Sunday 17 August 2014

ಹಳೆ ಚಿಗುರು

ಮುಂಜಾವಿನ ಮಂಜಿನ ನಡುವೆ
ನಿನ್ನ ನೆನಪಲ್ಲಿ ಬೆವೆತಿದ್ದೇನೆ
ಒಲೆಯ ಕಾವಿನೆದುರು
ನೀ ನೆನಪಾಗದೆ ನಡುಗಿದ್ದೇನೆ

ಹೂವ ಕಂಪನು ನಿನಗೆ ಜೋಡಿಸಿ
ಪೂರ್ಣಗೊಳಿಸಿದ್ದೇನೆ
ನಿನ್ನ ಕಿರು ನಗೆಯ ನೆಪದಲ್ಲಿ
ಒಂದು ಲಕ್ಷ ಬಾರಿಯಾದರೂ 
ನಾ ನನ್ನ ಸೋಲಿಸಿದ್ದೇನೆ!!

ಊಟಕ್ಕೂ ಮೊದಲು ಕೈ ತೊಳೆದು
ಮೇಲೆದ್ದಿದ್ದೇನೆ
ನಿದ್ದೆಗಣ್ಣಲಿ ಇರದ ಲೋಕದಲಿ
ನಿನ್ನನ್ನೇ ಹೊದ್ದುಕೊಂಡಿದ್ದೇನೆ

ಹಾಳೆ ಹರಿದಿದ್ದೇನೆ, ಮಾತ ಮುರಿದಿದ್ದೇನೆ
ಅಸಹಜವಾಗಿ
ಹಾಡಿಕೊಂಡಿದ್ದೇನೆ, ಹೆಸರ ಕೂಗಿದ್ದೇನೆ
ಮೌನವಾಗಿ!!

ಕಾದು ಕರಗದ ಕಬ್ಬಿಣ ಹೃದಯದಲಿ
ಕಬ್ಬಿನ ರಸವ ಸವಿದಿದ್ದೇನೆ
ಇದ್ದೂ ಇರದ ನಿನ್ನ ನೆನಪ ಬೀದಿಯಲಿ
ಅಡಿಯಿಡದಂತೆಯೇ ಸವೆದಿದ್ದೇನೆ!!

ಎಲ್ಲ ಬಲ್ಲವನಂತೆ ಮೊದಲಾಗಿಸಿ
ಏನೂ ಹೊಳೆಯದ ಸಾಲಲ್ಲಿ ಕೊನೆಗೊಳಿಸಿದ್ದೇನೆ
ಆದಷ್ಟೂ ಯಾತನೆಗಳ ಮೀರಿ
ನಿನಗೊಂದಿಷ್ಟು ಉಳಿಸಿಬಿಟ್ಟಿದ್ದೇನೆ!!

-- ರತ್ನಸುತ

ತಿರಂಗಾ ತರಂಗ

ಬಿಳಿ ಸೀರೆಗೆ ಮುಳ್ಳು ತಾಕಿ
ಹರಿದಾಗಿನ ಸದ್ದ
ಯಾರೋ ಕದ್ದು ಕೊಂಡೋಗಿರಬೇಕು;
ಉಟ್ಟವಳಿಗೆ ಕೇಳಿಸಲೇ ಇಲ್ಲ!!

ಸ್ವತಂತ್ರ ದಿವಸಕ್ಕೆ
ಎಲ್ಲರಿಂದಲೂ ಸಂಭ್ರಮಾಚರಣೆ;
ಒಬ್ಬೊಬ್ಬರಾಗಿ ಹರಿದ ಸೀರೆಯ ಕಂಡು
ಗೊಳ್ಳೆಂದು ನಕ್ಕು ಸುಮ್ಮನಾಗುತ್ತಾರೆ,
ದೇಶ ಪ್ರೇಮದ ನೆನಪಾಗಿ;

ಹೀಗೇ ಆ ಸಂತೆ ಬೀದಿಯ ತುಂಬ
ಹರಿವಿನಾಚೆ ಕಂಡ
ಆರಿಂಚು ತೊಗಲನ್ನ್ನ
ಕಣ್ತುಂಬಿಸಿಕೊಂಡ ಸೋದರರು
ತಮ್ಮದೇ ಧಾಟಿಯ
ಊಹಾ ಸಾಮ್ರಾಜ್ಯದಲ್ಲಿ
ಅಟ್ಟಹಾಸ ಮೆರೆದು ವಾಪಸ್ಸಾಗುತ್ತಾರೆ!!

ಅತ್ತ, ಆ ಹೆಂಗಸು
ಸಂತೆಯೆಲ್ಲ ಸುತ್ತಿ
ಏನೋ ಕಳೆದವಳಂತೆ ಪರದಾಡುತ್ತ
ಮುಂದಿಟ್ಟ ಹೆಜ್ಜೆಯ ಹಿಂದೆಕ್ಕೆ,
ಹಿಂದಿಟ್ಟ ಹೆಜ್ಜೆಯ ಮುಂದಕ್ಕಿರಿಸುತ್ತ
ಇದ್ದಲ್ಲೇ ಬೆಂದುಹೋಗುತ್ತಾಳೆ;

ಯಾರೋ ಹಸಿರು ಸೀರೆಯುಟ್ಟ
ಛಲವಾದಿ ಹೆಂಗಸು
ಕೈ ಬೀಸುತ್ತ ಧಾವಿಸುತ್ತಾಳೆ;
ಹರಿದ ಭಾಗಕೆ ತನ್ನ
ಸೆರಗ ತುಂಡನು ಸೇರಿಸಿ
ತೇಪೆ ಹಾಕುತ್ತಾಳೆ!!

ತಂಪು ಗಾಳಿಯ
ಸಂಜೆ ಬಾನಿಗೆ
ಗಂಟು ಕಳಚಿದ ಸೀರೆ ಅಂಚು
ಹೊಂಬೆಳಕ ಸೋಸುವ
ತರಂಗದ ಮಡಿಲಾಗಿ
ಕೇಸರಿಯ ಹೊಸೆದುಕೊಳ್ಳುತ್ತದೆ!!

ನೆರೆದವರೆಲ್ಲ ತಿರಂಗಾ ಪ್ರತಿಮೆಯಲಿ
ತಾಯಿಯ ಪ್ರತಿರೂಪ ಕಂಡು
ಕೈಯ್ಯೆತ್ತಿ ನಮಸ್ಕರಿಸುತ್ತಾರೆ;
ಭಾರತಾಂಬೆ ನಗುತ್ತಾಳೆ
ನಿಜ ಸ್ವಾತಂತ್ರ್ಯದ ಆಚರಣೆಯಿಂದ!!

-- ರತ್ನಸುತ

ನಾವು ನಮ್ಮವರು

ಊರುಗೋಲ ಸವೆದ ಹಿಡಿಯ
ನೂರು ಕೋಟಿ ರೇಖೆಗಳನು
ಎಣಿಸಲಾಗದವರು ನಿನ್ನ
ಆಡಿಕೊಂಡು ನಕ್ಕರು;
ನಿನ್ನ ಮೌಲ್ಯಗಳನು ಸುಟ್ಟ
ಭಸ್ಮವೆಂದು ಸಾರಿದವರು
ನಿನ್ನ ಮೌನದೊಳಗೆ ನೂರು
ಅಂಧ ಅರ್ಥ ಕಂಡರು!!

ಉಪ್ಪು ತಿಂದು ಕೊಬ್ಬಿದವರು
ಸೊಕ್ಕು ಮಾತನಾಡುವವರು
ಹಿಂದೆ ಹೊರಳಿ ಮುಗಿದ ಗತವ
ಮರೆತು ತೇಗುತಿರುವರು;
ಸ್ವಂತ ಚಿತ್ತವಿಲ್ಲದವರು
ಅಂತೆ-ಕಂತೆ ಓದಿಕೊಂಡು
ನೀನು ನಕ್ಕು ಹೋದಲೆಲ್ಲ
ಕ್ಯಾತೆ ತೆಗೆಯುತಿರುವರು!!

ಕಪ್ಪು ಚುಕ್ಕೆ ಅಂಟಿದಲ್ಲಿ
ಬೆಟ್ಟು ಮಾಡಿ ಕೂತ ಮಂದಿ
ಕೆನ್ನೆಗಂಟಿದಂಥ ಮಸಿಯ
ಮರೆಸುವಷ್ಟು ಮುಗ್ಧರು;
ಶಸ್ತ್ರ ಹಿಡಿದು ರೊಚ್ಚಿಗೆದ್ದ
ಕುದಿ ರಕ್ತ ಹರಿವಿನವರು
ಶಾಂತಿ ಮಂತ್ರದಲ್ಲಿ ಹುಳುಕು
ಹುಡುಕುವಂಥ ಮೂಢರು!!

"ನಾನು" ಎಂಬುದೊಂದೇ ತುಮ್ಮ
ಅಂತರಾತ್ಮದಲ್ಲಿ ನೆಟ್ಟು
ತ್ಯಾಗ ದೂರ ಬೆಟ್ಟ ಮಡಿಲ
ನೀರ ಪಯಣವೆಂದರು;
ತೊಟ್ಟು ರಕ್ತ ಹರಿಸದಂತೆ
ಹೆಜ್ಜೆ ಗುರುತು ಇರಿಸದಂತೆ
ಬೀದಿಗೊಂದು ನಾಮ ಫಲಕ
ತಮ್ಮ ಹೆಸರ ಕೊರೆದರು!!

ಮೂರು ಹೊತ್ತು ತಪ್ಪದಂತೆ
ಹೊಟ್ಟೆ ಪಾಡು ನೀಗಿಸುತ್ತ
ಹಸಿವ ಕುರಿತು ಕಂತು-ಕಂತು
ಭಾಷಣಗಳ ಬಿಗಿದರು;
ಮನೆಯ ಗೋಡೆ ಭದ್ರಗೊಳಿಸಿ
ಬಿರಿದ ಮನವ ಛಿದ್ರಗೊಳಿಸಿ
ಬುಡಕೆ ಬೆಂಕಿ ತಗುಲಿದಾಗ
ಲೋಕ ಚಿಂತೆ ಮರೆತರು!!

ಅಡಿಗೆ ಒಂದು ಹೆಸರು ಇಟ್ಟು
ಪಯಣಕೊಂದು ಕೊಂಕು ಕಟ್ಟಿ
ಡೊಂಕು ದಾರಿ ಮೀರಿ ತಾವೇ
ಟಂಕಸಾಲೆ ತೆರೆದರು;
ಗಂಟೆಗೊಂದು ನೇಮ ಮಾಡಿ
ತಾವೇ ಮುರಿವ ತ್ರಾಸಿಗೆರಗಿ
ನಿಷ್ಟರನ್ನು ಭ್ರಷ್ಟರೆಂದು
ಹಣೆ ಪಟ್ಟಿ ಬರೆದರು!!

--ರತ್ನಸುತ

ಒಂದು ಸುತ್ತು ಬಣ್ಣನೆ

ಕಣ್ಣಾಚೆ ನೀನು ಇರಬೇಡ ಇನ್ನು ನನ್ನೊಳಗೆ ಬೆರೆಯೆ ಬಾರೆ;
ಹೃದಯಕ್ಕೆ ನಿನ್ನ ಹೆಸರಿಟ್ಟ ಮೇಲೆ ನಾವಲ್ಲ ಬೇರೆ ಬೇರೆ!!

ಮೇಲಿಂದ ಮೇಲೆ ಹರಿಯುತ್ತ ಬಂದೆ ಓ ನನ್ನ ಪ್ರೇಮ ಧಾರೆ;
ನೀ ಬಿದ್ದ ಕಡೆಗೆ ನಾನಾದೆ ಗುಂಡಿ ಮತ್ತೊಮ್ಮೆ ತುಂಬು ಬಾರೆ!!

ಕನಸಲ್ಲಿ ನಿನ್ನ ತದ್ರೂಪು ತೊಟ್ಟು ಮಿನುಗಿತ್ತು ಒಂಟಿ ತಾರೆ;
ಏಕಾಂತ ಚಟವ ಬಿಡಿಸಿದ್ದು ನೀನೇ ಮನಮೋಹಕಾಂತ ನೀರೆ!!

ನೇಕಾರ ಸೋತು ಕುಲ ಕಸುಬು ಬಿಟ್ಟ ನಿನ್ನನ್ನು ಕಂಡ ಮೇಲೆ;
ನೇಯೋದು ಅಷ್ಟು ಕಷ್ಟಕರ ಕಾರ್ಯ ನಿನಗೊಪ್ಪುವಂತ ಸೀರೆ!!

ತಣ್ತುಂಬಿ ಬಂದು ಹಿಡಿತಕ್ಕೆ ಸಿಗದ ಆನಂದಭರಿತ ನೀರೇ;
ಮಾತೆಲ್ಲ ಮೀರಿ ಮನೆ ಮಾಡಿಕೊಂಡೆ ಸವಿ ಮೌನ ನಿನ್ನ ಉರೇ?!!

ತಿಳಿದಷ್ಟೂ ನಾನು ತಿಳಿಗೇಡಿಯಾದೆ ಬಿಡಿಸೇಳು ನೀನು ಯಾರೇ?!!
ದಿನ ರಾತ್ರಿ ನನ್ನ ಎದೆಯೆಂಬ ಬೀದಿ ಮೇಲರಿದ ಹೂವ ತೇರೇ?!!

-- ರತ್ನಸುತ

ಕಾವ್ಯ ಸಂಸ್ಕಾರ

ಮೆಚ್ಚಿ ಬರೆದ ಕವನಗಳೆಲ್ಲ
ಮುಚ್ಚಿಹೋದ ಬುಕ್ಕಿನಲ್ಲೋ
ಕೊಚ್ಚಿಹೋದ ದೋಣಿಯಲ್ಲೋ
ಸ್ವಚ್ಛ ಕಣ್ಣೀರಿನಲ್ಲೋ
ಕರಗಿ, ಸೊರಗಿ, ಮರುಗಿ
ಉಸಿರ ತೊರೆದ ಶವಗಳಾಗಿವೆ!!

ಗೊಂದಲದ ಗೂಡಲ್ಲಿ
ಇನ್ನೂ ಚೀವ್ಗುಟ್ಟುತ ಹಸಿದ ಮರಿಗಳು 
ಮೊಟ್ಟೆಯ ಕಾವಿನಿಂದ ಹೊರ ಬರದೆ
ಒಮ್ಮೆ ನಡುಗಿ, ಮೈ ಒದರಿ
ಮತ್ತೆ ನಿದ್ದೆಗೆ ಜಾರಿದಂತೆ
ಬಾಕಿ ಉಳಿದ ಎದೆಯಾಕ್ಷರಗಳು 
ಇನ್ನೂ ಜೀವಂತವಾಗಿವೆ!!

ಎಡವಿ ಬಿದ್ದಾಗ
ಯಾರೋ ಬಂದು ಮೇಲೆತ್ತುತ್ತಾರೆಂದು
ಕಾದ ತರಚು ಗಾಯಕ್ಕೆ
ಮಂಡಿ ಇನ್ನೆಷ್ಟು ಬುದ್ಧಿ ಹೇಳಬೇಕು;
ಬಿದ್ದು ಗಾಯಗೊಂಡ ಕವಿತೆಗಳು
ಅಳುವುದ ಬಿಟ್ಟು ಬೇರೇನನ್ನೂ ಕಲಿತಿಲ್ಲ;
ಇನ್ನೂ ಹುಟ್ಟದವೇ ಲೇಸು!!

ಮಸಿಯಾದ ತುದಿ ಬೆರಳುಗಳ
ಕೆನ್ನೆಗೆ ಆನಿಸಿ
ದೂರ ದೂರಕ್ಕೆ ವಿಸ್ತರಿಸುವ ಚಿತ್ತಕ್ಕೆ
ಹಾಳೆಯ ಮೇಲೆ ಹರಡಿ ಬಿದ್ದವುಕ್ಕಿಂತ
ನಾಲಗೆ ತುದಿಯಿಂದೊರಡದ ಆ
ಮೂರು-ಮತ್ತೊಂದು ನಕಲಿ ಶಬ್ಧಗಳ
ಅನಾವರಣದ ಚಿಂತೆ!!

ಬೇಕಾದ ಆಕಾರ ಕೊಟ್ಟು 
ಕುರೂಪಗೊಂಡ ಶರೀರದಲ್ಲಿ
ಶಾರೀರವಿಲ್ಲವಾದಾಗ
ಚಟ್ಟವೇರಿಸಿ ದಹಿಸುವ ಮೌನಕ್ಕೆ
ಯಾವ ಸ್ಪೂರ್ತಿದಾಯಕ ಮಳೆಯೂ
ಸಮಾಧಾನಕರವಲ್ಲ!!

ಅಂತಿಮ ಸಂಸ್ಕಾರದಲಿ ಪಾಲ್ಗೊಂಡವು
ನಿರಾಕಾರ ಪದಗಳು;
ಎಂದಾದರೂ ತಮಗೂ ಇಂಥ ಪರಿಸ್ಥಿತಿ
ಒದಗಿ ಬರಬಹುದೆಂಬ ಆತಂಕದಲ್ಲೇ
ನಾಲ್ಕು ಹನಿ ಕಣ್ಣೀರಿಟ್ಟು ಜಾರಿಕೊಳ್ಳುತ್ತವೆ!!

ನಾಯಿ ಹಗಲೇ ಊಳಿಡುತ್ತಿದೆ,
ಪಿಂಡಕ್ಕೆ ಆಗಲೇ ಕಾಗೆಗಳ ಹಿಂಡು
ಮಾಳಿಗೆಯ ಮೇಲೇರಿ ಚೀತ್ಕರಿಸುತ್ತಿವೆ;
"ಹೊಗೆ ಆಡುತಲೇ ಇರಬೇಕು
ಮುಗಿಯುತ್ತಾ ಬಂದ ಕವನಕ್ಕೆ
ಕೊನೆಯ ಶುದ್ಧೊದಕ ಅರ್ಪಿಸಿವೆ;
ಇಂತಿ ನಿಮ್ಮ ಶ್ರೇಯಾಭಿಲಾಶಿ
ಶಾಯಿ ಮುಗಿಯದ ಲೇಖನಿ!!"

-- ರತ್ನಸುತ

ಕಾವ್ಯ ಖಜಾನೆ

ಹೆಜ್ಜೆ ಗುರುತುಗಳ ಚೆಲ್ಲುತ್ತ
ಹಿತ್ತಲ ಬಾಗಿಲ ಮುಖೇನ 
ಓಡುವಾಗ ಚೆಲುವೆ
ಬಾಗಿಲ ಮರೆಯ ಚಿಲಕಕ್ಕೆ
ನಿಷ್ಕ್ರಿಯಾತ್ಮಕ ಶಾಪ
ನಿಷ್ಪ್ರಯೋಜಕ ಕೋಪ!!

ರಂಗೋಲಿ ಪುಡಿಯ ಡಬ್ಬದಲಿ
ಸಾವಿರಾರು ಸ್ವಪ್ನಗಳ ಕೂಪ;
ಒಂದೊಂದೇ ಚಿಟಿಕೆಯ ಚುಕ್ಕಿ
ಬಿಡಿಸುತ್ತಾ ಹೊರಟು
ಹಡೆದು ಬಿಡು ಎಲ್ಲವ;
ರಂಗವಲ್ಲಿಯ ನಡು ದೀಪ ನಾನಾಗುವೆ!!

ಇರುಳಾಟದಲ್ಲಿ ಚಂದಿರ ನಿಸ್ಸೀಮ,
ನವಗ್ರಹಗಳ ಸುತ್ತುವರೆದು
ಚಂದ್ರನಿಗಷ್ಟೇ ವಿಷೇಶ ಪೂಜೆ ಸಲ್ಲಿಸಿ ಬರುವೆ;
ಗ್ರಹಚಾರ ಕೆಟ್ಟರೂ ಸರಿಯೇ
ಇನ್ನಾರಿಗೂ ಕೈ ಮುಗಿಯಲೊಲ್ಲೆ
ಆದದ್ದಾಗಲಿ ಚಿಂತೆಯಿಲ್ಲ!!

ಹರಿದ ಕುಪ್ಪಸಕೆ ಇನ್ನೆಷ್ಟು ಪೋಷಣೆ?!!
ಕುತ್ತಿಗೆ ಹಿಡಿದು ಹೊಸತಿಗೆ ಆಗ್ರಹಿಸು;
ಸೂಜಿಗೆ ದಾರವ ಹೊಸೆಯಲು
ಕನ್ನಡಕದ ಮೊರೆಯೇಕೆ?
ಕಣ್ಣಲ್ಲಿ ಕಣ್ಣಿಟ್ಟು ನೋಡು
ಹೊಸೆವಾಟ ಇನ್ನಷ್ಟು ಸಲೀಸು!!

ತೆಕ್ಕೆಯ ತಿಕ್ಕಲಾಟಕ್ಕೆ
ತೆರೆ ಎಳೆಯದೆ ಎಲ್ಲಿಯ ನಿರಾಳ?
ಮುಹೂರ್ತ ನಿಗದಿಯಾಗುವ ಮುನ್ನ
ಒಮ್ಮೆ ದಾರಿ ತಪ್ಪಿ ಬರುವ;
ಯಾರೂ ಊಹಿಸಿರಲಾಗದ
ಕ್ಷಿತಿಜದಾಚೆಯ ಹೂ ಬನದಲ್ಲಿ!!

ಕಣ್ಣು ಮುಚ್ಚಿದರೆ
ದೀಪದ ಹಂಗು ತೊರೆದಂತೆ,
ಉಸಿರ ದೋಚಿದರೆ
ಉರಿ ಬೆವರಲ್ಲೂ ತಂಪು ಕಾವ್ಯ ಬರೆದಂತೆ;
ಸಂಪುಟಕೆ ಮುಂಪುಟದ
ಮುನ್ನುಡಿಗೆ ಮುಂಬರುವ
ಸಾಲುಗಳ ಅಚ್ಚಾಗಬೇಕಿದೆ
ಮುದ್ರಣಾಲಯದ ಮುಖ್ಯ ದ್ವಾರದಲಿ
ಸಿಗಬೇಕು ನಾವ್ ಬೇಗ
ನಾ ಕೀಲಿ, ನೀ ಬೀಗ!!

-- ರತ್ನಸುತ

ಕಂಡದ್ದು-ಕಾಣದ್ದು

ಕತ್ತಲು ಹಡೆದ ಬೆಳಕು
ಕತ್ತಲನ್ನೇ ನುಂಗಿತು;
ಕೊನೆಗೆ ಬೆಳಕು ಸತ್ತಾಗ 
ಕತ್ತಲೇ ಬೇಕಾಯಿತು!!

ಒಂದು ಕಿಚ್ಚಿನಂತರದ ಈರ್ವರಲ್ಲಿ
ಒಂದನ್ನೊಂದು ಮರೆಸುವ ಸಾಹಸ;
ಕತ್ತಲು ಸರ್ವಕಾಲಿಕ ಸತ್ಯ
ಬೆಳಕು ಸಿಂಗಾರಮಯ ಸುಳ್ಳು!!

ವಿಕೃತಿ, ಪ್ರಕೃತಿಗಳೆಲ್ಲವೂ
ಒಪ್ಪುವಂಥ ಕೃತಿಗಳೇ
ತಾಮಸ ತವರೂರ ಕೋಣೆಯಲಿ;
ಅದು-ಇದು, ಹಾಗೆ-ಹೀಗೆ
ಯಾವುದಾವುದೋ ಅವಾಂತರಗಳು
ಬೆಳಕ ಬೆಂಬಲಿಸಿದವುಗಳಲಿ!!

ಕತ್ತಲ ಕಣ್ಣಿಗೆ ವಿವಸ್ತ್ರವೂ ವಸ್ತ್ರ,
ಖಾಲಿತನವೂ ಅಪ್ರತಿಮ ಕಲೆ,
ಪೋಲಿತನ ಪಕ್ವಗಣ್ಣಿನ ನೋಟ;
ಬೆಳಕು ಎಲ್ಲೆಲ್ಲೂ ಮೂಗು ಇಣುಕಿಸಿ
ಅಣುಕಿಸುವ ವ್ಯಂಗ್ಯಕಾರ,
ಬಣ್ಣವನ್ನೂ ನಿಗ್ರಹಿಸುವ ಸರ್ವಾಧಿಕಾರ!!

ಮನಸಿಗೆ ಉರಿವ ದೀಪಕ್ಕಿಂತ
ಅಡಿಯ ನಿಮ್ಮಳ ಕತ್ತಲ ಮೋಹ;
ಬೆಳಕ ಪ್ರಶ್ನೆಗಳಿಗೆ ನಿರುತ್ತರವಾದರೆ
ಕತ್ತಲ ಉತ್ತರಗಳಿಗೆ ಇನ್ನೂ ಪ್ರಶ್ನೆಗಳೇ ಹುಟ್ಟಿಲ!!

-- ರತ್ನಸುತ

ಹಾಡಾಗದ ಹಾಡು

ಉಸಿರು ಸಾಲದ ಹಾಡಿಗೆ ಹೆಸರಿಟ್ಟೆ
"ಸಾವೆಂದು"
ಇನ್ನೂ ಜೀವಂತವಾಯಿತು
ಇನ್ನೂ ಜೀವಂತವಾಗಿದೆ!!

ಹಾಡುವ ಮುನ್ನ ಕಂಠ ಸರಿಪಡಿಸಿ
ಹೀಗೆ ಮೊದಲಾಗಿಸುವ ಮೊದಲೇ
ಶ್ವಾಸಕೋಶಕ್ಕೆ ಬಲೆ ಬೀಸಿದ ಮರುಕ
ಇದ್ದ ಸ್ವರವನ್ನೆಲ್ಲ ದೋಚಿ
ಬಿಕ್ಕಳಿಸುವ ಭಾಗ್ಯ ಒದಗಿಸಿತು;
ಕಣ್ಣೂ ಅದಕೆ ಸಾತು ನೀಡಿತು!!

ಔಪಚಾರಿಕ ಕಣ್ಣೀರೂ ಉಪ್ಪುಪ್ಪು
ಯಾವ ವ್ಯತ್ಯಾಸವೂ ಇಲ್ಲ,
ನಾಲಗೆಗೆ ಹೀಗೆ ಅನಿಸಿದ್ದ್ದು ಸಹ್ಯ;
ಕೆನ್ನೆಗಾದರೂ ತಿಳಿಯಬೇಕಿತ್ತಲ್ಲ,
ಎಷ್ಟು ಮಡುವಿಗೆ ಮಡಿಲಾಗಿಲ್ಲದು?!!

ಮತ್ತೆ ಹಾಡಿಗೆ ಮರಳಿ
ಮರಳಿ, ಮರಳಿ ಸೋತು
ಕರುಳು ಕಂಪಿಸುತ್ತಿದ್ದಂತೆ
ಎದೆಯೊಳಗೆ ಬಿತ್ತಿಕೊಂಡ ಭಾವಗಳು
ರಾಗಬದ್ಧವಾಗಿ ಹಾಡಿ
ಕೊರಳು ನಾಚಿ ತಲೆ ತಗ್ಗಿಸಿತು!!

ಬಹುಶಃ ಅಂದು ನಾ ಹಾಡಿ ಬಿಟ್ಟಿದ್ದರೆ
ಹಾಡಿ ಬಿಟ್ಟೇ ಬಿಡುತ್ತಿದ್ದೆ;
ಹಾಡದೇ ಹಾಡಾದ ಹಾಡು
ಇನ್ನೂ ಕಾಡುವುದ ಬಿಟ್ಟಿಲ್ಲ
ನಾ ಹಾಡುವುದನ್ನೂ!!

-- ರತ್ನಸುತ

ಸಿಹಿ ಸುಳ್ಳಿನ ಸರಪಳಿ

ಇರುವೆ ಗೂಡಿನ ಮೇಲೆ ನಿಂತು
ಕಾಯುವ ಕಸುಬಿಗೆ
ಮೈಯ್ಯೆಲ್ಲ ಬೊಬ್ಬೆಯ ಗುರುತು;
ಇಷ್ಟಾದರೂ ಧ್ಯಾನ ನಿನ್ನದೇ ಕುರಿತು!!

ಹುಳ ಬಿದ್ದ ಹಾಳು ಮರದ ಕೆಳಗೆ
ಸತ್ತ ಎಲೆಗಳ ಸ್ಥಿತಿಯೋ, ತಿಥಿಯೋ!!
ಒಂದಕ್ಕೊಂದು ಗುದ್ದಾಡಿದ ಸುಖಕ್ಕೇ
ಕಾಡ್ಗಿಚ್ಚು ಹುಟ್ಟಿಕೊಂಡದ್ದು;
ಆದರೂ ಕಿಂಚಿಷ್ಟೂ ಕದಲಲಿಲ್ಲ ನಾನು!!

ಬಂದೇ ಬರುತ್ತೇನೆಂದು ನೀ ಹೋದಾಗಿನಿಂದ
ಹೂ ಕಾದು ಅರಳದಂತೆಯೇ ಬಾಡಿತು;
ಹೀಗಿದ್ದೂ ಸಾಯದೆ ಇನ್ನೂ ಬಳ್ಳಿಯ ಬಳಸಿ
ಜೀವಂತವಾಗಿವೆ ನಿನ್ನ ಆಗಮನಾಭಿಲಾಶಿಗಳಾಗಿ!!

ಹೆಜ್ಜೆ ಗುರುತುಗಳನ್ನಾದರೂ ಜೋಪಾನವಾಗಿರಿಸಲು
ಅಲ್ಲಲ್ಲಿ ಎದೆಯೆತ್ತರ ಹುತ್ತಗಳು ಎದ್ದಿವೆ;
ಸರ್ಪಗಾವಲಿನಲ್ಲಿ ಪುಷ್ಪಾರ್ಚನೆ ನಡೆಸಿ
ಧನ್ಯವಾದ ಪವನಕ್ಕೂ ನಿನ್ನದೇ ಕೊರತೆ!!

ಕೊಸರುತ್ತ ಕಸ್ತೂರಿ ಪಸರಿಸಿದ ಕೃಷ್ಣ ಮೃಗ
ಎದುರು ನೋಡಿದ ದಾರಿ ಯಾವುದೆನ್ನದಿರು;
ಜಡ ಕಲ್ಲಿಗೂ ತಿಳಿದ ಸರಳ ಸಂಗತಿ ಅದು
ನೀ ಮೆಟ್ಟಿ ಬಿಟ್ಟು ಹೋದ ಕಾಲು ದಾರಿ!!

ಉರಿ ತಾಳಿತೀ ಒಡಲು
ತಡವಲು ನೀ ತರಲಿರುವ ನವಿಲು ಗರಿ ನೆನಪಲ್ಲಿ;
ಕಣ್ಣೀರನಾವ ಕಾರಣಕ್ಕೂ ಪೋಲಾಗಿಸದೆ
ಆನಂದ ಬಾಷ್ಪಕ್ಕೆ ಮುಡಿಪಿಟ್ಟೆನಾ ಹಾಗಾಗಿ
ಸುಕ್ಕುಗಟ್ಟಿದ ಕೆನ್ನೆ ನಿನಗೆ ಸಿಗದು;
ಉಸಿರುಗಟ್ಟಲು ಜೀವ ಹೆದರದಿಹುದು!!

-- ರತ್ನಸುತ

ನನ್ನ ಗೋರಿ ಕಲ್ಲು

ಕಣ್ಣಿಗೆ ಕಾಡಿಗೆ ಹಚ್ಚದ ಹೊರತು
ನನ್ನ ಗೋರಿಗೆ ಧೂಪ ಹಚ್ಚಲು ಬರಬೇಡ;
ಕಣ್ಣೀರ ಹೇಗೋ ಮರೆಸುವ ಮಾಯಾಂಗಿಣಿ ನೀ
ಮತ್ತೆ ನನ್ನ ಕಣ್ತಪ್ಪಿಸಿ ಅಳುವುದು ಬೇಡ!!

ಹಸ್ತಕ್ಕೆ ಗೋರಂಟಿ ಮೆತ್ತದ ಹೊರತು
ಎದೆಯ ಹೂವ ಸೋಕಲು ಮುಂದಾಗಲೇ ಬೇಡ;
ಆಣೆಗಳ ಗುರುತುಗಳ ಇನ್ನೂ ಅಳಿಸದಾಕೆ ನೀ
ಅಂಗೈಯ್ಯಲಿ ಮೊಗವಿರಿಸಿ ಬಿಕ್ಕಳಿಸಬೇಡ!!

ಮುಂಗುರುಳ ಹಿಂದೆ ಸರಿಸಿ
ಬಂಧಿಸಿಟ್ಟು ಬಾ ಬಳಿಗೆ
ಗಮನ ಸೆಳೆವ ಗಾಳಿಗಾವ ನೆಪವ ಕೊಡದಿರು,
ಸ್ತಬ್ಧ ಬೆರೆಳಿಗಾವ ಹೊಣೆಯ ಭಾರ ಹೊರದಿರು!!

ಎಲ್ಲ ಬಂಧವ ದಾಟಿ
ನಿರ್ಬಂಧಗಳಿಲ್ಲದಂತೆ
ಮುಕ್ತಳಾಗಿ ಬಾ ನನ್ನ ಮೌನ ಆಲಿಸೋಕೆ;
ಕೊನೆ ಕ್ಷಣಗಳ ತಡವರಿಕೆಯ ಲೋಪ ನೀಗಿಸೋಕೆ!!

ದೂರದೋರೆಗಣ್ಣ ಬೀರಿ
ಸನ್ನೆಯಲ್ಲಿ ಮಾತನಾಡಲಷ್ಟೇ ಸಾಲದು;
ಚೂರು ಸಮಯ ಮಾಡಿಕೋ
ಹತ್ತಿರಕ್ಕೆ ನಿಂತು, ಕರಗೋ ಕಪ್ಪ ಜೊತೆಗೆ ನೆಂಜಿಕೋ!!

ಮುಳ್ಳ ಸೋಕಿಸುತ್ತ ಅಲ್ಲಿ ಹೂವ ಚಿಗುರಿಸು
ಹೂವಿನಾವರಣದಲ್ಲಿ ಬನವಾಸಿಯಾಗುವೆ;
ಮಣ್ಣು ಮುಚ್ಚಿದೆದೆಯ ಮೇಲೆ ನೆರೆಳ ಕಂಪಿಸು
ನಿನ್ನ ಉಸಿರ ಸೋಂಕಿನಿಂದ ನಾನು ಮತ್ತೆ ಹುಟ್ಟುವೆ!!

-- ರತ್ನಸುತ

ನೆರಳಿನವಲೋಕನ

ಬಿಸಿಲಿಗೆ ಅಡ್ಡಲಾಗಿ ನಿಂತೆ,
ನೆರಳು ಹಿಂದೆ ಅವಿತುಕೊಂಡಿತು;
ಬೆನ್ನು ಮಾಡಿ ನಿಂತೆ,
ದಿಕ್ಸೂಚಿಯಾಗಿ ಮುನ್ನಡೆಯಿತು;

ಈಗ ಏಳುವ ಪ್ರಶ್ನೆಯೆಂದರೆ
ನೆರಳು ಹೇಡಿಯೋ, ಪರಾಕ್ರಮಿಯೋ?
ಅಥವ
ನಾವು ಅನಿಸಿದಂತೆ ಸ್ವಭಾವ ಬದಲಿಸುವ
ನಮ್ಮದೇ ಪ್ರತಿಬಿಂಬವೋ?
ಉತ್ತರಿಸಲದಕೆ ಬಾಯಿಲ್ಲ,
ಎದ್ದ ಪ್ರಶ್ನೆಯಲ್ಲೂ ತಿರುಳಿಲ್ಲ!!

ಕತ್ತಲಲಿ ಸಂಕುಚಿತಗೊಂಡು
ಬೆಳಕಿನೆಡೆ ಮೈ ಮುರಿದುಕೊಂಡು
ಬಳಿಯಲ್ಲೇ ಇದ್ದೂ ದೂರುಳಿವ ಮಿತ್ರ;
ಕೆಲವೊಮ್ಮೆ ಹುಟ್ಟುವ ಭಯದಲ್ಲಿ
ವಹಿಸುವನು ಪಾತ್ರ,
ಅಂಜಿಕೆಯ ಪಾಲುದಾರನಂತೆ
ತಾನೂ ಕಂಪಿಸಿ, ಚಿಂತಿಸಿ, ಬಾಧಿಸಿ!!

ಒಮ್ಮೊಮ್ಮೆ ಇದ್ದಕ್ಕಿದ್ದಂತೆ ಸೆಟೆದುಕೊಂಡು
ಖಳನಂತೆ ಗೋಚರಿಸಿ
ಮತ್ತೊಮ್ಮೆ ಮುದುಡಿ ಕಾಲಡಿಯಲ್ಲೇ ಧ್ಯಾನಿಸುವ;
ಪಲಾಯನಗೊಳ್ಳದೆ ಬೇಲಿಯನ್ನೂ ನೇವರಿಸಿ
ಕೆಸರರಿಗೂ ಮೈಯ್ಯೊಡ್ಡಿ
ನೀರನ್ನೂ ಬಳಸಿ
ಮಸಿಯನ್ನೂ ತಡವಿಕೊಳ್ಳುವ ವೈರಾಗಿ
ಇನ್ನೂ ಅರ್ಥವಾಗದ ಸೋಜಿಗ!!

ನಡುಮನೆಯ ಇರುಳ
ಒಂಟಿ ದೀಪದ ಉರಿಗೆ
ಸುಣ್ಣ ಬಳಿದ ಗೋಡೆ
ಬೆಳ್ಳಿ ಪರದೆಯ ಚಿತ್ರ;

ಒಣಗಿ ಹಾಕಿದ ಬಟ್ಟೆ
ಹಬ್ಬಿ ಬೆಳೆದ ತುಳಸಿ
ಗೂಟದ ಮೊರ, ಮಂಕರಿ
ಜೋತ ಕೊಡೆ, ನೇಗಿಲು
ಆಕಳ ಕೊಂಬು, ಬಾಗಿಲ ತೋರಣ
ಜೋಳದ ಜುಟ್ಟು, ಅಮ್ಮಳ ಸೀರೆ
ಅಪ್ಪನ ಕುರ್ಚಿ, ಪುಸ್ತಕ ಚೀಲ
ಎಲ್ಲವೂ ಮೂಖಿ ಪಾತ್ರಗಳೇ!!

ನೆರಳ ನೆನಪಲ್ಲಿ
ಇರುಳ ಕಳೆದವ ನಾನು
ಹಗಲ ಬೆಳಕಲ್ಲಿ
ನೆರಳ ಕಡೆಗಣಿಸಿ!!

-- ರತ್ನಸುತ

ಹೀಗೊಂದು ಜಾಡ್ಯ

ದೊಂಬಿ ಇದ್ದ ಕಡೆಯಲೆಲ್ಲ
ಒಮ್ಮೆ ಹೀಗೆ ಕಾಣುತೀಯ
ಮತ್ತೆ ಎಲ್ಲೋ ಮರೆಗೆ ಸರಿವ
ದುಂಬಿಯಂಥ ಚಂಚಲೆ;
ನಗೆಯ ಬೀಸಿ ಸೋಸಿ ನನ್ನ
ಹೃದಯವನ್ನು ಮಾತ್ರ ಕದ್ದೆ
ಹೆಸರು ಕೇಳಲೇಕೆ ನಿನ್ನ
ವಿಕಟತನವ ತೋರುವೆ?!!

ಗಂಟೆಗೊಮ್ಮೆ ಬಡಿದುಕೊಂಡು
ಎಚ್ಚರಿಸುವ ಲೋಲಾಕಿಗೆ
ನೀನು ಕಿವಿಯ ಹಿಂಡಿ ಪಾಠ-
ಕಲಿಸಿ ಕೊಟ್ಟ ಹಾಗಿದೆ;
ಕನಸಿನಲ್ಲೂ ಮತ್ತೆ, ಮತ್ತೆ
ಮುಸುಕು ಧರಿಸಿ ಬರುವೆ ನೀನು
ಮನವ ಒಲಿಸಿ ಸರಿಸೋ ಮುನ್ನ
ಹಾಳು ಹಗಲು ಮೂಡಿದೆ!!

ಅಂಬರಕ್ಕೆ ಹೂವ ಮುಡಿಸಿ
ದೃಷ್ಟಿ ಬೊಟ್ಟು ಇಟ್ಟು ಬರುವೆ
ನೀನು, ತಾನು ಒಂದೇ ಎಂಬ
ಭಾವ ನನ್ನ ಮನದಲಿ;
ನಿನ್ನ ಅಂದ, ಚಂದ ವ್ಯಾಪ್ತಿ
ಸುತ್ತಿ ಬರಲು ಹಕ್ಕಿಯಾದೆ
ಹಾಗೇ ಚೂರು ಮೈಯ್ಯ ಮರೆವೆ
ನೀಳ ತೋಳ ಮಡಿಲಲಿ!!

ಸಾಕು ಮಾಡು ಕುಂಟು ನೆಪವ
ಒಂಟಿ ಕಾಲ ನಿಲುವು ನನದು
ನೀನು ಬಂದು ಹೇಳಬೇಕು
ಪ್ರೇಮಬರಿತ ಊಫಿಯ;
ಅಪ್ಪಿ ತಪ್ಪಿ ನಿನ್ನ ಕೆನ್ನೆ
ತೋಯ್ಸಿಬಿಟ್ಟೆ ಚೂರು ನಾನು
ನಕ್ಕು ಸ್ವೀಕರಿಸು ಇನ್ನು
ನಾ ಕೇಳೋ ಮಾಫಿಯ!!

ಎಷ್ಟು ಪ್ಯಾರಾ ಇರುವುದೆಂದು
ಲೆಕ್ಕ ಹಾಕಿ ಕೂರಬೇಡ
ಎಷ್ಟು ಪ್ಯಾರು ಎಂಬುದಷ್ಟೇ
ಅಳತೆಗಣ್ಣು ಹೆಳಲಿ;
ನೀನು ಬೆರೆಳು, ನಾನು ಕೊಕ್ಕಿ
ನೀನು ಸಾಲು, ನಾನು ಚುಕ್ಕಿ
ವಿರಮಿಸುವುದರಲ್ಲೂ ನನ್ನ
ಸದ್ಬಳಕೆಯಾಗಲಿ!!

-- ರತ್ನಸುತ

ಶಪಿತ ಹನಿ

ತಾವರೆ ಎಲೆಯ ಹನಿಗಳ ಸೊಬಗು
ಲೋಕಕೆ ಅನಿಸಿತು ಮುತ್ತಿನ ತಡಿಕೆ;
ಒಲ್ಲದ ಮನಸಿನ ಎಲೆಯ ಮಡಿಲಲಿ
ಹನಿಗಳ ಹಿಂಸೆಯ ಸ್ವಗತದ ಕುಡಿಕೆ!!

ಬೆಳಕಿಗೆ ಎಲ್ಲವ ಕೆದಕುವ ಚಾಳಿ
ಕುಂಟಿತ ಹನಿಯನೂ ಕೆರಳಿಸಿಕೊಂಡು;
ಕವಿಗೋ ಮಾಡಲು ಕೆಲಸವೇ ಇಲ್ಲ
ಕೂತನು ಗೀಚುತ ಊಹಿಸಿಕೊಂಡು!!

ಎಲೆ ತಳದಲಿ ಎಷ್ಟೋಂದು ನೀರು
ಆಳ, ವಿಸ್ತಾರದ ಅನುಭವವಿದೆ;
ಹನಿಗೋ ಬೀಳ್ಗೊಡುಗೆಯ ಋಣವಿಲ್ಲ
ಕಪ್ಪೆಯ ಕಣ್ಣೀರಿಗೂ ಕಡೆಯಾಗಿದೆ!!

ತಾವರೆ ಪಕಳೆಯಲೂ ಇದೇ ಸುದ್ದಿ
ಚಂದ್ರನ ಜೊನ್ನಾದರೂ ಅಲ್ಲಿ ರದ್ದಿ;
ದಾಹಕೆ ಧಾವಿಸದ ಶಪಿತ ಜಲ 
ಹರಿವಿಗೆ ಸಲ್ಲದೆ ಪೂರ್ಣತೆಯಿಲ್ಲ!!

ಪಾಡುವ ಭಾವಕೆ ಹಿಂಗುವುದಲ್ಲದೆ
ಪಾಪವ ಎಸಗದ ಈ ಪರಿ ಪಾಪಿ;
ಹೊಳೆವ ಹಲವು ಬಗೆಯೊಳಗೊಂಡೂ
ಪ್ರಕೃತಿಯ ಸಹಿಸದ ಮುಂಗೋಪಿ!!

-- ರತ್ನಸುತ

ಹೀಗೊಂದು ಪ್ರಕಟಣೆ

ನಾನೊಂದು ಪ್ರೇಮ ಯಂತ್ರವ ನಿರ್ಮಿಸಿದೆ
ಯಾವ ಹಿನ್ನಲೆಯೂ ಇಲ್ಲದ ಜ್ಞಾನ
ನನ್ನ ಪ್ರೇರೇಪಿಸಿದ್ದು ಸೋಜಿಗದ ವಿಷಯ;

ನಿದ್ದೆಗೆಟ್ಟು, ಊಟ ಬಿಟ್ಟು
ಕೊನೆಗೊಂದು ರೂಪ ಕೊಟ್ಟೆ,
ಕ್ಷಣಕ್ಕನುಗುಣವಾಗಿ ಇಷ್ಟವಾಗೋ ರೂಪ;

ಸ್ವಯಂಚಾಲಿತ ಯಂತ್ರಕ್ಕೆ
ಬುದ್ಧಿ, ಶಕ್ತಿ, ಸೂಕ್ಷ್ಮಗಳ ಪರಿವಿತ್ತು,
ಎಲ್ಲವನ್ನೂ/ಎಲ್ಲರನ್ನೂ ಆಧರಿಸಿತ್ತ,
ನನ್ನ ನೋವಿಗೆ ಜೊತೆಯಾಗಿ ಕಣ್ಣೀರೊರೆಸಿ
ನನ್ನನ್ನೇ ಸೋಲಿಸಿತ್ತು!!

ಪ್ರೇಮದ ಅರ್ಥವ ಎಂದೂ ನಾ ತಿಳಿಸಿದ್ದಿಲ್ಲ,
ವ್ಯಾಪ್ತಿಯನ್ನೂ ಸೂಚಿಸಿರಲಿಲ್ಲ,
ಹೆಸರಿಟ್ಟದ್ದಷ್ಟೇ, ಪ್ರೇಮಮಯವಾಯಿತು;
ಅಜ್ಜಿ ಕುಟಾಣಿ ಕುಟ್ಟುತ್ತಾ ಹೇಳಿದ ನೆನಪು
"ಚಿತ್ತದಂತೆ ಚಿತ್ತಾರ, ಮನಸಿನಂತೆ ವ್ಯವಹಾರ"
ಎಲ್ಲವೂ ಅಂತಃಕರಣದ ಗ್ರಹಿಕೆ;

ದಿನೇ, ದಿನೇ ಪ್ರೇಮ ಹೆಚ್ಚುತ್ತಲೇ ಇತ್ತು;
ನನ್ನ ಸ್ವಾರ್ಥಕ್ಕೆ ಬೊಬ್ಬೆ ಬರೆ ಎಳೆದು
ನೊಂದ ಕಣ್ಣುಗಳ ನಿಭಾಯಿಸಲು
ಊರೂರು ಅಲೆದು ಬೀದಿ ದಾಸನಾಯಿತು;

ಪತ್ತೆ ಮಾಡಿದೆ,
ಒಲ್ಲದ ಪುಣ್ಯಾತ್ಮವ ಜಗ್ಗಾಡುತ್ತ
ಪ್ರೇಮ ಪಸರಿಸಿದ ದಿಕ್ಕು ದಿಕ್ಕಿಗೂ ಕಾಣುವಂತೆ/
ಕೇಳುವಂತೆ ಗೋಳಾಡಿಸಿ
ಮನೆಯಲ್ಲಿ ಕೂಡಿ ಹಾಕಿದೆ;

ಆಗಲೂ ನಾ ವಿರೂಪಗೊಳಿಸಲಿಲ್ಲ;
ನಡೆದದ್ದೆಲ್ಲವೂ ಮನಸಿನೊಳಗೇ
ಖಡ್ಗ ಮಸೆವ ಸಂಚು;

ಹೇಳಿದ್ದೆನಲ್ಲ, ಅದು ಬಲು ಚೂಟಿ;
ಬೋಧಿಸದ ವ್ಯಾಘ್ರತನವ ಚಿಟಿಕೆಯಲ್ಲೇ ಕಲಿತು
ಮೊದಲು ನನ್ನ ನೆತ್ತರ ಹೀರಿತು;
ನಂತರ ಈ ಕೇರಿ, ಆ ಊರು
ಮನಸು ಮನಸುಗಳ ನಡುವೆ ಹರಿದು
ಎಲ್ಲೆಲ್ಲೂ ಕೆಂಪು ಕ್ರಾಂತಿಯಾಗಿಸಿತು!!

ಈ ಸದ್ಯ ಇಸ್ರೇಲ್ ದೇಶದಲಿ ನೆಲೆಸಿದ್ದು
ಮುಂದೆ ಇನ್ನೂ ಹೆಚ್ಚು ಪ್ರವಾಸ-
ಕೈಗೊಳ್ಳಲಿದೆ ಎಂಬ ಆಘಾತಕಾರಿ ಸುದ್ದಿ ಬೆಳಕಿಗೆ ಬಂದಿದೆ!!

-- ರತ್ನಸುತ

ಇತ್ತ ಬರ, ಅತ್ತ ನೆರೆ

ಸಂಜೆ ಮಲ್ಲಿಗೆಗಿಲ್ಲ ಒಲವ ಸ್ಪರ್ಶ
ಮನೆ ಮಗಳು ಇನ್ನೆಲ್ಲೋ ಕನಕಾಂಬರವ ಕಟ್ಟಿ
ಮುಡೆಗೇರಿಸಿ ನೆನೆದು ಬಿಕ್ಕುತಿಹಳು,
ಮೋಡ ಕವಿಯದೆ ಮಳೆಗರೆಯುತಿಹಳು;

ತವರೂರ ದಾರಿ ನೆರೆ ಬಂದು ಮುಚ್ಚಿದೆ
ಈಗಷ್ಟೇ ಕೇಳಿಸಿದಳು ವಾರ್ತಾ ವಾಚಕಿ
ಫೋನು ಹಚ್ಚಲು ಇಲ್ಲ ಸಂಪರ್ಕ ಸವಲತ್ತು
ಟವರ್ ಉರುಳಿ ತವರ ದೂರ ಮಾಡಿಹುದು

ಒಲೆಯ ಮೇಲೆ ಬೆಂದ ಅಗಳು
ಉದರದಲ್ಲಿ ಸಂಕಟ ಅನುಭವಿಸುತ್ತಿದೆ;
ಬೀದಿ ನಾಯಿಗಳು ಮಿಕ್ಕ ಅನ್ನವ ತಿನ್ನಲೊಲ್ಲವು
ಸೊಕ್ಕಿದವುಕ್ಕೆ ತಂಗಲ ರುಚಿ ಹತ್ತಿಬಿಟ್ಟಿದೆ!!

ಮನೆ ಯಜಮಾನನಿಗೆ ಜೋಡು ಕಚ್ಚಿದ ಕೋಪ,
ಉಪ್ಪು ಸಾಲದ ಸಪ್ಪೆ ಸಾರು ಬಡಿಸಲು
ಪಾಪ, ಎಂಜಲ ಏಟಿಗೆ ಕೆನ್ನೆ ಹಸಿವನು ಮರೆತು
ನಾಲಗೆ ಒಳಗೊಳಗೆ ಅಮ್ಮನ ಜಪಿಸಿತು!!

ಸಂಜೆ ವೇಳೆಗೆ ಚೂರು ಉಪ್ಪು ಶಾಖದ ಜೊತೆಗೆ
ಊತ ಕಂಡ ಕೆನ್ನೆಗಿತ್ತ ಚುಂಬನದ ಬಿಸಿ;
ಚಾದರವ ಹೊಸಕಿದ ಸುಕ್ಕು ಬೆರಳುಗಳಲ್ಲಿ
ದಿನವಿಡೀ ಅಳಿಸಿದ ಕಣ್ಣೀರಿನ ಮಸಿ!!

ಇತ್ತ ಬರ, ಅತ್ತ ನೆರೆ
ಅಳುವುದೇತಕೋ ಆಕೆ?!!
"ಬಿಳಿ ಮೊಗ್ಗು ಕೆಂಪಾದವೇ ಹೊರತು
ಮಿಕ್ಕೇನೂ ಬದಲಾಗಲಿಲ್ಲವ್ವ;
ಅಪ್ಪಯ್ಯನಂಥ ಮಾವ,
ನಿನ್ನನ್ನೂ ಮೀರಿಸೋ ಅತ್ತೆ,
ಇಷ್ಟಾರ್ಥ ಅರಿವ ಸ್ನೇಹಮಯ ಗಂಡ,
ಜೊತೆಗಿಷ್ಟು ಹಿಡಿ ಕಣ್ಣೀರು"
ಬಾರದ ಉಸಿರಲ್ಲಿ
ಅಮ್ಮ ಒಡ್ಡುವ ಪ್ರಶ್ನೆಗಳಿಗೆ
ಮುಂಗಡ ತಯಾರಿ!!

-- ರತ್ನಸುತ

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...