Friday 29 March 2024

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ 

ಕೆಂದಾವರೆ ಅರಳಿದೆ 
ಮುಗಿಲೇರಿ ಬರದಲಿ 
ಹನಿಗೂಡಲು ಇಳಿದಿದೆ 
ರವಿಕಾಂತಿ ಸವಿಯುತ 
ಹರಳಂತೆ ಮಿನುಗುತಾ 
ಬೆರಗಲ್ಲೇ ತಯಾರಿಯಾಗುತಿದೆ 

ಮನದಂಗಳ ಮುಂಜಾನೆಯ 
ಸುರಿಸಿದವ ನೀನಲ್ಲವೇ 
ಕಣ್ತಪ್ಪಲ ಸಮೀಪವೇ 
ಉಳಿದಿರಲು ಸಾಕಲ್ಲವೇ 
ಕುಡಿಯೊಡೆಯುವ ಕನಸೊಳಗೂ 
ಇಡುತಿರುವೆ ಕಚಗುಳಿಯ 
ಗಡಿಬಿಡಿಯಲಿ ಗಡಿ ಎಳೆದು 
ಅಳಿಸಿಬಿಡು ಓ ಇನಿಯ 
ಕರಗತವ ಮಾಡಿಸು ನೀ 
ಬರಿಗಣ್ಣಲೇ ಸಂದೇಶ ಕಳಿಸಲು 

ದೇವರೊಬ್ಬನೇ ಅಲ್ಲ

ದೇವರೊಬ್ಬನೇ ಅಲ್ಲ 

ಅವನಂಶ ಕಣಕಣದಲ್ಲೆಲ್ಲ  
ಗುಡಿಯೊಳಷ್ಟೇ ಅಲ್ಲ 
ನಮ್ಮೊಳಗೂ ನೆಲೆಸಿರುವನಲ್ಲ 
ಆಗಲಾದರೆ ನೋಡು 
ನೀ ದೇವರೇ ಆಗಬಹುದು 
ಆದರೆಲ್ಲಕೂ ಮೊದಲು 
ನೀನಾರು ಎಂಬುದ ನೆನಪಿಡು ಮರುಳ 

ಓಡುವ ಸಮಯವೇ

ಓಡುವ ಸಮಯವೇ

ಏಕೆ ಅವಸರ ನಿಂತುಕೋ
ಆಡದ ಮಾತಿಗೂ
ಅರ್ಥ ಹೇಳುವೆ ತಿಳಿದುಕೋ
ಹೋದರೆ ಹೋಗಲಿ
ಯಾರೇ ಆದರೂ ಬಾಳಲಿ
ಉಳಿಯುವ ನೆನಪನು
ನಿನ್ನ ಕಿಸೆಯಲಿ ತುಂಬಿಕೋ...

ನೀ ಮುಳ್ಳನು ನಡೆಸುವ ಚತುರನು
ಅ ಮುಳ್ಳಿಗೆ ಸಿಲುಕಿದ ಪಯಣಿಗ ನಾನು...


ತಿರುವುಗಳು ಕಿರು ಕತೆಯ ಹೇಳಿವೆ ಆಲಿಸು
ನೀ ನೆರಳ ನೀಡದ ಮರದ ಮರುಕವ ದಾಟಿಸು 
ಎರವಲಾಗಿವೆ ಪಡೆಯಲಾಗದ ಸುಖಗಳು 
ನೀ ಪಡೆದ ಕಡೆಯಲೇ  ಎಲ್ಲ ಋಣವನು ತೀರಿಸು 
 

ನಿನ್ನ ಕಂಡ ಮೇಲೆ

ನಿನ್ನ ಕಂಡ ಮೇಲೆ  

ಮಾತು ನಿಂತ ವೇಳೆ 
ಕಣ್ಣಲಿ ನೂರಾರು 
ಕಾಮನೆ ಚಿಮ್ಮುತ್ತಿದೆ 
ಸಲ್ಲದ ಮುಂಗೋಪ 
ತಾಳುವೆ ಹೀಗೇಕೆ 
ನಿಲ್ಲದ ಪರದಾಟ 
ಜೀವಕೆ ಸಾಕಾಗಿದೆ 
ಕಾಗದ ನಾನಾಗುವೆ 
ಗೀಚಿಕೋ ಏನಾದರೂ
ಒಂದೊಂದು ಸಾಲನ್ನೂ ಹಾಡಾಗಿಸು 
ಈ ನನ್ನ ಏಕಾಂತ ದೂರಾಗಿಸು 

ಅದೇ ಹೂವ ಮತ್ತೆ ಮತ್ತೆ 
ನಿಧಾನಕ್ಕೆ ಸೋಕಿ ಹೋದೆ 
ನೆಪ ಹೊತ್ತು ಬರಲೇಕೆ ನನ್ನ ಬಳಿ 
ಕದ ಹಾಕ ಬೇಡ ನೀನು 
ಮುದ ನೀಡೋ ರಾಗ ತಂದು
ಮನಸಾರೆ ಸುರಿವಾಗ ಕನಸಿನಲಿ 
ಓ .. ದಿನ ಪೂರಾ ನಿಂದೇನೇ ಧ್ಯಾನ ಸರಿಹೋಗಿದೆ 
ಪ್ರತಿಯೊಂದು ಪದ ನಿಘಂಟು ಹುಡುಕಾಡಿದೆ  
ಕರೆ ನೀಡು  ಸಮೀಪದಲ್ಲೇ ಎದುರಾಗುವೆ 

ನೀ ಹೆತ್ತಿಲ್ಲವಾದರೂ

ನೀ ಹೆತ್ತಿಲ್ಲವಾದರೂ 

ತಾಯಿಗೂ ಮಿಗಿಲಾದೆ ಅವ್ವ 
ನೀ ತುತ್ತಿಟ್ಟು ಸಲಹಿದೆ 
ಹಸಿವಲ್ಲೂ ತಂಪಾಯ್ತು ಜೀವ 

ನಾ ಹೊರಗಿನವ ಎನ್ನದೆ 
ಸೆರಗಲ್ಲಿ ಜೋಪಾನ ಮಾಡಿ 
ಕಾಣದಿರುವಾಗ
ಕಣ್ಣುಗಳು ತಂತಾನೇ ತೇವ 

ರೆಕ್ಕೆಯಡಿ ಸೆಳೆದು 
ಮಳೆ-ಬಿಸಿಲ ತಡೆದು 
ಹೊತ್ತು ಹೊತ್ತಿಗೆ ಮಿಡಿದೆ 
ಪ್ರೀತಿಯ ತಂತಿ 
ಒಂದೇ ಉಸಿರಲ್ಲಿ 
ಕಳೆದಂತೆ ದಿನ ಪೂರ್ತಿ 
ನೂರು ಕೈಗಳು ನಿನಗೆ
ಎಲ್ಲಿ ವಿಶ್ರಾಂತಿ!

ಕಲ್ಲಿನಂತೆ ನಿಂತೆ 
ಕಷ್ಟಗಳ ಎದುರಿಸಿ 
ಹೂವಂತೆ ಎರಗಿದೆ 
ವಾತ್ಸಲ್ಯ ಪಸರಿಸಿ 
ಎದೆಯೊಳಗಿನ ಚಿಲುಮೆ 
ಕಾವು ಮನೆ ತುಂಬ 
ಸಂಸಾರದರಮನೆಗೆ 
ಆಧಾರ ಸ್ತಂಭ

ದೇವರೆದುರಾದರೆ ಏನ ಬೇಡಲಿ ಹೇಳು 
ಎಲ್ಲವನೂ ಕೊಡುವ ನೀನಿರಲು ಎಂದೆ 
ಎಲ್ಲ ನಗಣ್ಯವೆಂಬತೆ ನೀ ನಗುತಲೇ 
ಬೇಕಾದುದ ಕೊಟ್ಟು ಹೊರಟೆ ಮುಂದೆ 

ಹೇಳಲಾಗದ ನೂರು ನವಿರಾದ ಭಾವ 
ಹೇಳಿ ಬಿಟ್ಟರೆ ಎಲ್ಲ ಹೇಳಿ ಬಿಟ್ಟಂತೆ 
ಅದಕಾಗೇ ಆ ಎಲ್ಲ ಭಾವನೆಗಳ ನನ್ನೊಳಗೆ 
ಯಾರಿಗೂ ಸಿಗದಂತೆ ಮಡಿಸಿ ಬಚ್ಚಿಟ್ಟೆ 

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...