Monday 26 October 2020

ಕವಿ ಮತ್ತು ಚಂದ್ರ 

ಅರೆ ಚಂದಿರ ಮೊಗವ

ಮುಗಿಲ ಹೆಗಲಿಗಿರಿಸಿ 
ಸುಮ್ಮನೆ ಕಣ್ಮುಚ್ಚಿಹನು,
ಗಮನಿಸಿದ ಪ್ರೇಮಿ  
ವಿರಹಿಯ ಸೋಗಿನಲ್ಲಿ 
ಶೋಕ ಗೀತೆ ಬರೆದಿಹನು

"ಏನು ಆ ಕಲೆ?"
"ಪಸೆ" ಎಂದ ಚಂದ್ರ
ತನ್ನ ಕೆನ್ನೆ ಸವರಿಕೊಂಡ
ಪ್ರೇಮಿ ನೆನೆದು ಸಖಿಯ
ಮುಂದುವರಿದ ಮಾತು-ಕತೆ 
ಸತ್ವಹೀನವೆಂಬಂತೆ 
ಕುಸಿ ಕುಸಿಯಿತು ಕವಿತೆ..

"ಖಾಲಿ ಬಿಟ್ಟ ಸ್ಥಳವ
ತುಂಬಿಕೊಳ್ಳಲೇನು?"
ಅಪ್ಪಣೆಗೆ ಕಾದಿತ್ತು 
ಕಣ್ಣಂಚಲಿ ಕಂಬನಿ
ರೆಪ್ಪೆ ಒಪ್ಪಿಗೆ ಕೊಡುತಲೇ 
ಜಾರಿ ಹಾಳೆಯ ತಬ್ಬಿ
ಮೈ ಚೆಲ್ಲಿಕೊಂಡಿತು 

ಬಹುಶಃ ಚಂದ್ರನೂ 
ಏನನ್ನೋ ಗೀಚುತಿದ್ದ  
ಮಸಿ ಮೋಡಗಳು 
ದುಂಡಗೆ ಅಕ್ಷರದಂತೆ 
ಅಲ್ಲಲ್ಲಿ ಬಿಡಿಯಾಗಿ 
ಮುಂದೆಲ್ಲೋ ಬಿಗಿಯಾಗಿ 
ಲಿಪಿಯನ್ನು ಹೋಲುತಿತ್ತು 

ಆಗಸಕ್ಕೆ ಕಣ್ಣು ನೆಟ್ಟು 
ಕೆನ್ನೆಗೆ ಆನಿಸಿ ಬೆಟ್ಟು 
ಏನೋ ಹೊಳೆದಂತೆ 
ಬರೆದು ಒಡೆದಂತೆ 
ಮತ್ತೆ ಬೆಳದಿಂಗಳನ್ನು 
ಸೀಳಿ ಹೊರಟ ನೋಟ 
ತಿಳಿ ಮೋಡ ಪರದೆ ಹಿಂದೆ 
ಮಸಲತ್ತಿನ ಆಟ 

ಕಾಗದದ ಉಂಡೆ ರಾಶಿ 
ತನ್ನ ಸುತ್ತ, ಪ್ರೇಮಿ ತಾನು 
ಏನು ಬರೆಯಲೆತ್ನಿಸಿದರೂ 
ಕೈಲಾಗದೆ ಸೋತ 
ಎಷ್ಟೋ ಕವಿತೆಯ ಕಟ್ಟಿ 
ಎಷ್ಟೋ ಕವಿಗಳ ಮುಟ್ಟಿ 
ವಿರಹಿಯ ತಲುಪದ ಚಂದ್ರ 
ಮುಖ ಊದಿಸಿ ಕೂತ 

ನಡು ರಾತ್ರೆ ನಿದ್ದೆಯಲ್ಲಿ 
ಲೋಕ ಮೈ ಮರೆತಿರಲು 
ಇಳಿದು ಬಂದ ಭುವಿಗೆ 
ಉಂಡೆಗಳ ಹರಡುತ 
ಅಲ್ಲೊಂದು ಇಲ್ಲೊಂದು 
ಸಾಲಗಳ ಹೆಕ್ಕಿ 
ವಿರಹಿಯ ಮನಸಿಗಿಟ್ಟು 
ಕರಗಿದ ಬಿಟ್ಟ ಚಂದ್ರ 

ಎಚ್ಚರಗೊಂಡವ ತನ್ನ 
ತನ್ನಲ್ಲೇ ಒಗ್ಗೂಡಿಸಿ  
ಏನೋ ಹೊಳೆದವನಂತೆ 
ಚಡಪಡಿಸುತಲಿದ್ದ ಕವಿ 
ಅರೆ ಬೆಂದ ಸಾಲುಗಳ 
ಪೂರ್ಣಗೊಳಿಸಿ ಹಾಡಿದ 
ತೂಕಡಿಸುತ್ತಿದ್ದ ಚಂದ್ರ 
ಸುಖ ನಿದ್ದೆಗೆ ಜಾರಿದ.... 

ಇನ್ನೆಷ್ಟು ಸನಿಹ ಬರಬೇಕು

ಇನ್ನೆಷ್ಟು ಸನಿಹ ಬರಬೇಕು ನಾನು ನಿನ್ನುಸಿರ ಸೇವಿಸೋಕೆ

ಇನ್ನೆಷ್ಟು ದಿವಸ ಈ ಒಂಟಿ ಪಯಣ? ಒಲವಾಯಿತೆಂಬ ಶಂಕೆ!

ಗಾಯಕ್ಕೆ ಇಟ್ಟ ಕಣ್ಣೀರ ಮದ್ದು, ಹೃದಕ್ಕೆ ನೆನಪ ನೋವು
ನಿಮಿಷಕ್ಕೆ ಸಿಕ್ಕು ಕ್ಷಣದಲ್ಲಿ ದೂರ, ಗಡಿಯಾರ ಮುಳ್ಳು ನಾವು

ಕಳೆದದ್ದು ಸುಳ್ಳು ಹಾಗಿದ್ದೂ ಕೂಡ ಒಂದಾಗುವಾಸೆ ಏಕೆ?
ಒಂದೊಂದೇ ಪದವ ನೀಡುತ್ತಾ ಹೋಗು ಈ ಶೂನ್ಯ ನೀಗಿಸೋಕೆ

ಹಾಲಂತೆ ನೀನು ಒಡೆದಾಗ ನಾನು ಸಹಿಸೋದು ಹೇಗೆ ಹೇಳು?
ಈ ನನ್ನ ದುಃಖ ದುಮ್ಮಾನದಲ್ಲಿ ನಿನಗುಂಟು ಅರ್ಧ ಪಾಲು

ಕಂಡಂತೆ ಕಂಡು ಮರೆಯಾಗೋ ಆಟ ಮುರಿದಂತೆ ಕೊಟ್ಟ ಮಾತ
ಪಳಗುತ್ತ ಹಾಗೆ ಕಲಿಯೋಣವೇನು ಮನಸಿಟ್ಟು ಪ್ರೇಮ ಪಾಠ?

ಬಿಳಿ ಹಾಳೆಯಂಥ ಬಾಳಲ್ಲಿ ಹಾಗೆ ಒಂದಿಷ್ಟು ಬಣ್ಣ ಚೆಲ್ಲು
ಕಣ್ಣಲ್ಲಿ ಕಣ್ಣು ಇಟ್ಟಾಗ ಕರಗೋ ಕಾಡಿಗೆಯ ಕದ್ದು ಕೇಳು

ಗುರಿ ಮಾಡು ನಿನ್ನ ಕೋಪಕ್ಕೆ ನನ್ನ ನಗುವಲ್ಲಿ ಸಿದ್ಧನಾದೆ
ನೀ ನೆಟ್ಟ ಪ್ರೇಮ ಹೆಮ್ಮರದ ಕೆಳಗೆ ಧ್ಯಾನಿಸುವ ಬುದ್ಧನಾದೆ!

Thursday 22 October 2020

ನೆತ್ತಿ ಮೇಲೆ ರಂಗು ಬಳಿದ ತುಂಬು ಚಂದಿರ

ನೆತ್ತಿ ಮೇಲೆ ರಂಗು ಬಳಿದ ತುಂಬು ಚಂದಿರ 

ಹೊತ್ತು ಬರುವೆ ನನ್ನ ಮನವ ತಂಪುಗೊಳಿಸೆ ನೀ
ಚಂದ್ರನಿಂದ ಎರವಲಾಗಿ ಪಡೆದ ಜೋನ್ನಲಿ 
ಮಿನುಗುವಂತೆ ಹೂವಿನೊಡಲ ತಬ್ಬಿದಿಬ್ಬನಿ 

ಏನು ನಿನ್ನ ಹೆಸರು ಯಾವ ಲೋಕ ನಿನ್ನದು?
ಕೇಳಲಿಲ್ಲ ಅಷ್ಟರಲ್ಲೇ ಆಪ್ತಳಾಗುವೆ 
ಹೇಳಬೇಕು ಅನಿಸುವಷ್ಟು ಆಸೆ ನನ್ನಲಿ 
ನಾಲಿಗೆ ನುಲಿದ ಹಾಗೆ ಸುಮ್ಮನಾಗುವೆ 

ಬುಟ್ಟಿ ತುಂಬ ಶ್ವೇತ ಪುಷ್ಪ ನಡುವೆ ಮರೆಯಲಿ 
ಗುಡಿಯ ಮೀರಿ ಎದುರುಗೊಂಡೆ ಏನು ಕಾರಣ?
ಆಗಲೇ ಕೆನ್ನೆಗೆಂಪು ಹೂವಿಗಿಳಿದಿದೆ 
ಪ್ರೇಮ ದೇವರೊಲಿಯದಿರಲು ತುಂಬ ದಾರುಣ 

ರೂಪುರೇಷೆ ಹಾಕಿಕೊಂಡು ಭೇಟಿ ಮಾಡುವೆ 
ಸಾಧ್ಯವಾದಷ್ಟೂ ಅದಕೆ ಅಂಟಿಕೊಳ್ಳುತಾ 
ಭಾಷೆ ಇಷ್ಟು ಸಡಿಲವೇಕೆ ನಗುವಿನೆದುರಲಿ 
ಹಾಗಾಗಿ ಆಗಿ ಬಿಡುವೆ ಮೂಕ ವಿಸ್ಮಿತ 

ಕದ್ದು ಹೃದಯ ಖಾಲಿ ಬಿಟ್ಟ ಜಾಗದಲ್ಲಿದೋ 
ತಾಜ ಮಹಲೂ ನಾಚುವಂಥ ಪ್ರೇಮ ಸ್ಮಾರಕ  
ಪೂರ್ತಿ ನಿನ್ನ ಹೆಸರಲೀಗ ಖಾತೆ ಮಾಡುವೆ 
ತುಟಿಗೆ ತುಟಿಯ ಒಪ್ಪಿಗೆ ಪಡೆವ ಮೂಲಕ... 

Thursday 15 October 2020

ಗಾಢವಾದ ಪ್ರೀತಿಯಲ್ಲಿ ಬೀಳಬೇಕು ಒಮ್ಮೆ ಹಾಗೆ

ಗಾಢವಾದ ಪ್ರೀತಿಯಲ್ಲಿ ಬೀಳಬೇಕು ಒಮ್ಮೆ ಹಾಗೆ 

ಯಾವ ತಂಟೆ ಇಲ್ಲದಂತೆ ನಿನ್ನ ತೋಳಲಿ 
ರೂಢಿಯಾಗಿ ನಿನ್ನ ಹಿಂದೆ ಸಾಗಿ ಬಂದೆ ಸೋತ ಹಾಗೆ 
ಬಿಂಬವಾಗಲೇನು ನಿನ್ನ ಖಾಲಿ ಕಣ್ಣಲಿ 

ದೂರವೇನು ಸನಿಹವೆನು ಹೃದಯ ಮಾತಿಗಿಳಿಯುವಾಗ 
ಒಂದು ಮಿಡಿತದಲ್ಲಿ ನೂರು ಭಾವ ಹೊಮ್ಮಿತು 
ಪದ್ಯವೇನು ರಾಗವೇನು ಮೌನ ತಾನೇ ಹಾಡುವಾಗ 
ನೋಟದಲ್ಲೇ ಪೂರ್ತಿಯಾಗಿ ಅರ್ಥವಾಯಿತು 

ಒಂಟಿ ಸ್ವಪ್ನದಲ್ಲಿ ಏನೋ ಮಂಕು ಬಳಿದ ಶಂಕೆ ಮೂಡಿ 
ಸತ್ವ ಹೀನ ಕನಸುಗಳನು ಗಂಟು ಕಟ್ಟುವೆ 
ನೀನು ಇರದ ಸ್ವರ್ಗವಾದರೇನು ಕಿಚ್ಚು ಹಚ್ಚಿ ಬರುವೆ 
ನಿನ್ನ ನೆರಳ ಪತ್ತೆ ಹಚ್ಚಿ ಧನ್ಯನಾಗುವೆ 

ಕದ್ದು ನೋಡುವಾಗ ವಾರೆ ನೋಟದಲ್ಲಿ ವಾಹ್ ರೇ ವಾಹ್ 
ಮುದ್ದು ಬಹಳ ಮುದ್ದು ನೀನು ಹೊದ್ದು ಅಂದವ
ಹೆಚ್ಚು ಕಾಯಿಸುತ್ತಾ ಶಾಪಗ್ರಸ್ತನಾಗಿ ಬಿಡುವೆನು 
ನಾನೇ ಬೇಕೆಂದು ಆಸೆ ಹಿಡಿದು ಇಟ್ಟವ 

ಇಷ್ಟು ಜರುಗಿ ಏನೂ ನಡೆಯದಂತೆ ನಟಿಸಲೆಷ್ಟು ಕಠಿಣ 
ದಾರಿ ಕಾಣದಂತೆ ನಿಂತು ಬಿಡುವೆ ಸುಮ್ಮನೆ 
ಲೋಕ ಮರೆತು ತಬ್ಬುವಾಗ ತಬ್ಬಿಬ್ಬು ಆಗಲೇಕೆ?
ಚಂದ್ರ, ಚುಕ್ಕಿ ದಿಟ್ಟಿಸುತ್ತ ನೋಡಲೆಮ್ಮನೇ!

ನೂರು ಮಾತು ಬಂದು ಹೋಗಿ ಚುಚ್ಚಿದಂತೆ ತೋಚಿದಾಗ 
ಕೋಪವನ್ನು ಕಚ್ಚಿಯಿಟ್ಟು ಪ್ರೀತಿ ಮಾಡುವ 
ಇಲ್ಲದವರು ಬಡವರೆಂದು, ಪಾಪ ಇಲ್ಲವಾಗಿ ನೊಂದು 
ಚುಚ್ಚು ಮಾತನಾಡಿಯಾರು ಕ್ಷಮಿಸಿ ನೋಡುವ 

ದಾರಿ ಇನ್ನೂ ದೂರ ಸಾಗಿ, ಪಯಣವೆಷ್ಟು ಸಣ್ಣದೆಂದು 
ಅನಿಸುವಲ್ಲಿ ಮತ್ತೆ ಹೊರಡಿಸೋಣ ಹೊಸತನು 
ನಾಳೆಗಳಿವು ಮುಳ್ಳು ಹಾದಿಯಾಗಿ ಮಾರ್ಪಡಲು ಬಹುದು 
ಹೆಜ್ಜೆ ಇರಿಸುವ ಹಾಸಿ ಮಧುರ ನೆನಪನು... 



https://youtu.be/036aagJd6U0

ಸರಿಗಾಮೆ ಪದನಿಸೇ

 ಹೇ... ಹೇ... ಹೇ.. 

Say ಸ, say ರಿ, say ಗ, say ಮೇ.. say what?
ಬದಲಾಯಿಸೆ,  ಬದಲಾಯಿಸೆ,  ಬದಲಾಯಿಸೆ.. that's what we say
ಸರಿಗಾಮೆ ಪದನಿಸೇ 
ಬದಲಾಯಿಸೆ that's what we say
ಸರಿಗಾಮೆ ಪದನಿಸೇ 
ಬದಲಾಯಿಸೆ that's what we say
ಸೇರಿಸು ಲಕ್ಕು ಕಾಲ್ಕಿಲೋ 
ಲಾಸು ಕಾಲ್ಕಿಲೋ, ಲೇಬರ್ ಕಾಲ್ಕಿಲೋ 
ಕೂಡುತಾ ಭಕ್ತಿ ಕಾಲ್ಕಿಲೋ 
ಹೋಪು ಕಾಲ್ಕಿಲೋ, ಟ್ಯಾಲೆಂಟ್ ಕಾಲ್ಕಿಲೋ 
ಎಲ್ಲವ ಒಂದುಗೂಡಿಸಿ ಕಟ್ಟು ನಿನ್ನದೇ secret of success

ಸರಿಗಾಮೆ ಪದನಿಸೇ 
ಬದಲಾಯಿಸೆ that's what we say
ಈ ಹಾಡಿದು ನಮ್ಮದೇ ಹೇಯ್ 
ಏನೇ ಬರಲಿ ಹಾಡೋಕೆ ಸೈ 
To be a star
We'll show you how
Reach for the sky
and never never give it up

ಓಹೋ.... ಹಾಡೇ ವಿಜಯದ ಸಂಕೇತ... 

ಗೋಡೆ ಹತ್ತಿ ಕೂತು ಬಿಟ್ಟಿ ಮಾತನಾಡಿ 
ಪ್ರೀತಿ ಮಾಡುತ ಪಾಠ ಕಲಿಯೋದಿಲ್ವ
adolescent ಏಜು ಬೇಕಿದ್ದನ್ನ ಕೋರಿ 
ಏಟು ತಿಂದು ತಿದ್ದಿಕೊಂಡೋರಲ್ವ 
ತಪ್ಪನ್ನು ಮಾಡುತ ಮುಂದೆ, ಸರಿಯಾದ ದಾರಿಯ ಹಿಡಿದೋ 
mistakes are the secret of success
ನಾವು ಎಲ್ಲೆ ದಾಟುತಾ ಹೊರಟು ಮನವ 
ದೋಚಿಕೊಂಡೆವು ಒಲವ ಜೊತೆಗೆ 
love is the secret of success

ಸರಿಗಾಮೆ ಪದನಿಸೇ 
ಬದಲಾಯಿಸೆ that's what we say
ಸರಿಗಾಮೆ ಪದನಿಸೇ 
ಬದಲಾಯಿಸೆ that's what we say

Here we come here we comin
Yeah..we comin up with something and
U know that we are bringing it to number one
Full of fun and laughter
Coming' a little faster
Yeah you know we are having fun  
ಮಂಗನಂತೆ, ಉಡದಂತೆ ಸಿಕ್ಕಿದ್ದೆಲ್ಲಾ ಹಿಡಿ ಹಿಡಿ 
ಹೇಳಿ ಕೇಳಿ ಬರೋದಿಲ್ಲ ಅವಕಾಶ 
announce ಮಾಡಿ ಬಂದರೂ, label ಅಂಟಿ ಬಂದರೂ 
ಹೇಗೇ ಬಂದರೂ ಸಹ seize the day

ಸರಿಗಾಮೆ ಪದನಿಸೇ 
ಬದಲಾಯಿಸೆ that's what we say
ಈ ಹಾಡಿದು ನಮ್ಮದೇ ಹೇಯ್ 
ಏನೇ ಬರಲಿ ಹಾಡೋಕೆ ಸೈ 
To be a star
We'll show you how
Reach for the sky
and never never give it up

ಎದ್ದರೂ ಬಿದ್ದರೂ ಕಷ್ಟವೇ ಆದರೂ 
ನುಗ್ಗಿ ಗಟ್ಟಿಯಾಗಿ ನಾ ಹೇಳುವೆನು 
ಗೆಲುವಿಗೆ secret, ಗೆಲುವಿಗೆ shortcut
ಎಂದಿಗೂ ಎಂದಿಗೂ ಪರಿಶ್ರಮವೇ 
ಶ್ರಮವೇ ವಿಜಯದ ರಹದಾರಿ.. 

Monday 12 October 2020

ಅಲೆ ಅಲೆ ....

ಜಿಗಿಯುತ ಹಾಗೆ ಮೋಡ ತಾಕಿದೆ 

ಹಾರುವ ಆಸೆ ರೆಕ್ಕೆ ಪಡೆದಿದೆ 
ರೆಕ್ಕೆಯ ಬೀಸಿ ಬಯಕೆ ಹಾಡಿದೆ 
ಹಾಡಿಗೆ ಕುಣಿದು ಹೂವು ಅರಳಿದೆ 

ಅಲೆ  ಅಲೆ .... 

ಹೇ ನಿನ್ನತ್ತ ಮೋಹಗೊಂಡು ಮಿಡಿವೆ 
ಒಂದೊಂದು ಮಾತಿನಲ್ಲೂ ನಗುವೆ 
ಇನ್ನಷ್ಟು ಹತ್ತಿರಕ್ಕೆ ಬರುವೆ.. ನಾಚಿಕೆಯಾ?

ನಾ ಕಣ್ಣಲ್ಲಿ ಕಣ್ಣನಿಟ್ಟು ಕರೆವೆ .. ಕರಗುವೆಯಾ?

ಅಲೆ  ಅಲೆ .... 

ಪ್ರೀತಿಗೆ ಸಂದ ಜಯವೇ 
ಇದು ದಾರಿ ತೋರೋ ಗುರುವೇ 
ಬೇಡದೆ ಬಂದ ವರವೇ  .. ಓ.. 


ಒಲವೆನುವ ಈ ಸೆರೆಮನೆಯ 
ತಲುಪಿರುವೆ ನೀ ಬಂಧಿಸೆಯಾ?
ಉಸಿರಿಡಿದು ನಾ ಕಾದಿರುವೆ 
ಕರುಣಿಸು ಬಾ ನೀ ಬಿಡುಗಡೆಯ

ಹುಡುಕಾಟಕೂ ಮುನ್ನವೇ ಹಿಡಿಯುವೆ 
ಈ ಆಟದಿ ಸೋತರೂ ಸುಖಮಯವೇ 
ಅಲೆ  ಅಲೆ .... 
ತಡ ಮಾಡದೆ ತಾಕಿಸು ಬೆರಳನು 
ಖುಷಿಯಲ್ಲಿ ಜಾರಿದೆ ಕಂಬನಿಯೇ 

ಪ್ರೀತಿಗೆ ಸಂದ ಜಯವೇ 
ಇದು ದಾರಿ ತೋರೋ ಗುರುವೇ 
ಬೇಡದೆ ಬಂದ ವರವೇ  .. ಓ.. 


ಹೊಸ ಬಗೆಯ ಈ ಅನುಭವಕೆ 
ರಸಿಕತೆಯ ಮಳೆಗರೆಯುತಿದೆ 
ಜನುಮಗಳ ಹೊಂದಿಸಿ ಕಳೆದು
ಈ ಜನುಮ ಮರುಕಳಿಸಿಹುದೇ

ಕರಾರು ಮಾಡುವೆ ಬಂದರೆ
ಹಣೆಗೊಂದು ಮುತ್ತನು ನೀಡುತಲಿ
ಅಲೆ ಅಲೆ ....
ಗೆರೆ ದಾಟಿ ಬರುವೆನು ಭರದಲಿ
ಎದೆಯಾಳ ತಲುಪುವೆ ಮುಳುಗುತಲಿ

ಪ್ರೀತಿಗೆ ಸಂದ ಜಯವೇ 
ಇದು ದಾರಿ ತೋರೋ ಗುರುವೇ 
ಬೇಡದೆ ಬಂದ ವರವೇ  .. ಓ.. 

ದೋಣಿಯೇರುವುದಷ್ಟೇ ಅಲ್ಲ

ದೋಣಿಯೇರುವುದಷ್ಟೇ ಅಲ್ಲ 

ನಡೆಸುವುದನ್ನೂ ಕಲಿತಿರಬೇಕು 
ಹರಿವಿರಬೇಕು, ಆಳ ಅಡಿ ತಾಕದಂತೆ 
ದಿಕ್ಕು ಬದಲಾಗುತ್ತಾ 
ಉಬ್ಬು ತುಂಬಿ, ಜಾರು ಧುಮುಕಿ 
ಹರಿಗೋಲು ನಿಭಾಯಿಸಿದಂತೆ 
ತಟದಿಂದ ತಟಕ್ಕೆ 
ಪಯಣದ ಪಾಠ ಕಲಿಯುತ್ತಾ 

ಬರಗಾಲದಲ್ಲಿ ತಟಸ್ಥವಾಗಿದ್ದು 
ವರ್ಷಾಕಾಲದಲಿ ಸಾವರಿಸಿಕೊಂಡು 
ಸೆಳೆತದ ಧಾಟಿಯ ಗ್ರಹಿಸಿ 
ಅಲೆಗಳ ಎತ್ತರ ಅರಿತು 
ಸುಳಿಯಿಂದ ತಪ್ಪಿಸಿಕೊಳ್ಳುತ್ತ 
ಈಜುತ್ತಾ ದಡ ಮುಟ್ಟುವುದೋ 
ಅಥವ ಮುಳುಗುವುದೋ 
ಎಲ್ಲ ಪೂರ್ವ ತಯಾರಿಯ ಚಿತ್ತ 

ನದಿಗಳು ಕೂಡುತ್ತವೆ 
ಜೋಡಿ ದೋಣಿಗಳೂ ಸಿಗುತ್ತವೆ 
ಯಾರನ್ನೋ ಹಿಂಬಾಲಿಸಿ 
ಯಾರಿಂದಲೋ ಗತಿ ಬದಲಿಸಿ 
ಯಾರನ್ನೂ ದೂರುವಂತಿಲ್ಲ,
ಹಿಂಬಾಲಕರ ಇಂಗಿತ 
ಮುನ್ನಡೆದವರ ನಿರ್ಧಾರ 
ಗುರಿ ಬದಲಿಸದಿರಲಿ ಸಾಕು 

ಎದ್ದ ಬಿರುಕು ಮತ್ತೂ ಬಿರಿದು 
ರಿಪೇರಿಗೆ ಹವಣಿಸಿದಾಗ 
ಎದೆ ಗಟ್ಟಿ ಮಾಡಿಕೊಂಡು 
ಮತ್ತಷ್ಟು ದೂರ ತೇಲುವುದೋ 
ವಿರಾಮ ನೀಡುವುದೋ 
ನಿಲ್ಲುವುದೋ, ಬೇಡವೋ 
ಗೊಂದಲದ ನಡುವೆ ಕ್ರಮಿಸಿ 
ಮುಟ್ಟುವ ಕೊನೆಯೇ ಕೊನೆಯಾಗಬಹುದು 

ನದಿ ಆಕಾಶ ಕೂಡುವ ತಾಣ 
ಔತಣಕೆ ಕೂಗಿ ಕರೆದು 
ಎಷ್ಟು ಸಮೀಪವಾದರೂ 
ಅಷ್ಟೇ ಅಂತರ ಕಾದಿರಿಸಿಕೊಂಡದ್ದು 
ಕಸಿವಿಸಿಗೆ ಕಾರಣವಾಗಿ
ಕಣ್ಣೋಟ ದೂರದ ಆಹ್ವಾನಕ್ಕೆ ಮಾತ್ರ 
ತಲೆ ಬಾಗಿ ತೇಲಿತ್ತು,
ಇದು ನಿತ್ಯದ ವ್ಯಾಖ್ಯಾನ
ಮರು ದಿನ ದಿಗಂತವೇ ದೊರೆ...

ಪ್ರೇಮ... ಪ್ರೇಮ...

ಪ್ರೇಮ... ಪ್ರೇಮ... 

ಪ್ರೇಮ... ಪ್ರೇಮ... 
ನೂರಾರು ಸಂಗತಿ ತಾನಾಗಿ 
ಬಾಯಾರಿ ನಿಂತಿವೆ ಸಾಲಾಗಿ 
ಕೈ ಜಾರಿ ಹೋಗದೆ ನೀ ನಿಲ್ಲು 
ಪ್ರೇಮ...  
ಎಲ್ಲಿಲ್ಲೂ ಕಾಣುವೆ ನಿನ್ನನ್ನೇ 
ನೆರಳಾಗ ಮಾಡುವೆ ನನ್ನನ್ನೇ 
ಬಾಳೆಲ್ಲ ಮೀಸಲು ನಿನಗೆಂದೇ 
ಪ್ರೇಮ... ಪ್ರೇಮ... 
ಅನುರಾಗ ಕರೆವಾಗ ಕೈ ಬೀಸಿ 
ದೂರ, ಇರಲಿ ಹೇಗೆ 
ಸನಿಹ, ಬರಲೇ ಹಾಗೆ.. 

ಆರಂಭವಾದಂತೆ ಹಿತವಾದ ಹಾಡು 
ನೀನಾಡೋ ಮಾತೇ ಸಂಗೀತ 
ಹೇಗಂತ ಹೇಳೋದು ಈ ಮನದ ಪಾಡು 
ಕಣ್ಣಲ್ಲಿ ನಿನ್ನ ತುಂಬುತ್ತ 
ಒಂದೊಂದು ಕ್ಷಣ ಕೂಡ ನವಿರಾಗುವಂತೆ  
ನೀ ಇದ್ದ ಕಡೆಯೆಲ್ಲ ಆನಂದ ಸಂತೆ 
ಭಾವಕ್ಕೆ ಜೀವ ನೀ ತಂದೆ... 

ಬೇರೂರಿಕೊಂಡಂತೆ ಪುಟಿದೇಳೋ ಆಸೆ 
ಹೂ ಬಿಟ್ಟ ಹಾಗೆ ಈ ವೇಳೆ 
ಹೋರಾಟ ನಡೆಸುತ್ತ ಹಗುರಾದೆ ನೋಡು 
ಬಾ ಹೂಡು ಪ್ರೀತಿ ನನ್ನಲ್ಲೇ 
ಹೃದಯಕ್ಕೆಇಳಿದಂತೆ ಜೋಪಾನವಾಗಿ 
ಕಾಪಾಡು ಮಿಡಿಯುತ್ತ ನೀ ಪ್ರೇಮಿಗಾಗಿ 
ಪ್ರಾಣಕ್ಕೆ ಪ್ರಾಣ ನೀನಾದೆ... 

ಅಲೆ ಬೇಕೆಂದಿದ್ದರೆ ಮುಳುಗಿಸಬಹುದಿತ್ತು

ಅಲೆ ಬೇಕೆಂದಿದ್ದರೆ ಮುಳುಗಿಸಬಹುದಿತ್ತು 

ಆದರದು ದಡ ತಡವಿ ಹಿಂದಿರುಗುತಿದೆ 
ನಾವು ಸುಮ್ಮನೆ ಸೆಳೆತಕ್ಕೊಳಗಾಗಬಹುದಿತ್ತು 
ಬದಲಿಗೆ ಪಾದವೂರಿ ಖುಷಿ ಪಟ್ಟೆವು 

ಮೋಡ ಕಟ್ಟಿದಷ್ಟೇ ಧಾವಂತದಲ್ಲಿ ಇಳಿದು 
ನೆಲಕೆ ಹದವಾಗಿ ಹಂಚಿಕೊಂಡಿತು ತನ್ನ 
ಬೇಡೆಂದರೂ ಕೈ ಹಿಡಿದು ಕರೆದೊಯ್ಯುತ
ಮರು ಜೋಡಣೆಯಾಗಿದೆ ಬಿರುಕು ಬಿಟ್ಟ ಮನ 

ತಪ್ಪಲಲ್ಲಿ ಹಾಳೆಯ ದೋಣಿ ಬಿಟ್ಟೆವು 
ಆದ ತಪ್ಪುಗಳ ನೆನೆದು ಕಣ್ಣೀರಿಟ್ಟೆವು 
ಬೆಟ್ಟ ಕರಗಿ ಎರಗಬಹುದಿತ್ತು ದುಃಖಕ್ಕೆ 
ಅಲ್ಲ, ಈಗ ಸಂಯಮ ಮೆರೆಯುವ ಸಮಯ 

ಹೇಗೇ ಅಪ್ಪಿದರೂ ಎದೆ ಸದ್ದು ತಟ್ಟುವುದು 
ಹಾಗೊಮ್ಮೆ ತಟ್ಟದೇ ಹೋದರೆ ಆತ್ಮಾವಲೋಕನ 
ಸಂಚರಿಸುವ ಕಣಗಳಿಂದ ಶಬ್ಧ ಉತ್ಪತ್ತಿ 
ಸ್ತಬ್ಧ ಪ್ರೇಮದ ಸಾಕ್ಷಿ ಮೌನ ವ್ಯಸನ 

ನಾವು ಬಲ್ಲವರಾದ್ದರಿಂದ ಒಬ್ಬರನ್ನೊಬ್ಬರು 
ಬಲಹೀನರಾಗಿದ್ದೇವೆ ಒಬ್ಬರಲ್ಲಿ ಮತ್ತೊಬ್ಬರು 
ನಾನೇನೆಂಬ, ನೀನೇನೆಂಬ ಗೊಂದಲವೇ 
ನಮ್ಮ ಎಚ್ಚರಿಕೆಯ ದೀಪಕ್ಕೆ ತೈಲ ರೂಪ

ನಿವಾರಿಸಿಕೊಂಡ ಕಷ್ಟಗಳು ಒಣ ಪತ್ರೆ 
ಹೊಸ ಚಿಗುರಿನೆಡೆ ಗಮನ ಹರಿಸುವ 
ಬೆಳಕು ಮೂಡುವುದು ಇನ್ನೂ ನಿಧಾನ 
ಕತ್ತಲಿನ ಕೌತುಕದ ಬುತ್ತಿಯ ತೆರೆಯುವ 

Sunday 4 October 2020

ಸೋಜಿಗವೀ ಜಗ ಕಣಕಣವೂ ಕೂಡ

ಕಂಪನು ಸೂಸುವ ಸಂಜೆಗೆಂಪನು ಹೋಲುವ ಹೂವು 

ಕಂಪನ ಮೂಡಿಸಿ ದಿಬ್ಬಣ ಸಾಗಿದೆ ದುಂಬಿಯ ಸಾಲು
ಆಟವ ಪಾಠವ ಕಲಿಸುವ ತಾಣದಿ 
ನಲಿವಿನ ಅರಿವಿನ ಸುಜ್ಞಾನ
ನೋಡುತ ನೋಡುತ ಇನ್ನೂ ತಣಿಯದೆ 
ಕಣ್ಮನವಾಗಿದೆ ತಲ್ಲೀನ 
ಗಾಳಿಯ ಧಾಟಿಗೆ ಸಪ್ಪಳ ಹಾಕಿವೆ 
ಚಿಗುರೆಲೆಗಳು ತಾವೊಂದಾಗಿ 
ತಾವೇ ಮಿಗಿಲೆನ್ನುವ ಮುಗಿಲೆಲ್ಲವೂ 
ಧರೆಗೆ ಇಳಿದವು ಮಳೆಯಾಗಿ 

ರೆಕ್ಕೆಯ ಬಡಿಯುತ ಹತ್ತಿರವಾಗುವ ಹಕ್ಕಿಯ ಹಿಂಡು 
ಹಾರಿ ಬೆಳೆಸಿವೆ ದೂರದ ಪಯಣವ ಗುಟಿಕಿಗೆಂದು 
ಸಿಕ್ಕ ಹಣ್ಣು-ಹಿಪ್ಪೆಯ ಮೆಲ್ಲುತ 
ಅವರಸವೇನೋ ಇವುಗಳಿಗೆ 
ಮತ್ತೆ ಹಾರಿ ಹೊರಟಿವೆ ಮುಂದೆ 
ನಿಲ್ಲದೆ ಎಲ್ಲೂ ಅರೆಗಳಿಗೆ 
ತಾಯಿಯ ಮಡಿಲಿನ ಅಕ್ಕರೆ ಮುಂದೆ 
ನಾಕವೇ ನಾಚಿದೆ ಅನಿಸುತಿದೆ 
ಎಲ್ಲ ಬಂಧಕೂ ಬಣ್ಣವ ಹಚ್ಚುವ
ಸಂಬಂಧದ ಸವಿ ನಾ ಸವಿದೆ... 

ಸೋಜಿಗವೀ ಜಗ ಕಣಕಣವೂ ಕೂಡ
ಆಲಿಸುವ ಸುಖ ಇನಿದನಿಯ ಹಾಡ 
ಹೆಸರಿಲ್ಲದ ದೇವರ ಕುಸುರಿ
ಸುಂದರ ಸೊಬಗಿನೈಸಿರಿ 

ಉರುಳುವ ಮರಗಳ ಅನುಭವ ಪಡೆದು ನಿಂತಿವೆ ಸಾಲು 
ಅಂಜಿಕೆಯಿಲ್ಲದೆ ಹೆಮ್ಮರವಾಗಿಸೋ ಆಳದ ಬೇರು 
ಹೆಜ್ಜೆಯನಿಟ್ಟೆಡೆಯೆಲ್ಲವೂ ಕಾಲಡಿ 
ಸಿಕ್ಕುವ ಸಾವಿರ ಗುರುತುಗಳು 
ಯಾವುದೇ ದಿಕ್ಕನ್ನು ಹಿಡಿದರೂ 
ತಪ್ಪದೆ ಕೂಡುವ ಕಾಲು ದಾರಿಗಳು 
ಕಾರಣ ನೀಡದೆ ನಗುವ ಹೂಗಳು 
ಜೀವನ ಪಾಠವ ಕಲಿಸುತಿವೆ 
ಧ್ಯಾನಿಸಿ ಸಿದ್ಧಿಸುವ ಸುಖವೊಂದನು
ಕಾನನವು ದಿನ ಕರುಣಿಸಿದೆ 

ದೂರದಿ ಗೂಡನು ಬಿಟ್ಟು ಹಾರಿವೆ ಹಕ್ಕಿಯ ಹಿಂಡು
ಬೇಟೆ ಬಲೆಗಳ, ಶರ ಪಂಜರಗಳ/ಪುಂಖಗಳ ಗೆದ್ದು ಬಂದು 
ಹೊತ್ತು ಹೊತ್ತಿನ ಹಸಿವನು ನೀಗಲು
ಸಿಕ್ಕ ಹಣ್ಣನು ಮೆಲ್ಲುತಲಿ
ಪಿಕ್ಕೆ ಆದರೂ ಬಿತ್ತಿ ಪ್ರಾಣವ
ಮತ್ತೆ ಚಿಗುರಿಗೆ ದೂಡುತಲಿ 
ಬಾನುಲಿಯ ಆಲಿಸುತಾ ತೂಗಿವೆ
ಮೈ ಮರೆತ ತರುಲತೆಯಿಲ್ಲಿ
ಗಾಳಿಯ ಕೆನ್ನೆಗೆ ರೆಕ್ಕೆಯ ಸವರುತ
ರಂಗೇರಿದೆ ಬಾಂದಳದಲ್ಲಿ

ಝುಳು ಝುಳು ಹರಿಯುತ ಧುಮುಕುವ ನೀರು ದಣಿಯದೇ ಎಲ್ಲೂ?
ಬಾಯಾರಿದ ನೆಲ ತೆನೆ ತೊನೆದಾಡಿಸಿ ಮುಡಿದಿದೆ ನೆಲ್ಲು 
ಇರುವುದ ಹಂಚುವ ಇಲ್ಲದ ಪಡೆಯುವ 
ಸಮತೋಲನವಿದೆ ಈ ಜಗದಿ 
ಬೆರಗಾಗಿಸುವ ಹಕ್ಕಿಗಳಿಂಚರ  
ವೈವಿಧ್ಯತೆಗಳ ಸಂಗಮದಿ  
ಪಂಜರ ದಾಟಿದ ಮನಸುಗಳೆಲ್ಲವೂ 
ಹಾರಿವೆ ಸುಂದರ ನಗುವಲ್ಲಿ 
ಗಾಳಿಯ ಕೆನ್ನೆಗೆ ರೆಕ್ಕೆಯ ಸವರುತ
ರಂಗೇರಿದೆ ಬಾಂದಳದಲ್ಲಿ

ಸೋಜಿಗವೀ ಜಗ ಕಣಕಣವೂ ಕೂಡ
ಆಲಿಸುವ ಸುಖ ಇನಿದನಿಯ ಹಾಡ 
ಹೆಸರಿಲ್ಲದ ದೇವರ ಕುಸುರಿ
ಸುಂದರ ಸೊಬಗಿನೈಸಿರಿ 

ನಾನೇ ನೀನಾಗಿ

ನಾನೇ ನೀನಾಗಿ 

ನಿನ್ನಲ್ಲೀಗ ನನ್ನ ಕಾಣೋ 
ಆಸೆ ಉಕ್ಕಿ ಬಂದಿದೆ 
ಹೇಳೋಕೆ ಮಾತೇ ಬಾರದೆ 
ಹೀಗಾದೆ ನೋಡು ಇತ್ತೀಚೆಗೆ 
ನೀನೇ ಬೇಕೆಂದು
ಬಿಟ್ಟು ಹೋದಂತೆ 
ಈ ಜೀವ ನಿನ್ನ ಹಿಂದೆ ಸೋಲುತ 
ಈ ಪ್ರೀತಿ ಹುಚ್ಚು ಖಂಡಿತ 
ಬೇರೇನೂ ಬೇಡ ಈ ಬಾಳಿಗೆ 

ಹೊರಹೊಮ್ಮಿಕೊಂಡ ಈ ಹಾಡನ್ನು 
ಬಲೆಯಾಗಿ ಬೀಸುತ ನಿನ್ನನ್ನು 
ಸೆಳೆದುಕೊಳ್ಳೋ ಆಸೆ ನನ್ನಲ್ಲಿ 
ಇನ್ನಷ್ಟು ಸನಿಹ ನಾ ಬರುವಂತೆ 
ಬೆರಳಾಗಿ ಮಾಡುವೆ ನೆರಳನ್ನು 
ಕಳೆದೇ ಹೋದೆ ನಿನ್ನ ಗುಂಗಲ್ಲಿ 

ಇರಾದೆಯ ನಾ ಹೇಳುವೆ 
ಇಶಾರೆಗೆ ನೀ ಸಿಕ್ಕರೆ 
ಹೇಗಾದರೂ ಪೂರೈಸೆಯಾ ವಿನಂತಿಯ 
ವಿನೂತನ ವಿಹಾರಕೆ 
ವಿಶೇಷತೆ ನೀ ಇದ್ದರೆ 
ವಿಚಾರಿಸು ಬೇಕಾದರೆ ಈ ಪ್ರೀತಿಯ 
ನವಿರಾದ ಸಂಗತಿ ಒಂದು 
ಇನ್ನೊಂದು, ಮತ್ತೊಂದು
ಸಾಗೋದೇ ತಿಳಿಯದು ಏಕೋ 
ಈ ಸಮಯ ಅನ್ನೋದೆಂದೂ ಹೀಗೇನೆ .. ಓ... 

ಸಂಗಾತಿಯೇ, ಸಂಗಾತಿಯೇ
ಸಂಜೀವಿನಿ ಸ್ವರೂಪಿಯೇ 
ಮುದ್ದಾಡು ಬಾ ಸದ್ದಿಲ್ಲದೆ ನೀನಾಗಿಯೇ 
ಕಾರಂಜಿಯು ಚಿಮ್ಮುತ್ತಿದೆ
ಕಣ್ಣಂಚಲಿ ಕಾಣುತ್ತಿದೆ
ಮುಂಗೋಪವ ನೀ ಬಿಟ್ಟು ಬಾ ಸಂಪ್ರೀತಿಯೇ
ತೆರೆದಿಟ್ಟ ಪುಸ್ತಕ ನಾನು 
ನಿನ್ನೆದುರು ಎಂದೆಂದೂ 
ತೋಚಿದ್ದ ಗೀಚು ನೀ ಅಲ್ಲಿ 
ಬೇಕಾದ ಹಾಗೆ ತಿದ್ದು ನನ್ನನ್ನು.. ಓ... 

ಮಾತು ಕಲಿತ ಮಗುವ, ಆ ಮೊದಲ ತೊದಲು ನುಡಿಯ ಹಾಗೆ

ಮಾತು ಕಲಿತ ಮಗುವ

ಆ ಮೊದಲ ತೊದಲು ನುಡಿಯ ಹಾಗೆ
ದಾಟಿ ಬಂತು ಕೊರಳ
ಈ ಮೊದಲು ಬಾರದುಳಿದ ಪದವೇ
ನಾಳೆಗಳ ನೇಯುವಾಸೆ ಮನದಿ
ಎಳೆ ಎಳೆಯ ಬಿಡಿಸಿ ವಾಲು ಬಳಿಗೆ
ಸಾಲು ದೀಪ ಬೆಳಗಿ  
ಪೋಣಿಸುವೆ ಜೀವವನ್ನು ಜೊತೆಗೆ
ಅತಿಶಯವೇsss....
ಕಾಡುವಂಥ ಸಖಿಯೇ 
ನೀನಿರದೆ ಬಾಳಲೆಂತು ಸರಿಯೇ 
ಇದು ಒಲವೇssss? ಓ... 

ತಾನ ಧೀಮ್ ತನನ...

ದಾಳಿ ಆಗುತಲೇ
ಸೋತು ನಿಲ್ಲುವೆನು
ಖಾಲಿ ಕೈಗಳನು ಚಾಚುತ
ಪ್ರೇಮ ಬಾಣಕಿದೋ 
ಬೇಡಿ ಕಾಯುವೆನು  
ಗಾಯವುಳಿಯುವುದು ಶಾಶ್ವತ 
ತಾನಾಗೇ ಬಳಿ ಬಂದು 
ಮುಗಿಲೊಂದು ಕರಗುತ್ತ
ಮನಸನ್ನು ಹಸಿ ಮಾಡಿ ಹೊರಟಾಗಿದೆ 
ಬಿಗಿಯಾದ ಎದೆಯಲ್ಲಿ
ಹೆಸರನ್ನು ಹರಿಬಿಟ್ಟು 
ಕರೆವಾಗ ಉಸಿರಾಟ ಹಗುರಾಗಿದೆ 

ನೇರವಾಗಿ ವಿಷಯ 
ಹೇಳಲು ಬಂದಂತೆ ಒಳ್ಳೆ ಸಮಯ  
ಬೀರುತಿರೆ ಹೀಗೆ ಚಂದ ನಗೆಯ 
ನಂತರವೇ ಮಾತು ಕಲಿತ ಹೃದಯ 
ಮಿಡಿಯುತಿದೆ ...

ಸೂತ್ರವಿಲ್ಲದೆಯೇ 
ಆದ ಕೈಸೆರೆಗೆ 
ಪ್ರೀತಿಯೆಂದು ಹೆಸರಾಯಿತಾ?
ರಾತ್ರಿ ಪಾಳಿಯನು 
ಮೀರಿ ಬಂದಿರುವೆ 
ಕಣ್ಣ ಅಂಚಿನಲಿ ಕೂರುತ 
ತಡ ಮಾಡಿ ಬರುವಾಗ 
ದಡ ಸೇರುವ ನೋವು 
ಕಣ್ಣೀರ ತರಿಸೋದು ಖುಷಿಗಾಗಿಯೇ 
ಮುಂಗೋಪ ಕ್ಷಣದಲ್ಲೇ 
ಮಂಜಂತೆ ಸರಿಸುತ್ತ 
ಹೊಸತಾಗಿ ಎದುರಾದೆ ನಿನಗಾಗಿಯೇ 

ಸಾರಿ ಹೇಳುವೆನು ನಾ
ನೀ ನನಗೆ ಜೀವಕಿಂತ ಮಿಗಿಲು 
ಹಾಡುವೆನು ಭಾವ ತುಂಬಿ ಜೊತೆಗೆ 
ಮೌನದ ಆ ತಂತಿ ವೀಟೋ ಬದಲು 
ಅನುಭವಿಸೇ... 

ಮನಸೇ ಬಳಸು

ಮನಸೇ ಬಳಸು

ಉಸಿರಾದಂತೆ ಈ ಜೀವಕೆ 
ಒಲವ ಹರಿಸು 
ಸುಧೆಯ ಹಾಗೆ ಎದೆಯಾಳಕೆ 
ಕರಗುವೆ ಮೇಣದ ರೀತಿ 
ಮಾಯದ ನೋಟ ನೀನು ಬೀರುತಿರಲು 
ಅನುದಿನ ರಾಗವೇ ತಾನೇ 
ಮೇರು ಅನುರಾಗ ಹಂಚಿಕೊಳ್ಳುತಿರಲು 
ಈ ಬರಿದಾದ ಬಾಳಲ್ಲಿ ವರವಾಗಿ ಬಂದೆ ನೀನು

ಮನಸೇ ಬಳಸು
ಉಸಿರಾದಂತೆ ಈ ಜೀವಕೆ 
ಒಲವ ಹರಿಸು 
ಸುಧೆಯ ಹಾಗೆ ಎದೆಯಾಳಕೆ 

ಮುಗಿಯದsss ಸುಂದರ ಕನಸು ನೀನಾದೆ 
ರಮಿಸುವsss ಸಂಗೀತದ ಮೊದಲ ಸ್ವರವಾದೆ  
ಗಂಧವ ತೇಯುವ, ಬಣ್ಣವ ತೂರುವ 
ನಿನ್ನ ಸಹಚಾರದ ಸವಿ ಮಧುರಾತಿ ಮಧುರವೇ 

ಮನಸೇ ಬಳಸು
ಉಸಿರಾದಂತೆ ಈ ಜೀವಕೆ 

ತೊಡಿಸುವೆsss ಹೊಸ ರೂಪವ ನಿತ್ಯ ದಿನಚರಿಗೆ   
ಬರೆಯುವsss ಖುಷಿಯ ಸಾಲು ಸಾರಿ ಕೊನೆವರೆಗೆ 
ಮರುಗಿದ ಹಣತೆಯ, ಬೆಳಗಿಸೋ ಮಮತೆಯ
ಪ್ರತಿ ಕ್ಷಣವನ್ನೂ ನವಿರಾದ ನೆನಪಾಗಿ ಮಾಡೋ ಆಸೆ 

ಮನಸೇ ಬಳಸು
ಉಸಿರಾದಂತೆ ಈ ಜೀವಕೆ 
ಒಲವ ಹರಿಸು 
ಸುಧೆಯ ಹಾಗೆ ಎದೆಯಾಳಕೆ 
ಕರಗುವೆ ಮೇಣದ ರೀತಿ 
ಮಾಯದ ನೋಟ ನೀನು ಬೀರುತಿರಲು 
ಅನುದಿನ ರಾಗವೇ ತಾನೇ 
ಮೇರು ಅನುರಾಗ ಹಂಚಿಕೊಳ್ಳುತಿರಲು 
ಈ ಬರಿದಾದ ಬಾಳಲ್ಲಿ ವರವಾಗಿ ಬಂದೆ ನೀನು

ಮೊದಮೊದಲ ಪರಿಚಯಕೆ

ಮೊದಮೊದಲ ಪರಿಚಯಕೆ 

ಮಳೆ ಬರುವ ಅನುಭವವೇ 
ಕರೆ ಬಂದ ಹಾಗೆ ಬಿರಿದಂತಿದೆ 
ಇದೋ ಪ್ರೇಮದ ಮಲ್ಲಿಗೆ 

ಮೊದಮೊದಲ ಪರಿಚಯಕೆ 
ಮಳೆ ಬರುವ ಅನುಭವವೇ 

ಇದುವರೆಗೆ ಜರುಗಿರದ ಸಡಗರವೇ ಮನದೊಳಗೆ 
ಮಣಿಸುತಲೇ ತಣಿಸುತಿರು ಒಲವಿಗೆ ನಾ ಸಿಲುಕಿರುವೆ (೨)
ಕಾಯುವಾಗಲೇ ಎಲ್ಲ ಸುಂದರ  
ಮೌನದಲ್ಲಿಯೇ ನೀಡು ಉತ್ತರ 
ಪದಗಳಿಗೆ ನಿಲುಕದಿರು ಕವಿತೆಯೊಳು.. 

ಮೊದಮೊದಲ ಪರಿಚಯಕೆ 
ಕರೆ ಬಂದ ಹಾಗೆ ಬಿರಿದಂತಿದೆ 
ಇದೋ ಪ್ರೇಮದ ಮಲ್ಲಿಗೆ 

ಮೊದಮೊದಲ ಪರಿಚಯಕೆ   

ಗರಿಗೆದರಿ ಜಿಗಿಯುತಿವೆ ಎದೆಗಡಲ ಅಲೆಗಳಿವು 
ತಡೆಯದಿರು ಮುಳುಗುವೆನು ನೋಟದ ಆ ಸುಳಿಯೊಳಗೆ (೨)
ಮಾತು ಮಾತಿಗೂ ಮಾಯವಾಗುವೆ 
ಎಲ್ಲೇ ಹೋದರೂ ನಿನ್ನ ಕಾಣುವೆ 
ಕವಿದಿರುವೆ ಕಿರುನಗೆಯ ಕೆಣಕುತಲಿ... 

ಮೊದಮೊದಲ ಪರಿಚಯಕೆ 
ಮಳೆ ಬರುವ ಅನುಭವವೇ 
ಕರೆ ಬಂದ ಹಾಗೆ ಬಿರಿದಂತಿದೆ 
ಇದೋ ಪ್ರೇಮದ ಮಲ್ಲಿಗೆ 

ಎಲ್ಲ ಕಣ್ಣಿನ ಬಲೆಯನ್ನು ದಾಟಿ

ಎಲ್ಲ ಕಣ್ಣಿನ ಬಲೆಯನ್ನು ದಾಟಿ 

ಏಕೋ, ಅದು ಏಕೋ, ನನಗೇಕೋ ಸಿಕ್ಕಿಳು ಈ ಚೆಲುವೆ?
ಈ ಒಲವೊಂದು ಸುಳಿಯಂತೆ 
ಬಿಡುಗಡೆಯೆಂದೂ ಸಿಗದಂತೆ 
  ಎಲ್ಲ ಕಣ್ಣಿನ ಬಲೆಯನ್ನು ದಾಟಿ 
ಏಕೋ, ಅದು ಏಕೋ, ನನಗೇಕೋ ಸಿಕ್ಕಿಳು ಈ ಚೆಲುವೆ?
ಈ ಒಲವೊಂದು ಸುಳಿಯಂತೆ 
ಬಿಡುಗಡೆಯೆಂದೂ ಸಿಗದಂತೆ 
  ಎಲ್ಲ ಕಣ್ಣಿನ ಬಲೆಯನ್ನು ದಾಟಿ 
ಏಕೋ, ಅದು ಏಕೋ, ನನಗೇಕೋ ಸಿಕ್ಕಿಳು ಈ ಚೆಲುವೆ?


ಕಾರಣವಿರದೆ, ಹಾರುವ ಕುರುಳು
ನನ್ನ ಕೂಗುವ ಪರಿಯಾ, ನನ್ನ ಕೂಗುವ ಪರಿಯಾ?
ಹೂಗರಿಯಂತೆ, ಅರಳುವ ಮುಗುಳು 
ನಿನ್ನ ಒಪ್ಪಿಗೆ ಸಹಿಯಾ, ನಿನ್ನ ಒಪ್ಪಿಗೆ ಸಹಿಯಾ?
ಬಿಟ್ಟು ಕೊಡದೆ ಗುಟ್ಟನು ಹೆಣೆದು, ಬಿಡಿಸೆ ಹೇಳುವೆ 
ಸರಿಯಾ, ಸರಿಯಾ, ಸರಿಯಾ
ಹತ್ತು ಹಲವು ರೂಪವ ಪಡೆದು, ಎದುರುಗೊಳ್ಳುವೆ 
ಸರಿಯಾ, ಸರಿಯಾ, ಸರಿಯಾ

ಈ ಒಲವೊಂದು ಸುಳಿಯಂತೆ 
ಬಿಡುಗಡೆಯೆಂದೂ ಸಿಗದಂತೆ 
ಎಲ್ಲ ಕಣ್ಣಿನ ಬಲೆಯನ್ನು ದಾಟಿ 
ಏಕೋ, ಅದು ಏಕೋ, ನನಗೇಕೋ ಸಿಕ್ಕಿಳು ಈ ಚೆಲುವೆ 

ಕನ್ನಡಿ ಎದುರು, ನಿನ್ನದೇ ನಿಲುವು
ನೀನೇ ನನ್ನ ಗುರುತಾದೆ, ನೀನೇ ನನ್ನ ಗುರುತಾದೆ
ಪ್ರೇಮದ ತಳಿರು, ಚಿಗುರುವ ವೇಳೆ 
ನೋಡು ಹೇಗೆ ಬದಲಾದೆ, ನೋಡು ಹೇಗೆ ಬದಲಾದೆ 
ಬಾಕಿ ಉಳಿದ ಮಾತುಗಳನ್ನು ಹೇಳಿ ಮುಗಿಸುವೆ 
ಮನದ ಸನಿಹ ಸಿಗೆಯಾ 
ರೇಖೆಯ ಎಳೆದು ದಾಟದ ಹಾಗೆ ತಡೆಯನೊಡ್ದುತಾ 
ಸೆರೆಯ ಮಾಡಿ ಬಿಡಿಯಾ 

ಈ ಒಲವೊಂದು ಸುಳಿಯಂತೆ 
ಬಿಡುಗಡೆಯೆಂದೂ ಸಿಗದಂತೆ 
ಎಲ್ಲ ಕಣ್ಣಿನ ಬಲೆಯನ್ನು ದಾಟಿ 
ಏಕೋ, ಅದು ಏಕೋ, ನನಗೇಕೋ ಸಿಕ್ಕಿಳು ಈ ಚೆಲುವೆ 

ತಪ್ಪು ತಿಳಿಯಬೇಡಿ ನನ್ನ ಹೀಗೆಂದೆ ಎಂದು

ತಪ್ಪು ತಿಳಿಯಬೇಡಿ ನನ್ನ ಹೀಗೆಂದೆ ಎಂದು  

ಅಡುಗೆ ವೇಳೆ ಮಡದಿ ಮನವ ಕಡದ ಬೇಡಿ ಎಂದೂ 
ಉಪ್ಪು ಚೂರು ಹೆಚ್ಚು ಸುರಿಯಬಹುದು ಕೋಪ ಬಂದು 
ಸಬೂಬು ನೀಡಬಹುದು ಅದು ಕಣ್ಣೀರು ಎಂದು 

ಬಿಟ್ಟು ಕೊಡಿ ವಾದ ಸಂವಾದ ಏನೇ ಇರಲಿ 
ಕೊಡಿಸಿ ಬಿಡಿ ಕೇಳಿದೆಲ್ಲವನ್ನೂ ಏನೇ ಬರಲಿ 
ಇಲ್ಲವೆನ್ನುವ ಮುನ್ನ ಆಚೆ ಈಚೆ ಗಮನಿಸಿ 
ಯಾವುದೇ ಆಯುಧ ಕೈಗೆ ಸಿಗದೇ ಇರಲಿ 
 
ತಪ್ಪು ತಿಳಿಯಬೇಡಿ ನನ್ನ ಹೀಗೆಂದೆ ಎಂದು  
ಅಡುಗೆ ವೇಳೆ ಮಡದಿ ಮನವ ಕಡದ ಬೇಡಿ ಎಂದೂ 

ನೆನಪಿಡಿ ನಮ್ಮ ನಿರ್ಧಾರ ನಮ್ಮದಲ್ಲ 
ಹಾಗೆಂದು ಎಲ್ಲವೂ ಇವರ ಕೈಯ್ಯಲಿಲ್ಲ 
ಸುಳ್ಳಿನಲ್ಲಿ ಪಳಗಬೇಕು ಸತ್ಯವೆಲ್ಲ ವ್ಯರ್ಥ 
ಮೌನ ವಹಿಸಿದಾಗ ಅದಕೆ ಸಾವಿರಾರು ಅರ್ಥ 

ತಪ್ಪು ತಿಳಿಯಬೇಡಿ ನನ್ನ ಹೀಗೆಂದೆ ಎಂದು  
ಅಡುಗೆ ವೇಳೆ ಮಡದಿ ಮನವ ಕಡದ ಬೇಡಿ ಎಂದೂ 

ನಕ್ಕು ಮಾತನಾಡಿ ವಿಷಯ ಆಳ ಹೊಕ್ಕುವಂತೆ 
ಜಾರಿಕೊಳ್ಳಿ ಬೆಣ್ಣೆಯಿಂದ ಕೂದಲೆಳೆಯುವಂತೆ 
ಸಿಟ್ಟು ಮಾಡಿಕೊಳ್ಳೋ ಮುನ್ನ ಕತೆಯನೊಂದ ಕಟ್ಟಿ 
ಎಚ್ಚರ ನಿಮ್ಮ ಸೊಲ್ಲು ತಿರುಗು ಬಾಣದಂತೆ 

ತಪ್ಪು ತಿಳಿಯಬೇಡಿ ನನ್ನ ಹೀಗೆಂದೆ ಎಂದು  
ಅಡುಗೆ ವೇಳೆ ಮಡದಿ ಮನವ ಕಡದ ಬೇಡಿ ಎಂದೂ 

ಮಾತು ಕೊಡುವ ಮುನ್ನ ಒಮ್ಮೆ ಮುರಿದ ಮಾತ ಕೇಳಿ 
ಹತ್ತು ಹಲವು ಆಯ್ಕೆಯಿದ್ದೂ ಆಯ್ದುಕೊಂಡು ಬೇಲಿ 
ದಾಟಿ ಬರಲು ಸಂಚು ಹೆಣೆದು ಬಿದ್ದ ಹೆಣಗಳೆಷ್ಟೋ 
ನಮ್ಮ ನಿಮ್ಮ ಲೆಕ್ಕ ಅವರ ಸಾಲು ಸೇರದಿರಲಿ 

ತಪ್ಪು ತಿಳಿಯಬೇಡಿ ನನ್ನ ಹೀಗೆಂದೆ ಎಂದು  
ಅಡುಗೆ ವೇಳೆ ಮಡದಿ ಮನವ ಕಡದ ಬೇಡಿ ಎಂದೂ 

ಅವರು ಕೆಟ್ಟವರು ಎಂದು ಅನಿಸದಿರಲಿ ಅಷ್ಟೇ 
ನಾವು ಒಳ್ಳೆಯವರ ಹಾಗೆ ನಟಿಸಬಾರದಷ್ಟೇ 
ಎಷ್ಟೇ ಕಹಿಯ ಉಂಡರೂ ಕೊನೆಗೆ ಎಲ್ಲ ಸಿಹಿಯೇ 
ನೆನಪುಗಳ ನೆನೆದು ನಗಲು ಮರೆಯಬಾರದಷ್ಟೇ 

ಮುಂಬಾಗಿಲಿಗೆ ಕಣ್ಣಿರಿಸಿ

ಮುಂಬಾಗಿಲಿಗೆ ಕಣ್ಣಿರಿಸಿ 

ನಾ ಕಾದೆ ನಿನ್ನ ಬರುವಿಕೆಗೆ 
ಬಾರದೆ ನೀ ಮನ ಭಾರದಲಿ 
ಉಳಿಯುವುದಾದರೂ ಹೇಗೆ?
ತಂಗಾಳಿಯನು ತಡೆದಿರಿಸಿ 
ತುಸು ತಡವಾಗಿಸುವ ಕೋರಿಕೆಗೆ 
ಒಲ್ಲದೆ ತಾನು ಬೀಸಿ ಸಾಗಿತು 
ಒಲವೆಂಬುದೂ ಹೀಗೇ
ಬಾನೆತ್ತರ ಕನಸನು ದಾಟಿ
ಬಾ ಹತ್ತಿರ ಬದುಕಿಸಲೆಂದು
ನೀ ನೀಡುವುದಾದರೆ ಅದೇ ಉತ್ತರ
ಪ್ರಶ್ನಿಸದಿರು ಹಾಗೆ!

ಹೊಂಗನಸಿನ ಮುಂಜಾವಿನಲಿ 
ನವ ತೇಜಸ್ಸನ್ನು ಸುರಿಸುವ ನಿನ್ನ 
ಹೇಗಾದರೂ ವಶವಾಗಿಸಿಕೊಳ್ಳುವ 
ಹಂಬಲ ಇಬ್ಬನಿಗೆ 
ವಿಂಗಡಿಸುತ ಉತ್ಸಾಹದಲಿ 
ಉಗುರೆಲ್ಲಕೂ ಬಳಿದ ಬಣ್ಣದಲಿ 
ಮರೆಸಿಡುತ ನಿನ್ನ ಹೆಸರ ಸಿಗೋ 
ಖುಷಿ ನನ್ನೊಬಳಿಗೇ 
ಸಾರಂಗಿಯ ಸೋಕುತ ಬಿಲ್ಲು 
ಬೆರಳಾಡಿಸಿ ನುಡಿಸುತ ನಿಲ್ಲು 
ಈ ಬಿಗಿಮೌನವ ಮುರಿಯುವ ಸಾಹಸಿ 
ನೀನೊಬ್ಬನೇ ತಾನೆ!

ನೂಪುರದೊಳ ಇಂಚರದಲ್ಲಿ 
ಪುಟಿದು ಸಂಚರಿಸುವೆ ನನ್ನೊಳಗೆ 
ನೀ ಹಬ್ಬುವೆ ಅಬ್ಬರವಿಲ್ಲದೆ 
ಹಬ್ಬದ ಸಂಭ್ರಮ ನನ್ನಗೆ 
ಬಾನುಲಿಯಲಿ ಬಂದೆರಗುವ ಆ 
ನಿನ್ನೊಲವಿನ ಸಂದೇಶವ ಪಡೆದೆ 
ನಾಚಿಕೆಯ ಮರೆಸಿಡಲಾಗದೆ 
ನಲಿಯುವೆ ನೈದಿಲೆ ಹಾಗೆ 
ಆರಂಭದ ಹಾರಾಟವನು 
ಮುಂದುವರಿಸುವ ಆಸೆಯಲಿ
ಜಿಗಿಯುವೆ ಹೃದಯವ ಅಂಗೈಲಿರಿಸುತ 
ನಿನಗೊಪ್ಪಿಸಲೆಂದೇ.. 

ಬಣ್ಣವುಟ್ಟ ಬಾನಿನತ್ತ

ಬಣ್ಣವುಟ್ಟ ಬಾನಿನತ್ತ 

ಕಣ್ಣ ನೆಟ್ಟು ನೋಡಿ ನಿಂತರೆ 
ಏನೋ ವಿನೋದ 
ಸಂಜೆಗೆಂಪಿನಂತೆ ನನ್ನ 
ತುಂಬಿಕೊಂಡು ನೀನು ನಕ್ಕರೆ 
ತಾನೇ ನಿನಾದ 
ಬಾ ಪ್ರೇಮದ ಆಕಾರವ 
ನೀ ನೀಡಿ ನೋಡು 

ಬಣ್ಣವುಟ್ಟ ಬಾನಿನತ್ತ 
ಕಣ್ಣ ನೆಟ್ಟು ನೋಡಿ ನಿಂತರೆ 
ಏನೋ ವಿನೋದ 

ಕೂಡುವ ಮುಳ್ಳು ದೂರವಾಗಿ 
ಕಾಲವ ಬೇಡಿದೆ ನಿಲ್ಲಲೆಂದು 
ಬೀಸುವ ಗಾಳಿ ಹೊತ್ತು ಹೋದ
ಗಂಧದ ಮಾದರಿ ಯಾರಿಗೆಂದು?
ಸ್ವೀಕಾರಕೆ ತಯಾರಿ 
ನಡೆಯುತ್ತಿದೆ ಈ ವೇಳೆ 
ಇನ್ನಷ್ಟು ಕಾಯೋ ಶಿಕ್ಷೆಯೇ?.. 

ಬಣ್ಣವುಟ್ಟ ಬಾನಿನತ್ತ 
ಕಣ್ಣ ನೆಟ್ಟು ನೋಡಿ ನಿಂತರೆ 
ಏನೋ ವಿನೋದ 

ಗಾಯವ ಮಾಡೋ ಹೂವಿನಂತೆ 
ಏತಕೆ ಸೆಳೆಯುವೆ ನನ್ನ ಹೀಗೆ?
ದೂರವ ಮಾಡೋ ತೀರವೇಕೆ  
ಕೂಡುತ ಸಾಗುವ ಅಲೆಯ ಹಾಗೆ 
ಹೋರಾಟದ ಈ ಯಾನ 
ನಿನ್ನಿಂದಲೇ ಸಂಪೂರ್ಣ 
ಇನ್ನೇಕೆ ಹೇಳು ಸಂಶಯ

ಬಣ್ಣವುಟ್ಟ ಬಾನಿನತ್ತ 
ಕಣ್ಣ ನೆಟ್ಟು ನೋಡಿ ನಿಂತರೆ 
ಏನೋ ವಿನೋದ 
ಸಂಜೆಗೆಂಪಿನಂತೆ ನನ್ನ 
ತುಂಬಿಕೊಂಡು ನೀನು ನಕ್ಕರೆ 
ತಾನೇ ನಿನಾದ 
ಬಾ ಪ್ರೇಮದ ಆಕಾರವ 
ನೀ ನೀಡಿ ನೋಡು 

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...