ಒಂದು ಖಾಲಿ ಹಾಳೆ
ಎರಡೇ ತೊಟ್ಟು ಶಾಹಿ
ಆತ್ಮಾವಲೋಕನಕ್ಕೆ
ಆಸೆಗಳ ಗೀಚಿಕೊಳ್ಳೋಕೆ
ಒಂದು ಬದುಕಿನ ಕ್ಯಾನ್ವಾಸು
ಎರಡೇ ಬಣ್ಣದ ಆಯ್ಕೆ
ನೋವುಗಳ ಬಣ್ಣಿಸೋಕೆ
ನಲಿವುಗಳ ಚಿತ್ರಿಸೋಕೆ
ಒಂದು ದಾರಿಯ ಕೊನೆ
ಎರಡೇ ಹೆಜ್ಜೆ ಜಾಗ
ಮುಂದಿಡಲು ಒಂದೆಜ್ಜೆ
ಹಿಂದಿಡಲು ಒಂದು
ಒಂದು ದಟ್ಟ ಕಾಡು
ಎರಡೇ ಕಣ್ಣು
ಮುನ್ನೋಟ, ಬೆನ್ನೋಟಕ್ಕೆ
ನಂದಿದ ಕಂದೀಲು
ಒಂದು ಮಾಯದ ಕನ್ನಡಿ
ಎರಡು ಬಿಂಬ
ಊಹೂಂ, ಒಡೆದಿಲ್ಲ
ಅವೆರಡು ನನ್ನವೂ ಅಲ್ಲ
ಒಂದು ಶಬ್ಧ
ಒಂದು ಮೌನ
ಎರಡರ ಸಂಘರ್ಷ
ಒಂದರ ನಿರ್ನಾಮ, ಯಾರದ್ದು?
ಒಂದು ರಾತ್ರಿ
ಒಂದು ಹಗಲು
ಎರಡರ ಅನುಸಂಧಾನ
ಮಂಕು ಮುಸ್ಸಂಜೆ
ಒಂಟಿ ನೆರಳು, ಮತ್ತು
ಒಬ್ಬಂಟಿ ನಾನು!
No comments:
Post a Comment