Monday, 29 March 2021

ಸಿಂಗಲ್ ಬ್ಯಾಟರಿ ಹಾಕಲು ತಾನು

ಸಿಂಗಲ್ ಬ್ಯಾಟರಿ ಹಾಕಲು ತಾನು

ತಿಂಗಳುಗಟ್ಟಲೇ ಓಡುವುದು
ಕಷ್ಟ ಪಟ್ಟು ಎಷ್ಟೇ ಓಡಲು
ಗೋಡೆಗೇ ಅಂಟಿ ಕೂರುವುದು

ಮೂರೇ ಮುಳ್ಳಿನ ಅಂತರದಲ್ಲಿ 
ದಿನದ ಲೆಕ್ಕವ ತಿಳಿಸುವುದು
ಹನ್ನೆರಡನ್ನೆರಡರ ಪಾಳಿಯಲಿ
ಹಗಲು ರಾತ್ರಿ ದುಡಿಯುವುದು

ಕೆಟ್ಟರೂ ಅದು ಎರಡೊತ್ತಿನ ವೇಳೆಯ
ಕರಾರುವಾಕ್ಕು ತಿಳಿಸುವುದು
ತಾಸಿಗೆ ಮೂವತ್ತಾರು ನೂರು
ಕ್ಷಣಗಳು ರೋಚಕ ಅನಿಸುವುದು

ಎಲ್ಲಕೂ ಸಾಕ್ಷಿಯಾದರೂ ಅಲ್ಲಿ
ಯಾರ ಪರವೂ ನಿಲ್ಲದದು
ಲೋಕವೇ ಹತ್ತಿ ಉರಿಯುತಲಿದ್ದರೂ
ಕಾಯಕ ಮುಂದುವರಿಸುವುದು

ತಾತನ ಕಾಲದ ಗಡಿಯಾರವದು
ಒಮ್ಮೆಗೆ ನಿದ್ದೆಗೆ ಜಾರುವುದು
ಕೀಲಿ ಕೊಟ್ಟರೆ ಮತ್ತೆ ಚಿಗರೆಯ
ಧಾಟಿಯಲಿ ಚೇತರಿಸುವುದು

ರಿಮೋಟ್ ಚಾಲಿತ ಗೊಂಬೆಗಳೀಚೆಗೆ
ಕಂತು ಬ್ಯಾಟರಿ ನುಂಗುವುದು
ಈಗಲೂ ಸಿಂಗಲ್ ಬ್ಯಾಟರಿಯಲ್ಲೇ
ತೂಗು ಗಡಿಯಾರ ಓಡುವುದು..

ಕದವ ನೀ ತೆರೆ

ಕದವ ನೀ ತೆರೆ

ಮಡಿಲಾಗು ಕನಸಿಗೆ
ಮುದವಾಗಿ ಕರೆ
ಮಗುವಂತೆ ಮನಸಿಗೆ
ನಾ ನಿರೂಪವಾದೆ 
ಕೈಯ್ಯಾರೆ ನನ್ನ, ನೀ ಬಾಚಿಕೊಂಡು 
ಆಕಾರವನ್ನು ನೀಡಬೇಕಿದೆ 
ಆಧಾರವನ್ನು ನೀಡಬೇಕಿದೆ.. 

ಉಸಿರಾಗಿ ಬೆರೆ 
ಹೆಸರಾಗಿ ಬದುಕಿಗೆ 
ಬೆಳಕಾಗಿ ಇರೆ 
ಹೊಸ ದಾರಿ ದೊರತಿದೆ 
ನಾ ನಿರೂಪವಾದೆ 
ಕಣ್ಣಲ್ಲೇ ನನ್ನ, ಚಿತ್ತಾರವನ್ನು 
ನೀ ಗೀಚುವಾಗ ಸೋಲಬೇಕಿದೆ 
ನಾ ನನ್ನಲೇ ಸೋಲಬೇಕಿದೆ... 

ಸುಳಿವಿರದ ಮಳೆ 
ಈ ಹಾಳೆ ನೆನೆದಿದೆ  
ಮೊದಮೊದಲ ಪದ 
ತುಟಿಯಲ್ಲೇ ಕುಳಿತಿದೆ 
ನಾ ನಿರೂಪವಾದೆ 
ನೀ ದೂರ ಎಲ್ಲೋ, ಅಡಗಿದ್ದು ಸಾಕು 
ಅಳಿಯೋಕೂ ಮುನ್ನ ಓದಬೇಕಿದೆ 
ನೀ ಮೌನವನ್ನೂ ಓದಬೇಕಿದೆ 

ಗರಿಗೆದರಿ ಮನ 
ನಶೆಯೇರಿ ಕುಳಿತಿದೆ 
ಎಲೆಯುದುರಿ ಮರ 
ನನ್ನಂತೆ ಅನಿಸಿದೆ 
ನಾ ನಿರೂಪವಾದೆ 
ನೀ ಬಿಟ್ಟು ಹೋದ, ನೆನಪೊಂದೇ ನನ್ನ 
ಆಲಸ್ಯವನ್ನು ದೂರ ಮಾಡಿದೆ 
ಆ ದೃಶ್ಯವಿನ್ನೂ ಕಾಡುವಂತಿದೆ 

ಕತೆ ಮುಗಿವಾಗಲೇ 
ಪುಟವಿನ್ನೂ ಉಳಿದಿದೆ 
ಜೊತೆ ಕೊಡಲಾದರೆ 
ಧರೆಯು ಕಿರಿದಾಗಿದೆ
ನಾ ನಿರೂಪವಾದೆ 
ನೀ ಮೀಟುವಾಗ, ಸಾರಂಗಿಯಾದೆ 
ಒಂದೊಂದೇ ರಾಗ ಹೊಮ್ಮುವಂತಿದೆ
ನಾ ಜೀವಂತವಾದಹಾಗಿದೆ.. 

ಹೋಗುವ ಆ ದೂರಕೆ ದಾರಿಯನ್ನು ಕೂಡುತಾ

ಹೋಗುವ ಆ ದೂರಕೆ ದಾರಿಯನ್ನು ಕೂಡುತಾ 

ಹ್ಮ್ಮ್...  
ಹೋಗುವ ಆ ದೂರಕೆ ದಾರಿಯನ್ನು ಕೂಡುತಾ 
ಆಡದ ಮಾತನು ಆಡದೆ ಸತಾಯಿಸು 
ಸಾಗಿದೆ ಸವಾರಿಯು ಸೇರಲು ದಿಗಂತವ 
ತಾರೆಯ ತಾಕಲು ನನ್ನನು ನಿಭಾಯಿಸು

ಬಯಸದೆ ಬರುವಂತೆ ಕನಸು ನೂರು 
ಅದರಲಿ ಹುಡುಕುವೆನು ನಾ ನಿನ್ನನ್ನು 
ತೊದಲುವ ಹೃದಯದಲಿ ಇಳಿದು‌ ನೋಡು 
ಸವರುತ ಒಲುಮೆಯಲಿ ಹನಿಗಣ್ಣನು

ಆದರೆ ಹೇಗಾದರೂ ಹಾರು ನನ್ನ ಬಾನಿಗೆ 
ಸಂತೆಯ ಆಚೆಗೆ ಸಣ್ಣ ಗೂಡ ನೇಯುವ 
ಹೋಗುವ ಆ ದೂರಕೆ ದಾರಿಯನ್ನು ಕೂಡುತಾ 
ಆಡದ ಮಾತನು ಆಡದೆ ಸತಾಯಿಸು 

ಬರೆಯುತ ಕುಳಿತಾಗ ನಿನ್ನ ಕುರಿತಂತೆ  
ಮರೆಯುವೆ ಜಗವನ್ನೇ ನಾ 
ಕಾಡುವೆ ಹೀಗೇಕೆ ಗಳಿಗೆಯೂ ಬಿಡದಂತೆ
ಆಗಿಸಿ ರೋಮಾಂಚನ 
ಇರಾದೆ ಹೀಗಿರುವಾಗ ಸರಿಹೋಗಲಿ ಹೇಗೆ 
ಹೇಳೆಯಾ, ನೀ ಹೇಳೆಯಾ 
ಸಮಾಚಾರ ಏನೆಂದು ಕೇಳೋಕೆ ನೀ ಬೇಗ 
ಬಾರೆಯಾ, ನೀ ಬಾರೆಯಾ 

ತಂತಿಯಾಗಿ ತಾಳುವೆ, ಮೀಟುವಾಗ ನನ್ನನು 
ಜಾರಲಿ ಸಂಜೆಯು ಇಂದು ನಮ್ಮ ಗುಂಗಲಿ 
ಹೋಗುವ ಆ ದೂರಕೆ ದಾರಿಯನ್ನು ಕೂಡುತಾ 
ಆಡದ ಮಾತನು ಆಡದೆ ಸತಾಯಿಸು 

ಹಾರುವ ಪತಂಗವೇ

ಹಾರುವ ಪತಂಗವೇ 

ನೀ ದೂರ ದೂರವಾಗುವೆ 
ನೂಲಿನ ಈ ಅಂಚಿಗೆ 
ನಾನೊಂದು ಮಾತು ಹೇಳುವೆ

ಸ್ವರ ಸಂಚರಿಸಿ ತಲುಪಲು 
ತಡ ಆಗುವುದು ಸಹಜ 
ಕೆಲವೊಮ್ಮೆ ನಡುವೆ ಎಲ್ಲೋ 
ಕಳುವಾದದ್ದೂ ನಿಜ 

ನಿನ್ನ ಮೈ ಬಣ್ಣ 
ಹಿಂದೆಂದಿಗಿಂತಲೂ ಭಿನ್ನ 
ಆಕಾಶದ ನೀಲಿ 
ಬದಲಾಯಿಸಿತೇ ನಿನ್ನ?

ನನ್ನ ಒಲ್ಲದ ಮನಸು 
ಹಾರು ಎಂದಾಗ 
ಚಂಗನೆ ಜಿಗಿದೆ
ಕ್ಷಣಮಾತ್ರಕೆ ಗಾಳಿಯ ತೆಕ್ಕೆಗೆ 

ನಿನ್ನ ಎದೆಗೊತ್ತಿ ಬರೆದ 
ನನ್ನೆದೆಯ ಗುಟ್ಟುಗಳು 
ಬಾನುಲಿಯಾಗಿ ರಿಂಗಣಿಸುತ್ತಿವೆ 
ಬಯಲು ಮಾಡಿದೆಯಾ ಹೇಗೆ?

ಸೂತ್ರ ಬಿಗಿದವ ನಾನೇ;
ನನ್ನ ಅರಿವಿನ ಪ್ರಕಾರ 
ನೀ ಬಹಳ ದೂರ ಹಾರುವುದು 
ಸೂಕ್ತವಲ್ಲ ಎಂದು ನೂಲು ಜಗ್ಗಿದಾಗ 
ನೀ ಖೋತಾ ಹೊಡೆದೆ
ಆಗ ನಾ ನೂಲನ್ನು 
ಮತ್ತು ನನ್ನ ಹಠವನ್ನೂ
ಬಿಟ್ಟುಕೊಡದೆ ದಾರಿಯಿರಲಿಲ್ಲ 

ನೀ ನಲಿವಿನ ಸಂಕೇತ 
ಲೋಕಕ್ಕೆ 
ನನ್ನ ಗತಿ..
ಬೇನೆಯ ವಿಚಾರಿಸುವವರಾರು?

ಬಿಡಿ ಬಿಡಿಯಿದ್ದಾಗ ರದ್ದಿ 
ನಾ ಮುದ್ದಿಸಿ ಜೋಡಿಸಿದ್ದೆ
ಈಗ ಎತ್ತರದಲ್ಲುಳಿದು
ನನ್ನ ಎಕಶ್ಚಿತ್ತಾಗಿಸದಿರು 

ಸಾಕು ಮುಗಿಲ ಮೋಹ 
ಮರಳಿ ಬಾ ಅವನಿಗೆ 
ಮಧುರಾಮೃತ ಉಣಿಸೆ 
ಕಾದು ಹಸಿದವನಿಗೆ 

ನಾ ಮಾಲೀಕನೆಂಬ
ಅಹಂಕಾರದ ಕಾರಣಕ್ಕೆ
ಇನ್ನೂ ನೆಲಕ್ಕೇ ಅಂಟಿರುವೆ;
ನೀ ಕಾಗದದ ತುಂಡಾಗಿಯೂ
ಬಾಂದಳ ಮುಟ್ಟಿ
ನೂಲು ಬಿಡಿಸಿಕೊಂಡು‌ ನಕ್ಷತ್ರವಾಗಿರುವೆ...

ತಾ ಕಣ್ಮುಚ್ಚುವುದನ್ನೇ

ತಾ ಕಣ್ಮುಚ್ಚುವುದನ್ನೇ

ನಿಬ್ಬೆರಗಾಗಿ ನೋಡುವ ನೆಲ

ತಾ ಕಣ್ದೆರೆಯುವ ವೇಳೆ
ಮೈ ನವಿರೇಳಲ್ಪಡುವ ನೆಲ
ಕಣ್ಣುಗಳ ಸಾಕ್ಷಿಗೆ ಬಿಟ್ಟು
ಬಣ್ಣಗಳ ನಕ್ಷೆಯನಿಟ್ಟು
ನೀಗಿಸಿತು ಜಗದ ತುಮುಲ
ಕಿರಣ ಸೇತು ಕೂಡುಸಿತು
ನೆಲ ಮತ್ತು ಮುಗಿಲ...

ಬಾ ಹೋಗೋಣ

ಬಾ ಹೋಗೋಣ

ಈ ಕಿರಿದಾದ ರಸ್ತೆಯ
ಕಣ್ಮುಚ್ಚಿ ದಾಟಿ ನೋಡುವ
ನೀ ಸುಮ್ಮನೆ ಬೆರಳ ಹಿಡಿ

ಬಾ ಹೋಗೋಣ
ಮಳೆ ನೀರ ಝರಿಯಲ್ಲಿ
ದೋಣಿಯ ಮಾಡಿ ಬಿಡುವ
ಇದೋ ಬಣ್ಣದ ಹಾಳೆಯ ಹಿಡಿ

ಈ ತಂಪು ಗಾಳಿಯ ಹಾವಳಿ
ಈ ಇಂಪು ನೀಡುವ ಹಾಡಲಿ
ರೋಮಾಂಚಕ ಸಾಲೊಂದಿದೆ 
ಆಲಿಸಿ ಹೋಗುವ ತಡಿ 

ಬಾ ಹೋಗೋಣ
ಆ ತಿರುವಲ್ಲಿ ಜೊತೆಯಾಗಿ
ಹೂಬಳ್ಳಿ ನೆಟ್ಟು ಬರುವ
ನಗೋ‌ ಹೂವಿಗೆ ನಾವೇ ಕನ್ನಡಿ

ಬಾ ಹೋಗೋಣ
ಕತೆಯೊಂದ ನುಡಿವಂತೆ
ಕಡಲನ್ನು ಕೇಳಿಕೊಳ್ಳುವ
ಅಲೆ‌‌ ಬರೆಯಲಿ ಮುನ್ನುಡಿ


ಹೇಳೋದು ಬಾಕಿ ಏನಿದೆ?
ಕಣ್ಣಲ್ಲೇ ಎಲ್ಲ ಹೇಳಿದಾಗ 
ಕೈಯ್ಯಲ್ಲಿ ಕೈಯ್ಯಿಟ್ಟು ನೋಡು 
ದೂರ ಎಂಬುದೆಲ್ಲವೂ 
ಮೂರೇ ಗೇಣಿನಲ್ಲಿ ನಮ್ಮದಾಯಿತೀಗ 
ಆಲಸ್ಯ ಮಾಡಲೇತಕೆ?
ಕನಸು ಒಂದೇ ಆಗುವಾಗ 
ಜರುಗಿ ಬಿಡಲಿ ಬೇಗ 
ಸಮಯವಿನ್ನೂ ಮುಂದಿದೆ 
ಈ ಮಾತು ಮೌನವೆಲ್ಲ ಕೂಡಿ ಸಾಗುವಾಗ 

ಈ ಸವಾಲು ಜವಾಬಿನಾಟಿಕೆ 
ಈ ಸವಾರಿ ಆಡಿಸೋ ಆಟಕೆ 
ನಿನ್ನೊಂದಿಗೆ ಸೇರಾಗಿದೆ
ನಾನಾಗೇ ಸೋಲುವೆ ತಡಿ 
ಆಹಾ ಹಾ.. 


ಬಾ ಹೋಗೋಣ
ಈ ಚಿಟ್ಟೆಗೆ ಬೇಕಾದ 
ಹೂದೋಟ ಮಾಡಿ ಬರುವ 
ನೀ ಜಾರದೆ ಮೆಲ್ಲಗೆ ನಡಿ 

ಬಾ ಹೋಗೋಣ 
ಈ ಇರುಳೆಂಬ ಬೆಳಕಲ್ಲಿ 
ಕಣ್ಣಾ-ಮುಚ್ಚಾಲೆ ಆಡುವ 
ನಾ ಎಲ್ಲೆಂದು ಕಂಡು ಹಿಡಿ

ಈ ತಂಪು ಗಾಳಿಯ ಹಾವಳಿ
ಈ ಇಂಪು ನೀಡುವ ಹಾಡಲಿ
ರೋಮಾಂಚಕ ಸಾಲೊಂದಿದೆ 
ಆಲಿಸಿ ಹೋಗುವ ತಡಿ 

ಅಂಬರದ ತುಂಬ ನಿನ್ನ ಹೆಜ್ಜೆ ಗುರುತು ಸಂಜೆ ಮೂಡಿದಂತೆ (Revised)

 *ಪಲ್ಲವಿ*

ಅಂಬರದ ತುಂಬ ನಿನ್ನ ಹೆಜ್ಜೆ ಗುರುತು ಸಂಜೆ ಮೂಡಿದಂತೆ
ಕಿಟಕಿಯ ಗಾಜಿನಲ್ಲಿ ನಿನ್ನ ಹೆಸರ ಹನಿಯು ಗೀಚಿದಂತೆ 
ನಿಧಾನಿಸದೆ ಆsss, ಕಾಣಿಸು ಬೇಗ
ಮಿಡಿಯುತಿದೆ ನನ್ನ ಹೃದಯ
ಇನ್ನೊಮ್ಮೆ ಕೇಳಿ ಮೊರೆಯ
ನೀ ನಿಜವೆಂದು ಹೇಳಿ ಮರೆಯಾಗು ಓ..
ಅಂಬರದ ತುಂಬ ನಿನ್ನ ಹೆಜ್ಜೆ ಗುರುತು ಸಂಜೆ ಮೂಡಿದಂತೆ

ಕಿಟಕಿಯ ಗಾಜಿನಲ್ಲಿ ನಿನ್ನ ಹೆಸರ ಹನಿಯು ಗೀಚಿದಂತೆ 

*ಚರಣ ೧*

ಮರಳ ಮೇಲೆ ಪ್ರಣಯದ ಬರಹ, ಅಲೆಯೊಳು ಕೂಡುತಿವೆ 
ಹುದುಗಿದ ಭಾವಗಳ ಚಿಪ್ಪಲಿ ತುಂಬಿ ನಿನ್ನನು ಸೇರುತುವೆ 
ಓ..  ಮರಳ ಮೇಲೆ ಪ್ರಣಯದ ಬರಹ, ಅಲೆಯೊಳು ಕೂಡುತಿವೆ   
ಹುದುಗಿದ ಭಾವಗಳ ಚಿಪ್ಪಲಿ ತುಂಬಿ ನಿನ್ನನು ಸೇರುತಿವೆ 
ಎದುರಾದರೆ ನೀ, ಹಗುರಾಗುವೆನು
ಸ್ವರ ಸಂಚಯಕೆ ಜೊತೆಯಾಗುವೆನು
ಹೇಗಾದರೂ ಈ ಕನಸ ನನಸಾಗಿಸೆಯಾ? (೨)
ಮಿಡಿಯುತಿದೆ ನನ್ನ ಹೃದಯ
ಇನ್ನೊಮ್ಮೆ ಕೇಳಿ ಮೊರೆಯ
ನೀ ನಿಜವೆಂದು ಹೇಳಿ ಮರೆಯಾಗು ಓ..


ಅಂಬರದ ತುಂಬ ನಿನ್ನ ಹೆಜ್ಜೆ ಗುರುತು ಸಂಜೆ ಮೂಡಿದಂತೆ
ಕಿಟಕಿಯ ಗಾಜಿನಲ್ಲಿ ನಿನ್ನ ಹೆಸರ ಹನಿಯು ಗೀಚಿದಂತೆ  

*ಚರಣ ೨*

ಮುಗಿಯದ ಮಾತೆಲ್ಲ ಕಣ್ಣಲಿ ಜಿನುಗಿ ಖುಷಿಯಲಿ ಜಾರುತಿವೆ 

ಮರಳಿ, ಮರಳಿ ಹರಿದು ಬರೆದ ಕವಿತೆಗಳು ನಿನ್ನವೇ 

ಓ... ಮುಗಿಯದ ಮಾತೆಲ್ಲ ಕಣ್ಣಲಿ ಜಿನುಗಿ ಖುಷಿಯಲಿ ಜಾರುತಿವೆ 

ಮರಳಿ, ಮರಳಿ ಹರಿದು ಬರೆದ ಕವಿತೆಗಳು ನಿನ್ನವೇ 

ಎದುರಾದರೆ ನೀ, ಹಗುರಾಗುವೆನು

ಸ್ವರ ಸಂಚಯಕೆ ಜೊತೆಯಾಗುವೆನು
ಹೇಗಾದರೂ ಈ ಕನಸ ನನಸಾಗಿಸೆಯಾ? (೨)  
ಮಿಡಿಯುತಿದೆ ನನ್ನ ಹೃದಯ
ನೀನೊಮ್ಮೆ ಕೇಳಿ ಮೊರೆಯ
ನೀ ನಿಜವೆಂದು ಹೇಳಿ ಮರೆಯಾಗು ಓ..

ಅಂಬರದ ತುಂಬ ನಿನ್ನ ಹೆಜ್ಜೆ ಗುರುತು ಸಂಜೆ ಮೂಡಿದಂತೆ

ಕಿಟಕಿಯ ಗಾಜಿನಲ್ಲಿ ನಿನ್ನ ಹೆಸರ ಹನಿಯು ಗೀಚಿದಂತೆ(೨) 

ಸಿಂಗಲ್ ಬ್ಯಾಟರಿ ಹಾಕಲು ತಾನು

ಸಿಂಗಲ್ ಬ್ಯಾಟರಿ ಹಾಕಲು ತಾನು ತಿಂಗಳುಗಟ್ಟಲೇ ಓಡುವುದು ಕಷ್ಟ ಪಟ್ಟು ಎಷ್ಟೇ ಓಡಲು ಗೋಡೆಗೇ ಅಂಟಿ ಕೂರುವುದು ಮೂರೇ ಮುಳ್ಳಿನ ಅಂತರದಲ್ಲಿ  ದಿನದ ಲೆಕ್ಕವ ತಿಳಿಸುವುದು ಹನ್...