Friday 28 December 2012

ನಾ ಕಂಡ ಇಬ್ಬನಿಯ, ಕಾಣದ ಕಥೆ





















ಹೂಗಳ ಕಣ್ಗಳ ದಳಗಳ ತುದಿಗೆ
ಏಕೆ ಜಾರದೆ ಉಳಿದೆಯೇ ಇಬ್ಬನಿ!!?
ನವಿರು ಒಡಲ ಜರಿದೆ ನೀರಾಗುತ
ಹೊಸ್ತಿಲಲುಳಿದೆಯಾ ಚಿಂತಿಸಿ ನೀ!!?

ತಡೆಯಿತು ಪಾಪ ಹಿಡಿಯುತ ದಳವು
ಬಿಟ್ಟ ಗುರುತುಗಳ ಅಳಿಸುತಲಿ
ಜಾಡಿಸಿ ಒದ್ದೆ ಕೋಮಲ ಮಡಿಲ,
ಅಳಿಸದ ಗುರುತನ್ನಿಡಿಯುತಲಿ

ಹುಟ್ಟಿಸಿ ತಪ್ಪಿಗೆ, ಬಿಕ್ಕಲು ಕೊಡದೆ
ಹಿಡಿದಿಟ್ಟಿತು ದುಃಖದ ಹೊರೆಯ
ಒರಟಿಗೆ ನೀನು ಸಿಕ್ಕಿದರೆ
ಶಪಿಸುತಲಿ ತಡೆಗಟ್ಟಿದ ಪೊರೆಯ

ವಾಲಾಡುವೆ ತುಸು ಮೆಲ್ಲನೆ ಗಾಳಿಗೆ
ಹಿಂಗುವ ಅವಸರವೇ ನಿನಗೆ?
ಮಿಟುಕಿಸದೆ ಕಣ್ತೆರೆದು ನೋಡಿವೆ
ದಳಗಳು ನಿನ್ನನು ಕೊನೆಗಳಿಗೆ

ಜಾರಿದವೆಷ್ಟೋ ಮಣ್ಣಿನ ಒಡಲಿಗೆ
ಹಾರಿದವೆಷ್ಟೋ ಪಕ್ಕದ ಮಡಿಲಿಗೆ
ನೀನಾದರು ಮಿನುಗಿ, ಸಿಂಚನವಾಗುವೆಯಾ,
ಅಂಜನವಾಗುತ ಹೊತ್ತವುಗಳಿಗೆ?

ಮತ್ತೇ ಹೊಸದಾಯಿತು ಮುಂಜಾನೆ
ಮತ್ತೇ ಬಸಿರಾದವು ತರು ಲತೆಗಳು
ಮತ್ತೆ ಸಂದಿಸುವ "ಋಣವಿದ್ದರೆ"
ಮಂಜಿನ ಮುಸುಕಿನ ಬೆಳಕಿನೊಳು........

                                  --ರತ್ನಸುತ

Friday 21 December 2012

ಹೆಣ್ಣೇ!!!....... ಕವಿಯಾಗಿಸಿದೆ ನನ್ನ??


























ಬೆನ್ನುಡಿಯಾಗುವೆ ಏಕೆ ಬಾಲೆ?
ನನಗಿಲ್ಲ ಮುಂದೊಂದು, ಹಿಂದೊಂದು ಕಣ್ಣು
ಬರೆಯಿಸಿಕೊಳ್ಳಲು ನನಗಿಲ್ಲ ಚಿಂತೆ
ಬೇಸರ ಇಷ್ಟೇ, ಓದಲಾಗದಲ್ಲ ಅದನ್ನು !!

ಆಟವಾಡುವೆ ಸರಿ, ಬಾರಿ ಘಟಿ ನೀ
ಅದರಲ್ಲೂ, ಕಣ್ಣಾ-ಮುಚ್ಚಾಲೆಯಲಿ ಫಟಿಂಗಿಣಿ
ಕಟ್ಟಿರುವೆ ಬಟ್ಟೆಯ ಕಣ್ಮುಚ್ಚಿಸಿ ನನಗೆ
ಪರಿಣಿತ ನಾನಲ್ಲ, ಸೋಲುವುದು ಖಂಡಿತ, ಕೇಳೆ ತರುಣಿ!!

ಮೆಚ್ಚಿ ನಾ ಬರೆದ, ಒಂದೊಂದು ಪದವೂ
ಚುಚ್ಚು ನಿಂದನೆಯ ಹೊತ್ತು ಛೆಡಿಸಿವೆ ನನ್ನ
ನಿನ್ನ ನೆರಳೆನಾದರೂ ಸೋಕಿತೇ ಅದಕೆ,
ಹಾಗೆ ಸ್ವಭಾವಿಸಲು ಹೋಲುತ ನಿನ್ನ ??!!

ಹಾಗೊಮ್ಮೆ ಬಿಟ್ಟ ಗುರುತನ್ನೂ ಅಳಿಸಿ ಹಾಕುವೆ
ಯಾವುದೇ ಸೂಕ್ಷ್ಮ ಸುಳಿವನ್ನೂ ನೀಡದೆ
ಮೈ ತುಂಬ ಕಣ್ಣು, ಕಿವಿ, ಮೂಗನ್ನು ಇರಿಸಿದೆ
ಹೇಗಾದರೂ ನಿನ್ನ ಸ್ಪರ್ಶಿಸುವ ಸಲುವೇ

ಪಾದ ಕಿರು ಬೆರಳಿಗೆ, ಹೆಬ್ಬೆರಳ ಕಾಟ
ರಂಗೋಲಿ ಬಿಡಿಸಲಾರಂಬಿಸಲು ಪೀಕಲಾಟ
ಹಿಂಬಾಲಕನಾಗುವುದು ಅದಕಿಡದ ಮೀಸಲು
ಗಂಡಸ್ತಿಕೆಯ ಪ್ರಶ್ನಿಸುವ ಗೊಂದಲಾಟ

ಉದುರಿದೆ ಕೇಶ, ವಯಸ್ಸನು ಹೆಚ್ಚಿಸಿ
ಮುದುಡಿದೆ ಅದರವು ಮೌನವನು ಸೂಚಿಸಿ
ಸಂಕೋಚದ ಅಲೆಗಳು ಮನವ ತಟ್ಟಿವೆ
ತೀರದಲಿ ಗೀಚಿದ ಬಯಕೆಗಳ ಅಳಿಸಿ

ಇನ್ನಾದರು ತುಂಬು ಬಾ, ಮುನ್ನುಡಿಯ ಹಾಳೆ
ನಾನಾಗುವೆ ಫಲಕ,ನೀ ಪ್ರಣಯ ಶಾಲೆ
ಕೈಯ್ಯಾರೆ ತಿದ್ದು ನೀ ನನ್ನ ಮಡಿಲಕ್ಷರವ
ಕವಿಯೇ ನಾ, ನೀ ಮೆಚ್ಚುಗೆಯ ಕವಿತೆ ಮಾಲೆ......


                                               --ರತ್ನಸುತ

Tuesday 11 December 2012

ಹೊಸತಾಗಲಿ ಕನ್ನಡಕೆ ಹೊಸ ವರುಷ

ಹೊಸ ವರುಷದ ಹೊಸ ಕನಸಿನ ಕವನ
ಹೊಸತನ ತರುವುದೇ ಹೊಸಬರ ಮಿಲನ?
ಹೊಸ ಬರವಸೆಯಲ್ಲಿ, ಹಸಿರಾಗಿ, ಚಿಗುರಲಿ ನಮ್ಮತನ
ಹೊಸ ಆಲೋಚನೆಯ, ಆಚರಣೆ, ಆಗಿಸುವ ಸುದಿನ

ಹೊಸ ವರುಷದ ಹೊಸ ಹಸಿವಿನ ಕವನ
ಕನ್ನಡಿಗರೇ ಇರಲಿ ನುಡಿ ಗಮನ!!


ಅಭಿರುಚಿಗಳ ಬೆಳೆಸಿ
ನವರಸಗಳ ಬೆರೆಸಿ
ಸವಿಯಾದ ನುಡಿಯ ಹಿರಿಮೆ ಸಾರೋಣ
ಅನುಬಂಧವ ಬಿಗಿಸಿ
ಅಭಿಮಾನವ ತೋರಿಸಿ
ಕನ್ನಡಿಗರು ನಾವು ಒಂದೇ ಅನ್ನೋಣ

ಒಂದೇ ನಾಡಿನ, ಒಂದೇ ಹಾಡಿನ, ಪದಗಳ ಹೂರಣ
ನಾನು ನೀನು ನಾವಾಗೋಣ, ನೋವೋ ನಲಿವೋ ಜೊತೆಯಾಗೋಣ
ತನು, ಮನಗಳ ತುಂಬಿಸೋಣ

ಹೊಸ ವರುಷದ ಹೊಸ ಕದನದ ಕವನ
ಗೆಲುವಿಗೆ ಬೇಕಿದೆ ಸ್ವಾರ್ತದ ಮರಣ
ಒಲವಿನ ಬಲವನ್ನ, ಛಲವನ್ನ, ಎಲ್ಲೆಡೆ ಹಂಚೋಣ
ನಾಳೆಯ ನಮ್ಮವರ, ನಮ್ಮೆದೆಯ ಮೇಲ್ಗಡೆ ಮೆರೆಸೋಣ

ಹೊಸ ವರುಷಕೆ ಹರಿಯಲಿ ಹೊಸ ಕಿರಣ
ಆಗಲಿ ಕನ್ನಡತನದ ಹೊಸ ಜನನ...................

                                         --ರತ್ನಸುತ

Saturday 8 December 2012

ಹೀಗೂ ಒಂದು ಕವನ!!!??

























ಮೌನವೇ ರಾಗ, ಏಕಾಂತವೇ ಭಾವ
ನಡುವೆ ಒದ್ದಾಟವೇ ಒಂದು ಹಾಡು 
ಗೀಚುವುದೇ ಸಾಲು, ತೋಚುವುದೇ ಪದ್ಯ 
ಹೀಗಿದೆ ಏಕಾಂಗಿ ಕವಿಯ ಪಾಡು 

ಕಂಡದ್ದೇ ಸ್ಪೂರ್ತಿ, ಅಂದುಕೊಂಡದ್ದೇ ಅರ್ಥ 
ತಾನಾಗೆ ಹರಿದ ಅಕ್ಷರದ ಕಾಲುವೆ 
ಮಿಂದಷ್ಟೇ ಖುಷಿ, ಸಹಿಸಿಕೊಂಡಷ್ಟೇ ಸಹನೆ 
ತೂಗಾಡಿ ಕಟ್ಟಿಕೊಂಡ ಪದಗಳ ಸೇತುವೆ 

ಬಂದಷ್ಟೇ ನಿದ್ದೆ, ತಿಂದಷ್ಟೇ ಹಸಿವು 
ಬಾರದ ನೆನಪುಗಳ ಕಣ್ಣಾ ಮುಚ್ಚಾಲೆ 
ಸಿಕ್ಕಷ್ಟೇ ಗೆಲುವು, ಸಾಕಷ್ಟು ಸೋಲು 
ಒಂದಿಷ್ಟು ತಿದ್ದುಪಡಿ ಹಾಳೆ ಮೇಲೆ 

ಒತ್ತಾಯದ ಸಮಯ, ಅದೇ ಹಳೆ ವಿಶಯ 
ಮಂಕಾದ ವಿಸ್ತಾರದಾವರಣ ಸುತ್ತ
ಮಾಡೆಂದು ಬಿಟ್ಟದ್ದ; ಬಿಟ್ಟು ಬೇರೆಲ್ಲ-
-ಯೋಚನೆಯ ಸೂಚನೆ ನೀಡುವ ಚಿತ್ತ

ಅಲ್ಲೊಂದು ಸದ್ದು, ಆ ಕಿವಿಯ ವೊದ್ದು 
ಗಮನವ ಸೆಳೆಯುವ ಧುಸ್ಸಾಹಾಸ ಯತ್ನ 
ಕವಿ ಕಿವುಡನಲ್ಲ, ಆದರೂ ಸ್ಪಂದಿಸದೆ 
ಮುಂದುವರಿಸಿದ ಅವನ ನಿರಾಕಾರ ಸ್ವಪ್ನ 

ಮುಗಿದಿತ್ತು ಬರಹ, ಮಳೆ ಹನಿಯ ತರಹ 
ಭೂಮಿಯ ದಾಹವ ನೀಗಿಸದ ಹಾಗೆ 
ಹಣೆಯಿಟ್ಟು ಬೆವರ, ಜಾರಲು ಬಿಡದೆ 
ಒಡಲಲ್ಲೇ ಕೂಡಿಟ್ಟುಕೊಂಡರೆ ಹೇಗೆ?
ಜಾರಲು ಬಿಡಿ ಯಾವುದಾದರು ರೂಪ ತಾಳಲಿ, ಈ ಕವಿತೆ ಹಾಗೆ......

                              --ರತ್ನಸುತ 

Friday 7 December 2012

ಆಸೆಯ ಭಾವ ಒಲವಿನ ಜೀವ {ನಕಲು ಪದ್ಯ}

























ಕಾವ್ಯದ ಪ್ರೀತಿ, ಪ್ರಾಸದ ಕ್ರಾಂತಿ
ಹಾಡಾಗಿ ಹೊಮ್ಮಿದೆ
ಹಾಡುತ ಸೋಲಿಸುವವಳೆಲ್ಲೆಂದು ಕೇಳಿದೆ


ಕಾವ್ಯದ ಪ್ರೀತಿ, ಪ್ರಾಸದ ಕ್ರಾಂತಿ
ಹಾಡಾಗಿ ಹೊಮ್ಮಿದೆ    {೧}


ಆಸೆಯ ದೋಣಿಯಲಿ ಹೂವಿನ ಹಾಸಿಗೆಯ
ಮಡಿಲಲಿ ಕನಸಿಗೆ ಜಾಗವು ಎಲ್ಲಿದೆ
ಒಂಟಿ ಯಾನದಲಿ ಪ್ರಾಯದ ಬಿಂದಿಗೆಯು
ಅರೆ-ಬರೆ ತುಂಬಿದೆ, ಕುಲುಕಲು ಚೆಲ್ಲದೇ?
ಕಡಲಿಗೂ ಇಂಥ ಒಂಟಿ ದೋಣಿ ಯಾನ ಬೇಡವಾಗಿದೆ.......

ಕಾಣದ ಶಾಂತಿ, ಕಾಮನೆ ಮೀಟಿ
ಮೀನಾಗಿ ಹೋಗಿದೆ
ಮನದ ಸರೋವರವು ಈಜುಗೊಡದೆ ತೆರೆದಿದೆ


ಕಾವ್ಯದ ಪ್ರೀತಿ, ಪ್ರಾಸದ ಕ್ರಾಂತಿ
ಹಾಡಾಗಿ ಹೊಮ್ಮಿದೆ     {೨}


ಕಲ್ಲಿಗೆ ಸ್ಪರ್ಶಗಳ ಸ್ಪಂದನೆಯಾಗಿರಲು
ಸೋಕದ ಬೆರಳಿಗೆ ಕಾಯುತ ನಿಂತಿದೆ
ನಾಚುವ ಕಲೆಯನ್ನು ತಾ ಕಲಿತಾಗಿರಲು
ನಿನ್ನಯ ಸೋಕಿಗೆ ಕರಗಿ ನೀರಾಗಿದೆ
ಹೆಸರಿಗೆ ಮಾತ್ರವಲ್ಲಿ ಕಲ್ಲು ಶಿಲೆಯ ಗುರುತು ಉಳಿದಿದೆ.....

ನೆರಳಿಗೆ ನಾಟಿ, ನನ್ನನೆ ದಾಟಿ
ನಿನ್ನಲ್ಲಿ ಸೇರಿದೆ
ಸವಿದ ಜೆನಿಗೂ ಸಿಹಿ ನೀನೆಂದು ಸಾರಿದೆ.....


ಕಾವ್ಯದ ಪ್ರೀತಿ, ಪ್ರಾಸದ ಕ್ರಾಂತಿ
ಹಾಡಾಗಿ ಹೊಮ್ಮಿದೆ     {೩}



                                --ರತ್ನಸುತ

Tuesday 4 December 2012

"ಚಂದುಟಿಯ ಪಕ್ಕದಲಿ" ನಕಲು ಪದ್ಯ
















ಅಂಬರದ ಅಂಗಡಿಗೆ, ಆಟಿಕೆಯ ತಾರೆಗಳ
ಕೊಟ್ಟು ಬರುವ ಜೊತೆಗೆ ಬರ್ತೀಯಾ?
ನಡುವೆಲ್ಲೋ ಕಳೆದ್ಹೊಗಿ, ನಾ ಉಗುರು ಕಚ್ಚಿದರೆ
ಹಿಂದಿರುಗದೆ ಪಕ್ಕ ಇರ್ತೀಯ?

ಸಹವಾಸ ಸಾಕಾದ್ರು ನಗ್ತೀಯ?
ವನವಾಸ ಅಂದ್ರೂನು ಒಪ್ತೀಯ?
ಏನಾದ್ರೂ ನೀ ನನ್ಗೆ ಸಿಕ್ತೀಯ?

ಅಂಬರದ ಅಂಗಡಿಗೆ .......... {೧}

ನೀ ತೀಡಿದ ಕಾಡಿಗೆಯ ಕಪ್ಪು ನನ್ನನು-
-ನಾಚಿಸಿದೆ ನಿನಗದರ ಸುಳಿವಾದ್ರು ಸಿಕ್ತಾ?
ಕಣ್ತುಂಬ ಕನಸನ್ನು ನೀ ತುಂಬಿಕೊಂಡಿರಲು
ನಾ ಕೊಟ್ಟ ಕನಸಿಂದ ಕಣ್ಣೀರು ಬಂತಾ?

ಬೈದಾದ್ರು ಸರಿ ಮಾತಾಡ್ತೀಯ?
ತಡವಾದ್ರು ಒಂದ್ಚೂರು ಕಾಯ್ತೀಯ?
ಇಷ್ಟೆಲ್ಲಾ ಆದ್ಮೇಲು ನಂಬ್ತೀಯ?


ಅಂಬರದ ಅಂಗಡಿಗೆ .......... {೨}

ಹೊತ್ತಲ್ಲದ್ಹೊತ್ತಿನಲ್ಲಿ ನಿದ್ದೆ ಬರುತಿರಲಿಲ್ಲ
ನಿನಗೂನು ಹೀಗೆಲ್ಲ ಆಗಿದ್ದು ಉಂಟಾ?
ಸಲಿಗೆಯ ನೆಪದಲ್ಲಿ ಕಾಲೆಳೆಯುವ ಆಸೆ
ಕರೆಯದಿರು ನೀ ನನ್ನ "ಛಿ ಪೋಲಿ ತುಂಟ"

ಪ್ರಶ್ನೆಗೆ ಪ್ರಶ್ನೇನ ಕೇಳ್ತೀಯ!!
ಕೊಡೊ ಉತ್ರ ಸರಿ ಇಲ್ಲ ಅಂತೀಯ!!
ನಾ ಸೋತ್ರೂ ನೀನ್ಯಾಕೆ ಅಳ್ತೀಯ?


ಅಂಬರದ ಅಂಗಡಿಗೆ .......... {೩}

ಓಡಾಡದೆ ಸುಮ್ನೆ ಒಂದೆಡೆಗೆ ಕೂತ್ಕೊಂಡು
ಇತ್ಯರ್ಥ ಮಾಡೋಣ ನಮ್ಮಿಬ್ರ ಪ್ರೀತಿ 
ಒದ್ದಾಡದೇ ಒಳ್ಗೆ ಎಲ್ಲಾನು ಹಂಚ್ಕೊಂಡ್ರೆ
ಸ್ವಲ್ಪ ಸುದಾರ್ಸುತ್ತೆ ನಮ್ಗಳ್ ಪಜೀತಿ 

ಜಂಬಾನ ಪಕ್ಕಕ್ಕೆ ಇಡ್ತೀಯ!!
ತನ್ಪಾಡಿಗ್ ಪ್ರೀತಿನ ಬಿಡ್ತೀಯ!!
ನಾ ಸಾಯ್ದೆ ನೀ ಹೇಗೆ ಸಾಯ್ತೀಯ?.......

ಅಂಬರದ ಅಂಗಡಿಗೆ .......... {೪}


                                                    --ರತ್ನಸುತ

Saturday 1 December 2012

ನಾ ನೆನೆದು ಸೋಲುವೇನು
ನಿನ್ನ ಕಿರುನಗೆಯ, ದಿನ ಹೀಗೆ
ನಾ ಕರೆದು ಕಾಯುವೆನು
ನಿನ್ನ ಪ್ರತಿದ್ವನಿಗೆ, ಸದಾ ಹೀಗೆ

ಇರುಳು ಹರಿಯುವ ಸೂಚನೆ ನಿದಾನಿಸ ಬೇಡವೇ
ಕಾದು ಪಡೆದಿರೋ ಪ್ರೀತಿಯ ಸಂಬಾಳಿಸ ಬೇಡವೆ?

ನಾ ನೆನೆದು..................
................................
................................
...................., ಸದಾ ಹೀಗೆ

ನಿನ್ನ ಒಪ್ಪಿಗೆ  ಪಡೆಯಲು ನಾನಾಗುವೆ ನಾಸ್ತಿಕ
ಪೂಜೆ ಮನದಲಿ ನಿನ್ನದೇ ಈ ಉಸಿರಿನ ಮೂಲಕ.....{೧}


ನೋವು ಸಹಜ ಬಿಡು, ಬಾಳ ದಾರಿಯಲಿ
ಬೇಗ ಕೈಯ್ಯ ಹಿಡಿ, ಪ್ರೆಮದೂರಿನಲಿ
ಕಾಲ ಸರಿಯುವ ಮುನ್ನವೇ ತಯಾರಿಸು ಮನಸನು
ಓಡಿ ಹೋಗಲು ಒಪ್ಪಿಗೆ, ನೀ ಕೇಳದೆ ಯಾರನು...... {೨}


ನಾ ನೆನೆದು ಸೋಲುವೇನು.............


Friday 30 November 2012

ಕತ್ತಲು - ಬೆಳಕಿನಾಟ

ದೂರ ನಿಂತೆ ಏಕೆ ನನ್ನತನದ ನೇರಳೆ?
ನಿನ್ನ ಹುಡುಕೋ ಸಲುವೆ ನನ್ನ ಬಿಟ್ಟು ಬರಲೇ?
ಎಷ್ಟು ನಟಿಸುತೀಯೆ? ಇದುವೇ ನಿನ್ನ ಸ್ಥಾನ
ಶಬ್ಧವಿಲ್ಲ ಎಲ್ಲೂ, ಪರಿಚಯಿಸಲು ಮೌನ

ಕತ್ತಲಾಚೆ ಒಂದು ಮುರಿದ ಬೆಳಕ ಬಿಲ್ಲು
ವ್ಯರ್ಥವಾಗಿ ಪಕ್ಕ ಉಳಿದ ಒಂಟಿ ಬಾಣ
ನೆರಳಿನಾಟವಾಡಿಸೋಕೂ ಬೇಕು ಬೆಳಕು
ಆಗದಿರಲಿ ಕುರುಡುತನದ ಅನಾವರಣ

ಬೆಚ್ಚಿ ಬಿದ್ದ ಮಗುವ ಹಿಡಿಯೆ ಬಿಟ್ಟು ಅಂಗೈ
ತಾಯಿ ಊಹೆಗೈಯ್ಯ ಬೇಕೇ ಅದರ ನಗುವ?
ಮಗುವಿಗಿಷ್ಟು ಸಾಲುತಿಲ್ಲ ಬೇಕು ಎದೆ
ತಬ್ಬಿ ಬೆಚ್ಚಗಿರಲು, ನೀಗಿಸೋಕೆ ಹಸಿವ

ನಟ್ಟ ನಡುವೆ ನೆಟ್ಟ ತುಳಸಿ ದಳದ ಹಸಿರು
ಕತ್ತಲಲ್ಲಿ ಕಪ್ಪು ತಾಳಿ ನಿಂತ ಜೀವ
ತೀರ್ಥ ಸುರಿದು ಕಡ್ಡಿ ಗೀರಿ ಉರಿಸಿ ದೀಪ
ಗೂಟ ಮುದುಡಿದೆ ಎದುರು ನೋಡಿ ಕಾವ

ಎಷ್ಟು ದೂರ ಚಲಿಸಲೆಂತು ಪ್ರಯೋಜಕ
ಮುಳ್ಳು ಮತ್ತೆ ಮರಳಬೇಕು ಆದಿ ಗೆರೆಗೆ
ಲೆಕ್ಕಿಸಿದವರಿಲ್ಲ ಅದರ ಸುತ್ತು ಪಯಣ
ಧಿಕ್ಕಾರವಿಟ್ಟಿತದಕೆ ಕತ್ತಲಿಗೆ

ತಮ್ಮ ತಾವೆ ಹುಡುಕುವಾಟ ಆಡಿ ಎಲ್ಲ
ಗೆದ್ದೆವೆಂದುಕೊಂಡರೂ ಗೆದ್ದವರು ಇಲ್ಲ!!
ಮತ್ತೆ ಹುಟ್ಟಿ ಬರಲಿ ಬರವಸೆಯ ಸೂರ್ಯ 
ಸೆರೆ ಮಾಡಲಿ ಕತ್ತಲನ್ನು ಬೆಳಕ ಜಾಲ......

                                               -ರತ್ನಸುತ  

Saturday 24 November 2012

ಪಬ್ಲಿಕ್ ಪ್ರೇಮಿಗಳು















ಎಲ್ಲೋ ಹಲ್ಲಿಗಳು ಲೊಚಗುಡುವ ಸದ್ದು 
ಗೋಡೆಗಳೇ ಕಾಣದ ಸುತ್ತಲಿನ ಬಯಲು 
ಕಿವಿಗೊಟ್ಟು ಆಲಿಸಿ ಹಿಂಬಾಲಿಸಿದೆ ಧನಿಯ 
ಕಂಡದ್ದು ಮೈ ಮರೆತ ಪಬ್ಲಿಕ್ ಪ್ರೇಮಿಗಳು 

ಯಾರ ಹಂಗೂ ಇರದ ಅವರ ಸಾಂಗತ್ಯ
ಬಿಗಿ ಅಪ್ಪುಗೆಯ ಬಿಡಿಸಲೆಂತು ಸಾಧ್ಯ!! 
ತುಟಿಗಳನೆ ನಾಚಿಸಿ ಮರೆಯಾಗಿಸಿದೆ ಅಲ್ಲಿ 
ಚುಂಬನದ ಒತ್ತು, ಇಡೀ ಕಣ್ಣಿಗೆ ಬಿತ್ತು 

ಮಘ್ನತೆಯ ಆಳ, ಪ್ರೇಮಾನುಭವದೆತ್ತರ
ವ್ಯಕ್ತ ಪಡಿಸುವ ಪರಿಗೆ ನಾಚುವುದು ಅಕ್ಷರ 
ಆಗಾಗ ಮಾತಿಗೆ ಗೋಚರಿಸಿದ ತುಟಿ 
ಮತ್ತೆ ಸೆರೆಯಾಯಿತು ಮತ್ತೊಂದು ಮುತ್ತಿಗೆ 

ಒಂದೊಮ್ಮೆ ಹೀಗಿದ್ದು ಹಾಗೆ ಬದಲಾಗಿತ್ತು 
ಸಹಜ ಸ್ತಿತಿಗೆ ಅವರವರ ನಡುವಳಿಕೆ 
ನನ್ನ ಅಲ್ಪ ಆಲೋಚನೆಯ ಪ್ರಶ್ನಿಸುತ್ತಿದ್ದೆ
ಮತ್ತೆ ಪುನರಾವರ್ತಿಸಿದಳಾ ಕನ್ನಿಕೆ 

ಕೈಗಳು ತಡವಡಿಸಿದವು ಬರೆಯಲೆಂದು 
ಅಪಹಾಸ್ಯದ ಮೊರೆ ಹೋಗದಿರೆಂದು
ಹೇಳಿಕೊಂಡೇ ಹಿಡಿದೆ ಮನಸನೂ, ಲೇಖನಿಯನೂ
ಹೀಗೆ ಪದವಾಗಿ ಉಧ್ಭವಿಸಿತು ತುಂಟ ಕಾವ್ಯವೊಂದು 

ನಮ್ಮಲ್ಲಿ ಪ್ರೇಮಿಗಳ ಗುಟ್ಟೇ ಪ್ರೀತಿ 
ಗುಟ್ಟು ರಟ್ಟಾದರೆ ಆಗುವುದು ಪಜೀತಿ 
ಪಜೀತಿ ಮಾಡಿಕೊಳ್ಳುವುದೇ ಪ್ರೀತಿಯಾಗಿದೆ ಇಲಿ (ಪಶ್ಚಿಮ ದೇಶಗಳಲ್ಲಿ)
ರೂಢಿಯಾಗಿರುವ ಮಂದಿಗೇಕೆ ಪಂಚಾಯ್ತಿ........


                                              -- ರತ್ನಸುತ 


Saturday 27 October 2012

ಪ್ರಣಯ ಹಾದಿಯಲಿ














ಸ್ಮರಣೆಯಲ್ಲೇ ಸೋಲುವ 
ವಿಚಿತ್ರ ಖಾಯಿಲೆಯ ಮನಸ್ಸು 
ಜಾಗರಣೆಯಲ್ಲೂ ಮೂಡುವ
ವಿಪರೀತ ಬಂಗಿಯ ಕನಸು 
ರೇಖೆಗಳಿಗಿಟ್ಟ ಗುಂಪು - ಗುಂಪಾದ,
ಆಕಾರ ಚಿತ್ರ
ಹಾಗೊಮ್ಮೆ- ಹೀಗೊಮ್ಮೆ ಗೀಚಿ,
ಮುಗಿಸಿದ ಪತ್ರ 

ಸೋತ ಗಾಳಿಗೂ ಸೋತ ಕಾಗದ 
ಗೆದ್ದೆನೆಂದಿತು ಹಾರುತ 
ಇಟ್ಟ ಪದಗಳ ಭಾವ ಬಾರವೂ 
ಗಾಳಿಯಲ್ಲಿ ಹಗುರಾಗುತ
ತೇಲಿ ಹೋಯಿತು ಸರಿ,
ಸರಿಯಾದ ದಿಕ್ಕಿನೆಡೆ ಸಾಗೀತೇ?
ಹೇಳಲಾಗದ ಕೋಟಿ ಮಾತಿಗೆ 
ನಿರಾಯಾಸವು ಒದಗೀತೇ?

ಹಾಗೇ ಕೆಡವಿದ ಮಣ್ಣ ರಾಶಿಯ 
ಶಿಲ್ಪಿ ಕಲೆಯೆಂದು ಕರೆದರು 
ಒರಟುತನದಲೂ ಮೃದುಲ ಮನಸಿಗೆ 
ಜಾಗವಿದೆ ಅಂತಂದರು 
ಹೀಗೆ ಅಂದವರು ಒರಟರಲ್ಲದೆ 
ಹೇಗೆ ಹೇಳಿಯಾರು ಪಾಪ?
ನನ್ನಂತವರ ಹುಚ್ಚನೂ
ಪ್ರೀತಿ ಎಂಬವರು ಅಪರೂಪ

ಹೆಣ್ಣು ಅಪ್ಸರೆ, ಗಂಡು ತಿರುಕನು 
ಹೆಚ್ಚೆಂದರೆ ಬೀರುವಳು ನೋಟದ ಬಿಕ್ಷೆ 
ಸಾಧ್ಯವಾದರೆ ಅಂತರಂಗಮಂದಿರದಲಿ 
ಪ್ರಣಯ ಪ್ರದರ್ಶಿಸುವಪೇಕ್ಷೆ
ಬಂದ ಲಾಭವೂ ಅವಳದ್ದೇ 
ಆದ ನಷ್ಟವೂ ಅವಳದ್ದೇ 
ರಂಗನಾಟಕೀಯ ಪ್ರಮುಖ ಪಾತ್ರ ಅವಳದ್ದೇ 
"ಅವಳೇ ರಂಗನಾಯಕಿಯು"

ಕಾಡಿಯಾಗಿದೆ, ಬೇಡಿಯಾಗಿದೆ 
ಕೊನೆಗೂ ಸಿಕ್ಕದ್ದು ಅರ್ಹ ಸೊನ್ನೆ 
ಒಲಿಸ ಬೇಕಿದೆ ದೇವಕನ್ಯೆಯ 
ರಾಕ್ಷಸ ರೂಪದಿ ಒಲಿಸುವೆನೇ?
ವೇಷ ಭೂಷಣ ತಕ್ಕ ಮಟ್ಟಿಗಿದೆ 
ಇನ್ನಾಗಬೇಕು ಮನಃ ಪರಿವರ್ತನೆ
ಕಲ್ಲು ಹೃದಯವ ಕರಗಿಸೋಕೆ
ದಿನ-ರಾತ್ರಿ ಕಲ್ಲಿಗೇ ಪ್ರಾರ್ತನೆ.........

                                  --ರತ್ನಸುತ

Saturday 13 October 2012

ಮೂರ್ಕಾಸು ಬೆಲೆಗಿಲ್ಲ ಪಗಾರ


















ನಗುತಿವೆ ನೋಡುತ ನನ್ನ,  ನಾ ತಗೆದ ನಿರ್ಧಾರಗಳು
ತೊಟ್ಟ ಚಡ್ಡಿ ಉದುರುತಿದೆ, ಎಲ್ಲೋ ಬಿಗಿದಿರಲು ಉಡ್ದಾರಗಳು
ಬಾಗಿ ಪಡೆದದ್ದು ಸಾಕು, ಇನ್ನೂ ಬಗ್ಗಿಸುವ ಸರದಿ 
ಸಮಸ್ಯೆಯನ್ನು ದೂರಾಗಿಸಲೆಲ್ಲಿ ಬೇಕು ಪರಿಹಾರಗಳು 

ಅಂಗಲಾಚಿ ಬೇಡಿದವರು ಮೊದಲಿಗೆ ನಾವೇ ನಿಜ 
ನಮ್ಮ ನೆರಳಿನಡಿಯ ಜನರು ಮಾಡುತ್ತಿರುವರು ಮಜಾ
ಬೇಡಿ ಪಡೆದುದಕ್ಕೆ ನಮ್ಮ ಕಾಡಿಯಾಗಿದೆ ಸಮ
ಇನ್ನು ಎಲ್ಲಿ ಋಣದ ಪಾಲು, ಎಲ್ಲ ಆಗಿರಲು ವಜಾ 

ಇಟ್ಟು ಬೆವರು, ಪಟ್ಟು ನೋವು, ಕೆಟ್ಟ ಕೆಲಸಗಳನು ನಾವು 
ಸರಿಪಡಿಸಲು ಇಟ್ಟೆವಲ್ಲ ಗಾಯವಾಗದೆ ನೆತ್ತರ 
ಉರಿದು ಜ್ವಾಲೆಯಾಗಿ ಮೆರೆದು, ಹಾಗೆ ಆರಿ ಹೋದ ಬೆಳಕು 
ಹೇಗೆ ಅಲ್ಲಿ ನೊಂದಿರ ಬೇಕು ಕರಗಿ ಹೋದ ಕರ್ಪೂರ

ಮಾತುಗಳಿಗೆ ಬರುವ ಅಳಲು, ಸಮರ್ತನೆಗೆ ದಾರಿ ಮಾಡದೆ 
ನಡೆಯಬೇಕು ಮಾನ್ಯತೆಗಳ ದಾರಿಗೆ ತಡವಾಗದೆ 
ಯೋಗ್ಯತೆಗಳ ಅಳಿಯ ಹೊರಟ ಬಳ್ಳಕೆ ಎರಡು ತೂತು 
ಹೇಗೆ ಪ್ರತಿಭೆ ಅಳಿಯ ಬಹುದು ಕುರುದುತನಕೆ ಜೋತು

ಅಲೆ ತನ್ನ ಪಾಡಿಗೆ ಇರುವುದು, ಅಡಗನ್ನು ದಡ ಸೇರಿಸಿ ಬಿಡುವುದು 
ಉಂಟಲ್ಲವೇ ಕಡಲಿಗೂ ಒಂದು ಪ್ರಳಯದ ಪರಮಾವದಿ ?
ಹೇಗೆ ತಡೆಯಲಾದೀತು ಆಗ ಎದ್ದ ಅಲೆಗಳ 
ಕಿನಾರೆ ಮಸಣದ ದವಡೆ, ಮೀನುಗಾರನಿಗೆ ಬೇಗುದಿ 

ಮತ್ತೆ ಮೆಲ್ಲ ಉದಯಿಸಿದ ಅದೇ ಹಳೆ ನೇಸರ 
ಹೊಸ ಅಂಗಿ ತೊಟ್ಟು ನಗುತ ಎದುರಾದ ಸರಸರ 
ಬಿಟ್ಟು ಬಿಡೆ ಸಾಕು ರಶ್ಮಿ ಇನ್ನೆಷ್ಟು ಸಂಜಾಯಿಸುವೆ 
ನಾ ಹೊರಟೆ ಹೊಸ ದಾರೀಲಿ, ನೀನಾಗ ನೆನೆದು ಪರಿತಪಿಸುವೆ.........

                                                            --ರತ್ನಸುತ  

Saturday 6 October 2012

ಬಾ ತಾಯೆ ಕಾವೇರಿ!!!



















ಬಾ ತಾಯೆ ಕಾವೇರಿ!!!
ಕನ್ನಡತಿಯೋಬ್ಬಳು ಕಾದಿಹಳು, ಹೊತ್ತು
ಖಾಲಿ ಬಿಂದಿಗೆಯ ಬಿಸಿಲಲ್ಲಿ ನಿಂತು
ನೀರೊಡನೆ ಹೋಗದಿದ್ದರೆ ಇಲ್ಲ ಅಡುಗೆ
ಅತ್ತೆಯ ಬೈಗಳದ ಪೀಕಲಾಟ
ಬಳ್ಳಿಯಂತಿಹಳೀಕೆ ಎಷ್ಟೆಂದು ಕಾಯ್ವಳು
ಇನ್ನೆಷ್ಟು ಸಹಿಸಿಯಾಳು ಬಿಸಿಲಿನಾಟ

ಬಂದವಳು ಬಂದಂತೆ ಹಿಂದಿರುಗಿದ್ದೇಕೆ?
ಊಟಕ್ಕೆ ಕೂತವನು ಕಾಯ ಬೇಕೇ?
ನುಂಗಿದ ಮುದ್ದೆಯ ತುತ್ತು ಕಚ್ಚಿಕೊಂಡಿದೆ ಕೊರಳ
ಧಾವಿಸಿ ಬಾ ಬಿಕ್ಕಳಿಕೆಯ ದೂರಾಗಿಸೋಕೆ

ಅಗೋ ಪಾಪ ವೃಧರೊಬ್ಬರ ಒಂಟಿ ಪಾಡು
ಹೊರಡದ ನಾಲಿಗೆಯ ದಾಹವನು ನೋಡು
ಮೆಟ್ಟಿ ಬಾ ಬಂಡೆಗಳ ತುಂಡು ತುಂಡಾಗಿಸಿ
ನೀನಾಗು ಕಾಲುವೆ, ಅಮೃತದ ಜಾಡು

ನೋಡಲ್ಲಿ ಹಸಿರು ಮುನಿದಿದೆ ಕೆಂಪಾಗುತ
ಬೇರುಗಳು ಕಾಲ್ಕಿತ್ತಿವೆ ಒಣಗಿ ಬಳಲುತ
ನಿನ್ನ ಘಮದ ನಿರೀಕ್ಷೆಯಲ್ಲಿದೆ ಮಣ್ಣ ಮೂಗು
ಹುಸಿಯಾದರೂ ಸರಿಯೇ ಬಾ ಬಸೆದು ಹೋಗು!!

ಮೊಗ್ಗಿನ ಮುಚ್ಚು ಪರದೆಯೊಳಗೆ ಸಿಕ್ಕಿ
ಜಾರದ ಕಂಬನಿಯೊಡನೆ ಒಳಗೆ ಬಿಕ್ಕಿ
ಮೌನದ ಧನಿಯಲ್ಲಿ ಕೈಲಾದ ಪರಿಮಳ
ಸೂಸಿದೆ ನೋಡು ಬಡಪಾಯಿ ಹೂವು
ನೀ ಚಿಮ್ಮಿ ಜಿಗಿದು, ಸಿಂಪಡಿಸು ಹಾಗೆ
ಜೀವಕೆ ನೆರಳು ಕೊಟ್ಟು ಕೊನೆ ಗಳಿಗೆ
ಹೊತ್ತಾರ ಹೋಗು, ಉಳಿಸಾರ ಹೋಗು
ಸಂಪೂರ್ಣ ಉಡುಪಾಗು ಅಪೂರ್ಣತೆಗಳಿಗೆ

ಬರಡು ಹಾಳೆಯ ಮೇಲೆ ಗೀಚಿದ ಪದಗಳು
ಎಂದಾದರು ಉಳಿಯುವುದು ತಾನೇ ಹಾಗೆ
ನೀನೊಮ್ಮೆ ನೆರೆಯಾಗಿ ಎಲ್ಲವನು ಅಳಿಸು
ಆಗುವೆನು ಮತ್ತೊಂದು ಸೃಷ್ಟಿಗೆ ಯತ್ನ
ನೀನಿಟ್ಟ ಪರಿಚಯಕೆ ಎಲ್ಲವೂ ಅದ್ಭುತ
ನೀ ಸೋಕಿ ಹೋದ ದಾರಿಗಳೇ ಧನ್ಯ
ನಿನ್ನರಸಿ ನಾನಿಟ್ಟ ಜೋಡಿಕೆಯ ಪದಮಾಲೆ
ನಿನ್ನ ಮಹಿಮೆಗೆ ಮಣಿದು ತುಂಡಾದ ರತ್ನ......

                                      --ರತ್ನಸುತ

Sunday 30 September 2012

ಸಿಂಪಲ್ ಪಂಚ್

Software Engineer - ನಂಗೆ ಈ ಕೆಲ್ಸ ಸಾಕಾಗಿದೆ ಮಾರಾಯ, ಸಂಬ್ಳಾನೂ ಕಡಿಮೇನೆ :(
Gunda - ನಂದೂ ಅದೇ ಕತೆ ಮಗ, ಆರಕ್ಕೇಳ್ತಿಲ್ಲ - ಮೂರಕ್ಕಿಳಿತಿಲ್ಲ
Software Engineer - "ಅದಕ್ಕೇ ಪೇಪರ್ ಹಾಕೋದಾ" ಅಂತ ಯೋಚ್ನೆ ಮಾಡ್ತಿದ್ದೀನಿ :S
Gunda - ಹಾಗಾದ್ರೆ ಗಾಡಿ ಮಾರಿ ಸೈಕಲ್ ತಗೋ , ಇಬ್ರೂ ಒಟ್ಟಿಗೆ ಹಾಕೋಣ!!!!

Saturday 22 September 2012

ಪ್ರೀತಿಯ ತಾತ!!!











ಆತನ ಕೈಗಳಷ್ಟೇ ಒರಟಾಗಿದ್ದವು
ಎದೆ, ಅದೇ ಬೆಚ್ಚನೆ ಗೂಡು
ದಿನೇ - ದಿನೇ ಹೆಚ್ಚುತ್ತಿದ್ದ ಪ್ರೀತಿ
ನವೀಕರಿಸಿದ ಹಳೆಯ ಹಾಡು

ನಿರ್ಬಂಧಗಳಲ್ಲೊಂದು ಮುಗ್ಧ ಸ್ವಾರ್ಥ
ಮಾತು ತಪ್ಪಿದರೆ ಕಿವಿ ಹಿಂಡುತ
ಅಳುವಿಗೊಂದು ಸಾಂತ್ವನ ಬಿಗಿ ಅಪ್ಪುಗೆ
ಮತ್ತೊಂದು ಚೇಷ್ಟೆಗದು ಅನುಮತಿ ಕೊನೆಗೆ

ಬಿಟ್ಟುಕೊಡುತಿದ್ದ ಆಗಾಗಿನ ಹಠ
ಮರೆತಲ್ಲಿ ಮರೆಸಿಟ್ಟ ತನ್ನೆಲ್ಲ ಚಟ
ಜೇಬಿನಲಿ ಜಣಗುಡುವ ದೊಡ್ಡ ಮೊತ್ತ
ಸಿಕ್ಕಷ್ಟೂ ಇಷ್ಟಪಟ್ಟವರಿಗಿಡುತ

ದೊಡ್ಡತನ ಬೀರುವ ಅನುಭವದ ಆಸ್ತಿ
ಅಲ್ಪತನ ಕಿಂಚಿಷ್ಟೂ ಇರದ ವ್ಯಕ್ತಿ
ಬಯಸುವ ಮುನ್ನವೇ ಬಯಕೆಗಳನ್ನರಿವ
ಬೆನ್ನೆಲುಬಿನೊಳ ಹೊಕ್ಕ ದೈತ್ಯ ಶಕ್ತಿ

ಭಾವನೆಯ ಬಿಗಿದಿಟ್ಟ ಭಾವುಕ ಜೀವಿ
ಮಗುವೊಡನೆ ಮಗುವಾಗೋ ದಡ್ಡ ಮೇದಾವಿ
ಮನೆಯೊಳಗೆ ದೇವರು, ಹೊರಗೆ ಕಲಶ
ಹೆದರಿಸಿದರೂ ಆತ ಗುಂಡಿರದ ಕೋವಿ

ಹೆಗಲ ಮೇಲೆ ಹೊತ್ತ ಹೆಗಲಿಗೆ ಈ ಹೆಗಲು -
- ಸಮನಾದರೇನಂತೆ ನಾ ಮಗುವೆ ಅವಗೆ
ತಾತನಿಗೆ ಮೊಮ್ಮಗನ ಚಿಗುರು ಮೀಸೆ ಕಂಡು ಖುಷಿ
ವಂಶ ಗೆಲ್ಲಿಸಿದ ಖುಷಿ ಮೊಮ್ಮಗನಿಗೆ

ಕಾಲಕೂ ವಯ್ಯಸ್ಸಾಗಿ, ಹಸಿರೆಲೆ ಹಣ್ಣಾಗಿ
ಇನ್ನೂ ಬೀರುತಿದೆ ಮಂದಹಾಸ
ಹಿಡಿದು ಆತನ ಕೈಯ್ಯ ತುಸು ದೂರ ನಡೆದರೆ
ಆಗದೇ ಅದುವೇ ಒಂದು ಸುಪ್ರವಾಸ?!!

ಕಿವಿ  ಕೊಂಚ ಸವೆದಿದೆ, ಸ್ವೀಕಾರ ಕುಗ್ಗಿದೆ
ಆದರೂ ಚಾಚಿದ ಕೈ ನೀಡಲಿಕ್ಕೆ
ತಾತನ ಹೆಜ್ಜೆ ಗುರುತನ್ನು ಹಿಂಬಾಲಿಸುವೆ
ಮಾನವೀಯ ಗುಣಶೀಲ ಮನುಜನಾಗಲಿಕ್ಕೆ.........

--ರತ್ನಸುತ

ನೀ ಮಹಾತ್ಮೆ!!!

















ಸಣ್ಣ ಚುಚ್ಚಿಗೆ ನೆತ್ತರು ಹರಿವುದು
ಹೆಜ್ಜೆ ಮುಂದಿಡಲು ಹಿಂಜರಿಯುವುದು
ಅಷ್ಟು ಸೂಕ್ಷ್ಮ ಬದುಕಿನ ಪಾದ
ಹೇಗೆ ನೀ ಸಹಿಸಿರುವೆ ಪ್ರತಿ ಹೆಜ್ಜೆಗೂ ಇದ?

ದಾರಿಯುದ್ದಕೂ ಜ್ವಾಲೆಯಾಕ್ರಮಣ
ತಪ್ಪಿಸಿ ನಡೆವುದೇ ಸಾಹಸಕ್ರಿಯೆ
ತಾಳ ತಪ್ಪಿ ಸಿಕ್ಕಿಕೊಂಡರೆ ಸುಡುವುದು
ಹೇಗೆ ನೀ ಹೊತ್ತಿರುವೆ ಕೆಂಡದ ಪರ್ವತ ಶಿರದ ಮೇಲೆ?

ಗೀಚಿದ ಹಣೆಬರಹದ ಕಹಿ ಸಾಲು
ಸವಿಯಲು ಎಷ್ಟು ಕಷ್ಟ ಕೊಡುವುದು?!!
ಹಾಗೊಮ್ಮೆ ಹೀಗೊಮ್ಮೆ ಎದುರಾಗುವುದು ಸಧ್ಯ!!
ಹೇಗೆ ನೀ ಸವಿದಿರುವೆ ಬರೇ ಕಹಿಗಳ ಪಾಲು?

ಆಗಾಗ ಉರುಳುವುದು ಸುಡುವ ಕಂಬನಿ
ಬಿಟ್ಟ ಗಾಯಗಳ ಮೆಟ್ಟಲಸಾಧ್ಯ
ಆತಂಕದಲೇ ಜಾರ ಬಿಟ್ಟು, ತನ್ಪಾಡಿಗುರುಳಿದರೆ ಅದುವೇ ಪುಣ್ಯ
ಹೇಗೆ ನೀ ವೋರೆಸಿರುವೆ, ಕೀವು ಗಾಯಗಳ ಹಾದ ಹನಿಗಳ?

ಕಾರಣಗಳ ಸರಪಳಿ ಮನಸ್ಸಿಗೆ
ಮುನಿಸೆಂಬುದು ರೆಪ್ಪೆ ಬದಿದಷ್ಟೇ ಚಂಚಲ
ಸಣ್ಣ ಅಳುಕಿಗೆ ಜಾರಿ ಪುಡಿಯಾಗಬಹುದು ಮನ
ಹೇಗೆ ಹಿಡಿದಿಟ್ಟೆ ಸಂಬ್ಹಾಳಿಸುತ ಬಾಳಿನೆಲ್ಲ ಗೊಂದಲಗಳ?

ಅದಕಾಗಿಯೇ ಕರೆವ ಆಸೆಯಾಗಿದೆ, ನೀ ಮಹಾತ್ಮೆಯೆಂದು!!!!

--ರತ್ನಸುತ

 

Thursday 13 September 2012

ನನ್ ಬರ್ತ್ಡೇ ಗಿಫ್ಟು

ಕ್ಷೆಮಿಸು ನನ್ನನ್ನು ಸ್ನೇಹಿತನೇ
ಮರ್ತ್ಹೊದೆ ನಿನ್ ಹುಟ್ಟುಹಬ್ಬನೆ
ಫೇಸ್ಬುಕ್ ನೋಡಿ ಗುರುತಾಯಿತು
ನನ್ ಮೇಲ್ ನಂಗ್ ಅಸೈಯ್ಯವಾಯಿತು

ಎಂಟ್ ವರ್ಷದ್ದು ನಿನ್ ಸವಾಸ
ಮರಿಬಾರ್ದಿತ್ತು ನ ಈ ದಿವಸ
ಬಾಳ ದೂರ ಇದ್ರುನು ನೀನು
ಮರಿಬಾರ್ದಿತ್ತು ನಾನು

ಬೇಡಿದೆ ನಾನು ದೇವರ್ನೆ
ನಿನ್ ಕ್ಷೇಮಾನೆ
ಸುಖವನ್ನು ಹಾರೈಸುತ್ತ
ಶುಭಾಶಯಗಳು ರತ್ನಸುತ
 
 
ಥ್ಯಾಂಕ್ಸ್ ಕೆ.ಸಿ
 

Wednesday 12 September 2012

ನನ್ ಹುಟ್ದಬ್ಬಕ್ಕೆ

ನನ್ ಹುಟ್ದಬ್ಬಕ್ಕೆ ನಂದೇ ಕವ್ನ
ಬರಿಬಾರ್ದು ಅನ್ಕೊಂಡೇ ಬರ್ದೇ ಇದ್ನ
ವೊದ್ಕೊಂಡು ಮುಂದ್ವರ್ದೆ ಇಪ್ಪತ್ತೈದರ್ ಗಡಿ
ಇನ್ನೂ ಹುಟ್ಕೊಂಡಿಲ್ಲ ಒಳ್ಗೆ ಜವಾಬ್ಧಾರಿ ಕಿಡಿ

                                    --ರತ್ನಸುತ
 

Saturday 8 September 2012

ಹೇಗೆ ಉಳಿದೆವು ಪ್ರೆಮಿಗಳಾಗದೆ?!!!

ನೀನೆಲ್ಲೋ ನಾನೆಲ್ಲೋ ದೂರದೂರುಗಳಲ್ಲುಳಿದು
ನಮ್ಮಿಷ್ಟಗಳ ಹಾಗೆ ಕನವರಿಸಿ ಕೈ ಮುಗಿದು
ಸಾಗಿಸಿದ್ದೆವು ಸಧ್ಯ ಒಂದೂರಿನವರಾಗದೆ
ಆಗಿದ್ದರೆ ಹೇಗೆ ಉಳಿವೆವು ಪ್ರೆಮವಾಗದೆ?!!!

ಒಂದೇ ಊರಿನ ಎರಡು ತುದಿಗಳಲ್ಲಿ ನಮ್ಮ ವಾಸ
ಇದ್ದ ಒಂದು ಸಂತೆಗಿತ್ತು ಅನೇಕ ದಾರಿ ಸಹವಾಸ
ನಡೆದಿದ್ದೆವು ಸಧ್ಯ ಎಂದಿಗೂ ಎದುರಾಗದೆ
ಆಗಿದ್ದರೆ ಹೇಗೆ ಉಳಿವೆವು ಪ್ರೆಮವಾಗದೆ?!!!


ಒಂದೇ ಬೀದಿಯ ಮೂಲೆಗಳಲಿ ನಮ್ಮ ಪಾಠ ಶಾಲೆ
ಸಮಯದಂತರವಿತ್ತು ಎರಡು ತಾಸು ಬಾರಿಸಲು ಗಂಟೆ
ಓದಿಕೊಳ್ಳುತಿದ್ದೆವು ಎಂದಿಗೂ ತಲೆಕೆಡಿಸಿಕೊಳ್ಳದೆ
ಕೆಟ್ಟಿದ್ದರೆ ಹೇಗೆ ಉಳಿವೆವು ಪ್ರೆಮವಾಗದೆ?!!!

ಆಟದ ಮೈದಾನಕೆ ಧೈತ್ಯ ಗೋಡೆಯಂತರ
ನೀನಾಬದಿಗಿದ್ದೆ ನಾನೀಬದಿಗೆ ಆಡುತಿದ್ದೆ
ಆಟ ಸಾಗಿತ್ತು ಚೆಂಡು ಎಂದಿಗೂ ಬದಲಾಗದೆ
ಆಗಿದ್ದರೆ ಹೇಗೆ ಉಳಿವೆವು ಪ್ರೆಮವಾಗದೆ?!!!

ನಿನ್ನ ಮನೆಯೆಡೆಗೆ ನಿನ್ನ ನಡಿಗೆ, ಹಿಂದೆ ನನ್ನ ನಡೆ
ಗಮನಿಸದಿದ್ದೆ ಕಣ್ಮುಂದಿನ ಚಮತ್ಕಾರವ
ನಾಲ್ಕು ಹೆಜ್ಜೆ ಅಂತರವಿತ್ತಲ್ಲ ಕಡಿಮೆ ಆಗದೆ
ಆಗಿದ್ದರೆ ಹೇಗೆ ಉಳಿವೆವು ಪ್ರೆಮವಾಗದೆ?!!!


ಹೇಗೋ ಬೆಳೆಯಿತು ಸ್ನೇಹ, ಒಬ್ಬರಿಗೊಬ್ಬರ ಪರಿಚಯ -
- ಮುಂದುವರೆಯಿತಲ್ಲಿ ಊರೇ ಬೆಚ್ಚಿ ಬೀಳೋ ಹಾಗೆ
ಎಲ್ಲಾ ಇದ್ದೂ ಸಲಿಗೆ ಮಾತ್ರವೇ ಉಳಿಯಿತು ಇರದೆ
ಇದ್ದಿದ್ದರೆ ಹೇಗೆ ಉಳಿವೆವು ಪ್ರೆಮವಾಗದೆ?!!!

ಮುಂದುವರೆದ ಮಾತುಗಳು "ಮಾ" ಕಾರಕೆ "ಉ"ಕಾರ ಬೆರೆಸಿ
"ತು" ಕಾರವ ಮತ್ತಷ್ಟು ಒತ್ತಿ ಮುತ್ತುಗಳಾಗದೆ ಹೋದವು
ಇಷ್ಟಾದ ಮೇಲೂ ಪ್ರಭಾವವೇನೂ ಬೀರದೆ
ಕೊನೆಗೂ ಉಳಿದೇವು ನಾವು ಪ್ರೆಮಿಗಳಾಗದೆ!!!......


                                                  --ರತ್ನಸುತ

Wednesday 5 September 2012

ನವೀನ ಜನನ ದಿನ

ಕೇವಲ ನೆಪಕಾಗಿ ಸತಾಯಿಸುವೆ ನಿನ್ನ
ನಿನ್ನ ಮುನಿಸನ್ನು ಕದ್ದು ದೊಚುವುದೇ ಚೆನ್ನ
ಸಾವಿಗೂ ಸೆಡ್ಡು ಹೊಡೆದು ನಿಲ್ಲುವವನು
ನಿನ್ನ ಹುಟ್ಟು ಹಬ್ಬವ ಮರಯುವೆನಾ?

ನೀನು ಇಷ್ಟಗಳಲ್ಲಿ ಒಂದಾಗಿರಬಹುದು ನನಗೆ
ಆದರೂ ನೀನಿರದ ಇಷ್ಟಗಳೇಕೆ ನನಗೆ?
ಜೀರ್ಣಿಸಿಕೊಳ್ಳಲು ಕಷ್ಟವಾಗುವ ಸಾಲುಗಳನ್ನ
ನಿನಗೆ ಮೀಸಲಿಡುವ ನನ್ನ ಬಯಕೆ

ಊದಿಸಿದ ಕೆನ್ನೆಗಳು ಬಿಡುಗಡೆಯ ಕೋರಿವೆ
ನೀಡು ಪಾಪ ಅದಕೆ ವಿಶ್ರಾಂತಿ ಕೊಂಚ
ನಿನ್ನ ಕನವರಿಕೆಗಳ ಸುತ್ತ ಮುಳ್ಳಿನ ಬೇಲಿ
ನಡುವೆ ನಿನದಾಗಲಿ ಹೂ ಹಾಸಿ ಮಂಚ

ಉಡುಗೊರೆ ಇಂದು ಹೊಸತು, ನಾಳೆ ಹಳತು
ನಿನ್ನ ಹುಟ್ಟು ಹಬ್ಬಕೆ ಈ ನನ್ನ ಕವನ
ನೋಟ ಮಗುವಾಗಿ, ನಾಲಿಗೆ ಹೊಸತಾಗಲಿ
ಪ್ರತಿ ಬಾರಿ ನೀ ಇದನು ಓದುವ ಮುನ್ನ........

                                  --ರತ್ನಸುತ

Thursday 30 August 2012

ಜನನದೊಳ್ ಸಂಪೂರ್ಣಾರ್ತಿ

ನವಿಲ ಎಳೆಗರಿಯ ಬಣ್ಣದ ಲೇಪ
ಪುಟ್ಟ ಬಳ್ಳಿಯಲಿ ಮೊಗ್ಗಿನ ರೂಪ
ಯಾರ ಗುರುತಿಸದ ಮುಗ್ಧ ಗರ್ವ
ಬಿಟ್ಟ ಪುಟ್ಟ ಕಣ್ಣೊಳಗೆ ಪರ್ವ
ಸಣ್ಣ ಧನಿಯ ಹಿಡಿದೊಂದು ಅಳುವು
ಇರುವೆಯನ್ನು ನೋಯಿಸದ ನುಲಿವು
ನುಸುಳಿ ಬಂದ ಆ ಹೊನ್ನ ಕಿರಣ
ಸೋಕಿ ಪಡೆಯಿತೆ ಧನ್ಯ ಗೆಲುವು
ಸೋಕಿದರೆ ಸವೆಯುವ ಮೃದುತ್ವ
ಜನನದಿ ಹೊಸ ಸಂಭಂದದ ಸತ್ವ
ಎಲ್ಲೆಡೆ ಪರಸಿದೆ ಹರ್ಷೋದ್ಘಾರ
ಪೂರ್ಣಗೊಂಡಿತು ಪುಟ್ಟ ಸಂಸಾರ!!!

                                    --ರತ್ನಸುತ


Saturday 18 August 2012

ಕಾರ್ಮಿಕ - ನಿಜ ಶ್ರಮಿಕ















ದುಡಿಮೆ ಬೆವರು ಹರಿಯಿತಲ್ಲಿ, ನೆತ್ತಿಯಿಂದ ಕತ್ತಿಗೆ
ಹರಿದ ಅರಿವು ಇರದೆ ಅಲ್ಲಿ, ವೋರೆಸಿಕೊಂಡು ಮೆಲ್ಲಗೆ
ಇಟ್ಟ ತೊಟ್ಟು ಮಣ್ಣಿನೊಳಗೆ ಐಕ್ಯವಾಯ್ತು ಆದರು
ಮುಂದುವರೆಯಿತಲ್ಲಿ ಹಿಂದೆ ಸಾಲು, ಸಾಲು ಉರಿಬೇವರು

ಚಿಂತಿಸಲು ಇರದ ಸಮಯ ನುಂಗಿ ಹಾಕಿ ಬದುಕನು
ಸದಾ ತಾ ಉರಿದು ಕರಗಿ ಪರರಿಗಿಟ್ಟು ಬೆಳಕನು
ಕೋಪವ ವಿಕೋಪಿಸದೆ ಮತ್ತಷ್ಟು ಹುರುಪು ತುಂಬಿ
ರೂಪವಿರದ ಬಾಳ ನಿರೂಪಿಸುವ ಯತ್ನ ಸಾಗಿದೆ

ಕೊಟ್ಟ ಕೈ ಮಾಸಿತ್ತು, ಬಿಟ್ಟ ಗುರುತು ಸೂಸಿತ್ತು-
-ಕೆಸರೊಳಗಿನ ಕಮಲ ಸೂಸಿದಂತೆ ನಗೆಯ ಕಂಪು
ಬಿಡಿಗಾಸಿಗೆ ದಿನಗಟ್ಟಲೆ ಸತತ ನಿರಾಯಾಸ ಯತ್ನ
ಒಬ್ಬೊಬ್ಬರ ಕಲೆಯಲ್ಲೂ ತಮ್ಮದೇ ಛಾಪು

ಇಳಿ ಗಗನದ ಅರಿವಿಲ್ಲ, ಉರಿ ಬಿಸಿಲಿನ ಪರಿವಿಲ್ಲ
ಹಸಿವಿಗಾಗಿ ನುಂಗಲಾಯ್ತು ನಾಲ್ಕು ತುತ್ತು ಅನ್ನ
ಅದೇ ಹಳೆ ಬಡತನ, ಮನೆಗಿಲ್ಲ ಬಳಿದ ಸುಣ್ಣ
ಹಬ್ಬ ಮನಸಿಗಾಗಿದ್ದರೆ ಮನೆಯೆಷ್ಟು ಚನ್ನ

ಬೆಳೆದು ಮುಂಬಾಗಿಲಲ್ಲಿ  ತುಳಸಿ ದಳದ ಚಿಗುರು
ದಿನಕೆರಡು ಬಾರಿ ಹೆಂಗಸರ ಸುತ್ತು ಮೂರು
ಸೊಂಪಾಗಿ ಬೆಳೆದುಕೊಂತು, ಹಾಲು ತೀರ್ಥ ಹೀರಿ
ತೋರಲಿಲ್ಲ ಲಕುಮಿ ಅಲ್ಲಿ ಚಿಲ್ಲರೆಯನು ಮೀರಿ

ಇದು ಕಾರ್ಮಿಕನ ಒಂದು ಅಸಹಾಯಕ ನೊಂದ ಮುಖ
ಆಗಾಗ ಮಂದಹಾಸ ಮೂಡುವುದು ನೆಪಮಾತ್ರಕ
ತೊಳೆದ ಕೈ ಮಸಿಯಾಯ್ತು ದಿನ ಬೆಳಗಾಗುವ ವೇಳೆ
ರಾತ್ರಿಗಳು ಕಳೆದವು ಬರಿ ಸಾಲದ ಬಡ್ತಿಯಲ್ಲೇ

ಸೆರೆಯಿರದ ಬಿಡುಗಡೆಗೆ ಪ್ರತಿನಿತ್ಯದ ಹೋರಾಟ
ಸಿಕ್ಕ ಎಳ್ಳಷ್ಟು ಫಲಕೆ ಆಕಾಶಕೆ ಹಾರಾಟ
ಆದ ನೋವಿಗೆ ಮತ್ತೊಂದು ನೋವು ನೀಡಿ ಸಾಂತ್ವಾನ
ಕಣ್ಣು ಮುಚ್ಚಿಕೊಂಡರೂ ಮುಗಿಯದಲ್ಲಿ ಜೀವನ......

                                                         --ರತ್ನಸುತ



Thursday 16 August 2012

ನಾನ್ರೀ ರತ್ನಸುತ

ರತ್ನಾನ್ಕೊಯ್ದು  ಮೂಡಿದ್ ಪದಗೊಳ್ ಸುಗ್ಗಿ, ಆದ್ರೂ ಇನ್ನು ಗಟ್ಟಿ ರತ್ನಾಳ್ ಬುತ್ತಿ
ನನ್ದೇನಿದ್ರು ಬರಿಯೋದೊಂದೇ ಕರ್ಮ, ಹುಟ್ಸ್ದೊಲ್ಮೆರ್ಸೋದ್ ರತ್ನಸುತನ್ ದರ್ಮ.....

Tuesday 14 August 2012

ಪ್ರತಾಪನ ಹುಟ್ಟು ಹಬ್ಬಕೆ

ಬರೆಯಲಾರದೆ ಅಲ್ಲವೋ ಬರೆಯದಿದ್ದುದು
ಬರೆಯಬೇಕೆನಿಸಿದ್ದವೆಲ್ಲವೂ ಬರೆಯಲಾಗದು
ನಿನಗೆ ಈ ದಿನ ವಿಶೇಷವಾದುದು, ಮರೆಯಬಾರದು
ಜೋಪಾನವಾಗಿ ಪದಗಳ ಜೋಡಿಸಿ ಹೀಗೆ ಬರೆದದ್ದು

ಇಷ್ಟ ಪಡದವ ಇಚ್ಛಿಸಿರುವೆ, ಏನು ಆಶ್ಚರ್ಯ!!!
ಎಷ್ಟೇ ಆದರು ನಿನಗೆ ಬರೆದದು ನಿನ್ನದೇ ಕಾವ್ಯ
ನಿನ್ನ ಕುರಿತು ಬರೆಯಲಾಯಿತು ಅದುವೇ ನನ್ನ ಪುಣ್ಯ
ನಿನ್ನದೆಂಬುವ ಕಾರಣವಿದೆ ಅದುವೇ ನನ್ನ ಧೈರ್ಯ

ಕಾವ್ಯ ರೂಪಕ ಆಶೆಯಕೆ ನೀ ಹಂಬಲಿಸಿರುವೆ
ನನ್ನ ಬೆರಳಿಗೆ ಮತ್ತೆ ಬರೆಯುವ ಕೆಲಸ ಕೊಟ್ಟಿರುವೆ
ನಿನ್ನ ಖುಷಿಯಲಿ ಬಾಗಿಯಾಗಿದೆ ನನ್ನ ಈ ಕವನ
ಹರ್ಶೋದ್ಘಾರಕೆ ಕಾರಣವಾಯಿತು ನಿನ್ನ ಜನ್ಮ ದಿನ

ಇಷ್ಟು ಬರೆದೆ, ಇಷ್ಟಕೆ ಮುಗಿಯಿತೆಂದಲ್ಲ "ಮಗ"
ಬಯಸುತಿರು ನೀ ನನ್ನ ಬರಹ ತೀರ ಆಗಾಗ
ಮೊದಲ ವರ್ಷದ ಹುಟ್ಟುಹಬ್ಬಕೆ ನನಗೆ ಸಂತೋಷ (ನಿನ್ನ ಶುಭಾಶಯಕೆ ನನ್ನ ಕವನದ ಮೊದಲ ವರ್ಷ)
ನಿನ್ನ ಖುಷಿಗೆ ಎಂದೂ ಮುಂದು ನನ್ನ ಸಹವಾಸ........

                                                              --ರತ್ನಸುತ


Saturday 4 August 2012

ರಕ್ಷಾ ಬಂಧನ


ಅಮ್ಮಳಲ್ಲದೆ  ಅಮ್ಮನ ಕರೆಗೆ
ಹೂಗೊಡುವ ಸಹೋದರಿಯೇ 
ಜಗಳದಲ್ಲಿಯೂ ತಂಪನೀವ
ಹಬ್ಬಿರುವ ತೆಂಗಿನ ಗರಿಯೇ
ಮುನಿಸಿಕೊಂಡ ಆ ಮೊಗವನು ಹೊತ್ತೂ
ಮನಸೆಳೆವ ಮನೋಹರಿಯೇ
ಹೊತ್ತ ಸಹನೆಗೆ ಸಾಟಿಯಾಗದ
ಸಾಲುಗಟ್ಟಿದ ಮಹಾ ಗಿರಿಯೇ

ಅಂಧಕಾರದ ಒಂಟಿ ಬಾಳಿಗೆ
ದಾರಿಯಾಗಿದೆ ಹೊಂಗಿರಣ 
ಆಕೆಯೊಡನೆ ಕಳೆದಂತ ದಿನಗಳೇ
ಮಾಡಿತೆಲ್ಲವ ಸಂಪೂರ್ಣ 
ಅವಳ ಕಾವಲಿಗೆ ಬೆನ್ನ ನೀಡುತ 
ಆದೆ ಕನಸುಗಳ ನಿಲ್ದಾಣ 
ಇಟ್ಟ ಬೇಡಿಕೆಯ ಪೂರ್ಣಗೊಳಿಸಲು
ಅಂತರಂಗಗಳ ಸಂಧಾನ

ಹೆಜ್ಜೆ ಗುರುತಿಗೆ ಲೆಕ್ಕವಿಲ್ಲದೆ
ಸೋತ ಅಂಕಿಯ ಎಣಿಕೆಯೂ
ಒಂಟಿಗಾಲಿನ ಜಿಗಿತ ಕೂಡ
ಬಾಲ್ಯದಾಟದ ಪ್ರಯಾಸವೂ
ಎಲ್ಲಿ ಹೆದರಿಕೆ ದಳದ ಜ್ಯೋತಿಗೆ
ದೀಪವಲ್ಲಿ ಸುರಕ್ಷಿತ
ಅವಳ ಸ್ಫೂರ್ತಿ ಜೋತೆಯಿದ್ದರಲ್ಲೇ
ಗೆಲುವುಗಳು ಅವು ನಿಶ್ಚಿತ

ಸಡಿಲಗೊಳ್ಳದ ಬಂಧವಿದು
ಗಟ್ಟಿಯಾಯಿತು ಈ ದಿನ
ಉಡುಗೊರೆಗೆ ಕಾದಿದ್ದ ಕಣ್ಗಳ
ದೂರದಲ್ಲೇ ಗಮನಿಸಿದೆ ನಾ 
ಹಣೆಗೆ ಮುತ್ತಿಟ್ಟು, ಕಣ್ಣು ತೊಟ್ಟಿಟ್ಟು
ಸವರಿದ ಕೈ ಪಾವನ
ರಕ್ಷೆಗಾಗಿ ಅಪೇಕ್ಷಿಸಿ ಬಿಗಿದಳು
ಪ್ರೇಮ "ರಕ್ಷಾ ಬಂಧನ"

                          --ರತ್ನಸುತ

Friday 27 July 2012

ಸಂತೆಗುಂಟು ಚಿಂತೆ

Add caption
ಅಲ್ಲಿ ದಣಿದಿತ್ತು ಸಂತೆ
ನಿತ್ಯ ಜನ ಜಂಜಾಟವ ಹೊತ್ತು
ಕೊಳೆತವನ್ನೆಲ್ಲ ಮೂಲೆಯ ಮಡಿಲಲ್ಲಿರಿಸಿ

ಬಂದವರದೆಷ್ಟೋ, ಹೋದವರದೆಷ್ಟೋ,
ಯಾವೊಂದ ಲೆಕ್ಕ ಹಾಕದೆ ಹಾಗೆ ತೆರೆದು
ತನ್ನೊಡಲ ಅಂಗಾಂಗವನು ಧಾರೆಯೆರೆದು
ಲಾಭ ಚೀಲದ ಸ್ಪರ್ಶವಾದಂತೆ ನಕ್ಕು
ರೈತ ಬಂದುಗಳ ನಿಟ್ಟುಸಿರ ಹೊಕ್ಕು

ಸಾಕು ಸಾಕಾದ ಗ್ರಾಹಕರ ಬೀಳ್ಗೊಟ್ಟು
ಮರ ನೆರಳ ತಂಪಲ್ಲಿ ದಣಿವನ್ನು ಸುಟ್ಟು
ಚಿಣ್ಣರಿಗೆ ಉಯ್ಯಾಲೆ, ಜಾರೋಬಂಡಿಯಲಿ-
ಸಿಕ್ಕ ಖುಷಿಯನ್ನು ತನ್ನದೆಂದು ಭಾವಿಸಿ

ಮೋಸಗಾರರ ಮೋಸವನ್ನು ಕಂಡು ಬೇಸೆತ್ತು
ವೃಧರ ಪಾಡಿಗೆ ಕಣ್ಣೀರನಿತ್ತು
ಪೊದೆಗಳ ಸಾಲಲ್ಲಿ ನಿಶಬ್ಧ ಪ್ರಕರಣಗಳ
ಕೇಳಿಯೂ ಕೇಳಿಸದಂತೆ ನಾಚಿ

ಕೆಂಪಾದ ಬಾನಿನಂಗಳ ದೀಪದಲ್ಲಿ
ಇಟ್ಟ ಬೆವರನ್ನು ಕೊನೆ ಬಾರಿ ವೊರೆಸಿ
ತುಂಬಿದ ಜೇಬುಗಳ ಸರದಾರರೊರಟಿಹರು
ಯುದ್ಧ ಮುಗಿದು ಉಳಿದ ರಣರಂಗವನು ಬಿಟ್ಟು
ಸಂತೆಯಾಯಿತು ಮನೆಯ ನಿಸ್ಸಹಾಯಕ ಗೃಹಿಣಿ
ಮಕ್ಕಳ ಕ್ಷೆಮೋಪಚಾರವನು ಮಾಡಿ

ಬೀಳ್ಗೊಟ್ಟಿತಲ್ಲಿ ಜನ - ಜಾನುವಾರುಗಳ
ಮತ್ತೊಂದು ವಾರದ ಸರದಿಗೆ ಕಾದು
ಮಲಗುವಂತೆ ಮಾಡಿ ತೂಕಡಿಸಿ ಎದ್ದಿತು
ಸಂತೆ ಅಂಗಳಕೆ ಮತ್ತೊಂದು ರಂಗೆದ್ದಿತು.........

                              -- ರತ್ನಸುತ 

Thursday 26 July 2012

ಜೋಡಿ ಪದ

ಕದ್ದು ಮುಚ್ಚಿ ಸಂದೇಶವ ಎಷ್ಟು ಬಾರಿ ಕಳಿಸುವೆ?
ಮನ ಬಿಚ್ಚಿ ಎಲ್ಲ ಹಾಗೆ ಹೇಳಿ ಬಿಡಬಾರದೇ?
ಮುಚ್ಚು ಮರೆಯ ಸಂದೇಶ ನೀ ಮೆಚ್ಚುವ ಹುಡುಗನ
ತಲುಪೋ ಮುನ್ನ ಕಳೆಯಬಹುದು, ಅವನ ಮನವ ಸೇರದೆ...

ಎಷ್ಟೆಂದು ಕಟ್ಟಿ ಹಾಕುವೆ ಪದ ಮಾಲೆಯಲ್ಲಿ
ಒಂದೊಂದೇ ನುಲಿಯುತ ಬರೆದ ಅಕ್ಷರಗಳ
ಪತ್ರವೂ ಬೇಸೆತ್ತಿದೆ ನಿನ್ನ ಅಂಜಿಕೆ ಕಂಡು
ಬಾಯೊಂದಿದ್ದಿದ್ದರೆ ತನಗೆ, ನಿನ್ನ ಪಯಣ ಸರಳ!!

ನಡುದಾರಿಯ ನಡುರಾತ್ರಿಯ ಬೆಳದಿಂಗಳ ಹೊತ್ತಲಿ
ರವಾನಿಸಿದ ಸಂದೇಶ ಮತ್ತೊಂದ ಕಂಡು ಬಿರಿಯಿತು
ತನ್ನೊಡಲ ಹೃದಯ ಪದವ ಕಿತ್ತದರೆಡೆ ಇಟ್ಟು
ತನಗಿಷ್ಟವಾದ ಒಂದು ಪದದ ಬಯಕೆ ಹೆಚ್ಚಿತು


ದಿನಗಳುರುಳಿ ಕಳೆಯಿತಲ್ಲಿ ಪದ ಹಂಚುವ ದೆಸೆಯಲಿ
ಮಳೆಗೆ ನೆನೆದು ಮುದ್ದೆ ಕಟ್ಟಿ, ಒಣಗಿ ಹಾಗೆ ಬಿಸಿಲಲಿ
ಅಲ್ಲೊಂದು ರಸಗಳಿಗೆ ಸಂದೇಶಕೆ ಕಾದಿತ್ತು
ಪರ-ಸಂದೇಶ ತನ್ನದೆಂದದಕೆ ತಿಳಿಯಿತು


ಒಬ್ಬೊಬ್ಬರ ಗುಟ್ಟೊಬ್ಬರಿಗೆ ಮತ್ತೆರಿಸೋ ಪಾಣಕ 
ಇಷ್ಟರಲ್ಲೇ ಮುಗಿಯಲಿಲ್ಲ ಅವರ ಜನ್ಮ ಕಾಯಕ
ಕಾದಿದ್ದವು ಪಾಪ ನಿರೀಕ್ಷೆಯ ಹೊತ್ತ ಜೀವಗಳು
ನಡುವೆ ಸಂದೇಶಗಳ ಪ್ರಣಯ ಪ್ರತಿರೋದಕ

ಅಂತೂ ಪ್ರೇಮಿಗಳ ಸೇರಿಸಲು ಅವು ದೂರಾದವು
ಸೇರಬೇಕಾದ ತಮ್ತಮ್ಮ ಅಂಚೆಲಿಳಿದವು
ಓದುವವರು ಮುಗಿಸುವನಕ ಪತ್ರಕಲ್ಲಿ ಪರೀಕ್ಷೆ 
ಆನಂತರಕದಕೆ ತುಂಬು ಪ್ರೀತಿ ಮಡಿಲ ಸುರಕ್ಷೆ


ಹಂಚಿಕೊಂಡ ಪದಗಳು, ಇವನಿಗವಳ - ಅವಳಿಗಿವನ
ಪರಿಚಯ ಹೆಚ್ಚಿಸಿ ಪ್ರೇಮಾಂಕುರವಾಯಿತು
ಆಕೆ ಮಾತ್ರ ಬರೆದುದ್ದಲ್ಲ, ಈತನೂ ಬರೆದದೆಷ್ಟು ಬಾರಿಯೋ
ಅಂತು ಕಾಲ ಗೆದ್ದಿತು!!!


ತ್ಯಾಗವಾದ ಒಂದು ಪ್ರೀತಿ, ಲಾಂಛನ ಮತ್ತೊಂದಕೆ
ಪರಿಚಯ ಹೆಚ್ಚಾದಂತೆ ದೂರ ಸರಿದ ಹೆದರಿಕೆ
ಒಂದಾದ ಜೀವಗಳಲಿ ಎರಡು ಮನಕೆ ಒಂದೇ ಕದ
ಹೊಸ ಅಲೆಗೆ ಸ್ಪೂರ್ತಿಯಾಯ್ತು ದೂರಾದ ಜೋಡಿ ಪದ..............




                                                    --ರತ್ನಸುತ







Saturday 14 July 2012

ನೀನಿರಲು ಜೊತೆಯಲ್ಲಿ




ನಿನ್ನ ಸುತ್ತಿ ಬಂದ ನನಗೆ, ಲೋಕವೊಂದ ಸುತ್ತಿದಂತೆ
ಅಧ್ಭುತಗಳ ಎಕೀಕರಣವೇ ನಿನ್ನ ಸೃಷ್ಟಿ
ನಿನ್ನ ಮಾತ ಕೆಳಿದೆನಗೆ, ಭಾವ ಪ್ರವಚನೆ ಆದಂತೆ
ರಾಗ ರಸಗಂಗೆಯಲ್ಲಿ ಮೌನಕೆ ವಿಮುಕ್ತಿ

ನಿನ್ನ ಸಾವಿರದ ಸಾವಿರ ಹೆಜ್ಜೆ ಗುರುತುಗಳಿಗೆ
ನನ್ನ ಹಿಂಬಾಲಿಕೆಯಲ್ಲೊಂದು ಮಂದ ಬೆಳಕು
ನಿನ್ನ ಕಣ್ಣೋಟ ದಾಟಿ ಮೀರಿ ನಡೆದ ಹುಡುಕಾಟಕೆ
ಸಿಕ್ಕ ಪ್ರತಿಕ್ರಿಯೆಯ ಅಂಚಿನಲ್ಲೊಂದು ತೊಳಕು

ನಿನ್ನ ಮುನಿಸಿನಲ್ಲಿ ಬೆಂದ ನನ್ನಂತರಂಗ ವೃಂದಕೆ
ನೀನತ್ತಾರೆ ಕಂಬನಿಗೆ ಕೈ ಚಾಚುವ ತವಕ
ನೀ ಹಿಡಿದ ಕಿರು ಬೆರಳು ದಾರಿ ತೋರೋ ಗುರುವಾಗಿದೆ
ನೀನೇ ಮುನ್ನಡೆಸು ನನ್ನ ಗುರಿ ಸೇರುವ ತನಕ

ನೀ ತಾರದಿರುವ ಆ ಅಧ್ವಿತೀಯ ಉಡುಗೊರೆಯ 
ನೆನೆದೇ ಮಘ್ನನಾಗಬೇಕಿರುವ ಹಂಬಲ
ಎಡವಿಕೊಂಡ ಕಾಲ್ಬೆರಳಿಗೆ ಸಿಕ್ಕ ಗಾಯ ಗುರುತೆಷ್ಟೋ
ನಿನ್ನತ್ತ ಎಡವಿದಾಗ ಸಿಗದ ನೋವೆ ಚೊಚ್ಚಲ

ನೀ ನಡೆದೇ ಮೆಲ್ಲ ನನ್ನ ಮನಸಿನ ಮಧುಮಂಚಕೆ
ಸಿಂಗಾರ ಮಾಡಿಕೊಂಡು, ಶೃಂಗಾರವ ಅಪೇಕ್ಷಿಸಿ
ನೀ ಬಂದ ಮೇಲೆ ಎಲ್ಲ ಸಾಧಾರಣವೆನಿಸಿತು
ಎಲ್ಲಿ ಹೋಲಬಹುದು ಕಲ್ಪನೆಯ ಮೀರಿ ಮೆಚ್ಚಿಸಿ

ನೀ ಗುರುತಾದೆ ನನಗೆ, ನೀ ತೋರದೆ ಅಡಗಿಸಿಟ್ಟ-
- ಭಾವಗಳ ಬಂಡಾರಕೆ ನಾ ಆಳೊ ದೊರೆಯಾದೆ
ಸಿರಿವಂತಿಕೆ ಆಗಮಿಸಿ, ದಾರಿಧ್ರ್ಯ ನಿರ್ಗಮಿಸಿ
ನಿನ್ನಿಂದ ಬೆಳಗುವ ಜ್ಯೋತಿಗೂ ಸ್ಫೂರ್ತಿ ಸಿಕ್ಕಿದೆ.....

                                        --ರತ್ನಸುತ



Sunday 8 July 2012

ಲಕ್ಕಿ



ಹಾಲ ಬಟ್ಟಲಿಂದ ನಿನ್ನ ಅದ್ದಿ ತಗೆದರೇನು?
ನೋಡು ಇನ್ನು ಅಂಟಿದೆ ನಿನ್ನ ಕೆನ್ನೆ ಮೇಲೆ ಕೆನೆ
ಆಹಾ ಅದೆಷ್ಟು ಚುರುಕು ನಿನ್ನ ಕಣ್ಣೋಟ
ಕೃಷ್ಣೆಯಂತೆ ಮುದ್ದು ನೀನು, ಗೋಕುಲ ನಿನ್ನ ಮನೆ
ದೃಷ್ಟಿ ತಾಕದಿರಲು ಇಟ್ಟ ಬೋಟ್ಟಿಗೂ ದೃಷ್ಟಿ ತಾಕಿ
ಜ್ಯೋತಿ ಆಕಾರದಲ್ಲಿ ಹೊಳೆಯುತಿದೆ ಹಣೆ
ಬೆಳ್ಮುಗಿಲು ಕರಗುವಾಗ ತಾಳುವ ಬಣ್ಣದ ಕೇಶ
ಬಳ್ಳ ಮೀರಿ ತುಂಬಿದಂತೆ ಕಪ್ಪು ರಾಗಿ ತೆನೆ
ಪುಟ್ಟ ತುಟಿಗಳಿಂದ ಹೋರಡಲೆಂದು ಕಾದ ಮುತ್ತುಗಳು
ನಕ್ಕಾಗ ಸುರಿಯುತಾವೆ ನೋಡು ಸುಮ್ಮನೆ
ಬಿಕ್ಕಿ ಬಿಕ್ಕಿ ಅಳುವಾಗ ಕೆಂಪಾದ ಮಲ್ಲೆ ಮೂಗು
ಅರಳಿದ ಹೂವ ಹೊತ್ತ ಕನಕಾಂಬರ ಗೊನೆ.......

                                     --ರತ್ನಸುತ

Friday 29 June 2012

I love u ಅಮ್ಮ


ಅಕ್ಷರದ ಮೊದಲ ಅಕ್ಷರವೂ "ಅ"ಕಾರವೇ
ಜೀವನದ ಮೊದಲ ಅಕ್ಷರವೂ "ಅ"ಕಾರವೇ
ಕೂಗಿನ ಕೊರಳ ಕೊನೆಗೆ ಮಮಕಾರದ "ಮ"ಕಾರ
ಜೀವನದ ಕನೆ ಅಕ್ಷರ, ಮರಣದಲ್ಲೂ "ಮ"ಕಾರವೇ

ಅಮ್ಮ ಎಂಬ ಎರಡು ಅಕ್ಷರವೇ ಜೀವನ
ಆರಂಭದಿಂದ ಅಂತ್ಯವರೆಗೆ ಎಂಬುದದರರ್ಥ
ಕರೆಸುಕೊಂಡು ಆಕೆ ಎಷ್ಟು ಹಿಗ್ಗುವಳೋ ನಾ ಕಾಣೆ
ಕೂಗಿಕೊಂಡ ಕೊರಳ ಪ್ರಯತ್ನಕಿಲ್ಲ ವ್ಯರ್ಥ 

ಶೀತ ಗಾಳಿ ಸೋಕದಂತೆ ಹಬ್ಬಿ ನಿಂತ ಪರ್ವತ 
ಆಕೆಯ ಮಡಿಲಲ್ಲಿ ನಾ ಕಂಡದ್ದು ಸರ್ವತಾ
ಮೇಲ್ನೋಟಕೆ ಆಕೆಯ ತುಟಿ ಅರಳಿ ನಮ್ಮ ನಗಿಸಿತು 
ಎದೆಯಾಳದಲ್ಲಿ ಸಹಿಸಿರುವಳು ಚಂಡಮಾರುತ

ಪ್ರೀತಿಯ ಕೈತುತ್ತೆ ಎಲ್ಲ ಖಾಯಿಲೆಗೆ ಔಷದಿ
ಸೋಲುತ್ತಲೇ ಗೆಲ್ಲುವಳು ಬಾಳಿನೆಲ್ಲ ಆಟದಿ 
ಕಂಡ ಕನಸ ಮುಗಿಲುಗಳಿಗೆ ಆಕೆ ಹಿಡಿದ ಅಂಬರ
ಬೆಳಕಿಲ್ಲದ ಮನೆಯಲ್ಲೂ ಅವಳಿದ್ದರೆ ಸುಂದರ

ಒಮ್ಮೆಮ್ಮೆ ದೂರಾಗಲು ಕಣ್ಣೀರಲಿ ಕಾಣ್ವಳು
ಎಚ್ಚೆತ್ತುಕೊಂಡೆ ಕೂಗಿ ಕನಸಿನಲ್ಲಿ ಬೀಳಲು
ಒಂದು ಮಾತನಾಡಿದರೆ ಸತ್ತ ಬಲಕು ಬೆಂಬಲ
ಅವಳ ಹಾದು ಗೆಲುವು ಕಾಣುವುದೇ ಮನದ ಹಂಬಲ

ಬೆನ್ನ ಹಿಂದೆ ನೆರಳು ಆಕೆ ಬೆನ್ನ ತಿಕ್ಕಿ ತೊಳೆಯುವಾಕೆ
ಎಲ್ಲ ಹಂಚಿಕೊಳ್ಳಬಹುದಾದ ಬಾಳ ಸಂಗಾತಿ
ಎಷ್ಟು ಜನ್ಮ ಪಡೆದು ಅವಳ ಋಣವ ತೀರಿಸೋಕೆ ಸಾಧ್ಯ
ಮನದ ಮನೆಯ ಗರ್ಭಗುಡಿಗೆ ಅವಳೆ ಧೈವ ಮೂರುತಿ........

                                                          -- ರತ್ನಸುತ 

Saturday 16 June 2012

ಭಾವವೇಣಿ


ಆ ಕಣ್ಣಿಗೆ ಸೋತ ಬಗೆಯ ಹೇಗೆಂದು ಬಣ್ಣಿಸಲಿ
ವಿಸ್ಮಯತೆಯ ಉತ್ತುಂಗವ ಮುಟ್ಟಿ ಬಂದೆ ಅಂದು
ಎಲ್ಲವ ಮರೆತಂತಾಗಿದೆ ಹಾಗೆ ಕಣ್ಣು ಮುಚ್ಚಲಿ
ನೂರು ಭಾವಗಳನು ಮೀರಿ ಮಿನುಗಿತೊಂದು ಬಿಂದು

ನುಡಿಗಳ ಗಮನಿಸುತ್ತ ಗಮಕಗಳ ಕಲಿತುಕೊಂಡೆ
ರೆಪ್ಪೆ ಬಡಿತಕ್ಕೆ ಮೂಡಿತೆನಗೆ ತಾಳದರಿವು
ಹುಡುಕಾಡಿದ ನೋಟ ಹಿಡಿದು ಸ್ವರಗಳ ಪರಿಚಯವಾಗಿ 
ಹೊಮ್ಮಿ ಬಂದ ಹೊಸ ಹಾಡಿಗೆ ಸಿಕ್ಕಾಯಿತು ತಿರುವು 

ಆ ಸ್ಪೋಟಕ ನೋಟ ಬಾಣ ಒಂದರ-ಹಿಂದೊಂದರಂತೆ
ಮನಸೊಳಗೆ ನಾಟಿ ಶರಪಂಜರ ಗಿಳಿ ನಾನಾದೆ
ಸಿಕ್ಕಿ ಬಿದ್ದ ನನ್ನ ಕಡೆಗೆ ಮತ್ತೆ ಆಕೆ ತಿರುಗದಿರಲು
ನೀರಿನಿಂದ ಹೊರ ತೆಗೆದ ಒದ್ದಾಡಿದ ಮೀನಾದೆ 

ಆಕಾಶದ ನೀಲಿ ಅವಳ ಕಣ್ಣುಗಳ ಹೋಲುತಿತ್ತು 
ನಡುವೆ ಅಡ್ಡಿ ಪಡಿಸಿದ ಮುಂಗುರುಳೆ ಕರಿ ಮೋಡ
ಚಾಚಿದಷ್ಟೂ ಬಾಚಬಹುದಾದ ಆ ಮುದ್ದು ಮುಖ
ಜಾಗವಿರದೆ ಉಕ್ಕಿ ಬರುತಿತ್ತು ನಗೆ ಕೂಡ

ಹಂಸ ನಡೆಯ ಕಾಣದವಗೆ ಹಿಂಸೆಯಾಯಿತವಳ ನಡೆ
ಭಾವುಕ ಕವಿಗಳಿಗೆ ಆಕೆ ಪದಗಳ ಮಳೆಗಾಲ 
ಜೀವಂತಿಕೆ ಪಡೆದುಕೊಂಡ ಶಿಲೆಗಳೂ ನಾಚುತಾವೆ
ಶಿಲೆಗಲಾಗೆ ಉಳಿಯೆ ಇಚ್ಚಿಸುತ್ತ ಛಿರಕಾಲ

ಪಶ್ಚಿಮ ಪರ್ವತದ ಹಿಂದೆ ಅವೆತು ಮಾಯವಾದ ರವಿ
ಬೆಳದಿಂಗಳ ಹೆಣ್ಣ ರೂಪ ಧರಿಸೆ ಆಜ್ಞೆ ಮಾಡಿದ
ವ್ಯಾಕರ್ಣಕೆ ಇದ್ದ ಸೋತ್ತೆಲ್ಲ ಖಾಲಿಯಾದರು
ಬಣ್ಣಿಸುವ ಕಾವ್ಯ ಸಿರಿಯ ನನಗೆ ಮಾತ್ರ ನೀಡಿದ......

                                                  --ರತ್ನಸುತ 

Saturday 2 June 2012

ಪದಾನುಭವ

ಒಬ್ಬರ ಬಲಹೀನತೆ, ಮತ್ತೊಬ್ಬರಿಗೆ ಅಸ್ತ್ರ
ಒಬ್ಬನಿಗೆ ಶತ್ರು ಒಬ್ಬ, ಮತ್ತೊಬ್ಬನ ಮಿತ್ರ
ಒಬ್ಬನ ಮುರುಕಲು ಗುಡಿಸಲು,ಮತ್ತೊಬ್ಬನ ಛತ್ರ
ಅವನಿಗಿರದ ಪ್ರಶ್ನೆಗಳಿಗೆ, ಇವನಲ್ಲಿದೆ ಉತ್ರ
 
ಆಕಾರಕೆ ಬೆಲೆ ಕೊಟ್ಟವ ವಿಕಾರಿಯಾಗುವನು
ಅತಿಯಾಗಿ ಬಯಸುವವನೆ ಬಿಕಾರಿಯಾಗುವನು
ಇಟ್ಟ ಗುರಿಯ ಬೆನ್ನು ಹಟ್ಟುವವನೆ ಶಿಖಾರಿಯಾಗುವನು
ಭಾವನೆಗಳ ಲೆಕ್ಕಿಸುವವ ಸಂಸಾರಿಯಾಗುವನು
 
ಎಣಿಕೆಗೆ ಸಿಗುವ ಮೆಟ್ಟಿಲು ಎಳಿಗೆಗಾಗಲ್ಲ
ಮಾತಿನಲ್ಲೇ ಮುಗಿವ ಸ್ನೇಹ ಜೀವನಕಾಗಲ್ಲ
ಹೊಟ್ಟೆಗಾಗೆ ಉಣಿಸೋ ಹಾಲು ಎದೆಗೆ ಮೀಸಲಲ್ಲ
ಕಣ್ಣೀರನು ಒರೆಸಲಿಕ್ಕೆ ಕೈಗಳು ಬೇಕಿಲ್ಲ
 
ಮಿತವಾದ ಸಿಹಿಯ ಹೊತ್ತ ಮಿಟಾಯಿಗಿಲ್ಲ ಹೆಸರು
ನೀರು ಕೂಡ ಹಾದಿ ತಪ್ಪಿ ಆಗಬಹುದು ಕೆಸರು
ನಂಬಿದವನ ನಂಬಿಕೆಗಳೇ ನಾಳೆ ತೋರೋ ಉಸಿರು
ಬೇರು ಗಟ್ಟಿ ಊರಿದಾಗ ನಿಟ್ಟುಸಿರಿನ ತಳಿರು
 
ಬೆದರು ಬೊಂಬೆ ಕೂಡ ಬೆದರಿಸೋಕೆ ಜೀವ ತಾಳಿದೆ
ಸ್ತಬ್ಧ ಚಿತ್ರವಾದರೂನು ಹೊಸ ಕಣ್ಣ ಸೆಳೆದಿದೆ
ಹಳೆ ದಾರಿ ಅದೇ ತೀರ ತಲುಪಿಸುವುದಲ್ಲದೆ
ತಿರುವು ನೀಡಿದಾಗ ಹೊಸತು ಆಶ್ಚರ್ಯವ ನೀಡದೆ??
 
ಬಳಕೆಯಿಂದ ಕರಗಿ ಹೋದ ಬಳಪ ಧನ್ಯವಾಯಿತು
ತಿದ್ದಿ ತಿದ್ದಿ ಬರೆದ ಅಕ್ಷರವೇ ಅನ್ನವಾಯಿತು
ಆಕಳಿಕೆಯ ಗಾಳಿ ಅಮ್ಮನನ್ನು ನೆನಪು ಮಾಡಿತು
ಜೊತೆಗಿರುವ ಉಸಿರೇ ಅಮ್ಮನೆನಲು ಸುಮ್ಮನಾಯಿತು
 
ಹಾಲಿರದ ಗೆಜ್ಜಲನ್ನ ಗುದ್ದಿ, ಗುದ್ದಿ ತೆಗೆದರೆ
ಹಸಿದ ಕಾರುವ ಹಸಿವು ಕೊಂಚವಾದರೂ ನೀಗದೆ?
ಎಲ್ಲ ಮುಗಿಯಿತೆಂದುಕೊಂಡ ಮೇಲೂ ಹರಿವ ಮನಸಿಗೆ
ಹೀಗೆರಡು ಪದವ ಗೀಚಿಕೊಳಲು ಧಿಕ್ಕು ದೊರೆತಿದೆ.....
 
 
                                                      -- ರತ್ನಸುತ

Saturday 19 May 2012

ಅಲೆಮಾರಿ ಅಲೆ

ಇಲ್ಲಿವರೆಗೆ ನಾನೆದ್ದರೆ, ಅಲೆಯೊಂದು ಏಳುತ್ತಿತ್ತು
ಸುತ್ತಲೂ ಸ್ಮಶಾಣ ಮೌನ ಮಾತ್ರವೇ ಕೇಳುತಿತ್ತು
ನೋಡಿ ಸುಮ್ಮನಾಗುತಿದ್ದೆ ಲೋಕವಿಷ್ಟೇ ಅಂದುಕೊಂಡು
ಆದರೂ ಸಣ್ಣ ಕೊತೂಹಲ ಮತ್ತೆ ಯತ್ನಿಸಿತ್ತು
 
ಎತ್ತರಕ್ಕೆ ಜಿಗಿದಾಗೆಲ್ಲ, ನಾನೇ ಎಲ್ಲರಿಗೂ ಮಿಗಿಲು
ಎಂಬ ಅಹಂ ಮೂಡದಿರಲು ನಾನೇನು ಕಲ್ಲಲ್ಲ
ಮತ್ತೆ ಇಳಿಜಾರಿದಾಗ ಎಲ್ಲರ ಸಮ ಆಗುತಿರಲು
ಸಂಕೊಚಕೆ ತಲೆ ಬಾಗಿಸಿ ನಾಚಿದ್ದು ಸುಳಲ್ಲ
 
ನಾ ನಗಿಸಿದಾಟಕ್ಕೆ ನಗೆ ಮೂಡಬೇಕೆನಿಸಿ
ಒತ್ತಾಯಕೆ ಲೋಕವನ್ನು ನಗಿಸುವಂತೆ ಮಾಡಿದೆ
ಎಲ್ಲ ನದಿ ದಾರಿಗೊಂದು ಕಡಲ ತುದಿ ಇದ್ದ ಹಾಗೆ
ನನ್ನ ಅಲ್ಪತನಕೂ ಕೊನೆಗೊಂದು ಗೋಡೆ ಬೇಕಿದೆ
 
ಆಗಾಗ ನನಗೂ ಮೈ ಭಾರವೆನಿಸುತಿತ್ತು
ಅನ್ಯರ ಜಿಗಿತಕ್ಕೆ ನನ್ನ ನಿರ್ಲಕ್ಷ್ಯವಿತ್ತು
ಅಲೆಯೆಬ್ಬಿಸಿ ಯುಗ ಕಳೆದರು ಅಲ್ಲೇ ಕೊಳೆಯುತ್ತಿದ್ದೆ
ಬದಲಿಗೆ ಹಿಂಬರುವ ಅಲೆಗೆ ಸ್ಪಂದಿಸಬಹುದಿತ್ತು
 
ಈಗ ಗೋಚರವಾಗಿದೆ ನನ್ನ ಅಸ್ತಿತ್ವ
ಅರಿತುಕೊಂಡೆ ಕಡಲೊಳಗಿನ ಪಯಣದ ಮಹತ್ವ
ತಿದ್ದುಕೊಂಡೆ ನನ್ನ ಬೆನ್ನ ನಾನೇ ತಟ್ಟಿಕೊಳ್ಳಲಾರೆ
ಎಲ್ಲವೂ ಕಾಲ ಕಲಿಸಿಕೊಟ್ಟ ಮಹತ್ವ
 
ಅರೆ ಬರೆ ಕನಸುಗಳಿಗೆ ಬೆಂಬಲ ಪರರ ಕನಸು
ನನ್ನ ಕನಸೂ ಕೂಡ ಚೆತರಿಸಿತು ಕೆಲವರ
ಅಲ್ಲಿ ಇಲ್ಲಿ ಅಲೆಯುತಿದ್ದೆ ಯಾವುದೋ ಹುಡುಕಾಟಕೆ
ಸುತ್ತಲೇ ಇತ್ತು ನನಗೆ ಸೂಕ್ತವಾದ ಪರಿಸರ
 
ಈಗ ಹಿಂಬರುವ ಅಲೆಗೆ ನನ್ನ ಸಹಕಾರವಿದೆ
ಮುಂದೆ ಎದ್ದೆ ಅಲೆಗೆ ನನ್ನ ಪೂರ್ಣ ಅಧಿಕಾರವಿದೆ
ಈಗ ಬೆಳೆಸೋ ಪಯಣದಲ್ಲಿ ವಿನೂತನ ಖುಷಿಯಿದೆ
ಇನ್ನು ತೀರ ತಲುಪೋ ಸರದಿ ನನ್ನದಾಗಬೇಕಿದೆ......
 
                                              --ರತ್ನಸುತ

Saturday 12 May 2012

ಆ ಸಂಭಾಷಣೆ

ಅದೊಂದು ಅನರ್ಥ, ಅಪೂರ್ಣ, ಆನಂದಮಯ ಅನುಭವ
ವರ್ಣನೆಗೆ ನಿಲುಕದ ಅಪೂರ್ವ ಕಲರವ
ಹೇಗೆಂಬುದೇನು ಹೇಳಲಾರೆ
ಹಾಗೆ ಮೊದಲಾಗಿ ಕೊನೆಗೊಂಡ ರಮಣೀಯ ಸಂಭವ
 
ನಾವಿಬ್ಬರು ಮಾತನಾಡಿಲ್ಲ ಅಲ್ಲಿ
ಎದುರಿಗಿತ್ತು ಪ್ರತಿಬಿಂಬದ ಕನ್ನಡಿ
ನನ್ನಿಂದ ಹೋರಡಿದ್ದು ಅವನಿಗೆ ಪ್ರತಿಧ್ವನಿ
ಅವನಿಂದ ಕೇಳಿಸಿತು ನನ್ನದೇ ಸ್ವಂತ ದ್ವನಿ
 
ಕಪ್ಪು- ಬಿಳಿ ಚಿತ್ರದಂತಿತ್ತು ನೆನಪುಗಳು
ರೆಪ್ಪೆ ಬಡಿದರೆ ಜಾರಬಹುದಿತ್ತು ಕಣ್ಗಳು
ಅಷ್ಟು ಭಾರದ ಕನಸುಗಳ ತುಂಬಿಕೊಂಡೆವು
ಸಾಧನೆಯ ಸಲುವನ್ನು ಅದರೊಳಗೆ ಕಾಣಲು
 
ಸಾಗಿತ್ತು ಬೇಕು-ಬೇಡದ ಅಂಧ ಚರ್ಚೆ
ಒಂದಷ್ಟು ಹೊತ್ತು ಹಳೆ ಕೆಲಸದ ವಿಮರ್ಶೆ
ಮರೆತದ್ದು ಒಂದೇ, ಸಮಯದ ಪೀಕಲಾಟ
ಕಂಡದ್ದು ಮಾತ್ರ ವರ್ಣಮಯ ಪರಿಶೆ
 
ನಾ ಕೊಟ್ಟೆ ಅವನಿಗೆ ಕಲೆಗೊಂದು ಗುರುತು
ಮಾತಾಡಿಕೊಂಡೆವು ಇಬ್ಬರನು ಕುರಿತು
ಅವನಿಟ್ಟ ಪ್ರತಿಕ್ರಿಯೆಗೆ ಬೆಲೆ ಕಟ್ಟಲಾರೆ
ಒಬ್ಬರಿಗೊಬ್ಬರು ಅಲ್ಲಿ ಸೋಲಬೇಕಿತ್ತು
 
ತುಂಬಿದ ಮನಸುಗಳು ಮಾತಲ್ಲಿ ಧ್ವನಿಸಿ
ದೂರದಲೇ ಉಳಿದರೂ ಹಾಗೊಮ್ಮೆ ಬಳಸಿ
ಮೈ ಮರೆತು ಮನಸಾರೆ ಜೋರಾಗಿ ನಕ್ಕು
ಖುಷಿ ಎಂಬುದೇನೆಂದು ಜೀವನಕೆ ತಿಳಿಸಿ
 
ಮರೆಯಾಗೋ ವೇಳೆಗೆ ಮೌನದ ಆಣೆ
ಮರೆತೂ ಮರೆಯಲಾರದವನು ಅವನೆ
ತುಂಬಿಕೊಂಡ ಹೊಸ ಪರಿಚಯಕೆ ಎಡೆ ಮಾಡಿಕೊಟ್ಟು
ಬಿಗಿಸಿದೆ ಬೀಗವ ನನ್ನೆದೆಯ ಕೋಣೆ
 
ನಾ ಹೀಗಿರಲು ಆತ ಕಾರಣ ಪುರುಷ
ಹೇಗಿದ್ದರೂ ಇದುವೆ ಗುರುತಾಗೋ ಕಲಶ
ಈ ಎಲ್ಲ ಗುರುತುಗಳ ಒಟ್ಟಾರೆ ನೋಡಲು
ಜೊತೆಗಾತ ಇರಲದುವೆ ಸ್ಮರಣೆಯ ದಿವಸ....
 
 
                                                   -- ರತ್ನಸುತ

Monday 7 May 2012

ಹೆಜ್ಜೆ ಗುರುತು

22/11/2011 ರಲ್ಲಿ ಶುರುವಾದ  ನನ್ನ  ಹೊಸ  ಪಯಣ  ಇಂದಿಗೆ (07/05/2012)ನೂರರ  ಸಂಭ್ರಮ ಆ ಚರಿಸುತ್ತಿದೆ,  ಈ   ಸಂಧರ್ಭದಲ್ಲಿ ನನ್ನ ನೂರು ಹೆಜ್ಜೆ ಗುರುತುಗಳು  ಹೀಗಿವೆ:


  1. ಬೇಕಿಗಿಲ್ಲ  ಬ್ರೇಕು
  2. ಮುಚ್ಚಿಟ್ಟ  ಮಾತುಗಳು
  3. ಮನ್ಮಥ  ಯಾಘ  ಕನಸು
  4. ಕಾಲದ ಮುಳ್ಳೇ, ಸ್ವಲ್ಪ ನಿಲ್ಲೇ
  5. ಕಳ್ಪೂಜೆ
  6. ಬೀದಿ ಜಗಳ
  7. ಬದುಕಿಗೆ ಮೂರು ಮುಖಗಳು
  8. ಅವಳು - ಇನ್ನೂ ಅರ್ಥವಾಗಿಲ್ಲ
  9. ಅಪರಾಧ
  10. ಹಾರಾಟದ ಗಾಳಿಪಟ
  11. ಮಾನಗೆಟ್ಟ ಮನ್ಸ
  12. ನಾ ಬಯಸಿದ್ದಲ್ಲ 
  13. ಘಧ್ರೋ ಗೌಡ
  14. ನನ್ನ ಗೋಳು ನನ್ನದು
  15. ನೀ ಕೊಟ್ಟ ಉಡುಗೊರೆ
  16. ಮೂರ್ಖಾವಲೋಕನ
  17. ರಸಋಷಿ ನಮನ
  18. ನಾನು - ಹೀಗೂ ಉಂಟು
  19. ತೇಲಿ ಬಿಟ್ಟ ಕವನ 
  20. ವರ್ಷದ ಕೊನೆ
  21. ನೀನಿಲ್ಲವಾದಲ್ಲಿ
  22. ವಿಪರ್ಯಾಸ
  23. ಸುಳ್ಳು ಕಥೆಯಾದರೂ, ಕಥೆ ಸುಳ್ಳಲ್ಲ
  24. ನೆರೆಪೀಡಿತ ಬದುಕು
  25. ಕಾರು ಬಾರು
  26. ಹೋರಾ
  27. ಏಕಪಾತ್ರಾಭಿನಯ  
  28. ಕಾವ್ಯ ಭಾಷೆ
  29. ಜ್ಞಾನ ದಾಸೋಹ
  30. ಅಲೆಮಾರಿ ಮನಸಿನ ಒಂದು ಹುಚ್ಚಾಟ
  31. ಹಿಮ ಚುಂಬನ
  32. ಒಬ್ಬಂಟಿಗ
  33. ನಾನು
  34. ಎಚ್ಚರ ಗೆಳತಿ, ನಾ ಕೆಟ್ಟವನಲ್ಲ
  35. ಕ್ಷಮಿಸು ಗೆಳೆಯ
  36. ಹಿತ್ತಲ ಹೂವು
  37. ನಿಮ್ಮಿಂದ ನಾನು
  38. ಮಂಕು ತಿಮ್ಮ
  39. ಕೃತಜ್ಞತಾ ಕವನ
  40. ಮುಕ್ತ ಧ್ವನಿ
  41. ಹೀಗೂ ಒಂದು ಕವನ
  42. ಅಯ್ಯೋ ಗಂಡಸೇ 
  43. ಹುಚ್ಚು ಮನ
  44. ಗಾಳಿಯಾದ ಬೆಳಕು
  45. ನನ್ನದಲ್ಲದ ನೆನಪು 
  46. ಒಪ್ಪುವಿರಾ... ನಾನೂ ಕವಿಯೆಂದು?
  47. ಕನಸೂರಿಗೆ ಪಯಣ
  48. ಕ್ಷಮಿಸು ತಾಯೆ
  49. ತಿಳ್ಧೋರ್ ಮಾತು
  50. ಅಮಂಗಳ ನಾನು
  51. ನನ್ನವಳನಿಸದ ನನ್ನವಳು
  52. ಬರೇ ಬರೆಯದ ಕವನ
  53. ಅಸಂಭವ ಪ್ರೀತಿ
  54. ಬಣ್ಣ ಮಾಸಿದ ಗೋಡೆ
  55. ನಿಮಗೊಂದು ನಮನ 
  56. ಯೋಗ್ಯನಲ್ಲ ನಾನು ನಿನಗೆ
  57. ಮನದೊಳಗೆ ಹೀಗೊಂದು ಪದ
  58. ಕವಿಯ ರಾಜ ಮಾರ್ಗ
  59. ನಾನೊಬ್ಬ ರಾಕ್ಷಸ 
  60. ಬಡವ v /s ಸಿರಿವಂತ
  61. ಬಟ್ಟರ ಬಾಳು
  62. ಇದೂ ಒಂದು ನೆನಪು
  63. ಆ ಒಂದು ನೋಟ 
  64. ಇದೂ ನನ್ನ ಅವತಾರವೇ
  65. ಹಸಿದಾಗಿನ ಕವಿಯ ಪಾಡು
  66. ಅಪೂರ್ನತೆಯೇ ಪೂರ್ಣತೆ
  67. ಅನರ್ಥ ಮಾತುಗಳು 
  68. ಬೇಜಾರು ಬಾಳು
  69. ಎಲ್ಲಿಂದೆಲ್ಲಿಗೆ ಹೋದೆ?
  70. ಆತ್ಮಹತ್ಯೆಗೆ ನನ್ನ ಒಲವು?
  71. ನೆನಪಿನಂಗಳ
  72. ಕಲ್ಪನೆ
  73. ಬಾ ನೋಡು ಗೆಳತಿ
  74. ಯುರೋ ಪ್ರವಾಸದ ಮೊದಲದಿನ
  75. ಯುರೋ ಪ್ರವಾಸದ ಮೊದಲೆರಡು ದಿನಗಳು
  76. ಸ್ವಿಜ್ಜ್ ಸಾಂಗತ್ಯ 
  77. ನನ್ನ ವಿಶ್ವ ಮಿತ್ರ
  78. ಮನದ ಮಂಥನ
  79. "ತು" ಪ್ರಾಸದ ಕಾವ್ಯ 
  80. ಯಾರೋ ಕೆತ್ತಿದ ಶಿಲೆಗೆ ನಾ ಸೋತ ಬಗೆ 
  81. ಭಾನುವಾರ ಸಂಜೆ
  82. ಕೊನೆಗೂ ಕತ್ತಲಾಯಿತು
  83. ಪ್ರಭಾವಿ ಸಾಲುಗಳು ಮಿತ್ರನಿಂದ 
  84. ಬ್ಯಾಚುಲರ್ ಬಾಯ್ಸ್ ಫೀಲಿಂಗ್ಸ್
  85. ದಡ್ದನಾಗಿಸಿದ ಕಾವ್ಯ
  86. ಬಿಸಿಲ ಮಳೆ
  87. ಆಡದ ಮಾತು 
  88. ಮುನ್ನಡೆ
  89. ಅವಳ ಕಣ್ಣೀರಿನೆದುರು
  90. ಅವನ ಕುರಿತು ಬರೆದೆನೇಕೆ?
  91. ನಾದಮಯ 
  92. ಕಾವ್ಯ ಹರಿದ ಮನಸು 
  93. ನಾಲ್ಕು ಗೋಡೆ ಸುತ್ತ 
  94. ಅನರ್ಥ ಪಯಣ 
  95. ಬಾಡೂಟಕೆ ಕಾಯೋದ್ಯಾಕೆ?
  96. ಬಿಳಿ ಕುರಿಗಳ್ ಮಧ್ಯೆ, ಕರಿ ಕುರಿ
  97. ಬಹಿಷ್ಕಾರ 
  98. ಎಲ್ಲ ಮುಗಿದ ಮೇಲೆ
  99. ಶತಕದ ಹೊಸ್ತಿಲಲ್ಲಿ
  100. ಸುಗ್ಗಿ ಕಾಲ 

                                                                  -ರತ್ನಸುತ 

Sunday 29 April 2012

ನನ್ನ "ವಿಶ್ವ"ಮಿತ್ರ

ಗೆಳೆಯ ಅಗೋ ಕರೆ ನೀಡಿದ ಬಹಳ ದಿನದ ನಂತರ
ಮಾತನಾಡಿದಷ್ಟ್ಹೊತ್ತು ಎಲ್ಲಿ ಮಾಯ ಬೇಸರ
ಚೇಷ್ಟೆ ಮಾಡಿಕೊಂಡು ಕಳೆದ ಒಂದೊಂದು ನಿಮಿಷಕೂ
ಜಾರಲು ಮನಸಾಗದೆ ದಾರಿ ಮಾಡಿತೆಲ್ಲಕೂ

ಅತಿರೇಖವ ನಿಭಾಯಿಸಿ ದಡ್ಡತನವ ತೋರಿಸಿ
ಪೆದ್ದ ಪೆದ್ದ ಆಲೋಚನೆಗಳಿಗೆ ತಲೆಯ ಬಾಗಿಸಿ
ಅವನೊಮ್ಮೆ ನಕ್ಕರೆ ಇಲ್ಲೊಮ್ಮೆ ಚಿವುಟು
ಜೊತೆಗೆ ನಕ್ಕಾಗ ಉಳಿಯಿತೆಲ್ಲಿ ನಡುವೆ ಒಗಟು

ಜೊತೆಗೆ ಸಾಗಿ ಬಂದೆವಲ್ಲಿ ಬಾನೆತ್ತರ ವಿಹರಿಸಿ
ಕಾಣೆಯಾದ ನೆನಪುಗಳ ಕಣ್ಣ ಮುಂದೆ ಪಸರಿಸಿ
ಬೀಗಿದೆವು ಒಬ್ಬೊಬ್ಬರು ಮತ್ತೊಬ್ಬರ ಕಂಡು
ಸಾಗಿದೆವು ಮುಂದೆ ಹಾಗೆ ಮಾತನಾಡಿಕೊಂಡು

ಇಟ್ಟುಕೊಳ್ಳದೆ ಯೋಜನೆ ಮಾಡಿಕೊಳ್ಳದೆ ತಯಾರಿ
ಮಾತಿನ ಬಾಣಗಳ ಸೀದ ಹೇಗೆ ಗುರಿಗೆ ಗುರಿಯಿಟ್ಟು?
ತಿಳಿವ ಮೊದಲೇ ಗುಟ್ಟುಗಳನು ಬಹಿರಂಗ ಪಡಿಸಿದೆವು
ಅನುಮಾನಗಳಿಗೆ ಪೂರ್ಣ ವಿರಾಮವನು ಕೊಟ್ಟು

ಎಲ್ಲವನ್ನು ಹಂಚಿಕೊಂಡು ಒಂದಿಷ್ಟು ಉಳಿಸಿಕೊಂಡು
ಮುಂದೆಂದಾದರೂ ಹೇಳಬೇಕೆನಿಸಬಾರದೆ?
ಮುಗಿಯಿತೆಂದು ಅಂದುಕೊಳ್ಳುವಷ್ಟರಲ್ಲಿ  ಮತ್ತೊಂದು ಚರ್ಚೆ
ಗೆಳೆಯರ ಮಾತಿಗೂ ಒಂದು ಅಂಕುಶ ಇರಬಾರದೆ?

ಮುಗಿಯುವಷ್ಟರಲ್ಲಿ ಮನಸು ಹಗುರವಾಗಿ ಹಾರುತ್ತಿತ್ತು
ಮುಗಿದ ಮೇಲೆ ಮತ್ತದೇ ನಿರೀಕ್ಷೆಯ ಭಾರ
ಕಡಲ ಅಲೆಗಳಾಗಿ ನಮ್ಮ ಸಂದೇಶ ರವಾನಿಸಲು
ನಾನೊಂದು ತೀರವಾದೆ, ಮತ್ತವನೊಂದು ತೀರ.......


                                                       -ರತ್ನಸುತ

Friday 27 April 2012

ಆಡದ ಮಾತು

ತುಟಿ ದಾಟದೆ ಹೊಸ್ತಿಲಲ್ಲೇ, ಕುಳಿತಿತ್ತು ಒಂದು ನುಡಿ
ಏನು ಅಂಜಿಕೆಯೋ ಪಾಪ, ಅರಿತು ದಾರಿ ಮಾಡಿ ಕೊಡಿ
ಒಮ್ಮೊಮ್ಮೆ ಇದ್ದ ದಾರಿ, ಇಲ್ಲದಂತೆ ತೋಚುವುದು
ಬಂದದ್ದು ಬರಲಿ ಅದರ ಇಷ್ಟಕ್ಕೆ ಬಿಟ್ಟು ಬಿಡಿ

ಹೊರ ಬರುವ ಕಾಲಕ್ಕೆ ಮಿಂಚಿ ಹೋದ ಸಮಯವಾಗಿ
ಒಳ ಆಸೆಗಳೆಲ್ಲ ಅಲ್ಲೇ ಕೊಳೆತಂತಿದೆ ಮಾಗಿ,ಮಾಗಿ
ಇದ್ದ ನೋವು ಹೆಚ್ಚುವುದು ಕೊಡದಿದ್ದರೆ ಕಾರಣ
ಆದ ನೋವು ಸಹಿಸಲಾಗದು ಇರದಿದ್ದರೆ ಕಾರಣ

ಕಿವಿಗಳಿಲ್ಲದಾಗಲೇ ಹೆಚ್ಚು ನುಡಿವ ಹಂಬಲ
ಎಷ್ಟೇ ಪಳಗಿ ಇದ್ದರು ಆ ಕ್ಷಣವೇ ಚೊಚ್ಚಲ
ಅದಕೆ ತಕ್ಕಂತೆ ಮನ ದೃಢವಲ್ಲದೆ ಕೊರಗಿತ್ತು
ಅದಕೇ ಆ ಗಳಿಗೆಗೆ ನಿರ್ಧಾರಕಿರದು ಬೆಂಬಲ

ಕೂಗಿ ಕರಗಿ ಹೋಗುತಿದೆ, ಸದ್ದಿಲ್ಲದೇ ಕೂಗೊಂದು
ಕರೆಗೆ "ಹೂ"ಗೋಡುವವರು ತೋಚದೆ ಯಾರೆಂದು
ಮನಸಿನಲ್ಲಿದೆ ಆ ಅಪರಿಚಿತ ಭಾವಚಿತ್ರ
ಕೊರಳಿಗೆ ತಿಳಿವುದ್ಹೆಗೆ, ನಿಲ್ಲಿಸಿದರು ಸಾಕೆಂದು

ಪೂಜೆಗೈದು ಶುಭವಾಗದಿರಲು ದೇವರಲ್ಲ ಕೆಟ್ಟವ
ಇದ್ದ ಹೂವ ಬಾಡ ಬಿಟ್ಟು ಹುಡುಕ ಬೇಡಿ ಗಂಧವ
ಕಿರಣಗಳಿಗೆ ಜಾರಿ ಬಂದು ಬೆಳಕ ಬೀರೋ ಗುಣವಿದೆ
ಕಣ್ಣು ಮುಚ್ಚಿ ಕತ್ತಲಿಗೆ ಸೊಲುತಾನೆ ಮಾನವ

ಅಳುವಾಗಿನ ಹನಿಗಳಿಗೆ, ಹೇಳ ಬೇಕು ಕಾರಣ
ಇಲ್ಲವಾದರೆ ಹರಿಯಲೂ ಹಿಂಜರಿಯ ಬಹುದವು
ಆಡದ ಮಾತುಗಳಿಗೆ ಶಿಕ್ಷೆಯಾಗಬೇಕೆಂದರೆ
ಕಣ್ಣೀರಿನ ರೂಪ ತಾಳೆ, ಬಿಟ್ಟು ಹೋಗಬೇಕವು.............


ಮಾಡಿದ ತಪ್ಪುಗಳಿಗೆ ಪ್ರಾಯಷ್ಚಿತವಾಗಿ ಮನಸಾರೆ ಅತ್ತು ಬಿಡಿ, ಮನಸ್ಸು ಹಗುರಾದರೂ ಆಗಬಹುದು.......


                                                                                    -ರತ್ನಸುತ

Wednesday 25 April 2012

ಶುಭಾಷೆಯ ಗೆಳತಿ

ನಾ ಬರದಷ್ಟು ದೂರುಳಿದೆ ನಿನ್ನ ಮದುವೆಗೆ
ಎಷ್ಟು ಕಷ್ಟವಾಯಿತೋ ಗೊತ್ತೇ ನನ್ನ ನೆರಳಿಗೆ
ನನ್ನ ಬಿಟ್ಟು ಹಾರಿ ಬರಲು ಸಜ್ಜಾಗಿತ್ತು ಅದು
ಹಿಡಿದಿಟ್ಟ ಅಷ್ಟು ಹೊತ್ತೂ ಕೆಲಸ ಬಿತ್ತು ಬೆರಳಿಗೆ


ಅನಿಸಿತು, ಕರೆ ಮಾಡಿ ಸಾದಾರನವಾಗುವುದು ಬೇಡ
ಬೆಂಬಲಕೆ ನಿಂತಿತ್ತು ನನ್ನ ಮನವೂ ಕೂಡ
ಕಾಣಿಕೆಯೂ ಕೊಡದಷ್ಟು ಪಾಪಿಯಾದೆ ನಿನಗೆ ಇಂದು
ಮುಡಿಪಾಗಿರಿಸಲಾಗಲಿಲ್ಲ ನಿನಗೊಂದು ಹಾಡ

ಇಷ್ಟು ದಿನ ಆಗಿದ್ದೆ ಕಡಲೊಳಗಿನ ಒಂದು ಅಲೆ
ಈಗ ಸಿಕ್ಕಿರುವುದು ನಿನಗೂ ಒಂದು ತೀರ
ಯಾರಿಂದಲೂ ದೂರಪದಿಸಲಾಗದಂತೆ ಹೀರಿಕೊಳಲಿ
ನೀ ಬಿಡದೆ ಸೇರಿಕೋ ಅದರ ಅಂತರಾಳ


ನೀನಾಗು ಕಾಲಿ ಆಗಸಕೆ ಮಳೆ ಬಿಲ್ಲು
ನಿನ್ನವನ ಸಾಂಗತ್ಯದಿ ಎಲ್ಲವನ್ನು ಗೆಲ್ಲು
ಆಗಾಗ ಹಿಂದಿರುಗಿ ನೋಡಬೇಕು ನಡೆದ ದಾರಿ
ಅದಕಾಗಿ ತಿರುಗಿನೋಡಲೆಂದು ಒಮ್ಮೆ ನಿಲ್ಲು


ಅರಸುವಷ್ಟು ಹಿರಿಯನಲ್ಲ, ಹೇಳುವಷ್ಟು ಜಾಣನಲ್ಲ
ನಿನ್ನ ಜೀವನದಲಿ ಹೊರಳಿಸಿದ ಒಂದು ಪುಟ ನಾನು
ನಿನ್ನ ಹೊಸ ಬದುಕಿನಲ್ಲಿ ಹೀಗೊಂದು ಗುರುತ ಕೊಟ್ಟು
ನೆನಪಾಗಿ ಉಳಿಯುವ ಈ ಯತ್ನ ನನ್ನದು..........


ಹಸಿರಾಗಿರಲಿ ನಿನ್ನ ಬಾಳು ಎಂದಿನಂತೆ, ಇದೆ ಗೆಳೆಯರೆಲ್ಲರ ಪರವಾಗಿ ನನ್ನ ಕೋರಿಕೆ. ಅಭಿನಂದನೆ ಗೆಳತಿ.

                                                                            ಇಂತಿ ನಿನ್ನ ಮಿತ್ರ,
                                                                                  - ರತ್ನಸುತ


ಬಾಲಾಜಿ ಮೇಲೆ ಸಿಟ್ಟು ಬಂದಾಗ

ಅವನೊಬ್ಬ ವಿಚಿತ್ರ ಪ್ರಾಣಿಯ ಹೋಲುವ ಮನುಷ್ಯ. ಅವನ ಧುಷ್ಟ ಸ್ವಭಾವ (ಧುಷ್ಟತನವಿರದಿದ್ದರೂ ಧುಷ್ಟವೆನಿಸೋ ಸ್ವಭಾವ), ಕುಚೇಷ್ಟೆ ಇವೆಲ್ಲವೂ ಒಂದು ಹಂತದ ವರೆಗೆ ಸಹನೀಯವಾದರೂ ಕೆಲವೊಮ್ಮೆ  ಕ್ಷಣಕಾದರೂ ಸಹಿಸಲಾರದಷ್ಟು ಹಿಂಸೆ ಉಂಟು ಮಾಡುವಂತದ್ದು.
ಅವನು ಬಾಲಾಜಿ, ಅವನಿಗೆ ಬಾರೀ ಸ್ವಾಭಿಮಾನ, ಅವ ಹೇಳಿದ್ದೆ ವೇದ ವಾಕ್ಯ, ತಿರುಗಿ ಬಿದ್ದರೆ ಅಷ್ಟೇ ಅವರ ಗತಿ; ನನ್ನ ಶತ್ರುಗೂ ಬೇಡ ಆ ಪಜೀತಿ. ಮಾತುಗಳು ಒಂದೊಂದು ಸಿಡಿ ಗುಂಡು, ಸಿಕ್ಕಿಹಾಕಿಕೊಂಡವ ಪಾಪ ಪಾಪಿಯೇ ಸರಿ.
ಅವನಿಗೆ ಇಬ್ಬರು ತಮ್ಮಂದಿರು, ಬಾಲಾಜಿ ಎಂಬ ತಕ್ಕಡಿಯಲ್ಲಿ ಇಬ್ಬರನ್ನು ಹಾಕಿ ತೂಗಿದರೆ ಕಿಂಚಿಷ್ಟು ಆಚೆ-ಈಚೆ ಕದಲದೆ ಮುಳ್ಳು, ಮಧ್ಯಕ್ಕೆ ಅಂಟುವುದು ಗ್ಯಾರೆಂಟೀ ಎಂಬ ವಾದ ಅವನದ್ದು.
ಭಾವುಕತೆ ಏನೆಂಬುದು ಅವನ ಜೊತೆ ಬೇರೆತವರಿಗೆ ಬಹು ಬೇಗನೆ ತಿಳಿದು ಬಿಡುತ್ತೆ, ಇಷ್ಟ ಪಟ್ಟವರಿಗೆ ಇರುವೆ ಕಚ್ಚಿದರೂ ರಾತ್ರಿಯೆಲ್ಲ ಅಳುವಂತ ಮುಗ್ಧ ಮನಸ್ಸು, ಅದೇ ಬೇಡದವರು ಗೋಳಾಡಿದರೂ ಆಲಿಸದೆ ಅವನಿಷ್ಟದತ್ತ ತಪಸ್ಸು.
ಮುಂಗೊಪತನ ಅವನಿಗೆ ಹೇಳಿಮಾಡಿಸಿದ ಆಬರಣ, ಯಾವಾಗ ನಗುವನೋ ಇನ್ನ್ಯವಾಗ ಸಪ್ಪಗಿರುವನೋ ಎಂಬ ಅಂದಾಜು ಹಾಕುವುದು ಕಷ್ಟಸಾಧ್ಯವೆ ಸರಿ. ಅನುಸರಿಸಿ ನಡೆದವರಿಗೆ ಇಷ್ಟವಾಗದಿದ್ದರೂ, ಬೇಸರಿಕೆಯಂತೂ ತರದು.
ಈ ವರೆಗೆ ಯಾರಲ್ಲೂ ನೋಡದ ಒಂದು ವಿಶಿಷ್ಟ ಗುಣ ಅವನಲ್ಲಿ ಕಂಡದ್ದು, ಅವ ಅಪರಿಚಿತರೊಡನೆ ಪಳಗಿ ಅವರ ತಮ್ಮದಿರೆಂದು ಹಚ್ಚಿಕೊಂಡ ಪರಿ. ಆ ವಿಷಯದಲ್ಲಂತೂ ಅವನು ಎತ್ತರದ ಸ್ಥಾನವನ್ನ ಸಂಪಾದಿಸುತ್ತಾನೆ ಎಲ್ಲರ ಮನಸಲ್ಲೂ. ಅದೇನು ಅಕ್ಕರೆ ಅದೇನು ಪ್ರೀತಿ, ಬಹುಷಃ ನೋಡುಗರು ಒಮ್ಮೆ ಧಂಗಾಗಬಹುದು ಅವನ ನಡುವಳಿಕೆ ಕಂಡು, ಆ ನೋಡುಗರಲ್ಲಿ ನಾನೂ ಒಬ್ಬ ಅಂದರೆ ತಪ್ಪಾಗಲಾರದು.
ಅವನದ್ದು ವಿಚಿತ್ರವಾದ ಪೀಡಿಸುವ ಗುಣ, ಕೋಪ ತರಿಸಿದರು ಕ್ಷಮಾರ್ಹ ವ್ಯಕ್ತಿತ್ವ. ಹೇಳಿಕೇಳಿ ಅಯ್ಯಂಗಾರು ನೋಡಿ, ಸೊಕ್ಕು ಸಿಕ್ಕಾಪಟ್ಟೆ, ಹೀಗಿದ್ದರು ಸಹಜ ಮತ್ತೆ.
ತಮ್ಮಂದಿರ  ಕುರಿತು ಕುಯ್ಯುವ ಮಾತುಗಳಿಗೆ ನಮ್ಮ ಕಿವಿಗಳಲ್ಲಿ ರಕ್ತ ಬರದಿದ್ದರೆ ಸಾಕು, ಅಷ್ಟರ ವರೆಗೆ ಎಲಾಸ್ಟಿಕ್ಕು ನುಡಿ, ಆದರೂ ಅಂಚಿಗೆ ಕೂತು ಯೋಚಿಸಿದಾಗ ಅವನ ಮಾತಿನಲ್ಲಿಯ ಸಾರಾಂಶ ನಿಜಾಂಶಗಳು ತಿಳಿಯುತ್ತೆ.

ಅವನು ನನ್ನ ಮೇಲೆ ರೆಗಿದಾಗ ಹೀಗೆ ಅವನನ್ನ ಗುಣಗಾನ ಮಾಡಬಹುದೇ ನೀವೇ ಹೇಳಿ? ಹೇಳಲಿಲ್ಲವೇ, ಅವನೊಬ್ಬ ವಿಚಿತ್ರ  ಪ್ರಾಣಿಯೆಂದು, ಇದಕ್ಕೆನೆ..... 


                                                                                                    -ರತ್ನಸುತ

Saturday 21 April 2012

ಪ್ರಭಾವಿ ಸಾಲುಗಳು ಮಿತ್ರನಿಂದ

ಮಿತ್ರನೊಬ್ಬ ಹೇಳಿದ ಹೀಗೆರಡು ಸಾಲುಗಳು
"ಲೋಕವೆಲ್ಲ ತಿರುಗಿದರು, ಪದ ಹರಿಯದು....
ಶಬ್ದಕೋಶ ಅರಿತರು, ಪದ ಹರಿಯದು....
ಭಾವನೆಗಳ ತಿಳಿದಾಗ, ಪದ ನಿಲ್ಲದು...."

ಹೇಗೆ ಹೊಳೆದಿರಬಹುದು ಅವನಿಗೆ ಇವೆಲ್ಲ?
ಅವನಿಗೂ ಕಾವ್ಯ ಮಾರ್ಗ ಸಿಕ್ಕಿರಬೇಕಲ್ಲ!!
ನನಗವನ ಸಾಂಗತ್ಯ ಅತ್ಯವಶ್ಯಕವೆನಿಸಿದೆ
ಹೇಗಾದರೂ ಜೊತೆಗೆ ಸೆಳೆದುಕೊಳ್ಳಬೇಕಲ್ಲ!!!!!!

ಬೆನ್ನು ತಟ್ಟುವವನು ಪೆನ್ನು ಹಿಡಿದನೆಂದರಲ್ಲಿಗೆ
ನಿಶ್ಚಯವಾದಂತೆಯೇ ಸೇರ್ಪದಲು ಕವಿಗಳ ಸಾಲಿಗೆ
ಕನ್ನಡ ಕವಿವಾಣಿಯನ್ನು ಅವಲಂಬಿಸಿರುವನು ಅವನು 
ಅವನದೂ ಆಗಲಿ ಬೆಲೆ ಕಟ್ಟಲಾಗದ ನಾಲಿಗೆ

ಕನ್ನಡ ಡಿಂಡಿಮದ ಸದ್ದು, ಎಂತವರನೂ ಕರಗಿಸುವುದು
ಪ್ರತಿಯೊಂದು ಕನ್ನಡಿಗನ ಶಿಲೆಯಾಗಿ ರೂಪಿಸಿ 
ನಮ್ಮತನವ ಗುರುತಿಸುವ ಅನ್ಯರಲ್ಲೂ ಕಲೆಯಿದೆ
ಕಲಾ ರಸಿಕತನ ಅವರ ಕಣ್ಣಲಿ ಪ್ರತಿಬಿಂಬಿಸಿ

ಇಷ್ಟು ಹೇಳಿ ಮುಗಿಸಲಾರೆ ಕೃತಜ್ಞತಾ ಪೂರ್ವಕವನ 
ಆಶಿಸುವೆ ನಿನಗೆ ನಾಳೆಗಳ ಹೊಸತು ಬೆಳಕು
ಇಟ್ಟ ಹೆಜ್ಜೆಯೆಡೆಗೆ ನಿನ್ನ ಸಾಧನೆಯ ಹಾದಿಯುಂಟು
ನಿನ್ನಲ್ಲೇ ಅವೆತ  ಆ  ಕವಿಯನ್ನು ಕೆದಕು.......

                                                -ರತ್ನಸುತ

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...