Add caption |
ನಿತ್ಯ ಜನ ಜಂಜಾಟವ ಹೊತ್ತು
ಕೊಳೆತವನ್ನೆಲ್ಲ ಮೂಲೆಯ ಮಡಿಲಲ್ಲಿರಿಸಿ
ಬಂದವರದೆಷ್ಟೋ, ಹೋದವರದೆಷ್ಟೋ,
ಯಾವೊಂದ ಲೆಕ್ಕ ಹಾಕದೆ ಹಾಗೆ ತೆರೆದು
ತನ್ನೊಡಲ ಅಂಗಾಂಗವನು ಧಾರೆಯೆರೆದು
ಲಾಭ ಚೀಲದ ಸ್ಪರ್ಶವಾದಂತೆ ನಕ್ಕು
ರೈತ ಬಂದುಗಳ ನಿಟ್ಟುಸಿರ ಹೊಕ್ಕು
ಸಾಕು ಸಾಕಾದ ಗ್ರಾಹಕರ ಬೀಳ್ಗೊಟ್ಟು
ಮರ ನೆರಳ ತಂಪಲ್ಲಿ ದಣಿವನ್ನು ಸುಟ್ಟು
ಚಿಣ್ಣರಿಗೆ ಉಯ್ಯಾಲೆ, ಜಾರೋಬಂಡಿಯಲಿ-
ಸಿಕ್ಕ ಖುಷಿಯನ್ನು ತನ್ನದೆಂದು ಭಾವಿಸಿ
ಮೋಸಗಾರರ ಮೋಸವನ್ನು ಕಂಡು ಬೇಸೆತ್ತು
ವೃಧರ ಪಾಡಿಗೆ ಕಣ್ಣೀರನಿತ್ತು
ಪೊದೆಗಳ ಸಾಲಲ್ಲಿ ನಿಶಬ್ಧ ಪ್ರಕರಣಗಳ
ಕೇಳಿಯೂ ಕೇಳಿಸದಂತೆ ನಾಚಿ
ಕೆಂಪಾದ ಬಾನಿನಂಗಳ ದೀಪದಲ್ಲಿ
ಇಟ್ಟ ಬೆವರನ್ನು ಕೊನೆ ಬಾರಿ ವೊರೆಸಿ
ತುಂಬಿದ ಜೇಬುಗಳ ಸರದಾರರೊರಟಿಹರು
ಯುದ್ಧ ಮುಗಿದು ಉಳಿದ ರಣರಂಗವನು ಬಿಟ್ಟು
ಸಂತೆಯಾಯಿತು ಮನೆಯ ನಿಸ್ಸಹಾಯಕ ಗೃಹಿಣಿ
ಮಕ್ಕಳ ಕ್ಷೆಮೋಪಚಾರವನು ಮಾಡಿ
ಬೀಳ್ಗೊಟ್ಟಿತಲ್ಲಿ ಜನ - ಜಾನುವಾರುಗಳ
ಮತ್ತೊಂದು ವಾರದ ಸರದಿಗೆ ಕಾದು
ಮಲಗುವಂತೆ ಮಾಡಿ ತೂಕಡಿಸಿ ಎದ್ದಿತು
ಸಂತೆ ಅಂಗಳಕೆ ಮತ್ತೊಂದು ರಂಗೆದ್ದಿತು.........
-- ರತ್ನಸುತ
No comments:
Post a Comment