Monday 29 March 2021

ಹಾರುವ ಪತಂಗವೇ

ಹಾರುವ ಪತಂಗವೇ 

ನೀ ದೂರ ದೂರವಾಗುವೆ 
ನೂಲಿನ ಈ ಅಂಚಿಗೆ 
ನಾನೊಂದು ಮಾತು ಹೇಳುವೆ

ಸ್ವರ ಸಂಚರಿಸಿ ತಲುಪಲು 
ತಡ ಆಗುವುದು ಸಹಜ 
ಕೆಲವೊಮ್ಮೆ ನಡುವೆ ಎಲ್ಲೋ 
ಕಳುವಾದದ್ದೂ ನಿಜ 

ನಿನ್ನ ಮೈ ಬಣ್ಣ 
ಹಿಂದೆಂದಿಗಿಂತಲೂ ಭಿನ್ನ 
ಆಕಾಶದ ನೀಲಿ 
ಬದಲಾಯಿಸಿತೇ ನಿನ್ನ?

ನನ್ನ ಒಲ್ಲದ ಮನಸು 
ಹಾರು ಎಂದಾಗ 
ಚಂಗನೆ ಜಿಗಿದೆ
ಕ್ಷಣಮಾತ್ರಕೆ ಗಾಳಿಯ ತೆಕ್ಕೆಗೆ 

ನಿನ್ನ ಎದೆಗೊತ್ತಿ ಬರೆದ 
ನನ್ನೆದೆಯ ಗುಟ್ಟುಗಳು 
ಬಾನುಲಿಯಾಗಿ ರಿಂಗಣಿಸುತ್ತಿವೆ 
ಬಯಲು ಮಾಡಿದೆಯಾ ಹೇಗೆ?

ಸೂತ್ರ ಬಿಗಿದವ ನಾನೇ;
ನನ್ನ ಅರಿವಿನ ಪ್ರಕಾರ 
ನೀ ಬಹಳ ದೂರ ಹಾರುವುದು 
ಸೂಕ್ತವಲ್ಲ ಎಂದು ನೂಲು ಜಗ್ಗಿದಾಗ 
ನೀ ಖೋತಾ ಹೊಡೆದೆ
ಆಗ ನಾ ನೂಲನ್ನು 
ಮತ್ತು ನನ್ನ ಹಠವನ್ನೂ
ಬಿಟ್ಟುಕೊಡದೆ ದಾರಿಯಿರಲಿಲ್ಲ 

ನೀ ನಲಿವಿನ ಸಂಕೇತ 
ಲೋಕಕ್ಕೆ 
ನನ್ನ ಗತಿ..
ಬೇನೆಯ ವಿಚಾರಿಸುವವರಾರು?

ಬಿಡಿ ಬಿಡಿಯಿದ್ದಾಗ ರದ್ದಿ 
ನಾ ಮುದ್ದಿಸಿ ಜೋಡಿಸಿದ್ದೆ
ಈಗ ಎತ್ತರದಲ್ಲುಳಿದು
ನನ್ನ ಎಕಶ್ಚಿತ್ತಾಗಿಸದಿರು 

ಸಾಕು ಮುಗಿಲ ಮೋಹ 
ಮರಳಿ ಬಾ ಅವನಿಗೆ 
ಮಧುರಾಮೃತ ಉಣಿಸೆ 
ಕಾದು ಹಸಿದವನಿಗೆ 

ನಾ ಮಾಲೀಕನೆಂಬ
ಅಹಂಕಾರದ ಕಾರಣಕ್ಕೆ
ಇನ್ನೂ ನೆಲಕ್ಕೇ ಅಂಟಿರುವೆ;
ನೀ ಕಾಗದದ ತುಂಡಾಗಿಯೂ
ಬಾಂದಳ ಮುಟ್ಟಿ
ನೂಲು ಬಿಡಿಸಿಕೊಂಡು‌ ನಕ್ಷತ್ರವಾಗಿರುವೆ...

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...