Friday, 20 February 2015

ಹಾಡಾಗದ ಹಾಡು

ಹಾಡಬೇಕಿತ್ತು ನಾನೊಂದು ಹಾಡು
ಒಲ್ಲದ ಮನಸಿನಿಂದ ತುಂಬು ಸಭೆಯಲ್ಲಿ;
ಅಂತರಂಗದ ರಾಗಗಳೆಲ್ಲ ಗಲ್ಲಿಗೇರಿ

ಕೊನೆ ಉಸಿರಲ್ಲಿ ಒದ್ದಾಡುವಾಗ
ಒಬ್ಬೊಬ್ಬರನ್ನಾಗಿ ಬಿಡಿಸಿ ಕೆಳಗಿಳಿಸಿ
ಬೇಡಿಕೊಳ್ಳುವ ಪಡಿಪಾಟಲಲ್ಲಿ
ಅರ್ಧ ಹಾಡು ಸತ್ತೇ ಹೋಗಿತ್ತು!!

ಇನ್ನುಳಿದರ್ಧ ಗಂಟಲಲಿ ಸಿಲುಕಿ
ಕೆಮ್ಮಿಕೊಂಡರೂ ಹೊಮ್ಮದಷ್ಟು ಮೊಂಡಾಗಿ
ಏನೋ ಬೇಡಿಕೆಯಿಟ್ಟು ಹಠ ಮಾಡಿದಂತೆ
ಕೊನೆಗೂ ಸೋಲೊಪ್ಪದೆ ಅಲ್ಲೇ ಉಳಿಯಿತು;

ಸಭೀಕರ ಕೋಪವೇನೋ ತಣ್ಣಗಿತ್ತು
ನನ್ನ ಬಗ್ಗೆ ನನಗಿದ್ದ ಕೋಪಕ್ಕೆ
ಜೋರಾಗಿ ಚೀರಿ ಎಲ್ಲದರಿಂದಲೂ ಮುಕ್ತವಾಗ-
-
ಬೇಕನಿಸಿದಾಗಲೇ ದನಿಯೊಂದು ಮೂಡಿದ್ದು
,
ಅದು ನೆರೆದ ಅಸಂಖ್ಯಾತರ ಅಳಲೂ ಕೂಡ;


ಕೇಳು ಕೇಳುತ್ತ ಎಲ್ಲರೂ ಕಣ್ಣೀರಿಟ್ಟವರೇ,
ಯಾವ್ಯಾವುದೋ ಕಾರಣಗಳ ಕೆದಕಿ

ಆಳದಿಂದ ನೆನಪುಗಳ ಬುಗ್ಗೆಯಾಗಿ ಚಿಮ್ಮಿದ
ಕಂಬನಿಗೆ ಆಗಲೇ ನನ್ನ ಪರಿಚಯವಾದದ್ದು

ಎಲ್ಲದರ ಕೊನೆಗೆ ಎಲ್ಲರೂ ಒಕ್ಕೊರಳಲ್ಲಿ
"Once more, once more"
ಅಂದಾಗ
ಮಂಡಿ ಸ್ವಾಧೀನ ಕಳೆದುಕೊಂಡು
ಕುಸಿದು ಬೀಳುತ್ತಲೇ
ಹಾಡಾಗದ ಹಾಡೊಂದು ಕಿವಿಯಲ್ಲಿ ಗುನುಗಲಾರಂಭಿಸಿತು

ನಾ ಹಾಡಲಿಲ್ಲ, ಲೋಕ ಮೆಚ್ಚಿತು
ನಾ ಹಾಡಲಿಲ್ಲವಾದದ್ದೇ ಒಳಿತಾಯಿತು!!

-- ರತ್ನಸುತ

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...