Saturday 28 February 2015

ಸಮರ್ಥನೆ

ಮಾತೆ ಹಾಗು ಸಂತ
ಹಾಗೇ ಒಮ್ಮೆ ಚಹ ಕೂಟದಲ್ಲಿ
ಜ್ಞಾನ-ಅಜ್ಞಾನ, ಧರ್ಮ-ಅಧರ್ಮದ ಕುರಿತು
ಸಮಾಲೋಚಿಸುತ್ತ ಕೂತಿರುತ್ತಾರೆ
ಧರ್ಮದ ವ್ಯಾಖ್ಯಾನವನ್ನ ಬಿಡಿಸಿ ಹೇಳಲು
ಇಬ್ಬರೂ ಪದಗಳ ಮೊರೆ ಹೋಗದೆ
ಕಾರ್ಯ ರೂಪಕ ವಿನಿಮಯ ನಡೆಸಿದರು,
ನಡುವೆ ಚಹಾಕ್ಕೆ ಸಕ್ಕರೆ ಸಾಲದಾಗಿತ್ತು
ಇಬ್ಬರೂ ಮೌನ ಮುರಿಯದೆ ಸೇವಿಸುತ್ತಲೇ ಇದ್ದರು
ಯಾರೊಬ್ಬರು ದನಿಯೆತ್ತಿದ್ದರೂ ಸಣ್ಣವರಾಗುತ್ತಾರೆ
ಚಹ ತಯಾರಿಸಿದವನೆದುರು,
ಇದೇ ಅವಕಾಶವೆಂದು ಕಣ್ಣರಳಿಸಿ
ಕಪ್ಪು ಚುಕ್ಕೆ ಬಳಿಯಲು ಕಾದವರ ನಡುವೆ ನೂಕು ನುಗ್ಗಲು
ಚಹ ಮುಗಿಯುತ್ತ ಬಂದಂತೆ ಸಿಹಿ ಹೆಚ್ಚಿತು
ತಳದಲ್ಲಿ ಉಳಿದುಕೊಂಡ ಸಕ್ಕರೆ ಪಾಕ
ನಾಲಗೆಗೆ ಚುರುಕು ಮುಟ್ಟಿಸುತ್ತಿದ್ದಂತೆ
ಇಬ್ಬರೂ ನಕ್ಕು ಮುಗಿಸುತ್ತಾರೆ
ಎರಡೂ ಬಣದ ಮಂದಿಗೆ
ಲೊಟವ ಇಣುಕಿ ನೋಡುವ ಚಾಳಿ
ಒಬ್ಬ ಸಾರುತ್ತಾನೆ
"
ಸಂತರು ಸಕ್ಕರೆ ಪೋಳು ಮಾಡಿದ್ದಾರೆ"
ಮತ್ತೊಬ್ಬ
"
ಮಾತೆ ಸಕ್ಕರೆ ಬೆರೆಸದೆ ಮೋಸ ಮಾಡಿದ್ದಾರೆ"
ಇನ್ನೂ ಸಮಂಜಸವಲ್ಲದ ಕೂಗು
ಎರಡೂ ಬಣದಿಂದ
ಚಹ ತಯಾರಿಸಿ ಕೊಟ್ಟಿದ್ದವ
ಬೇನಾಮಿ, ಜಾತಿ-ಧರ್ಮದ ಹಂಗು ತೊರೆದವ
ಎಲ್ಲರಿಗೂ ಬೇಕಾದವ
ಆದರೂ ಯಾರಿಗೂ ಬೇಡವಾದವ;
ಅವ ದೇವರಲ್ಲ, ಸಹಜವಾಗಿ ತಪ್ಪು ಮಾಡಬಲ್ಲ
ವೃತ್ತದಿಂದ ದೂರುಳಿದು ಪರಿಶೀಲಿಸುವ
ಸಾಮಾನ್ಯರಲ್ಲಿ ಸಾಮಾನ್ಯ
ಇತ್ತ ಮೂಢರ ಕೆಸರೆರಚಾಟ
ಮಾತೆಯ ಸೆರಗಿಗೂ
ಸಂತನ ಕಾವಿಗೂ ಮಸಿ ಬಳಿದು
ಇಬ್ಬರನ್ನೂ ಆರೋಪದ ದಿಬ್ಬದ ಮೇಲೆ ನಿಲ್ಲಿಸಿತು
ಅಲ್ಲೂ ಮಾಸದ ನಗು
ಅದು ಒಬ್ಬರ ಮೇಲೊಬ್ಬರಿಗಿದ್ದ ಗೌರವದ ಸಂಕೇತ,
ಇದನರಿಯದ ಮತಿಗೇಡಿ ಬುದ್ಧಿ ವ್ಯಂಗ್ಯವಾಡುತ್ತ
ತಪ್ಪಿತಸ್ಥರೆನ್ನುತ್ತಲೇ ಸಾರುತ್ತಿತ್ತು
"Action speaks more than words"
ಅಲ್ಲಿ ಮೌನವೊಂದೇ ಸಮರ್ಥನೆಯಾಗಿತ್ತು!!

                                              -- ರತ್ನಸುತ

ನನ್ನಿಂದ ದೂರಾಗಿ

ಇದ್ದ ಕೊಂಡಿ ಕಳಚಿ
ಬಿದ್ದ ಸುಮಾರು ಅಹಂಗಳ
ಮೇಲೆತ್ತಲಿಕ್ಕೂ ಮುಜುಗರ
ಮುಂದೆ ಸಾಗುತ್ತಿದ್ದಂತೆ
ಹಿಂದೆ ನೆರಳು ಅದೇನನ್ನೋ ಸೂಚಿಸಿ
ಸಂತೈಸಿದಂತೆ ಕಂಡು
ವಿಕಾರವಾಗಿ ರೇಗಿದೆ
ನೆರಳು ಎಂದೂ ನನದಾಗಿರಲಿಲ್ಲ
ಸದಾ ನನ್ನ ಬಿಟ್ಟೇ ನಿಲ್ಲುತ್ತಿತ್ತು
ಔಪಚಾರಿಕ ಸ್ಪರ್ಶಕೆ ಒದಗಿ
ಅಲ್ಲಲ್ಲಿ ಚಿಗುರಿಕೊಂಡ
ನನ್ನವೇ ಸಂತತಿಗಳ ಕತ್ತರಿಸಿದ್ದು
ವ್ಯಾಪಕವಾಗಬಹುದಾದ ಆತಂಕದಿಂದ
ಕಿರಿದಾದ ಆಕಾಶವ ತಲುಪಲಾರದೆ
ಅಂತರದ ನೆಪವೊಡ್ಡಿ ನಿಂತ
ನಿಸ್ಸಹಾಯಕ ಕೈಗಳ ಕತ್ತರಿಸಿಕೊಳುವೆ
ಸೋತಾಗಿನ ನೆಪಗಳು ನಿಜಕ್ಕು ಅಸಡ್ಡೆಕಾರಿ
ದಿಂಬಿಗೆ ಒಣಜಂಭದ ಕೊಂಬು
ಕನಸುಗಳ ರಾಯಭಾರಿ ತಾನೇ ಎಂದು,
ನಾ ಚಾಪೆಯಡಿ ನುಸುಳಿ
ಬರಿ ನೆಲವ ನಂಬಿದೆ
ಆಗಲೇ ಆಕಾಶ ನಕ್ಕದ್ದು
ಭೂಮಿ ಮುನಿಸಿಕೊಂಡದ್ದು
ನನ್ನ ನಿರ್ಲಿಪ್ತತೆ ನಿಮಿತ್ತವಲ್ಲ
ನಿತ್ರಾಣ ನೆನಪುಗಳೇ ಆಗಿರಬಹುದು,
ಬಿಟ್ಟು ಹೋದ ನೆನ್ನೆಗಳು
ನಾಳೆಗಳ ತಲೆ ಕೆಡಿಸಿ
ಮತ್ತೆ ನನ್ನ ನಾನಾಗಿಸಬಹುದು
ಯಾವುದಕ್ಕೂ ಎಚ್ಚರವಿರಬೇಕು
ನನ್ನಿಂದ ದೂರುಳಿದು!!

                                     -- ರತ್ನಸುತ

ನೆನಪಿನ ನೆಪದಲ್ಲಿ

ಹಣೆಯ ಒತ್ತಿ ತುಟಿಗಳು
ಬಿಚ್ಚಿಕೊಳ್ಳಲಾಗದಷ್ಟು ಬಿಗಿಯಾಗಿ
ನಾಲಗೆ ಒಳಗೊಳಗೇ ಹೊರಳಿ
ನುಂಗಿಕೊಂಡ ನೂರು ಮಾತಿಗೆ
ಕವಿತೆ ಎಂದು ಹೆಸರಿಟ್ಟೆ,
ಇನ್ನೂ ಓದಿಸಿಕೊಳ್ಳುತ್ತಿಲ್ಲ ಅದು
ನಿನ್ನ ಓದಿಗಾಗಿ ಮೀಸಲಿಟ್ಟು
ಹಿಡಿಗೆ ಸಿಗದಂತೆ ಕದ್ದೋಡಿ
ಆಸೆಗಳೆ ಸದೆಬಡಿದ ನಿನ್ನ
ಊಹೆಯಲಿ ಹೂವಂತೆ ತಡವಿ
ಎದೆಗಪ್ಪಿಕೊಂಡಾಗ
ಮಿಡಿತಗಳ ಏರಿಳಿತದ ಹಾಡು
ಇನ್ನೂ ಮೌನಾಚರಿಸುತಿದೆ
ನಿನ್ನಾಲಿಸುವಿಕೆಗೆ ಕಾದು
ಯಾವ ಗಳಿಗೆಯಲಿ ಕದಲಿದೆನೋ,
ಜೋಳಿಗೆ ಹೊತ್ತು ಜಂಗಮನಾದೆ
ದವಸ, ಧಾನ್ಯಗಳೆಲ್ಲ ಹಸಿವ ನೀಗಿಸುತಿಲ್ಲ
ಖಾಲಿ ಜೋಳಿಗೆ ತುಂಬ ಹಂಬಲದ ಕೂಗು
ಭಿಕ್ಷೆ ನೀಡುವ ನೆಪದಿ
ಮಿಂಚಿ ಮರೆಯಾಗು!!
ಸಂಜೆಗತ್ತಲ ಮುಗಿಲಿನತ್ತ ಮುಖ ಮಾಡಿ
ನಕ್ಷತ್ರಗಳ ವಿಂಗಡಿಸಿಡುವೆ ನಿನಗೆ,
ವಜ್ರ ಮೂಗುತಿ, ಬೆಂಡೋಲೆ ಸಹಿತ
ಪದಕ ಮಾಲೆಗೆ ಸೂಕ್ತವಾದವುಗಳಾರಿಸಿ
ಆಪ್ಪಣೆ ನೀಡುವೆ ಎಂದು ಭಾವಿಸುತ
ಕುಲುಮೆಯ ಕೆಂಡಕ್ಕೆ ಉಸಿರೆರೆದು ಕಾದೆ
ಹಿತ್ತಲ ಲತೆಗಳದು ಒಂದೊಂದು ಕಥೆಯಲ್ಲ
ಬಾಡದಂತೆ ನಿರ್ಬಂಧವ ಹೇರಿಹೆನು,
ನಿನ್ನ ಹೊರತಾಗಿ ಬಾಡಿದವು ಬಾಡಲಿ
ನನ್ನಂತೆ ಮೋಹಗೊಂಡವು ಮಾತ್ರ ಉಳಿಯಲಿ
ನಿನ್ನುಗುರು ಗಿಲ್ಲಿ ವಾರಗಳೇ ಕಳೆದಿವೆ
ಬಳ್ಳಿಯಷ್ಟೇ ಕಾತರ ಗಲ್ಲಕೂ ಉಂಟು!!
ತೋರ್ಬೆರಳು ಸೆಟೆದುಕೊಂಡಿದೆ
ನಿನ್ನ ಬೆರೆಳ ಕೊಂಡಿಯ ಅನುಪಸ್ಥಿತಿಯಲ್ಲಿ,
ಕೊರಳ ಉಲಿಯಲಿ ನಿನ್ನ ಹೆಸರ ಸಹಿ
ಮನದ ಮರೆಯಲಿ ದೂರಾದ ಕಹಿ.
ಇನ್ನೂ ಅದೆಷ್ಟೋ ಹೆಸರಿಸಲಾಗದಷ್ಟು
ವಿವರಿಸಲಾಗದಷ್ಟು ಬೇನಾಮಿ ಭಾವಗಳ
ನಿನಗೆ ತೋರ್ಪಡಿಸೋ ಬಯಕೆ;
ತುಸು ಹೆಚ್ಚೇ ಬಿಡುವಿಟ್ಟು ಬಾ
ಒಟ್ಟಿಗೆ ಸಾಯುವ ಅವಕಾಶವೂ ಉಂಟು!!

                                           -- ರತ್ನಸುತ

ಕಣ್ಣಲ್ಲೆ ಪರಿಚಯವಾಗಿ

ಕಣ್ಣ ಸಾಗರಕ್ಕಿಳಿದು 
ಅಲೆ ಅಪ್ಪಳಿಸುವಾಗ ಎದೆಗೊಟ್ಟು
ಕೇಳುವಾಸೆ ನೊರೆಯ ಗುಳ್ಳೆ ಸದ್ದು
ಹುಚ್ಚು ಮನಸಿಗೆ ಇದುವೇ
ಸರಿ ಹೊಂದುವ ಮದ್ದು
ಹಾಗೊಂದು ವೇಳೆ ಕಾಡಿಗೆಯ ಮೆಟ್ಟಿ
ಹೆಬ್ಬೆರಳು ನಾಚಿದೊಡೆ
ರೆಪ್ಪೆಯ ದಡದಿಂದ ಹೊರ ಬಂದು
ದಟ್ಟ ಕಣ್ಣುಬ್ಬಿನ ಹಾಸಿನ ಮೇಲೆ
ಸೋತಂತೆ ಗೀರುವೆ ಖುಷಿಯಲ್ಲಿ
ನಿನ್ನ ಕಣ್ಣಿನ ಬಣ್ಣ
ನಿನಗಷ್ಟೇ ಮೀಸಲು
ಸಪ್ಪಳದ ಸದ್ದು ಎಚ್ಚರಿಸಿದೆ 
ಸಿಂಗಾರಗೊಂಡ ಅಸಂಖ್ಯ ಕನಸುಗಳ
ತದ್ರೂಪು ನಿನ್ನದೇ ಹಠ ಅವುಗಳಿಗೂ
ಬೇಡೆಂದರೂ ಬಿಟ್ಟು ಉಳಿಯಲಾರವು
ಮತ್ತೆ ಮತ್ತೆ ಸೋಕಿವೆ ಆದ ಹಳೆ ಗಾಯವ
ನೋವಿನ ಅನ್ವರ್ಥ ನಾಮ
ಹಿತಕಾರಿ ನಿಮ್ಮಳ ಪ್ರೇಮ
ಬಲೆ ಬೀಸಿ ಬಂದಿದ್ದೆ
ಕಣ್ಣ ವ್ಯಾಪ್ತಿಯ ಪೂರ
ಸಿಕ್ಕಷ್ಟೂ ಮುತ್ತುಗಳ ದೋಚಲೆಂದು,
ಅರಿವಿಲ್ಲದಂತೆ ನಾ ಸಿಲುಕಿಕೊಂಡಿದ್ದೆ
ಕಾಣದ ಬಲೆಯಲ್ಲಿ ಮೋಹಗೊಂಡು
ನನ್ನ ಪ್ರತಿಬಿಂಬದಲಿ ತಾನು
ಒಂದಿಷ್ಟು ಕಲೆಹೀನವಾದಂತೆ
ಜಾರಿಕೊಳ್ಳುವ ಯತ್ನ ನನದು,
ಕೆನ್ನೆ ತುಂಬೆಲ್ಲ ನನ್ನ ಹೆಜ್ಜೆ ಗುರುತು
ಕಾಣವು ಯಾರಿಗೂ ನಿನಗೆ ಹೊರತು
ಪರಿಚಯವಾದದ್ದು ಆಯಿತು
ಇನ್ನು ನಿನ್ನ ಕಣ್ಣಿಗೆ ನಾನಲ್ಲ ಆಗಂತುಕ
ನಗೆ ಬಾಷ್ಪಗಳೇ ತುಂಬಿಕೊಳಲಿ
ನೋವಿನವು ಸಾಯಲಿ ಮೂಲಕ
ಹನಿ ಹನಿಯ ಉಲಿಗೊಂದು
ಹಾಡನ್ನು ಕಲಿಸುವೆನು
ಸಂತೋಷಕೆ ಮೊಗವು ಮಿನುಗಲಿ 
ನನ್ನ ಅಂತಃಕರಣದ ಮೂಲೆ ಮೂಲೆಯಲಿ
ಪ್ರತಿಧ್ವನಿಸುತ ಹಾಡು ಗುನುಗಲಿ!!

                                          -- ರತ್ನಸುತ

ಮನದ ಮಳೆ

ಕುಲುಮೆಯಲಿ ಜಾರಿ ಬಿದ್ದ
ನಿನ್ನ ಕಾಲ್ಗೆಜ್ಜೆ ನಾದಕ್ಕೆ
ಜ್ವಾಲೆಯೂ ನಾಚಿ ನೀರಾದ ಸಂಗತಿ
ತಿಳಿಗಾಳಿಗೆ ತಲುಪಿ
ಮೈ ಸೋಕಿ ಹೊರಟಿದೆ,
ತಂಪೆರೆದ ಊರೆಲ್ಲ ನಿನ್ನದೇ ಸುದ್ದಿ
ಅದರಲ್ಲಿ ನನ್ನುಪಸ್ಥಿತಿಯಂತೂ ರದ್ದಿ
ಚಿಮಣಿಯ ಹೊಗೆಯಲ್ಲಿ
ಬಿಡಿಸಿಕೊಂಡ ಭಾವಗಳ ಚಿತ್ತಾರ
ಕ್ಷಣಕೊಂದು ರೂಪ ತಾಳಿ
ಕರಗಿ ಹೋದದ್ದೇ ಹೋದದ್ದು
ಮುಗಿಲುಗಳು ಒಗ್ಗೂಡಿ ಕೈಪಿಡಿದು
ತಟ್ಟಿಸಿಕೊಂಡಂತೆ ಬೇಗೆ
ಕರಗಿ ಹನಿ ಜಾರಬಹುದೇ?
ಆಗ ನವಿಲೊಂದು ಕುಣಿಯಬಹುದೇ?
ಬೋಳು ಬಾಲದ ಹಕ್ಕಿ
ನಿದ್ದೆಗೆಟ್ಟು ತಾನು ನವಿಲಾಗ ಬಯಸಿ
ಪುಕ್ಕಗಳ ಕದ್ದು ತಂದು
ಅಂಟಿಸಿಕೊಳ್ಳುತಿದೆ ಮನ-
-
ದಿ ಮತ್ತೊಂದು ಮಳೆಗಾಲಕೆ
ಕಾಮನ ಬಿಲ್ಲಿನ ಶಿಫಾರಸ್ಸು
ಮಲ್ಲಿಗೆ ಮೊಗ್ಗುಗಳ ಜನನ
ಸ್ವಗತಗಳು ಇದ್ದಲಿನ ಚೂರುಗಳಂತೆ
ಕೆಂಪು ಬಣ್ಣ ಬಳಿದ ನಾಟಕೀಯ ಪಾತ್ರಗಳು,
ಕಾಯದ ಕಬ್ಬಿಣಕೆ ಹಿಡಿಯಿಲ್ಲದ ಸುತ್ತಿಗೆ
ತಟ್ಟಿಕೊಂಡರೆ ಮಾತ್ರ ಜೋರು ಶಬ್ಧ
ಅದು ಅವಳ ನಗೆಯ ಮಾರ್ದನಿ
ಬರಗೆಟ್ಟ ಹಾದಿಯಲಿ
ನಿಕ್ಷೇಪ ಸಿಕ್ಕಿದೊಡೆ
ಫಕೀರನಿಗೂ ಕೂಡ ರಾಜ ಯೋಗ
ಅಂತೆಯೇ ನನಗೆ ನೀ ಸಿಕ್ಕಿದಾಗ
ಈಗಷ್ಟೇ ಹಸಿಯಾದ ನೆಲದಲ್ಲಿ
ನಿನ್ನ ಹೆಜ್ಜೆ ಗುರುತನು ಕಂಡು
ಬಿಲ್ಲೆಗೂ ಆಸೆ ಕುಂಟಲಿಕ್ಕೆ
ಅಷ್ಟರಲ್ಲೇ ಜಾರಿ ಬೀಳುವ ವೇಳೆಗೆ
ತೆಳು ರೆಂಬೆ ಕೈ ಚಾಚಿ ನೀನೇ ಸಿಕ್ಕೆ
ಹೊಣೆಯಲ್ಲ ನಾ ಇದಕೆ
ಇಷ್ಟಕ್ಕೇ ನಿಲ್ಲಿಸುವೆ ಚುಕ್ಕಿಯಿಟ್ಟು
ಅಪೂರ್ಣ ಸಾಲುಗಳ ದೃಷ್ಟಿ ಬೊಟ್ಟು....

                                    -- ರತ್ನಸುತ

ಖಾಲಿ ಲೆಕ್ಕಾಚಾರ

ಪ್ರಾಣ ತುಂಬಿದ ಬಳ್ಳ
ಈಗ ಖಾಲಿತನ ಅನುಭವಿಸುತ್ತಿದೆ,
ತುಂಬಿಸೋಣವೆಂದರೆ ಭಯ
ಮತ್ತಾರಿಗೋ ಎರೆಯಲು ಮುಂದಾಗಿ
ಅಸೂಯೆಯಲ್ಲೇ ಸಾಯುತ್ತೇನೆ
ಅದರ ಖಾಲಿತನವೇ ನನ್ನ ಪೂರ್ಣತೆ
ಇಷ್ಟು ಸ್ವಾರ್ಥಿಯಾಗಬಾರದಿತ್ತು ನಾನು
ಛೇ!! ನನ್ನ ಉಸಿರಾಟದ ಸದ್ದು
ಗುಡಾಣದಲಿ ಹೆಣವಾಗಿ ಧೂಳು ಹಿಡಿದ
ಸೇರು, ಪಾವು, ಅಚ್ಚೇರುಗಳ ಬದುಕಿಸಬಲ್ಲವು
ಅದಕ್ಕಾಗಿಯೇ ಏದುಸಿರು
ನನ್ನ ದಾಹಗಳ ನೀಗಿಸಲು
ಗಡಿಗೆ ಬತ್ತಿಹೋದದ್ದು ಲೆಕ್ಕಕ್ಕೇ ಇಲ್ಲ,
ಕೆರೆಯಲ್ಲಿ ಶುಚಿಗೊಂಡು
ಕೊಡವೊಂದು ಬಳುಕಿರಲು
ಮನೆ ಬಾಗಿಲ ಸದ್ದು ಕೇಳಿದೊಡನೆ
ನಿಚ್ಚಲವಾದ ಮೌನ ಸ್ಥಿರವಾಗುವುದು
ಭಾರದ ಹಸ್ತಾಂತರಗಳ ಸರದಿಯಲಿ
ಸೀಸೆಯ ಸೇಂದಿ
ಅಪ್ಪಟ ಬೂದಿಯಡಿಯ ಕೆಂಡ,
ನೋವಾಗದ ಚಾಟಿ ಬೀಸಿ
ಬಿಡದಂತೆ ಎದೆ ಬಡಿದು
ಹಿಂದೆಯೇ ಮುಲಾಮು ಹಚ್ಚುವ ಗೆಳೆಯ,
ಮತ್ತೇರುತ್ತಿದ್ದಂತೆಲ್ಲ ಸೀಸೆ ನಿರುಪಾಯ
ಹೃದಯ ತುಂಬಿ ಬಂದದ್ದು
ಖಾಲಿಯಾಗುವ ಖಯಾಲಿಯಲ್ಲಿ,
ಅದು ಬಳ್ಳವಾಗಿ ಬಳ್ಳಕ್ಕೇ ಸುರಿದರೆ
ಲೆಕ್ಕಕ್ಕೆ ಬಾರದಾದೀತು
ಹಿಡಿ ಚೀಲ ಮಾಡಿ
ಸೀರೆ ಸೆರಗನು ಹರಡಿ
ಕಣ್ಣಿಂದ ಕಣ್ಣಿಗೆ
ಎದೆಯಿಂದ ಎದೆಗೆ
ಉಸಿರಿಂದ ಉಸಿರಿಗೆ ಮೇಲಂಚು ತಾಕಲಿ
ನಾ ಖಾಲಿಯಾದಾಗ ನೀ ತುಂಬಿ ಬಾ
ನಾ ತುಂಬಿ ಹರಿದಾಗ ನೀ ಬತ್ತಿ ಬಾ!!

                                          -- ರತ್ನಸುತ

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...