Tuesday 29 April 2014

ಮನಸಿಗೂ ಮನಸಾಗಿ

ನಿಜದಲ್ಲಿ ಸುಳ್ಳೊಂದ
ಹುಡುಕುವ ಬರದಲ್ಲಿ
ಸುಳ್ಳಿನ ಮೌಲ್ಯವ ಹೆಚ್ಚಿಸೋದೇ?
ನೀ ನನ್ನ ಗುಟ್ಟಾಗಿ
ಹುಡುಕಾಡುವ ವೇಳೆ
ರಟ್ಟಾದ ನಾ ನಿನಗೆ ಕಾಣದಾದೆ!!

ಭಯದಲ್ಲಿ ಬಲವಾಗಿ
ಒಲವಲ್ಲಿ ಬಿಗಿಯಾಗಿ
ದಿನವೆಲ್ಲ ಅನುಕಂಪದ ಯಾತನೆ;
ಸಮಯಕ್ಕೆ ಶರಣಾಗಿ
ನಡೆದಾಗ ಸರಿಯಾಗಿ
ಸಿಗುವುದೇ ಸರಿಮಾರ್ಗದ ಸೂಚನೆ!!

ಕಣ್ಣೀರ ತಳದಲ್ಲಿ
ಕಂಡದ್ದು ನಾವಲ್ಲ
ನಮ್ಮೊಳಗಿನ ನಾನು ನೀನಲ್ಲವೇ?
ಕೈಯ್ಯಲ್ಲಿ ಕೈಯ್ಯಿಟ್ಟು
ಕಣ್ಣನ್ನು ಬೆಸೆವಾಗ
ಮೌನಕ್ಕೂ ಹಾಡೊಂದ ಹೊಸೆದಿಲ್ಲವೇ?

ಹೊಸದಾಗಿ ನೂರಾಸೆ
ಮೈ ನೆರೆದುಕೊಂಡಾಗ
ತಡೆದದ್ದೇ ತಾನಲ್ಲಿ ತಪ್ಪಾಯಿತು;
ನೀನೆಲ್ಲೋ ನಾನೆಲ್ಲೋ 
ಉಸಿರಾಡಿಕೊಂಡಾಗ 
ಎದೆಗೂಡಲೂ ಬಿರುಕು ಉಂಟಾಯಿತು!!

ಬಂದದ್ದು ಬರಲೆಂದು
ಇದ್ದಾಗಲೇ ನಾವು
ತೆಕ್ಕೆಯಲಿ ಇನ್ನಷ್ಟು ಬಲವಾದೆವು;
ಒಂದಾದ ನಾವಿಂದು
ಸಿಡಿದು ಚೂರಾದಾಗ
ಬಿಡಿಯಾಗಿ ಇಷ್ಟಿಷ್ಟೇ ಬಲಿಯಾದೆವು!!

ಮತ್ತೊಮ್ಮೆ ಹೊಸದಾಗಿ
ಇದಕಿಂತ ಮಿಗಿಲಾಗಿ
ಬಾಳೋದು ಅನಿವಾರ್ಯವೇ ಆಗಿದೆ;
ಏನೆಲ್ಲ ಆಗಿಹುದು
ಎಲ್ಲವನೂ ಮರೆಯುತ
ಮನಸಾಗಲು ಮನಸು ಮುಂದಾಗಿದೆ!!

                                    -- ರತ್ನಸುತ

ಆಗಬಾರದ್ದು ಆಗಿಯೇ ಹೋಯಿತು

ನಾನೇನು ಹೇಳುವುದು
ನೀನೆಲ್ಲ ದೋಚಿರಲು
ಮಾತುಗಳು ವ್ಯರ್ಥದ ಕಂತೆ;
ನೀನಿದ್ದ ಕಡೆಯೆಲ್ಲ
ನಾ ಚಿತ್ತ ಕಳೆದಿರಲು
ಈನಡುವೆ ಇದೇ ದೊಡ್ಡ ಚಿಂತೆ!!

ನೀ ಸಾರಿ ಹೇಳುವುದ
ಪ್ರತಿ ಸಾರಿ ಕೇಳಿದರೂ
ಬೇಸರಿಕೆ ಬರಿಸುತಲೇ ಇಲ್ಲ;
ನೀ ಎದುರು ನಿಂತಾಗ
ಅಂಗಾತ ತಿರುಗದಿರು
ಉಪವಾಸ ಸಾಯುವೆನು ಮೆಲ್ಲ!!

ನಾ ಕೊಡದ ಉಡುಗೊರೆಗೆ
ನೀನಿಡುವ ಹೆಸರುಗಳ-
ಪಟ್ಟಿಗೆ ಕೊನೆಯೆಂಬುದೆಲ್ಲಿ?
ಆಗಾಗ ನೋಡುವೆ
ಮೋಹ ಉಕ್ಕಿದ ರೀತಿ
ಆದರೂ ಅನುಮಾನದಲ್ಲಿ!!

ಇನ್ನೆಲ ಸಮಯವನು
ನಿನಗಾಗಿ ಬರೆದಿಡಲು
ಬರಬೇಕು ಒಪ್ಪಂದ ಸಹಿಗೆ;
ಏನೊಂದೂ ಬೇಡಿಕೆಯ
ಸೂಚನೆ ಇರದಲ್ಲಿ
ಒಲವೊಂದೇ ಅನಿವಾರ್ಯ ಗುಳಿಗೆ!!

ನೀನೋದುವ ಹಾಳೆ
ದಿನಕೊಂದು ಹೊಸ ರೂಪ
ಒದಗಿಸುವ ದಿನಚರಿಯು ನಾನು;
ನೀ ನಕ್ಕರೆ ಅದುವೇ
ಭಾವನೆಗೆ ತೀವ್ರತೆ
ಮಿಕ್ಕಂತೆ ತೃಣವಲ್ಲವೇನು?

                   -- ರತ್ನಸುತ

ನವಿಲಾದವರು

ಅವರಿಬ್ಬರೂ ನಮ್ಮಂತೆಯೇ
ಲೋಕವ ಮರೆತ ಮರುಳರು;
ಮುಳ್ಳಿನ ತಂತಿಯ ದೇಹಕೆ ಸುತ್ತಿ
ನೆತ್ತರಲಿ ಗೀಚಿಕೊಳ್ಳುತ್ತ ನಕ್ಕವರು!!

ನೆನಪನ್ನೇ ಉಸಿರಾಡುತ್ತ ಜೀವಿಸಿ,
ಸ್ಮಶಾಣಕ್ಕೆ ಮೇಲ್ಸೇತುವೆ ನಿರ್ಮಿಸಿ,
ದಿನಾಲೂ ಹಾದು ಹೋಗುತ್ತಾರೆ
ಮಂದಹಾಸದ ಮಳೆಗರೆದು;

ಇರುಳುಗಳ ಚಿವುಟಿ, ತೊಟ್ಟಿಲ ತೂಗಿ
ತಾವಷ್ಟೇ ಎಚ್ಚರಿರುವರು
ಬೆಳಕಿಗೂ ಮಂಪರು ತರಿಸಿ
ಕನಸುಗಳ ಸ್ವಗತದಲಿ ಲೀನರಾಗುತ್ತ!!

ಬೇವಿನ ಕಹಿಯನ್ನೂ ಚಪ್ಪರಿಸಿ
ಸಕ್ಕರೆಗೆ ಸಂಕೋಚ ತರಿಸುವರು;
ಮೇಣದ ಹಾಗೆ ಕರಗುವರು
ಸಣ್ಣ-ಪುಟ್ಟ ವಿರಹದ ಕಿಡಿಗೆ!!

ಎಲ್ಲರೊಳಗೂ ತಾವಿಬ್ಬರು;
ಅವರವರೊಳಗೆ ಅವರ ನಡುವೆ
ಗಾಳಿ ನುಸುಳುವಷ್ಟೂ ಇಲ್ಲ
ಅವಕಾಶದ ಸಲುಗೆ!!

ಇಬ್ಬರೂ ನಾಚಿ ಗೀರಿಕೊಂಡ 
ನೆಲದ ಮಡಿಲಲ್ಲೀಗ ಗಿಣಿಯಾಕಾರ;
ಮಣ್ಣು ಯಾರನ್ನೂ ದೂರುವುದಿಲ್ಲವಂತೆ
ಬೆಚ್ಚಗುಳಿದರು ಅಲ್ಲೇ ನಮ್ಮಂತೆ!!

                                     -- ರತ್ನಸುತ

ಬಿಟ್ಟು ಹೋದ ಗಳಿಗೆ

ಕೊನೆಯ ಮುತ್ತಿಗೆ ಕಾಯಲಿಲ್ಲ
ಕೊಟ್ಟು ಹೋದಳು ಕಣ್ಣಲಿ
ಗುರುತು ಎಲ್ಲೂ ಕಾಣುತಿಲ್ಲ?
ಅಂದರೇನು ಹೇಳಲಿ!!

ಕೂತು ಆಡಿದ ಮಾತು ಯಾವೂ
ನಿಲ್ಲಲಿಲ್ಲ ಮನಸಲಿ
ಎಲ್ಲ ಮೆಲ್ಲನೆ ತುಂಬಿಕೊಂಡವು
ತಾನೇ ನಾಕೂ ಕಣ್ಣಲಿ!!

ನಾನು ಹೊತ್ತ ಭಾರ ಅವಳು
ಅವಳು ಹೊತ್ತ ಭಾರ ನಾ
ಭೂಮಿ ತೂಕವ ಅಳಿದ ಹಾಗೆ
ಉಳಿದುಕೊಂಡಿತು ಜೀವನ!!

ಯಾವ ಮಾತನೂ ತಡೆಯಲಿಲ್ಲ
ಮುನಿಸ ಮಧ್ಯೆ ತರಿಸದೆ 
ಜೋರು ಬಡಿತದ ಎದೆಯ ಕದವ
ತೆರೆದುಕೊಂಡಳು ಮರೆಯದೆ!!

ಬಿಟ್ಟುಗೊಡದ ಕಿರು ಬೆರಳಿಗೆ
ಸಣ್ಣ ಸಾಂತ್ವನ ನೀಡುತ
ಬರೆದುಕೊಳ್ಳದ ಸಾಲ ಹಿಡಿದು
ಬಿಟ್ಟು ಹೊರಟಳು ಬಿಕ್ಕುತ!!

                      -- ರತ್ನಸುತ

ತೊಂಬತ್ತು+ಚಿಲ್ಲರೆಯ ಹುಡುಗಿ

ಲೋಟವನ್ನ ತುಟಿಗೆ ತಾಕಿಸದಂತೆ
ಮೇಲೆತ್ತಿ ಕುಡಿಯಲು ಹೆಣಗಾಡುತ್ತಿದ್ದ
ಹಣ್ಣು ಮುದುಕಿಗೆ ಬೇಕಾದ್ದದ್ದು
"ಪರ್ವಾಗಿಲ್ಲ ಕಚ್ಕೊಂಡೇ ಕುಡಿ ಅಜ್ಜಿ!!"
ಎಂಬ ಅನುಕಂಪವಲ್ಲದ ಸಹಜ ಕಂಠ!!

ಇನ್ನೇನು ನೆನೆಸಿಕೊಂಡ ಸೀರೆಯ 
ಹಾಗೆ ಗಾಳಿಗೆ ತೂರಿ ಆರಿಸಿಕೊಳ್ಳಬೇಕು,
ಹೆಣ್ಣೆಂಬ ಸಂಕುಚಿತ ಭಾವ ಮೊಮ್ಮಗನೆದುರೂ!!
ಕಾಲ್ಕಿತ್ತರೆ ಮಾತ್ರ ಮುಂದಾಗುತ್ತಾಳೆ
ಇಲ್ಲವೇ ನಾಳೆಗೆ ನೆಗಡಿ, ಶೀತದ ವಕ್ರ!!

ಮುದ್ದೆ ಮುರಿಯಲೂ ತರವಲ್ಲದ ಆಕೆ
ನಾಲಗೆ ಚಡಪಡಿಕೆಯಲ್ಲಿ ರಾಜಿ ಆಗುವುದಿಲ್ಲ;
ಉಪ್ಪು ಹೆಚ್ಚಾದರೆ ಹೆಚ್ಚು, ಕಡಿಮೆಯಾದರೆ ಕಮ್ಮಿ,
ಅಸಮಾದಾನವ ಮುಲಾಜಿಲ್ಲದೆ ತೋರುತ್ತಾಳೆ
ಮುಖಕ್ಕೆ ಬಡಿದಂತೆ!!

ನೆರಿಗೆ ಸರಿಯಾಗಿ ಕೂರಿಸದಿದ್ದರೆ
ಸೀರೆ ಉಡಿಸಿದವರ ಪಾಡು ಹೇಳ ತೀರದು;
ಬೆನ್ನು ಬಾಗಿರುವ ಹದಿನಾರರ ಬಾಲೆ,
ನಿಖರತೆಯ ಗುರಿಯಿಡುವ ಮಂಜುಗಣ್ಣು,
ತನ್ನ ನಿಲುವೇ ಸರಿ ಎಂಬ ಮುಗ್ಧ ವಾದ!!

ಅಜ್ಜಯ್ಯನ ಪಟ ಕಂಡರೆ 
ಈಗಲೂ ಎದುರು ಬಂದಷ್ಟೇ ಬೆದರುವ
ಅಮಾಯಕ ವ್ಯಕ್ತಿತ್ವಕ್ಕೆ ಕನ್ನಡಿಯೆಂಬಂತೆ
ದಿನವೂ ಕೈ ಮುಗಿದು ಕಣ್ಮುಚ್ಚುತ್ತಾಳೆ;
ಇಗೋ, ಅಗೋ ಎಂದು ವರ್ಷದಿಂದ ವರ್ಷಕ್ಕೆ
ಹಣ್ಣಾಗುತ್ತಲೇ ಸಾಗಿ!!

ಮನೆ ಮೂಲೆ-ಮೂಲೆಯ ಎಚ್ಚರಿರಿಸುವಳು
ಕುಟ್ಟುತ ತಾಂಬೂಲವ,
ವೀಳೆಯದೆಲೆ ಬೆಲೆ ಏರು-ಪೇರಾದರೂ,
ಗೋಟಡಿಕೆ ಚೂರಾದರೂ;
ಕಡ್ಡಿ ಪುಡಿಯದ್ದೇ ಸದಾ ದೂರು!!

ಅಜ್ಜಿಯ ಪೆಟ್ಟಿಗೆ, ಗುಟ್ಟಿನ ಗೂಡು
ಕದ್ದು ನೋಡುವ ಆಸೆಯಿದೆ;
ಆದರೆ ಅದಕೆ ಎಂದೂ ಬಿಚ್ಚದ
ಹಿತ್ತಾಳೆ ಬೀಗದ ಕಾವಲಿದೆ!!

                        -- ರತ್ನಸುತ

ಕಲ್ಲಾದರೆ ನಾನು

ನಾ, ಕೈ ಕಡಿದ 
ತಲೆ ಉರುಳಿದ ಶಿಲೆ,
ನೆಲ ಕಚ್ಚಿದ ಜಡತೆಯ
ನಿರಾಕಾರ ಕೆತ್ತನೆ!!

ನನ್ನ ಯಾರೂ ಮುಟ್ಟಿದವರಿಲ್ಲ
ಎಲ್ಲರೂ ತಟ್ಟಿದವರೇ
ಉಳಿಯ ತಲೆ ಮೊಟಕಿ
ಸುತ್ತಿಗೆಯ ಬಡಿದು!!

ಊರಾಚೆಗಿನ ಹೆಬ್ಬಾಗಿಲ
ಅಡಿಪಾಯಕ್ಕೆ ಬೇಡವಾಗಿ,
ಅಲ್ಲೇ ಹೆಚ್ಚುವರಿ ಚೂರುಗಳ ನಡುವೆ
ಬಿದ್ದ ಹೆಣ ನಾನು!!

ನನ್ನಿಂದ ದೂರಾದ ಚಕ್ಕೆಗಳು
ಮಳೆ, ಗಾಳಿ, ಬಿಸಿಲಿಗೆ ಮೈಯ್ಯೊಡ್ಡಿ,
ಸವೆದು ನುಣುಪಾಗಿವೆ
ತೊರೆಯ ತರಾತುರಿ ಹ(ಅ)ರಿವಿಗೆ ಸಿಕ್ಕಿ!!

ಬಚ್ಚಲ ಮನೆಯಲ್ಲಿ  
ಮೈ ಕೊಳೆ ಬಿಡಿಸಿ
ಧನ್ಯವಾದವು
ಕಳಂಕಿತವೆನಿಸಿಕೊಳ್ಳಲಿಲ್ಲ!!

ನೆತ್ತರಂಟಿಸಿಕೊಂಡು ಅಟ್ಟಹಾಸ-
ಮೆರೆದವರ ತಾಳಕೆ ಕುಣಿದವು ಕೆಲವು,
ಕುಂಟೇ ಬಿಲ್ಲೆಗಳಾಗಿ 
ಮಕ್ಕಳಾಟಕೆ ಸಿಕ್ಕವು ಹಲವು!!

ಉರುಳಿದ ತಲೆ ಊರೂರು ಸುತ್ತಿ
ಉರುಟುಗಲ್ಲಾಗಿದೆಯಂತೆ;
ಕಡಿದ ಕೈಗಳೆಂದೋ 
ಆಕಾರ ಕಳೆದುಕೊಂಡಾಗಿವೆ!!

ಕೆತ್ತಿದವರು ಕಾಲನು ಲೆಕ್ಕಿಸದೆ
ಕೆತ್ತದೆಯೇ ಬಿಟ್ಟಿರುವರು;
ಮರುಕ ಪಡಲೀಗ ಕಣ್ಣಿಲ್ಲ
ಕಲ್ಲು ಮನಸು ಮಾತ್ರ!!

                  -- ರತ್ನಸುತ

ತುಂಡಾಶಯಗಳು

ಬೀಡು ಬಿಡುವಾಸೆ
ಈಗಿಂದೀಗಲೇ ಕಣ್ಣಿನಲ್ಲಿ,
ಅಪ್ಪಿತಪ್ಪಿಯೂ ಕೂಡ
ತೇವಗೊಳ್ಳದೆ ಇರಲಿ ಎಂಬಾಶಯ!!

ಕಾದು ಕೂರುವ ಆಸೆ
ಖಾಲಿ ಹಣೆ ಮೇಗಡೆ,
ಚಿಂತೆ ರೇಖೆಯ ನಡುವೆ
ನಲುಗದುಳಿವುದೇ ನನ್ನ ಕೊನೆ ಆಶಯ!!

ಧ್ಯಾನಸ್ಥನಾಗುವೆ ಅಂಗೈಯ್ಯ
ತೋರುಗನ್ನಡಿ ಮುಂದೆ,
ನಾಚಿ ಸಂಕುಚಿತ-
-ಗೊಳ್ಳದಿರಲೆಂಬುದೇ ಮನದಾಶಯ!!

ಕಲೆಗಾರನಾಗಲು ಅಣಿಯಾದೆ,
ಕೆನ್ನೆ ರಂಗನು ಅದ್ದಿ
ಕಲೆಗುಂದಿದ ಶಿಲೆಗೆ
ಜೀವ ಮರುಕಳಿಸುವ ಮಹದಾಶಯ!!

ಮಧ್ಯಮ ಎದೆಯಲ್ಲಿ
ಸಂಯಮ ಕಳೆಯದೆ
ಅಂತಿಮ ಉಸಿರನ್ನು ಎಣಿಸಿ
ಪ್ರತಿ ಮಿಡಿತವನ್ನಾಲಿಸುವ ಆಶಯ!!

                                -- ರತ್ನಸುತ

ಅನರ್ಥ ಕಂತೆ

ಕತ್ತಲು ಕರಗಿ ಲೀನವಾಯ್ತು
ಆ ದಿವ್ಯ ಜ್ಯೋತಿಯ ದರ್ಶನವಿಲ್ಲ
ಮತ್ತೂ ಎಳೆಸು ಕನಸು ಮೂಡಿತು
ಕಾಣುವ ಹೊರತು ಆಯ್ಕೆಗಳಿಲ್ಲ!!

ಎಲ್ಲೋ ಮಿನುಗುವ ಚುಕ್ಕಿಯ ಮಾತು
ಕೇಳುವ ಮನಸಿಗೂ ಬಡಿದ ಜಡತೆ
ಆದರೂ ಆನಿಸಿ ಆಲಿಸಿ ಕೂತು
ಬಳುಕಿ ಆರಿತು ಭ್ರಮೆಯ ಹಣತೆ!!

ಬೆಂಕಿ ಹಾಸಿಗೆಯೊಂದು ಪರೀಕ್ಷೆ
ಉತ್ತರ ಹುಡುಕಾಟದ ಹುರುಪಿಲ್ಲ
ಪಂಕ್ತಿ ಬೇದದ ಆಲೋಚನೆಗಳು
ಮನೆಯ ಬಿಟ್ಟು ದಾಟಿಸುತಿಲ್ಲ!!

ಚುಚ್ಚುವ ಅಂಚಿಗೂ ಮಿಡಿತವ ನೀಡಿ
ನೋವಿನ ಅನುಭವವವೇ ಬಲು ಸೊಗಸು
ಇಲ್ಲದೆ ಹೋದರೆ ಕಾರಿದ ನೆತ್ತರು
ಹಿಂದೆಯೇ ಬೀರುವುದು ಬಿರು ಮುನಿಸು!!

ಮುಚ್ಚಿದ ಕಣ್ಣಲಿ ಜ್ವಾಲೆಯ ಬೆರಗು
ತೆರೆದರೆ ನೀಳ ತಾಮಸ ಪರದೆ
ಮೂಡದ ಪದಗಳ ಕಾಲಿಗೆ ಬಿದ್ದು
ಹಾಗೋ, ಹೀಗೋ ಬೆವರುತ ಬರೆದೆ!!

ಬೆಳಕು ಕತ್ತಲ ಸಮರದ ಸರದಿ
ಬೆಳಕಿಗೆ ಗೆಲುವು ನಿಷ್ಚಯ ಅಲ್ಲಿ
ಬರೆದ ಹಾಳೆಯು ಹಾಸಿಗೆ ಅಡಿಗೆ
ಅರ್ಥವಾದರೆ ತಿಳಿಸುವೆ ತಾಳಿ!!

                               -- ರತ್ನಸುತ

ಮೌನ ಸಂಭಾಷಣೆ !!

ಮನದ ಪಿಸು ಮಾತುಗಳ ಆಲಿಸೋಕೆ
ನೂರು ಕಿವಿಗಳಿದ್ದೂ
ನೀ ಕೇಳಿಸಿಕೊಳ್ಳಲಿಲ್ಲವೆಂದು 
ಶರಣಾಗುವ ಬದಲು
ಮುಟ್ಟಲೇ ಇಲ್ಲವೆಂದು ಆಪಾದಿಸು,
ಮತ್ತೆ, ಮತ್ತೆ ಪಿಸುಗುಡಲು
ಹಿಂದೇಟು ಹಾಕಲಾರೆ,
ಹೊರತು ಬದುಕುಳಿಯಲಾರೆ!!

ಪತ್ರಗಳು ಕೇವಲ ಪದಗಳ ಗುಪ್ಪೆಯಲ್ಲ
ತುಂಬು ಬಸುರಿಯ ಕುಸುರಿಗಳು;
ಪ್ರಸವದವಸರಕೆ ಮಡಿಲಾಗು
ಸುಸೂತ್ರ ಸಂತತಿ, ಬಾಣಂತನಕೆ;
ನಂತರದ ಬೆಳವಣಿಗೆಯ ಭಾರ
ಅದದರ ಪಾಡಿಗಿರಲಿ,
ದಿನಕ್ಕೊಂದು ನೆನಪಿನ ಮುತ್ತನಿಟ್ಟರೆ
ಅದೇ ಪೌಷ್ಟಿಕ ಆಹಾರ!!

ಕೆಲಕಾಲ ವಾಲಿ, ತೂಕಡಿಸುವಾಗ
ಭುಜಗಳ ಕಂಪಿಸು ನಾಚುತ;
ನಿದ್ದೆ ಬಲು ದೂರ ಹಾರದೆ
ಇಲ್ಲೇ ತುಸು ದೂರ ಸುತ್ತಿ ಬರಲಿ;
ನಾ ಕಾದಿರಿಸಿಟ್ಟ ಹೂವ ಮುಟ್ಟದೆ
ಕಣ್ಣೆಟುಕಿನಂತರದಿ ಸತಾಯಿಸು
ಒಮ್ಮೆಲೆಗೆ ಸಾಯುವ ಬದಲು
ಬಿಡಿ-ಬಿಡಿಯಾಗಿ ಸಾಯಲಿ!!

ಜೀವ ಬೆಸೆಯುವುದು ಬೇಡ,
ಇರಲಿ ಅವವುಗಳ ಪಾಡಿಗೆ ದೂರ;
ಹತ್ತಿರವಾಗದ ನಮ್ಮ ಉಸಿರು
ಚೂರು ಚಡಪಡಿಸಲಿ ವಿನಿಮಯಕೆ;
ಲೋಕದ ಮಂಜುಗಣ್ಣಿನೆದುರು
ನೀನ್ಯಾರೋ, ನಾನ್ಯಾರೋ ಅನಿಸಿ
ಗೌಪ್ಯ ಸಂಧಾನ ನಡೆಸುವ,
ಎಚ್ಚರ ಕನಸುಗಳ ಎತ್ತರ ತಾಣದಿ!!

ಒಂದು ಮಾತೂ ಆಡದೆ
ಮುಗಿಸುವ ಸಂಭಾಷಣೆಯ ಕೊನೆಗೆ
ಮಂದಹಾಸವ ಲೇಪಿಸಿ
ಇಬ್ಬಾಗ ಮಾಡಿ ಇರಿಸಿಕೊಳ್ಳುವ
ತೀರ ಮನಸಿಗೆ ಹತ್ತಿರದಲ್ಲಿ;
ಚಿರ ಪರಿಚಿತರಂತೆ ಭಾಸವಾಗಿಸುತ
ದೂರಾಗಿಸುವವುಗಳ ಪಾಲಿಗೆ
ಕಹಿ ಸವಿಗಳ ಸಾಲಿಗೆ !!

                              -- ರತ್ನಸುತ

ಹಿಂಗಾದ್ರೆ ಹೆಂಗೆ ಮತ್ತೆ!!

ಮತ್ತೆ ಮತ್ತೆ ಕಾಣುವಾಗ
ಎತ್ತ ಹರಿಸಲಿ ನನ್ನ ಚಿತ್ತ
ದಾರಿಯೊಂದೇ,
ಕೂರಬೇಕು ನಿನ್ನ ಕುರಿತೇ ಯೋಚಿಸುತ್ತ!!

ನೀರಿನಲ್ಲಿ ಚಿತ್ರ ಬಿಡಿಸಿ
ಬಣ್ಣ ತಂದು ಸುರಿಯುವಾಗ
ಅನಿಸಿತೆನಗೆ,
"ಕರಗಿತಲ್ಲ ನೀರಿನೊಡಲು ಸ್ವಲ್ಪ ಬೇಗ!!"

ರಾತ್ರಿ ಬಾನು ಮುನಿದರೇನು
ಯಾವ ಚುಕ್ಕಿ ಮರುಗುತಾವೆ?
ಅಲ್ಲಿ ನೋಡು,
ನಿನ್ನ ಮುನಿಸ ಇಳಿಸಲೆಂದು ಇಳಿಯುತಾವೆ!!

ಸಿಹಿಯ ಕಂಡು ಇರುವೆ ಹಿಂಡು
ಸಾಲುಗಟ್ಟಿ ಲಗ್ಗೆ ಇಟ್ಟೋ
ಎಂಥ ಸೋಜಿಗ,
ನಡುವೆ ನಿನ್ನ ಕಂಡು ಹಿಡಿದ ದಿಕ್ಕ ಬಿಟ್ಟೋ!!

ದಟ್ಟ ಬಿದಿರ ಕಾಡಿನೊಳಗೆ
ಕಳ್ಳ ಗಾಳಿ ನುಸುಳಿಕೊಂಡು
ನುಡಿಸುತಾವೆ,
ನಿನ್ನ ಮೌನದಪಾಯವನ್ನು ಅರಿತಿಕೊಂಡು!!

ನಿನ್ನ ಸೋಕಿ ಸ್ಮೃತಿಯ ಕಳೆದ
ಸ್ಥಿತಿಯ ಕಂಡು ಸ್ಮಿತವ ಬೀರಿ
ಬಿರಿಯುತಾವೆ,
ಅಂಥ ಹೂವಲಿ ಚಿಟ್ಟೆ ಮಧುವ ಹೀರಿಕೊಂಡು!!

ಹೆಜ್ಜೆಗೊಂದು ತಾಳವಿಟ್ಟು
ಗುಪ್ತ ಹಿಮ್ಮೇಳದ ಜೊತೆಗೆ
ಹಾಡುತೈತೆ,
ಭೂಮಿಗೂನು ನಿನ್ನ ಮ್ಯಾಗೆ ಮನ್ಸಾಗೈತೆ!!

                                         -- ರತ್ನಸುತ

Thursday 24 April 2014

ಒಂದು ಮರದ ಕಥೆಯಲ್ಲ

ಮರದ ಬೇರಿಗೆ 
ಪಟ್ಟಣ ಕಾಣುವ ಹುರುಪು;
ಎಲ್ಲವೂ ಬುಡಮೇಲಾಗಿ
ಪಿಳಿ-ಪಿಳಿ ಕಣ್ಣರಳಿಸಿ 
ವೇಘಧೂತ ವಾಹನಗಳ
ಕಂಡು, ಆಲಿಸಿ
ಮೈ ಮರೆತವುಗಳಿಗೆ
ಒಣಗಿದೆಲೆಗಳ ಸದ್ದು
ಕೇಳದಷ್ಟು ಬಂಡತನ!!

ರೆಂಬೆಯ 
ಕೊನೆ ಮಿಡಿತವನ್ನೂ ಕಾದು
ಹಿಡಿದು
ಮಾಗಲು ಸಜ್ಜಾದ
ನೆಲಕುಸಿದ ಕಾಯಿ
ಕಾಯುವಿಕೆಯಲ್ಲೇ
ಕೊಳೆತು ಮಣ್ಣಾದದ್ದು
ಮರದ ಪಾಲಿಗೆ ತೀರ
ಸಾದಾರಣ ಸಂಗತಿ!!

ಹಕ್ಕಿ ಗುರುತನ್ನಿಟ್ಟು
ದಿನಗಳ ಲೆಕ್ಕ ಹಾಕಿ
ಹಣ್ಣಿನ ಗುಟುಕಿಗೆ
ಹಾರಿ ಬಂದು
ಹುಡುಕಿದರಿಲ್ಲದ ಮರ,
ಮತ್ತದರ ಬೇರು;
ಕಂಡದ್ದು ಬರೇ
ಕಾಂಡದ ಚಕ್ಕೆ ಚೂರು!!

ಸಾಲದಕ್ಕೆ ಜೇ.ಸಿ.ಬಿಗಳ
ತುರಿಕೆಯ ತೆವಲಿಗೆ
ಭೂಮಿಯ ಗರ್ಭಪಾತ
ಸಣ್ಣ ಬರವಸೆಗಳ ಭ್ರೂಣ ಹತ್ಯೆ;
ಜಲ್ಲಿ ಕಲ್ಲು, ಡಾಂಬರು ಸುರಿದು
ಹದವಾಗಿ ಉರುಳಿದ
ಬುಲ್ಡೋಜರುಗಳ
ಅಸಹನೀಯ ಸದ್ದು!!

ಅದೇ ಮರದ ತುಂಡೊಂದಕೆ
ಫಲಕ ರೂಪವಿತ್ತು
ಬಣ್ಣ ಬಣ್ಣದಕ್ಷರಗಳ
ಚಂದಗಾಣಿಸುತ್ತ ಗೀಚಿ
ನೆಟ್ಟರದೇ ಜಾಗದಲ್ಲಿ 
ಹೂ ಬಳ್ಳಿಯ ಪಕ್ಕ
"ಹಸಿರನ್ನು ಬೆಳೆಸಿ
ಪರಿಸರವ ಉಳಿಸಿ"!!

           --ರತ್ನಸುತ

ವಿಷಕಾರಿ ಹುಡುಗಿ

ಉರುಟುಗಲ್ಲುಗಳ ಸೆರಗಿಗೆ ಕಟ್ಟಿ
ಯಾವ ತೊರೆಯ ತಡೆಯುವ ಪಯತ್ನ?
ಸುಮ್ಮನೆ ಪಾದವ ಹರಿವಿಗೆ ನೀಡಿ
ಕಾಣಬಾರದೇ ಸಾವಿರ ಸ್ವಪ್ನ?!!

ಮುತ್ತುಗದೆಲೆಗಳ ಚುಚ್ಚಿ ಕೂಡಿಸಿ 
ಯಾವ ಔತಣ ಕೂಟಕೆ ಸಜ್ಜು?
ಕಣ್ಣಿಗೆ ಬಿದ್ದ ಧೂಳನು ಹಿಡಿದು
ಕೂಡಿಸುವೇಕೆ ನೆನಪಿನ ಗೀಜು?!!

ಬಳೆಗಳ ಕಳಚಿ ಪಕ್ಕಕೆ ಇಟ್ಟೆ
ಒಣ ಎಲೆಗಳ ಜೀವಂತಿಕೆ ಕಾಣು;
ಹೆಬ್ಬೆರಳು ಗೀಚಿದ ರಂಗೋಲಿಯ
ಗುರುತು ಹಚ್ಚಿತೇ ಬಣ್ಣದ ಮೀನು?!!

ಆಚೆ ದಡದ ಗೊಲ್ಲನ ಕೊಳಲು
ನಿಚ್ಚಲವಾಗಿಸಿತೇ ಕೈ ಬೆರಳ?
ಆಗಸದಾಚೆ ಎಲ್ಲೋ ದೂರಕೆ
ಚಾಚಿದೆಯೇನು ಮನದೊಳ ತುಮುಲ?!!

ಸಂಜೆಯ ಬಾನು ಗಲ್ಲಕೆ ತಾನು
ಸವರಿಕೊಂಡಿದೆ ಸೋಜಿಗವಲ್ಲ;
ಹನಿದ ಕಂಬನಿ ಮುತ್ತಿದರೂನು
ಕಾಮನ ಬಿಲ್ಲು ಮೂಡುತಲಿಲ್ಲ!!

ಮುಗಿಲಿನ ಸಾಲು, ನೀರಿನ ಬಿಂಬ
ಹೋಲಿಕೆಯಲ್ಲಿ ಉಳಿದವು ದೂರ
ತೊರೆಗೆ ಕೊನೆ ತಾನಿರುವುದು ಒಂದೇ
ನಡುವೆ ನೂರು ತವರಿನ ತೀರ!!

ಸತ್ತ ಮೀನು ತೇಲಿತು ತಾನು
ಚಂದ್ರನ ಹೆಣದ ಒಟ್ಟಿಗೆ ಅಲ್ಲಿ;
ನಿಟ್ಟುಸಿರ ವಿಷ ಕಾರಿ ಹೋದೆಯಾ?
ಉತ್ತರ ಅರಸಿಯೂ ಸಿಗದಿರುವಲ್ಲಿ!!

                                --ರತ್ನಸುತ

ದೀಪ-ಉರಿದಾರುವನಕ!!

ಮಹಡಿಯ ಮೇಲೆಲ್ಲ
ಅನಾಥ ಹಕ್ಕಿಗಳ ಚಿಲಿ ಪಿಲಿ
ಮನೆಯೊಳಗೆ ತಳ ಸುಟ್ಟ
ಗಂಜಿಯ ಕರಕುಲು ಘಮಲು
ಅರ್ಧ ಸುಲಿದು ಕಚ್ಚಿಟ್ಟ 
ಬಾಳೆ ಹಣ್ಣಿಗೆ ಹಲ್ಲಿನ ಗುರುತು
ಕೆಟ್ಟು ಕೂತ ರೇಡಿಯೋ ಪೆಟ್ಟಿಗೆಯ
ಕರ್ಕಶ ಕಂಠ!!

ರಾತ್ರಿಯ ಬಾಗಿಲ ತೆರೆದು
ಬೆಳಕು ಮರೆಯ ತಿರುವಿನ ತುದಿಗೆ,
ಗೂಡಿನ ಹಂಗು ತೊರೆದು
ಗುಡಾಣದ ಗುಪ್ಪೆಯಲ್ಲಿ ಬೆಚ್ಚಗುಳಿದ ಗುಬ್ಬಿ;
ಹೆಗ್ಗಣಗಳ ಸಂತತಿ
ಪಾಷಾಣದ ಮರುಕ,
ಬೆಳದಿಂಗಳ ಬಟ್ಟಲಿಡಿದು
ಮನೆ ಮುಂದೆ ತಿರುಕ!!

ಬೀದಿ ದೀಪದ ಪುರಾಣ
ಕೇಳಿ ಮೈ ಮರೆತ ಜಾಡು
ಎಲ್ಲೋ ದೂರದ ಮಬ್ಬಿನೊಳಗೆ
ಅತ್ತ ಮುದುಕಿಯ ಹಾಡು;
ಕೊಟ್ಟಿಗೆಯೊಳಗೆ
ಆಕಳು ಕರುವನು ನೆಕ್ಕುವ ಸರದಿ
ಕೆಚ್ಚಲು ದೂರ, ಹಸಿದ ನಾಲಿಗೆ
ಕಾವಿಗೆ ಕೂತ ಕೋಳಿ ಮಕ್ಕರಿಯೊಳಗೆ!!

ಬಾವಲಿಗಳ ಬವಣೆ
ಗೂಬೆಗಣ್ಣ ಚುರುಕು
ಬೆಂಕಿ ಕಡ್ಡಿ-ಬತ್ತಿಗೂ
ಋಣ ತೀರದ ಬದುಕು;
ವಟರುಗುಡುವ ಕಪ್ಪೆಗಳ
ಪ್ರಖ್ಯಾತ ರಾಗ,
ವಾಸಿಯಾಗಲಿಲ್ಲ ಇನ್ನೂ
ಅರ್ಚಕರ ರೋಗ!!

ರಾಗಿ ಹುಲ್ಲ ಕುಪ್ಪೆ ಮೇಲೆ
ಕದಲದಂತೆ ಬೆಕ್ಕು
ಬೆಳಕು ಆರದಂತೆ ತಡೆದ
ಅವ್ವಳಂಗೈ ಸುಕ್ಕು;
ತೀರಲಿಲ್ಲ ಇರುಳ ಗೋಳು
ಬಾವಿಗಿಲ್ಲ ನೀರ ಚಿಂತೆ
ಊರ ದೇವರೆದುರು ರಾಶಿ
ಬೇಡಿಕೆಗಳ ಕಂತೆ!!

ಕಣ್ಣುಜ್ಜಿ ಸೂರ್ಯ ಕಂಡ
ಅದೇ ಹಾಡು-ಹಸೆ
ಅದೇ ಗೂಡು-ಹಕ್ಕಿ
ಅದೇ ಜಾಡು-ಜಡತೆ
ಗಂಜಿಯ ಮಸಿ, ಅವ್ವಳ ಸುಕ್ಕು
ಹಣತೆಯ ಹೆಣ, ಆಕಳು-ಕರು
ಕೊಳೆತ ಬಾಳೆ, ಬತ್ತ ಬಾವಿ
ಹರಿದ ಮಹಡಿ, ಮತ್ತು ನಾನು!!

                          -- ರತ್ನಸುತ

ಬೆನ್ನ ಹುಣ್ಣು

ಎಟುಕದ ಬೆನ್ನಿನ ಹುಣ್ಣೇ,
ತುರಿಕೆಯ ಬಯಕೆಯ
ಈಡೇರಿಸಲಾಗುತ್ತಲಿಲ್ಲ ನನಗೆ
ಕ್ಷಮೆಯಿರಲಿ ಅದಕೆ!!

ನಿನ್ನ ಕಾಣುವ ಹಂಬಲ;
ಕನ್ನಡಿಗೆ ಕಾಣಿಸಿ
ತಳಕಂಬಳಕ ಬಿಂಬಿಸಿದರೆ
ಬೇಸರ ಬೇಡ!!

ಕಣ್ಣಿಗೆ ಕಾಣದ ನಿನ್ನ
ಊಹಿಸಿಯೇ ವಾಸಿಯಾಗಿಸುವಾಗ
ಸಂಕುಚಿತಗೊಂಡ ನಿನ್ನ ಮನಃ ಸ್ಥಿತಿಯ
ಊಹಿಸುವುದಕ್ಕೂ ಅರ್ಹನಲ್ಲ ನಾನು!!

ಚೂರು ಕೆದಕುವಾಸೆಯಾದರೂ
ಎಲ್ಲೆಂದು ಕೆದಕಲಿ?
ಎಲ್ಲೋ ಕೇಳುವ ಹಾಡಿಗೆ
ಕಾಣದ ಕೋಗಿಲೆಯಂತಾದೆ ನೀನು!!

ಹಣ್ಣಾಗಿ ನಂತರ ಕಾಯಾಗುವ ನೀನು
ಎಂದು ಉದುರಿದೆಯೋ
ಗೊತ್ತೇ ಆಗಲಿಲ್ಲ,
ಸಾಂತ್ವನದ ನಾಲ್ಕು ಮಾತು ಹಂಚಿಕೊಳಲಾಗಲಿಲ್ಲ!!

ಮಲಗಗೊಡದೆ ಕಾಡಿದ ಇರುಳುಗಳ
ಲೆಕ್ಕ ಹಾಕುತ್ತಾ ಹೋದಂತೆ
ನನ್ನ ಅಹಂ ಸೋಲುತ್ತಿದೆ;
ನೀ ನನ್ನ ಗೆದ್ದದ್ದು ನಿಜವೇ ಅಲ್ಲವೇ?!!

ಯಃಕಷ್ಚಿತ್ ನಿನ್ನ ಗುರುತನ್ನೂ
ಪತ್ತೆ ಹಚ್ಚಲಾಗದ ನಾನು
ನಿನ್ನ ನೋವಿಗೆ ಒಡೆಯನಾದೆನೆಂಬುದು
ಹೇಸಿಗೆಯ ಸಂಗತಿ!!

ನಿನ್ನ ನೆಪದಲ್ಲಿ ಗೀಚಿದಕ್ಷರ,
ಆದ ಹಳೆ ಗೆಳತಿಯರ ನೆನೆಪು
ಹೇಳ ತೀರದಂಥ ಅನುಭವ
ಅದಕ್ಕಾಗಿ ಇಗೋ ನನ್ನ ದೊಡ್ಡ ಥ್ಯಾಂಕ್ಸ್!!

                                     --ರತ್ನಸುತ

ನಿನಗೆ ಗೊತ್ತಿಲ್ಲದ್ದೇನಿದೆ... ?

ಬದುಕು ಇಷ್ಟೇ ಅನ್ನಿಸುವಷ್ಟರಲ್ಲಿ
ನೀ ನಗಬಾರದಿತ್ತು ಹಾಗೆ
ಮತ್ತೆ ಬದುಕುವಾಸೆ ತರಿಸುವ ಹಾಗೆ.... 

ಗೋರಿಗಳ ಮೇಲೆ ಚಿಗುರುವ ಗರಿಕೆ
ಎಲ್ಲ ಆಸೆಗಳನ್ನ ತ್ಯಜಿಸಿ ಬದುಕುವಾಗ
ಯಾತಕ್ಕಾಗಿ ಬೇಕಿತ್ತದಕೆ ಕೈ ಬೆರಳ ಸೋಂಕು?!!

ಪಾರ್ಥೇನಿಯಂ ಹೂಗಳನ್ನೂ ಕಟ್ಟಿ
ಹೂ ಮಾಲೆಯಾಗಿಸಿದ್ದು ನಿನ್ನ ಹಿರಿಮೆ,
ಕಟ್ಟಿ ಬಿದ್ದ ನಾನು 
ದಾರಕ್ಕೂ ಮುಖ ತೋರದೆ ಆಚೀಚೆ ತಿರುಗಿದ್ದೆ!!

ಪದ್ಮವಾಗಿ ನನ್ನ ಮುಚ್ಚಿಕೊಂಡ ನಿನಗೆ
ಬೇರಿನಿಂದಲೇ ಪ್ರೀತಿ ಎರೆಯುತ್ತೇನೆ;
ಕ್ಷಮಿಸು, ಮೇಲೆರಗಿ ರಾಡಿಯಾಗಿಸಲಾರೆ!!

ನೀ ಸವೆಸಿದಷ್ಟೂ ನನ್ನ ದಾರಿ ಪಕ್ವ
ನೀ ಸವಿಸುವುದೇ ಜೀವನ ಸತ್ವ
ಬೇರೆಲ್ಲ ಬೇರೆಯೇ; ನೀ ನನ್ನ ಭಾಗ!!

ಹೆಚ್ಚು ಬರೆಸಿ ಮೆಚ್ಚುಗೆಯಾಗುವ ನಿನ್ನ
ಬರೆದುಕೊಂಡೇ ಮೆಚ್ಚುತ್ತೇನೆ, ಅಥವ
ಬರೆಯದೆ ಕಣ್ಮುಚ್ಚಿ ಬೆಚ್ಚುತ್ತೇನೆ!!

ನಿಲ್ಲಿಸುವ ಸಾಹಸಕ್ಕೆ ಕೊಡಲಿ ಪೆಟ್ಟು,
ಕಾರಿದ ನೆತ್ತರೇ ಕೊನೆಯ ಸಾಲು
ಮುಂದೆ ಮತ್ತೋಂದು ಬೃಹತ್ ಯೋಜನೆ
ನಿನಗೆ ಗೊತ್ತಿಲ್ಲದ್ದೇನಿದೆ... 

                                        -- ರತ್ನಸುತ

Monday 21 April 2014

ನಾ ಅಳ ಬಯಸಿದಾಗ

ಎಲ್ಲರೂ ನಗುವವರೇ 
ಯಾರಲ್ಲೀಯೂ ದುಮ್ಮಾನಗಳಿಲ್ಲ;
ಅದಕ್ಕಾಗಿಯೇ ನಾನೂ ನಕ್ಕಂತೆ-
ನಟಿಸುತ್ತೇನೆ ಅವರತ್ತ
ಅನವರತ.....

ಕೆಲವರು ಹಸಿವನು ಮರೆಸಲು
ನಗುತ್ತಲೇ ಇರುತ್ತಾರಂತೆ,
ಏನು ಅದೃಷ್ಟಶಾಲಿಗಳವರು!!
ಇನ್ಕೆಲವರು ಬದುಕಿಗಾಗಿ ನಗಿಸುತ್ತಾರೆ,
ತಾವು ನಕ್ಕವರೋ ಇಲವೋ ತಿಳಿದಿಲ್ಲ;
ಮುಖವಾಡ ಧರಿಸಿದ್ದಾರೆ,
ಮುಖವಾಡವಂತೂ ನಗುತ್ತಿದೆ!!

ನೆರಳಿಗೆ ನಗು ಅಳುವಿನ ಪ್ರಾಕಾರಗಳಿಲ್ಲ,
ಎಲ್ಲವೂ ಎಲ್ಲರಲ್ಲೂ ಒಂದೇ;
ಅದರ ಮರ್ಮವ ತಿಳಿಯುವುದೇ ಗೋಳು!!
ಆದರೂ, ಸದಾ ನೆಲದಲ್ಲಿ ತೆವಳುತ್ತಲೇ
ಒರಟಿದ್ದಲ್ಲಿ ತರಚಿಕೊಂಡು ಅತ್ತಿರಬೇಕು?
ಕಪ್ಪೊಳಗೆ ಕಪ್ಪನೆಯ ಕಂಬನಿ ಕಾಣಲಾಗದಲ್ಲ!!

ಭುಜಗಳಿಗೆ ಅದೆಷ್ಟು ಬಾರಿ ಹೊರೆಸಿದ್ದೇನೆ
ಕಣ್ಣಿನ ಭಾರವ, ಲೆಕ್ಕವೇ ಇಲ್ಲ;
ಅದಕ್ಕಾಗಿಯೇ ಅವು ಕುಗ್ಗಿರಬೇಕು?
ಎಲ್ಲವೂ ನಗುವ ಸಲುವೇ!!

ಹೂವನ್ನು ನಗಿಸಲು
ಬೇರು ತೆತ್ತ ತ್ಯಾಗ ಕಥೆಗಳಿಗೆ ಕಿವಿಗಳೆಲ್ಲಿ?
ಹೊರ ನೋಟಕ್ಕೇ ಬೆಲೆ ಹೆಚ್ಚು,
ಒಳ ಬಣ್ಣಗಳು ನಳ-ನಳಿಸಿದರೂ,
ಮಂಕಾದರೂ ಪರಿಗಣನೆ ಇಲ್ಲದಿರುವುದೇ
ಈ ಎಲ್ಲ ನಾಟಕ ಮಂಡಲಿಗಳ ಉದ್ಭವದ ಮೂಲ!!

ಕೆಲವೊಮ್ಮೆ ನಗುವಿನೊಟ್ಟಿಗೆ ಉಕ್ಕಿ ಬರುವ
ದುಃಖವನ್ನ ಹಿಡಿದಿಡುವುದೇ ಸಾಹಸ ಕ್ರಿಯೆ;
ಹರಿದ ಕೌದಿಯ ಹೊಲಿದು,
ಮತ್ತೆ ತೂಗಿ ನಿದ್ದೆಗೆ ಜಾರುವಾಗ
ನಾಳೆಗಳ ಭೀಕರತೆ ಎಚ್ಚರಿಸಿದಂತೆ!!

ಎಲ್ಲರೂ ನಗುತ್ತಾರೆ
ನಾನೂ ನಗುತ್ತೇನೆ;
ಎಲ್ಲರೂ ಅತ್ತ ದಿನ
ನಾನೂ ಅಳುತ್ತೇನೆ
ಮುಕ್ತವಾಗಿ!!

           --ರತ್ನಸುತ

ವಿಜ್ಞಾನ ವಿಸ್ಮಯ

ದೂರದಿಂದ ಪ್ರಕಾಶಿಸುವ ನಿನ್ನ ಕಣ್ಣ
ಸಮೀಪಿಸಿದಷ್ಟೂ ಬೆವರಿಳಿಯುತ್ತದೆ
ಟೀಚರ್ ಹೇಳಿದ ಪಾಠ ಖರೆನೇ
ತಾರೆಗಳದ್ದೂ ಸೂರ್ಯನಷ್ಟೇ ಪ್ರಭಾವಳಿ!!

ಅಳತೆ ಮಾಡಲು ಅದಾವ ಉಪಕರಣವಿದೆ?
ಕಂಪನಕೆ, ವಿಸ್ತರಕೆ, ಶಾಖಕೆ, ಆಳಕೆ,
ಆರಂಭದಿಂದ ಅಂತ್ಯಕೆ, ಮೈಲಿಗಲ್ಲುಗಳ ಗುರುತಿಗೆ;
ಎಲ್ಲವೂ ವ್ಯರ್ಥ ಪ್ರಯತ್ನ, ನೋಡುವುದೇ ಸೊಗಸು!!

ಬಹುಶಃ ವಿಜ್ಞಾನದ ಆವಿಷ್ಕಾರಗಳೆಲ್ಲ
ಸಾಲು-ಸಾಲು ಅರ್ಥವಾಗುತ್ತಿವೆ ತರಾತುರಿಯಲ್ಲಿ;
ನೀ ಮೊದಲೇ ಸಿಗಬೇಕಿತ್ತು ಕಣ್ಣಿಗೆ
ಫೇಲಾಗುವ ಭೀತಿ ದೂರವಾಗುತ್ತಿತ್ತೇನೋ?!!

ನೆನಪಿನ ತರಂಗಗಳಲ್ಲಿ ಅದೆಷ್ಟು ತುಂಟ ಮಾಹಿತಿ?!!
ಒಂದೊಂದಕ್ಕೂ ಒಂದೊಂದು ಕಂಪನಾಂಕ
ಮನಸು ರೇಡಿಯೋ ಆಗಿದ್ದರೆ ಚಂದಿತ್ತು
ಬೇಕಾದಲ್ಲಿ ಟ್ಯೂನ್ ಮಾಡಿ ಮೆಲುಕು ಹಾಕುವುದಕ್ಕೆ!!

ಪ್ರಸವಿಸುವ ವಿದ್ಯುತ್ ಕಂಬಗಳ ಬೇನೆ,
ಹೆಚ್ಚು ಕಮ್ಮಿ ನನ್ನದೂ ಅದೇ ಪರಿಸ್ಥಿತಿ;
ಒಮ್ಮೊಮ್ಮೆ ಕುಲುಮೆಯ ಚಿಲುಮೆಯಂತೆ
ಚೆಲ್ಲಾಡಿಕೊಳ್ಳುತ್ತದೆ ವಿರಹಾಗ್ನಿಯ ಕಿಡಿಗಳು!!

ಲಾವಾ ರಸದ ಕುದಿ, ಸಾಗರದಡಿಯ ಭೂಕಂಪ,
ಚಂಡಮಾರುತ, ಪ್ರವಾಹಗಳ ಮೂಲಕ್ಕೆ
ನನ್ನದೇ ಕಾರಣಗಳ ಕೊಟ್ಟುಕೊಂಡಾಗ
ಒಪ್ಪುತ್ತೇನೆ, ಹಿಂದೆ ಅದೇ ಸಂಗತಿಗಳ ನಿರಾಕರಿಸಿದ್ದೆ!!

ಹೃದಯದ ಲ್ಯಾಬಿನಲ್ಲಿ ರಸಾಯನಗಳ ಬೆರೆಸಿ
ಕೊನೆಗುಳಿವ ಮಸಿಯನ್ನೇ ಮೆಚ್ಚುತ್ತೇನೆ;
ಅತ್ತ ಅಸಿಡಿಕ್ ಅಲ್ಲದ, ಇತ್ತ ಬೇಸಿಕ್ ಅಲ್ಲದ
ನ್ಯೂಟ್ರಲ್ ನೀರಾಗಿ ಉಳಿದಿದ್ದೇನೆ,
ಬತ್ತದೆ ನಿನ್ನ ಬರುವಿಕೆಗೆ ಕಾದು!!

                                              --ರತ್ನಸುತ

Sunday 20 April 2014

ಪಾಪಿ ಪಾರ್ಕು

ಇಷ್ಟಿಷ್ಟೇ ಮಾತಾಡಿಕೊಂಡು
ಎಷ್ಟೆಲ್ಲಾ ಮುಂದುವರಿದೆವೋ
ಇಬ್ಬರಿಗೂ ಕಬರ್ರಿದ್ದಿಲ್ಲ;
ಉದುರೊಣಗಿದೆಲೆಗಳಲ್ಲೂ
ನಮ್ಮದೇ ಪುಕಾರು,
ಯಾರೇ ಹೆಜ್ಜೆ ಇಡಲಿ 
ಸಜ್ಜಾಗುತಾವೆ ದೂರಿಗೆ,
ಗಾಸಿಪ್ ದರ್ಬಾರಿಗೆ!!

ಆ ಮರದಡಿಯಲ್ಲೇ ಕೂತು
ಜೋಪಾನವಾಗಿಸಿದೆವು
ಲೋಕದ ಕಿವಿಗೆ ಬೀಳದಂತೆ ಗುಟ್ಟುಗಳ;
ಈಗ "ಪೇ ಬ್ಯಾಕ್ ಟೈಮ್"?!!

ಕೆ.ಎಫ್.ಸಿ ವಿಂಗ್ಸ್ ತಿಂದು
ಬಿಸಾಡಿದ ಬೆತ್ತಲೆ ಮೂಳೆಗಳು 
ಆ ಪಾರ್ಕಿನ ತುಂಬ
ರಾಜಾರೋಶವಾಗಿ ಚೆಲ್ಲಾಡಿಕೊಂಡಿವೆ;
ಅದಕ್ಕೂ ತಿಳಿದಿದೆ
ನಮ್ಮ ದೌರ್ಬಲ್ಯಗಳು!!
ಅಂದು ನೀ ಕಣ್ಣೀರಿಟ್ಟಿದ್ದು ದುಃಖಕ್ಕೋ,
ಚಿಕನ್ ಮಸಾಲೆ ಘಾಟಿಗೋ? ಇನ್ನೂ ತಿಳಿದಿಲ್ಲ!!

ಟಿಶು ಪೇಪರ್ರಿಗೆ ದೇಣಿಗೆ ಕೊಟ್ಟು
ಬಿಟ್ಟು ಕೊಟ್ಟದ್ದೇ ತಪ್ಪಾಯಿತು ನೋಡು,
ಬೀದಿ ಬೀದಿಗಳಲ್ಲಿ ಅಬ್ಬೇಪಾರಿಗಳಾಗಿ
ಡಂಗೂರ ಸಾರಿಸುತ್ತಿವೆ
ಸಣ್ಣ ವಿಷಯಕ್ಕೂ 
ಉಪ್ಪು, ಹುಳಿ, ಖಾರ ಬೆರೆಸಿ;
ಕೆಲವಿಗಂತೂ ನಾ ಗೀಚಿ ಬಿಟ್ಟ
ಕಿರುಗವನಗಳ ಸಲುಗೆ ಬೇರೆ!!

ಪಾರ್ಕಿನ ಬಳ್ಳಿಗಳೆಲ್ಲ ಆಗ
ಸೈಲೆಂಟಾಗಿದ್ದವು ಪಿಸು ಮಾತನಾಲಿಸಿ;
ಈಗಲೋ, ಎಲೆಯೆಲೆಗೂ ಗರ್ವ,
ಹೂಗಳಿಗೆ ಪರ್ವ!!

ಯಾರೇ ಎದುರಾಗಲಿ 
ನನ್ಹೆಸರಿಗೆ ನಿನ್ನದನ್ನ
ಇಲ್ಲವೆ
ನಿನ್ಹೆಸರಿಗೆ ನನ್ನದನ್ನ ಜೋಡಿಸಿ
ಪ್ರಶ್ನೆಗಳ ಕೆದಕಿದಾಗ 
ಸಿಹಿ ನಿಂಬೆ ಶರ್ಬತ್ತಿನ ಬದಲು
ಸಿಪ್ಪೆಯ ಕಹಿಯೇ ನೆನಪಾಗುತ್ತೆ
ಅದಕ್ಕಾಗಿಯೇ ಆ ಪಾರ್ಕಿಗೆ
ನನ್ನ ಬಹಿಷ್ಕಾರ!!

                          -- ರತ್ನಸುತ

ಮೂಖನ ಪಾಡು

ಏನೆಂದು ಬಣ್ಣಿಸಲಿ
ನಿನ್ನನ್ನು ಕಂಡಾಗ
ಯಾವ ಪದ ಮುಂದಾಗುತಿಲ್ಲ;
ಯಾಕೆಂದು ಯೋಚಿಸಲಿ
ಬೇಕಂತಲೇ ಬಿದ್ದೆ
ಅಲ್ಲಾವ ಸಂಶಯಗಳಿಲ್ಲ!!

ಕಣ್ಣಲ್ಲಿ ಹರಿಸಿ ಬಿಡು
ನೂರಾಸೆ ಒಮ್ಮೆಲೆಗೆ
ನೆರೆಯಾಗಿ ನಾ ಉಳಿಯಬೇಕು;
ನಾ ಎಲ್ಲೆ ಮೀರುವೆನು
ಒಮ್ಮೊಮ್ಮೆ ಅದರಿಂದ
ಗೆರೆಯೊಂದ ನೀ ಎಳೆಯಬೇಕು!!

ಮಾತಲ್ಲಿ ಮಹಲುಗಳ
ಎಷ್ಟು ಕಟ್ಟಲು ಸಾಧ್ಯ
ನೀನೊಮ್ಮೆ ಕೈ ಚಾಚಿ ನೋಡು;
ದೂರದಿಂದೆಲ್ಲವೂ
ಚಂದಗಾಣಿಸುತಾವೆ
ಹತ್ತಿರದಿ ತೀರದ ಪಾಡು!!

ಗದ್ದಲದ ನಡುವೆಯೂ
ಹಾಡು ಗುನುಗುವ ಚಾಳಿ 
ಏಕಿಂಥ ಸಹವಾಸ ನನಗೆ?;
ಮಾತನಾಡುವ ಸಲುವೆ
ಏಕಾಂತ ಅರಸಿದೆ
ಸಿಕ್ಕಿದ್ದು ವನವಾಸ ಕೊನೆಗೆ!!

ಕಲ್ಲಾಗಿ ಉಳಿಯಲು
ಉಳಿ ಪಟ್ಟಿನ ಚಿಂತೆ
ಕೆತ್ತುವುದು ನೀನಾದರೇಳು;
ನೋವೆಲ್ಲ ಸಹಿಸುವೆ
ನೀ ಬಳಿಯಲಿರಲು
ಈನಡುವೆ ಹೀಗೊಂದು ಗೀಳು!!

ನೀ ಬೆಟ್ಟು ಮಾಡಲು
ನಾ ಬಾಗಿ ನಡೆಯುವೆ
ನೀ ಬಿಟ್ಟ ಬಾಣವೇ ನಾನು;
ನೀ ಬೊಟ್ಟು ಇಟ್ಟರೆ
ಅದು ಸೊಟ್ಟಗಾದರೆ
ನಾ ಬೆನ್ನ ತಟ್ಟಿಕೊಂಡೇನು!!

ಹೂ ಬಿಟ್ಟ ಹಿತ್ತಲು
ಬಾ ಎಂದು ಬಾಗಿಲು
ನಡುಮನೆಯ ನಡುವೊಂದು ಚಿತ್ರ;
ಒಳಕೋಣೆ ಗೂಟದಿ
ಜೋತು ಬಿದ್ದ ಶರ್ಟು
ಜೇಬಿನಲಿ ಬಚ್ಚಿಟ್ಟ ಪತ್ರ!!

                  --ರತ್ನಸುತ

ಬಂದು-ಹೋಗಿ

ನೀ ಬರುವ ಹಾಗಿದ್ದರೆ ಹೇಳಿ ಬಾ,
ಹೊರಡುವಾಗ ಹೇಳದಿರು;
ಒಂದು ಗಾಯವ ಮಾಡಿ ಹೋಗು
ಯಾವ ಕಾರಣ ಕೇಳದಿರು!!

ಗಂಜಿ ಬೇಯಿಸಿ ಇಟ್ಟು ಹೋಗು
ಒಲೆಗೂ ಚೂರು ಕಾವು ಸಿಗಲಿ;
ಕೊನೆಯ ಗಳಿಗೆ ನಿನ್ನ ತಾಕಿ
ಮುಸರೆಯೂ ತುಸು ನಕ್ಕುಬಿಡಲಿ!!

ನಮ್ಮ ಗುರುತಿಗೆ ಸಿಕ್ಕ ದಾರಿಯ
ಅಪ್ಪಿ ತಪ್ಪಿಯೂ ಹಿಡಿಯ ಬೇಡ;
ಹಾಗೆಂದು ಕಲ್ಲು-ಮುಳ್ಳಿನ
ಕಾನನಕೆ ಮುಖ ಮಾಡಬೇಡ!!

ಉರಿಸಿ ಹೋಗು, ಹೋಗೊ ಮುನ್ನ
ನಾಲ್ಕು ಬತ್ತಿಯ ಹಣತೆಯನ್ನು;
ದೇವರಿಲ್ಲದ ಕೋಣೆಯಲ್ಲಿ
ನಂದ ಬೆಳಕಿಗೂ ನಷ್ಟವೇನು?!!

ಹಿತ್ತಲಲ್ಲಿ ಕೀಳದಂತೆ ಹಾಗೇ ಬಿಡುವೆ
ಒಂಟಿ ರೋಜ;
ಕದ್ದು ಕಿತ್ತು ಮುಡಿಗೆ ಇರಿಸು
ಇದ್ದು ಬಿಡಲಿ ನಿತ್ಯ ತಾಜಾ!!

ಗೆಜ್ಜೆ ಕಟ್ಟಲು ಸದ್ದು ಬಡಿವುದು,
ಅಂತೆಯೇ ಕೈ ಬಳೆಗಳೂ;
ಕಿವಿ ಮುಚ್ಚುವೆ ಒಂದು ನಿಮಿಷ
ಇರದ ಹಾಗೆ ಈ ಜಗದೊಳು!!

ಬರುವ ಮುನ್ನ ತಟ್ಟ ಬೇಡ
ಬಾಗಿಲಿಗೂ ಗುಂಡಿಗೆಯಿದೆ;
ಹೋಗುವಾಗ ಮುಚ್ಚ ಬೇಡ
ಉಸಿರು ನಿಂತರೆ ಸಾವಿದೆ!!

                      -- ರತ್ನಸುತ

Wednesday 16 April 2014

ಮತ್ತೊಮ್ಮೆ ಮನಸಾಗಿ

ಬಲಗಾಲ ಇಟ್ಟವಳೇ
ಒಪ್ಪಿಗೆ ಸೂಚಿಸಿದೆ
ಎಡಗಾಲಿಗೆಂಥ ಬಾದೆ;
ರಾತ್ರಿ ಬಾರದ ನಿದ್ದೆ
ನಿನ್ನ ಕುರಿತೇ ಧ್ಯಾನ
ಆಗ ತುಸು ಅರ್ಥವಾದೆ!!

ಕೋಪಗೊಳ್ಳುತ ಹಾಗೆ 
ತಾಪಮಾನಕೆ ಚೂರು
ಏರಿಳಿತ ತಂದೆ ನೀನು;
ಮಾತುಗಾರನ ಕಚ್ಚಿ
ಅಳುಬುರುಕನಾಗಿಸಿ
ಹುಣ್ಣಾಗಿ ಉಳಿದೆಯೇನು?!!

ಕಪ್ಪು ಮೋಡದ ಸಾಲ
ಹೊತ್ತು ತರುವಾತುರ
ಏಕೆ ಆ ಕಣ್ಣೋಟಕೆ?!!;
ಕಣ್ಣ ಕಟ್ಟಿದರೆಂತು
ಪತ್ತೆ ಹಚ್ಚುವೆ ನಿನ್ನ
ಅಂತ್ಯವಿಡು ಜೂಟಾಟಕೆ!!

ಹೂ ಬಿಟ್ಟ ದಿನವೆಲ್ಲ
ನಿನ್ನದೇ ಗುಂಗಿನಲಿ
ಮೈಮರೆತ ಬಳ್ಳಿ ನಾನು;
ನನ್ನಾಸೆಯ ಹಣ್ಣ
ಗೊಂಚಲು-ಗೊಂಚಲಿಗೆ
ಬಾಗಿ ನೆಲ ಕಚ್ಚಲೇನು?!!

ದೀಪದೆಣ್ಣೆ ಮುಗಿದು
ಧೂಪವಾದ ಬತ್ತಿ
ನಾ ನಿನ್ನ ಹೊತ್ತು ಉರಿದು;
ಸುತ್ತ ಮುತ್ತಲ ಬೆಳಕು
ಕತ್ತಲಿಗೆ ಹೆದರಿದೆ
ಚೀರುತ ಅತ್ತು-ಕರೆದು!!

ಗತಿಗಾಣದ ಬಾಣ
ನೀ ಗುರಿಯ ತಪ್ಪಿಸಲು
ಎಲ್ಲೆಂದು ನಾಟಿಕೊಳಲಿ;
ಹೆಚ್ಚು ಜಗ್ಗಿ ತುಟಿಯ
ನೋಯಿಸುವ ಬದಲು
ಇಷ್ಟಕ್ಕೆ ಸತ್ತು ಬಿಡಲಿ!!

ತೀರಕ್ಕೆ ಬರುವೆ
ಬರುವಿಕೆಗೆ ಕಾದು
ತಪ್ಪದೇ ಬರುವೆ ತಾನೆ?!!;
ಇಲ್ಲವೆನ್ನಲು ಏಕೆ
ಸಮಯವ ಕೊಲ್ಲುವೆ?
ಓ ನೀರ ತೊರೆದ ಮೀನೇ!!

ಮರಳಿಗೂ ಮನಸಾಗಿ
ನನ್ನೊಲವ ಬೇಡಿದೆ
ನಿನ್ನ ಕುರಿತಂತೆ ಬರೆದು;
ಸೋನೆಗೂ ಸಹವಾಸ
ಸಾಕಾಗಿ ಹೋಗಿದೆ
ನನ್ನತ್ತ ಸುರಿದು ಝರಿದು!!

ಗೋರಿ ಕಲ್ಲನು ಕೆತ್ತಿ
ಉಳಿಗೂ ಪೆಟ್ಟಾಗಿದೆ
ಸುತ್ತಿಗೆಗೆ ಪಾಪ ಪ್ರಜ್ಞೆ;
"ನೀ" ಬೇಕು ಅನ್ನುವುದು
ಪ್ರೇಮವಾದರೂ 
"ನೀನೇ" ಎಂಬುದು ಪಾಪದಾಜ್ಞೆ!!

                             -- ರತ್ನಸುತ

ಸೂತಕದ ಬೀದಿಯಲಿ

ಹೊರಗೆ ಯಾರದ್ದೋ ಸಾವಿನ ತಮಟೆ ಸದ್ದಿಗೆ
ಮನೆಯೊಳಗೆ ಹಸುಳೆಗೆ ನಿದ್ದೆಯಿಲ್ಲ;
ಅಮ್ಮಳ ಎದೆ ಆಗಲೇ ಖಾಲಿ,
ಒಲೆಯ ಹಾಲನ್ನ ಬೆಕ್ಕು ಕದ್ದಿರಬೇಕು?
ಅತ್ತ ಮಗುವಿನ ಕಂಠ ಬಿಕ್ಕುತಿದೆ ಚೂರು,
ಕೌದಿಗೂ ಸಂಬಾಳಿಸಿ ಸಾಕಾಗಿ ಹೋಗಿದೆ;
ಉಲುಲುಲುಲುಲು ಲಾಯೀ
ಬದುಕಿದ್ದವನೇ ಬಡಪಾಯಿ!!

ಹೆಣದ ಸುತ್ತ ಬಾಟಲಿ ಸೆಂಟು ಸಿಂಪಡಿಸಿ
ನಿಚ್ಚಳ ದೇಹದ ಮೇಲೆ ವಿವಿಧ ಹೂಗುಚ್ಚ,
ಮಧು ಹೀರಿ ತಿಳಿಗೇಡಿ ದುಂಬಿ
ಮಡಿ ಮೀರಿ ಹಾರಿತು ದೇವರ ಕೋಣೆಗೆ;
ಪಕ್ಕದ ಮನೆಯಿಂದ ಸಾಲ ಪಡೆದ ಹಾಲ
ಕಂದನ ಹೊಟ್ಟೆಗರಿಸಲು ಹಸಿವ ಶಮನ,
ಮೆರವಣಿಗೆ ಹೊರಟಿತು ಮಸಣದೆಡೆಗೆ 
ಹೊಟ್ಟೆ ತುಂಬಿದ ಮಣ್ಣಿಗೂ ಹಸಿವ ಧ್ಯಾನ!!

ಬೀದಿ ಬೀದಿಗೆ ಬಡಿಸಿ ಬಿಡಿ ಹೂವ ಪಕಳೆಗಳ
ಮಂಡಕ್ಕಿ, ಚಿಲ್ಲರೆ ಬಿಲ್ಲೆಗಳ ಚೆಲ್ಲಿ
ಪಾನ ಮತ್ತರು ತೂರಿ ಬಿದ್ದರಾ ಚರಂಡಿಗೆ!!
ಇಂದೇಕೋ ನಕ್ಕಂತೆ ಬೋಳು ತಲೆ ಕಳ್ಳಿ;
ಸೊಳ್ಳೆ ಪರದೆಯ ಒಳಗೆ ಸಣ್ಣ ಗೊರಕೆ
ನಿರ್ಗದ್ದಲದ ನಿದ್ದೆಗೆ ತಾಯ ಹರಕೆ,
ಮೌನ ತಾಳಿತು ಬೀದಿ, ಮನೆಯ ಕೊಠಡಿ
ಸ್ಥಿರತೆ ಕಂಡಿತು ಚೂರು ತೂಗು ತಕ್ಕಡಿ!!

ಸ್ವಚ್ಛಗೊಂಡಿತು ಬೀದಿ, ಏನೂ ಆಗಿರದಂತೆ
ಹೊಗೆಯ ಮೇಗಡೆ ಒಂದು ಗಡಿಗೆ ನೀರು,
ತಾಂಬೂಲ ಜಗಿದು ಉಗುಳುವ ಸಾಲಿನಲ್ಲಿ
ಒಳಗೆ ಬೆಂದ ಅನ್ನ, ಹಸಿ ಹುಣಸೆ ಸಾರು;
ಕದಲಿತೋ ಜೋಲಿ, ಅತ್ತನೋ ಕಂದ!!
ಆ ಬದಿಯಲೊಂದು ಕಣ್ಣನು ನೆಟ್ಟಳಮ್ಮ
ಆದದ್ದೆಲ್ಲವೂ ತನ್ನ ಪಾಡಿಗೆ ಮುಗಿದು
ಎಲ್ಲಿ? ಪತ್ತೆ ಇಲ್ಲ ಅಪರಿಚಿತ ಗುಮ್ಮ?!!

                                       -- ರತ್ನಸುತ

ಏನೆಲ್ಲ ಅನಿಸುವುದು!!

ಕತ್ತಲಲಿ ನೆರಳನ್ನು
ಕಂಡವಳು ನೀನು
ಬೆಳಕಲ್ಲಿ ಪತ್ತೆ ಹಚ್ಚದೆ ಹೋದೆ ನನ್ನ
ಅಕ್ಷರಕೆ ಮಿತಿಯನ್ನು
ಇಟ್ಟವಳು ನೀನು
ಪತ್ರವ ಪರಿಗಣಿಸು ಹೊರಳಿಸುತ ಕಣ್ಣ!!

ಚಿತ್ರದಲಿ ಮಸಿ ಪೂಸಿ
ಹೊರಟವಳು ನೀನು
ದೋಚುತ್ತ ಇದ್ದಷ್ಟೂ ಬಂಡಾರ ಬಣ್ಣ
ಕ್ಷಣ ಮಾತ್ರದಲಿ ಜೀವ
ತೆಗೆದವಳು ನೀನು
ನೀಡಿದವಳೂ ನೀನೇ ಮರು ಪ್ರಾಣವನ್ನ!!

ಅಧರಕ್ಕೆ ಮೌನವನು 
ಕಲಿಸಿದಾಕೆ ನೀ
ನಾಲಗೆಗೂ ಎಲುಬನ್ನ ಕೊಟ್ಟು ಹೊರಟವಳು
ಎದೆಯಲ್ಲಿ ಉಸಿರನ್ನ
ದೋಚಿದವಳೇ ನೀ
ಸಂಪೂರ್ಣ ಮನವನಾವರಿಸಿಕೊಂಡವಳು!!

ಸ್ವಪ್ನಕ್ಕೆ ಎಳೆನೀರ
ಕುಡಿಸಿದವಳು ನಿನ್ನ
ಕೈ ಬಳೆಯ ಸದ್ದೆಂಬ ಸಿಹಿಯ ಬೆರೆಸಿ
ಮೇಣದ ಕಿಡಿಯಂತೆ
ಕಾರಿದವಳು ನನ್ನ
ಮೈಯ್ತುಂಬ ಪ್ರೇಮದ ಕಿಚ್ಚು ಹೊರೆಸಿ!!

ಗಾಳಿಯಲಿ ಬೆರೆತವಳು
ಆಕಾರವಿರದೆ
ನಾ ಊದಿದ ಉಸಿರು ಬುಡ್ಡೆಯನು ಹೊತ್ತು
ನಾ ಮಿಂದೆದ್ದ
ನೀರಲ್ಲಿ ಉಳಿದವಳು
ಪ್ರತಿ ಅಲೆಗೂ ಒಂದೊಂದು ಹೆಸರನ್ನು ಇಟ್ಟು !!

ಬಾಡಿಗೆ ಕೇಳದೆ
ಇರಿಸಿಕೊಂಡವಳು 
ವೈಭೋಗದಾರಮನೆ ನಿನ್ನ ಆ ಮನಸು
ಸ್ವಂತಕ್ಕೆ ಆದರೆ,
ನಾ ಅರಸನಾದರೆ
ಬಾಳಿಗೆ ಮಿಗಿಲಾಗಿ ಮತ್ತೇನು ಸೊಗಸು?!!

                                       --ರತ್ನಸುತ

ಸೀರೆಯ ಸೋಗು

ಸೀರೆ ಉಟ್ಟವರಲ್ಲಿ ಆಕೆಯಷ್ಟರ ಮಟ್ಟ
ಮುಟ್ಟಿ ಬಂದವರಾರೂ ಕಂಡೇ ಇಲ್ಲ
ಕಣ್ಣ ಕಾಡಿಸುವಷ್ಟು ಚಂದಾದ ಮೈ-
ಹೆಣ್ಣ ಸೃಷ್ಟಿ ಮೂಲಕೆ ಕಟ್ಟುಪಾಡೇ ಇಲ್ಲ!!

ಗಟ್ಟ ಗೂಡಲ್ಲಿ ಗುದ್ದಾಟ ನಡೆಸಿದ ಆಸೆ
ಒಂದೊಂದೇ ಗರಿ ಚಾಚಿ ಹಾರುತಾವೆ;
ಮಂಕು ಬೂದಿಯ ಹೊತ್ತ ಚಿತ್ತ ಕಾಮನೆಗಳು
ಹಿಂದೆಂದೂ ಇರದಂಗೆ ಬಿರಿಯುತಾವೆ!!

ಒಂದು ನಗೆ ದ್ವಿಗುಣಿಸಿತು ತಾರಕ ಮಂಡಲವ
ಗೊಂದಲದ ಮನದಿ ಗಂಧರ್ವ ಹಾಡು;
ಅಲೆಯ ಮೇಲಲೆಯಪ್ಪಳಿಸಿತಲ್ಲಿ ಉಸಿರನ್ನು-
ಬಿಗಿ ಹಿಡಿದಳಲ್ಲೆನಗೆ ಹೆಣದ ಪಾಡು!!

ನೆರಿಗೆ ಸಾಲಿನ ಗುಚ್ಚದಚ್ಚು ನಡುವನು ಕಚ್ಚಿ
ಸ್ವಚ್ಛ ನಾಭಿಯ ಸುತ್ತ ನಾಚುಗೆಂಪು;
ಪಾದ ಊರಿಸುವಲ್ಲಿ ಸಣ್ಣ ಕಂಪನ ಎದ್ದು
ಹೆಜ್ಜೆ ಗೆಜ್ಜೆಯ ಸದ್ದು, ಆತ್ಮ ತಂಪು!!

ಭುಜದಿಂದ ಬಾಜುವದು ದಂತದ ಕೋಲು,
ಸ್ವರಗಳ ಏರಿಳಿತ ಕೈಬೆರಳ ಸಾಲು,
ಎದೆ ಹಾದು ಬೆನ್ನ ಸವರಿದ ಸೀರೆ ಅಂಚು
ಯಾವ ವರ ಒಳಗೊಂಡ ಪುಣ್ಯದ ಪಾಲು?!!

ಹಣೆಯ ಸುಕ್ಕಿಗೆ ಚೆದುರದ ಬೊಟ್ಟು ಚುಕ್ಕಿ,
ಗಲ್ಲವದು ಒಲೆಯ ಹಾಲಂತೆ ತಾ ಉಕ್ಕಿ,
ನೀಳ ಕೊರಳಿನ ಹಾದಿ ತೊಗಲಿನ ಕೊಳಲು,
ಪ್ರೇಮಾಂಮೃತದ ಬುಗ್ಗೆ ಕಣ್ಣಾಳ ಕಡಲು!!

ಉಬ್ಬು ಉಬ್ಬುಗಳೊಲ್ಲದಲ್ಲಿ ಉಬ್ಬಿಲ್ಲ,
ತಗ್ಗು ತಗ್ಗಿಸದಾಗಿ ಮೊಗ್ಗ ತಲೆಯ,
ಮಲ್ಲೆ, ಸಂಪಿಗೆ, ಜಾಜಿ, ಕೆಂದಾವರೆ
ಗುಲ್ಮೊಹರುಗಳಿಗೂ ತಿಳಿಸಿ ಬಿಡುವೆ ವಿಷಯ!!

                                              -- ರತ್ನಸುತ

Monday 14 April 2014

ಗೋರಂಟಿ ಪ್ರಿಯೆ

ನವಿಲು ಗರಿ ಹಿಡಿದಳು;
ಗರಿಗಳು ಬಳುಕಾಡಿ, ಬಡಿದಾಡಿ
ಸೋತು ಕೊನೆಗಲ್ಲಿ
ಮೈ ಮಾರಿಕೊಂಡವು
ಆಕೆಯ ಉಗುರಿನ ಬಯಕೆಗೆ

ಸಂಜೆ ಏಕಾಂತದಲಿ
ಆವರಣ ಶುಚಿಗೊಳಿಸಿ
ಚುಕ್ಕಿ ಹೆಣೆದು ರೇಖೆ ಚೆಲ್ಲಿ
ಬಾನ ಬಣ್ಣ ಬೇಡಿದಳು;
ಕೈ ಸೇರಿದ ಸಂಜೆ ರಂಗು
ಉಗುರಲ್ಲೇ ಅಂಟಿಕೊಂಡು
ರಂಗೋಲಿಯ ಅರೆಬೆತ್ತಲ
ಚಿತ್ತಾರವಾಗಿಸಿತು!!

ಹೂಗಳ ಸವರಿ
ಮಂಕಾದವು ತಾವು,
ಕೆಲವಂತೂ ಮುದುಡಿದವು
ಸಹಿಸದೆ ನೋವು;
ಪಚ್ಚೆಗೆ ಪರಚು ಗಾಯ,
ಚಂದಿರನೊಡಲಲ್ಲೂ ಕಲೆ,
ಏಕವರ್ಣ ಬೇಸರಿಕೆ
ಕಲೆಗುಂದಿತು ಕೈಯ್ಯ ಬಳೆ

ಕಾಮನ ಬಿಲ್ಲಲಿ ಹೇಗೆ
ಒಂದೊಂದೇ ಬಣ್ಣ ಕುಂದು?!!
ಗಳಿಗೆಗೊಂದು ಪೂಸಿಕೊಂಡ-
-ಳುಗುರ ಮೇಗಡೆ;
ಚಿಟ್ಟೆಗಳೆತ್ತಲೋ ಹಾರಿ
ವಿಳ್ಹಾಸ ಮರೆತವೋ ಏನೋ
ಹಿತ್ತಲಲಿ ಬಿಟ್ಟ ಮೊಗ್ಗು
ಕಸಕೆ ಸೇರ್ಪಡೆ!!

ಬಣ್ಣಗಳೇ ಇಲ್ಲದಾಗಿ
ಎರಗಿದಳು ಬೆನ್ನಿಗೆ ನೇರ
ತೊಗಲಿನಾಳದಲ್ಲಿ ಹರಿದ
ಕೆಂಪು ರಕುತಕೆ;
ಗೋರಂಟಿ ರಂಗೇರಿತು
ಕೆಂಪು-ಕಂದಿಗೆ ತಿರುಗಿ
ನೀಲ ದೇಹದಲ್ಲೂ ಒಂದು
ಬಣ್ಣ ಕಾಣಿಕೆ!!

                     --ರತ್ನಸುತ

ನಾ ಇದ್ದಂತೆಯೇ ಇದ್ದಾಗ!!

ತರಾತುರಿಯ ಆಟದಲ್ಲಿ
ಗೆದ್ದರೆ ಬೇಸರಿಕೆ,
ಸೋತರೆ ತಲೆ ತುರಿಕೆ!!

ಬದುಕೂ ಒಂಥರ ಹಾಗೇ;
ಎದುರು ನೋಟವ ಹಾದು,
ಒದರಿಕೊಳ್ಳುವುದು
ಅನಿರೀಕ್ಷಿತ ಅಚ್ಚರಿಗಳ!!

ಒಪ್ಪುವುದೋ, ತಪ್ಪುವುದೋ
ತಿಳಿದುಕೊಳ್ಳುವಷ್ಟರಲ್ಲೇ ಮಾಯ;
ಎಲ್ಲವನ್ನೂ ರೆಪ್ಪೆ ಬಡಿತದಷ್ಟೇ
ಸೂಕ್ಷ್ಮವಾಗಿರಿಸಿಕೊಳ್ಳುವುದು
ತಲೆನೋವಿಗೂ ತಲೆ ಬಿಸಿ!!

ಮೊನ್ನೆ ಮೊನ್ನೆಯಷ್ಟೇ
ಬೀದಿ ಹೆಣಕ್ಕೆ ಕೈ ಮುಗಿದು
ಪಕ್ಕದಲ್ಲದ ಪಕ್ಕ ಬೀದಿಯಲ್ಲಿ
ನಾಯಿಗಳ ಕಾಟಕ್ಕೆ ಕೈಲಿ ಕಲ್ಲು ಹಿಡಿದು
ನಡೆಯುತ್ತಿದ್ದಾಗ ಕಂಡಳು;
ಅಬ್ಬಬ್ಬಾ, ಅದೇನಿದ್ದಳು!!
ಆಗಲೇ ಅವಳ ಮಡುವೆ?...

ಓದಿಕೊಂಡ
ಸ್ಕೂಲು, ಕಾಲೇಜುಗಳಿಗೆ
ನಮ್ಮ ನೆನಪುಗಳಂತೆ
ಮುಪ್ಪೇ ಆಗೊಲ್ಲವೇ?!!
ವರ್ಷದಿಂದ ವರ್ಷಕ್ಕೆ
ಬಿಳ್ಡಿಂಗ್ ಫಂಡಿನ ಫಂಡಾ,
ನಮ್ಮ ಜನ್ಮಕ್ಕೂ ಇರಬೇಕಿತ್ತು
ಏರಿಸಿ ಬಿಡಬಹುದಿತ್ತು ಆಕಾಶಕ್ಕೆ!!

ಮೆನೆ ಮುಂದಿನ ಖಾಲಿ ಸೈಟಲಿ
ಪಾರ್ಥೇನಿಯಂ ಗಿಡಗಳಿಗೇನು ಅವಸರ
ಅಷ್ಟು ಬೇಗ ಬೆಳೆದು ಬಿಟ್ಟವು;
ಅಷ್ಟರಲ್ಲೆ ಪಾಯ ತೋಡಿಕೊಂಡು
ಒಂದು, ಎರಡು, ಮೂರು, ನಾಲು ಅಂತಸ್ತು 
ನಿಂತೇ ಬಿಟ್ಟಿತು ಕಟ್ಟಡ
ನನ್ನನ್ನ ಕುಬ್ಜವಾಗಿಸಿ!!

ಪಾರ್ಕಿನಲ್ಲಿ ನೆಟ್ಟ ಗಿಡಗಳು
ಹೂ ಬಿಟ್ಟು ನಳನಳಿಸುತ್ತಿವೆ;
ನನ್ನ ಕಾಣುತ ನಕ್ಕು
ಬೇರಿಗೆ ವ್ಯಂಗ್ಯ ಪರಿಚಯ ಮಾಡಿಸಿ;
ರಸ್ತೆ, ಕಾಂಪೌಂಡು, ಲೈಟ್ ಕಂಬ
ಪೋಲಿ ಟೆಂಟು, ತರ್ಕಾರಿ ಮಂಡಿ
ಎಲ್ಲವೂ ಬದಲಾಗಿವೆ,
ದಿಢೀರನೆ!!

"ತಾಳಿದವನು ಬಾಳಿಯಾನು" ಎಂಬ
ಮಾಸಲು ಸ್ಟಿಕ್ಕರ್ರು ಅಂಟಿದ 
ರೂಮಿನ ಬೀರೂವಿನಲ್ಲಿ
ಅದ ಅಂಟಿಸಿದ ಮುತ್ತಾತನ
ಹರಿದ ಜೋಡಿದೆಯಂತೆ;
ಎಷ್ಟು ಹುಡುಕಾಡಿದರೂ
ಸಿಗುತ್ತಲೇ ಇಲ್ಲ!!

                           -- ರತ್ನಸುತ

ಬೆಳಕಿಗೆ ಬಂದ ಕವಿತೆ

ಒಂದು ಕವಿತೆ
ಮನಸಲ್ಲೇ ಓದಿಕೊಂಡೆ;
ಯಾಕೋ 
ಜೋರಾಗಿ ಓದುವ ಮನಸಾಯ್ತು,
ಓದಿಕೊಂಡೆ.
ಒಂದೆರಡು ಪಾತ್ರೆಗಳು
ನೆಲಕ್ಕುರುಳಿ ಡೊಂಕಾದವು,
ಕಿಟಕಿ ಗಾಜು ಚೂರಾದವು,
ಅಟ್ಟದ ಮೇಲೆ ಹೆಗ್ಗಣಗಳು
ಇಷ್ಟಕ್ಕೆ ಓಡಾಡಿಕೊಂಡವು!!

ಅದು ನನಗಿಷ್ಟದ ಕವಿತೆಯಲ್ಲ,
ಅದು ನನ್ನದೇ ಕವಿತೆ;
ಓದಿ ಮುಗಿಸುವ ವೇಳೆಗೆ
ಪರಿಸ್ಥಿತಿ ವಿಕೋಪಿಸಿತ್ತು,
ಹಾಗಾಗಿ ನಿಲ್ಲಿಸುವ ಸಾಹಸ ಮಾಡದೆ 
ಮತ್ತೆ ಓದಲೇ ಬೇಕಾದ ಅನಿವಾರ್ಯತೆ!!

ಕೆಲ ಕಾಲ ಮೌನ ತಾಳಿ
ಪರಿಶೀಲಿಸಿಕೊಂಡೆ
ಮತ್ತೆ ಸದ್ದೆದ್ದದ್ದು 
ಮೌನಕ್ಕೂ ನಾಲಗೆ ನೀಡಿತು,
ಗಂಟಲ ಕಿತ್ತು ಓದಿಕೊಂಡೆ
ಬೇರೆಲ್ಲ ಶಬ್ಧಗಳು
ನಿಚ್ಚಳವಾಗುಳಿದವು
ಅಟ್ಟದ ಹೆಗ್ಗಣಗಳು ಸಹಿತ!!

ತೀರ ಸಹಜವಾದ ಪದಗಳಿಗೆ
ಭಾವೋದ್ವೇಗ ನೀಡಿ
ಅರಚಾಡುತ್ತಿದ್ದುದ ಗಮನಿಸಿದ ಕಾಗೆ
ಅಲ್ಲಿಂದ ಕಾಲ್ಕಿತ್ತದ್ದು
ಅನುಕಂಪಕೋ, ಅನುಭಾವಕೋ?
ಒಟ್ಟಾರೆ, ನಾನಂತೂ ಗೆದ್ದಿದ್ದೆ
ಮಿಕ್ಕೆಲ್ಲರನ್ನೂ ಮೆಟ್ಟಿ ನಿಂತು!!

ಅಡುಗೆ ಮನೆಯಿಂದ ಮತ್ತೊಂದು ಪಾತ್ರೆ
ಕುರೂಪಗೊಳ್ಳುವ ಸರದಿ;
ಅದ ಮೀರಿಸಬಲ್ಲ ಏರುದನಿಯಲ್ಲಿ
ಮತ್ತೆ ಓದಲು ತಲೆನೋವು ತಂದದ್ದು 
ಪಕ್ಕದ ಮನೆ ಶಾನುಭೋಗರಿಗೆ!!

ಸಧ್ಯ ಅಮ್ಮ ಅಪ್ಪನ ಜಗಳ
ಬೀದಿಯ ಕಿವಿಗೆ ಬೀಳಲಿಲ್ಲ,
ಬದಲಿಗೆ, ಸತ್ತ ಸಾಲುಗಳಿಗೊಂದು
ಹಿಡಿ ಶಾಪ ಸಿಕ್ಕಿತು!!
ಹೀಗಾಗಿಯಾದರೂ ಬೆಳಕಿಗೆ ಬಂದು
ಜೀವ ಪಡೆಯಿತಲ್ಲದೆ
ತಾಮಸದ ಹಂಗಲ್ಲಿಯ ಮಿಕ್ಕವುಗಳೆಡೆಗೆ
ಛೇಡಿಸುತ್ತ ತಾ ನಗುತಲಿತ್ತು !!

                                 -- ರತ್ನಸುತ

ಮನದ ಮಳೆಯಲ್ಲಿ

ಮಳೆಯಾಗುತ್ತಿತ್ತು ಹೊರಗೂ, ಒಳಗೂ!!
ಒಳಗೆ ಆಗುತ್ತಲೇ ಇದೆ 
ಅಂದಿನಿಂದೀವರೆಗೆ ಸತತವಾಗಿ;
ಹೊರಗೆ, ಈಗಷ್ಟೇ ಶುರುವಾಗಿದೆ
ಇನ್ನೇನು ನಿಂತುಬಿಡಬಹುದು 
ಶಿಶು ಕೇಂದ್ರದಿಂದ ಕೇಳಿಬರುವ
"ರೇನ್ ರೇನ್ ಗೋ ಅವೇ" ಪದಕ್ಕೆ ತಲೆ ಬಾಗಿ;
ಒಳಗೂ ಅಂಥದ್ದೊಂದ ಸ್ಥಾಪಿಸಬೇಕು
ನಿಂತರೂ ನಿಲ್ಲಬಹುದು!!

ತೋಯ್ದು ಮುದ್ದೆಗಟ್ಟಿದವುಗಳ ಗುರುತಿಗೆ
ತೀರದ ಹೆಣಗಾಟದ ನಡುವೆಯೂ
ಒಲ್ಲದ ಒಂದು ನಗು ಅಂಟಿಸಬೇಕು ತುಟಿಗೆ;
ಬೇಸರಗೊಳ್ಳಬಾರದಲ್ಲ ಅವು!!
ಅವು? ಯಾವವು? ಅವೇ ಕಾಲಕಾಲಕ್ಕೆ 
ರೂಪು ಬದಲಿಸಿ, ಬಣ್ಣ ತೊಟ್ಟು
ನೆಲೆಯೂರಿದ ಮುಗ್ಧ ಭಾವನೆಗಳು;
ಆಗ ಹೊಸತು, ಈಗ ಪಳೆಯುಳಿಕೆಗಳು!!

ಪಾಚಿಗಟ್ಟಿದ ಮನದಂಗಳವ ಮೆಟ್ಟಿ 
ಜಾರಿ ಕಾಲ್ಮುರಿದುಕೊಂಡವುಗಳು
ತೆವಲಾಡುತ್ತಲೇ ಮೂಲೆ ಸೇರಿಕೊಂಡದ್ದು
ತಿಳಿದ ಸಂಗತಿಯಾದರೂ 
ಅದೆಷ್ಟು ಪ್ರಮಾಣದಲ್ಲಿದ್ದವು!!
ಅಬ್ಬಬ್ಬಾ, ಎಣಿಕೆಗೆ ಒಂದಿರುಳು ಸಾಲದೆ
ಹೊತ್ತು ಮುಳುಗೆದ್ದು ಆಕಳಿಸುತಿತ್ತು!!

ಕೊಡೆ ಹಿಡಿದವುಗಳೆಲ್ಲ ಸಜ್ಜನಿಕೆ ತೋರದೆ
ಮಿಂದು ನಡುಗುತಲಿದ್ದವುಗಳೆಡೆಗೆ
ಒಂದೇ ಸಮನೆ ಗಹ ಗಹಿಸಿ ನಗುತ್ತಿದ್ದವು
ಅಮಾನುಷವಾಗಿ!!

ಹಾದರಗಿತ್ತಿತನ ಮುಗಿಸಿ ಬಂದವು ಕೆಲವು
ಬೆನ್ನ ಮೆತ್ತಗೆ ಹಾಸಿ ಆನಿಕೊಂಡಾಗ
ಹುಲ್ಲೂ ಸಿಡಿದೆದ್ದು ಸರದಿಗೆ ಕೇಳಿತು;
ಮರುಕದಲಿ ಸತ್ತ ಭಾವಗಳ ಮಣ್ಣು ಮಾಡಲು
ಯಾವ ಹಿತ ಭಾವನೆಗಳೂ ಮುಂದಾಗದೆ
ದೂರದಿಂದಲೇ ಹಿಡಿ ಮಣ್ಣ ಶಾಪದಲಿ
ಹೂತವುಗಳ ಪುನಃ ಸಂಸ್ಕರಿಸ ಬೇಕು!!

ಮಳೆ ಜೋರಾಗುತ್ತಲೇ 
ಕೊಚ್ಚಿ ದಡ ಸೇರುವ ಹಂದರಗಳಿಗೆ
ಹೆಸರಿಡಬೇಕು, ಸಮಾದಾನಕ್ಕಾಗಿ!!

ಈಗ ಜಡಿಯುತಿದೆ ಜಡಿ ಮಳೆ,
ಬಿಡುವಿಗೂ ಬಿಡುವಿರದ ಸಮಯ!!
ಇಕ್ಕಟ್ಟಿನಲ್ಲಿ ಸವರಿದ ತಲೆಗಳೂ ಉರುಳಬಹುದು,
ಕಾಲಕ್ಕೆ ಕಾಲಾವಕಾಶ ಕೊಟ್ಟರೆ
ಒಳ್ಳೆ ಕಾಲ ಬರಬಹುದೆಂದು ಸುಮ್ಮನಾದೆ!!

ಹೀಗಂದುಕೊಂಡು ಮಾಸಗಳಳಿದವು
ಮಳೆ ನಿಲ್ಲಲೇ ಇಲ್ಲ!!

                                                --ರತ್ನಸುತ

Friday 11 April 2014

ಕೃಷ್ಣ ನೀ ನಡೆದಾಗ

ಆಗಷ್ಟೇ ನಡೆಯಲು ಕಲಿತ
ಮುದ್ದು ಎಳೆ ಕಾಲುಗಳಿಗೆ
ಪಾದಕ್ಕಾಗುತ್ತಿದ್ದ ಒತ್ತ್ತಿಗೂ 
ಹೆಚ್ಚು ಖುಷಿ ಕೊಟ್ಟದ್ದು
ಅಂಗೈಯ್ಯ ನಿರಾವಲಂಬನೆ!!

ಮೊಳಕಾಲ ಬಿಗಿ ಹಿಡಿದು
ನೇರ ನಿಲ್ಲುವ ಅದಕೆ 
ಅಂಬೆಗಾಲಿಡುವಲ್ಲಿ ಕಾಡುತ್ತಿದ
ಮಣ್ಣು, ಚೂರುಗಲ್ಲು, ಕಸ-ಕಡ್ಡಿಗಳ
ಗೆದ್ದ ಉಮ್ಮಸ್ಸು!!

ತೂರಾಡುತ್ತಲೇ, ಇಡಬೇಕಾದಲ್ಲೇ
ಇಟ್ಟ ಹೆಜ್ಜೆಗೆ ಒಂದು ಚಪ್ಪಾಳೆ;
ಪೀ-ಪೀ ಸದ್ದಿನ ಚಪ್ಪಲಿ ಧರಿಸಿ
ಆಟವ ಕಾಣಿರಿ ಆಮೇಲೆ!!

ಕೈಯ್ಯಲಿ ಒಂದು ಬಾಟಲಿ ಕಮ್ಮಿ
ಥೇಟು ಕುಡುಕರ ದರ್ಬಾರು,
ತಡಬಡಿಸಿ ಮುಗ್ಗರಿಸಿದರಲ್ಲಿಗೆ
ಅತ್ತು ಕರೆವುದರ ಜೋರು!!

ಅಮ್ಮಳಿಗೋ ಕಾವಲಿನ ಕೆಲಸ
ಎದೆ ಬಿಡಿಸಿಕೊಳ್ಳಲಿಚ್ಛಿಸದಾಕೆ,
ಎಷ್ಟೇ ಚುರುಕುಗೊಂಡರೂ ತುಂಟ
ಹಸಿವ ದಾಟಲಮ್ಮಳೆದೆಯೇ ನೌಕೆ!!

ಗೆಜ್ಜೆ ಕಟ್ಟಿ, ರಂಗೋಲಿ ಮೆಟ್ಟಿ
ಮನೆ ತುಂಬ ಬಾಲ ಕೃಷ್ಣನ ಹೆಜ್ಜೆ
ನೋಡು ನೋಡುತ್ತಲೇ ಬೆಳೆದವನ
ಗುರುತಿಗೆ ಸಣ್ಣ ಕವನದ ದರ್ಜೆ!!

                              -- ರತ್ನಸುತ

ಹ್ಮ್ಮ್... !!

ಜ್ವಲಿಸುವ ದೇಹದೊಳಲ್ಲಲ್ಲಿ
ಗುಪ್ತ ನಿಕುಂಜದೊಳ ಬೆಚ್ಚನೆಯ 
ಅನುಭೂತಿ ನೀಡಬಲ್ಲ
ಓ ಮಾಯಾ ಕನ್ನಿಕೆ,
ತಂಪಿನರಿವಾಗಿಸಲು 
ಉಸಿರಾಟ ತೊರೆಯದಿರು
ಹರಿದ ಬೆವರಲ್ಲಲ್ಲೇ ಇಂಗಿ ಹೋಗಲಿ;
ಹಣೆಯಿಂದ ಮುಂಗುಟಕೆ 
ಹರಿಸುವ ತೆವಲಿಗೆ ಬಲಿಯಾಗ ಬೇಡ!!

ಹೂಮಂಚಕೂ ಇದೆ
ಹೂಗಳಿಟ್ಟ ಶಾಪದಲ್ಲಿಯ ಪಾಲು;
ಒಮ್ಮೆ ನೀ ಹೊಸಕಿದೆ ಸಿಗ್ಗಿಗೆ,
ಮತ್ತೊಮ್ಮೆ ಹಿಗ್ಗಿಗ್ಗೆ;
ಮತ್ತು ನಾನು 
ನಿನ್ನ ಮೈ ಗಂಧದಲಿ
ಮೈ ಮರೆತು ಮುಲುಗುತ್ತ
ಪಕಳೆ ಕಿತ್ತೆಸೆದವುಗಳ ಲೆಕ್ಕವಿಲ್ಲ!!

ಬೆಳಕು-ಕತ್ತಲನು ಕೂಡಿಸಿದ ನಮಗೆ
ಹಗಲೆಲ್ಲಿ? ಇರುಳೆಲ್ಲಿ?
ಹಾಗೆಂದು ಹಾಸಿಗೆಯ ಹಸಿವು ನೀಗಿಲ್ಲ;
ನಮ್ಮಂತೆಯೇ ಅದೂ ಬಕಾಸುರ ಜಾತಿ,
ಸುರತದ ವಿಚಾರದಲ್ಲಿ.

ಇದೇ ಆಯಿತು;
ಮತ್ತೆ-ಮತ್ತೆ
ಕಳೆದುಕೊಂಡ ಸ್ಟಿಕ್ಕರ್ ಬಿಂದಿಯ
ಹುಡುಕುವುದರಲ್ಲಿ ಸಮಯ ವ್ಯರ್ಥ;
ಹೊಸತೊಂದು ಕಿತ್ತರೆ ನಷ್ಟವೇನು?
ಇಲ್ಲವೇ, ಹುಡುಕಾಟವೇ ನಿನಗಿಷ್ಟವೇನು?
ಇಗೋ ಬೆನ್ನಿನ್ನ ಬಯಲು,
ಸುರುಳಾಡು ಪೂರ, ಸಿಕ್ಕರೂ ಸಿಗಬಹುದು!!

ಉಗುರು ಪರಚಿದಲ್ಲಿ ಹಾಗೆ ನಿಂತು
ಕಂಬನಿ ಮಿಡಿಯುವ ಮುನ್ನ
ಕಾಲ್ಕಿತ್ತು ಬಿಡು ಪ್ರಿಯೆ;
ಗಾಯವಾರಲು ದಶಕಗಳುರುಳಲಿ
ಇಷ್ಟು ಬೇಗ ನೋವಿಗೆ ಸಾವೇ?
ಛೆ!! ಬದುಕಲಿ ಬಿಡು ಒಂದಷ್ಟು ದೂರ
ನೆನಪುಗಳ ಸವಿಯಲ್ಲಿ ಏಕಮುಖ ಸಲ್ಲ!!

ಮತ್ತೆ ತಣ್ಣಗಾಯಿತು ಒಡಲು?
ಬಾ ತೆಕ್ಕೆಯಲಿ ಸಿಲುಕಿ ನರಳಾಡುವ;
ಜಿಡ್ಡು ದೇಹಗಳೆರಡು ಬಡಿದಾಡಿಕೊಂಡರೆ
ಸತ್ತ ಹೂಗಳ ಆತ್ಮ ನಗಲು ಬಹುದು!!
ಹೊಚ್ಚ ಹೂಗಳು ಪಚ್ಚೆ ತೊರೆಯ ಬಹುದು!!

                                         -- ರತ್ನಸುತ

Thursday 10 April 2014

ಕಾವ್ಯಾಂಕಿತ

ಬರೆಯಬೇಕು ನಿನ್ನ ಕುರಿತು
ಸುಳ್ಳು ಅಕ್ಷರ ಪೋಣಿಸುತ್ತ
ತಡೆಯ ಒಡ್ಡುವ ನಿನ್ನ ನಗುವಲಿ
ಚೂರು ನಿಂತು ಯೋಚಿಸುತ್ತ

ಕಿವಿಯ ಆಲೆಯ ಓಲೆ ಸಂದಿಯ
ಬೇಡಿ ಜಾಗ ಪಡೆಯಬೇಕು
ಅಲ್ಲೇ ಒಂದು ಲಕ್ಷ ಪುಟಗಳ
ಓಲೆ ಬರೆದು ಮುಗಿಸಬೇಕು

ಕಣ್ಣೆವೆಯ ಜೋಕಾಲಿಯ-
ಮೇಲೊಮ್ಮೆ ಹಾಗೆ ಜೀಕಿ ನಿಂತು
ಸಣ್ಣ ಸಾಲಿಗೆ ಬಣ್ಣ ಬಳಿಯುವ 
ಯೋಗ ಕುಂಚಕೆ ಒದಗಿ ಬಂತು

ಲವಣ ಸತ್ವಕೆ ಸಪ್ಪೆ ಪದಗಳ
ಅದ್ದಿ-ಅದ್ದಿ ಒಣಗಿಸಿಟ್ಟೆ
ನಗ್ನವಾಗಲು ಒಲ್ಲೆ ಎಂದವುಗಳಿಗೆ
ಕಾಡಿಗೆ ಪೂಸಿ ಬಿಟ್ಟೆ

ಗುಳಿಯ ಸೇರನು ಮೀರುವಂತೆ
ಕುಪ್ಪೆ ಕುಪ್ಪೆ ಕಾವ್ಯ ಸುರಿದೆ
ಶಾಯಿ ಮುಗಿಯುತ ಬಂದ ಹೊತ್ತಿಗೆ
ನನ್ನ ಹೃದಯವ ನೇರ ಇರಿದೆ

ನವಿರು ತುರುಬಲಿ ಸಿಕ್ಕು ಸಿಕ್ಕಿಗೆ
ಸತ್ತ ಶತ ಸಂಕಲನಗಳಿವೆ
ಗೋರಿ ಕಲ್ಲುಗಳುನ್ನು ನಿಲ್ಲಿಸಿ
ಚುಟುಕು ಪರಿಚಯ ಕೆತ್ತಿಕೊಳುವೆ 

ಎಷ್ಟೇ ಆದರು ಮೂಲ "ನೀನು"
ನಿನ್ನ ಹೆಸರಿಗೆ ಎಲ್ಲ ಅಂಕಿತ
ಮುನಿದು ದೂರುಳಿದವುಗಳಲ್ಲೂ
ಈ ವಿಶಯದೊಳುಂಟು ಸಹಮತ 

                                 --ರತ್ನಸುತ 

Wednesday 9 April 2014

ಭಂ, ಭಂ, ಭಂ ಬೋಲೆನಾಥ್ !!

ಧಹಿಸುವಸುರರ ಸಹಿಸಿಕೊಂಡೆಯಾ?
ಹರಿಸು ಕೋಪಾಗ್ನಿಯನು ಈಗಲೇ 
ಕೋಪಗಣ್ಣಿಗೆ ನಿದ್ದೆ ತಂದೆಯಾ?
ಕ್ಷಮಿಸು ಹರ ನೀ ಏಳು ಕೂಡಲೇ 
ದುಷ್ಟ ಶಕ್ತಿಯ ಅಟ್ಟಹಾಸಕೆ 
ಮಟ್ಟ ಹಾಕುವ ಶಕ್ತಿ ನೀನು 
ತುರುಬು ಸಡಿಲಿಸು ಮೈಯ್ಯ ಕಂಪಿಸಿ 
ತೋರು ತಾಂಡವ ನಾಟ್ಯವನ್ನು 

ನೀಲ ಕಂಠದ ಆಳ ಉಸಿರಲಿ 
ಏಳು ಲೋಕವ ಸಲಹುವಾತ 
ಅಲ್ಲ ಸಮಯ ಕೇಳಿ ಕೂರಲು 
ನಾಮ ಸ್ತುತಿಯ ಸುಪ್ರಭಾತ 
ಬೂದಿಯೊಳಗಣ ಕೆಂಡಮಂಡಲ 
ಬುಗ್ಗೆಯಾಗಿ ಚಿಮ್ಮಿ ಏಳಲಿ 
ಎಂಟು ದಿಕ್ಕಲೂ ಶಂಖ ನಾದದ 
ಓಂಕಾರ ನಾದ ಮೊಳಗಲಿ 

ಶಾಂತ ಚಿತ್ತಕೆ ಬ್ರಾಂತಿ ಮೂಡಲಿ 
ಕ್ರಾಂತಿಯಾಗಲಿ ದೈವ ಕಿರಣ 
ಕತ್ತಲಾವರಿಸುತ್ತ ಹೊರಟಿದೆ 
ಬೆಳಕ ಪಾಲಿಗೆ ಮರ್ಮ ಗ್ರಹಣ 
ಗಂಗೆ ಕೆರಳಲಿ ಅರ್ಧ ಚಂದಿರ 
ರೌಧ್ರ ರೂಪಕೆ ಬೆಚ್ಚ ಬೇಕು 
ಕೆಡುಕಿನ ಶಿರ ಛೇದಿಸುತಲಿ 
ರಕ್ತದೋಕುಳಿ ಹರಿಸ ಬೇಕು 

ಹೆಜ್ಜೆ ಸದ್ದಿಗೆ ಭೂಮಿ ಬಿರಿದು 
ಏದುಸಿರಿಗೆ ಕಡಲು ಉಕ್ಕಿ 
ಮೋಡ ಕೆರಳಿ ಸಿಡಿಲು ಬಡಿದು 
ಮಿಂಚ ಕಣ್ಣುಗಳಲ್ಲಿ ಹಿಡಿದು
ಪಂಚಭೂತಗಳೆಲ್ಲ ಕೂಡಿ 
ಭಂ, ಭಂ, ಭಂ ಬೋಲೆ ಹಾಡಿ 
ಮೃಗಗಳೆಲ್ಲ ನಿನ್ನ ಕೊರಳಿಗೆ 
ತಮ್ಮ ಕೊರಳನು ನೀಡಲಿ 

ಘರ್ಜನೆಯನು ಸಹಿಸಲಾಗದೆ 
ಗೋರಿಯೊಳಗಣ ಹಂದರಗಳು 
ಬೆವರು ಹರಿಸಿ ಮುದುಡಿಕೊಂಡು 
ಆತ್ಮಗಳ ತಮ್ಮೊಳಗೆ ಹೀರಿ 
ಮಸಣ ಸೀಮೆಯ ದಾಟದಂತೆ 
ನಿನ್ನ ಅಪ್ಪಣೆ ಪಡೆಯದಂತೆ 
ನರನ ದೇಹವ ನುಸುಳದಂತೆ
ಚೀರಿ-ಚೀರಿ ಹೆದರಲಿ 

ಶೂಲದಂಚಿಗೆ ಸಿಕ್ಕಿ ನರಳುವ 
ಭೂತ, ಪ್ರೇತ, ಪಿಶಾಚಿಗಳನು 
ಪಾದದಡಿಗೆ ಹೊಸಕಿ ಹಾಕಲು 
ಮೆಟ್ಟಿ ಬಾ ಅಭಯಂಕರ; 
ಹರ ಹರ ಹರ ಶಂಭೋ ಶಂಕರ 
ಸಜ್ಜನರ ಕಾಯೋ ಈಶ್ವರ 
ನಿನ್ನ ಆಧರ ಹೂವ ಚಾದರ 
ಹರಸು ಓ ಕರುಣಾಕರ 

                    -- ರತ್ನಸುತ  

ಪವನ ಪಾವನಿ

ಗಾಳಿಯ ಹಿಡಿಯೆ ಹೊರಟವ ನಾನು
ನೀ ಗಾಳಿಯಲ್ಲದೆ ಮತ್ತೇನು?!!
ನಿರಾಯಾಸಕ್ಕೆ ಸಿಕ್ಕಿ ಜಾರುವೆ
ಬರಿಗೈಯ್ಯ ಬೊಗಸೆಯಲಿ ನಿಲ್ಲದೆ!!

ನಿನ್ನ ಕಂಪಿನ ಕುರುಹು ನಿನ್ನಲ್ಲೇ ಉಂಟು,
ನಾಸಿಕವನ್ನರಳಿಸಿ, ನರಳಿಸಿ ಹರಿದು
ಮನದಲ್ಲಿ ಉಳಿದಿದ್ದು ಹಳೇ ಸಂಗತಿ;
ಇದು ನೇರ ಪ್ರಸಾರದ ಜೀವ ಮಾಹಿತಿ!!

ಉಡಿಸಲೆತ್ನಿಸುವ ನನ್ನ ಹುಂಬ ಕೈಗಳಿಗೆ
ಸೀರೆ ಅದೆಷ್ಟು ಬಾರಿ ಹೇಳಿತೋ
"ಬಿಡು, ಬಿಟ್ಟುಬಿಡಿದು ವ್ಯರ್ಥ ಪ್ರಯತ್ನ,
ನೆರಿಗೆ ನಡು ಮೇಲೆ ನಿಲ್ಲುವುದು ಹುಚ್ಚು ಸ್ವಪ್ನ!!"

ಬೇಜಾರಿನಲ್ಲಿ ನೇವರಿಸುವೆ ಹಣೆಯ
ಹಿಂದೆಂದೂ ನನ್ನ ಆ ಸ್ಥಿತಿಯ ನೆನಪಿಡದೆ;
ವಿರಹ ಬೇಗೆಗೆ ಚೂರು ಹೆಚ್ಚೇ ಬೆಂಬಲಿಸುವೆ
ತಪ್ಪಿಸಿಕೊಳ್ಳುವ ದಿಕ್ಕುಗೊಡದೆ!!

ತಲೆ ಕೆಡಿಸುವ ನೂರು ವಿಷಕಾರಿ ವಿಷಯಕ್ಕೆ
ಮೈಯ್ಯಾಗುವೆ ಸುಲಭವಾಗಿ ನೀನು,
ಶ್ವಾಸಕೋಶದಿ ನಿನ್ನ ಬಹಳ ಹಿಡಿದಿಡಲಾರೆ
ಬದಲಾದ ಅವತಾರ ತಾಳಲೇನು?!!

ನಿನ್ನ ಚಲನೆಗೆ ನಾನು ಮೋಡವಾಗುವ ಮುನ್ನ
ಕೆಲ ಕಾಲ ಶಿಖರಗಳ ಮೊರೆ ಹೋಗುವೆ,
ನೀ ಎತ್ತ ಬೀಸುವೆಯೋ ಅತ್ತ ನಾ ಬಾಗುವೆ
ಭಾವು"ಕತೆ"ಗಳ ಪುಟದಿ ಬಲಿಯಾಗುವೆ!!

                                           -- ರತ್ನಸುತ

ಹೀಗೇ ಮರುಳಾಗುತ್ತ

ಸುಮ್ಮನಿರು ಶಕುಂತಲ
ಕಾವ್ಯವೆಂಬುದು ನನಗೆ
ಬಡವನ ಮನೆ ಪಾಯಸದಿ 
ಗೋಡಂಬಿ ಸಿಕ್ಕಂತೆ;
ಅಲ್ಲಲ್ಲಿ ಒಮ್ಮೊಮ್ಮೆ ಹಿಗ್ಗಿ,
ಪದಗಳ ಮಾಮೂಲಿ ಸುಗ್ಗಿ.
ಕ್ಷಣಿಕ ಪ್ರಿಯ ನಾ, ಇಳೆಯ ಧೂಳು 
ಆತ ಮಿನುಗುವ ಚುಕ್ಕಿ!!

ನಾಲಗೆಯ ಶೂಲಕ್ಕೆ ಕೊಟ್ಟು
ಬದ್ಧನಾಗುವ ಯೋಗ ನನದಲ್ಲ,
ಇನ್ನೂ ದಡ್ಡನೇ ತಿಳಿ ನನ್ನ
ಪ್ರೇಮ ಕಾವ್ಯಗಳೆಲ್ಲ ಬಾಲಿಶ ಕಂತೆ;
ಒಮ್ಮೆ ಮೈ ಮರೆತು, ಮತ್ತೆ ಹಾಗಲ್ಲವೆಂದು
ನೀ ಒಡ್ಡುವ ವಾದಕ್ಕೆ
ನನ್ನ ಮೌನವೇ ಉತ್ತರ
ನಾ ನೀರ ಚಂದಿರ!!

ನಾ ತೊಡಿಸಿದ ಉಂಗುರ
ಬಂಗಾರದ ಬೆಲೆ 
ಉತ್ತುಂಗದಲ್ಲಿದ್ದಾಗ ಕೊಂಡದ್ದು;
ಜೋಪಾನ ಬಲು ಜೋಪಾನ ಕಣೆ,
ಜಲ ವಿಹಾರದಲ್ಲಿ ಬೆರಳಾಡಿಸಿ ಕಳೆದೆಯೋ
ಹಿಂದಿರುಗಿಸೋ ಬೆಸ್ತನಾರೂ ಇರಲಾರ,
ನನ್ನ ಕೆಟ್ಟವನಾಗಿಸುವುದು 
ನಿನ್ನ ಗ್ರಹಚಾರ!!

ನೀ ಹೂವಿನುಡುಪು ತೊಟ್ಟರೆ
ದುಂಬಿಯಾದ ನಾ ಸುಳಿದಾಗ
ಪೋಲಿ ಅನ್ನ್ನದಿರು ಸದ್ಯ 
ಅದು ಪ್ರಕೃತಿ ನೇಮ!!
ಕೂಡಿ ಕಳೆದು ಗಳಿಸಿದ ಅಂಕದಲ್ಲಿ
ಕಾಪಿ ಹೊಡೆದದ್ದೂ ಸೇರಲಿ,
ಸಹಜವಾಗಿದ್ದರೂ ಸರಿಯೇ
ಸಣ್ಣದಾಗದಿರಲಿ ಈ ಪ್ರೇಮ!!

ನಿನ್ನ ಕುರಿತು ಬರೆದವುಗಳಲ್ಲಿ
ನಿನ್ನ ಕಣ್ಣರಳಿಸಿದವುಗಳನ್ನಷ್ಟೇ ಹಿಡಿದು
ಮತ್ತೆ, ಮತ್ತೆ ಯತ್ನಿಸುತ್ತೇನೆ
ಹೆಗ್ಗಳಿಕೆಗಲ್ಲ, ಸಣ್ಣ ಮುಗುಳ್ನಗೆಗೆ!!
ನೀ ಒಪ್ಪುವುದೇ ಮಹಾಕಾವ್ಯ
ಒಪ್ಪದ್ದು ನಿನಗೊಪ್ಪದ್ದು
ನಾನಾರೋ ನಿನಗೆ ತಿಳಿದಿಲ್ಲ
ದಾಸನೋ, ದುಷ್ಯಂತನೋ ಈವರೆಗೆ!!

                                    --ರತ್ನಸುತ

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...