Monday 29 March 2021

ಸಿಂಗಲ್ ಬ್ಯಾಟರಿ ಹಾಕಲು ತಾನು

ಸಿಂಗಲ್ ಬ್ಯಾಟರಿ ಹಾಕಲು ತಾನು

ತಿಂಗಳುಗಟ್ಟಲೇ ಓಡುವುದು
ಕಷ್ಟ ಪಟ್ಟು ಎಷ್ಟೇ ಓಡಲು
ಗೋಡೆಗೇ ಅಂಟಿ ಕೂರುವುದು

ಮೂರೇ ಮುಳ್ಳಿನ ಅಂತರದಲ್ಲಿ 
ದಿನದ ಲೆಕ್ಕವ ತಿಳಿಸುವುದು
ಹನ್ನೆರಡನ್ನೆರಡರ ಪಾಳಿಯಲಿ
ಹಗಲು ರಾತ್ರಿ ದುಡಿಯುವುದು

ಕೆಟ್ಟರೂ ಅದು ಎರಡೊತ್ತಿನ ವೇಳೆಯ
ಕರಾರುವಾಕ್ಕು ತಿಳಿಸುವುದು
ತಾಸಿಗೆ ಮೂವತ್ತಾರು ನೂರು
ಕ್ಷಣಗಳು ರೋಚಕ ಅನಿಸುವುದು

ಎಲ್ಲಕೂ ಸಾಕ್ಷಿಯಾದರೂ ಅಲ್ಲಿ
ಯಾರ ಪರವೂ ನಿಲ್ಲದದು
ಲೋಕವೇ ಹತ್ತಿ ಉರಿಯುತಲಿದ್ದರೂ
ಕಾಯಕ ಮುಂದುವರಿಸುವುದು

ತಾತನ ಕಾಲದ ಗಡಿಯಾರವದು
ಒಮ್ಮೆಗೆ ನಿದ್ದೆಗೆ ಜಾರುವುದು
ಕೀಲಿ ಕೊಟ್ಟರೆ ಮತ್ತೆ ಚಿಗರೆಯ
ಧಾಟಿಯಲಿ ಚೇತರಿಸುವುದು

ರಿಮೋಟ್ ಚಾಲಿತ ಗೊಂಬೆಗಳೀಚೆಗೆ
ಕಂತು ಬ್ಯಾಟರಿ ನುಂಗುವುದು
ಈಗಲೂ ಸಿಂಗಲ್ ಬ್ಯಾಟರಿಯಲ್ಲೇ
ತೂಗು ಗಡಿಯಾರ ಓಡುವುದು..

ಕದವ ನೀ ತೆರೆ

ಕದವ ನೀ ತೆರೆ

ಮಡಿಲಾಗು ಕನಸಿಗೆ
ಮುದವಾಗಿ ಕರೆ
ಮಗುವಂತೆ ಮನಸಿಗೆ
ನಾ ನಿರೂಪವಾದೆ 
ಕೈಯ್ಯಾರೆ ನನ್ನ, ನೀ ಬಾಚಿಕೊಂಡು 
ಆಕಾರವನ್ನು ನೀಡಬೇಕಿದೆ 
ಆಧಾರವನ್ನು ನೀಡಬೇಕಿದೆ.. 

ಉಸಿರಾಗಿ ಬೆರೆ 
ಹೆಸರಾಗಿ ಬದುಕಿಗೆ 
ಬೆಳಕಾಗಿ ಇರೆ 
ಹೊಸ ದಾರಿ ದೊರತಿದೆ 
ನಾ ನಿರೂಪವಾದೆ 
ಕಣ್ಣಲ್ಲೇ ನನ್ನ, ಚಿತ್ತಾರವನ್ನು 
ನೀ ಗೀಚುವಾಗ ಸೋಲಬೇಕಿದೆ 
ನಾ ನನ್ನಲೇ ಸೋಲಬೇಕಿದೆ... 

ಸುಳಿವಿರದ ಮಳೆ 
ಈ ಹಾಳೆ ನೆನೆದಿದೆ  
ಮೊದಮೊದಲ ಪದ 
ತುಟಿಯಲ್ಲೇ ಕುಳಿತಿದೆ 
ನಾ ನಿರೂಪವಾದೆ 
ನೀ ದೂರ ಎಲ್ಲೋ, ಅಡಗಿದ್ದು ಸಾಕು 
ಅಳಿಯೋಕೂ ಮುನ್ನ ಓದಬೇಕಿದೆ 
ನೀ ಮೌನವನ್ನೂ ಓದಬೇಕಿದೆ 

ಗರಿಗೆದರಿ ಮನ 
ನಶೆಯೇರಿ ಕುಳಿತಿದೆ 
ಎಲೆಯುದುರಿ ಮರ 
ನನ್ನಂತೆ ಅನಿಸಿದೆ 
ನಾ ನಿರೂಪವಾದೆ 
ನೀ ಬಿಟ್ಟು ಹೋದ, ನೆನಪೊಂದೇ ನನ್ನ 
ಆಲಸ್ಯವನ್ನು ದೂರ ಮಾಡಿದೆ 
ಆ ದೃಶ್ಯವಿನ್ನೂ ಕಾಡುವಂತಿದೆ 

ಕತೆ ಮುಗಿವಾಗಲೇ 
ಪುಟವಿನ್ನೂ ಉಳಿದಿದೆ 
ಜೊತೆ ಕೊಡಲಾದರೆ 
ಧರೆಯು ಕಿರಿದಾಗಿದೆ
ನಾ ನಿರೂಪವಾದೆ 
ನೀ ಮೀಟುವಾಗ, ಸಾರಂಗಿಯಾದೆ 
ಒಂದೊಂದೇ ರಾಗ ಹೊಮ್ಮುವಂತಿದೆ
ನಾ ಜೀವಂತವಾದಹಾಗಿದೆ.. 

ಹೋಗುವ ಆ ದೂರಕೆ ದಾರಿಯನ್ನು ಕೂಡುತಾ

ಹೋಗುವ ಆ ದೂರಕೆ ದಾರಿಯನ್ನು ಕೂಡುತಾ 

ಹ್ಮ್ಮ್...  
ಹೋಗುವ ಆ ದೂರಕೆ ದಾರಿಯನ್ನು ಕೂಡುತಾ 
ಆಡದ ಮಾತನು ಆಡದೆ ಸತಾಯಿಸು 
ಸಾಗಿದೆ ಸವಾರಿಯು ಸೇರಲು ದಿಗಂತವ 
ತಾರೆಯ ತಾಕಲು ನನ್ನನು ನಿಭಾಯಿಸು

ಬಯಸದೆ ಬರುವಂತೆ ಕನಸು ನೂರು 
ಅದರಲಿ ಹುಡುಕುವೆನು ನಾ ನಿನ್ನನ್ನು 
ತೊದಲುವ ಹೃದಯದಲಿ ಇಳಿದು‌ ನೋಡು 
ಸವರುತ ಒಲುಮೆಯಲಿ ಹನಿಗಣ್ಣನು

ಆದರೆ ಹೇಗಾದರೂ ಹಾರು ನನ್ನ ಬಾನಿಗೆ 
ಸಂತೆಯ ಆಚೆಗೆ ಸಣ್ಣ ಗೂಡ ನೇಯುವ 
ಹೋಗುವ ಆ ದೂರಕೆ ದಾರಿಯನ್ನು ಕೂಡುತಾ 
ಆಡದ ಮಾತನು ಆಡದೆ ಸತಾಯಿಸು 

ಬರೆಯುತ ಕುಳಿತಾಗ ನಿನ್ನ ಕುರಿತಂತೆ  
ಮರೆಯುವೆ ಜಗವನ್ನೇ ನಾ 
ಕಾಡುವೆ ಹೀಗೇಕೆ ಗಳಿಗೆಯೂ ಬಿಡದಂತೆ
ಆಗಿಸಿ ರೋಮಾಂಚನ 
ಇರಾದೆ ಹೀಗಿರುವಾಗ ಸರಿಹೋಗಲಿ ಹೇಗೆ 
ಹೇಳೆಯಾ, ನೀ ಹೇಳೆಯಾ 
ಸಮಾಚಾರ ಏನೆಂದು ಕೇಳೋಕೆ ನೀ ಬೇಗ 
ಬಾರೆಯಾ, ನೀ ಬಾರೆಯಾ 

ತಂತಿಯಾಗಿ ತಾಳುವೆ, ಮೀಟುವಾಗ ನನ್ನನು 
ಜಾರಲಿ ಸಂಜೆಯು ಇಂದು ನಮ್ಮ ಗುಂಗಲಿ 
ಹೋಗುವ ಆ ದೂರಕೆ ದಾರಿಯನ್ನು ಕೂಡುತಾ 
ಆಡದ ಮಾತನು ಆಡದೆ ಸತಾಯಿಸು 

ಹಾರುವ ಪತಂಗವೇ

ಹಾರುವ ಪತಂಗವೇ 

ನೀ ದೂರ ದೂರವಾಗುವೆ 
ನೂಲಿನ ಈ ಅಂಚಿಗೆ 
ನಾನೊಂದು ಮಾತು ಹೇಳುವೆ

ಸ್ವರ ಸಂಚರಿಸಿ ತಲುಪಲು 
ತಡ ಆಗುವುದು ಸಹಜ 
ಕೆಲವೊಮ್ಮೆ ನಡುವೆ ಎಲ್ಲೋ 
ಕಳುವಾದದ್ದೂ ನಿಜ 

ನಿನ್ನ ಮೈ ಬಣ್ಣ 
ಹಿಂದೆಂದಿಗಿಂತಲೂ ಭಿನ್ನ 
ಆಕಾಶದ ನೀಲಿ 
ಬದಲಾಯಿಸಿತೇ ನಿನ್ನ?

ನನ್ನ ಒಲ್ಲದ ಮನಸು 
ಹಾರು ಎಂದಾಗ 
ಚಂಗನೆ ಜಿಗಿದೆ
ಕ್ಷಣಮಾತ್ರಕೆ ಗಾಳಿಯ ತೆಕ್ಕೆಗೆ 

ನಿನ್ನ ಎದೆಗೊತ್ತಿ ಬರೆದ 
ನನ್ನೆದೆಯ ಗುಟ್ಟುಗಳು 
ಬಾನುಲಿಯಾಗಿ ರಿಂಗಣಿಸುತ್ತಿವೆ 
ಬಯಲು ಮಾಡಿದೆಯಾ ಹೇಗೆ?

ಸೂತ್ರ ಬಿಗಿದವ ನಾನೇ;
ನನ್ನ ಅರಿವಿನ ಪ್ರಕಾರ 
ನೀ ಬಹಳ ದೂರ ಹಾರುವುದು 
ಸೂಕ್ತವಲ್ಲ ಎಂದು ನೂಲು ಜಗ್ಗಿದಾಗ 
ನೀ ಖೋತಾ ಹೊಡೆದೆ
ಆಗ ನಾ ನೂಲನ್ನು 
ಮತ್ತು ನನ್ನ ಹಠವನ್ನೂ
ಬಿಟ್ಟುಕೊಡದೆ ದಾರಿಯಿರಲಿಲ್ಲ 

ನೀ ನಲಿವಿನ ಸಂಕೇತ 
ಲೋಕಕ್ಕೆ 
ನನ್ನ ಗತಿ..
ಬೇನೆಯ ವಿಚಾರಿಸುವವರಾರು?

ಬಿಡಿ ಬಿಡಿಯಿದ್ದಾಗ ರದ್ದಿ 
ನಾ ಮುದ್ದಿಸಿ ಜೋಡಿಸಿದ್ದೆ
ಈಗ ಎತ್ತರದಲ್ಲುಳಿದು
ನನ್ನ ಎಕಶ್ಚಿತ್ತಾಗಿಸದಿರು 

ಸಾಕು ಮುಗಿಲ ಮೋಹ 
ಮರಳಿ ಬಾ ಅವನಿಗೆ 
ಮಧುರಾಮೃತ ಉಣಿಸೆ 
ಕಾದು ಹಸಿದವನಿಗೆ 

ನಾ ಮಾಲೀಕನೆಂಬ
ಅಹಂಕಾರದ ಕಾರಣಕ್ಕೆ
ಇನ್ನೂ ನೆಲಕ್ಕೇ ಅಂಟಿರುವೆ;
ನೀ ಕಾಗದದ ತುಂಡಾಗಿಯೂ
ಬಾಂದಳ ಮುಟ್ಟಿ
ನೂಲು ಬಿಡಿಸಿಕೊಂಡು‌ ನಕ್ಷತ್ರವಾಗಿರುವೆ...

ತಾ ಕಣ್ಮುಚ್ಚುವುದನ್ನೇ

ತಾ ಕಣ್ಮುಚ್ಚುವುದನ್ನೇ

ನಿಬ್ಬೆರಗಾಗಿ ನೋಡುವ ನೆಲ

ತಾ ಕಣ್ದೆರೆಯುವ ವೇಳೆ
ಮೈ ನವಿರೇಳಲ್ಪಡುವ ನೆಲ
ಕಣ್ಣುಗಳ ಸಾಕ್ಷಿಗೆ ಬಿಟ್ಟು
ಬಣ್ಣಗಳ ನಕ್ಷೆಯನಿಟ್ಟು
ನೀಗಿಸಿತು ಜಗದ ತುಮುಲ
ಕಿರಣ ಸೇತು ಕೂಡುಸಿತು
ನೆಲ ಮತ್ತು ಮುಗಿಲ...

ಬಾ ಹೋಗೋಣ

ಬಾ ಹೋಗೋಣ

ಈ ಕಿರಿದಾದ ರಸ್ತೆಯ
ಕಣ್ಮುಚ್ಚಿ ದಾಟಿ ನೋಡುವ
ನೀ ಸುಮ್ಮನೆ ಬೆರಳ ಹಿಡಿ

ಬಾ ಹೋಗೋಣ
ಮಳೆ ನೀರ ಝರಿಯಲ್ಲಿ
ದೋಣಿಯ ಮಾಡಿ ಬಿಡುವ
ಇದೋ ಬಣ್ಣದ ಹಾಳೆಯ ಹಿಡಿ

ಈ ತಂಪು ಗಾಳಿಯ ಹಾವಳಿ
ಈ ಇಂಪು ನೀಡುವ ಹಾಡಲಿ
ರೋಮಾಂಚಕ ಸಾಲೊಂದಿದೆ 
ಆಲಿಸಿ ಹೋಗುವ ತಡಿ 

ಬಾ ಹೋಗೋಣ
ಆ ತಿರುವಲ್ಲಿ ಜೊತೆಯಾಗಿ
ಹೂಬಳ್ಳಿ ನೆಟ್ಟು ಬರುವ
ನಗೋ‌ ಹೂವಿಗೆ ನಾವೇ ಕನ್ನಡಿ

ಬಾ ಹೋಗೋಣ
ಕತೆಯೊಂದ ನುಡಿವಂತೆ
ಕಡಲನ್ನು ಕೇಳಿಕೊಳ್ಳುವ
ಅಲೆ‌‌ ಬರೆಯಲಿ ಮುನ್ನುಡಿ


ಹೇಳೋದು ಬಾಕಿ ಏನಿದೆ?
ಕಣ್ಣಲ್ಲೇ ಎಲ್ಲ ಹೇಳಿದಾಗ 
ಕೈಯ್ಯಲ್ಲಿ ಕೈಯ್ಯಿಟ್ಟು ನೋಡು 
ದೂರ ಎಂಬುದೆಲ್ಲವೂ 
ಮೂರೇ ಗೇಣಿನಲ್ಲಿ ನಮ್ಮದಾಯಿತೀಗ 
ಆಲಸ್ಯ ಮಾಡಲೇತಕೆ?
ಕನಸು ಒಂದೇ ಆಗುವಾಗ 
ಜರುಗಿ ಬಿಡಲಿ ಬೇಗ 
ಸಮಯವಿನ್ನೂ ಮುಂದಿದೆ 
ಈ ಮಾತು ಮೌನವೆಲ್ಲ ಕೂಡಿ ಸಾಗುವಾಗ 

ಈ ಸವಾಲು ಜವಾಬಿನಾಟಿಕೆ 
ಈ ಸವಾರಿ ಆಡಿಸೋ ಆಟಕೆ 
ನಿನ್ನೊಂದಿಗೆ ಸೇರಾಗಿದೆ
ನಾನಾಗೇ ಸೋಲುವೆ ತಡಿ 
ಆಹಾ ಹಾ.. 


ಬಾ ಹೋಗೋಣ
ಈ ಚಿಟ್ಟೆಗೆ ಬೇಕಾದ 
ಹೂದೋಟ ಮಾಡಿ ಬರುವ 
ನೀ ಜಾರದೆ ಮೆಲ್ಲಗೆ ನಡಿ 

ಬಾ ಹೋಗೋಣ 
ಈ ಇರುಳೆಂಬ ಬೆಳಕಲ್ಲಿ 
ಕಣ್ಣಾ-ಮುಚ್ಚಾಲೆ ಆಡುವ 
ನಾ ಎಲ್ಲೆಂದು ಕಂಡು ಹಿಡಿ

ಈ ತಂಪು ಗಾಳಿಯ ಹಾವಳಿ
ಈ ಇಂಪು ನೀಡುವ ಹಾಡಲಿ
ರೋಮಾಂಚಕ ಸಾಲೊಂದಿದೆ 
ಆಲಿಸಿ ಹೋಗುವ ತಡಿ 

ಅಂಬರದ ತುಂಬ ನಿನ್ನ ಹೆಜ್ಜೆ ಗುರುತು ಸಂಜೆ ಮೂಡಿದಂತೆ (Revised)

 *ಪಲ್ಲವಿ*

ಅಂಬರದ ತುಂಬ ನಿನ್ನ ಹೆಜ್ಜೆ ಗುರುತು ಸಂಜೆ ಮೂಡಿದಂತೆ
ಕಿಟಕಿಯ ಗಾಜಿನಲ್ಲಿ ನಿನ್ನ ಹೆಸರ ಹನಿಯು ಗೀಚಿದಂತೆ 
ನಿಧಾನಿಸದೆ ಆsss, ಕಾಣಿಸು ಬೇಗ
ಮಿಡಿಯುತಿದೆ ನನ್ನ ಹೃದಯ
ಇನ್ನೊಮ್ಮೆ ಕೇಳಿ ಮೊರೆಯ
ನೀ ನಿಜವೆಂದು ಹೇಳಿ ಮರೆಯಾಗು ಓ..
ಅಂಬರದ ತುಂಬ ನಿನ್ನ ಹೆಜ್ಜೆ ಗುರುತು ಸಂಜೆ ಮೂಡಿದಂತೆ

ಕಿಟಕಿಯ ಗಾಜಿನಲ್ಲಿ ನಿನ್ನ ಹೆಸರ ಹನಿಯು ಗೀಚಿದಂತೆ 

*ಚರಣ ೧*

ಮರಳ ಮೇಲೆ ಪ್ರಣಯದ ಬರಹ, ಅಲೆಯೊಳು ಕೂಡುತಿವೆ 
ಹುದುಗಿದ ಭಾವಗಳ ಚಿಪ್ಪಲಿ ತುಂಬಿ ನಿನ್ನನು ಸೇರುತುವೆ 
ಓ..  ಮರಳ ಮೇಲೆ ಪ್ರಣಯದ ಬರಹ, ಅಲೆಯೊಳು ಕೂಡುತಿವೆ   
ಹುದುಗಿದ ಭಾವಗಳ ಚಿಪ್ಪಲಿ ತುಂಬಿ ನಿನ್ನನು ಸೇರುತಿವೆ 
ಎದುರಾದರೆ ನೀ, ಹಗುರಾಗುವೆನು
ಸ್ವರ ಸಂಚಯಕೆ ಜೊತೆಯಾಗುವೆನು
ಹೇಗಾದರೂ ಈ ಕನಸ ನನಸಾಗಿಸೆಯಾ? (೨)
ಮಿಡಿಯುತಿದೆ ನನ್ನ ಹೃದಯ
ಇನ್ನೊಮ್ಮೆ ಕೇಳಿ ಮೊರೆಯ
ನೀ ನಿಜವೆಂದು ಹೇಳಿ ಮರೆಯಾಗು ಓ..


ಅಂಬರದ ತುಂಬ ನಿನ್ನ ಹೆಜ್ಜೆ ಗುರುತು ಸಂಜೆ ಮೂಡಿದಂತೆ
ಕಿಟಕಿಯ ಗಾಜಿನಲ್ಲಿ ನಿನ್ನ ಹೆಸರ ಹನಿಯು ಗೀಚಿದಂತೆ  

*ಚರಣ ೨*

ಮುಗಿಯದ ಮಾತೆಲ್ಲ ಕಣ್ಣಲಿ ಜಿನುಗಿ ಖುಷಿಯಲಿ ಜಾರುತಿವೆ 

ಮರಳಿ, ಮರಳಿ ಹರಿದು ಬರೆದ ಕವಿತೆಗಳು ನಿನ್ನವೇ 

ಓ... ಮುಗಿಯದ ಮಾತೆಲ್ಲ ಕಣ್ಣಲಿ ಜಿನುಗಿ ಖುಷಿಯಲಿ ಜಾರುತಿವೆ 

ಮರಳಿ, ಮರಳಿ ಹರಿದು ಬರೆದ ಕವಿತೆಗಳು ನಿನ್ನವೇ 

ಎದುರಾದರೆ ನೀ, ಹಗುರಾಗುವೆನು

ಸ್ವರ ಸಂಚಯಕೆ ಜೊತೆಯಾಗುವೆನು
ಹೇಗಾದರೂ ಈ ಕನಸ ನನಸಾಗಿಸೆಯಾ? (೨)  
ಮಿಡಿಯುತಿದೆ ನನ್ನ ಹೃದಯ
ನೀನೊಮ್ಮೆ ಕೇಳಿ ಮೊರೆಯ
ನೀ ನಿಜವೆಂದು ಹೇಳಿ ಮರೆಯಾಗು ಓ..

ಅಂಬರದ ತುಂಬ ನಿನ್ನ ಹೆಜ್ಜೆ ಗುರುತು ಸಂಜೆ ಮೂಡಿದಂತೆ

ಕಿಟಕಿಯ ಗಾಜಿನಲ್ಲಿ ನಿನ್ನ ಹೆಸರ ಹನಿಯು ಗೀಚಿದಂತೆ(೨) 

ಕಿಟಕಿ‌ ಗಾಜಿನ ಆಚೆ, ಜಗವ ಕಾಣುವ ಬೆಕ್ಕೇ

ಕಿಟಕಿ‌ ಗಾಜಿನ ಆಚೆ 

ಜಗವ ಕಾಣುವ ಬೆಕ್ಕೇ
ನಿನ್ನ ಕಣ್ಣಿನ ಹಸಿವು
ನೀಗಲಿಷ್ಟೇ ಸಾಕೇ?

ಕಣ್ಣನು ಬಿಟ್ಟೇ ನೀನು
ಬಟ್ಟಲ ಹಾಲ ಕುಡಿದೆ
ಮತ್ತೆ ಏತಕೆ ಹಾಗೆ
ಲೋಕ ರೂಢಿಯ ಗಾದೆ?

ನಿಲ್ಲದೇ ಆಗಿನಿಂದ
ಕೊನೆಯಿರದ ಆಕಳಿಕೆ
ಶಕುನ ನೋಡಿ ಸತ್ತರೂ
ದೂರು ನಿನ್ನ ಬೆನ್ನಿಗೇ?

ಪ್ರೀತಿ ಹೆಚ್ಚಿದಾಗಲೇ
ಪರಚು ಗಾಯ ಮಾಡುವೆ
ನಿನ್ನ ನೆರಳೇ ಆದರೂ
ಕಂಡು ಬೆಚ್ಚಿ‌ ಬೀಳುವೆ

ತಲೆಯ ಸವರಿದವರಿಗೆ
ಸ್ವಂತವಾಗಿಹೋಗುವೆ
ಹೆಣ್ಣೇ‌ ಆದರೂ ನೀನು
ಮೀಸೆ ಹೊತ್ತೆ ಮೆರೆಯುವೆ

ಅಟ್ಟದಲ್ಲಿ ಅಟ್ಟಿದರೂ 
ಗುಡಾಣ ಬುಡಕೆ ಕಟ್ಟಿದರೂ
ಕರುಣೆಯನ್ನು ಕಟ್ಟಿಡು
ಸಿಗಲು ಗಣಪ ವಾಹನ

ಬೀದಿಯಲ್ಲಿ ರಾರಾಜಿಸಿ
ಬೈಗಳು ತಿನ್ನುವೆಯೋ
ಅಥವ ರಾಜನರಮನೆಯ
ಆಳಾಗಿ ಬದುಕುವೆಯೋ?

ಬೆಕ್ಕೇ ನೀ ಎಲ್ಲದಕ್ಕೂ
ಮಿಯಾವ್ ಮಿಯಾವ್ ಎನ್ನುವೆ
ಕೊರಳ ಗಂಟೆಯಿಂದ ನೀ
ಎಂದು ಬಚಾವಾಗುವೆ?

ಮುಗಿಲಾಚೆ ಚಂದಿರ

ಮುಗಿಲಾಚೆ ಚಂದಿರ

ಮೊಗದಲ್ಲಿ ಕಾತರ 
ಬೊಗಸೆಯ ನೀರಲಿ
ಹಿಡಿದಷ್ಟೇ ಸುಂದರ
ಬಲೆಯಲ್ಲಿ ಸಿಲುಕುತ
ಅಲೆಯನ್ನೂ ಕೆಣಕುತ 
ಎದೆಗಡಲ ಸೇರುವಾತ

ನಲಿದಂತೆ ಉಯ್ಯಾಲೆಯು
ತೂಗಿರಲು ಮನದೊಳಗೆ
ಅರಳುತ್ತ ಕಣ್ಣಾಲಿಯು 
ತುಂಬುತಿವೆ ಖುಷಿಗಳಿಗೆ
ಇದುವರೆಗಿನ ಪರಿಚಯಕೂ
ಸನಿಹವಿರೋ ಅಪರಿಚಿತ ನೀ
ಹದಿಹರೆಯನು ನಾಚಿಸುವ 
ಕಿರುನಗೆಯ ಮೋಹಿತ ನೀ
ಪದವಿರದೆ ಉಳಿದಿರುವೆ
ಬರೆಯಲು ಇದು ಸಕಾಲವಾದರೂ

ನದಿ ತಪ್ಪಲ ಏಕಾಂತವ 
ನೀಗಿಸುವ ನೂಪುರವ
ಇದೋ‌ ಕಟ್ಟುವೆ ನೀ ಹಾಕುವ 
ತಾಳಕೆ ನಾ ಕುಣಿಯುತಲಿ
ಲಯ ಕಲಿಸಿದೆ ಹೃದಯಕೆ‌ ನೀ
ಒಲವುಣಿಸಿ ಪ್ರತಿ ಸಲವೂ  
ಭಯದಲ್ಲೂ ಸುಖ ತರುವ 
ಒಲವೆನುವ ವಿಸ್ಮಯವು
ಒಳಗೊಳಗೇ ಸೆಳೆತವಿದೆ
ಒಳಗಣ್ಣಿಗೆ ನೀ ಕಂಡ ಮರುಕ್ಷಣ

ಹೇ ಕಾಡೋ ಹುಡುಗಿ

ಹೇ ಕಾಡೋ ಹುಡುಗಿ 

ಮಾತಾಡಿಸು ಒಮ್ಮೆ
ನಿನಗಾಗಿ ಕಾದು ಅಲೆದಿರುವೆ
ನಿನ್ನ ಹಿಂದೆ
ಮತ್ತೇನೂ ತೋಚದೆ ಹೋದಂತೆ
ಇನ್ನು ಮುಂದೆ 

ಕಣ್ಣಿನ ಬಲೆಯಲಿ ಸಿಲುಕಿರುವೆ
ಮನದನ್ನೆಯೇ ನಿನ್ನನೇ ಜಪಿಸಿರುವೆ
ನಿನಗಾಗಿ ಕಾಯುವೆ ನಾ
Common baby
Don't do this baby
ಒಲವಾದ ಕಾರಣಕೆ
ಬದಲಾಗಿ ಹೋದೆನು ನಾ

ಬಿಡದೆ ಹಠ ಹಿಡಿದು
ಬರೆವೆ ಪುಟ ಹರಿದು
ಹೊಸೆದ ಸಾಲಲ್ಲಿ ನಿನ್ನನ್ನು ಕಾಣುತ್ತ
ಮನಸು ಹಿಗ್ಗೋದು ಹೀಗೇತಕೆ 

ನೋಡು ಹೆಚ್ಚಿ ಹೋಗಿದೆ ಹುಚ್ಚು
ಒಮ್ಮೆ ನಿನ್ನ ಕೈಯ್ಯನು ಚಾಚು
ಕಣ್ಣ ತೆರೆಸುತ‌, ಸಣ್ಣದಾಗಿ ನೀ
ನಕ್ಕು ಎದುರಲಿ‌ ನಿಲ್ಲು
ಮತ್ತೆ ಮತ್ತೆ ಕಾಡುವೆ‌ ಏಕೆ
ಪ್ರೇಮಿ ಒದ್ದಾಡಲೇ‌ ಬೇಕೇ
ನೀ ಎತ್ತ ಹೋದರೂ ಅತ್ತ ವಾಲುವ
ಜೀವಕೊಂದು ಸಂಗಾತಿ ಬೇಕು

ಹೇ ಕಾಡೋ ಹುಡುಗಿ 
ಮಾತಾಡಿಸು ಒಮ್ಮೆ
ನಿನಗಾಗಿ ಕಾದು ಅಲೆದಿರುವೆ
ನಿನ್ನ ಹಿಂದೆ
ನನಗೇಗೂ ತೋಚದೆ ಹೋಗುತಿದೆ
ಇನ್ನು ಮುಂದೆ 

Never do this to me
Don't ever do this to me
Baby…ye yeah..
ನಿನ್ನನು ನೆನೆಯುತ ಲೋಕವ ನಾ ‌ಮರೆವೆ
ನಿಂತಲ್ಲೇ ಕರಗುತ ನಿನ್ನಲ್ಲಿ ನಾ ಬೆರೆವೆ (೨)


ಮುಗಿದ ಕವಿತೆಗಳ
ನಿನಗೆ ತಲುಪಿಸುವೆ
ಹೃದಯ ಬಿಚ್ಚಿಟ್ಟು ಗೀಚಿಟ್ಟ ಹಾಡನ್ನು
ಎದೆಗೆ‌ ತುಂಬುತ್ತ ಹಾಡಾಗಿಸು

ಸನ್ನೆ ಮಾಡಿ ಒಪಿಗೆ ನೀಡು
ಸಾಕು ಇನ್ನು ಪ್ರೇಮಿಗೀ ಪಾಡು
ಈ ಸ್ವಚ್ಛ ಮನಸಿನ ಒಳ್ಳೆ ಹುಡುಗನ
ಒಪ್ಪಿ ಪ್ರೀತಿಯ ಮಾಡು
ನಿನ್ನ ಬಿಟ್ಟು ಬಾಳನು ಈತ
ನಿನ್ನ ಮಾತೇ ಇಂಪು ಸಂಗೀತ
ಬೆಳಕಾಗು ಕತ್ತಲ ನೀಗಿಸುತ್ತಲಿ
ಬಣ್ಣ ಚಿಮ್ಮೋ ಕಾರಂಜಿಯಾಗಿ..

ಇದೋ ಕೇಳು‌ ಸಿಹಿಯಾದ ವಿಶಯ

ಇದೋ ಕೇಳು‌ ಸಿಹಿಯಾದ ವಿಶಯ

ತರುವಾಯ ಬರದಿಂಥ ಸಮಯ
ಬಾ ಪ್ರೀತಿಯಲ್ಲಿ, ಬೀಳೋಣ ಹಾಗೇ 
ಸುಳಿವಿಲ್ಲದೇನೆ ಸೋಲುವಂತೆ 

ಇದೋ ಕೇಳು‌ ನವಿರಾದ ವಿಶಯ
ತುದಿಗಾಲ ಹಿಡಿದಂತೆ ಹೃದಯ
ಬಾ ಪ್ರೀತಿಯಲ್ಲಿ, ಬೀಳೋಣ ಹಾಗೇ 
ಸುಳಿವಿಲ್ಲದೇನೆ ಸೋಲುವಂತೆ .. ಸೋಲುವಂತೆ .. ಸೋಲುವಂತೆ

ಈ ಕಣ್ಣಿಗೆ ನೀನಲ್ಲದೆ ಬೇರೇನನೂ ನೀಡಲಾರೆ
ಆಕರ್ಷಣೆ ನಿನ್ನತ್ತಲೇ ಆಲಸ್ಯವ ಮಾಡಲಾರೆ
ಭೇಟಿಯಾದಲ್ಲೇ ಲೂಟಿಯಾಗೋದೆ ನಾನು ನಾನಾಗಿ ಇಲ್ಲದಾದೆ

ಇದೋ ಕೇಳು‌ ಸಿಹಿಯಾದ ವಿಶಯ
ತರುವಾಯ ಬರದಿಂಥ ಸಮಯ
ಬಾ ಪ್ರೀತಿಯಲ್ಲಿ, ಬೀಳೋಣ ಹಾಗೇ 
ಸುಳಿವಿಲ್ಲದೇನೆ ಸೋಲುವಂತೆ 

ಈಗಾಗಲೇ ಸಿಕ್ಕಾಗಿದೆ ಏಕಾಂತಕೆ‌ ಅಂತ್ಯವೊಂದು
ಬೇಕಂತಲೇ‌ ನಕ್ಕಂತಿದೆ ಈ ಕನ್ನಡಿ ಯಾಕೋ‌ ಇಂದು
ಬೇಡಿ ಪಡೆದಂತೆ, ದಕ್ಕಿದ ನಿನ್ನ, ಬಿಟ್ಟು ಕೊಡಲಾರೆ ಎಂದಿಗೂ

ಇಗೋ ಕೇಳು‌  ಸಿಹಿಯಾದ ವಿಶಯ
ತರುವಾಯ ಬರದಿಂಥ ಸಮಯ
ಬಾ ಪ್ರೀತಿಯಲ್ಲಿ, ಬೀಳೋಣ ಹಾಗೇ 
ಸುಳಿವಿಲ್ಲದೇನೆ ಸೋಲುವಂತೆ  

ರೂಪಕೆ ನೀನಾದೆ ಆಸರೆ ಓ ನನ್ನ ರೂಪಸಿ

ರೂಪಕೆ ನೀನಾದೆ ಆಸರೆ ಓ ನನ್ನ ರೂಪಸಿ 

ಕಣ್ಣಲಿ ಕಣ್ಣಿಟ್ಟು ನೋಡು ಬಾ ನೀ ನನ್ನ ರೂಪಿಸಿ 
ಏಕವಾದಹಾಗಿದೆ ನಮ್ಮ ದಾರಿಯು 
ಮೂಕವಾಗಿ ನಿಂತಿದೆ ಬೀಸೋ ಗಾಳಿಯು..  ಓಹೋ 
ರೂಪಕೆ ನೀನಾದೆ ಆಸರೆ ಓ ನನ್ನ ರೂಪಸಿ 
ಕಣ್ಣಲಿ ಕಣ್ಣಿಟ್ಟು ನೋಡು ಬಾ ನೀ ನನ್ನ ರೂಪಿಸಿ 

ನಿಂತಲ್ಲೆ ಸಾಗಿದಂತೆ ವಿರಾಮ ನೀಡದಂತೆ 
ಮಾಯೆಯಂತೆ ಈ ಪ್ರೇಮ ಪ್ರಯಾಣ 
ಆರಂಭದಲ್ಲೇ ಹೀಗೆ ವಿಚಾರ ಮಾಡುತಿರುವೆ 
ಮುಂದೆ ಹೇಗೋ ವಿನೋದ ವಿಧಾನ
ಕಾಲು ಜಾರಿ ಬಿದ್ದೂ ಕೂಡ ಒದ್ದಾಟದಲ್ಲೂ ಎಲ್ಲ ಹಾಯಾಗಿದೆ
ಹೇಳಿ ಕೇಳಿ ಮೂಡಲಿಲ್ಲ ಈ ನನ್ನ ಮನಸು ಈಗ ಮಾತು ಕೇಳದೇ
ಹೃದಯವೀಗ ತಾನೇ ಗರಿಗೆದರಿದಂತೆ ನೋಡು
ಹಾರಿ ಬಂದು‌ ನಿನ್ನ ಸೇರಿದೆ

ಸಾಗರಿ ನಿನ್ನನ್ನು ಸೇರಲೇ ನಾ ಅಲೆಯ ಜೊತೆಯಲಿ
ಹೂಗರಿ ಮೈಯ್ಯನ್ನು ಸೋಕುವೆ ನಾ ತುಂಬು ಜೇನಲಿ 
ದುಂಬಿಯಾಗಿ ಸುತ್ತುವೆ ನಿನ್ನ ಸುತ್ತಲೇ 
ಮಾತನಾಡು ತೇಲುವೆ ಆಲಿಸುತ್ತಲೇ 

ಉಸಿರಲಿ ಉಸಿರನು ಬೆಸೆಯುತ

ಉಸಿರಲಿ ಉಸಿರನು ಬೆಸೆಯುತ

ಬದುಕಿಸು ಬಾ ನನ್ನನು
ಬೆಳಗಿಸು ಈ ಬಾಳನು
ಕತ್ತಲ ನೀಗಿಸು ನಲ್ಲನೇ ನೀ ಬೇಗ

ಹತ್ತಿರವಾದನು ಚಂದಿರ
ಮಾಡಿಕೋ ಬೇಗನೆ ಸಿಂಗಾರ
ತಕಧಿಮಿ ತಾಳವ ಹಾಕಿದಿ ನೋಡು
ಕಣ್ಣುಗಳು ಪಳ ಪಳ ಮಿಂಚಲಿ ಮಿಂದಿವೆ ನೋಡು ಹೋಯ್
ಸಣ್ಣ ನಗುವಲ್ಲಿ, ಹಿತ ನುಡಿಯಲ್ಲಿ
ಬರಸೆಳೆ ಪ್ರಿಯಕರನ..

ಏಕವಾಗಿ‌ ಜೀವವು, ಹಾಡುವಾಗ ಸಾರ್ಥಕ (೨)
ಹೇಳಬೇಕು ಎಲ್ಲವ, ಸಣ್ಣ ನಗೆಯ ಮೂಲಕ
ಹಾಗೆ ಬಳಸಿ ಬಿಡಿಸಿಕೊಳುತ
ಏರು ಉಸಿರ ಸವಿಯುವ
ಮತ್ತೇರಿಸೋ ಮುತ್ತಿಡುತ 
ನಾಚಿಕೆಯ ದಯಪಾಲಿಸು..

ಕೇಳೇ ಸುಂದರಿಯೇ, ಹಾಡೇ ಕಿನ್ನರಿಯೇ 
ತೊಟ್ಟ ಬಳೆಯಲಿ, ಕೈಯ ಕುಲುಕುತ 
ಸಪ್ತ ಸ್ವರಗಳ, ಹೋಲೋ ಥರದಲಿ, ಸದ್ದು ಮಾಡುತ,  ಸಾರೋ ನರ್ತಕಿಯೇ 
ಸಾಲುಗಟ್ಟಿ ನಿಂತ ಕಾಮನ ಬಿಲ್ಲ ಕನ್ನಡಿಯೇ 
ಸಪ್ತ ಸ್ವರಗಳ, ಹೋಲೋ ಥರದಲಿ, ಸದ್ದು ಮಾಡುತ,  ಸಾರೋ ನರ್ತಕಿಯೇ 
ಸಾಲುಗಟ್ಟಿ ನಿಂತ ಕಾಮನ ಬಿಲ್ಲ ಕನ್ನಡಿಯೇ 
ಸಣ್ಣ ನಗುವಲ್ಲಿ, ಹಿತ ನುಡಿಯಲ್ಲಿ
ಬರಸೆಳೆ ಪ್ರಿಯಕರನ..

ಹೇಗೆ ಬರೆವೆ ಮುನ್ನುಡಿ, ಕಲಿತೇ ಇಲ್ಲ ಅಕ್ಷರ
ಕೈಯ್ಯ ಹಿಡಿದು‌ ತಿದ್ದಿಸು, ನೀನೇ ಮನದಿ ಉತ್ತರ
ಜಾರುವಾಗ ಬೆವರ ಸಾಲು
ದೂರವಿರಲು ಸಾಧ್ಯವೇ
ಕನ್ನಡಿಯ ಹಿಡಿದರೆ
ಬಿಂಬದಲೂ ನೀ ಕಾಣುವೆ..

ಚುಕ್ಕಿ ಎಣಿಸಿ ಕೊಡುವಲ್ಲಿ

ಚುಕ್ಕಿ ಎಣಿಸಿ ಕೊಡುವಲ್ಲಿ

ಪರಿಣಿತಿ ಹೊಂದಿಹೆ ನಾನು
ಅನೂಹ್ಯವಾದ ಅನುಬಂಧ
ಹೊಂದಿದೆ ನನ್ನೊಡನೆ ಬಾನು

ಎಷ್ಟೋ ರಾತ್ರಿಗಳ ಕಳೆದೆ
ಕಣ್ಣು ತೆರೆದೇ ಕನವರಿಸಿ
ಬಿಟ್ಟು ಬಂದೆ ಮಹಡಿಯಲಿ
ಹಾಸಿದ ಚಾಪೆಯ‌ ಸಂತೈಸಿ

ಎಣಿಕೆ ಇನ್ನೂ ಮುಗಿದಿಲ್ಲ
ಕಂತುಗಳಲ್ಲಿ‌ ಸಾಗಿರಲು
ಎಲ್ಲೋ‌ ಇಟ್ಟ ಕೊನೆ ನಾಳೆ
ಮತ್ತೆಲ್ಲೋ‌ ಮರುಕಳಿಸಿರಲು

ಗೊತ್ತು ಹುಂಬನೇ ನಾನೆಂದು
ಆದರೂ ಮುಂದುವರಿಸಿರುವೆ
ಪ್ರಾಮಾಣಿಕ ಲೆಕ್ಕವನಿಟ್ಟೂ
ಸೋಲಿನ ವರದಿ ಸಲ್ಲಿಸುವೆ

"ಹೆಚ್ಚುತಲೇ ಇವೆ ಚುಕ್ಕಿಗಳು"
ಹುಚ್ಚನ ಸೊಲ್ಲು ಹುಚ್ಚರಿಗೆ
ಆಗಾಗ ಮರೆಯಾದವು ಮಿಂಚಿ
ಕೆಲವೊಂದು ಬರೆ ಮೆಚ್ಚುಗೆಗೆ

ಇಲ್ಲಿದ್ದವರು ತಲುಪುವ ತಾಣ
ಅಲ್ಲೇ ಕ್ಷೇಮ ತಾರಾಗಣ
ಚಿತ್ತಾರಗಳೆಷ್ಟೋ ಮೂಡುವವು
ಕಲಾವಂತಿಕೆಯ ಆವರಣ 

ಇಷ್ಟೇ ಎಂದು ಒಪ್ಪಿಸಿದವರು
ತಮ್ಮನ್ನೂ ಸಹ ಒಳಗೊಂಡು
ಕೋಟೆ-ಕೊತ್ತಲ ದಾಟಿ ಕೋಟಿ-
-ಗಟ್ಟಲೆ ಮಿನುಗಲಿ ನಾವೊಂದು

ಬಾ ಕವಿತೆಯೊಳಗೆ, ಜೊತೆಯ ಕೊಡುಲು

ಬಾ ಕವಿತೆಯೊಳಗೆ, ಜೊತೆಯ ಕೊಡುಲು

ಹೃದಯದೊಳಗೆ, ಹೃದಯವಿಡಲು
ಸನಿಹವಿರುವೆ ಅನಿಸುತಿರಲು
ಬಳಸುವೆ ಪ್ರೀತಿಯಿಂದ
ಬಾ ಕನಸುಗಳಿಗೆ, ಬೆಳಕ ಕೊಡಲು
ಅಧರ ಬಳಿಗೆ, ಅಧರ ತರಲ
ಉಸಿರ‌ ಬಿಸಿಯು ಹೊಸೆಯುತಿರಲು 
ಕರಗುವೆ ಆಸೆಯಿಂದ

ಈ ಕೊರೆವ ಸಮಯ ಸರಿದು ಬಿಡಲಿ 
ಮಧುರ ಕ್ಷಣವು ಒಲಿದು ಬರಲಿ 
ಸಕಲ ಸುಖವು ನಮದೇ ಎನುವ 
ಬಯಕೆಯ ಬೇಲಿ ದಾಟಿ 
ಈ ಮನದ ಕೊಳದಿ ಉದುರಿ ಎಲೆಯು 
ಅಲೆಯ ಘಮಲು ಪಸರುತಿರಲು 
ನುಡಿವ ಗೆಜ್ಜೆ ಕಟ್ಟಿ ಕುಣಿದು 
ಮಾಡಿಸು ನಿನ್ನ ಭೇಟಿ

ಝೇಂಕರಿಸೋ ನಾದ ನಿನ್ನ ಬನದಿ 
ತುಂಬಿಕೊಂಡ ಕಣ್ಣೇ ಶರಧಿ 
ಸೋಲನುಂಡು ನಿಲ್ಲೋ ಸರದಿ 
ಅಂಗಳದ ಹೂವಿಗೆಲ್ಲ 
ಬಾಂದಳದಿ ಬಿರಿದ ಮುಗಿಲ ಕಮಲ  
ಅರಿತ ಹಾಗೆ ನೆಲದ ತುಮುಲ 
ಇಳಿದು ತಣಿಸಿ ಇಳೆಯ ಒಡಲ 
ಹಸನಾಯ್ತು ಭೂಮಿಯೆಲ್ಲ 

ನಾ ಹಿಡಿದು ಬರಲೇ ಬೆರಗು ಬೆರಳ 
ನೇರ ನಡೆದು ಕೂಡಿ ನೆರಳ 
ಸವೆದು ದಾರಿ ಗುರುತು ಸಿಗದೆ
ಮರೆಯುವೆ ನನ್ನ ಬೇರ
ಈ ಹರಿದ ಝರಿಯ‌ ಕುರುಡು ಮೀನು
ಹರಿವ ಅರಿವ ಪಡೆದ ನಾನು
ಸೇರಲೆಂದೇ ಬರುವೆ ನಿನ್ನ
ನೀ ನಡೆಸುವ ಪ್ರಕಾರ

ನೀನು ನಾನು ಸೇರಿ, ಕಡಲ ತೀರದಲ್ಲಿ

ನೀನು ನಾನು ಸೇರಿ 

ಕಡಲ ತೀರದಲ್ಲಿ 
ಮರಳ ಗೂಡು ಕಟ್ಟಿಕೊಳ್ಳೋಣವೇ 
ಕುದ್ದು ಮುಚ್ಚಿ ನಾವು 
ಪ್ರೀತಿ ಮಾಡೋಕಂತ 
ಮರದ ಬೆನ್ನ ಹಿಂದೆ ಸೇರೋಣವೇ 
ಹೊತ್ತು ಮೀರಿದಾಗ 
ಇನ್ನೂ ಸ್ವಲ್ಪ ಹೊತ್ತು 
ಮತ್ತೂ ಹತ್ತಿರಕ್ಕೆ ಕೂರೋಣವೇ 
ಮಾತು ತಪ್ಪಿದಾಗ 
ಕೋಪ ಹೆಚ್ಚಿದಾಗ 
ಸಣ್ಣ ಜಗಳ ಆಡಿ ಸೋಲೊಣವೇ.. 

ಒಂದೇ ಒಂದು ಆಸೆ 
ಒಮ್ಮೆ ಒರಗು ಎದೆಗೆ 
ಹಾಡು ಹಾಡೋವಾಗ ಹೃದಯ ನೀ ಬೇಕು ಅಂತ 
ಬಂದೇ ಬರುವೆ ತಾಳು 
ಬೀಳೋ ಕನಸಿನಲ್ಲಿ 
ಬೇಡಿ ಸಿಕ್ಕ ಯೋಗ ಇನ್ನು ನಾ ನಿನಗೆ ಸ್ವಂತ
ನಿನ್ನ ಸ್ಪರ್ಶದಿಂದ 
ಎಲ್ಲ ಹರುಷ ತಾನೆ 
ಕಾಡ ಬೇಡ ಬೇಗ ಬಾ ನನ್ನ ಸೋಕಿ ಹೋಗು 
ಕಣ್ಣು ಕಣ್ಣಿನಲ್ಲಿ 
ಬೆರೆತು ಹೋಗುವಾಗ 
ನನಗೆ ಮಾತ್ರ ಕೇಳೋ ಹಾಗೆ ನನ್ನನ್ನು ಕೂಗು 

Monday 1 March 2021

ಉರಿಗಣ್ಣ ಚಂದಿರನು ಇರುಳಲ್ಲಿ ಬಂದಿಹನು

ಉರಿಗಣ್ಣ ಚಂದಿರನು ಇರುಳಲ್ಲಿ ಬಂದಿಹನು

ಕಿಟಕಿ ಬಾಗಿಲ ಮುಚ್ಚು ಮುತ್ತಿಡುವ ಮುನ್ನ
ಬರಿಗೈಲಿ ಹಿಂದಿರುಗದೆ ಬೇರೆ ವಿಧಿಯಿಲ್ಲ
ಹೋಗಲಿ ಜೊತೆ ಮಾಡು ನಕ್ಷತ್ರವನ್ನ

ಹಿಂದೆಲ್ಲ ಅವನ ಎಳೆ ತಂದದ್ದು ನೆನಪಿದೆ
ವಿರಹಕ್ಕೆ ಜೊತೆಗಾರನೆಂಬಂತೆ ದಿನವೂ
ಮದಿರೆಯನು ನಾ ಹೀರಿ ಬಾನಿಗೂ ಚಿಮ್ಮಿದ್ದೆ
ನಶೆ ಏರಿದವರಂತೆ ತೂರಾಡಿಕೊಂಡೆವು

ಸಲುಗೆ ಅತಿಯಾದಂತಿದೆ ಇರಿಸಬೇಕಿದೆ
ಅದೇ ಹಳೆ‌‌ಯ ಅಂತರವನು ನಮ್ಮಯ ನಡುವೆ
ಬಾನು ಭೂಮಿ ಇಷ್ಟು ದೂರವಿರಲೊಳಿತು
ಇಲ್ಲದಿದ್ದರೆ ಗಳಿಗೆಗೊಂದೊಂದು ಗೊಡವೆ

ನಿನ್ನ ಕಂಡಾಕ್ಷಣ ಇಬ್ಬರಲೂ ಅಂಕುರ
ಅವ ಬೇರೆ, ನಾ ಬೇರೆ ಅಲ್ಲದಂತಿದ್ದೆವು
ನನ್ನ ಸ್ವಾರ್ಥಕೆ ಅವನು, ಅವನ ಸ್ವಾರ್ಥಕೆ ನಾನು
ಎಂಬಂತೆ ಒಪ್ಪಂದ ಮಾಡಿಕೊಂಡಿದ್ದೆವು

ನೀ ನನ್ನ ತೆಕ್ಕೆಗೆ ಬಿದ್ದ ಕ್ಷಣದಿಂದ
ಮುರಿದು ಬಿತ್ತು ಅಲ್ಲಿಗೆ ನಮ್ಮ ಸ್ನೇಹ
ಅಲ್ಲಿಂದ ಮೊದಲಾಗಿ ಇನ್ನೂ ಸಾಗುತಲಿದೆ
ಸೋತರೂ ಶರಣಾಗದ ಸುಪ್ತ ಕಲಹ 

ಅಪ್ಪನ ಜೇಬಲಿ

ಅಪ್ಪನ ಜೇಬಲಿ ಹುಡುಕಲು ಸಿಕ್ಕವು ಸಾವಿರ ಕನಸುಗಳು 

ರೆಪ್ಪೆಯ ಕಾವಲ ಕಣ್ಣಲಿ ಚಿಮ್ಮಿವೆ ನಾಳೆಯ ಬಣ್ಣಗಳು
ಅಕ್ಕರೆ ತುಂಬಿದ ಮಾತಲಿ ಗೆಲ್ಲುವ ಎಲ್ಲರ ಗಮನವನು
ಅಂತರ ವಯಸಲಿ ಆದರೂ ಈತನೇ ನಿಚ್ಚಿನ ಸ್ನೇಹಿತನು 
ನಾನಾಥರ ಆಸೆಗಳು ಇವನಲಿ ಎಲ್ಲ ನಮಗಾಗಿ 
ಆರೋಪವ ಮಾಡದೆ ನುಂಗುವ ನೋವನ್ನು ಗುಟ್ಟಾಗಿ 
ಅಮ್ಮ ಎಂದರೆ ಸೋಲೇ ಇಲ್ಲ 
ಗೆಲ್ಲಿಸುವ ಅಪ್ಪ 
ಒರಟನ ಹಾಗೆ ಕಂಡರೂ 
ತಾಯಿಯ ಹೃದಯವಿರೋ ಅಪ್ಪ 

ಆಕಾಶದಂತೆ ಇವನ ಪ್ರೀತಿ 
ನಲಿಯುವೆ ನಾ ಅಲ್ಲಿ ಗಾಳಿಪಟದಂತೆ
ತಂಗಾಳಿಗಿಂತ ತಂಪೆರೆವ ರೀತಿ
ಮಲಗುವೆ ಆ ಮಡಿಲಲಿ ಪುಟ್ಟ ಮಗುವಂತೆ
ಸಂತೆಯಲ್ಲಿ ಕಳುವಾಗದಂತೆ 
ಬೆರೆಳ ಬಿಗಿ ಹಿಡಿತಕ್ಕೆ ಬೆವೆರ ಸಾಕ್ಷಿ 
ಎಲ್ಲದಕ್ಕೂ ಹ್ಞೂ ಎನ್ನುವಂಥ 
ಮಮಕಾರ ಎರೆವಂಥ ಭಗವಂತ ಅಪ್ಪ 
ಬದುಕೆಂಬ ಒಗಟನ್ನು ಬಿಡಿಸೋನೇ ಅಪ್ಪ... 

ಆರಂಭದಿಂದ ನೆನ್ನೆ ಮೊನ್ನೆ ವರೆಗೂ 
ಎಡವಿದ ಹೆಜ್ಜೆಯ ಸರಿ ಮಾಡುವವನೀತ 
ಸಣ್ಣ ಗೆಲುವನ್ನೂ ಸಂಭ್ರಮಿಸೋ ಮಗು 
ಬೈಗುಳ ಆದರೂ ಇಂಪಾದ ಸಂಗೀತ 
ಓದಿನಲ್ಲಿ ಹಿಂದಿದ್ದರೂನು 
ಉತ್ಸಾಹ ತುಂಬೋದು ನಿನ್ನ ಸ್ಫೂರ್ತಿ 
ಪ್ರೀತಿಯಲ್ಲಿ ನೂರಕ್ಕೆ ನೂರು 
ನೀಡೋದು ನೀ ಮಾತ್ರ ಅನಿಸೋದು ಅಪ್ಪ 
ನೀ ತೋರೋ ದಾರಿನೇ ಹಿತಕಾರಿ ಅಪ್ಪ... 

ಹಾರಿ ಬಂದ ಕನಸೇ

ಹಾರಿ ಬಂದ ಕನಸೇ

ಬೀಳುವಂತೆ ಕಣ್ಣಿಗೆ
ಮೂಡಿ ಬಂದ ಕವಿತೆ
ಹಾಡುವಂತೆ ಮೆಲ್ಲಗೆ
ದೂರ ವಿಷಾದ ಇನ್ನು ನನ್ನಲಿ
ಇನ್ನೂ ಸಂತೋಷ ಒಂದೇ ಬಾಳಲಿ
ಏನೋ ಹೊಸ ಆಸೆ ಸಾರುತ್ತಲಿ 
ನೂರಾರು ಅರ್ಥ ಹೊಮ್ಮಲಿ 
ಬಾಳೊಂದು ಖಾಲಿ ಪುಸ್ತಕ
ತುಂಬೋದೇ ನಮ್ಮ ಕಾಯಕ
ಒಲವಲ್ಲಿ ಎಲ್ಲ ಮೋಹಕsss 
ನಗುವೇ ಒಲವ ರೂಪಕ 
ನಗುವ ಬದುಕೇ ಸಾರ್ಥಕ    

ಹೇ .. ನೀ ಯಾರು ಎನ್ನುತ್ತಿದೆ ಕನ್ನಡಿ 
ಬೆರಗಾಗುತ್ತಲೇ, ನನ್ನ ನಿಲುವ ಕಂಡು 
ಯಾಕೆ ಇಷ್ಟೊಂದು ಉತ್ಸಾಹವೆನ್ನುತ್ತಿದೆ
ಮುಂದೂಡುವ ದಾರಿ ಒಮ್ಮೊಮ್ಮೆ ತಿರುವಲನ್ನು ನೀಡುತ್ತಲಿ 
ಇರಬೇಕು ಹೀಗೆಯೇ ಅನಿಸೋ ಭಾವನೆ 
ಮೂಡುವಾಗ ಮನದಿ 
ತೆರೆದಷ್ಟೂ ಕಣ್ಣಿಗೆ ಕಾಣುವಂತ ಜಗವೇ 
ಏನೋ ಸಲುಗೆ ಹಿಡಿದು 
ನಿನ್ನ ಹುಡುಕಿ ಬರುವೆ 
ಕಾದು ಇರು ನೀ ಅಲ್ಲೇ ಚೂರು ಗಮ್ಯವೇsss
ನಗುವೇ ಒಲವ ರೂಪಕ 
ನಗುವ ಬದುಕೇ ಸಾರ್ಥಕ    

ಓ.. ರಂಗೇರಿ ಹೂವೆಲ್ಲ ಸಿಂಗಾರವೇ 
ಖುಷಿ ಹಂಚುತ್ತಲೇ, ಗಾಳಿ ಒಡಲ ಸೋಕಿ  
ಯಾನ ಇನ್ನಷ್ಟು ಉಲ್ಲಾಸ ನೀಡುತ್ತಿದೆ 
ಈ ಚಿತ್ತವ ದೋಚೋ ಚಿತ್ತಾರ ಅಚ್ಚಾಗಿದೆ ಬಾನಲಿ 
ಬಿಳಿ ಮೋಡವಾದರೂ ಮಾತನಾಡಲಿ 
ಖಾಲಿ ಬೊಗಸೆಯೊಡನೆ 
ಕೈ ಚಾಚಬೇಕಿದೆ ಪ್ರೀತಿಯಾದ ಒಡನೆ 
ಏನೋ ಸಲುಗೆ ಹಿಡಿದು 
ನಿನ್ನೇ ಹುಡುಕಿ ಬರುವೆ 
ಕಾದು ಇರು ನೀ ಅಲ್ಲೇ ಚೂರು ಗಮ್ಯವೇsss
ನಗುವೇ ಒಲವ ರೂಪಕ 
ನಗುವ ಬದುಕೇ ಸಾರ್ಥಕ    

ಕಬಾಬು ಚಿಕ್ಕನ್ ಕಬಾಬು

ಕಬಾಬು ಚಿಕ್ಕನ್ ಕಬಾಬು

ಒಳಗಡೆ ಎಲುಬು
ಕಚ್ಚಿದರೆ ಎಲುಬೋ ಎಲುಬು
ಕಬಾಬು ಚಿಕ್ಕನ್ ಕಬಾಬು
ಒಳಗಡೆ ಎಲುಬು
ಕಚ್ಚಿದರೆ ಎಲುಬೋ ಎಲುಬು
ಮಾಂಸದಿಂದ ಮೂಳೆನಾ ಬ್ಯಾರೆ ಮಾಡ್ತಾರೆ 
ಕೈಗೆ ಅಂಟೋ ಕಲರ್ರಾಕಿ ಬೆರ್ಸಿ ಇಡ್ತಾರೆ 
ಹೆಸ್ರಿಗೆ ಮಾತ್ರ ಸ್ಕಿನ್ನೌಟು ಅಂತಾರೆ
ಲಾಲಿಪಪ್ಪಂತ ಯಾಮಾರ್ಸಿ ನಮ್ಗೆ ಮಾರ್ತಾರೆ 
ಕಿಲೋ ಕೋಳಿ ಕ್ಲೀನಾದಾಗ ಸಿಗೋದ್ ಕಾಲ್ಕಿಲೋ
ಮನೇಲ್ ಮಾಡ್ಕೊಂಡ್ ತಿನ್ನೋದೇನೇ ಸೇಫ಼ು ಕೇಳೋಲೋ
ಗಲ್ಲಿ ಗಲ್ಲಿಗೊಂದೊಂದಂತೆ ಕಬಾಬ್ ಅಂಗಡಿ
ಅಲ್ಲಿ ಮಾಡಿದ್ನ ತಿಂದ್ರೆ ಹೊಟ್ಟೇಲಿ ಸಿಡಿ ಮಿಡಿ

ಮಿಲ್ಟ್ರಿ ಹೋಟ್ಲು ಯಾಕಣ್ಣ
ಕೆ.ಎಫ್.ಸಿನೂ ಸಾಕಣ್ಣ 
ಹೈವೇ ಬಾರಿನ್ ಪಕ್ಕ 
ಸುಡೋ ಕಬಾಬ್ ಬ್ಯಾಡಣ್ಣ 
ಬಾ ಬಾ ನಾವೇ ಮನೇಲ್ ನಾಟಿ‌ ಕೋಳಿ ಕುಯ್ಯಣ..

ಹಕ್ಕಿ ಜ್ವರ ಬಂದಾಗ ದೂರ ಇದ್ಬಿಡು 
ಹೆಂಗೋ ಹಂಗೆ ಒಂದ್ ತಿಂಗ್ಳು ಕಾಲ ತಳ್ಬಿಡು 
ಬಾರೋಲೋ ... ಆಮೇಲ್ ತಿನ್ನೋಣನಂತೆ ಬಾರೋಲೋ... 
ತರ್ಕಾರಿ ಬೆಲೆ ಏನೂ ಕಮ್ಮಿ ಇಲ್ಲ 
ಬಿಟ್ಟಿ ಅಡ್ವೈಸೆಲ್ಲಾ ಬೇಕಾಗಿಲ್ಲ 
ಸರಿ ಮೀನಾದ್ರೂ ತಿನ್ನೋಣ ತಗಿ ಗಾಡಿಯ 
ಇಲ್ಲ ಗುಡ್ಡೆ ಮಾಂಸನಾದ್ರೂ ತಕ್ಕಬರ್ತೀಯಾ 
ಮದ್ವೆ ಆದ್ಮೇಲೆ ಬಾಡೂಟ ಹಾಕ್ದೆ ಹೋದರೆ 
ಇನ್ನು ಮದುವೆ ಮಾಡ್ಕೊಳ್ಳೋದೇ ವೇಸ್ಟು ಅಂತೀಯಾ?
ಫಾರಂ ಕೋಳಿ ಫ್ರೈ ಮಾಡು 
ನಟಿ ಕೋಳಿ ಸಾರ್ ಮಾಡು 
ಮುದ್ದೆ ಮುರ್ದು ತುತ್ತು 
ಗುಳುಂ ಅಂತ ನುಂಗೋಣ 
ಬಾ ಬಾ ಭಾನುವಾರ ಬೀಗ್ರೂಟ್ಟಕ್ಕೆ ಹೋಗೋಣ... 

ಕಬಾಬು ಬೋನ್ಲೆಸ್ ಕಬಾಬು 
ಸ್ಪೈಸಿ ಕಬಾಬು 
ಎಲ್ಲದಕ್ಕೂ ಜವಾಬು ಜವಾಬು 
ಕಬಾಬು ಕಲ್ಮಿ ಕಬಾಬು 
ಸ್ಪೈಸಿ ಕಬಾಬು 
ಎಲ್ಲದಕ್ಕೂ ಜವಾಬು ಜವಾಬು 
ಬಿರಿಯಾನಿಗೊಂದೇನೇ ಪೀಸು ಅಂತಾರೆ 
ಲೆಗ್ಗು ಪೀಸಾಕಿ ಅಂತಂದ್ರೆ ಖಾಲಿ ಅಂತಾರೆ 
ಅನ್ನಕ್ಕೆ ಸೋಡಾನ ಬರ್ಸಿ ಕೊಡ್ತಾರೆ 
ಟೇಸ್ಟಿಂಗ್ ಪೌಡ್ರಂತ ಏನೇನೋ ಹಾಕಿ ಬಿಡ್ತಾರೆ 
ಒಲೆ ಮೇಲಿಟ್ಟು ಬೇಯ್ಸೋಣ ಬೇಗ ಬಾ ಗುರು 
ರುಬ್ಬಿ ಹಾಕಿದ್ರೆ ಮಸ್ಸಾಲೆ ರುಚಿ ಸೂಪರ್ರು 
ಖಾರ ಹೆಚ್ಚಾದ್ರೆ ನಿಂಬೆ ರಸ ಹಿಂಡುವ 
ಜೊತೆಗ್ ಈರುಳ್ಳಿ, ಸೌತೇಕಾಯ್ ನೆಂಜಿಕೊಳ್ಳುವ

ಮಿಲ್ಟ್ರಿ ಹೋಟ್ಲು ಯಾಕಣ್ಣ
ಕೆ.ಎಫ್.ಸಿನೂ ಸಾಕಣ್ಣ 
ಹೈವೇ ಬಾರಿನ್ ಪಕ್ಕ 
ಸುಡೋ ಕಬಾಬ್ ಬ್ಯಾಡಣ್ಣ 
ಬಾ ಬಾ ನಾವೇ ಮನೇಲ್ ನಾಟಿ‌ ಕೋಳಿ ಕುಯ್ಯಣ..

ಕಬಾಬು ಚಿಕ್ಕನ್ ಕಬಾಬು.... 

ಖಾಲಿ ಆಕಾಶ ಇಂದೇಕೋ ನವೀನವಾದಂತೆ

ಖಾಲಿ ಆಕಾಶ ಇಂದೇಕೋ ನವೀನವಾದಂತೆ 

ಬೇಲಿ ದಾಟುತ್ತ ಮನಸ್ಸು ಹಾರೋಕೆ ನಿಂತಂತೆ 
ನಿರಾಸೆ ರೆಕ್ಕೆ ಮುರಿದಂತೆ ಉಳಿದಿರಲಿ ಭೂಮಿಯಲಿ 
ನೋಡು ಅವಕಾಶ ದೊರೆತಿರಲು ಬಾಳಿನಲಿ 
ಮೂಡೋ ನಗುವನ್ನು ಎಲ್ಲೆಲ್ಲೂ ಹಂಚಿ ಸಾಗೋಣ
ಬೇಗ ಕೈ ಚಾಚು ಒಂದಾಗಿ ಕೂಡಿ ಹಾರೋಣ 

ನೀಲಿ ಆಕಾಶ ಇಂದೇಕೋ ನವೀನವಾದಂತೆ 
ಖಾಲಿ ಆದಂತೆ ಮನಸ್ಸು ಹಾರೋಕೆ ನಿಂತಂತೆ 

ಸಂದೇಶ ತಂದಾಗ ತಂಗಾಳಿ 
ಕೇಳೋದಾ ಮರೆತೋರು ನಾವಿಲ್ಲಿ 
ಒಮ್ಮೆ ನಿಂತು ಕೇಳೋಣ ಅದೇನೋ ಹೊಸ ಸಮಾಚಾರ 
ಹಿಡಿಯುವ ಅಂಗೈಯ್ಯಲಿ ಹಾಗೇ ಅನ್ನೋ ವಿಚಾರ   
ಹೇ .. ದುಬಾರಿ ಎಲ್ಲವೂ ಬರೇ 
ಪ್ರೀತಿಯೊಂದೇ ಇಲ್ಲಿ ಸುಲಭದ ಮಾತು 


ನೀಲಿ ಆಕಾಶ ಇಂದೇಕೋ ನವೀನವಾದಂತೆ 
ಖಾಲಿ ಆದಂತೆ ಮನಸ್ಸು ಹಾರೋಕೆ ನಿಂತಂತೆ 
ನಿರಾಸೆ ರೆಕ್ಕೆ ಮುರಿದಂತೆ ಉಳಿದಿರಲಿ ಭೂಮಿಯಲಿ 
ನೋಡು ಅವಕಾಶ ದೊರೆತಿರಲು ಬಾಳಿನಲಿ 
ಮೂಡೋ ನಗುವನ್ನು ಎಲ್ಲೆಲ್ಲೂ ಹಂಚಿ ಸಾಗೋಣ
ಬೇಗ ಕೈ ಚಾಚು ಒಂದಾಗಿ ಕೂಡಿ ಹಾರೋಣ 


ಏನೇನೋ ಹೇಳೋಕೆ ಬಂದಾಗ 
ಮಾತೆಲ್ಲ ಮರೆತಂತೆ ನಿಂತಾಗ 
ಎಲ್ಲ ಅಸಲಿ ಅನಿಸೋದು ಆದರೆ ತೊಟ್ಟ ಮುಖವಾಡ 
ಪ್ರೀತಿಯ ಕಣ್ಣು ತೆರೆದಾಗ ಅಂದವೇ ಎಲ್ಲ 
ಹೂ ದಾರಿ ನಮ್ಮದು ಸದಾ 
ಜೋಡಿಗೂಡಿ ಸಾಗಲು ಪ್ರೀತಿಗೆ ಸೋತು...  

ಕಣ್ಣಲ್ಲಿ ಹನಿಯೊಂದು ಜಿನುಗಿ

ಕಣ್ಣಲ್ಲಿ ಹನಿಯೊಂದು ಜಿನುಗಿ 

ಕನ್ನಡಿಯ ಸಿಡಿವಂತಿದೆ 
ಮುನ್ನುಡಿಯ ಬರೆದಂತ ದಾರಿ
ಕವಲಾಗಿ ಒಡೆದಂತಿದೆ
ಕೈಗೆಟುಕದೆ ಉಳಿದ ಮುಗಿಲು
ಮಳೆಗರೆವುದ ಮರೆತಿದೆ
ಈ ಮೊದಲು ಸಿಗುತಿದ್ದ ಸಂಜೆ
ಈಚೆಗೆ ಮಂಕಾಗಿದೆ

ಕಾರಣ ಕೊಡಬಲ್ಲೆಯೇನು?
ಎಲ್ಲವ ಸರಿಪಡಿಸು ನೀನು... 

ಆರಂಭದ ಹೆಜ್ಜೆ ಗುರುತು 
ಕಳುವಾಗಿ ಹೋದಂತಿದೆ 
ಆನಂತರ ಸಿಕ್ಕ ಕುರುಹು 
ನನದಾಗದೆ ಉಳಿದಿದೆ 
ತೋರಣದಿ ನಕ್ಕ ಎಲೆಯಲ್ಲಿ 
ಚುಚ್ಚು ಗಾಯದ ನೋವಿದೆ 
ಬಾಂದಳದ ನಕ್ಷತ್ರವೆಲ್ಲ 
ಗೊಂದಲದ ಗೂಡಾಗಿದೆ 

ಕಾರಣ ಕೊಡಬಲ್ಲೆಯೇನು?
ಎಲ್ಲವ ಸರಿಪಡಿಸು ನೀನು... 

ಅಂಗಳದಿ ಅರಳಿದ ಹೂವು 
ಬೇನಾಮಿ ಅನಿಸುತ್ತಿದೆ 
ಹಿತ್ತಲಲಿ ಕಣ್ಬಿಟ್ಟ ಚಿಗುರು 
ನೆರಳಲ್ಲೂ ನರಳುತ್ತಿದೆ 
ಬೊಗಸೆಯಲಿ ಕಾಪಿಟ್ಟ ಬೆಳಕು 
ಉಸಿರಿಗೆ ಆರುತ್ತಿದೆ 
ಖುಷಿಯನ್ನು ಮಾರುವ ಸಂತೆ 
ಮಸಣಕ್ಕೆ ಮನಸೋತಿದೆ 

ಕಾರಣ ಕೊಡಬಲ್ಲೆಯೇನು?
ಎಲ್ಲವ ಸರಿಪಡಿಸು ನೀನು... 

ದಿಕ್ಕೆಟ್ಟ ದಿಕ್ಸೂಚಿ ಮುಳ್ಳು 
ಹೃದಯಕ್ಕೆ ಮುಳುವಾಗಿದೆ 
ಇಂತಿಷ್ಟು ಹಂಚೋಕೂ ಕೂಡ 
ನಗೆ ಮೂಡಿ ಬರದಾಗಿದೆ 
ಓಟಕ್ಕೆ ಮಿತಿಯಿಟ್ಟ ವೇಗ 
ಸೋಲನ್ನೇ ರುಚಿಸುತ್ತಿದೆ 
ಯಾತಕ್ಕೂ ಇರಲೆಂದು ನೋವು 
ನನ್ನಲ್ಲೇ ಉಳಿದಂತಿದೆ 

ಕಾರಣ ಕೊಡಬಲ್ಲೆಯೇನು?
ಎಲ್ಲವ ಸರಿಪಡಿಸು ನೀನು... 

ಬಲವಾಗಿ ಹಿಡಿಟ್ಟ ಒಲವು 
ಬಲಹೀನವಾಗುತ್ತಿದೆ 
ಬಿಟ್ಟು ಕೊಟ್ಟ ಗಳಿಗೆಯಲ್ಲಿ 
ರೆಕ್ಕೆ ಬೀಸಿ ಹಾರಿದೆ 
ಕೈಗೂಡಿದವು ಎಲ್ಲ ಹಾಗೇ 
ಒಂದೊಂದೇ ಕೈಜಾರಿದೆ 
ಬೇಕೆಂದು ಹಠ ಮಾಡೋ ಮನಸು 
ಮೌನಕ್ಕೆ ಶರಣಾಗಿದೆ.. 

ಕಾರಣ ಕೊಡಬಲ್ಲೆಯೇನು?
ಎಲ್ಲವ ಸರಿಪಡಿಸು ನೀನು... 

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...