Friday 30 December 2016

ನನ್ನ ನೆರಳು

ಮುಗಿಲ ನೆರಳೊಂದು ಹೆಗಲೇರಿತು
ಎದೆಯ ಅಂಗಳದಿ ಹೂ ಅರಳಿತು
ತೊದಲು ಮಾತುಗಳು ಮೂಡಲಾತುರಕೆ
ತುಟಿಯ ಅಂಚಿನಲಿ ಮನೆ ಮಾಡಿತು


ಮಡಿಲ ಕೌದಿಯ ಚಿತ್ತಾರಕೆ
ಉಸಿರು ಮೂಡಲು ತಡವಾಯಿತು
ಮೊದಲ ಸ್ಪರ್ಶವ ಪಡೆವ ಸಂಭ್ರಮಕೆ
ಅಂಗೈಯ್ಯ ಗೆರೆ ಮಿಡುಕಾಡಿತು


ಹಾಲು ಬಟ್ಟಲಿನ ಹಸಿವಲ್ಲಿಯೂ
ತೂಗು ತೊಟ್ಟಿಲಿನ ಕನಸಲ್ಲಿಯೂ
ಎದುರು ನೋಟದ ಭಾವ ಸಾಗರದಿ
ಅಳುವು ಈಜಲು ಸಜ್ಜಾಯಿತು


ಹೊನ್ನ ರಶ್ಮಿಯು ತಣ್ಣಗಾಯಿತು
ಜೊನ್ನ ಧಾರೆಯೂ ಮೌನ ತಾಳಿತು
ಭೂಮಿಯನ್ನೇ ತಾ ಹೊತ್ತ ಗರ್ಭದಿ
ಸಣ್ಣ ಕಂಪನ ಮೂಡಿತು


ಒಂದು ಕ್ಷಣದ ಬೇನೆಗೆ
ಜನ್ಮ ವ್ಯಾಪಿಸೋ ಸುಖವನು
ಹೊದಿಸುವ ಪ್ರಮಾಣ ಸಾಕ್ಷಿಗೆ
ಮೆಲ್ಲ ಕಂಬನಿ ಉರುಳಿತು!!


                         - ರತ್ನಸುತ 

ನನ್ನ ಮರುಜನ್ಮ

ಬೆಚ್ಚಗಿರಿಸು ಕನಸುಗಳನ್ನ
ನಿನ್ನ ಅಂತಃಕರಣದಲ್ಲಿ ಮೂಡುವ
ಪ್ರಶ್ನೆಗಳಿಗೆ ಉತ್ತರ ಸಿಗಬಹುದು,
ಮಾತುಗಳ ದಾಟಿದ ಸ್ಪರ್ಶಗಳ
ವಹಿವಾಟಿನ ಏರಿಳಿತಗಳು
ನಿನ್ನ ಪುಟ್ಟ ಮೆದುಳಲ್ಲಿ ದಾಖಲಾಗಲಿ


ನಿನ್ನ ತೊಗಲು, ನಯನ, ನಾಸಿಕ
ಮುಡಿಯಿಂದ ಉಂಗುಟದ ತನಕ
ಹೆಸರಿಟ್ಟು ಕರೆವವರಿದ್ದಾರೆ ಜೋಕೆ!!
ಕಡೆಗೆ ಉಳಿವುದು ನಿನ್ನಲ್ಲಿ ನೀನು ಮಾತ್ರ
ಮತ್ತು ನಿನಗೆ ನೀನಾಗಿಸಿಕೊಳ್ಳುವ ಹೆಸರು
ಅದು ನಿನ್ನಿಷ್ಟದ ವ್ಯಾಪ್ತಿಯಲ್ಲಿ


ಜನ್ಮ ಕೊಟ್ಟ ಮಾತ್ರಕ್ಕೆ
ನಾನೇನು ಹಿರಿಮೆಯಲ್ಲಿ ಹಿಗ್ಗುತ್ತಿಲ್ಲ ಗೆಳೆಯ
ನಾ ಕೊಟ್ಟದ್ದು ವೀರ್ಯಾಣು ಮಾತ್ರ
ನೀ ದಕ್ಕಿದ್ದು ಆಕಾಶದಷ್ಟು
ನಿನ್ನಮ್ಮನದ್ದು ನಿನ್ನಷ್ಟೇ ವಿಸ್ತೃತ ಛಾಯೆ
ಹಿಗ್ಗೆಲ್ಲ ನಿಮ್ಮದೇ
ನಾ ಸಂಭ್ರಮಕೆ ಮೂಕ ಸಾಕ್ಷಿ!!


ನಿನ್ನ ದಿಗಂಬರನಾಗಿ ನೋಡಿದ
ಸಕಲ ಬಣ್ಣಗಳಿಗೂ ಮತ್ಸರ ಮೂಡಿ
ಒಂದೊಂದಾಗಿ ನಿನ್ನ ಮೈ ಆವರಿಸುವಾಗ
ಸಂಕೋಚವಾದರೂ ಒಪ್ಪಿಕೋ
ಇದು "ಲೋಕ" ನಿಯಮ,
ಬಣ್ಣದ ಮಾತುಗಳಿಗೆ ಮಾತ್ರ ಕೆಪ್ಪಾಗು
ಮೌನದ ತೊಟ್ಟಿಲೇ ನಿನಗೆ ಕ್ಷೇಮ!!


ಹಾಲ ಬಟ್ಟಲು, ಹೂವ ಮೆಟ್ಟಿಲು
ನಿನ್ನ ಬರುವಿಕೆಯ ಹೊಸ್ತಿಲಿಗೆ
ಶ್ರಾವಣದ ಹಸಿರಾಗಿವೆಯಷ್ಟೇ,
ಮುಂದೆ ಕಾಡು-ಗುಡ್ಡಗಳ ಜಾಡು
ಕಲ್ಲು-ಮುಳ್ಳಿನ ತಿರುವಿನ ಹಾದಿ,


ಅಂಜಬೇಕಿಲ್ಲ ನೀನೆಲ್ಲೂ
ನಿನ್ನ ಕಾವಲಿಗೆ ನಿಂತ ನಾನು
ನಿನ್ನ ಕಾಯುವ ಜೊತೆ ಜೊತೆಗೆ
ಪಾಠ ಕಲಿತು ಕಲಿಸುವಾತನಾಗಿರುವೆ!!


ನನ್ನ ಮರುಜನ್ಮ ನೀನು
ನಿನ್ನ ಹಡೆದಮ್ಮ ತಾನು ನನ್ನ ಜೀವ
ನಮ್ಮ ಸಲಹುವದನುರಾಗ ದೈವ!!


                                 - ರತ್ನಸುತ

ಗರುಡ ಗೀತ ಸಾಹಿತ್ಯ ೨

ಇಳಿಸಂಜೆ ಮಳೆಯಲ್ಲಿ ನೀನೊಂದು ಹನಿಯಾಗಿ
ಕೆನ್ನೆ ಮೇಲೆ ಅಂಟಿ ಕೂತಂತೆ
ರೋಮಾಂಚನ..ರೋಮಾಂಚನ..
ತಿಳಿಯಾದ ನಗೆಯಲ್ಲಿ ನೀ ನನ್ನ ಸೆಳೆವಾಗ
ಹಿತವಾದ ಹಾಡು ಹಾದು ಹೋದಂತೆ
ರೋಮಾಂಚನ..ರೋಮಾಂಚನ..


ನಿನಗೂ, ನನಗೂ ಈಗಷ್ಟೇ ಒಲವಾಗಿ
ಹದಿನಾರರ ಪ್ರಾಯಕೆ ಸರಿದಂತೆ
ಹೃದಯ ಮಿಡಿದ ಪ್ರತಿಯೊಂದು ಮಿಡಿತಕ್ಕೂ
ನೀ ಹತ್ತಿರ ಬೇಕೆನ್ನುವ ಚಿಂತೆ


ಎದೆ ಬಾಗಿಲ ತೆರೆದಿರುವಾಗ
ತಡ ಮಾಡದೆ ಸ್ಪಂದಿಸು ಬೇಗ
ಸೆರೆಯಾಗು ಉಸಿರಿನಲ್ಲಿ ಉಸಿರಾಗಿ..


ರೋಮಾಂಚನ.. ರೋಮಾಂಚನ..

ಕನಸಲ್ಲೂ ಬಿಡದಂತೆ ನಿನ್ನನ್ನೇ ಕಂಡಾಗ
ನಸುಕಲ್ಲೂ ನೂರು ಬಣ್ಣ ಬಿರಿದಂತೆ
ರೋಮಾಂಚನ.. ರೋಮಾಂಚನ..


ಬೇಕು ನಿನ್ನ ಸಹವಾಸ
ಎಲ್ಲ ಎಲ್ಲೆ ಮೀರೋಕೆ
ಬಾಳಿನೆಲ್ಲ ಸಂತೋಷ
ನಿನ್ನ ಕಣ್ಣಿನಲ್ಲಿ ಕಾಣೋಕೆ


ಜೊತೆಯಾಗಿ ಒಂದೊಂದೇ ಹೆಜ್ಜೆಯ ಇಡುವಾಗ
ಸಿಹಿಗಾಳಿಯಲ್ಲೂ ಪ್ರೀತಿ ಬಂದಂತೆ


ರೋಮಾಂಚನ.. ರೋಮಾಂಚನ..

ಹೆಸರನ್ನು ಹೆಸರಲ್ಲಿ ಹೊಸೆಯುತ್ತ ನಡೆವಾಗ
ಹೊಸತೊಂದು ಲೋಕ ಕೂಗಿ ಕರೆದಂತೆ
ರೋಮಾಂಚನ.. ರೋಮಾಂಚನ..


                                   - ರತ್ನಸುತ 

ಗರುಡ ಗೀತ ಸಾಹಿತ್ಯ ೧

ರೋಮಾಂಚನ.. ರೋಮಾಂಚನ...

ಇರುವಾಗ ನನಗಾಗಿ, ನೀನೆಂದೂ ಜೊತೆಯಾಗಿ
ಪ್ರಾಣಕ್ಕೀಗ ಪ್ರಾಣ ಸಿಕ್ಕಂತೆ
ರೋಮಾಂಚನ.. ರೋಮಾಂಚನ...


ಬೆರೆತಾಗ ಕೈಯ್ಯಲ್ಲಿ, ಕೈಯ್ಯೊಂದು ಬಿಗಿಯಾಗಿ
ಖುಷಿಯಲ್ಲಿ ಕಣ್ಣು ತುಂಬಿಕೊಂಡಂತೆ
ರೋಮಾಂಚನ.. ರೋಮಾಂಚನ...


ನನಗೂ, ನಿನಗೂ ಈಗಷ್ಟೇ ಒಲವಾಗಿ
ಹದಿನಾರರ ಪ್ರಾಯಕೆ ಇಳಿದಂತೆ
ಸನಿಹ, ಸನಿಹ ಬರುವಾಗ ಮನಸಲ್ಲಿ
ಅತಿ ಸುಂದರ ನಾಚಿಕೆ ಮೆರೆದಂತೆ


ಗರಿಗೆದರಿದ ಹಕ್ಕಿಯ ಹಾಗೆ
ಉಸಿರಾಡುವೆ ನಿನ್ನುಸಿರಲ್ಲಿ
ಕೊನೆಗೊಂದು ಮುತ್ತ ನೀಡು ನಗುವಲ್ಲೇ...


ರೋಮಾಂಚನ.. ರೋಮಾಂಚನ...

ನಿನ್ನ ತುಟಿಯಲ್ಲಿ, ಆನಂದ ಕಂಡಾಗ
ಚುಕ್ಕಿಗೊಂದು ಮಿಂಚು ಬಂದಂತೆ
ರೋಮಾಂಚನ.. ರೋಮಾಂಚನ...


ಮಾತನಾಡಿಕೊಳ್ಳೋಣ
ರಾತ್ರಿ ಬೀಳೋ ಮಳೆಯಂತೆ
ಪ್ರೀತಿಸುತ್ತ ಸಾಗೋಣ
ದೇಹ ಎರಡು ಒಂದೇ ಉಸಿರಂತೆ
ಹಾಗೊಮ್ಮೆ ಸಾವಲ್ಲೂ ಬೇರಾಗೆವೆನ್ನುತ್ತ
ಆಣೆ ಮಾಡಿ ಕೂಡಿ ನಡೆದಾಗ
ರೋಮಾಂಚನ.. ರೋಮಾಂಚನ...


ಎದೆ ಗೂಡ ಮರೆಯಲ್ಲಿ ಹಾಡೊಂದು ಕೊರೆವಾಗ
ಹಾಡಿಕೊಂಡೇ ಜೋಡಿಯಾಗೋಣ
ರೋಮಾಂಚನ.. ರೋಮಾಂಚನ...

                                  
                                                 - ರತ್ನಸುತ 

Friday 23 December 2016

ಚೆಲ್ಲ-ಪಿಲ್ಲಿ

ಕಡಲ ಸಪ್ಪಳ, ಮರಳ ಹಂಬಲ
ಅಲೆಯ ಮೆಟ್ಟಿಲು ದೂರಕ್ಕೆ
ಮುಗಿಲೇ ಆಗಲಿ ಕರಗಲೇ ಬೇಕು
ಎರಗಲೇಬೇಕು ತೀರಕ್ಕೆ

ಎಲ್ಲವೂ ಸೊನ್ನೆ ಬಿದ್ದರೆ ನೀನು
ಗೆದ್ದರೆ ಸೊನ್ನೆಯೇ ಸನ್ಮಾನ
ನೆರಳಿನ ಹಾಗಿ ಕಾಯುವ ನಂಬಿಕೆ
ಎಲ್ಲಕೂ ಮೀರಿದ ಬಹುಮಾನ

ಸೂರ್ಯನ ಕಿರಣಕೆ ಮರುಗುವ ಹೂವು
ಕತ್ತಲಿನಲ್ಲಿ ಬೆವರುವುದು
ದೊರೆತ ಸಿರಿಯದು ಕಳೆದ ಮೇಲೆಯೇ
ಅದರ ಆಶಯ ತಿಳಿಯುವುದು

ಒಂದೇ ಅನಿಸುವ ಬಣ್ಣದ ಮಡಿಲಲಿ
ಸಾವಿರ ಸಾವಿರ ಬಣ್ಣಗಳು
ಮುಂದೆ ಸಾಗುವ ದಾರಿಯ ನೆನಪಿಗೆ
ಕಾಣದ ಹೆಜ್ಜೆ ಗುರುತುಗಳು 


ಕಾಮನ ಬಿಲ್ಲನು ಮೂಡಿಸಲು
ಕರಗಿದ ಮೋಡದ ತ್ಯಾಗವಿದೆ
ನಾಳೆಯ ಬದುಕನು ಚಿತ್ರಿಸಲು
ನೆನ್ನೆಯ ನೆನಪಿಗೆ ಜಾಗವಿದೆ

ಮರಳಿಗೆ ಹಂಚಿದ ಗುಟ್ಟನು ಕದ್ದು
ಆಲಿಸಿ ಅಳಿಸಿತು ಅಲೆಯೊಂದು
ಖಾಲಿ ಉಳಿದ ದಡದಲಿ ಕೂತು
ತುಸು ಹಗುರಾಯಿತು ಮನಸಿಂದು

ಮೌನವೂ ಭಾಷೆಯೇ ಕಣ್ಣೀರಿನಂತೆ
ಆಲಿಸುವ ಮನಸಿದ್ದರಷ್ಟೇ ಮಾತು-ಕತೆ
ಕತ್ತಲ ತೊರೆದು ಬೆಳಕಿನೆಡೆ ಸಾಗಿದರೆ
ನೆರಳಾದರೂ ನೀಡಬಹುದು ನಮಗೆ ಜೊತೆ!!


                                      - ರತ್ನಸುತ 
 

ಎಣ್ಣೆ ಹೊಡೆದ ಕಣ್ಣಿಗೆ ನೀನು

ಎಣ್ಣೆ ಹೊಡೆದ ಕಣ್ಣಿಗೆ ನೀನು
ಸಿಕ್ಕೆ ಬೆಣ್ಣೆಯ ಹಾಗೆ
ಸಣ್ಣ ತಪ್ಪನು ಮಾಡುವ ಮುನ್ನ
ದೂರ ಆದರೆ ಹೇಗೆ?


ಮಾತೇ ಇಲ್ಲದೆ ಸೋತ ನಾಲಿಗೆ
ಹಾಡು ಹಾಡಿತು ಹಾಗೇ
ನಡೆಯಲೂ ಆಗದ ರಸ್ತೆಯ ಮೇಲೆ
ಕುಣಿದು ಕುಪ್ಪಳಿಸೋದೇ?


ಹಣೆಗೆ ಇಟ್ಟ ಪಿಸ್ತೂಲನ್ನ
ಎದೆಗೆ ಇಟ್ಟುಕೊಂಡೆ
ಗುಂಡಿಗೆ ಸೀಳುವ ಗುಂಡನು ಹಾರಿಸು
ಪ್ರಾಣ ಇನ್ನು ನಿಂದೇ!!!!


                         - ರತ್ನಸುತ 

ಕವೀಶ್ವರ

ನಿನ್ನ ಗ್ರಹಿಕೆಗೆ ನಿಲುಕುವುದು
ಬರೆ ಗೇಣಷ್ಟು ದೂರ ಅಂದರು
ಅಷ್ಟಕ್ಕೇ ಅದೆಷ್ಟು ಉತ್ಸುಕ ಕಣ್ಣು!!
ಇನ್ನು ದಿಗಂತವ ಗ್ರಹಿಸುವಂತಾದರೆ?!!


ಹಿಡಿದ ಆಟಿಕೆಯನ್ನ ಬಿಟ್ಟುಗೊಡುವೆ
ಆಸೆಯ ಸಂತೆಯಲಿ ಹಾಸಿ ಮಲಗಿದ ಬುದ್ಧ
ನಿನ್ನ ಎರವಲಿನಲ್ಲಿ ಆತ್ಮ ಸಂತೃಪ್ತ
ಖುಷಿಯ ಮೊಗೆದು ಕೊಡುವಲ್ಲಿ ನಿಸ್ಸೀಮ!!


ತೊಟ್ಟಿಲಿಗೆ ಬೆಚ್ಚನೆಯ ಕನಸ ಕೊಟ್ಟವನೇ
ಜೋಗುಳದ ಸಹನೆಯನೂ ಮೀರಿದ ಹಠವಾದಿ
ಹೊಸಿಲ ದಾಟಿಸೋ ಕೌತುಕದ ಬಾಗಿಲ
ತೆರೆದಿಟ್ಟ ಮನೆಯಲ್ಲಿ ನಿನ್ನ ಅವಿರತ ಆಟ


ಹಸಿವಲ್ಲಿ ಹೆಬ್ಬುಲಿ, ನಿದ್ದೆಯಲಿ ತಂಗಾಳಿ
ಹಾಲಾಡಿಗೆ ಹೊಟ್ಟೆಪಾಡು ನೀನು
ಕತ್ತಲೆಯ ಕಿವಿಹಿಂಡುವಂತೆ ಬಿಟ್ಟ ಕಣ್ಣು
ಬೆಳಕನ್ನು ನಾಚಿಸುತ ಹಾಗೆ ಮುಚ್ಚುವುದೇ?!!


ಹೂ ಹಗುರ ತೂಕದಲಿ, ಭೂಕಂಪ ಅಳುವಿನಲಿ
ನಿದ್ದೆ ಕಸಿಯುತ ಎಚ್ಚರಿಕೆ ನೀಡ ಬಂದೆ
ಕೆಂಪು ತುಟಿಗಳ ನಡುವೆ ರಂಪ ಮಾಡದೆ ಉಳಿದ
ಮಾತು ಮತ್ತೇರಿದಂತಿವೆ ಏನು ಆಲಸ್ಯ!!


ಜೋಳಿಗೆಯ ಕೌದಿಯಲ್ಲಿ ಕುಸುರಿದ
ತಲೆಮಾರುಗಳ ಜೋಡಿಸಿಟ್ಟ ಕಸೂತಿ
ಸಿಂಬಿಯಾಕಾರದ ದಿಂಬಿಗೆ ತಲೆಯೊರಗಿ
ಬೀಳ್ಗೊಡುಗೆಯೆಡೆ ಸಜ್ಜಾಗಲಿ ಕಕ್ಕುಲಾತಿ!!


                                        - ರತ್ನಸುತ

Thursday 22 December 2016

ನಾನು ತಂದೆಯಷ್ಟೇ ಆಗಬಲ್ಲೆ

ನಾನೊಬ್ಬ ಗಂಡಸು
ನನ್ನ ಮಗು ಅತ್ತಾಗ

ಅಪ್ಪನಾಗಿ ಓಲೈಸಬಲ್ಲೆ
ಹಸಿವ ನೀಗಿಸಲಾರೆ


ನನ್ನ ಮಗು ಕಕ್ಕ ಮಾಡಿದಾಗ
ಮೋರೆ ಕಿವುಚಿ

"
ಬಂಗಾರಿ.. ನೋಡಿಲ್ಲಿ
!!"
ಜಾರಿಕೊಂಡರೆ ಕೆಲಸ ಮುಗಿದಂತೆ


ರಾತ್ರಿ ನಿದ್ದೆ ಕೊಡದಿದ್ದಾಗ
ಮಂಪರಲ್ಲಿ "ಮುದ್ದು.. ಕಂದ.. ಚಿನ್ನಪ್ಪ
"
ತೂಕಡಿಕೆಯಲ್ಲೊಂದು ಹಾಡು
ಮತ್ತೆ ಬೆಳಕಿಗೇ ಎಚ್ಚರ


ವಿಟಾಮಿನ್ನು, ಡೈಜಶನ್ನು
ಲಸಿಕೆಯ ಅಳತೆ ಆಕೆಗೆ ಗೊತ್ತು
ಯಾವ ಹೊತ್ತಿಗೆ ಏನು ಎಂಬುದು
ಅಪ್ಪನಾದವ ನನಗೆಲ್ಲಿ ತಿಳಿದೀತು


ಹೆಗಲಿಗೆ ಸಾಕಾದಾಗ ಮಡಿಲು
ಮಡಿಲು ಜೋಮು ಹಿಡಿದರೆ ಮತ್ತೆ ಹೆಗಲು
ಹೇಗೆ ಒಂದು ಅರ್ಧ ತಾಸಿನ ಶ್ರಮವಿತ್ತವ
ಅಮ್ಮನ ಮಡಿಲಲ್ಲಿ ಸುಲಲಿತ
,
ಅಥವ ನನಗೆ ಹಾಗೆ ಭಾಸ...


ಬೆನ್ನೀರ ಮಜ್ಜನದ ತರುವಾಯ
ಧೂಪ ಹಿಡಿದು ತಾಜಾ ನಿದ್ದೆಗೈವಾಗ
ಅಪ್ಪನೆಂಬವನ ಪರಾಕ್ರಮ
"ಇವ ಥೇಟು ನನ್ನಂಗೇ"


ನಾನೊಬ್ಬ ಗಂಡಸು
ತಂದೆತನದ ಸೀಮೆ ದಾಟುವುದು ಕಷ್ಟ
ಆಕೆ ಹೆಂಗಸು
ಅದೆಷ್ಟು ಸರಾಗ
ಬೇಕೆಂದಾಗ ತಾಯ್ತನದ ಸವಿ
ಇಲ್ಲವೆ ತಂದೆಯಾಗಲೂ ತಯಾರ್
ಅದಕ್ಕೇ ಅವಳು ತಾಯಿ!!


ಒಮ್ಮೊಮ್ಮೆ ಭ್ರಮೆಯಲ್ಲಿ ಬದುಕುತ್ತೇನೆ..
ಅಸಲಿಗೆ ತಾಯಾಗೋದು ಭ್ರಮೆ
ನಾನು ತಂದೆಯಷ್ಟೇ ಆಗಬಲ್ಲೆ...

                                      - ರತ್ನಸುತ
 

ನಿನಗೆ ಬೇಕಾಗಿದ್ದೆಲ್ಲ ಇಷ್ಟೇ

ಕೆಂಗಣ್ಣ ತೀಡುತ್ತ ಮತ್ತಷ್ಟು ಕೆಂಪಾಗಿ
ಬಿಕ್ಕಳಿಕೆ ತಡೆದಿಟ್ಟು ಇನ್ನಷ್ಟು ಅಳುವಾಗ
ನನ್ನ ತೋಳಿನ ಒಂದು ಬಿಗಿ ಅಪ್ಪುಗೆ
ಸಿಗಲಿಲ್ಲವೆಂದುಳಿದೆ ನೀ ಸಪ್ಪಗೆ
ನಿನಗೆ ಬೇಕಾಗಿದ್ದೆಲ್ಲ ಇಷ್ಟೇ
ಒಂದೆರಡು ಮಾತು, ಹಣೆಗೊಂದು ಮುತ್ತು


ನನ್ನ ಕಣ್ಣಲಿ ಬಿದ್ದ ಧೂಳ ತೆಗೆಯಲು ಬಂದ
ನಿನ್ನ ಉರಿಸಿನ ಬೇಗೆ ತಿಳಿಸಿತೆಲ್ಲ
ಕುರುಡನಾದೆ ನನಗೇನೂ ಕಾಣಲಿಲ್ಲ
ಕಟುಕನಂತೆ ಬೆನ್ನುಮಾಡಿ ಹೋದೆ
ನಿನಗೆ ಬೇಕಾಗಿದ್ದೆಲ್ಲ ಇಷ್ಟೇ
ಒಂದೆರಡು ಮಾತು, ಹಣೆಗೊಂದು ಮುತ್ತು


ಮೌನವಾಗಿಸುವೆ ನೀನು ಮಾತನಾಡಿಸುತ
ಮಾತನಾಡಿಸಿ ಹಾಗೇ ಮೌನ ತಾಳುವೆ
ಮೌನ ಮುರಿಯುವ ಸದ್ದು ಸತ್ತು ನನ್ನಲ್ಲಿ
ಇನ್ನಷ್ಟು ವಿಚಲಿತನಾದ ಗಳಿಗೆಯಲಿ
ನಿನಗೆ ಬೇಕಾಗಿದ್ದೆಲ್ಲ ಇಷ್ಟೇ
ಒಂದೆರಡು ಮಾತು, ಹಣೆಗೊಂದು ಮುತ್ತು


"ಹೊತ್ತು ದಾಟಿ ಬಂದೆ ಕ್ಷಮೆಯಿರಲಿ" ಎಂದಾಗ
ನಕ್ಕು ಎಲ್ಲವ ಮರೆಸಿದಷ್ಟು ಸುಲಭಕ್ಕೆ
ನಿನ್ನಿಂದ ನಿನ್ನ ಪಾರು ಮಾಡದ ಕೋಪ
ನನ್ನಿಂದ ನಿನ್ನ ಇಂಚಿಂಚು ಕಸಿವಾಗ
ನಿನಗೆ ಬೇಕಾಗಿದ್ದೆಲ್ಲ ಇಷ್ಟೇ
ಒಂದೆರಡು ಮಾತು, ಹಣೆಗೊಂದು ಮುತ್ತು


ಇಷ್ಟು ಬರೆದು ಮುಗಿಸುವಷ್ಟರಲ್ಲಿ
ಜಾರಿಬಿಟ್ಟ ಕಣ್ಣ ಹನಿಗಳೆಷ್ಟೋ
ಲೆಕ್ಕವಿಟ್ಟು, ಇಟ್ಟು ಸಾಕಾದ ನಿನಗೆ
ಒಂದೇ ಉಸಿರಲ್ಲಿ ಇದ ತಿಳಿಸ ಬಂದೆ
ಆದರೆ
ನಿನಗೆ ಬೇಕಾಗಿದ್ದೆಲ್ಲ ಇಷ್ಟೇ
ಒಂದೆರಡು ಮಾತು, ಹಣೆಗೊಂದು ಮುತ್ತು


                                             - ರತ್ನಸುತ

Friday 16 December 2016

ಸ್ವಾಭಿಮಾನವ ಅಡವಿಟ್ಟಾಗ

ಬೆಳಕು ಬೇಡನಿಸುವಷ್ಟು ಕಾರಣಗಳಿವೆ 
ಆದರೆ ಕತ್ತಲೆ ಬೇಡವೆಂಬ ಕಾರಣಕ್ಕೆ 
ಬಳಕನ್ನು ಸ್ವೀಕರಿಸಿರುವೆ ಅಷ್ಟೇ;
ಬೆಳಕು ಬೇಕೆಂಬುದು ಸಾರ್ವಕಾಲಿಕ ಸತ್ಯ 

ಹಸಿವ ಗೆಲ್ಲುವ ಛಲವಿದ್ದರೆ ಸಾಲದು 
ಹೊಟ್ಟೆಗೆ ತಕ್ಕಷ್ಟು ಗಳಿಸುವ ಕ್ಷಮತೆ ಬೇಕು 
ಬಂಡಾಯ ಚಳುವಳಿಗಳು ಒಳಗಿನ ತಿಂಡಿಪೋತನ 
ಮತ್ತಷ್ಟು ಬಲಿಷ್ಠಗೊಳಿಸುವುದಂತೂ ನಿಜ 

ಹುಟ್ಟಿದ್ದೇನೆಂಬ ಕಾರಣಕ್ಕೆ ಬದುಕಿ 
ಬದುಕಿದ್ದೇನೆಂಬ ಕಾರಣಕ್ಕೆ ಗುರುತಾಗುವ ಗುರುತು 
ಬಹುಕಾಲ ಉಳಿವಿನ ಅರ್ಹತೆ ಗಳಿಸಿಕೊಳ್ಳದು;
ಅಂತಃಕರಣದಲ್ಲಿ ಬದುಕಿದರೆ
ಗುರುತಾಗುವ ಗೋಜಲಿಗೆ ಸಿಕ್ಕಿ ನರಳುವ ತಗಾದೆ ತಪ್ಪುವುದು 

ಬಿದ್ದ ಹೆಸರುಗಳು ನಾವು ಗಳಿಸಿದವಷ್ಟೇ 
ಯಾರೂ ಕೆಲಸ ಬಿಟ್ಟು ಹೆಸರಿಡುವಂತವರಲ್ಲ;
ಒಂದು, ಹೆಸರಿಡಲಾಗದಂತೆ ಜೀವಿಸೋದು 
ಎರಡು, ಹೆಸರುಗಳ ಹಂಗು ತೊರೆದು ಜೀವಿಸೋದು 
ಮೂರು, ಹೆಸರಿಡುವವರಿಂದ ದೂರ ಉಳಿದು ಜೀವಿಸೋದು;
ಮೂರರಲ್ಲಿ ಯಾವೊಂದು ಸುಳ್ಳಾದರೂ 
ವಾಸ್ತವವ ಒಪ್ಪುವ ಸರಳ ಅಸಹಾಯಕತೆ ನಮ್ಮದಾಗಬೇಕಷ್ಟೇ!!

ಸಮಸ್ಯೆಗಳಿಗೆ ಕಣ್ಣೀರು ಜೊತೆಯಾಗಬಹುದು 
ಆದರೆ ಅದೇ ಪರಿಹಾರದ ದಿಕ್ಸೂಚಿಯಾಗಬಯಸಿದರೆ
ಮೂರ್ಖತನಕ್ಕೆ ನೀರೆರೆದು ಪೋಷಿಸಿದಂತೆ,
ಬೇರೂರಿದಷ್ಟೂ ಉರುಳುವ ಸಾಧ್ಯತೆ ಬಹಳ 

ಸ್ವಾಭಿಮಾನವ ಮಾರಿ ಬಂದ ಲಾಭವ ಹೂಡಿ 
ನಾಳೆಗಳ ಲೆಕ್ಕ ಹಾಕುವ ಹೇಯ ಕೃತ್ಯಕ್ಕೆ 
ಸಾವೂ ಹೇಸಿಗೆಯಿಂದ ದೂರುಳಿದು 
ನನ್ನ ಶತಾಯುವನ್ನಾಗಿಸುವ ಆತಂಕವಿದೆ;
ಯಾವುದಕ್ಕೂ ಸಾಯುವ ನೂರು ಮಾರ್ಗಗಳನ್ನ 
ಕಂಡುಕೊಳ್ಳುವುದು ಅನಿವಾರ್ಯವೆನಿಸಿದಾಕ್ಷಣ ಸಜ್ಜಾಗುವುದು ಒಳಿತು;
ಯಾವ ಕ್ಷಣಕ್ಕಾದರೂ ಕೆಲಸಕ್ಕೆ ಬರಬಹುದು!!

                                                                     - ರತ್ನಸುತ

Wednesday 14 December 2016

ಪರಮಾತ್ಮನಿಗೊಂದು ಪತ್ರ

ಇಲ್ಲಿ ಹಾಳಾಗೋದೆ ತಂದೆ
ಬಂದು ನಿಲ್ಲಪ್ಪ ನೀ ಕಣ್ಣ ಮುಂದೆ
ಬಯ್ಯೋರೇ ಆಗೋದ್ರು ಎಲ್ಲ
ನಾನು ಮಾಡಿರೋ ತಪ್ಪೆಲ್ಲ ಒಂದೇ..


ಇಟ್ಟಾಗ ತಕ್ಷಣ ಕೆಟ್ಟಲ್ಲಿ ಕಾಲ್ಗುಣ
ಬಿದ್ದೋಗ್ಲಿ ಅತ್ಲಾಗೆ ಕಾಲು
ಮಾತಿಗ್ಮಾತು ಸೇರ್ಸೋ ಮುಠಾಳ ನಾನು
ನಾಲ್ಗೆ ತುಂಡಾಗೋದೇ ಮೇಲು


ಕದ್ದು ಕೇಳ್ಬೇಡಂತ ತಿವಿಯೋರ್ಗೆ
ಮೈಯ್ಯೆಲ್ಲ ಕಿವಿಯಂತೆ ಗೊತ್ತಾ?
ನಿದ್ದೆ ಕದಿಯೋ ಮಂದಿ ಇರ್ಬೋದು
ಕನ್ಸೇನ್ ಅವ್ರಪ್ಪನ್ಮನೆ ಸ್ವತ್ತಾ?


ಸುಮ್ನಿದ್ರೆ ಸೋಂಬೇರಿ, ಎಗ್ರಾಡಿದ್ರೆ ನರಿ
ಮೋಸಕ್ಕೆ ಬಲಿಯಾದ್ರೆ ಬನ್ನೂರ್ ಕುರಿ
ಗಳ್ಗೆಗೆ ಒಂದೊಂದು ಬಣ್ಣ ಹಚ್ಚೋಗಂಟ
ಏನ್ಮಾಡಿದ್ರೂ ಇಲ್ಲಿ ಎಲ್ಲ ಸರಿ


ಎಲ್ಲಪ್ಪ ಗುರುವೇ ನೆಮ್ದಿ ಇರೋ ಜಾಗ?
ನೀನಿರೋ ಜಾಗಾನೂ ಸಂತೆ ಸಿವ
ಕಾಸಿಗ್-ಕಾಸ್ ಕೂಡಿಟ್ಟು ತಂದಿವ್ನಿ ಒಪ್ಪುಸ್ಕೋ
ಹಿಡಿ ತುಂಬ ಕೊಟ್ಬುಡು ಸಂತೋಸವ..


ಮಾಡಿರೋ ತಪ್ಪಾದ್ರು ಏನುಂತ ಕೇಳೋ
ತಲೆ ಬಗ್ಸಿ ಇಡ್ತೀನಿ ಪಾದಕ್ಕೆ
ಉಸ್ರು ಉಸ್ರಿಗುವೆ ದಂಡ ಕಂಟೊಂಗಾಯ್ತು
ಪರ್ಮಾತ್ಮ ಹುಟ್ಟಿದ್ ಪಾಪಕ್ಕೆ...


                                    - ರತ್ನಸುತ 

ಶರಣಾಗತ

ಕಣ್ಣೀರ ಸರಸಕ್ಕೆ ಅಂಗೈಯ್ಯ ಬೇಡಿಕೆ
ಬಾ ಒಡ್ಡು ಬೊಗಸೆಯನು ಜಾರೋ ಮುನ್ನ
ತೂಕಡಿಸಿ ಹೆಗಲಿಗೆ ಒರಗುವೆ ಬೇಕಂತ
ಮುದ್ದಾದ ಕನಸಂತೆ ಸಲಹು ನನ್ನ

ಪದದೊಟ್ಟಿಗೆ ಎರಡು ನೆನಪನ್ನು ಹದವಾಗಿ
ಬೆರೆಸಿ ಬಿಡು ಉಸಿರಲ್ಲಿ ಹಾಡಾಗಿಸಿ
ಎದೆಯಲ್ಲಿ ಮೂಡಿಸು ಹೆಜ್ಜೆ ಗುರುತೊಂದನು
ನಾ ಬರುವೆ ನಿನ್ನನ್ನು ಹಿಂಬಾಲಿಸಿ

ಎಲ್ಲಕ್ಕೂ ನಿನ್ನಲ್ಲಿ ಉತ್ತರವ ಹುಡುಕುವೆ
ಕೆದಕಿ ಹೋಗು ಇದ್ದ ಪ್ರಶ್ನೆಗಳನು
ಬೆಲ್ಲಕ್ಕೂ ಸಿಹಿಯಾದ ಸಂಗತಿಯ ಸರಕಿದೆ
ಮನಸಿಟ್ಟು ಆಲಿಸು ಮಿಡಿತಗಳನು

ಶರವೊಂದು ಶರಣಾದ ಕಥೆಯಲ್ಲಿ ನಿನ್ನದು
ಕಣ್ಣಲ್ಲೇ ಗುರಿಯಿಟ್ಟ ಮೇರು ಪಾತ್ರ
ನನ್ನಲ್ಲಿ ಹುಟ್ಟಿದ ಗುಟ್ಟೊಂದು ಕಳುವಾಗಿ
ನಿನ್ನಲ್ಲಿ ನೆಲೆಸಿದ್ದು ನೆಪಕೆ ಮಾತ್ರ

ಅಂದಕ್ಕೆ ಸಲ್ಲುವ ನ್ಯಾಯಕ್ಕೆ ನೀನೇನೆ
ಪರವಾನಗಿ ಉಳ್ಳ ನ್ಯಾಯಾಲಯ
ನನ್ನೊಲವ ದೀಪ್ತಿಗೆ ಆಪ್ತವಾಗುವ ನಿನ್ನ
ಮನದ ಅಂಗಳವೇ ದೇವಾಲಯ!!

                                  - ರತ್ನಸುತ 

ಬೆಚ್ಚಿದೆಯೇಕೆ ಬಾಲ ಗೋಪಿ?

ಬೆಚ್ಚಿದೆಯೇಕೆ ಬಾಲ ಗೋಪಿ?
ಕನಸಲ್ಲಿ ಕಚ್ಚಿದನಾ ಗುಮ್ಮ ಪಾಪಿ?
ಕೈ ಚಾಚಿ ಅಪ್ಪುಗೆಗೆ
ಕೊರಳುಬ್ಬಿ ಚೀರೋ ಬಗೆ
ನಿಚ್ಚಲಗೋಳಿಸಿತೈಯ್ಯ ಇರುಳ
ಹೇಳು ಏನು ಮಾಡಿದ ದುರುಳ?


ಹೆಪ್ಪುಗಟ್ಟಿದ ಮುಗಿಲ ಮರೆಯ
ತಿಂಗಳಿಗೆ ಧಾವಿಸುವ ತವಕ
ಜಿಟಿಜಿಟಿಮಳೆ ಬಿಡದೆ ಪಠಿಸುತಿದೆ
ನಿದ್ದೆ ಬಾರದ ರಾತ್ರಿಗಳು ನರಕ
ನಿನ್ನ ತುಟಿಯಂಚಿಗೆ ಅಂಟಿದ ಮುಗುಳು ನಗೆ
ಯಾವ ಸಂಚಿಗೆ ಸಿಕ್ಕಿ ಮರೆಯಾಯಿತು?
ಕಣ್ಣು ತುಂಬಿಕೊಳಲು ಉಸಿರುಗಟ್ಟಿದ ಎದೆಯ
ಹಾಲು ಜಿನುಗಲು ಚೂರು ತಡಬಡಿಸಿತು


ದೀಪದ ಬೆಳಕಿನೆಡೆ ನೋಟ ನೆಡುವೆ
ಅರಳಿಸಿ ಕಣ್ಣುಗಳ ಬಿಕ್ಕಳಿಸುವೆ
ಮುಷ್ಠಿಯಲಿ ಭಯವನ್ನು ಹಿಡಿದಿಟ್ಟೆಯೇಕೆ?
ಪಕ್ಕದಲೇ ಇಹಳಲ್ಲ ನಿನ್ನ ಹಡೆದಾಕೆ
ಹೊದ್ದ ನೆದ್ದೆಯ ತಬ್ಬಿ ಮಲಗು ಕಂದ
ಪದವೊಂದ ಹಾಡುವೆನು ಪ್ರೀತಿಯಿಂದ!!


ನಿನ್ನ ಅಳುವಿನ ಶಾಪ ಗುಮ್ಮನೆಡೆಗೆ
ಜಾರಿಕೊಂಡನು ಮತ್ತೆ ಇರುಳಿನೆಡೆಗೆ
ಹೊಟ್ಟೆ ತುಂಬಿದ ಮೇಲೆ ತೇಗಬೇಕು
ನೆತ್ತಿ ಬೊಟ್ಟು ಗಲ್ಲಕಂಟಬೇಕು
ಜೋಗುಳದ ಜೋಲಿಯನು ಜೀಕುವಾಗ
ನಸುನಗೆಯ ಕಿಸೆಯಿಂದ ಕದ್ದ ತಿರುಳು
ಚೆಲುವಿಗೆ ಮುನ್ನುಡಿಯ ಬೆರೆಯಬೇಕು
ಹೊಂಗನಸಿನ ಚಿಗುರು ಅರಳಬೇಕು!!


                                - ರತ್ನಸುತ 

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...