Wednesday 16 February 2022

ನಗುವ ಚಂದಿರನು

ನಗುವ ಚಂದಿರನು

ನನ್ನ ಈ ಮಗನು
ಬೆಳದಿಂಗಳ ಹೊರಹೊಮ್ಮಿದನು
ಅಳುವ ನಾಟಕವಾಡಿ
ಪಡೆವ ಎಲ್ಲವನೂ
ಮನಸೆಲ್ಲಾ ಇವನೇ ಇವನು 
ಮರದ ಕುದುರೆ ಏರಿ
ಹೊರಟಿದೆ ಸವಾರಿ
ಗೆದ್ದೇ ಗೆಲ್ಲುತಾನೆ
ಎಲ್ಲ ತಡೆಯ ಮೀರಿ
ಬರದ ಬದುಕಿನ ಸೋನೆ
ವರದ ರೂಪವು ನೀನೇ  
ನನ್ನ ಉಸಿರ, ಅನುಕರಣೆ 
ಮಗನೇ ನನ್ನ ಮಗನೇ...

ಮುನಿಸು ತರಿಸೋ ಆಟಗಳ 
ದಿನವೂ ಆಡುವೆನು 
ಬಿಡಿಸಿ ಕೊಡುತ ದಾರಿಗಳ 
ಜೊತೆಗೆ ಸಾಗುವೆನು 
ಎದೆಯ ಮೇಲೆ ಒರಗಿದಾಗ 
ಎರವಲಾಗಿ ಬಂದ ಕನಸು 
ನಿನದೇ ನಿನದೇ 
ಜೋ ಜೋ ಲಾಲಿ ಜೋ ಜೋ  

ನನ್ನ ಹೆಗಲಿನ ಮೇಲೆ 
ನಿನ್ನ ಕುಣಿತದ ಲೀಲೆ   
ಜಗವೆನ್ನೇ ತಿರುಗಾಡಿ  
ಹೊರುವೆ ನನ್ನ ಮಗುವೇ.. 

ಹೆಚ್ಚೇನೂ ಮಾತಾಡಬೇಡ

ಹೆಚ್ಚೇನೂ ಮಾತಾಡಬೇಡ

ಹಾಗಂತ ಮಾತಾಡದೆ ಉಳಿಯಬೇಡ
ಹುಚ್ಚನ್ನು ನೀ ಹಿಡಿಸಬೇಡ
ಈ ಹುಚ್ಚನ ನೀನು ಬೇಡೆನ್ನ ಬೇಡ

ಹೆಚ್ಚೇನೂ ಮಾತಾಡಬೇಡ...

ಬೆಳಕಲ್ಲಿ ಮಿಂದು, ಸಿಂಗಾರಗೊಂಡು
ಹೊಳೆವಾಗ ಕುರುಡಾಗಿಸೆನ್ನ
ಗುಳಿ ಕೆನ್ನೆ ಸುಳಿಗೆ ನಾ ಸಿಲುಕಿದಾಗ
ಕೆಂಪಾದೆ ನೀ ನಗುವ ಮುನ್ನ
ಎಲ್ಲೆಲ್ಲೂ ಹರಡಿ ಬಿಟ್ಟಂತೆ ನಿನ್ನ
ನಡು ಚೆಲ್ಲಿದ ಹೂ ಸುಗಂಧ
ಹೆಜ್ಜೆಜ್ಜೆಗೊಂದು ಗುಟ್ಟನ್ನು ಮಾಡಿ
ನಡೆವಾಗ ನೀನೆಷ್ಟು ಚೆಂದ

ಒಂಟಿ ಆಗಸ, ಒಂಟಿ ಈ ಧರೆ

ಒಂಟಿ ಆಗಸ, ಒಂಟಿ ಈ ಧರೆ

ಒಂಟಿ ಜೀವನ ನೀ ಇರದೆ 
ಮನದ ತಂತಿಯು, ಮೌನ ತಾಳಿದೆ
ಸಮಯ ನಿಂತಿದೆ ನೀ ಇರದೆ

ದಡವ ಬಡಿಯುತ ಮಳೆಯು
ಕಡಲ ಸೇರಿತೊಮ್ಮೆಲೆಗೆ
ನಿನ್ನ ಸೆರೋ ತವಕ ನನ್ನೊಳಗೆ
ತಡೆದು ನೋಡು ಕಣ್ಣ ಹನಿಯ
ಕಸಿದು ನೀಡು ನನ್ನ ದನಿಯ
ಬೆಳಕ ತೊರೆದ ದೀಪ ನಾ ನೀ ಇರದೆ

ಜನುಮ ಜನುಮದಾ ಬೆಸುಗೆ
ಸಲುಗೆ ನೀಡಿದಂತೆ ನಮಗೆ
ಮರಣ ಬೇರಾಗಿಸೋ ಸಾಧನವೇ?
ನಿನದೇ ನಾದ ನಾಡಿ-ಮಿಡಿತ
ಹಾಡು ಹೊರಳಿ ಬಂತು ಸಹಿತ
ಭಯದ ಕೋಟಿ ಕಂಪನ ನೀ ಇರದೆ.. 

ನೀ ನೇರವಾಗಿ

ನೀ ನೇರವಾಗಿ 

ಸಿಗುವ ಗಳಿಗೆ 
ನಾ ನೀರಿನಂತೆ 
ಕರಗಿ ನಗುವೆ 
ಬಾ ಪ್ರೀತಿಯ 
ಆಸೆಯ ಪಾಲಿಸು 
ಆಲಿಸು ಈಗಲೇ 
ನಲ್ಮೆಯ ಕೋರಿಕೆ 

ನೀ ದೂರವಾಗಿ 
ಅಳುವ ಮನದಿ 
ಸಂಧಾನಕೆ ಕರೆಯೆ ಬರುವೆ 
ಮುಗಿಲ ಹೆಗಲೇರಿ 
ನವಿಲ ಗರಿಯಿಂದ 
ಮುಖವ ನೇವರಿಸಿ 

ಈ ಯಾನದ 
ಹಿತವೇ ಸೊಗಸು 
ನನಗೂ ನೀ ಬೇಗ 
ಒಲವ ಕಲಿಸು 
ಮಾತಾಡದೆ 
ಸಿಕ್ಕಿದ ಆ ಸ್ವರ 
ನಿನ್ನದೇ ಎನ್ನುತ 
ಹಾಡಿದೆ ಈ ಮನ 

ನನ್ನಲ್ಲಿ ನೀನಿರುವೆ

ನನ್ನಲ್ಲಿ ನೀನಿರುವೆ

ಉಸಿರಾಗಿ ಬೆರೆತಿರುವೆ

ನೀನು ನಾನು ಒಂದೇನೇ
ಅನ್ನೋ ಮಾತು ಚಂದನೇ
ನಿನ್ನ ಸೇರಿ ಬಾಳೋದೇ
ನಾನು ಗಳಿಸೋ ಪುಣ್ಯನೆ
ಕಣ್ಣು ಮುಚ್ಚಿಕೊಂಡರೂ
ಕಂಡೆ ಅಲ್ಲೂ ನಿನ್ನನ್ನೇ
ಸೋತು ನಿಂತೆ ನಾನೀಗ
ನೀಡಬೇಕು ಹೃದಯನೇ

ತಟ್ಟಿ ಹೋದೆ ನನ್ನ
ಎದೆಯ ಬಾಗಿಲ
ಗಟ್ಟಿ ಹಿಡಿದುಕೊಂಡೆ
ಅದರೋ ಕೈಗಳ
ಏನೋ ಬಯಕೆ
ಹೇಳೋ ಭಯಕೆ
ಹೆಗಲ ಕೊಡಲು
ಬಂದೆ ಸನಿಹಕೆ

ಈ ಸುಂದರ ಸಂಜೆಯು ಸಿಗೋದೇಕೆ?

ಈ ಸುಂದರ ಸಂಜೆಯು ಸಿಗೋದೇಕೆ?

ನೀ ಕಾರಣ ನೀಡದೆ ನಗೋದೇಕೆ?
ಈ ಗಾಳಿಯು ಮೆಲ್ಲನೆ ಬರೋದೇಕೆ?
ಮುಂಗುರುಳನು ಹಾರಿಸಿ ನಗೋದೇಕೆ?

ಈ ಸುಂದರ ಸಂಜೆಯು (೩)

ನೀ ಆಡುವ ಮಾತು ಕೇಳಿಸದು (೨)
ಪಿಸುಗುಟ್ಟಿದರೆ ಗುಟ್ಟಾಗುವುದು 
ಸುಳ್ಳಾಡುವ ಕವಿಯು ನೀನೇನಾ?

ಅದೇ ಕಣ್ಣು, ಅದೇ ಸನ್ನೆ (೨)
ಸಲಾಕೆ ಇರಿದಂತಿದೆ 
ಮುಲಾಮನ್ನು ನೀಡಿಯಾ?

ಈ ಸುಂದರ ಸಂಜೆಯು ಸಿಗೋದೇಕೆ 
ನೀ ಕಾರಣ ನೀಡದೆ  ನಗೋದೇಕೆ 

ಅನುರಾಗವು ಆಗೋ ವೇಳೆಯಲಿ (೨)
ಅನುಮಾನಗಳ ಸುಳುವಿರದಿರಲಿ 
ನಿನ್ನಂದಕೆ ನಾನು ಅಭಿಮಾನಿ 

ನಿನ್ನ ಸೇರಿ, ಗರಿ ಮೂಡಿ (೨)
ಕುಣಿವಾಸೆ ಮನಸಾರೆ 
ನೀ ನೀಡೋ ತಾಳಕೆ.. 

ಈ ಸುಂದರ ಸಂಜೆಯು ಸಿಗೋದೇಕೆ 
ನೀ ಕಾರಣ ನೀಡದೆ  ನಗೋದೇಕೆ 

ಮಗ್ಗದ ಹಗ್ಗವ ಜಗ್ಗಿ

ಮಗ್ಗದ ಹಗ್ಗವ ಜಗ್ಗಿ

ನೂಲಿಗೆ ಕಲಿಸುತ ಮಗ್ಗಿ
ನೇಯುವ ಸೀರೆಯ ಮೇಲೆ ನಿನ್ನದೇ ಚಿತ್ರ
ಕಲ್ಲನು ಬಿತ್ತಿದ ಎದೆಯ
ಸೊಲ್ಲನು ಆಡದ ಹೃದಯ
ಮೆಲ್ಲಗೆ ಕರಗಿದೆ ಬರೆದು ಪ್ರೇಮದ ಪತ್ರ

ಮಳೆಯು ಸಂಕಟದಿಂದ
ಇಳಿದು ಇಳೆಯನು ಬಡಿದು
ಮಿಡಿದ ಕಂಬನಿಯನ್ನು ಬೇರಾಗಿಸುತ
ಮುಡಿದೆ ಕೆನ್ನೆಗೆ ಒತ್ತಿ
ಪಡೆದೆ ಬಂಧನ‌ ಮುಕ್ತಿ
ಕಾಡೋ ಕನಸುಗಳನ್ನು ದೂರಾಗಿಸುತ

ತಳಿರು ತೋರಣವಿಲ್ಲ
ಚಿಗುರೋ ಹೂವುಗಳಿಲ್ಲ
ಹಿತ್ತಲ ತುಂಬ ಗೆದ್ದಲು ಹಿಡಿದ ನೆನಪು
ಕೊರಳು ಹಿಗ್ಗುತ ಹೀಗೆ
ಮೌನ ತಾಳಿದೆ ಹೇಗೋ
ಸುಡುವ ಬೆಂಕಿಯ ಜ್ವಾಲೆಗೆ ನಿನ್ನದೇ ಛಾಪು

ತಡೆದು ನಿಲ್ಲಿಸಿದಂತೆ
ಯಾರೋ ದಾರಿಯ ನಡುವೆ
ಹೆಜ್ಜೆ ಇಡುವುದೇ ಭಾರ ಸಾಗಲು ದೂರ
ಬಿಟ್ಟು ಹೊರಟಿರುವಾಗ
ಬೇರು ಪಡೆಯುವುದೇಕೆ
ಮನಸು ಒಪ್ಪುತಲಿಲ್ಲ ಯಾವುದೇ ಊರ

ಸೀಳಿ ಹೊರಟರೆ ಹೇಗೆ 
ಬೇಲಿ ಅಲ್ಲವೇ ಅಲ್ಲ 
ಬಾಳು ಹರಿದಿದೆ ನೋಡು ರಭಸವ ಕಂಡು 
ನೀ ಇಷ್ಟದ ಸುಳ್ಳು 
ನಂಬಿ ಸೋತಿಹೆನಲ್ಲ  
ಮುಳ್ಳು ಕಟ್ಟಿದ ಹಾರಕೆ ಕತ್ತನು ನೀಡಿದೆನಿಂದು

ಕಣ್ಣನ್ನು ನೋಡುತ್ತಾ

ಕಣ್ಣನ್ನು ನೋಡುತ್ತಾ 

ಲೋಕ ಮರೆಯಲು ಬಹುದು 
ನಾಕವೆಂಬಂತೆ ಆವರಣವೆಲ್ಲ 
ಇನ್ನೇನು ಕೆಲ ಕಾಲ 
ಬದುಕು ಮುಗಿಯಲು ಬಂತು  
ಉತ್ಸಾಹವೊಮ್ಮೆಗೆ ಉಮ್ಮಳಿಸಿತಲ್ಲ!

ಚಿತ್ರ ಪಟಗಳು ಕೂಡ 
ಪಿಳಿ ಪಿಳಿ ಕಣ್ಬಿಟ್ಟು 
ಜೀವ ಪಡೆದು ಮಿಡಿದ ಅದ್ಭುತ ದೃಶ್ಯ 
ಹಲವು ಯುಗಗಳ ದಾಟಿ 
ಮೌನ ಮುರಿದ ಹರಳು 
ಚೂರಾಗಿ ಚೆದುರಿರಲು ಸುಶ್ರಾವ್ಯ ಕಾವ್ಯ 

ನಲ್ಮೆಯ ನೂಪುರಕೆ 
ಜೀವ ಬಂದಿದೆ ಕುಣಿಯೇ 
ನಾದ ವಿನೋದವನು ನೀಡುವ ಹೊತ್ತು 
ಹೂ ಬನದ ದುಂಬಿಗಳು  
ನಿನ್ನ ಸುಗಂಧವೇ  
ಉತ್ಕೃಷ್ಟವೆನ್ನುತ್ತ ಹಿಂಬಾಲಿಸಿತ್ತು 

ಇಳಿಜಾರಿ ಬಂದಂತೆ 
ಇಳೆಗೀಗ ಚಂದಿರ 
ನಿನ್ನ ತೊಟ್ಟಿ ಮನೆಯ ಅಂಗಳಕೆ ಸೋತ  
ನೀ ಬಿಟ್ಟು ಹೊರಟರೂ 
ಈ ದಾರಿ ಉದ್ದಕ್ಕೂ 
ಇನ್ನೂ ರಿಂಗಣಿಸುತಿದೆ ನಿನ್ನದೇ ಸ್ವಗತ  

ಪ್ರೇಮ ಸಂತೆಯ ಮೀರಿ 
ನಿಂತ ದಾನದ ರೂಪ 
ಕೊಟ್ಟವರಿಗಷ್ಟೇ ಪಡೆವಷ್ಟೂ ಹಕ್ಕು 
ಕೈಯ್ಯಲ್ಲಿ ಕೈಯ್ಯಿಟ್ಟು 
ಎದೆ ಹಗುರವಾದರೆ 
ಹೃದಕ್ಕೆ ಹೇಳು ಮತ್ತೇನು ಬೇಕು!.. 

ಓ ಒಲವೇ

ನಿನ್ನ ಬಿಟ್ಟು ಬೇರೆ ಏನೂ ಬೇಡ ಬಾಳಿನಲ್ಲಿ

ಓ ಒಲವೇ  
ನಿನ್ನ ಬಿಟ್ಟು ಬೇರೆ ಏನೂ ಬೇಡ ಬಾಳಿನಲ್ಲಿ
ಓ ಒಲವೇ 
ಓ ಮನದ ಇರಾದೆ, ಕೇಳಬಾರದೇ ಮೆಲ್ಲಗೆ
ನಿನ್ನ ಬಿಟ್ಟು ಬೇರೆ ಏನೂ ಬೇಡ ಬಾಳಿನಲ್ಲಿ
ಓ ಒಲವೇ 
ನಿನ್ನ ಬಿಟ್ಟು ಬೇರೆ ಏನೂ ಬೇಡ ಬಾಳಿನಲ್ಲಿ
ಓ ಒಲವೇ 

ಸುಂದರ ಸಂಜೆಯ ತಂಪು ನೀನು
ಬೆಳದಿಂಗಳ ರಾತ್ರಿಯ ಇಂಪು ನೀನು
ಮನದಂಗಳದಲ್ಲಿ ನೀ ಅರಳಿ ನಿಂತಿರುವ ಮಲ್ಲೆ..

ಬಾರೆ ಬೆಳಕಲ್ಲೂ ಮಿಂಚೋ ತಾರೆ
ಗರಿಯನ್ನು ಚಾಚು
ಬಾಚಿ ಕೊಂಡುಹೋಗು ನನ್ನನ್ನು ದೂರ
ಸನಿಹದ ಸವಿ ಸವಿಯೋ ಗಳಿಗೆ
ಮರೆತು ಬಿಡುವೆನು ನನ್ನೇ ನಾ
ನಿನ್ನೊಂದಿಗೆ ಕಳೆದ ಕ್ಷಣವು
ಸಗ್ಗ ಸಮಾನ
ಕಟ್ಟುವೆ ಖುಷಿಯ ತೋರಣ
ನಿನ್ನ ಬಿಟ್ಟು ಬೇರೆ ಏನೂ ಬೇಡ ಬಾಳಿನಲ್ಲಿ
ಓ ಒಲವೇ 

ನಗುವಿಗೆ ನೀ ಕಾರಣ, ಗೆಳೆಯ 
ನಗುತಿರು ಎಂದೂ ಹೀಗೇ 
ಅರಳಿದ ಹೂವಿನ ಹಾಗೆ 
ನಿನ್ನ ಕಾಯುವೆ ಎಂದಿಗೂ  
ಬೇರೆ ಏನೂ ಬೇಡ ನಿನ್ನ ಜೊತೆ ಸಾಕು ಇನ್ನು
ಓ ಒಲವೇ  
ಓ ಮನದ ಇರಾದೆ, ಕೇಳಬಾರದೇ ಮೆಲ್ಲಗೆ
ಬೇರೆ ಏನೂ ಬೇಡ ನಿನ್ನ ಜೊತೆ ಸಾಕು ಇನ್ನು
ಓ ಒಲವೇ 
ಸುಂದರ ಸಂಜೆಯ ತಂಪು ನೀನು
ಬೆಳದಿಂಗಳ ರಾತ್ರಿಯ ಇಂಪು ನೀನು
ಮನದಂಗಳದಲ್ಲಿ ನೀ ಅರಳಿ ನಿಂತಿರುವ ಮಲ್ಲೆ..

ಕಣ್ಣಲ್ಲೇ ಕಣ್ಣಂಚಿನಲ್ಲೇ ಕರೆವೇ ನೀನು ನನ್ನನ್ನು

ಕಣ್ಣಲ್ಲೇ ಕಣ್ಣಂಚಿನಲ್ಲೇ ಕರೆವೇ ನೀನು ನನ್ನನ್ನು 

ಏನೋ ಹೇಳಲು ಮುಂದಾಗುತ ನಾ ಮರೆವೆ ಮಾತನ್ನು 
ನಿನ್ನಲ್ಲೇ ಅಣುವಾಗಿ ಉಳಿದು ಬಿಡುವ ಆಸೆ ನನಗಿನ್ನೂ    
ನಿನ್ನೇ ಬೇಡಿದೆ ನನ್ನೀ ಪ್ರಾಣವು ಒಪ್ಪಿಸಿಕೋ ನೀನು
ನೆರವೇರಿಸು ಬಾ ಕೋರಿಕೆಯ 
ತಾಕುತಾ ಮನಸನ್ನು ತಡವಾಗಿಸದೆ 
ಬಂದಿರುವೆ ನಾ ನಿನಗಾಗಿ
ಆಲಂಗಿಸುವ ಸಲುವಾಗಿ
ಕೊಂಡೊಯ್ಯುವೆನು ಜೊತೆಯಾಗಿ
ಕಡಲಾಗುವೆನು ನದಿಗಾಗಿ

ಒಲವೇ ನಿನಗೆಂದೇ ಜಯಿಸಿ ಬಿಡಬಲ್ಲೆ 
ಜಗವ ಇಡಬಲ್ಲೆ ನಿನ್ನ ಅಂಗೈಯ್ಯಲ್ಲಿಯ್ಯೇ 
ಕರಗೋ ಮುಗಿಲಾಗಿ, ಉದುರೋ ಎಲೆಯಾಗಿ 
ಎರಗಿ ಮಗುವಾದೆ ಆ ನಿನ್ನ ತೋಳಲ್ಲಿಯೇ
ಇರುವಷ್ಟೇ ಇರುವ ಹೃದಕ್ಕೆ
ಆಕಾಶ ಅಂಗುಷ್ಠಕ್ಕೆ ಸಮವಾದಂತೆ!
ಬಂದಿರುವೆ ನಾ ನಿನಗಾಗಿ
ಆಲಂಗಿಸುವ ಸಲುವಾಗಿ
ಕೊಡೊಯ್ಯುವೆನು ಜೊತೆಯಾಗಿ
ಕಡಲಾಗುವೆನು ನದಿಗಾಗಿ

ಮೌನ ಏನೋ ಮೌನ

ಮೌನ ಏನೋ ಮೌನ 

ಗಮನ ಎಲ್ಲೋ ಗಮನ 
ನಿಲ್ಲದೆ ಸಾಗುವೆ 
ನೋಡು ಇನ್ನೂ ಬೇಗ ನಿನ್ನೆಡೆಗೆ 
ನೀಡದೆ ಕಾರಣ 
ಚಾಚುವೆ ನನ್ನ ಕೈಯ್ಯನ್ನು 
ಹಿಡಿಯಲು ನಿನ್ನ ನೆರಳನ್ನು 
ನಗೋದೇಕೆ ಪ್ರತಿ ಬಾರಿ
ಸತಾಯಿಸಿದಂತೆ ಒಲವಲ್ಲಿ... 
ತುಂಬುವೆ ನಿನ್ನ ಉಸಿರನ್ನು
ಮೆರೆಯುವೆ ಹೊತ್ತು ಕನಸನ್ನು  
ಅದೇ ಊರು, ಅದೇ ಸಂತೆ 
ನಾವಿಬ್ಬರೇ ಹೊಸಬರು ಜಗದಲ್ಲಿ.. 

ಹೇ ಹೇಳು, ಇನ್ನೊಮ್ಮೆ ಹೇಳು 
ನೆನ್ನೆ ಮೊನ್ನೆ ನೀನು ಹೇಳಿದ ಕತೆ 
ಬಿಡುವಲ್ಲಿ ಕೂತು ಕೇಳುವ ಆಸೆ 
ಜಾರುತ ನಿನ್ನ ತೋಳಲ್ಲಿ 
ತೂಕಡಿಕೆ ಬಂದಂತಿದೆ 
ಹೊಳೆಯುವ ಆ ಕಣ್ಣಂಚಿಗೆ 

ಎರವಲು ನೀಡು ಭಾವನೆಯ 
ಮರಳಿಸುವೆ ಮಳೆಯಾಗಿಸುತ  
ನಿರಾತಂಕ ನೀ ಇರುವಾಗ 
ಹೊಸ ಭರವಸೆ ನೀ ಕೊಡುವಾಗ ... 
ಚಾಚುವೆ ನನ್ನ ಕೈಯ್ಯನ್ನು 
ಹಿಡಿಯಲು ನಿನ್ನ ನೆರಳನ್ನು 
ನಗೋದೇಕೆ ಸಿಗೋ ವೇಳೆ 
ಸತಾಯಿಸಿದಂತೆ ಒಲವಲ್ಲಿ... 

ಸಿಗಲೇ ಬೇಡ ನೀ ನನಗೆ

ಸಿಗಲೇ ಬೇಡ ನೀ ನನಗೆ

ಜೊತೆಗೇ ಇರುವ ಮನಸಿರದೇ
ಕೊಡಲೇ ಬೇಡ ಕನಸುಗಳ
ನಿನ್ನ ನೆರಳ ರುಜುವಿರದೆ 
ದೂರ ಸಾಗುವ ನೆಪವ ಹಿಡಿದು 
ಬಿಡಿಸು ಮೌನವ ಮಾತಿರದೇ
ಕಾದಿರುವೆ ಕಲ್ಲಾಗಿಯೇ ಈಗ  
ನಿನ್ನ ಉಸಿರ ಕರೆ ಬರದೆ 

ಮೀಟಿ ಹೋದ ಹೃದಯವು, ಮಾತಿಗಿಳಿದಂತಿದೆ 
ಭೇಟಿ ಆದ ನಂತರ ತನ್ನ ಧಾಟಿ ಮರೆತಿದೆ 
ನಟಿಸುತ ಬರುವೆ 
ನಗಿಸುವ ಸಲುವೆ 
ತೆರೆದಿಡು ಮನದಾ ಕಾದ.. 

ನೀನೇ ನನ್ನ ದಿನಚರಿಯು 
ಏನ ಬರೆಯಲಿ ನೀನಿರದೆ 
ಕಾದಿರುವೆ ಕಲ್ಲಾಗಿಯೇ ಈಗ  
ನಿನ್ನ ಉಸಿರ ಕರೆ ಬರದೆ 

ಈ ದೂರವ, ಕ್ರಮೇಣ ದೂರವಾಗಿಸುವ

ಈ ದೂರವ

ಕ್ರಮೇಣ ದೂರವಾಗಿಸುವ
ಆ ತೀರಕೆ
ಪ್ರಯಾಣ ಸೇರಿ ಬೆಳೆಸುವ ಬಾ
ತಂಗಾಳಿ ಬೀಸುವ ದಿಕ್ಕಿನಲಿ
ಹೊಸದೊಂದು ಲೋಕವ ಕಟ್ಟುತಲಿ
ದಿನವೆಲ್ಲ ಸೇರಿ, ಹಾಡಿ, ಕುಣಿಯುವ ಬಾ.. ಓ..

ಬಣ್ಣಗಳ ಬೆರೆಸುವ ಆಟದಲಿ
ಸೋಲೆಂಬುದು ಯಾರಿಗೂ ಇಲ್ಲ
ಕಣ್ಣಿನಲೇ ಹೆಣೆಯುವ ಚಿತ್ರವದು
ಯಾರಿಂದಲೂ ಕಳೆಯುವುದಿಲ್ಲ
ಮನದಲ್ಲಿ ತೂಗುವ ಜೋಳಿಗೆಯಲ್ಲಿ
ಅಡಗಿವೆ ಬೆಚ್ಚನೆ ಭಾವ
ಅಪರೂಪದ ಪ್ರೀತಿಯ ಪಡೆಯುವ ಬಾಳಲಿ
ನಗುವುಗೆ ಇರದು ಅಭಾವ

ಇಯರ್ಫೋನಿನ ವೈರಾಗ್ಯ

ಹಿಂದೆಲ್ಲ ಇಯರ್ಫೋನಿನ ವೈಯರಿನ 

ಸಿಕ್ಕು ಬಿಡಿಸುವಲ್ಲಿ ಅದೇನೋ ಖುಷಿ ಇರುತ್ತಿತ್ತು  
ಅಂಚುಗಳನ್ನು ಹಿಂದಕ್ಕೆ-ಮುಂದಕ್ಕೆ 
ಮೇಲೆ-ಕೆಳಗೆ ಮಾಡಿ 
ಅಷ್ಟೂ ಚಕ್ರವ್ಯೂಹಗಳ ಭೇದಿಸಿ 
ಗಂಟು ಬಿಡಿಸುವಲ್ಲಿಗೆ  
ಮತ್ತೆ ಹತ್ತಾರು ಕಗಂಟು 

ಒಂದು ಕಿವಿಯ ಕೊಕ್ಕಿ ಕೈ ಕೊಟ್ಟರೆ 
ಉಳಿದ ಮತ್ತೊಂದರಲ್ಲೇ ತಳ್ಳಿದ 
ಹುಮ್ಮಸ್ಸು ಎಂದೂ ಕುಗ್ಗಿರಲಿಲ್ಲ;
ಕೇಳುವ ಹಾಡಿಗಷ್ಟೇ ಒತ್ತು ವಿನಃ 
ದ್ವನಿಯ ಕ್ವಾಲಿಟಿ ಯಾವತ್ತೂ ಮುಖ್ಯವಾಗಿರಲಿಲ್ಲ 

ಹಾಳಾದ ಪ್ಲಗ್ಪಿನ್ ಕತ್ತು ಆಗಾಗ ಸೀಳಿ 
ಶಸ್ತ್ರ ಚಿಕಿತ್ಸೆ ಮಾಡಿಸಿದಂತೆ ಪ್ಲಾಸ್ಟರ್ ಮೆತ್ತಿಸಿ  
ಮೈಕ್ ರಂಧ್ರಗಳಲ್ಲಿ ಹೊಕ್ಕ ಧೂಳನ್ನು 
ಮೆಲ್ಲಗೆ ಊದಿ ಈಚೆ ತಗೆವುದೇ ಕೆಲಸ;
ಜೀವವೇ ಹೋಗಿಬಂದಂತಾಗುತ್ತಿತ್ತು 
ಅಪ್ಪಿ ತಪ್ಪಿ ಜೋರಾಗಿ ಜಗ್ಗಿದಾಗ

ಇನ್ನು ಗುಂಪಾಗಿ ಬಿದ್ದ ಗೋಜಲನ್ನು  
ಬೇರ್ಪಡಿಸುವ ಬದಲು ಬಿಡಬೇಕಿತ್ತು ಅದರ ಪಾಡಿಗೆ
ಬಿಸಾಡುವ ಮನಸ್ಸಿಲ್ಲದೆ ಕಪಾಟಿನಲ್ಲಿ;
ಬೇಕೇ ಬೇಕೆಂದಾಗ, ಬೇಕಾದುದ ಬಿಟ್ಟು 
ಮಿಕ್ಕೆಲ್ಲವನ್ನು ನಿರ್ದಾಕ್ಷಣ್ಯವಾಗಿ ಕತ್ತರಿಸಬೇಕಾಗಿತ್ತು 

ಕಾಲ ಕಳೆದಂತೆ ಅಸ್ತಿತ್ವ ಬದಲಾಗಿ 
ವೈಯರ್ ಇದ್ದದ್ದು ವೈಯರ್ಲೆಸ್ ಆಯ್ತು  
ಪ್ಲಗ್ಪಿನ್ ಈಗ ಬ್ಲೂ ಟೂತ್ ಆಯ್ತು   
ಕೆಪ್ಪರ ಸಾಧನದಂತೆ ಇಯರ್ಫೋನೀಗ 
ಇಯರ್ಪಾಡಾಗಿ ಮಾರ್ಪಾಡಾಯ್ತು 

ಕರುಳು ಬೇರಾದ ತಾಯ್ಮಗುವಿನಂತೆ 
ಅತ್ತ ಮೊಬೈಲಮ್ಮ, ಇತ್ತ ಮಗು ಪಾಡು(pod)
ಹಿಂದೆ ಅಮ್ಮಳ ಹೊಟ್ಟೆ ತುಂಬಿದರೆ ಸಾಕಿತ್ತು 
ಆದರೀಗ ಮಗುವಿಗೂ ಉಣಿಸಬೇಕು;
ಮಾಡಬಹುದಾದದ್ದಿಷ್ಟೇ 
ಬೇಕಾದಾಗ ನಂಟು ಬೆಸೆದು
ಬೇಡವಾದಾಗ ಇಲ್ಲದ ನಂಟನು ಮುರಿಯಬಹುದು 
ಕೇವಲ ಒಂದೇ ಒಂದು ಟಚ್ಚಿನಲ್ಲಿ!

ಮನದಾಳದಿ ಇದೋ ಹೊಸ ಬೇರು ಹೊಕ್ಕಂತಿದೆ

ಮನದಾಳದಿ ಇದೋ ಹೊಸ ಬೇರು ಹೊಕ್ಕಂತಿದೆ 

ತಾನೇ ಹಬ್ಬಿದ ಬಳ್ಳಿ ಮೈದುಂಬಿಕೊಂಡಿದೆ 
ಮನದಾಳದಿ ಇದೋ... 

ಸಲ್ಲಾಪಕೆ ನೀ ಕೂಗಲು ಹೂವೆಲ್ಲ ಕಾವಲು 
ಎದೆಗಪ್ಪುವೆ ನಾ ಮೆಲ್ಲಗೆ ಮಾತೊಂದ ಹೇಳಲು 
ಎದುರಾದರೆ ನಗೋ ಪ್ರತಿಬಿಂಬ ಕಣ್ಣಲ್ಲಿದೆ 
ಹಾಡೋ ಹಂಬಲವಿನ್ನೂ ಗರಿ ಮೂಡಿ ಹಾರಿದೆ 

ತಂಗಾಳಿಯ ತಂಪೆಲ್ಲವೂ ನಿನ್ನಲ್ಲೇ ತಾಳಿದೆ 
ಹೂ ಮಂಚದ ಸಂಕೋಚವ ನೀ ಹೇಗೆ ತೀಡಿದೆ?
ರಂಗೋಲಿಯ ಗೆರೆ, ಚುಕ್ಕಿಯನ್ನು ಬಳಸಲು 
ನಮ್ಮ ಪ್ರೇಮ ರೂಪ ತಾ ಮೂಡಿದಂತಿದೆ 

ಹೆಚ್ಚುತ್ತಿರೋ ಈ ಭ್ರಾಂತಿಗೆ ನೀ ನೀಡು ಸಾಂತ್ವನ   
ಬೆಚ್ಚುತ್ತಲಿ ನಾ ಸೋಲುವೆ ನೀ ಕಾಣದಾಕ್ಷಣ 
ತಂಬೂರಿಯ ತಿಳಿ ತಂತಿಯನ್ನು ಮೀಟಿದೆ 
ನಿನ್ನ ಇಂಪಿಗೆ ಜೀವ ತರಂಗವಾಗಿದೆ 

ಉಸಿರೇ, ಉಸಿರೇ

ಉಸಿರೇ, ಉಸಿರೇ 

ನನ್ನ ಉಸಿರೆಲ್ಲವೂ ನಿನದೇ
ನಿದಿರೆ ಕೊಡದೆ
ಬಂದೆ ಕನಸಲ್ಲಿಯೂ ಬಿಡದೆ
ಒಲವೇ, ಒಲವೇ
ಕಣ್ಣು ಹುಡುಕಾಡಿದೆ ನಿನ್ನನೇ
ಕರುಣೆ ಇಲ್ಲವೇ
ಬಾ ಆಲಂಗಿಸು ಸುಮ್ಮನೆ
ನಾಳೆ ಎನ್ನುವ ಹಾಳೆಯ ಗೀಚುವ ಜೊತೆಗೆ
ಅಥವ ಹೊರಳಿ ನೆನ್ನೆಯ ದೂಡುವ ಚಿತೆಗೆ

ನೀನಿಲ್ಲದೆ ನಾ ಕಳೆಯೋದು ಹೇಗೆ
ಈ ಕಾಲವು ನಿಂತಿದೆ
ನೆನಪನ್ನು ಎಲ್ಲೋ ಇರಿಸೋದು ಹೇಗೆ
ಕಣ್ಣೀರಲೇ ಜಾರಿದೆ
ದಡವ ಸೇರಿಸು ಅಲ್ಲಿ ಮರಳಲ್ಲಿ ಒಂದು
ಗೂಡನ್ನು ನಾ ಕಟ್ಟುವೆ
ಅಲೆಯಾಗುತ್ತಲಿ ನೀನು ಅಳಿಸುತ್ತ ಹೋಗು
ಮಗುವಂತೆ ನಾ ನಿಲ್ಲುವೆ
ಭಯವ ಸುಡುವ
ಒಂದು ಕಿಡಿಯಾಗಿ ಉಳಿದು ಬಿಡು‌

ಹೇಳೆ ಸಂಗಾತಿ

ಹೇಳೆ ಸಂಗಾತಿ 

ಏಕೆ ನನ್ನಲ್ಲಿ 
ನಿನಗೆ ಇನಿತು ಕೋಪ
ನಿನ್ನ ನೆನಪಲ್ಲೆ 
ಜಾರೊ ಕಣ್ಣೀರು  
ಪ್ರೀತಿ ಪಡೆದ ಶಾಪ 
ಒಮ್ಮೊಮ್ಮೆ ನೀನು  
ಸಿಕ್ಕಂತೆ ಸಿಕ್ಕಿ 
ಮುಟ್ಟಲು ಮುಂದಾದಾಗ
ಮಾಯಾವಿ ಹಕ್ಕಿ  
ಹೂವೆನ್ನತಾ, ಮುಳ್ಳಾಗುವೆ ಏಕೆ... 

ನಿಂತು ಹೋದ ಶ್ವಾಸವೇ
ಹಿಂದಿರುಗು ಆದರೆ
ಕಂತಿನಲ್ಲಿ ನೀಡುತ
ಮುದ್ದು ಮಾಡಿ ಅಕ್ಕರೆ
ದಾರಿ ಕಾಣದಾಗಿದೆ
ಬಂದು ತೋರಬಾರದೇ
ಮೂಕನಾಗಿ ಹೋಗುವೆ 
ನೀನು ಮಾತನಾಡದೆ 
ಮತ್ತೆ ಮತ್ತೆ ಕಾಡುವ 
ಕತ್ತಲೇಕೆ ಬಾಳಿಗೆ  
ನೀನು ಹಚ್ಚಿ ಹೋದರೆ 
ಆಗಬಹುದು ದೀವಿಗೆ 
ಹೂವೆನ್ನತಾ, ಮುಳ್ಳಾಗುವೆ ಏಕೆ... 

ಒಲವಾದಾಕ್ಷಣ ಮಾತೇ ಬಾರದೇ

ಒಲವಾದಾಕ್ಷಣ ಮಾತೇ ಬಾರದೇ 

ಎದುರಾಗುತ್ತಲೇ ಉಸಿರು ನಿಂತಿದೆ 
ಹೆಸರ ಗೀಚುವೆ ಎಲ್ಲೇ ನಾ ನಿಂತರೂ 
ಮನದ ದಾಹಕೆ ಆಗು ಬಾ ತುಂತುರು 
ಹೊಸೆದು ನೀಡಲೇ ಹೊಸ ಸಾಲೊಂದನು 
ಬೆಸೆದು ನನ್ನಲಿ ನಿನ್ನ ನಗುವನು 
ಗರಿ ಬಂದಂತಿದೆ ನೋಡು ಸಂತೋಷಕೆ 
ಸಿರಿ ಸಿಕ್ಕಂತೆ ನೀ ನನ್ನ ಈ ಜೀವಕೆ 
ಒಲವೇ ನಿನ್ನಿಂದ ಜನುಮ ಸಾರ್ಥಕ 
ಮೈಯ್ಯ ಮರೆವೆ ನೆನೆವಾಗ, ನೀನೇ ಕೌತುಕ.. 

ಈ ಬಿರುಸಾದ ಬೇಗೆಗೆ 
ಇರಲೇ ಬೀಸಣಿಕೆಯಾಗಿ 
ಆ ಸೊಗಸಾದ ಸಂಜೆಗೆ
ಸಿಗಲೇ ಏಕಾಂತವಾಗಿ 
ತುಡಿಗಣ್ಣಲ್ಲಿ ನೀ ಇಟ್ಟು ನನ್ನನು 
ಕುಣಿಸೋ ಆಟ ಹಿತವಾಗಿದೆ 
ಒಳಗೇನೇನೋ ಆತಂಕ ಕಾಡಲು
ನೀ ಎದೆಗಪ್ಪಿ ಇರಬಾರದೇ?!



ಬೆಳಕನ್ನು ನಾಚಿಸೋ ಹಾಗೆಯೇ 
ಪರದೆ ನೀಡಿದೆ ಮೋಡವು 
ಬೆರಳ ಸೋಕಿ ನೀ 
ಕಣ್ಣೀರಾಗಿ ಹೊರ ಬಂದವು 

ಸುಮ್ನೆ ಜೀವನ ಸಾಗುತೈತೆ ಎಲ್ಲ ಮಾಮೂಲಿ

ಸುಮ್ನೆ ಜೀವನ ಸಾಗುತೈತೆ ಎಲ್ಲ ಮಾಮೂಲಿ

ಒಡೋ ಟೈಮನು ತಡೆಯೋಕಾಗೋದಿಲ್ಲ ಕೈಯ್ಯಲಿ
ಪ್ರೀತಿ ಹಾಂಚೋಣಾ ಆದರೆ ದುಬಾರಿ ಲೈಫ಼ಲಿ
ಸೋಲು ಗೆಲುವು  ಬೇವು ಬೆಲ್ಲ ಹಬ್ಬನೇ ಇಲ್ಲಿ
ಹೆಜ್ಜೆ ಹೆಜ್ಜೆಗೂ ದಾರಿ ಕಾಣೋ ದುಂಡು ಭೂಮಿಲಿ
ಬಾನಿಗಾರೋಣ ಸಿಕ್ರೆ ಚಾನ್ಸು ರಾಕೆಟ್ ಸ್ಪೀಡಲ್ಲಿ
ಏನೇ ಆಗು ಎಲ್ಲೇ ಹೋಗು ಇರಿಸು ನೆನಪಲ್ಲಿ
ನಿನ್ನೂರು, ನಿನ್ನೊರ್ಗಿಂತ ಏನೂ ಮಿಗಿಲು ಬಾಳಲ್ಲಿ 

ಬಣ್ಣ ತೊಟ್ಟ ಚಿಟ್ಟೆ ತನ್ನ ಅಂದ ಬಚ್ಚಿಟ್ಟು
ಗೂಡಿನಲ್ಲೇ ಕೂತ್ರೆ, ಜೇನು ಸಿಗುತೈತಾ
ಮೋಡ ಮುಚ್ಚಿತಂತ ಸುಮ್ಸುಮ್ನೆ ಸಿಟ್ಟಾಗಿ 
ಬೆಳಗೋ ಸೂರ್ಯ ಹುಟ್ಟೊದಿಲ್ಲ ಅಂದ್ರೆ ಆಗುತ್ತಾ
ಸಕ್ರೆ ಬೇಕು ಅಂದ್ರೆ, ಹುಡುಕು ಇರುವೆ ಹಂಗೆ (೨)
ಆನೇಗೂನೂ ಬಾದೆ ತಪ್ಪಿದ್ದಲ್ಲ ಕಾಡಲ್ಲಿ
ದೇವ್ರಾಗೋಕೂ ಹೋರಾಡ್ಬೇಕು‌ ನೀನು ಬಾಳಲ್ಲಿ!

ಅವಳು ಹಗಲಿನ ಬೆಳಗು

ಅವಳು ಹಗಲಿನ ಬೆಳಗು

ಅವ ರಾತ್ರಿಯ ಕತ್ತಲು
ಅವಳಿಗೆ ಕತ್ತಲ ಭಯವಿಲ್ಲ, ಅಲ್ಲಿ ಅವ ಇರುತ್ತಾನೆ
ಅವನಿಗೆ ಬೆಳಕ ಕೊರತೆಯಿಲ್ಲ, ಆಕೆ ಭರಪೂರ ಕೊಡುತ್ತಾಳೆ

ಪಾಳಿ ಬದಲಿಸುವ ವೇಳೆ
ಕೆಲ ಕಾಲ ಮಾತಿಗಿಳಿಯುತ್ತಾರೆ
ಆಗಸ ಆಲಿಸುತ್ತ ನಾಚಿ
ಕೆಂಪು ಮುಡಿದು ಕಂಗೊಳಿಸುತ್ತದೆ

ಅವನು ಚಂದ್ರನ ಸುತ್ತ
ತಾರೆಗಳ ತೋರಣ ಕಟ್ಟಿ ಪ್ರಕಟಿಸಿದಾಗ
ಅವಳು ಇಬ್ಬನಿಯ ಹೊತ್ತ
ಪಕಳೆಗಳ ಪ್ರೇಮ ಕವಿತೆ ಹಾಡುತ್ತಾಳೆ

ಅವನು ಮಿಂಚು-ಗುಡುಗುಗಳ ರೂಪಿಸಿ
ಎದೆಯ ಕಂಪಿಸಿದಾಗ
ಅವಳು ಕೆನ್ನೆ ಸೆರೆಹಿಡಿದ
ಹಿಮದ ರುಚಿಯ ಪರಿಚಯಿಸುತ್ತಾಳೆ

ಮಳೆ‌ ಇಬ್ಬರಿಗೂ ಆಪ್ತ
ಆದರೆ‌ ಭಾವ ಬೇರೆ
ಇಳೆ ಇಬ್ಬರಲ್ಲೂ ಸುಪ್ತ
ಮಿಡಿತದ ದಾಟಿ ಬೇರೆ

ಅವನಲ್ಲಿ ಆಕೆ ಎಲ್ಲ ಗುಟ್ಟುಗಳ
ಬೆಚ್ಚನೆ ಬಚ್ಚಿಟ್ಟು ಕಾಪಾಡುತ್ತಾಳೆ
ಆಕೆಯಲ್ಲಿ ಅವ ಸೀಳಿದ ಕಿರಣದ
ಬಣ್ಣಗಳಿಗೂ ಮೇರಾಗಿ ಉಳಿಯುತ್ತಾನೆ

ಹಣತೆ ಮೌನ ವಹಿಸಿದಾಗ
ಅವಳು ಅವನೊಳಗೆ
ಕಿಡಿ ಸೋಕಿದ ಮರು ಕ್ಷಣ
ಅವ ಅವಳೊಳಗೆ

ಇಬ್ಬರೂ‌ ಒಂದೇ ಅಲ್ಲ
ಒಂದಾದರೆ ಮತ್ತೊಂದಕೆ ಮೃತ್ಯು
ಯುಗಗಳಿಂದ ತಿದ್ದಿ ತಂದ
ಕಟ್ಟು ಕತೆಗಳ ಕಡತಗಳನ್ನು
ಒಂದೇ ಏಟಿಗೆ 
ಸುಟ್ಟು ಹಾಕಿ ಬಿಡಬಹುದಿತ್ತು
ಆಥವ
ಅವರಿಗೆ ಅವ್ಯಾವುದರ ಪರಿವೇ ಇಲ್ಲ
ಸಿಕ್ಕಷ್ಟೂ ಹೊತ್ತು ಪ್ರೀತಿಸಿ
ಮಿಕ್ಕಂತೆ ಮತ್ತೂ ಪ್ರೀತಿಸಿ
ಇರುವಿಕೆಯ ಸಾಬೀತು ಪಡಿಸುತ್ತ
ಉಳಿದು ಬಿಟ್ಟಿದ್ದಾರೆ 
ತಾವಿರುವಂತೇ!...

ಆಳವಾಗಿ ಸೇರಿಹೋಗಲೇನು ನೀಲಿ ಕಣ್ಣಲಿ

ಆಳವಾಗಿ ಸೇರಿಹೋಗಲೇನು ನೀಲಿ ಕಣ್ಣಲಿ 

ಬೀಡು ಬಿಟ್ಟು ನಲಿಯಲೇನು  ನಿನ್ನ ನೀಳ ತೊಳಲಿ 
ಸಾಲುಗಟ್ಟಿ ನಿಂತ ಹಾಗೆ ನಿನ್ನ ಮುಂದೆ ಅಹಂ ಇದೋ 
ಸೋಲಿಸೋಕೂ ಮುನ್ನ ಸೋತು ಹೋದೆ ನಿನ್ನ ಎದುರಲಿ 

ಎಷ್ಟು ದೂರ ಸಾಗಬೇಕು ನೆರಳ ಹಿಂಬಾಲಿಸಿ 
ಆಗಲೇನು ನಾನೇ, ಅದರ ಜಾಗವನ್ನು ತುಂಬತಾ 
ಇಷ್ಟ ಪಟ್ಟ ಹಾಗೆ ನೀನು ಸಿಕ್ಕಿದಾಗ ತಿರುವಲಿ 
ಮನದ ಭಾರ ಹಗುರವಾಗಿ ನಿನ್ನ ತುಂಬೋ ಇಂಗಿತ 

ಹಿಟ್ಟು ತಿಂದ ದೇಹದಲ್ಲೂ ಗಟ್ಟಿ ಇರದು ಗುಂಡಿಗೆ 
ಪ್ರೀತಿ ವಿಷಯದಲ್ಲಿ ಅದುವೂ ಹೂವಿನಷ್ಟೇ ಕೋಮಲ 
ಬಿಟ್ಟು ಬಾಳಲಾರೆ ಎಂಬುದಷ್ಟು ಸಣ್ಣ ವಿಷಯವೇ?
ನೀನು ಇರದ ಬಾಳು ಕೆಸರ ಅಪ್ಪಿಕೊಂಡ ಉತ್ಪಲ   

ತಟ್ಟಿ ಹೋಗು ಎದೆಯನೊಮ್ಮೆ ಚಿಮ್ಮಿ ಬರಲಿ ಅಕ್ಷರ 
ಗೋಳು ತೋಡಿಕೊಳ್ಳುವಂತೆ ಗೀಚಿಕೊಳುವೆ  ಹಾಳೆಯ
ಚಿಟ್ಟೆ ಬಿಟ್ಟು ಹೋದ ಹೆಜ್ಜೆಯನ್ನು ಹಿಡಿಯುವಾಕೆ ನೀ 
ನನ್ನ ದುಗುಡ-ತುಮುಲ ಮೂಲ ಹಾಡನೊಮ್ಮೆ ಕೆಳೆಯಾ?

ನೋಡು ಹಸಿದುಕೊಂಡ ಕಣ್ಣು ಕನಸಿಗೆ ಕರೆ ನೀಡಿದೆ 
ಯಾವುದೇ ಮುಲಾಜು ಇರದೆ ಸ್ವಪ್ನ ದಾಳಿ ಆಗಿಸು 
ಸಣ್ಣ ಕಿಡಿಯ ಹೊತ್ತು ಉಗುರಿನಲ್ಲಿ ಬೆನ್ನ ಗೀರಲು
ಕರಗಿದಂತೆ ನಾನು ಹಿಡಿಯಲೆಂದು ನೀನೇ ಧಾವಿಸು 

ಪಾದ ಸೊಕಿದ ಎದೆ‌ ಉಬ್ಬುವಂತಿದೆ

 ಪಾದ ಸೊಕಿದ ಎದೆ‌ ಉಬ್ಬುವಂತಿದೆ

ಪುಟ್ಟ ಕಂದನ ಹಿಡಿದು ತಬ್ಬುವಂತಿದೆ
ಅಳುವ ಸದ್ದಿಗೆ ಮನ ಕಲಕಿದಂತಿದೆ
ಮಗುವ ನಗುವ ಸದ್ದಿನಲ್ಲೇ ಸಿಲುಕಿದಂತಿದೆ

ನಿದ್ದೆ ಮಾಡುತಿದ್ದರೆ ಧ್ಯಾನ ಬುದ್ಧನೇ
ನಿದ್ದೆ ದಾಟಿದಾಕ್ಷಣ ಚಂದ ರೋಧನೆ
ಮಿಟುಕುವಾಗ ನೋಡುತ ಹೊಳೆಯೋ ಕಣ್ಣನೇ
ಉಸಿರ ರಾಗ ಹಿಡಿಯುವೆ ಹಾಡಿ ಮೆಲ್ಲನೆ

ಮೊದಮೊದಲು ಸಿಕ್ಕಾಗ ಕಂಡೂ ಕಾಣದ ಹಾಗೆ

ಮೊದಮೊದಲು ಸಿಕ್ಕಾಗ ಕಂಡೂ ಕಾಣದ ಹಾಗೆ 

ಇಬ್ಬರೂ ನಟಿಸಿದ್ದೆವು, ಇನ್ನೂ ನೆನಪಲ್ಲಿದೆ
ನಗೆ ತರಿಸದ ಚಟಾಕಿ ಹಾರಿಸಿದಾಗಲೂ
ಒತ್ತಾಯಕೆ ನಕ್ಕಿದ್ದು ಇನ್ನೂ ನೆನಪಲ್ಲಿದೆ

ಯಾರ ಕಣ್ಣಿಗೂ ಬೀಳದೆ ಮೆಲ್ಲ ಕೈ ಬೆಸೆದು 
ಸಂತೆ ಬೀದಿಗಳಲ್ಲಿ ಓಡಾಡಿಕೊಂಡೆವು 
ಎಲ್ಲರೂ ಗಮನಿಸುವುದ ಮೊದಲೇ ಅರಿತವರಾಗಿ 
ಮತ್ತೂ ಮುಗಿಬಿದ್ದೆವು ಇನ್ನೂ ನೆನಪಲ್ಲಿದೆ

ಚಿಕ್ಕ ಪುಟ್ಟ ಕಾರಣಕ್ಕೆ ಬೆನ್ನಿಗೆ ಬೆನ್ನ ಕೊಟ್ಟು 
ವಿಮುಖವಾಗುವ ವೇಳೆ ಸಂಕಟ ದುಪ್ಪಟ್ಟು 
ಹಠವ ಬಿಟ್ಟು ಕೊಡದಿರುವುದ ಆಗಿನಿಂದಲೇ 
ರೂಡಿಸಿಕೊಂಡಿದ್ದೆವು ಇನ್ನೂ ನೆನಪಲ್ಲಿದೆ 

ಯಾವ ಸಂಜೆಯ ಕೊಂಡಾಡಿದೆವೋ  
ಅದೇ ಮುಳುವಾಯಿತೆಂದು ವಿರಹದಲ್ಲಿ 
ಕಣ್ಣೀರಿನ ಪತ್ರಗಳ ಬರೆಬರೆದು ಹರಿದೆವು  
ಬವಣೆಯಲಿ ಬೆಂದೆವು ಇನ್ನೂ ನೆನಪಲ್ಲಿದೆ 

ರಾತ್ರಿಗಳ ಕನಸಿಗೆ , ಹಗಲು ಹೊಸ ಬಯಕೆಗೆ 
ಮೀಸಲಿಟ್ಟೆವು ನಡುವೆ ತೆಳು ಗೀಟು ಬರೆದು 
ಕತ್ತಲಿಗೆ ನಾವೆಂದೂ ಅಂಜಿದವರೇ ಅಲ್ಲ 
ಬೆಳಕು ನಮ್ಮೊಳಗಿತ್ತು ಇನ್ನೂ ನೆನಪಲ್ಲಿದೆ 

ನಾ ಮರೆತೆ ಎಂದು ನೀ, ನೀ ಮರೆತೆ ಎಂದು ನಾ 
ಹಳೆ ನೆನಪುಗಳ ಮೆಲುಕು ಹಾಕುತಿದ್ದೆವು 
ನೆನಪ ನೆನಪಿಸುವಂಥ ಬಳಪ ರೇಖೆಗಳನ್ನು 
ನೆಪ ಮಾತ್ರಕೆ ಬಿಡಿಸಿದೆವು ಇನ್ನೂ ನೆನಪಲ್ಲಿದೆ  

ಅಂಬರದ ತುಂಬ ನಿನ್ನ ಹೆಜ್ಜೆ ಗುರುತು

 *ಪಲ್ಲವಿ*

ಅಂಬರದ ತುಂಬ ನಿನ್ನ ಹೆಜ್ಜೆ ಗುರುತು ಸಂಜೆ ಮೂಡಿದಂತೆ
ಕಿಟಕಿಯ ಗಾಜಿನಲ್ಲಿ ನಿನ್ನ ಹೆಸರ ಹನಿಯು ಗೀಚಿದಂತೆ 
ನಿಧಾನಿಸದೆ ಆsss, ಧಾವಿಸು ಬೇಗ
ಮಿಡಿಯುತಿದೆ ನನ್ನ ಹೃದಯ
ಇನ್ನೊಮ್ಮೆ ಕೇಳಿ ಮೊರೆಯ
ನೀ ನಿಜವೆಂದು ಹೇಳಿ ಮರೆಯಾಗು ಓ..
ಅಂಬರದ ತುಂಬ ನಿನ್ನ ಹೆಜ್ಜೆ ಗುರುತು ಸಂಜೆ ಮೂಡಿದಂತೆ
ಕಿಟಕಿಯ ಗಾಜಿನಲ್ಲಿ ನಿನ್ನ ಹೆಸರ ಹನಿಯು ಗೀಚಿದಂತೆ 

*ಚರಣ ೧*
ಮರಳ ಮೇಲೆ ಪ್ರಣಯದ ಬರಹ, ಅಲೆಯೊಳು ಕೂಡುತಿವೆ 
ಹುದುಗಿದ ಭಾವಗಳ ಚಿಪ್ಪಲಿ ತುಂಬಿ ನಿನ್ನನು ಸೇರುತುವೆ 
ಓ..  ಮರಳ ಮೇಲೆ ಪ್ರಣಯದ ಬರಹ, ಅಲೆಯೊಳು ಕೂಡುತಿವೆ   
ಹುದುಗಿದ ಭಾವಗಳ ಚಿಪ್ಪಲಿ ತುಂಬಿ ನಿನ್ನನು ಸೇರುತಿವೆ 
ಎದುರಾದರೆ ನೀ, ಹಗುರಾಗುವೆನು
ಸ್ವರ ಸಂಚಯಕೆ ಜೊತೆಯಾಗುವೆನು
ಹೇಗಾದರೂ ಈ ಕನಸ ನನಸಾಗಿಸೆಯಾ? (೨)
ಮಿಡಿಯುತಿದೆ ನನ್ನ ಹೃದಯ
ಇನ್ನೊಮ್ಮೆ ಕೇಳಿ ಮೊರೆಯ
ನೀ ನಿಜವೆಂದು ಹೇಳಿ ಮರೆಯಾಗು ಓ..

ಅಂಬರದ ತುಂಬ ನಿನ್ನ ಹೆಜ್ಜೆ ಗುರುತು ಸಂಜೆ ಮೂಡಿದಂತೆ
ಕಿಟಕಿಯ ಗಾಜಿನಲ್ಲಿ ನಿನ್ನ ಹೆಸರ ಹನಿಯು ಗೀಚಿದಂತೆ  

*ಚರಣ ೨*
ಮುಗಿಯದ ಮಾತೆಲ್ಲ ಕಣ್ಣಲಿ ಜಿನುಗಿ ಖುಷಿಯಲಿ ಜಾರುತಿವೆ 
ಮರಳಿ, ಮರಳಿ ಹರಿದು ಬರೆದ ಕವಿತೆಗಳು ನಿನ್ನವೇ 
ಓ... ಮುಗಿಯದ ಮಾತೆಲ್ಲ ಕಣ್ಣಲಿ ಜಿನುಗಿ ಖುಷಿಯಲಿ ಜಾರುತಿವೆ 
ಮರಳಿ, ಮರಳಿ ಹರಿದು ಬರೆದ ಕವಿತೆಗಳು ನಿನ್ನವೇ 
ಎದುರಾದರೆ ನೀ, ಹಗುರಾಗುವೆನು
ಸ್ವರ ಸಂಚಯಕೆ ಜೊತೆಯಾಗುವೆನು
ಹೇಗಾದರೂ ಈ ಕನಸ ನನಸಾಗಿಸೆಯಾ? (೨)  
ಮಿಡಿಯುತಿದೆ ನನ್ನ ಹೃದಯ
ನೀನೊಮ್ಮೆ ಕೇಳಿ ಮೊರೆಯ
ನೀ ನಿಜವೆಂದು ಹೇಳಿ ಮರೆಯಾಗು ಓ..

ಅಂಬರದ ತುಂಬ ನಿನ್ನ ಹೆಜ್ಜೆ ಗುರುತು ಸಂಜೆ ಮೂಡಿದಂತೆ
ಕಿಟಕಿಯ ಗಾಜಿನಲ್ಲಿ ನಿನ್ನ ಹೆಸರ ಹನಿಯು ಗೀಚಿದಂತೆ(೨) 

ಬರೆಯುವೆ ಉಸಿರಿನಲೇ ಮುಗಿಯದ ಕವಿತೆಯ

ಬರೆಯುವೆ ಬರೆಯುವೆ

ಉಸಿರಿನಲೇ ಮುಗಿಯದ ಕವಿತೆಯ
ಹೃದಯದ ಜೊತೆಯಲಿ
ನಡೆಸುತಲಿ ಒಲವಿನ ವಿನಿಮಯ
ಇರಲಾರೆ ಈ ಕ್ಷಣ
ನೆನೆಯದೆ ನಿನ್ನ ನಾ
ಮನಸಾರೆ ನಿನ್ನ ಕೋರುವೆ ನಾ
ಜೊತೆಯನು ಅನು ದಿನ
ಎಚ್ಚರವೇ ಇರದೆ, ಎಚ್ಚರವೇ ಇರದೆ
ಉಚ್ಚರಿಸಿ ಒಲವ ಬಿಡದೆ
ಬಚ್ಚಿಡುವ ಬಯಕೆ, ಹೊತ್ತಿರುವ ಮನಕೆ
ಉತ್ತರಿಸೋ ಹೊಣೆಯು ನಿನದೇ...

ನಿನ್ನೊಂದಿಗೆ ಆದಂತಿದೆ ಈ ಹಿಂದೆಯೇ ಒಡನಾಟ
ಕಣ್ಣಲ್ಲಿಯೇ ಮಾತಾಡುತ ಸೋಲುವುದೇ ಪರಿಪಾಠ
ಹೇಳದೆ ಕೇಳದೇ ಬೀಳುವ ಸ್ವಪ್ನಕೆ
ನೀಡು ನೀ ಬೇಗನೆ ನಿನ್ನದೇ ಪೀಠಿಕೆ
ಎಚ್ಚರವೇ ಇರದೆ, ಎಚ್ಚರವೇ ಇರದೆ
ಉಚ್ಚರಿಸಿ ಒಲವ ಬಿಡದೆ
ಬಚ್ಚಿಡುವ ಬಯಕೆ, ಹೊತ್ತಿರುವ ಮನಕೆ
ಉತ್ತರಿಸೋ ಹೊಣೆಯು ನಿನದೇ...

ಕೈ ಹಿಡಿದು ಮುನ್ನಡೆಸು ಆಗುವೆನು ಪರಿಪೂರ್ಣ
ಏಕಾಂತದಿ ಮಾತೊಂದನು ಹೇಳೋದಿದೆ ಬರಲೇ ನಾ
ದೇವರೇ ಆದರೂ ಸೋಲುವ ಪ್ರೀತಿಗೆ
ತಾಮಸ ತಾಳಲು ಪ್ರೀತಿಯೇ ದೀವಿಗೆ
ಎಚ್ಚರವೇ ಇರದೆ, ಎಚ್ಚರವೇ ಇರದೆ
ಉಚ್ಚರಿಸಿ ಒಲವ ಬಿಡದೆ
ಬಚ್ಚಿಡುವ ಬಯಕೆ, ಹೊತ್ತಿರುವ ಮನಕೆ
ಉತ್ತರಿಸೋ ಹೊಣೆಯು ನಿನದೇ...

ಮತ್ತೆ ಸೇರೋಣ ಅನ್ನೋ ಮಾತು ಆಡಬೇಡ

ಮತ್ತೆ ಸೇರೋಣ ಅನ್ನೋ ಮಾತು ಆಡಬೇಡ 

ನಿನ್ನ ಬೆನ್ನ ತೋರಿ ಮರೆಯಾಗಿ ಹೋಗಬೇಡ 
ಇನ್ನೂ ಕಾಡುವಂತೆ ನೆನಪಲ್ಲಿ ಮೂಡಬೇಡ   
ಕೆನ್ನೆ ಮೇಲೆ ಕೂತ ಕಂಬನಿ ಆಗಬೇಡ  
ಹುಸಿ ಜೀವನ ನನದಾಗಿದೆ 
ನಿನ್ನ ಆಸರೆಯೊಂದೇ ಈಗ ಬೇಕಾಗಿದೆ  

ಸೋತೆ ನಿಂತಲ್ಲೇ ನಾನೀಗ   
ನಿನ್ನ ಸೇರದೆ ಹೋದಾಗ  
ನೋಡು ಜೀವವೇ ಹೋದಂತೆ ಆಗಿದೆ .. ಓ ಪ್ರಿಯ  

ಅರೆನಿದ್ದೆಯಲ್ಲಿ ಮುಳುಗೆದ್ದ ಮೇಲೆ
ಕನಸೆಲ್ಲ ನೀನೇ.. ಕನಸೆಲ್ಲ ನೀನೇ
ಸುಡುವಂಥ ಹಾಡು ಎದೆಗಪ್ಪಿದಾಗ 
ನೆನಪಾದೆ ನೀನೇ.. ನೆನಪಾದೆ ನೀನೇ
ಬಿಡುವಿರದೇ ಕರೆಯುವೆ ಉಸಿರಲೇ 
ಕಾದಿರು ಮುಗಿಲಂತೆ ಕೈ ಜಾರದೆ 

ಸೋತೆ ನಿಂತಲ್ಲೇ ನಾನೀಗ   
ನಿನ್ನ ಸೇರದೆ ಹೋದಾಗ  
ನೋಡು ಜೀವವೇ ಹೋದಂತೆ ಆಗಿದೆ .. ಓ ಪ್ರಿಯ  

ಗಾಳಿಯ ಗಂಧವು ನಿನ್ನ ಸಹಿಯಾಗಿದೆ

ಗಾಳಿಯ ಗಂಧವು ನಿನ್ನ ಸಹಿಯಾಗಿದೆ

ಆಡುವ ಮಾತು ಜೇನಂತೆ ಸಿಹಿಯಾಗಿದೆ
ಕಣ್ಣ ಮರೆಯಲ್ಲಿಯೇ ನನ್ನ ಸೆರೆಯಾಗಿಸು
ನಿನ್ನ ಗುಣಗಾನ ಮಾಡುತ್ತ ಶರಣಾಗುವೆ

ಒಂದು ಪಿಸು ಮಾತಲಿ ಏನೋ ಹೇಳೋದಿದೆ
ಚೂರು ಅನುಕೂಲ ಎದೆಗಪ್ಪಿ ನೀ ನಿಂತರೆ
ಎಲ್ಲ ನಡೆದಂತಿದೆ ಪ್ರೇಮದನುಸಾರಕೆ
ಜೀವಕೆ ಆದೆ ನೀ ಪ್ರೇಮದ ಕಾಣಿಕೆ‌

ನಿನ್ನ ಸಾಂಗತ್ಯವೇ ಹೃದಯದ ಇಂಗಿತ
ಬೇಡಿಕೆ‌ ಹೆಚ್ಚಿದೆ ನಿನ್ನ ಓಲೈಸುತ
ಹುಚ್ಚು ಆವರಿಸಲು ಇಲ್ಲದ ಹಂಬಲ 
ನೀಡು ಮನದಾಸೆ ಪೂರೈಸುವ ಬೆಂಬಲ 

ಎಲ್ಲ ನಿನ್ನಂತೆಯೇ ಬದಲಾದಂತಿದೆ
ಬಾಳ ಕತೆಗೀಗ ತಿರುವೊಂದು ದೊರೆತಂತಿದೆ
ತಾಳುವ ನೋವೂ ಒಲವಲ್ಲಿ ಹಿತವಾಗಿದೆ
ಕೂಡುವ ಜಾಗ ಬಹುವಾಗಿ ಹಿಡಿಸುತ್ತಿದೆ

ಬಂದು ಕನಸನ್ನು ಉಪಚರಿಸು ಜೊತೆಯಾಗುತ
ಪುಟ್ಟ ಮುಗುವಂತೆ ಮುದ್ದಾಡು ಕೈ ಹಿಡಿಯುತ
ತಿದ್ದು ನನ್ನನ್ನು ನೀ ನಿನಗೆ ಬೇಕಾದರೆ
ರೆಪ್ಪೆಯ ಮಿಟುಕಿಸು ಮಾತು ಸಾಕಾದರೆ

ಸಿಕ್ಕರೆ ಸಿಕ್ಕಿಗೆ ಬೇಡದ ಬಿಡುಗಡೆ
ಸಕ್ಕರೆ ಮೆಲ್ಲುವ ಹಾಗಿ ನೀ ಕಂಡರೆ
ಎಲ್ಲ ಸಿರಿ ಮೀರಿದ ಐಸಿರಿ ಬದುಕಲಿ 
ಎದೆಯ ಗೂಡಲ್ಲಿ ಬೆಳಕಾಗಿ ನೀನಿದ್ದರೆ 

ಸಣ್ಣ ಬಿಡುವಲ್ಲಿಯೂ ನಿನ್ನನೇ ಧ್ಯಾನಿಸಿ
ಧನ್ಯನಾಗಿರುವೆನು ನಿನ್ನನು ಮೋಹಿಸಿ 
ಸಲ್ಲದ ಕೋಪವ ನೀಗುವ ಮೌನಕೆ 
ಕಾಣದ ಚುಕ್ಕಿಯ ಎಳೆತರುವೆ ಸರಸಕೆ  

ಚಂದಿರ ನಿಂತನು ನಮ್ಮನೇ ನೋಡುತ 
ಮೋಡವು ತಾನಿದೋ ಬಂತು ಮಳೆಯಾಗುತ 
ಮಂಜಿನ ಮಂಪರು ಮುಗಿಯದಂತಾಗಿದೆ 
ಇಬ್ಬನಿ ಜಾರಲು ತುದಿಗಾಲಲ್ಲಿದೆ 

ನಿಂತಿದೆ ಭೂಮಿಯೇ ನಿನ್ನ ನಿತ್ರಾಣಕೆ  
ಕೊಂಚವೇ ಸರಿದರೂ ಏನೋ ರೋಮಾಂಚನ 
ನೆಚ್ಚಿನ ಸಾಲನು ಇಲ್ಲಿಗೆ ಮುಗಿಸುವೆ 
ಆದರೆ ಉಸಿರಲಿ ನಿನದೇ ಪಾರಾಯಣ 

ನೋಡು ಮನದಾಸೆ ಪೂರೈಸುವ ಹಂಬಲ
ಹುಚ್ಚು ಹೆಚ್ಚಾಗಲು ಕೋರುವೆ ಬೆಂಬಲ
ನೀನೇ ಇರದಿದ್ದರೆ ಏನೋ ಕೋಲಾಹಲ
ಹುಚ್ಚು ಹೆಚ್ಚಾಗಲು ಕೋರುವೆ ಬೆಂಬಲ
ನೋಡು ಮನದಾಸೆ ಪೂರೈಸುವ ಹಂಬಲ...

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...