Tuesday, 29 October 2013

ಮಧುರ ಮೊದಲಿನ ಮಾಯೆ !!

ಆಕೆಯನ್ನ ಮಾತನಾಡಿಸಲೇಬೇಕು!! ಎಂಬ
ಕಲ್ಪನೆಯೇ ವಿಶೇಷವಾಗಿತ್ತು 
ಮಾತನಾಡಿಸಿ ಆದ ಪರಿಣಾಮ
ಕಲ್ಪನೆಗೂ ಎತ್ತರ, ಆಳ, ವಿಸ್ತಾರ

ಅದ್ಯಾವುದೋ ದಟ್ಟ ಅಲೆಯೊಂದು
ದಿಢೀರನೆ ಹಾರಿ, ಮೈ ಹೊದ್ದು
ನಿಮಿಷವಾದರೂ ಉಸಿರಾಡಗೊಡದೆ
ಆನಂತರ ಜೀವದಾನ ಕೊಟ್ಟಂತೆ ಭಾಸ

ಕಣ್ಣುಗಳು ಥೇಟು ನಾ ಅನಿಸಿದಂತೆಯೇ
ಈ ತುದಿಯಿಂದಾತುದಿ, ದಿಗಂತಗಳ ವ್ಯಾಪ್ತಿ
ಅಲ್ಲಲ್ಲಿ ವಿಶ್ರಮಿಸಿ ಪಯಣಿಸಬೇಕಾಗಿತ್ತು
ಮುಟ್ಟಲು ಕೊನೆಯನ್ನ ಮೊದಲಿಂದ ಬೆಳೆಸಿ

ಮಂದಹಾಸವ ಬೀರಿ ಜಗ್ಗಿದಳು ತುಟಿಯ
ಕೆನ್ನೆ ಹಾದು ಬರಲು ಮೂಗನ್ನು ಬಣ್ಣಿಸಿ
ಗುಳಿಯೊಳಗೆ ಸಿಲುಕಿಸಿ ಒದ್ದಾಡಿಸಿದಳೆನ್ನ
ಪದಗಳಿಗೆ ಮತ್ತಷ್ಟು ದಣಿವನ್ನು ಉಣಿಸಿ

ಮುಖ ಮುದ್ರೆಯೊಂದು ಕೆತ್ತಿಟ್ಟ ಕಲಾಕೃತಿ
ನಾನೊಬ್ಬ ಮಾಮೂಲಿ ಹೊಗಳು ಬಂಟ
ಕೆಲವನ್ನು ಮಾತ್ರವೇ ಬಣ್ಣಿಸಿದೆ, ಮಿಕ್ಕವ
ಮನದೊಳಗೆ ಬೆಚ್ಚಗೆ ಆಸ್ವಾದಿಸುವ ತುಂಟ

ಅವಸರದ ಅವಲೋಕನದಲಿ ಮೆತ್ತಿತ್ತು
ಅವಳ ಕಣ್ಣಂಚಿನ ಕಾಡಿಗೆಯ ಕಪ್ಪು
ಗುರುತಾಗಿಸಿದೆ ದಿನಚರಿಯ ಆ ದಿನಕೆ
ಪುಟದ ಪಾಲಿಗೂ ಸಿಕ್ಕಿದಂತಾಯ್ತು ಹುರುಪು !!

                                           -- ರತ್ನಸುತ 

1 comment:

  1. wow! loved it! lovely description of meeting a beautiful girl for first time ....

    "ಮುಖ ಮುದ್ರೆಯೊಂದು ಕೆತ್ತಿಟ್ಟ ಕಲಾಕೃತಿ
    ನಾನೊಬ್ಬ ಮಾಮೂಲಿ ಹೊಗಳು ಬಂಟ
    ಕೆಲವನ್ನು ಮಾತ್ರವೇ ಬಣ್ಣಿಸಿದೆ, ಮಿಕ್ಕವ
    ಮನದೊಳಗೆ ಬೆಚ್ಚಗೆ ಆಸ್ವಾದಿಸುವ ತುಂಟ" Super lines...

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...