Friday 27 July 2012

ಸಂತೆಗುಂಟು ಚಿಂತೆ

Add caption
ಅಲ್ಲಿ ದಣಿದಿತ್ತು ಸಂತೆ
ನಿತ್ಯ ಜನ ಜಂಜಾಟವ ಹೊತ್ತು
ಕೊಳೆತವನ್ನೆಲ್ಲ ಮೂಲೆಯ ಮಡಿಲಲ್ಲಿರಿಸಿ

ಬಂದವರದೆಷ್ಟೋ, ಹೋದವರದೆಷ್ಟೋ,
ಯಾವೊಂದ ಲೆಕ್ಕ ಹಾಕದೆ ಹಾಗೆ ತೆರೆದು
ತನ್ನೊಡಲ ಅಂಗಾಂಗವನು ಧಾರೆಯೆರೆದು
ಲಾಭ ಚೀಲದ ಸ್ಪರ್ಶವಾದಂತೆ ನಕ್ಕು
ರೈತ ಬಂದುಗಳ ನಿಟ್ಟುಸಿರ ಹೊಕ್ಕು

ಸಾಕು ಸಾಕಾದ ಗ್ರಾಹಕರ ಬೀಳ್ಗೊಟ್ಟು
ಮರ ನೆರಳ ತಂಪಲ್ಲಿ ದಣಿವನ್ನು ಸುಟ್ಟು
ಚಿಣ್ಣರಿಗೆ ಉಯ್ಯಾಲೆ, ಜಾರೋಬಂಡಿಯಲಿ-
ಸಿಕ್ಕ ಖುಷಿಯನ್ನು ತನ್ನದೆಂದು ಭಾವಿಸಿ

ಮೋಸಗಾರರ ಮೋಸವನ್ನು ಕಂಡು ಬೇಸೆತ್ತು
ವೃಧರ ಪಾಡಿಗೆ ಕಣ್ಣೀರನಿತ್ತು
ಪೊದೆಗಳ ಸಾಲಲ್ಲಿ ನಿಶಬ್ಧ ಪ್ರಕರಣಗಳ
ಕೇಳಿಯೂ ಕೇಳಿಸದಂತೆ ನಾಚಿ

ಕೆಂಪಾದ ಬಾನಿನಂಗಳ ದೀಪದಲ್ಲಿ
ಇಟ್ಟ ಬೆವರನ್ನು ಕೊನೆ ಬಾರಿ ವೊರೆಸಿ
ತುಂಬಿದ ಜೇಬುಗಳ ಸರದಾರರೊರಟಿಹರು
ಯುದ್ಧ ಮುಗಿದು ಉಳಿದ ರಣರಂಗವನು ಬಿಟ್ಟು
ಸಂತೆಯಾಯಿತು ಮನೆಯ ನಿಸ್ಸಹಾಯಕ ಗೃಹಿಣಿ
ಮಕ್ಕಳ ಕ್ಷೆಮೋಪಚಾರವನು ಮಾಡಿ

ಬೀಳ್ಗೊಟ್ಟಿತಲ್ಲಿ ಜನ - ಜಾನುವಾರುಗಳ
ಮತ್ತೊಂದು ವಾರದ ಸರದಿಗೆ ಕಾದು
ಮಲಗುವಂತೆ ಮಾಡಿ ತೂಕಡಿಸಿ ಎದ್ದಿತು
ಸಂತೆ ಅಂಗಳಕೆ ಮತ್ತೊಂದು ರಂಗೆದ್ದಿತು.........

                              -- ರತ್ನಸುತ 

Thursday 26 July 2012

ಜೋಡಿ ಪದ

ಕದ್ದು ಮುಚ್ಚಿ ಸಂದೇಶವ ಎಷ್ಟು ಬಾರಿ ಕಳಿಸುವೆ?
ಮನ ಬಿಚ್ಚಿ ಎಲ್ಲ ಹಾಗೆ ಹೇಳಿ ಬಿಡಬಾರದೇ?
ಮುಚ್ಚು ಮರೆಯ ಸಂದೇಶ ನೀ ಮೆಚ್ಚುವ ಹುಡುಗನ
ತಲುಪೋ ಮುನ್ನ ಕಳೆಯಬಹುದು, ಅವನ ಮನವ ಸೇರದೆ...

ಎಷ್ಟೆಂದು ಕಟ್ಟಿ ಹಾಕುವೆ ಪದ ಮಾಲೆಯಲ್ಲಿ
ಒಂದೊಂದೇ ನುಲಿಯುತ ಬರೆದ ಅಕ್ಷರಗಳ
ಪತ್ರವೂ ಬೇಸೆತ್ತಿದೆ ನಿನ್ನ ಅಂಜಿಕೆ ಕಂಡು
ಬಾಯೊಂದಿದ್ದಿದ್ದರೆ ತನಗೆ, ನಿನ್ನ ಪಯಣ ಸರಳ!!

ನಡುದಾರಿಯ ನಡುರಾತ್ರಿಯ ಬೆಳದಿಂಗಳ ಹೊತ್ತಲಿ
ರವಾನಿಸಿದ ಸಂದೇಶ ಮತ್ತೊಂದ ಕಂಡು ಬಿರಿಯಿತು
ತನ್ನೊಡಲ ಹೃದಯ ಪದವ ಕಿತ್ತದರೆಡೆ ಇಟ್ಟು
ತನಗಿಷ್ಟವಾದ ಒಂದು ಪದದ ಬಯಕೆ ಹೆಚ್ಚಿತು


ದಿನಗಳುರುಳಿ ಕಳೆಯಿತಲ್ಲಿ ಪದ ಹಂಚುವ ದೆಸೆಯಲಿ
ಮಳೆಗೆ ನೆನೆದು ಮುದ್ದೆ ಕಟ್ಟಿ, ಒಣಗಿ ಹಾಗೆ ಬಿಸಿಲಲಿ
ಅಲ್ಲೊಂದು ರಸಗಳಿಗೆ ಸಂದೇಶಕೆ ಕಾದಿತ್ತು
ಪರ-ಸಂದೇಶ ತನ್ನದೆಂದದಕೆ ತಿಳಿಯಿತು


ಒಬ್ಬೊಬ್ಬರ ಗುಟ್ಟೊಬ್ಬರಿಗೆ ಮತ್ತೆರಿಸೋ ಪಾಣಕ 
ಇಷ್ಟರಲ್ಲೇ ಮುಗಿಯಲಿಲ್ಲ ಅವರ ಜನ್ಮ ಕಾಯಕ
ಕಾದಿದ್ದವು ಪಾಪ ನಿರೀಕ್ಷೆಯ ಹೊತ್ತ ಜೀವಗಳು
ನಡುವೆ ಸಂದೇಶಗಳ ಪ್ರಣಯ ಪ್ರತಿರೋದಕ

ಅಂತೂ ಪ್ರೇಮಿಗಳ ಸೇರಿಸಲು ಅವು ದೂರಾದವು
ಸೇರಬೇಕಾದ ತಮ್ತಮ್ಮ ಅಂಚೆಲಿಳಿದವು
ಓದುವವರು ಮುಗಿಸುವನಕ ಪತ್ರಕಲ್ಲಿ ಪರೀಕ್ಷೆ 
ಆನಂತರಕದಕೆ ತುಂಬು ಪ್ರೀತಿ ಮಡಿಲ ಸುರಕ್ಷೆ


ಹಂಚಿಕೊಂಡ ಪದಗಳು, ಇವನಿಗವಳ - ಅವಳಿಗಿವನ
ಪರಿಚಯ ಹೆಚ್ಚಿಸಿ ಪ್ರೇಮಾಂಕುರವಾಯಿತು
ಆಕೆ ಮಾತ್ರ ಬರೆದುದ್ದಲ್ಲ, ಈತನೂ ಬರೆದದೆಷ್ಟು ಬಾರಿಯೋ
ಅಂತು ಕಾಲ ಗೆದ್ದಿತು!!!


ತ್ಯಾಗವಾದ ಒಂದು ಪ್ರೀತಿ, ಲಾಂಛನ ಮತ್ತೊಂದಕೆ
ಪರಿಚಯ ಹೆಚ್ಚಾದಂತೆ ದೂರ ಸರಿದ ಹೆದರಿಕೆ
ಒಂದಾದ ಜೀವಗಳಲಿ ಎರಡು ಮನಕೆ ಒಂದೇ ಕದ
ಹೊಸ ಅಲೆಗೆ ಸ್ಪೂರ್ತಿಯಾಯ್ತು ದೂರಾದ ಜೋಡಿ ಪದ..............




                                                    --ರತ್ನಸುತ







Saturday 14 July 2012

ನೀನಿರಲು ಜೊತೆಯಲ್ಲಿ




ನಿನ್ನ ಸುತ್ತಿ ಬಂದ ನನಗೆ, ಲೋಕವೊಂದ ಸುತ್ತಿದಂತೆ
ಅಧ್ಭುತಗಳ ಎಕೀಕರಣವೇ ನಿನ್ನ ಸೃಷ್ಟಿ
ನಿನ್ನ ಮಾತ ಕೆಳಿದೆನಗೆ, ಭಾವ ಪ್ರವಚನೆ ಆದಂತೆ
ರಾಗ ರಸಗಂಗೆಯಲ್ಲಿ ಮೌನಕೆ ವಿಮುಕ್ತಿ

ನಿನ್ನ ಸಾವಿರದ ಸಾವಿರ ಹೆಜ್ಜೆ ಗುರುತುಗಳಿಗೆ
ನನ್ನ ಹಿಂಬಾಲಿಕೆಯಲ್ಲೊಂದು ಮಂದ ಬೆಳಕು
ನಿನ್ನ ಕಣ್ಣೋಟ ದಾಟಿ ಮೀರಿ ನಡೆದ ಹುಡುಕಾಟಕೆ
ಸಿಕ್ಕ ಪ್ರತಿಕ್ರಿಯೆಯ ಅಂಚಿನಲ್ಲೊಂದು ತೊಳಕು

ನಿನ್ನ ಮುನಿಸಿನಲ್ಲಿ ಬೆಂದ ನನ್ನಂತರಂಗ ವೃಂದಕೆ
ನೀನತ್ತಾರೆ ಕಂಬನಿಗೆ ಕೈ ಚಾಚುವ ತವಕ
ನೀ ಹಿಡಿದ ಕಿರು ಬೆರಳು ದಾರಿ ತೋರೋ ಗುರುವಾಗಿದೆ
ನೀನೇ ಮುನ್ನಡೆಸು ನನ್ನ ಗುರಿ ಸೇರುವ ತನಕ

ನೀ ತಾರದಿರುವ ಆ ಅಧ್ವಿತೀಯ ಉಡುಗೊರೆಯ 
ನೆನೆದೇ ಮಘ್ನನಾಗಬೇಕಿರುವ ಹಂಬಲ
ಎಡವಿಕೊಂಡ ಕಾಲ್ಬೆರಳಿಗೆ ಸಿಕ್ಕ ಗಾಯ ಗುರುತೆಷ್ಟೋ
ನಿನ್ನತ್ತ ಎಡವಿದಾಗ ಸಿಗದ ನೋವೆ ಚೊಚ್ಚಲ

ನೀ ನಡೆದೇ ಮೆಲ್ಲ ನನ್ನ ಮನಸಿನ ಮಧುಮಂಚಕೆ
ಸಿಂಗಾರ ಮಾಡಿಕೊಂಡು, ಶೃಂಗಾರವ ಅಪೇಕ್ಷಿಸಿ
ನೀ ಬಂದ ಮೇಲೆ ಎಲ್ಲ ಸಾಧಾರಣವೆನಿಸಿತು
ಎಲ್ಲಿ ಹೋಲಬಹುದು ಕಲ್ಪನೆಯ ಮೀರಿ ಮೆಚ್ಚಿಸಿ

ನೀ ಗುರುತಾದೆ ನನಗೆ, ನೀ ತೋರದೆ ಅಡಗಿಸಿಟ್ಟ-
- ಭಾವಗಳ ಬಂಡಾರಕೆ ನಾ ಆಳೊ ದೊರೆಯಾದೆ
ಸಿರಿವಂತಿಕೆ ಆಗಮಿಸಿ, ದಾರಿಧ್ರ್ಯ ನಿರ್ಗಮಿಸಿ
ನಿನ್ನಿಂದ ಬೆಳಗುವ ಜ್ಯೋತಿಗೂ ಸ್ಫೂರ್ತಿ ಸಿಕ್ಕಿದೆ.....

                                        --ರತ್ನಸುತ



Sunday 8 July 2012

ಲಕ್ಕಿ



ಹಾಲ ಬಟ್ಟಲಿಂದ ನಿನ್ನ ಅದ್ದಿ ತಗೆದರೇನು?
ನೋಡು ಇನ್ನು ಅಂಟಿದೆ ನಿನ್ನ ಕೆನ್ನೆ ಮೇಲೆ ಕೆನೆ
ಆಹಾ ಅದೆಷ್ಟು ಚುರುಕು ನಿನ್ನ ಕಣ್ಣೋಟ
ಕೃಷ್ಣೆಯಂತೆ ಮುದ್ದು ನೀನು, ಗೋಕುಲ ನಿನ್ನ ಮನೆ
ದೃಷ್ಟಿ ತಾಕದಿರಲು ಇಟ್ಟ ಬೋಟ್ಟಿಗೂ ದೃಷ್ಟಿ ತಾಕಿ
ಜ್ಯೋತಿ ಆಕಾರದಲ್ಲಿ ಹೊಳೆಯುತಿದೆ ಹಣೆ
ಬೆಳ್ಮುಗಿಲು ಕರಗುವಾಗ ತಾಳುವ ಬಣ್ಣದ ಕೇಶ
ಬಳ್ಳ ಮೀರಿ ತುಂಬಿದಂತೆ ಕಪ್ಪು ರಾಗಿ ತೆನೆ
ಪುಟ್ಟ ತುಟಿಗಳಿಂದ ಹೋರಡಲೆಂದು ಕಾದ ಮುತ್ತುಗಳು
ನಕ್ಕಾಗ ಸುರಿಯುತಾವೆ ನೋಡು ಸುಮ್ಮನೆ
ಬಿಕ್ಕಿ ಬಿಕ್ಕಿ ಅಳುವಾಗ ಕೆಂಪಾದ ಮಲ್ಲೆ ಮೂಗು
ಅರಳಿದ ಹೂವ ಹೊತ್ತ ಕನಕಾಂಬರ ಗೊನೆ.......

                                     --ರತ್ನಸುತ

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...