Friday 21 October 2016

"ಸಂತು" ಚಿತ್ರದ "ತಂಗಾಳಿಯಲಿಂದು..." ಹಾಡಿನ ಧಾಟಿಗೆ ಹೆಣ್ಣಿನ ತುಮುಲಗಳ ವ್ಯಕ್ತ ಪಡಿಸುವ ಪ್ರಯತ್ನದ ಸಾಲುಗಳು:

ಪಲ್ಲವಿ
******
ನೀ ಸನಿಹಕೆ ಬಂದು, ಆಡುವ ಮಾತೊಂದು 
ನನ್ನ ಕನಸ ಕದ್ದು ಕೊಂಡೊಯ್ಯುವುದು 
ನೀ ಗಮನಿಸಲೆಂದು, ನಾ ನಗುವೆನು ಎಂದು 
ನನ್ನ ಮನಸು ನಾಚಿ ನೀರಾಗುವುದು 
 
ಹೃದಯದ ಬೀಗ ತೆರೆಯುವ ಮುನ್ನ 
ಕಂಗಳು ತುಂಬಿ ಬರುವುದೇ ಚೆನ್ನ 
ಕದ್ದಲ್ಲಿಯೇ ಕಳುವಾಗಲು ಸಜ್ಜಾಗುವೆ ಬೇಕಂತಲೇ.. 

ನೀ ಸನಿಹಕೆ ಬಂದು....... 
 
ಚರಣ ೧
*******
ಸರಿಯುವ ಸಮಯವನು,ನಿಲ್ಲಿಸಿ ಕೇಳುವೆನು
"ಅವಸರ ಹೀಗೇಕೆ ನಿನಗೆ, ಗೆಳೆಯನು ಇರುವಾಗ?"
ರುಚಿಸದ ಸಂಜೆಗಳು, ರಚಿಸುವ ವ್ಯೂಹದಲಿ 
ಸಿಲುಕುವ ಬಡಪಾಯಿ ನಾನು, ನಿನ್ನನು ತೊರೆದಾಗ 
 
ಬದುಕುವುದ ನೀ ಕಲಿಸು, ಬಡಿದಾಡಿದೆ ಈ ವಯಸು, ನಿನಗಾಗಿ ಮುಡುಪಾಗಿರಲು 
 
ಕಣ್ಣಲಿ ನಿನ್ನ ತುಂಬುವ ನಾನು 
ಜಾರಲು ಬಿಟ್ಟು ಬಾಳುವೆನೇನು?
ಕೈಯ್ಯಲಿದೆ ಕಾಲುಂಗುರ ಸದ್ದಿಲ್ಲದೆ ಒದ್ದಾಡುತ

ನೀ ಸನಿಹಕೆ ಬಂದು....... 

ಚರಣ ೨
*******
ಮರಳಿನ ಮನಸಿನಲಿ ಸ್ವರಗಳ ಮೂಡಿಸುವೆ 
ಉರುಳುವ ಸುಖವೊಂದೇ ನನಗೆ, ಪ್ರೇಮದ ವರದಾನ
ಕೊರಳಿನ ಕೂಪದಲಿ ತೊದಲುವ ಪದಗಳನು 
ಆಲಿಸಿ ಬರೆದಿಟ್ಟೆ ಕೊನೆಗೆ, ಅಚ್ಚಳಿಯದ ಕವನ 
 
ಕೊನೆವರೆಗೂ ಜೊತೆಗಿರುವ, ಭರವಸೆಯ ನೀಡಿಹುದು, ನೀ ಹಿಡಿದ ಈ ಕಿರು ಬೆರಳು 
 
ನನ್ನನೇ ನಾನು ನಂಬುವುದಿಲ್ಲ
ನಿನ್ನನೇ ಪೂರ ನಂಬಿದೆನಲ್ಲ?!!
ಎಚ್ಚೆತ್ತರೆ ನಾ ಸೋಲುವೆ, ಉನ್ಮತ್ತಳೇ ನಾನಾಗುವೆ
 
ನೀ ಸನಿಹಕೆ ಬಂದು....... 
 
                        - ಭರತ್ ಎಂ ವೆಂಕಟಸ್ವಾಮಿ (ರತ್ನಸುತ)

Friday 14 October 2016

ತಿಥಿ

ಅಜ್ಜ ಸೇದಿ ಬೀಟ್ಟ ಬೀಡಿ
ಇನ್ನೂ ಆರುವ ಮೊದಲೇ
ಮೊಮ್ಮಗ ತುಟಿಗೇರಿಸುತ್ತಾನೆ,
ಉಸಿರಿನಾಳಕ್ಕೆ ಹೀರಿ
ಹೊರಹಾಕುವಾಗ ಕೆಮ್ಮುತ್ತ
ಮತ್ತೊಂದು ದೀರ್ಘ ಉಸಿರು
 
ಅಜ್ಜ ಹೊಸಕಿದ ಹೊಗೆಸೊಪ್ಪನ್ನ
ಥೇಟು ಅವನಂತೆಯೇ ದವಡೆಯಲ್ಲಿಟ್ಟು
ಸಿಕ್ಕ ಸಿಕ್ಕಲ್ಲಿ ಉಗುಳುತ್ತ
ಮದ ಏರಿಸಿಕೊಳುತ್ತಾನೆ,
ಕಣ್ಣು ಗಿರ-ಗಿರ ತಿರುಗಿದಾಗ
ಆಕಶಕ್ಕೆ ಕೈ ಚಾಚುತ್ತಾ
ಮೈ ಬೆಚ್ಚಗಾದರೂ ನಡುಗುತ್ತಾನೆ
 
ಅಜ್ಜ ಹೀರುವ ಖೋಡೆ ರಮ್ಮನ್ನ
ಮುಚ್ಚಳದ ಅಳತೆಯಲ್ಲಿ ಚಪ್ಪರಿಸುವ ಆತ
ಊರುಗಾಯಿಯ ದಾಸ,
ಊರುಗೋಲಿಗೆ ಕೊಟ್ಟ ಬೆನ್ನು
ಈಗ ನಿರಾಳವಾಗಿ ಚೇತರಿಸಿಕೊಳ್ಳಬಹುದು!!
 
ತೋಟದ ಮನೆಯ ಗಿಟ್ಟುಗಳ
ಎಲ್ಲೂ ಕಕ್ಕದಿರಲು ದಕ್ಕಿದ ಬಿಲ್ಲೆಗಳ ಬದಲಿಗೆ
ಈಗ ನೋಟುಗಳ ಎದುರು ನೋಟ,
ಎಲ್ಲ ಅರಿವಾದಂತೆ ನಗುವ ಭೂಪನೆದುರು
ಚಪಲ ತೀರದ ಅಜ್ಜನ ಪೆಚ್ಚು ಮೋರೆ
 
ಅತಿಸಾರದಿಂದ ಹಾಸಿಗೆ ಹಿಡಿದು
ಚೊಂಬು ಕಚ್ಚು ಬಿಡಿಸಿಕೊಂಡಲ್ಲಿ
ಕೊನೆ ಉಸಿರ ಎಳೆಯುವಲ್ಲಿಗೆ
ಗೋಡೆಗೆ ಜೋತ ಅಜ್ಜಿಯ ಮುಖದಲ್ಲಿ
ಮಾಸಲು ಮಂದಹಾಸದ ಕುರುಹು;
ಚಟ್ಟಕ್ಕೆ ಬಿದಿರು ತರಹೋದ ವಂಶಸ್ಥರು
ಬುಂಡೆಯಲ್ಲಿ ಮೂಗಿನ ತನಕ ಮುಳುಗಿ...
 
ಡಂಕನಕ, ಡಂಕನಕ
ಡಂಕನಕ, ಡಂಕನಕ
ನೆರೆದವರಲ್ಲಿ ಒಮ್ಮತದ ಅಳಲು
"ಪುಣ್ಯಾತ್ಮ ಎಷ್ಟ್ ಬೇಗ ಸತ್ತ!!"
ದುಃಖಕ್ಕೆ ಬ್ರಾಂದಿಯ ಜೋರು ಗುದ್ದು
ನಿಂತಲ್ಲೇ ಕುಣಿದ ದೇಹದಲ್ಲಿದ್ದ ಸತ್ತವನೇ ಖುದ್ದು!!
                                           
                                                - ರತ್ನಸುತ

Thursday 13 October 2016

ಶರಣಾಗತ

ಬೀಳಬಲ್ಲೆ ನಿನ್ನ ಬಲೆಗೆ
ಹೇಳು ಎಂದು ಹೆಣೆಯುವೆ?
ಕಣ್ಣಿನಲ್ಲೇ ತಾಳ ಹಾಕು
ಹುಚ್ಚನಂತೆ ಕುಣಿಯುವೆ!!
 
ಜೀವ ಭಾಗದಲ್ಲಿ ನನ್ನ
ಸಣ್ಣ ಭಾಗಿಯಾಗಿಸು
ನನ್ನ ಬಯಕೆಯಲ್ಲಿ ನಿನ್ನ
ಬೇಡಿಕೆಗಳ ಕೂಡಿಸು 
 
ದಾರಿ ತಪ್ಪಿ ಬಂದಮೇಲೂ
ಬಾರಿ ಬಾರಿ ಸಿಕ್ಕುವೆ
ಅಲ್ಲೇ ಅನಿಸಿತೆನಗೆ ನೀನು
ನನಗೆ ಮಾತ್ರ ದಕ್ಕುವೆ
 
ಸುತ್ತುವರಿದ ಗೋಜಲನ್ನು
ಮಿಥ್ಯವಾಗಿಸೋಣವೇ?
ಚಾಚಿಕೊಂಡ ಕೈಯ್ಯ ಹಿಡಿಗೆ
ಜೋಡಿ ನಡಿಗೆ ಸಖ್ಯವೇ!!
 
ಗುಳೆ ಹೊರಟ ಹೃದಯಕಿಂದು
ನೆಲೆ ಸಿಕ್ಕ ಭಾವನೆ
ಶಿಲೆ ಎಂದು ಕರೆದು ನಿನ್ನ
ಶುರುವಿಡಲೇ ಬಣ್ಣನೆ?!!
 
ಎಲೇ ಚಿತ್ತ ಚೋರಿ ನಿನಗೆ
ಹೆಸರು ಗಿಸರು ಇಲ್ಲವೇ?
ಅತಿ ಅನಿಸಬಹುದು ನಾನು
ಕೆಟ್ಟಿರುವುದು ಸ್ವಲ್ಪವೇ!!
 
ಸೆಳೆವ ಕಣ್ಣ ಪಠ್ಯದೊಳಗೆ
ಇಂದ್ರಜಾಲ ಹಿಂಗದು
ನೆಟ್ಟ ನೋಟದಲ್ಲಿ ಕಲಿಯೆ
ಜೀವಮಾನ ಸಾಲದು!!
 
                - ರತ್ನಸುತ 

Wednesday 12 October 2016

ಮೌನ ಪರಿಹಾರ

ಪ್ರವಾದಿಗಳು ಅಪ್ಪಣೆ ಹೊರಡಿಸಿದ್ದಾರೆ?
ಮರ್ಮಾಂಗದ ಮುಂದೊಗಲನ್ನು ಕತ್ತರಿಸಿ

ತಿಳಿ ನೀರಲ್ಲಿ ಅದ್ದಿ ಉಸಿರುಗಟ್ಟಿಸಿ
ತಲೆ ಬೋಳಿಸಿ ಗಂಧ ಲೇಪಿಸಿ
ಎದೆ ಸೀಳಿಕೊಂಡು ರಕ್ತ ಹರಿಸಿ
 
ಪ್ರವಾದಿಗಳು ಅಪ್ಪಣೆ ಹೊರಡಿಸಿದ್ದಾರೆ?
ಎಂಜಲಿನ ಮೇಲೆ ಹೊರಳಾಡಿ ಪುನೀತರಾಗಿ
ಅಸ್ತಿತ್ವವೇ ಮಾಯವಾಗುವಂತೆ ಮೈ ಮುಚ್ಚಿ
"ತಾನೊಬ್ಬನೇ" ಒಪ್ಪದವರನ್ನ ದ್ವೇಷಿಸಿ
ಬದುಕು ಕಟ್ಟುವ ಕ್ರಮವನ್ನೇ ಪಲ್ಲಟಗೊಳಿಸಿ
 
ಇವಷ್ಟೇ ಅಲ್ಲದೆ
 
ಪ್ರವಾದಿಗಳು ಸೂಚಿಸುತ್ತಾರೆ
 ಬದುಕಿ, ಬದುಕ ಕಲಿಸಿ, ಬದುಕಲು ಬಿಡಿ
ಹಸಿವನ್ನು ಆಲಿಸಿ, ವಿಷವನ್ನು ಸೋಲಿಸಿ
ಉಸಿರುಸಿರ ಸರದಿಯನ್ನೂ ಪ್ರೀತಿಸಿ

ಸ್ವಾರ್ಥವನು ಹಿಮ್ಮೆಟ್ಟಿ ಈಸಿ
 
ಪ್ರವಾದಿಗಳು ಅಂಗಲಾಚುತ್ತಿದ್ದಾರೆ
"ಸುಳ್ಳು ಪೋಷಾಕಿನಲ್ಲಿ ಆರಾಧಿಸದಿರಿ
ನನ್ನ ವಿವಸ್ತ್ರಗೊಳಿಸಿ ಹಿಂಬಾಲಿಸಿ

ಕಟ್ಟು ಕಥೆಗಳ ಚಿತೆಗೆ ದೂಡದಿರಿ
ಹಗೆತನದ ಕೊಳ್ಳಿಯಲಿ ಸುಡದಿರಿ"
 
ಯಾರೇ ಸತ್ತ ಕಾಲಕ್ಕೆ ಮೌನವಹಿಸುವಂತಾದರೆ
ಅನಾಚಾರದ ಅತಿರೇಕದ ಪ್ರಭಾವಕ್ಕೆ
ಪ್ರವಾದಿಗಳು ಕ್ಷಣ ಕ್ಷಣಕ್ಕೂ ಸಾಯುತ್ತಿದ್ದಾರೆ
ಎಲ್ಲವನ್ನೂ ಬದಿಗಿಟ್ಟು ಮೌನವಹಿಸೋಣ

ಮಾತಿನಿಂದಲೇ ಮನದ ಮನೆ ಹಾಳು!!
 
                                               - ರತ್ನಸುತ

Friday 7 October 2016

ಬದುಕಿದಷ್ಟೂ ಕವಿತೆ

ಬಾನಿಂದ ಭುವಿಗಿಳಿವ ಮಳೆ ಹನಿ
ತನ್ನ ಅಸ್ತಿತ್ವ ಕಂಡುಕೊಳ್ಳುವ ತವಕದಲ್ಲೇ
ಕಮರಿಹೋದ ಕಥೆಗೆ
ಕಣ್ಣೀರು ಉರುಳಿದ್ದು ಸಮಂಜಸವೇ!!
 
ಚಿಗುರೆಲೆಯ ಮುಗುಳಲ್ಲಿ ಚದುರಿದವುಗಳ
ಅಳಲು ಕೇಳಿಬರುವುದಾದರೆ
ವಸಂತಗಳೆಂದೂ ಆಪ್ಯಾಯಮಾನವಾಗಿರದೆ
 ಅಪ್ಪಟ ದಳ್ಳುರಿಯಂತಿರುತ್ತಿದ್ದವು
 
ಅಲೆಗಳ ಬದುಕು ಸಾರ್ಥಕವಾಗುವುದು
ತೀರಕೆ ಒಮ್ಮೆಯಾದರೂ ಅಪ್ಪಳಿಸಿದಾಗ
ಮರಳ ಕೋಟೆ ಉರುಳಿಸಿದ ಪಾಪಕ್ಕೆ
ಶಾಪ ಹೊರುವ ಕನಸೂ ಬೀಳದಿರಲಿ ಅವಕೆ
 
ಧರೆಯ ಅಷ್ಟೂ ಚಾಚಿಕೊಂಡ ನೀಲಿ
ತಾನು ಸುಳ್ಳೆಂದು ನಂಬದ ಕಣ್ಣು
ರೆಕ್ಕೆ ಬಯಸಿದ್ದು ಹಾರಾಟಕ್ಕೆ ಹೊರತು
ನಂಬುಗೆಯ ಸಮರ್ಥಿಸಿಕೊಳ್ಳಲಲ್ಲ
 
ಬೆಳಕು ಎಳೆದದ್ದೇ ಬಣ್ಣ, ಎಳೆದಷ್ಟೇ ಬಿಲ್ಲು
ಸುಳ್ಳಾದರೂ ಮಾಯೆ ಮೆಚ್ಚುಗೆಗೆ ಆಪ್ತ
ನಿಜದ ಮೊಣಚು ಹಸಿ ಗಾಯಗಳು
ಭ್ರಮೆಯ ಲೇಪನದಲ್ಲಿ ಸುಧಾರಣೆ ಕಂಡವು
 
ಹಗಲುಗಳ ಮತ್ಸರಕೆ ಇರುಳಲ್ಲಿ ಉತ್ಸವ
ಸಾಲು ದೀಪಗಳಿನ್ನು ಸೋಲುಣುವುದಿಲ್ಲ
ನಶ್ವರ ನೆರಳನ್ನು ಶಾಶ್ವತಗೊಳಿಸುವುದು
ಶಾಶ್ವತ ನೋವನ್ನು ನಶ್ವರಗೊಳಿಸುವುದು!!
 
                                           - ರತ್ನಸುತ

Thursday 6 October 2016

ಇಷ್ಟು ದಿನದ ಪ್ರೇಮಕ್ಕೆ

ಜೀವ ಸೋಲಬೇಕು
ಇರುವಾಗ ನೀ ಜೊತೆ
ಅನುಮಾನ ಈಗ ನನಗೆ
ನನದೇನು ಈ ಕಥೆ?
ಇನ್ನಷ್ಟು ಸೋಲಬಲ್ಲೆ
ಗೆಲುವಾಗಿ ನೀನಿರೆ
ನಿನ್ನಲ್ಲೇ ನೆಲೆಸುವಾಸೆ
ನಾ ಕೊಚ್ಚಿಹೋದರೆ
 
ಬಲಹೀನನಾದೆ ಚೂರು
ನಿನ್ನೆಲ್ಲ ನೆನಪನು
ಹೊರಲಾಗುತಿಲ್ಲ ಹೃದಯ
ನೀ ನಂಬು ನನ್ನನು
ನೆಪಗಳಿಗೆ ಸಾಲುತಿಲ್ಲ
ಪೋಷಾಕು ಈಚೆಗೆ
ಕಟ್ಟುತ್ತ ಸೊಲ್ಲ ಮಾಲೆ
ಹಗುರಾಗಬೇಕಿದೆ
 
ಆ ರೆಪ್ಪೆ ಅಂಚಿನಲ್ಲಿ
ನೀ ಕಟ್ಟಿ ಹಾಕಿದೆ
ಒಂದೊಂದೇ ಪ್ರೇಮ ಕಾವ್ಯ
ನಾ ಬಿಡಿಸಿ ಓದಿದೆ
ಓದುತ್ತ ಬರೆದೆ ಹಾಗೇ
ನಾನೊಂದು ಕವಿತೆಯ
ಆಗಿಸಲೇ ಬೇಕು ಇದಕೆ
ಆ ಕಣ್ಣ ಪರಿಚಯ
 
ದಡದಲ್ಲಿ ಬಿದ್ದ ಹೆಜ್ಜೆ
ಗುರುತನ್ನು ಬಿಟ್ಟಿತು
ನೀ ಇಡದ ಹೆಜ್ಜೆಯಲ್ಲೂ
ಗುರುತೊಂದು ಮೂಡಿತು
ನೆರಳನ್ನು ತಡೆದು ಆಗ
ಯಾರೆಂದು ಕೇಳಿದೆ
ಎಲ್ಲವೂ ಅದಲು-ಬದಲು
ಮನದಲ್ಲೇ ನಾಚಿದೆ
 
ಗುಣಗಾನಕೀಗ ಕೊಂಚ
ಕಡಿವಾಣ ಹಾಕುವೆ
ಮಧುಪಾನಕೆಂದು ಅಧರ
ಹಸಿದಂತೆ ಕಾದಿವೆ
ಮುತ್ತೆಲ್ಲದಕ್ಕೂ ಮೊದಲು
ಮತ್ತೆಲ್ಲ ನಂತರ
ಕೊನೆಗಾಣೋ ಹಂತದಲ್ಲೂ
ಮುತ್ತೇ ಸುಸ್ವರ!!
                    
                   - ರತ್ನಸುತ

Wednesday 5 October 2016

ಪುನರ್ಜನ್ಮ

ಪೊರೆ ಕಳಚಿ ಹೊಸತಾಗುವಾಗ
ಬೆತ್ತಲಾಗುವ ಭಯವಿಲ್ಲ
ನನ್ನ ಮುಖವಾಡವೂ ಕಳಚಿದೆ
ನಾನಾರೆಂಬುದಾರಿಗೂ ತಿಳಿಯದು


ಹೊಸತೊಂದು ಗುರುತು ಸಿಗಬೇಕಿದೆ
ಸಮರಕ್ಕೆ ಬೇಕಾದ ಶಸ್ತ್ರಾಸ್ತ್ರಗಳ
ಸಿದ್ಧಪಡಿಸಲೆಂದೇ ಕುಲುಮೆ ಹಚ್ಚಿದೆ
ಎಲ್ಲ ಆಯುಧಗಳ ಕಾಯಿಸಿ ತಟ್ಟಬೇಕು
ಸೋತ ಯುದ್ಧಗಳ ಪಾಠ ಕಲಿತು
 
ಸುಮ್ಮನೆ ಯಾರಂದರಾರೊಡನೆ ಕಾದಾಡಲಿ?
ಎದುರಾಳಿಯ ರಕ್ತ ಕುದಿಯಲು ಕಾರಣ ಬೇಕಲ್ಲ?
ಅದಕ್ಕಾಗಿಯೇ ಕ್ರೌರ್ಯ ರೂಢಿಸಿಕೊಂಡೆ
ಯಾರನ್ನೂ ಬಿಡದೆ, ಎಲ್ಲರನ್ನೂ ಎದುರುಹಾಕಿಕೊಂಡೆ
ಇಷ್ಟು ಸಾಕಿತ್ತು ಶತ್ರುಗಳು ಹುಟ್ಟಿಕೊಳ್ಳಲು
 
ಆಶ್ಚರ್ಯವೆಂಬಂತೆ ನನ್ನ ಜೊತೆ ಕೈ ಜೋಡಿಸಲು
ಪಳಗಿದ ಪಡೆಗಳೇ ಸಜ್ಜಾಗಿದ್ದ ಕಂಡೆ
ರಕ್ಕಸತನದ ಕೆಂಡಕ್ಕೆ ಸಿಕ್ಕ ಉರುವಲಾದೆ
ಅರೆ ಬೆಂದ ನಾನು ಚಟ-ಪಟ ಸದ್ದು ಮಾಡುತ್ತ
ಮೈ ಮುರಿದೆ ನೀಗದ ಹಸಿವಿನಿಂದ
 
ಆಚೆಯವರಲ್ಲಿ ಯಾವುದೇ ಆಯುಧಗಳಿರಲಿಲ್ಲ
ಕೇವಲ ಪ್ರಾರ್ಥನೆಗಳೇ ಕೇಳುತ್ತಿತ್ತು
ಅವರೆಲ್ಲ ನನ್ನ ವೈರಿಯೆನ್ನದೆ
ಹಠಕ್ಕೆ ಬಿದ್ದ ಮಗುವಂತೆ ಕಂಡದ್ದು
ನನ್ನ ಇನ್ನಷ್ಟು ಕೆರಳಿಸಿತು
 
ಸರಿಯಾಗಿ ಆಗಲೇ ಮಿಂಚು, ಗುಡುಗು ಸಹಿತ
ಮಳೆಗರೆಯಲು ಶುರುವಾಗಿದ್ದು
ನನ್ನ ಬೇಕುಗಳೆಲ್ಲ ತಣ್ಣಗೆ ನುಣುಚಿಕೊಂಡು
ಅನಿವಾರ್ಯವಾಗಿದ್ದ ಸಾವು ಸಂಭವಿಸಿದ್ದು
ಲೋಕದ ಕಣ್ಣಿಗೆ ನಾನು ಶವವಾಗಿದ್ದೆ
ಆದರೆ ನನ್ನೊಳಗಿನ ತೀರದ ಬಯಕೆಗಳು
ನನ್ನ ಪ್ರಾಣವನ್ನ ತಮ್ಮ ಮುಷ್ಠಿಯಲ್ಲಿ ಬಚ್ಚಿಟ್ಟಿದ್ದವು
ಮತ್ತೆ ಆಕಾರ ಪಡೆದು
ಸುಟ್ಟ ತೊಗಲ ಮೆಲ್ಲ ಸೀಳುತ್ತ ಹೊರ ಬಂದೆ
ಸುತ್ತಲೂ ಪ್ರಶಾಂತತೆ....
                                              
                                              - ರತ್ನಸುತ

ಅತಿ ಮಧುರ ಅನುರಾಗ

ಅತಿ ಮಧುರ ಅನುರಾಗ  ನಿನ್ನೊಲವ ಮಳೆ ಹನಿಗೆ  ಮಿಂದಿರಲು ಮನಸಿದು     ನಿಂತು ನಿಂತು ಬೀಸಿದಂತೆ  ಸಂಜೆ ತಂಪು ಗಾಳಿ  ಅಂಕೆ ಮೀರಿ ಬರುವ ಮಾತು  ಹಾಕಬೇಕೇ ಬೇಲಿ  ಜೊತೆ ಇರಲು ...