Friday, 20 February 2015

ಒಂದು ನಿಸ್ವಾರ್ಥ ಸ್ವಾರ್ಥ

ಶ್!! ಸದ್ದು
ಈಗಷ್ಟೇ ಮಗು ಮಲಗಿದೆ;
ಕಾಗೆಗಳನ್ನ ಓಡಿಸಿ ಕಡೆ

ಒಂದೇ ಸಮನೆ ಕಾವ್ಗುಡುತ್ತಿವೆ

ಮರಿಗಳಿಗೆ ಗುಟುಕಿಲ್ಲವೇನೋ?
ಛೇ!! ಹಾರಿಸಿಬಿಟ್ಟೆವಲ್ಲ
!!
ಹೋಗಲಿ ಎಡೆ ಇಟ್ಟು ಬನ್ನಿ

ಮಾಳಿಗೆಯ ಮೇಲೆ
ಕಣ್ಣಿಗೆ ಬಿದ್ದರೆ ಹೆಕ್ಕಿ ತಿನ್ನಬಹುದು!!

ನೋಡಿ ಅಳಿಲು ಕದ್ದು ತಿನ್ನುತ್ತಿದೆ
ಹದ್ದು ಹದ್ದು ಮೀರಿ ದೋಚುತ್ತಿದೆ
ಕಾವಲಿಡಿ ಎಲ್ಲಕ್ಕು ದಕ್ಕುವಂತೆ,
ಮಿಕ್ಕಿದ್ದನ್ನೂ ಹೊತ್ತು ಬಡಿಸಿ ಬನ್ನಿ

ಯಾರ್ಯಾರು ನೀಗಿಸಿಕೊಳ್ಳುತ್ತಾರೋ ನೀಗಿಸಿಕೊಳಲಿ!!

ನಾಯಿಯ ಕಟ್ಟು ಬಿಚ್ಚಿ
ಮಲ-ಮೂತ್ರ ವಿಸರ್ಜಿಸಿ ಬರಲಿ
ಬೊಗಳಿ ಸಾಯುತ್ತಿದೆ,
ಆಕಳನ್ನ ಹೊಲಕ್ಕೆ ಹೊಯ್ರಿ

ಮೇವು ಸಿಕ್ಕರೆ ಚೀರಾಟ, ರಂಪಾಟ
ತುಸು ಕಡಿಮೆ ಆದೀತು

ಬಾಗಿಲಲ್ಲಿ ಭಿಕ್ಷುಕನದ್ದೇನದು ಗೋಳು
ಹಳಸು-ಪಳಸು ಕೊಟ್ಟು ಕಳಿಸಿ

ಬೀದಿ ಮಕ್ಕಳ ಕೂಗಾಟಕ್ಕೆ
ಮಗು ಬೆಚ್ಚಿ ಬೀಳುತ್ತಿದೆ
ಬೆತ್ತ ಹಿಡಿದು ಪಕ್ಕ ಬಿದಿಗೆ ಹಟ್ಟಿಸಿ
ಅಥವ ತಿಂಡಿ ಕೊಡುವುದಾಗಿ ಆಸೆ ಹುಟ್ಟಿಸಿ

ಅಗೊ, ಮಗು ಎದ್ದಂತಿದೆ
ಬಿಸಿ ಬಿಸಿ ಸರಿ ಕಲಿಸಿ ಉಣಿಸಿ;
ಹಠ ಮಾಡಿದರೆ

ಆಕಳು, ಕಾಗೆ, ಹದ್ದು, ಅಳಿಲು, ನಾಯಿಯ ತೋರಿ ಯಾಮಾರಿಸಿ,
ಭಿಕ್ಷುಕನನ್ನ ಗುಮ್ಮನೆಂದು ಹೆದರಿಸಿ
,
ಅಥವ ಬೀದಿ ಮಕ್ಕಳ ಆಟವ ರುಚಿಸಿ


ಏನು, ಯಾವೂ ಇಲ್ಲವೇ
ಎಲ್ಲಿ ಹಾಳಾಗಿ ಹೋದವು?

-- ರತ್ನಸುತ

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...