Thursday, 26 July 2012

ಜೋಡಿ ಪದ

ಕದ್ದು ಮುಚ್ಚಿ ಸಂದೇಶವ ಎಷ್ಟು ಬಾರಿ ಕಳಿಸುವೆ?
ಮನ ಬಿಚ್ಚಿ ಎಲ್ಲ ಹಾಗೆ ಹೇಳಿ ಬಿಡಬಾರದೇ?
ಮುಚ್ಚು ಮರೆಯ ಸಂದೇಶ ನೀ ಮೆಚ್ಚುವ ಹುಡುಗನ
ತಲುಪೋ ಮುನ್ನ ಕಳೆಯಬಹುದು, ಅವನ ಮನವ ಸೇರದೆ...

ಎಷ್ಟೆಂದು ಕಟ್ಟಿ ಹಾಕುವೆ ಪದ ಮಾಲೆಯಲ್ಲಿ
ಒಂದೊಂದೇ ನುಲಿಯುತ ಬರೆದ ಅಕ್ಷರಗಳ
ಪತ್ರವೂ ಬೇಸೆತ್ತಿದೆ ನಿನ್ನ ಅಂಜಿಕೆ ಕಂಡು
ಬಾಯೊಂದಿದ್ದಿದ್ದರೆ ತನಗೆ, ನಿನ್ನ ಪಯಣ ಸರಳ!!

ನಡುದಾರಿಯ ನಡುರಾತ್ರಿಯ ಬೆಳದಿಂಗಳ ಹೊತ್ತಲಿ
ರವಾನಿಸಿದ ಸಂದೇಶ ಮತ್ತೊಂದ ಕಂಡು ಬಿರಿಯಿತು
ತನ್ನೊಡಲ ಹೃದಯ ಪದವ ಕಿತ್ತದರೆಡೆ ಇಟ್ಟು
ತನಗಿಷ್ಟವಾದ ಒಂದು ಪದದ ಬಯಕೆ ಹೆಚ್ಚಿತು


ದಿನಗಳುರುಳಿ ಕಳೆಯಿತಲ್ಲಿ ಪದ ಹಂಚುವ ದೆಸೆಯಲಿ
ಮಳೆಗೆ ನೆನೆದು ಮುದ್ದೆ ಕಟ್ಟಿ, ಒಣಗಿ ಹಾಗೆ ಬಿಸಿಲಲಿ
ಅಲ್ಲೊಂದು ರಸಗಳಿಗೆ ಸಂದೇಶಕೆ ಕಾದಿತ್ತು
ಪರ-ಸಂದೇಶ ತನ್ನದೆಂದದಕೆ ತಿಳಿಯಿತು


ಒಬ್ಬೊಬ್ಬರ ಗುಟ್ಟೊಬ್ಬರಿಗೆ ಮತ್ತೆರಿಸೋ ಪಾಣಕ 
ಇಷ್ಟರಲ್ಲೇ ಮುಗಿಯಲಿಲ್ಲ ಅವರ ಜನ್ಮ ಕಾಯಕ
ಕಾದಿದ್ದವು ಪಾಪ ನಿರೀಕ್ಷೆಯ ಹೊತ್ತ ಜೀವಗಳು
ನಡುವೆ ಸಂದೇಶಗಳ ಪ್ರಣಯ ಪ್ರತಿರೋದಕ

ಅಂತೂ ಪ್ರೇಮಿಗಳ ಸೇರಿಸಲು ಅವು ದೂರಾದವು
ಸೇರಬೇಕಾದ ತಮ್ತಮ್ಮ ಅಂಚೆಲಿಳಿದವು
ಓದುವವರು ಮುಗಿಸುವನಕ ಪತ್ರಕಲ್ಲಿ ಪರೀಕ್ಷೆ 
ಆನಂತರಕದಕೆ ತುಂಬು ಪ್ರೀತಿ ಮಡಿಲ ಸುರಕ್ಷೆ


ಹಂಚಿಕೊಂಡ ಪದಗಳು, ಇವನಿಗವಳ - ಅವಳಿಗಿವನ
ಪರಿಚಯ ಹೆಚ್ಚಿಸಿ ಪ್ರೇಮಾಂಕುರವಾಯಿತು
ಆಕೆ ಮಾತ್ರ ಬರೆದುದ್ದಲ್ಲ, ಈತನೂ ಬರೆದದೆಷ್ಟು ಬಾರಿಯೋ
ಅಂತು ಕಾಲ ಗೆದ್ದಿತು!!!


ತ್ಯಾಗವಾದ ಒಂದು ಪ್ರೀತಿ, ಲಾಂಛನ ಮತ್ತೊಂದಕೆ
ಪರಿಚಯ ಹೆಚ್ಚಾದಂತೆ ದೂರ ಸರಿದ ಹೆದರಿಕೆ
ಒಂದಾದ ಜೀವಗಳಲಿ ಎರಡು ಮನಕೆ ಒಂದೇ ಕದ
ಹೊಸ ಅಲೆಗೆ ಸ್ಪೂರ್ತಿಯಾಯ್ತು ದೂರಾದ ಜೋಡಿ ಪದ..............




                                                    --ರತ್ನಸುತ







No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...