನು 
ಇನ್ನೂ ಬರಲಿಲ್ಲ ಕೊಯ್ಲಿಗೆ ಬಂದರೂ 

ಸೋತವನ ಎದುರು ಕಪ್ಪೆಗಳ ಪೊಗರು 
ಮುಗಿದರೂ ಮುಗಿಯದ ರೈತನ ಕಷ್ಟ 
ಅಸಲಾದರೂ ಬರಲಿ, ಕೂಲಿಗಾದರೂ ಗಿಟ್ಟಲಿ 
ಮಾರಿಕೊಂಡ ಅದೇ ಹಳೆ ದಲ್ಲಾಳಿಗೆ 
ಈಗ ಅವನೇ ದಿಕ್ಕು ಸೋತವನ ಪಾಲಿಗೆ 

ಲಾಭ ನಷ್ಟಗಳ ಲೆಕ್ಕವಿಡುವುದು ವ್ಯರ್ಥ 
ಹೊತ್ತು ಹೊತ್ತಿಗೆ ತುತ್ತು ಸಿಕ್ಕರೆ ಪುಣ್ಯ 
ಆದರೂ ಎಂದಾದರೂ ಹಿಡಿವುದು ಕೈಯ್ಯ 
ಕೆಸರಾದರೇನಂತೆ ಮಣ್ಣು ಮನೆ ದೇವರು 
ಮತ್ತೆ ಹೊರಟ ನೇಗಿಲ ಹೊತ್ತು ಯೋಧ... 

ಹಕ್ಕಿಯ ಹಾಡು

ದಿನ ನಿತ್ಯ ಕೋಣೆಯ ಕಿಟಕಿ ಬದಿಗೆ 
ತನ್ನಷ್ಟಕ್ಕೆ ಹಾಡಿಕೊಳ್ಳುತ್ತಿದ್ದ ಹಕ್ಕಿಯ ಹಾಡ
ಸದ್ದಿಲ್ಲದೆ ಕದ್ದು ಆಲಿಸಿ ಗುನುಗುತ್ತಿದ್ದೆ

ಒಂದು ದಿನ ಆಕೆ ಹಾಡಿಗಾಗಿ ದಂಬಾಲು ಬಿದ್ದಳು 
ಬೇರೆ ಏಕೆಂದು ಹಕ್ಕಿಯ ಹಾಡ ಹಾಡಿದೆ
ತನಗಾಗೇ ಬರೆದ ಹಾಡೆಂಬಂತೆ ಸಂಭ್ರಮಿಸಿದಳು 

ಇದೇ ಸುಸಂದರ್ಭಕೆ ಪ್ರೇಮ ನಿವೇದನೆಯಾಗಿ 
ಎಲ್ಲವೂ ಅಚ್ಚರಿಯೇ ಎಂಬಂತೆ ಜರುಗು ಹೋದದ್ದನ್ನು 
ಮರದ ಟೊಂಗೆಯ ಮೇಲೆ ಕೂತ ಬೇರೊಂದು ಹಕ್ಕಿ ಗಮನಿಸುತ್ತಿತ್ತು 

ಮರು ದಿನ ಹಕ್ಕಿ ಹಾಡುವುದನ್ನು ನಿಲ್ಲಿಸಿಬಿಟ್ಟಿತ್ತು 
ಮನೆಯ ತುಂಬ ಬಿಗಿಮೌನ ಆವರಿಸಿಕೊಂಡಂತೆ 
ಗಂಟಲ ಬಿಗಿ ಹಿಡಿದು ಮತ್ತೆ ಅದೇ ಹಾಡ ಹಾಡಿಕೊಂಡೆ 

ಕೆಲ ಹೂತ್ತಿನ ತರುವಾಯ ಏಕ ಕಾಲಕ್ಕೆ 
ಹಕ್ಕಿಯ ಹಿಂಡು ಅದೇ ಹಾಡನ್ನ ಹಾಡತೊಡಗಿದವು
ಅದ ಕೇಳಿದ ನಾನೂ, ಕಿಟಕಿಯ ಹಕ್ಕಿಯೂ ದನಿಗೂಡಿಸಿದೆವು 

ಹಾಡು ಹಾಡುವವರ ಸ್ವತ್ತೆಂದು ಅರಿತ ಹಕ್ಕಿ 
ತನ್ನ ಹಾಡ ನನ್ನಲ್ಲಿ ಮತ್ತು ಅಸಂಖ್ಯರಲ್ಲಿ ಬಿಟ್ಟು 
ಮತ್ತೆಲ್ಲೋ ಹಾರಿ ಹೊರಟಿತು 

ಈಗೀಗ ನನ್ನವಳು ಆ ಹಾಡು ತನ್ನದೆನ್ನುತ್ತಾಳೆ 
ಕೇಳಿದಲ್ಲೆಲ್ಲ ತಮ್ಮದಾಗಿಸಿಕೊಂಡು ಹಾಡುವವರರೊಟ್ಟಿಗೆ 
ನಾನೂ ತಲೆದೂಗುತ್ತೇನೆ ನನ್ನದಾಗಿಸಿಕೊಂಡು...  

ತೋಚಿದಂತೆ ಗೀಚಿಕೊಳ್ಳಲೇ ಒಲೆಯ

ತೋಚಿದಂತೆ ಗೀಚಿಕೊಳ್ಳಲೇ ಒಲೆಯ 
ಬಾಚಿ ಬಳಸಿ ಕಟ್ಟಿ ಕಳಿಸಲೇ ಮಲ್ಲೆಯ 
ದಾರಿ ತಪ್ಪಿ ಬಂದೆ ಇಲ್ಲಿಗೆ ಎನ್ನುತ 
ಹೋಗಿ ಬರಲೇ ನೆಟ್ಟು ಮನದಲಿ ನಲ್ಮೆಯ 

ಕಟ್ಟ ಕಡೆಯ ಆಸೆ ನನ್ನದು ಇಂದಿಗೆ 
ಇನ್ನು ಮೇಲೆ ನಿನ್ನ ಆಸರೆ ಬಾಳಿಗೆ 
ತಾಕುವಂತ ನೋಟ ನಿನ್ನದು ಆದರೂ 
ತಾಕಿ ಹೋಗು ಒಮ್ಮೆ ಇಲ್ಲವೇ ಪೇಚಿಗೆ

ಹಗ್ಗ ಜಗ್ಗುವಾಟ ನಡುವಲಿ ಪ್ರೇಮವು 
ಅತ್ತ ನೀನು, ಇತ್ತ ಬಿಕ್ಕಿದ ಪ್ರಾಣವು 
ನಾನು ಸೋತು ನೀನೂ ಸೋತರೆ ಅಲ್ಲಿಗೆ 
ಪ್ರೇಮಕೆ ತಲೆಯ ಬಾಗಿತು ಎಲ್ಲವೂ 

ಎಲ್ಲದಕ್ಕೂ ಕೊನೆಯೊಂದಿದೆ ಕಂಡೆನು 
ಕಂಡ ಕೊನೆಯೇ ಕೊನೆಯಲ್ಲದ ಬಲ್ಲೆನು 
ಮತ್ತೆ ಮತ್ತೆ ಕೊನರುವಂಥ ಈ ಪ್ರೇಮವೇ 
ಕೊನೆಗೆ ಕೊನೆ ಎಂಬ ಸತ್ಯವ ಅರಿತೆನು 

ದೂರ ದೂರ ಸುರುಳಿ ಗೂಡನು ಕಟ್ಟುವ 
ಅರ್ಧ ನಿಮಿಷ ಕತ್ತಲಲ್ಲಿಯೇ ಬಾಳುವ 
ರೆಕ್ಕೆ ಮೂಡಿ ಬಂದ ಕ್ಷಣವನು ಮೆಲ್ಲುತ 
ಎತ್ತೆತ್ತರಗಳ ಮೀರುತ ಹಾರುವ.... 

Sunday 16 February 2020

ಬಾ ಕ್ಷಣಿಕ ಮಳೆ ಬಿರು ಬಿಸಿಲ ಮುದ ಗೊಳಿಸು

ಬಾ ಕ್ಷಣಿಕ ಮಳೆ ಬಿರು ಬಿಸಿಲ ಮುದ ಗೊಳಿಸು 
ಈ ನಿಮಿಷವನು ಪುಳಕಿಸಲು ಸಹಕರಿಸು 
ನಾ ಮರೆತಿರುವ ನೆನಪುಗಳ ಮರಳಿಸು ನೀ 
ತೋರ್ಬೆರಳಿಗೆ ಆ ಆಗಸವ ಪರಿಚಯಿಸು 

ಬಾ ಕ್ಷಣಿಕ ಮಳೆ ಬಿರು ಬಿಸಿಲ ಮುದ ಗೊಳಿಸು... 

ತಂಗಾಳಿಯಲಿ ತೇಲಾಡೋ ಮುಂಗುರುಳೆ
ನೀಡುವೆ ಬೆಂಗಾವಲಿಗೆ ನಾಚಿಯ ನಾಚುತಲಿ 
ಆಲಂಗಿಸುವ ಕೋರಿಕೆಯ ಸ್ವೀಕರಿಸು 
ಚಂದಿರ ನೀನೀಗಲೇ ಬೇಕಂತಲೇ ಬೇಡೆನ್ನುತಲಿ
ಮಾರ್ದನಿಸುತಿದೆ ಕಾರ್ಮುಗಿಲ ಏದುಸಿರು  
ಝೇಂಕರಿಸುವುದೇ ಮಳೆಯ ಹನಿ?

ಬಾ ಕ್ಷಣಿಕ ಮಳೆ ಬಿರು ಬಿಸಿಲ ಮುದ ಗೊಳಿಸು... 

ಹೊಂಚಾಕುತಿವೆ ಹನಿಗಳು ನೀರ್ಜಾಡಿನಲಿ 
ಗಾಜಿಗೆ ಆಭರಣಗಳಾಕರ್ಷಣೆ ತಾವಾಗುತಲಿ   
ತೂಕಡಿಕೆಯನು ಮರೆಸುವ ಈ ಸಿಂಚನಕೆ 
ತಾಳಿವೆ ಹೂ ಕಂಪನವ ಜಾರಿದ ಈ ಸಂಜೆಯಲಿ 
ಉಮ್ಮಳಿಸುವುದೇ ಚಿತ್ತ ಮಳೆ ಉತ್ಸುಕದಿ 
ಭೋರ್ಗರೆಯುತಲಿ ಇಳಿದ ಹನಿ?
ಎಚ್ಚರಿಸುತ ಈ ಇಳೆಯ ಹನಿ?

ಬಾ ಕ್ಷಣಿಕ ಮಳೆ ಬಿರು ಬಿಸಿಲ ಮುದ ಗೊಳಿಸು... 

ಆರಂಭದಲೇ ಆರಿತು ನೀಲಾಂಜನವು 
ರೂಢಿಯೇ ಆದಂತಿದೆ ಈ ವೇಳೆಯು ಈ ಕತ್ತಲಿಗೆ (ಕಗ್ಗತ್ತಲಿಗೆ )
ಆನಂದಿಸುವೆ ಕೂಡಲೆ ಏಕಾಂತದಲಿ  
ಬೇಡಿದ ಆ ಸ್ವಪ್ನವನು ನೀಡುತ ಈ ಕಂಗಳಿಗೆ 
ಹಾತೊರೆಯುತ ಈ ಕ್ಷಣವನು ಆಚರಿಸುವೆನು 
ಬಾ ರಮಿಸಲು ನೀ ಕಣ್ಣ ಹನಿ?

ಬಾ ಕ್ಷಣಿಕ ಮಳೆ ಬಿರು ಬಿಸಿಲ ಮುದ ಗೊಳಿಸು... 

***ಹಾಡು***

https://soundcloud.com/bharath-m-venkataswamy/fvywjgfkdkcj

Tuesday 11 February 2020

ಎಲ್ಲರ ಕಣ್ಣನು ದಾಟಿ ಬಂದ ನದಿ

ಎಲ್ಲರ ಕಣ್ಣನು ದಾಟಿ ಬಂದ ನದಿ 
ನನ್ನ ಕಣ್ಣಲ್ಲಿ ತುಂಬಿತ್ತು ಆನಂದದಿ 
ಎತ್ತರ ಎತ್ತರಲೆಯನ್ನು ತಲುಪಿಲ್ಲದೆ  
ಸಿಕ್ಕರೂ ಆಳ ಇನ್ನಷ್ಟು ತಳದಲ್ಲಿದೆ  
ತುಂಬಿದ ಕಣ್ಣು ಹರಿವಾಗ ಸದ್ದಿಲ್ಲದೆ 
ಇತ್ತ ಹುಸಿಯಲ್ಲದೆ, ಅತ್ತ ಪಸೆಯೊಂದಿಗೆ 
ಮುತ್ತಿಗೆ ಹಾಕತಾ ಮೂಡುವ ಪ್ರಶ್ನೆಗೆ   
ಉತ್ತರ ಹುಡುಕಲು ತೋಯುವ ಕೆನ್ನೆಗೆ 
ಸಿಕ್ಕರೆ ನಿನ್ನ ಮಧು ತುಂಬಿದ ಚುಂಬನ 
ನಿಲ್ಲದ ಕಂಪನ, ಭಾವದ ಲಾಂಛನ 

ಕವಿತೆಯೆಂಬೋದು ಹುಟ್ಟೋಕಿದೆ ಕಾರಣ
ಕವಿತೆಯೆಂಬೋದು ಹುಟ್ಟೋಕಿದೆ ಕಾರಣ
ಹಾಡಿನ ಹೂರಣ, ಮಾಧುರಿ ಸಿಂಚನ 
ಸಂಜೆ ಏಕಾಂತವೇ ಎಲ್ಲಕೂ ಪ್ರೇರಣಾ 
ಹಾಡುವ ಸಾಧನ, ಆತ್ಮದ ಮಂಥನ 
ಕವಿತೆಯೆಂಬೋದು ಹುಟ್ಟೋಕಿದೆ ಕಾರಣ
ಕವಿತೆಯೆಂಬೋದು ಹುಟ್ಟೋಕಿದೆ ಕಾರಣ..

ದೂರ ನಿಂತು ಆಡೋ ಮಾತು ಕೇಳದಾಗಿದೆ 
ಹತ್ತಿರಕ್ಕೆ ಬಂದು ನೋಡು ನನ್ನ ಕಾಡದೆ 
ಎಂದಿನಂತೆ ಹಾಡುವಾಗ ಭಿನ್ನ ರಾಗದಿ 
ಮೂಡಿ ಬಂತು ಮಂದಹಾಸ ತುಟಿ ಅಂಚಲಿ 
ನಿಧಾನಿಸಿ ಸಾಕಾಗಿದೆ 
ವಿಚಾರಿಸು ಏನಾಗಿದೆ 
ನಿನ್ನಲ್ಲಿದೆ ಈ ಪ್ರಾಣವು... 

ತೀರದ ಹಂಬಲ ಬಂತು ನಿನ್ನಿಂದಲೇ
ಹೇಳಲು ಬಾರದ ಮಾತಿಗೋ ಕಣ್ಣಲೇ
ತಲ್ಲಣ ತಾಳದ ತಂತಿಯ ನಾದವು
ಒಮ್ಮೆ ಆತಂಕವು, ಒಮ್ಮೆ ಆಹ್ಲಾದವು
ಮೀಟುವೆ ಹೇಗೆ ನೀ ತಾಕದೆ ನನ್ನನು?
ಕೇಳದೆ ಹೇಗೆ ಆವರಿಸಿದೆ ಬಾಳನು 
ನಿಲ್ಲುವೆ ಎಲ್ಲೇ ನೀ ಬಿಟ್ಟ ಗುರುತೊಂದಿಗೆ
ಬಾಳುವೆ ನಿನ್ನ ಸಹಚಾರ ನೆನಪೊಂದಿಗೆ
ಕಾತರ ಇದ್ದರೆ ನಿನ್ನಲೂ ಈ ಥರ
ಕಟ್ಟುವ ಈ ದಿನ, ಭಾವದ ತೋರಣ

ಕವಿತೆಯೆಂಬೋದು ಹುಟ್ಟೋಕಿದೆ ಕಾರಣ
ಕವಿತೆಯೆಂಬೋದು ಹುಟ್ಟೋಕಿದೆ ಕಾರಣ
ಹಾಡಿನ ಹೂರಣ, ಮಾಧುರಿ ಸಿಂಚನ 
ಸಂಜೆ ಏಕಾಂತವೇ ಎಲ್ಲಕೂ ಪ್ರೇರಣಾ 
ಹಾಡುವ ಸಾಧನ, ಆತ್ಮದ ಮಂಥನ 
ಕವಿತೆಯೆಂಬೋದು ಹುಟ್ಟೋಕಿದೆ ಕಾರಣ
ಕವಿತೆಯೆಂಬೋದು ಹುಟ್ಟೋಕಿದೆ ಕಾರಣ..

ಉಕ್ಕಿ ಬಂದ ನದಿಯ

ಉಕ್ಕಿ ಬಂದ ನದಿಯ
ದಕ್ಕಿಸಿಕೊಂಡಿತು ಕಡಲು
ಬಿಕ್ಕಿ ಅಳುವ ಸಮಯ
ಹಗುರ ಆಯಿತು ಮುಗಿಲು
ಪಾತ್ರಗಳೆಲ್ಲ ಮೊದಲಾಗಿ 
ರೂಪಾಂತರಗೊಳ್ಳುವ ಗಳಿಗೆ
ಸೂತ್ರವೇ ಇರದೆ ಮುನ್ನಡೆದ
ನಾಟಕವು ಎಲ್ಲಿಯವರೆಗೆ?
ಬತ್ತಿದ ನದಿಗೂ, ಖಾಲಿ ಬಾನಿಗೂ ಇನ್ನೂ ಕಾತರವೇ 
ತಮ್ಮನು ತಾವು ಮತ್ತೆ ಕಟ್ಟಲು ಎದುರು ನೋಡುತಿವೆ 

ಒಡೆದ ಕನ್ನಡಿ ಒಡಲಲ್ಲಿ 
ನೂರಾರು ನಕಲು ಬಿಂಬವಿದೆ 
ಕಡಿದ ಮರದ ಬುಡವಿನ್ನೂ 
ಬೇರನ್ನೇ ನೆಚ್ಚಿ ಬದುಕುತಿದೆ 
ಎಲ್ಲ ಮುಗಿದಂತೇನಲ್ಲ 
ಮುಗಿದಂತೆ ಭ್ರಮಿಸಲು ನಮ್ಮೊಳಗೆ 
ಕಳುವಾದಲ್ಲೇ ಸುಳುವೊಂದ 
ಬಿಡಬೇಕು ಮರಳುವ ಸಾಧ್ಯತೆಗೆ 
ಕುಡುಗೋಲಂಚಿಗೆ ಬಿಡುಗಡೆಯಿಲ್ಲ ಬೀಸುವ ಕೈಯ್ಯಿರಲು 
ಕಿವಿಗೊಡಬಾರದು ಆದ ಗಾಯಕೆ ಎಲ್ಲ ಮುಗಿದಿರಲು... 

ಬದುಕಿನ ಆಳದ ನಳಿಕೆಯಲಿ 
ಇಳಿಬಿಟ್ಟೆ ಹಗ್ಗದ ಕೊನೆಯನ್ನು 
ಮತ್ತೆ ಮೇಲಕೆ ಸೇದಿದರೆ 
ಮೊಳದಷ್ಟೇ ಮರಳಿದ ಗುಟ್ಟೇನು?
ನಾಳೆಯ ಹಿಡಿಯಲು ಹೊರಟಾಗ 
ಈಗಿರುವವು ಆದವು ನೆನ್ನೆಗಳು 
ಗಡಿಯಾರಕ್ಕೆ ಗುರಿಯಿಟ್ಟ
ಬಂದೂಕಿಗೂ ಸಮಯ ಮೀರಿರಲು 
ಕಟ್ಟಿದ ಗೋಡೆ ಬೀಳುವ ವೇಳೆ ಪ್ರಶ್ನೆಗಳುಳಿದಿಲ್ಲ 
ಚಿತ್ತದ ದೂರ ಹೆಚ್ಚಿದ ಹಾಗೆ ನಿಲ್ಲಲು ಮನಸಿಲ್ಲ... 

ದೂರ ದೂರ ಸಾಗಿ ಬಂದೆ

ದೂರ ದೂರ ಸಾಗಿ ಬಂದೆ ನಿನಗೆ
ಏನೋ ಹೇಳಬೇಕು ಎಂದೇ ಮನವೇ
ಬಾಕಿ ಏನೂ ಉಳಿಯದಂತೆ ಜಗದ
ಎಲ್ಲ ಖುಷಿಯ ತಂದು ಕೊಡಲೇ ಒಲವೇ

ಇನ್ನೂ ಸಮೀಪ ಬಂದರೆ
ಹೃದಯ ಕಳುವಾಗಿ ಹೋದರೆ
ಹೊಣೆ ಮಾಡುವೆ ನಿನ್ನನೇ ನೆನಪಿಡು..

ಪದವೊಂದರ ಪಾದ ಹಿಡಿದು
ಶುರುವಾಯಿತು ಮೊದಲ ಕವಿತೆ
ಇದುವರೆಗೂ ಕೇಳೇ ಇರದ
ಮನಮೋಹಕ ಪ್ರೇಮ ಗೀತೆ
ನಿನಗಾಗಿ ಗೀಚಿಕೊಂಡಿರುವೆ ಕೇಳಿ ಹೋಗು
ಕನಸೆಂಬ ಮರುಭೂಮಿಯಲಿ
ತಂಗಾಳಿ ಬೀಸಿದ ಹಾಗೆ
ಎಡ ಬದಿಗೆ ಹೊರಳಿ ಎದ್ದೂ
ಶುಭ ಶಕುನ ಬಂತು ಹೇಗೆ
ನಿದಿರೆಲೂ ಬಿಡದೇ ಕಾಡುತಿದೆ ನಿನ್ನ ಕೂಗು

ಏರು ಪೇರಾದ ಜೀವನ
ಏಕೋ ಹೀಗಾಗಿ ಹೋದೆ ನಾ
ಉಪಕಾರಕೆ ನಿನ್ನನೇ ಬರೆದಿಡು...

ಪುಟಗಟ್ಟಲೆ ಪತ್ರ ಬರೆದು 
ನಿನಗೆ ನಾ ನೀಡದೆ ಹೋದೆ 
ಅದು ಎಲ್ಲೇ ಹೋದರೂ ನೀನು 
ಮೊದಲೇ ತಲುಪಿ ಇರುತ್ತಿದ್ದೆ 
ಮನದ ಮಾತೆಲ್ಲವ ಅರಿತಂತೆ ನಗುವೆ ಏಕೆ 
ಬಿಡುವಾದರೆ ಬಂದು ನೋಡು 
ಉದ್ಘಾಟಿಸಿ ಒಲವ ಜಾತ್ರೆ 
ತಮಟೆಯ ಏಟೂ ಕೂಡ 
ಮಜವಲ್ಲ ನೀನಿರದಿದ್ರೆ 
ಕಳುವಾಗದೆ ಇರಲಿ ಕಾಲ್ಗೆಜ್ಜೆ ಚೂರು ಜೋಕೆ 

ಆಸೆ ಕಡಲಾಗಿ ಉಕ್ಕಲು 
ಮೀಸೆ ಚಿಗುರಂತೆ ಹಿಗ್ಗಲು  
ಬಿಡಿಸೇಳಲು ಆಗದು ಕಿವಿಗೊಡು... 

ದೂರ ದೂರ ಸಾಗಿ ಬಂದೆ ನಿನಗೆ
ಏನೋ ಹೇಳಬೇಕು ಎಂದೇ ಮನವೇ

Sunday 9 February 2020

ಕೆನ್ನೆ ನೀಡಬೇಡ ನನ್ನ ಮುತ್ತಿಗೆ

**ಪಲ್ಲವಿ**
ಕೆನ್ನೆ ನೀಡಬೇಡ ನನ್ನ ಮುತ್ತಿಗೆ 
ನಾನೇ ನೀಡಲೇನು ಆದ ತಪ್ಪಿಗೆ 
ಕಣ್ಣು ಚೂರು ತುಂಬಿಕೊಂಡ ತಂಬಿಗೆ 
ಅಲ್ಲಲ್ಲಿ ಕರಗಿತಲ್ಲ ಕಾಡಿಗೆ 
ಎಷ್ಟೇ ಕಷ್ಟ ಪಟ್ಟು ತಡೆದು ಇಟ್ಟರೂ 
ಜಾರಿ ಬಂತೇ ಜೋಡಿ ಬಿಂದು ಮೆಲ್ಲಗೆ 

ಕೆನ್ನೆ ನೀಡಬೇಡ ನನ್ನ ಮುತ್ತಿಗೆ 
ನಾನೇ ನೀಡಲೇನು ಆದ ತಪ್ಪಿಗೆ ... 

**ಚರಣ ೧**
ಬಣ್ಣ ಬಣ್ಣ ವೇಷ ತೊಟ್ಟು ಕುಣಿಯುವೆ 
ಬಿಕ್ಕಿ ಬಿಕ್ಕಿ ನಿಂತ ಮಾತ ಪೂರ್ತಿಗೊಳಿಸುವೆ 
ಕೋಪ ತಾಪವೆಲ್ಲವನ್ನೂ ಸಹಿಸುವೆ 
ನೀನು ತಾಳೋ ಮೌನದಲ್ಲೆ ಎಲ್ಲ ಗ್ರಹಿಸುವೆ 
ಕೊಟ್ಟು ಹೂವೊಂದನು, ಇಟ್ಟು ಆಣೆಯನು
ಉತ್ತರಕ್ಕೆ ಎದುರು ನೋಡುತ
ಹೊತ್ತ ಆರೋಪಕೆ, ಕೊಟ್ಟ ದಂಡನೆಯನು 
ನೇರವಾಗಿ ಸ್ವೀಕರಿಸುತ
ಮನ್ನಿಸೆಂದು ಮಾತು ಮುಗಿಸುವೆ.... 

ಕೆನ್ನೆ ನೀಡಬೇಡ ನನ್ನ ಮುತ್ತಿಗೆ 
ನಾನೇ ನೀಡಲೇನು ಆದ ತಪ್ಪಿಗೆ 
ಕಣ್ಣು ಚೂರು ತುಂಬಿಕೊಂಡ ತಂಬಿಗೆ 
ಅಲ್ಲಲ್ಲಿ ಕರಗಿತಲ್ಲ ಕಾಡಿಗೆ 

**ಚರಣ ೨**
ಹಾಲ ಗಲ್ಲ ಕೆಂಪು ರಂಗು ತಾಳಿದೆ 
ಅಲ್ಲಿ ನಾಚಿಕೆಗೂ ಚೂರು ಜಾಗ ಉಳಿದಿದೆ 
"ಬಾಲ ಒಂದು ಕಮ್ಮಿ ನಿನಗೆ ಆಗಿದೆ"
ಎಂದು ಹೇಳಿ ಒಮ್ಮೆ ನನ್ನ ಕಾಡಬಾರದೇ?
ನಕ್ಕರೆ ಸಾರ್ಥಕ, ಆಗುವೆ ವಿಧೂಷಕ 
ಭಾರವಾಗು ಬೆನ್ನನೇರುತ 
ತಾರೆಯ ಕೂಡಿಸಿ, ಬಿಡಿಸಿದ ಚಿತ್ರಕೆ 
ಬಣ್ಣ ತುಂಬೋ ಹುಚ್ಚು ಇಂಗಿತ 
ನಿನ್ನ ಕೂಡಿ ಮತ್ತೂ ಕಲಿಯುವೆ... 

ಕೆನ್ನೆ ನೀಡಬೇಡ ನನ್ನ ಮುತ್ತಿಗೆ 
ನಾನೇ ನೀಡಲೇನು ಆದ ತಪ್ಪಿಗೆ 
ಕಣ್ಣು ಚೂರು ತುಂಬಿಕೊಂಡ ತಂಬಿಗೆ 
ಅಲ್ಲಲ್ಲಿ ಕರಗಿತಲ್ಲ ಕಾಡಿಗೆ 
ಎಷ್ಟೇ ಕಷ್ಟ ಪಟ್ಟು ತಡೆದು ಇಟ್ಟರೂ 
ಜಾರಿ ಬಂತೇ ಜೋಡಿ ಬಿಂದು ಮೆಲ್ಲಗೆ.... 

*****ಹಾಡು*****
https://soundcloud.com/bharath-m-venkataswamy/g3fgfc1fdejs

Tuesday 4 February 2020

ಏಕಾಂತವೇ, ಏಕಾಂಗಿಯ

ಏಕಾಂತವೇ, ಏಕಾಂಗಿಯ 
ಬಳಿಗೆ ಬರಲು ಅವಸರ ನಿನಗೆ
ತಾನಾಗಿಯೇ ದೂರಾಗಿದೆ
ಎದೆಯಲಿ ಕದವಿರದಿರೆ
ತೊರೆದ ನೆನಪೇ (2)

ಹಾಳೆ ಮುಗಿದು ಕವಿತೆ ಮುಗಿದಂತೆ
ಇದೇ ಕೊನೆ ಪದ ಇಗೋ
ನಾಳೆ ಬರುವ ಸಮಯ ಸಲುವಾಗಿ
ಹೊಸ ಮುಖ ಪರಿಚಯ ಕೊಡುವೆ

ಏಕಾಂತವೇ, ಏಕಾಂಗಿಯ 
ಬಳಿಗೆ ಬರಲು ಅವಸರ ನಿನಗೆ
ತಾನಾಗಿಯೇ ದೂರಾಗಿದೆ
ಎದೆಯಲಿ ಕದವಿರದಿರೆ
ತೊರೆದ ನೆನಪೇ....

ಈ ಬೀಸುವ ಗಾಳಿ
ಬೇಗೆ ತರೋ ಹಾಗೆ
ನೀ ಉಲಿಯದೆ ಹೀಗೆ
ನಾ ಮೌನಿ ಯಾಕಾದೆ?

ಪ್ರೇಮ ಹಿಡಿ ಕೈಯ್ಯನ್ನು
ದಾರಿ ಇಡೀ ನನ್ನ ನಡೆಸಿನ್ನು
ಪ್ರೇಮ ತಡಿ ನೀನಿನ್ನು
ಪ್ರಾಣ ಕೊಡುವೆನು, ಕೊಡುವೆಯಾ
ಬದಲಿಗೆ ಒಲವನು

ಏಕಾಂತವೇ, ಏಕಾಂಗಿಯ 
ಬಳಿಗೆ ಬರಲು ಅವಸರ ನಿನಗೆ
ತಾನಾಗಿಯೇ ದೂರಾಗಿದೆ
ಎದೆಯಲಿ ಕದವಿರದಿರೆ
ತೊರೆದ ನೆನಪೇ....

ನನ್ನ ಮಾರ್ದನಿಯೇ ಬಾ

ಆ ಆ.. ನನ್ನ ಮಾರ್ದನಿಯೇ ಬಾ 
ಈ ಕಣ್ಣ ಕಾತರವೇ
ನಿನ್ನ ಬಿಂಬವನ್ನು ಹೊತ್ತು ತಿರುಗುವೆ 
ನಾಳೆಗಳ ನೇಯುತಲಿ.. 

ಪ್ರಾಣವೇ, ಪ್ರಾಣವ
ಮರಳಿಸು ಮನಕೆ 
ಬೇಡಿಕೆ ಬಂದಿದೆ ನೋಡು.. ನೋಡು.. 
ಪ್ರಾಣವೇ ಕೂಡಲೆ  
ಪರಿಗಣಿಸು ನನ್ನ 
ಸಮ್ಮತಿ ಸೂಚಿಸು ನೀ.....  
------------------------------------------------------------
ಪ್ರಾಣವೇ, ಪ್ರಾಣವ
ಮರಳಿಸು ಮನಕೆ 
ಬಂದಿದೆ ಬೇಡಿಕೆ ನೋಡು.. ನೋಡು.. 
ಪ್ರಾಣವೇ ಕೂಡು ಬಾ 
ಪರಿಗಣಿಸು ನನ್ನ 
ಕೂಡಲೆ ಸಮ್ಮತಿ ನೀಡು.... 

Saturday 1 February 2020

ಹೇ ದಾರಿಯೇ ಅಭಿಸಾರಕೆ

**ಪಲ್ಲವಿ**
ಹೇ ದಾರಿಯೇ ಅಭಿಸಾರಕೆ
ಕರೆದೊಯ್ಯಿ ನನ್ನ ಬೇಗ
ಹೇಗಾದರೂ ಈ ಹಾಡಿಗೆ
ಜೊತೆಯಾಗಬೇಕು ರಾಗ
ಉಸಿರ ಕೊಡುವ ಉಸಿರು ಬೇಕು
ಅದರ ಕಡೆಗೆ ನಡೆಸು ಸಾಕು 
ಕೂಡಲೇ ನೀಡೆಯಾ ನೆರಳ ವಿಳಾಸ..

**ಚರಣ ೧**
ಹೋಗಿ ಬರುವೆ ಓ ತಾವರೆಯೇ
ಏಕೆ ಹೊತ್ತೆ ಈ ಇಬ್ಬನಿಯ ಅನುಕಂಪದಲಿ
ಓ ತಾವರೆಯೇ?
ನಿನ್ನ ಹಾಗೆ ಇರಲಾರೆ ಒಂದೇ ಕಡೆ
ಅಲ್ಲೊಂದು ಸೋತ ಪ್ರಾಣ
ನನಗಾಗಿ ಕಾಯುವಾಗ
ಹೇಗಿರಲಿ ನಗುತಲೀಗ?
ಅವಳಿರದೆ ಆಗಿರುವೆ ನಾ ಅಪೂರ್ಣ...

ಹೇ ದಾರಿಯೇ ಅಭಿಸಾರಕೆ
ಕರೆದೊಯ್ಯಿ ನನ್ನ ಬೇಗ
ಹೇಗಾದರೂ ಈ ಹಾಡಿಗೆ
ಜೊತೆಯಾಗಬೇಕು ರಾಗ.... 

**ಚಾರಣ ೨**
ಬಂದೆ ತಡಿ ಸಮೀಪ 
ಕೇಳು ಇಗೋ ಎದೆಬಡಿತ 
ಒಂದೇ ಸಮ ಕಲಾಪ 
ಅದು ಏಕೋ ತೀರದ ಹಠ 
ಇಲ್ಲೊಂದು ಸೋತ ಪ್ರಾಣ
ನಿನಗಾಗಿ ಕಾಯುವಾಗ
ಎಲ್ಲಿರುವೆ ಅಡಗಿ ಈಗ 
ನೀನಿರದೆ ಆಗಿರುವೆ ನಾ ಅಪೂರ್ಣ...

ಹೇ ದಾರಿಯೇ ಅಭಿಸಾರಕೆ
ಕರೆದೊಯ್ಯಿ ನನ್ನ ಬೇಗ
ಹೇಗಾದರೂ ಈ ಹಾಡಿಗೆ
ಜೊತೆಯಾಗಬೇಕು ರಾಗ

****ಹಾಡು****
https://soundcloud.com/bharath-m-venkataswamy/pe21xnpblkl1

ಶರದ್ಕಾಲದ ಕೊನೆ ಎಲೆ ಉದುರಿದೆ ಮರದಲಿ

**ಪಲ್ಲವಿ**
ಶರದ್ಕಾಲದ ಕೊನೆ ಎಲೆ
ಉದುರಿದೆ ಮರದಲಿ
ಶುಭಾರಂಭದ ಮುನ್ಸೂಚನೆ
ಮೂಡಿದೆ ಮನದಲಿ
ಕಣ್ಣಂಚಿನ ಕಾಲ್ದಾರಿಯ
ಕಣ್ಣೀರಿದು ಮರೆತಂತಿದೆ 
ಏನಾದರೂ ಉತ್ತೇಜಿಸೋ 
ಆತ್ಮ ಬಲ ಎದೆಯಲ್ಲಿದೆ
ಮುಂದೆ ಎಲ್ಲೋ ಗೆಲುವು ಕಾದಿದೆ 

ಶರದ್ಕಾಲದ ಕೊನೆ ಎಲೆ
ಉದುರಿದೆ ಮರದಲಿ
ಶುಭಾರಂಭದ ಮುನ್ಸೂಚನೆ
ಮೂಡಿದೆ ಮನದಲಿ.... 

**ಚರಣ ೧**
ಅಲಂಕಾರಗೊಂಡ ಈ ಬಾಳನು 
ಅನಾವರಣಗೊಳಿಸಿ ಸಿಹಿ ಹಂಚಲೇ?
ಅನುಗಾಲ ಹೀಗೇ ಇರೋ ಥರ
ಹಪಾಹಪಿಗೆ ಜೋತು ಸಹಿ ಹಾಕಲೇ?
ವಿನಾಕಾರಣ ಸತಾಯಿಸೋ 
ಅನೂಹ್ಯ ಸಂಭ್ರಮ ನನ್ನ ಕಾದಿದೆ 
ಹೊಸ ತೋರಣ ಕೈ ಬೀಸುತ  
ನವೀನ ಯಾನಕೆ ದಾರಿ ಮಾಡಿದೆ 
ಕನಸೂ ಈಗ ಬಣ್ಣ ತಾಳಿದೆ... 


**ಚರಣ ೨**
ಪ್ರತಿ ಪಾತ್ರವನ್ನೂ ನಿಭಾಯಿಸು  
ಕಲಾ ರಂಗದಂತೆ ಈ ಜೀವನ 
ಅತಿ ಎತ್ತರವನು ನಾವೇರಲು  
ಈ ನಮ್ಮ ಮೊದಲ ಹೆಜ್ಜೆ ಕಾರಣ 
ನಗೋ ಬೇಲಿಯ ಹೂ ರಾಶಿಯೇ 
ಅತೀವ ಸ್ಪೂರ್ತಿಯ ಸಾರಾಂಶವು 
ಸಮಾಧಾನಿಸಿ ಬರೋ ಮಳೆ 
ಮಣ್ಣ ಪಾಲಿಗೆ ಹೊಸ ಅವಕಾಶವು 
ಚಿಗುರು ಮೂಡೋ ಸಮಯ ಮುಂದಿದೆ..


****ಹಾಡು****
https://soundcloud.com/bharath-m-venkataswamy/dwdvp9stfh9o

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...