Monday 29 March 2021

ಬಾ ಕವಿತೆಯೊಳಗೆ, ಜೊತೆಯ ಕೊಡುಲು

ಬಾ ಕವಿತೆಯೊಳಗೆ, ಜೊತೆಯ ಕೊಡುಲು

ಹೃದಯದೊಳಗೆ, ಹೃದಯವಿಡಲು
ಸನಿಹವಿರುವೆ ಅನಿಸುತಿರಲು
ಬಳಸುವೆ ಪ್ರೀತಿಯಿಂದ
ಬಾ ಕನಸುಗಳಿಗೆ, ಬೆಳಕ ಕೊಡಲು
ಅಧರ ಬಳಿಗೆ, ಅಧರ ತರಲ
ಉಸಿರ‌ ಬಿಸಿಯು ಹೊಸೆಯುತಿರಲು 
ಕರಗುವೆ ಆಸೆಯಿಂದ

ಈ ಕೊರೆವ ಸಮಯ ಸರಿದು ಬಿಡಲಿ 
ಮಧುರ ಕ್ಷಣವು ಒಲಿದು ಬರಲಿ 
ಸಕಲ ಸುಖವು ನಮದೇ ಎನುವ 
ಬಯಕೆಯ ಬೇಲಿ ದಾಟಿ 
ಈ ಮನದ ಕೊಳದಿ ಉದುರಿ ಎಲೆಯು 
ಅಲೆಯ ಘಮಲು ಪಸರುತಿರಲು 
ನುಡಿವ ಗೆಜ್ಜೆ ಕಟ್ಟಿ ಕುಣಿದು 
ಮಾಡಿಸು ನಿನ್ನ ಭೇಟಿ

ಝೇಂಕರಿಸೋ ನಾದ ನಿನ್ನ ಬನದಿ 
ತುಂಬಿಕೊಂಡ ಕಣ್ಣೇ ಶರಧಿ 
ಸೋಲನುಂಡು ನಿಲ್ಲೋ ಸರದಿ 
ಅಂಗಳದ ಹೂವಿಗೆಲ್ಲ 
ಬಾಂದಳದಿ ಬಿರಿದ ಮುಗಿಲ ಕಮಲ  
ಅರಿತ ಹಾಗೆ ನೆಲದ ತುಮುಲ 
ಇಳಿದು ತಣಿಸಿ ಇಳೆಯ ಒಡಲ 
ಹಸನಾಯ್ತು ಭೂಮಿಯೆಲ್ಲ 

ನಾ ಹಿಡಿದು ಬರಲೇ ಬೆರಗು ಬೆರಳ 
ನೇರ ನಡೆದು ಕೂಡಿ ನೆರಳ 
ಸವೆದು ದಾರಿ ಗುರುತು ಸಿಗದೆ
ಮರೆಯುವೆ ನನ್ನ ಬೇರ
ಈ ಹರಿದ ಝರಿಯ‌ ಕುರುಡು ಮೀನು
ಹರಿವ ಅರಿವ ಪಡೆದ ನಾನು
ಸೇರಲೆಂದೇ ಬರುವೆ ನಿನ್ನ
ನೀ ನಡೆಸುವ ಪ್ರಕಾರ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...