Tuesday 24 May 2016

ಕಡಲೂರ ಕಿನಾರೆಯಲ್ಲಿ

ಕಡಲೂರ ಕಿನಾರೆಯ
ಒಡಲೆಲ್ಲ ಬಸಿದರೂ
ಸಿಕ್ಕದ್ದು ಮೂರೇ ಮುತ್ತು


ಅದ ತೂತು ಜೇಬಿಗೇರಿಸಿ
ಹೆಕ್ಕಿದಲ್ಲೇ ಉದುರಿಸಿ
ಬರುವೆ ದಿನದ ಮೂರೂ ಹೊತ್ತು


ಮುತ್ತೆಲ್ಲಿ? ಎಂದು ನೀ
ಇತ್ತಲ್ಲ!! ಎಂದು ನಾ
ತಡಕಾಡುವೆ ಜೇಬ ಕಿತ್ತು


ಅತ್ತ ನಿನ್ನ ಕಣ್ಣ ಒಳಗೆ
ಪೋಣಿಸುತ್ತ ಹಾರವನ್ನೇ
ಉರುಳಿಸಿದೆ ನನ್ನ ಉಸಿರ ಅತ್ತು


ಕಣ್ಣಿಗೊಂದು, ಗಲ್ಲಕೊಂದು
ಹಣೆಗೆ ಒಂದು, ತುಟಿಗೆ ಒಂದು
.
.
.
ಕತ್ತಿಗೊಂದ ತರುವೆನೆಂದೆ ಮುತ್ತ


ಕಡಲೂರ ಕಿನಾರೆಯಲ್ಲಿ
ಮುತ್ತ ತೆಗೆಯಲೆಂದು ಹೊರಟೆ
ಮತ್ತದೇ ಅಂಗಿಯನ್ನು ತೊಟ್ಟು!!


                           - ರತ್ನಸುತ

Sunday 15 May 2016

ಹೀಗೂ ಬದುಕಿದ್ದೆವು

ದಢಾರನೆ ಮುಚ್ಚಿ ಹೋದಳು
ಬಾಗಿಲಂಚಿಗೆ ಹೃದಯ ಸಿಲುಕಿದವನಂತೆ
ನಗುತ್ತಲೇ ಯಥಾಸ್ಥಿತಿಗೆ ತಲುಪಿ
ಎದೆ ನೀವಿಕೊಳ್ಳುತ್ತಿದ್ದೇನೆ
ಹೆಪ್ಪುಗಟ್ಟಿದ ಕಣ್ಣುಗಳಿಗೆ ಕೆನ್ನೆಗಳ ಗಡಿಪಾರು
ಒಂದು ಹನಿ ಉರುಳಿದರೂ ಅನಾಹುತ!!


ಬಾಗಿಲು ಬಡಿದ ರಬಸಕ್ಕೆ
ಉಪ್ಪರಿಗೆ ಬಿರುಕು ಬಿಟ್ಟಿರಬಹುದೇ?!!
ಅವಳು ಅಷ್ಟು ಗಟ್ಟಿಯಾಗಿದ್ದಾಳೆಯೆಂದರೆ
ಯಾವುದೋ ನೋವು ಪಕ್ವವಾಗಿ
ಅವಳ ಹದ್ದಿನಂತೆ ಕುಕ್ಕಿ-ಕುಕ್ಕಿ ಕೊಲ್ಲುತ್ತಿರಬೇಕು,
ನಾನೇ ಗಾಂಭೀರ್ಯ ಮರೆತು ನಡೆದುಕೊಂಡೆ
ಚೂರು ನಾಟಕವಾಡಿದ್ದರೂ ನಡೆಯುತ್ತಿತ್ತು!!


ಸಂಬಂಧಗಳು ಹತ್ತಿರವಿದ್ದಷ್ಟೂ ಸಮಸ್ಯೆ
ದೂರುಳಿದರಂತೂ ಅದಕ್ಕೂ ಮೇಲೆ
ಹಾಗಾಗಿ ಆಗಾಗ ಸಾಮಿಪ್ಯದಲ್ಲೇ ಅಂತರವಿಟ್ಟು
ಅಂತರದಲ್ಲೇ ಸನಿಹದಲ್ಲಿರುವುದೊಳಿತು
ಎಷ್ಟೇ ಆಗಲಿ ಮನುಷ್ಯನೂ ಮಂಗನಂತಲ್ಲವೇ?
ಬುದ್ಧಿ ಕೊಂಬೆಯಿಂದ ಕೊಂಬೆಗೆ ಜಿಗಿಯುತ್ತಲೇ ಇರುತ್ತೆ!!


ಮನೆ ಬಿರುಕು ಮೂಡುವುದಕ್ಕೆ
ಮನಸುಗಳ ಸಣ್ಣ ಕಂಪನಗಳೇ ಸಾಕಲ್ಲ?
ಕಣ್ಣೀರು ಜಲ ಪ್ರಳಯವನ್ನೇ ಉಂಟು ಮಾಡಬಹುದು
ಬಿಕ್ಕಳಿಕೆ ಎಂಥ ಖುಷಿಗಳನ್ನೂ ಬಾಧಿಸಬಹುದು.
ಎಲ್ಲಕ್ಕೂ ನಿರುತ್ತರ ಮೌನವೇ ಉತ್ತರವಾಗಬಹುದು!!


ವಿಮುಖವಾಗಿ ದಿನವಿಡಿ ನಡೆದು
ವಿಮುಖರಾಗಿ ಒಂದೇ ಹಾಸಿಗೆಯಲ್ಲಿ ಮಲಗಿದಾಗ
ಪ್ರಮುಖವಾದ ಕನಸುಗಳೆಲ್ಲ ಕೈ ಕಟ್ಟಿ
ನಮ್ಮಿಂದ ದೂರುಳಿದುಬಿಟ್ಟಾಗ
ಕೂಡಿ ಕಟ್ಟಿದ ಕನಸಿನ ಅರಮನೆಯಲ್ಲೊಂದು
ಅನಾಮಿಕ ಗೋರಿ ತಲೆಯೆತ್ತುವುದು ಸಹಜ,
ಅದು ನಾಳೆ ದಿನ ನಮ್ಮ ನೋಡಿ ಉಸಿರುಗಟ್ಟಿ ನಕ್ಕಾಗ
ಮುಜುಗರಕ್ಕೊಳಪಡುವವರಲ್ಲಿ ಮಾತಿರುವುದಿಲ್ಲ


ಬೇಸಿಗೆಯ ಇರುಳ ಮಳೆಯಂತಿನ ಮುನಿಸುಗಳು
ಬೆಳಕು ಹರಿಯುವುದರೊಳಗೆ ಮಾಯ,
ರಾತ್ರಿ ಕಳೆಯಲಿ
ಹೊಸ ದಿನ, ಹೊಸ ನಗುವಿನೋಟ್ಟಿಗೆ ಕಟ್ಟಬೇಕು
ಬೇಸರಿಕೆ ತಂದ ಬದುಕುಗಳ ನಡುವೆ
ಪ್ರೀತಿಯೆಂಬ ಸೇತುವೆಯನ್ನ


ಸೇತುವೆ ಬದುಕಿನಿಂದ ಬದುಕುಗೆ ದಾಟುವುದಕ್ಕಾಗಿಯಲ್ಲ
ಬದುಕುಗಳ ನಡುವಿನ ಬದುಕನ್ನ ಬದುಕುವುದಕ್ಕಾಗಿ!!


                                                            -- ರತ್ನಸುತ

Tuesday 10 May 2016

ಮನಭಾರ

ನಿರ್ಭಾವುಕನಾಗಿ ಉಳಿದುಬಿಡುತ್ತೇನೆ
ನನ್ನವರ ನೋವ ಕಂಡು
ಕಾರಣ ಕೇಳುವವರೆದುರು ಚೀರಬಯಸುವ ದನಿ
ಗಂಟಲಿಗಂಟಿಕೊಂಡಂತೆ... ಮೌನ!!


ಕೆಲವು ಸಂಗತಿಗಳ ಮೌನವೇ ನಿಭಾಯಿಸಬೇಕು
ದೇವರು ಮೌನವನ್ನಾದರೂ ಸೃಷ್ಟಿಸಿರುವುದೇತಕ್ಕೆ,
ಸಮಯಕ್ಕೆ ಅನುಕೂಲವಾಗಲೆಂದೋ? ಅಥವ...


ಎಲ್ಲಿ ದಾರಿ ಬಿಡಿ
ಎಲ್ಲವನ್ನೂ ಒಮ್ಮೆಲೆ ಕಕ್ಕಿಬಿಡುತ್ತೇನೆ
ಕಸಿ-ವಿಸಿಗೊಂಡ ನಿಮ್ಮಲ್ಲಿ ಕ್ಷಮೆ ಕೋರಿ
ವ್ಯಾಕ್.. ವ್ಯಾಕ್...


ಎಂಥ ಸ್ವಾರ್ಥವಲ್ಲವೇ ನನ್ನದು
ನನಗನಿಸಿದ್ದನ್ನ ಕವಿತೆಯಾಗಿಸಿಕೊಂಡು
ಅನಿಸಿಕೆಗಳ ಜೀವಂತವಾಗಿಸಿಕೊಳ್ಳುತ್ತೇನೆ.
ಕವಿತೆ ಕಟ್ಟಿದ ಕೈಗಳು ನಡುಗಿ ಸತ್ತು
ಈಗ ವಿರಮಿಸುತ್ತಿವೆಯಾದರೂ
ಕೋಟಿ ಕಂಪನಗಳ ಎಬ್ಬಿಸಿದ ಹೃದಯ
ಇನ್ನೂ ನಡುಗುವುದ ಬಿಟ್ಟಿಲ್ಲ...


ಎಲ್ಲ ಹಂಚಿಕೊಂಡು ಹಗುರಾಗಲು
ಖಾಲಿ ಉಳಿದವರಾದರೂ ಯಾರು?
ಎಲ್ಲರೂ ಭಾರಕ್ಕೆ ಬೆನ್ನುಕೊಟ್ಟವರೇ, ಅಲ್ಲವೇ?!!


                                              - ರತ್ನಸುತ

Monday 2 May 2016

ಕವಿತೆ ಕಟ್ಟುತ...

ಅವಳು ಕಿಟಕಿ ತೆರೆದಳು
ಒಂದೊಂದೇ ಹನಿ
ಗಾಜಿಗಂಟಿದ ಧೂಳನ್ನು ತೊಳೆದು
ಸದ್ದು ಬದಲಿಸುತ್ತಲೇ ಇತ್ತು


ಅವಳು ನನ್ನ ಕೈ ಹಿಡಿದಳು
ಗುಡುಗಬಹುದಾದ ಸಾಧ್ಯತೆಗೆ,
ಮಿಂಚಷ್ಟೇ ಕಂಡದ್ದು
ಗುಡುಗೂ ಸದ್ದಿಲ್ಲದಂತೆ ದೂರುಳಿದು
ಹತ್ತಿರವಾಗಿಸಿತು ಎದೆಗಳ


"ಹೃದಯಗಳು ಮಾತನಾಡಿಕೊಳಲಿ ಬಿಡಿ
ತುಟಿಗಳಿಗೆ ತ್ರಾಸು ಕೊಡದೆ
ಮೌನವಾಗಿಸಲಿದು ಸಮಯ" ಅಂದಳು
ನನಗೆಲ್ಲ ಅರ್ಥವಾದಂತೆ ನಕ್ಕೆ
ಒಗಟು-ಒಗಟಾಗಿ


ಮಳೆ ಜೋರಾಗಿ, ನಿಂತು
ನಿಂತಷ್ಟೇ ಜೋರಾಯಿತು
ಹೃದಯಗಳು ಚೂರಾಯಿತು
ಅಲ್ಲಲ್ಲ ಪ್ರಾಸಕ್ಕಾಗಿ ಚೂರಾದದ್ದಲ್ಲ
ಚೂರಾದದ್ದು ಖರೆ
ಒಂದು ನೂರು ಬಾರಿಯಾದರೂ
ಆದರೂ ಸ್ಥಿಮಿತದಲ್ಲಿದದ್ದು ಅಚ್ಚರಿ!!


"ಹೇರಿದ ಕವಿತೆ ರಾಡಿಯಂತೆ
ಆವರಿಸಬೇಕು ಮೋಡದಂತೆ"
ಹೀಗಂದೊಡನೆ ನಿಮಿರಿತು ಆಕೆಯ ಕಿವಿ
ಅಲ್ಲವೇ ನಾನೂ ಒಬ್ಬ ಕವಿ?
ಆಚೆ ಮಳೆ ಜೋರಾಯಿತು
ಒಂದು ಅಮೋಘ ವರ್ಷಧಾರೆ
ಆಕೆಯ ಗಮನವೆಲ್ಲ ಕಡೆಗೆ
ನನ್ನದೂ...


                                     - ರತ್ನಸುತ

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...