Wednesday 16 February 2022

ಗಾಳಿಯ ಗಂಧವು ನಿನ್ನ ಸಹಿಯಾಗಿದೆ

ಗಾಳಿಯ ಗಂಧವು ನಿನ್ನ ಸಹಿಯಾಗಿದೆ

ಆಡುವ ಮಾತು ಜೇನಂತೆ ಸಿಹಿಯಾಗಿದೆ
ಕಣ್ಣ ಮರೆಯಲ್ಲಿಯೇ ನನ್ನ ಸೆರೆಯಾಗಿಸು
ನಿನ್ನ ಗುಣಗಾನ ಮಾಡುತ್ತ ಶರಣಾಗುವೆ

ಒಂದು ಪಿಸು ಮಾತಲಿ ಏನೋ ಹೇಳೋದಿದೆ
ಚೂರು ಅನುಕೂಲ ಎದೆಗಪ್ಪಿ ನೀ ನಿಂತರೆ
ಎಲ್ಲ ನಡೆದಂತಿದೆ ಪ್ರೇಮದನುಸಾರಕೆ
ಜೀವಕೆ ಆದೆ ನೀ ಪ್ರೇಮದ ಕಾಣಿಕೆ‌

ನಿನ್ನ ಸಾಂಗತ್ಯವೇ ಹೃದಯದ ಇಂಗಿತ
ಬೇಡಿಕೆ‌ ಹೆಚ್ಚಿದೆ ನಿನ್ನ ಓಲೈಸುತ
ಹುಚ್ಚು ಆವರಿಸಲು ಇಲ್ಲದ ಹಂಬಲ 
ನೀಡು ಮನದಾಸೆ ಪೂರೈಸುವ ಬೆಂಬಲ 

ಎಲ್ಲ ನಿನ್ನಂತೆಯೇ ಬದಲಾದಂತಿದೆ
ಬಾಳ ಕತೆಗೀಗ ತಿರುವೊಂದು ದೊರೆತಂತಿದೆ
ತಾಳುವ ನೋವೂ ಒಲವಲ್ಲಿ ಹಿತವಾಗಿದೆ
ಕೂಡುವ ಜಾಗ ಬಹುವಾಗಿ ಹಿಡಿಸುತ್ತಿದೆ

ಬಂದು ಕನಸನ್ನು ಉಪಚರಿಸು ಜೊತೆಯಾಗುತ
ಪುಟ್ಟ ಮುಗುವಂತೆ ಮುದ್ದಾಡು ಕೈ ಹಿಡಿಯುತ
ತಿದ್ದು ನನ್ನನ್ನು ನೀ ನಿನಗೆ ಬೇಕಾದರೆ
ರೆಪ್ಪೆಯ ಮಿಟುಕಿಸು ಮಾತು ಸಾಕಾದರೆ

ಸಿಕ್ಕರೆ ಸಿಕ್ಕಿಗೆ ಬೇಡದ ಬಿಡುಗಡೆ
ಸಕ್ಕರೆ ಮೆಲ್ಲುವ ಹಾಗಿ ನೀ ಕಂಡರೆ
ಎಲ್ಲ ಸಿರಿ ಮೀರಿದ ಐಸಿರಿ ಬದುಕಲಿ 
ಎದೆಯ ಗೂಡಲ್ಲಿ ಬೆಳಕಾಗಿ ನೀನಿದ್ದರೆ 

ಸಣ್ಣ ಬಿಡುವಲ್ಲಿಯೂ ನಿನ್ನನೇ ಧ್ಯಾನಿಸಿ
ಧನ್ಯನಾಗಿರುವೆನು ನಿನ್ನನು ಮೋಹಿಸಿ 
ಸಲ್ಲದ ಕೋಪವ ನೀಗುವ ಮೌನಕೆ 
ಕಾಣದ ಚುಕ್ಕಿಯ ಎಳೆತರುವೆ ಸರಸಕೆ  

ಚಂದಿರ ನಿಂತನು ನಮ್ಮನೇ ನೋಡುತ 
ಮೋಡವು ತಾನಿದೋ ಬಂತು ಮಳೆಯಾಗುತ 
ಮಂಜಿನ ಮಂಪರು ಮುಗಿಯದಂತಾಗಿದೆ 
ಇಬ್ಬನಿ ಜಾರಲು ತುದಿಗಾಲಲ್ಲಿದೆ 

ನಿಂತಿದೆ ಭೂಮಿಯೇ ನಿನ್ನ ನಿತ್ರಾಣಕೆ  
ಕೊಂಚವೇ ಸರಿದರೂ ಏನೋ ರೋಮಾಂಚನ 
ನೆಚ್ಚಿನ ಸಾಲನು ಇಲ್ಲಿಗೆ ಮುಗಿಸುವೆ 
ಆದರೆ ಉಸಿರಲಿ ನಿನದೇ ಪಾರಾಯಣ 

ನೋಡು ಮನದಾಸೆ ಪೂರೈಸುವ ಹಂಬಲ
ಹುಚ್ಚು ಹೆಚ್ಚಾಗಲು ಕೋರುವೆ ಬೆಂಬಲ
ನೀನೇ ಇರದಿದ್ದರೆ ಏನೋ ಕೋಲಾಹಲ
ಹುಚ್ಚು ಹೆಚ್ಚಾಗಲು ಕೋರುವೆ ಬೆಂಬಲ
ನೋಡು ಮನದಾಸೆ ಪೂರೈಸುವ ಹಂಬಲ...

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...