Monday, 1 March 2021

ಉರಿಗಣ್ಣ ಚಂದಿರನು ಇರುಳಲ್ಲಿ ಬಂದಿಹನು

ಉರಿಗಣ್ಣ ಚಂದಿರನು ಇರುಳಲ್ಲಿ ಬಂದಿಹನು

ಕಿಟಕಿ ಬಾಗಿಲ ಮುಚ್ಚು ಮುತ್ತಿಡುವ ಮುನ್ನ
ಬರಿಗೈಲಿ ಹಿಂದಿರುಗದೆ ಬೇರೆ ವಿಧಿಯಿಲ್ಲ
ಹೋಗಲಿ ಜೊತೆ ಮಾಡು ನಕ್ಷತ್ರವನ್ನ

ಹಿಂದೆಲ್ಲ ಅವನ ಎಳೆ ತಂದದ್ದು ನೆನಪಿದೆ
ವಿರಹಕ್ಕೆ ಜೊತೆಗಾರನೆಂಬಂತೆ ದಿನವೂ
ಮದಿರೆಯನು ನಾ ಹೀರಿ ಬಾನಿಗೂ ಚಿಮ್ಮಿದ್ದೆ
ನಶೆ ಏರಿದವರಂತೆ ತೂರಾಡಿಕೊಂಡೆವು

ಸಲುಗೆ ಅತಿಯಾದಂತಿದೆ ಇರಿಸಬೇಕಿದೆ
ಅದೇ ಹಳೆ‌‌ಯ ಅಂತರವನು ನಮ್ಮಯ ನಡುವೆ
ಬಾನು ಭೂಮಿ ಇಷ್ಟು ದೂರವಿರಲೊಳಿತು
ಇಲ್ಲದಿದ್ದರೆ ಗಳಿಗೆಗೊಂದೊಂದು ಗೊಡವೆ

ನಿನ್ನ ಕಂಡಾಕ್ಷಣ ಇಬ್ಬರಲೂ ಅಂಕುರ
ಅವ ಬೇರೆ, ನಾ ಬೇರೆ ಅಲ್ಲದಂತಿದ್ದೆವು
ನನ್ನ ಸ್ವಾರ್ಥಕೆ ಅವನು, ಅವನ ಸ್ವಾರ್ಥಕೆ ನಾನು
ಎಂಬಂತೆ ಒಪ್ಪಂದ ಮಾಡಿಕೊಂಡಿದ್ದೆವು

ನೀ ನನ್ನ ತೆಕ್ಕೆಗೆ ಬಿದ್ದ ಕ್ಷಣದಿಂದ
ಮುರಿದು ಬಿತ್ತು ಅಲ್ಲಿಗೆ ನಮ್ಮ ಸ್ನೇಹ
ಅಲ್ಲಿಂದ ಮೊದಲಾಗಿ ಇನ್ನೂ ಸಾಗುತಲಿದೆ
ಸೋತರೂ ಶರಣಾಗದ ಸುಪ್ತ ಕಲಹ 

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...