Monday, 29 March 2021

ಚುಕ್ಕಿ ಎಣಿಸಿ ಕೊಡುವಲ್ಲಿ

ಚುಕ್ಕಿ ಎಣಿಸಿ ಕೊಡುವಲ್ಲಿ

ಪರಿಣಿತಿ ಹೊಂದಿಹೆ ನಾನು
ಅನೂಹ್ಯವಾದ ಅನುಬಂಧ
ಹೊಂದಿದೆ ನನ್ನೊಡನೆ ಬಾನು

ಎಷ್ಟೋ ರಾತ್ರಿಗಳ ಕಳೆದೆ
ಕಣ್ಣು ತೆರೆದೇ ಕನವರಿಸಿ
ಬಿಟ್ಟು ಬಂದೆ ಮಹಡಿಯಲಿ
ಹಾಸಿದ ಚಾಪೆಯ‌ ಸಂತೈಸಿ

ಎಣಿಕೆ ಇನ್ನೂ ಮುಗಿದಿಲ್ಲ
ಕಂತುಗಳಲ್ಲಿ‌ ಸಾಗಿರಲು
ಎಲ್ಲೋ‌ ಇಟ್ಟ ಕೊನೆ ನಾಳೆ
ಮತ್ತೆಲ್ಲೋ‌ ಮರುಕಳಿಸಿರಲು

ಗೊತ್ತು ಹುಂಬನೇ ನಾನೆಂದು
ಆದರೂ ಮುಂದುವರಿಸಿರುವೆ
ಪ್ರಾಮಾಣಿಕ ಲೆಕ್ಕವನಿಟ್ಟೂ
ಸೋಲಿನ ವರದಿ ಸಲ್ಲಿಸುವೆ

"ಹೆಚ್ಚುತಲೇ ಇವೆ ಚುಕ್ಕಿಗಳು"
ಹುಚ್ಚನ ಸೊಲ್ಲು ಹುಚ್ಚರಿಗೆ
ಆಗಾಗ ಮರೆಯಾದವು ಮಿಂಚಿ
ಕೆಲವೊಂದು ಬರೆ ಮೆಚ್ಚುಗೆಗೆ

ಇಲ್ಲಿದ್ದವರು ತಲುಪುವ ತಾಣ
ಅಲ್ಲೇ ಕ್ಷೇಮ ತಾರಾಗಣ
ಚಿತ್ತಾರಗಳೆಷ್ಟೋ ಮೂಡುವವು
ಕಲಾವಂತಿಕೆಯ ಆವರಣ 

ಇಷ್ಟೇ ಎಂದು ಒಪ್ಪಿಸಿದವರು
ತಮ್ಮನ್ನೂ ಸಹ ಒಳಗೊಂಡು
ಕೋಟೆ-ಕೊತ್ತಲ ದಾಟಿ ಕೋಟಿ-
-ಗಟ್ಟಲೆ ಮಿನುಗಲಿ ನಾವೊಂದು

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...