Saturday 25 December 2021

ಅದಲು ಬದಲಾಗಿ

ಅದಲು ಬದಲಾಗಿ

ಹೃದಯ ಕುಳಿತಂತೆ ಮಾತಿಗೆ
ಎದುರು ಬದುರಾಗಿ
ಮಧುರ ಮಳೆಯಾಗೋ ವೇಳೆಗೆ
ಕಣ್ಣಂಚಲಿ ಮೂಡುವ
ಮಿಂಚಲ್ಲಿಯೇ ಎಲ್ಲವ 
ನೀ ಹೇಳುವೆ, ನಾ ತಾಳುವ
ಮನದಾಸೆಯ.. ಆಆ..
ಹೇಗಾಯಿತು, ಹೇಗಾಯಿತು
ಈ ಅನುರಾಗ ಹೇಗೆ ಶುರುವಾಯಿತು

ಈ ದಾರಿ ಸವಾರಿ ಖುಷಿಗೆ ರೂವಾರಿ 
ವಿರಾಮ ಸಿಗೋ ವೇಳೆ ನೆನಪಲ್ಲೇ ಜಾರಿ 
ಸಿಗೋಣ, ಸಿಗೋಣ ಪ್ರತಿ ಬಾರಿ ತಂಗಾಳಿಯೇ 
ಸಮೀಪ ಬರೋದೇ ವಿಶೇಷ ವಿಚಾರ
ಸರಾಗ ಸಮಾಚಾರವೇ ಅಲ್ಲಿ ಪೂರ
ನಿಧಾನ, ನಿಧಾನ ನೀ ಓಡು ಓ ಗಡಿಯಾರವೇ

ಇರಾದೆ ಒಂದೇ ಇಬ್ಬರಲ್ಲಿಯೂ
 
ಕಣ್ಣಂಚಲಿ ಮೂಡುವ
ಮಿಂಚಲ್ಲಿಯೇ ಎಲ್ಲವ 
ನೀ ಹೇಳುವೆ, ನಾ ತಾಳುವ
ಮನದಾಸೆಯ.. ಆಆ..
ಹೇಗಾಯಿತು, ಹೇಗಾಯಿತು
ಈ ಅನುರಾಗ ಹೇಗೆ ಶುರುವಾಯಿತು

ಸುಮಾರಾಗಿ ಕಾಡೋ ಜ್ವರ  ಒಂದು ಹೀಗೆ 
ಜೊತೆ ಹಂಚಿಕೊಂಡಂತೆ ಸರಿ ಹೋದೆ ಹೇಗೆ 
ಗಾಲಾಟೆ, ಗಲಾಟೆ ನೀ ಉಗುರಷ್ಟು  ದೂರಾದರೂ
ಹೊಸ ದಿಕ್ಕು ತೋರಿ, ಇದೋ ಕಂಡ ದಾರಿ 
ಇಡೀ ಲೋಕವ ಸುತ್ತುವೆ ನಿನ್ನ ಸೇರಿ 
ನಿರಾಸೆ, ನಿರಾಸೆ ನೀ ಕನಸಲ್ಲಿ ಬರದಿದ್ದರೂ

ತಗಾದೆ ಒಂದೇ ಇಬ್ಬರಲ್ಲಿಯೂ

ಕಣ್ಣಂಚಲಿ ಮೂಡುವ
ಮಿಂಚಲ್ಲಿಯೇ ಎಲ್ಲವ 
ನೀ ಹೇಳುವೆ, ನಾ ತಾಳುವ
ಮನದಾಸೆಯ.. ಆಆ..
ಹೇಗಾಯಿತು, ಹೇಗಾಯಿತು
ಈ ಅನುರಾಗ ಹೇಗೆ ಶುರುವಾಯಿತು

ಲಂಡನ್, ಚಿನ್ನದ ಕುಂಡದಲ್ಲಿ ಅರಳಿದ ಸಾಮಾನ್ಯ ಹೂ...

ಇಲ್ಲಿ ಇತಿಹಾಸ ಸಾರುವ ಶಿಥಿಲ ಗೋಡೆಗಳಿಗೆ

ಆಧುನಿಕ ಕಾಂಕ್ರೀಟ್ ಗೋಡೆಗಳನ್ನ 
ಜೋಡಿಸಿ ಜೋಪಾನಗೊಳಿಸಲಾಗಿದೆ

ಪ್ರತಿ ಕಲ್ಲಿನ ಸುತ್ತಲೂ ಕಥೆಯ ಹೆಣೆದು 
ಕಥೆಗೆ ಒಪ್ಪುವ ಬಣ್ಣ ಬಳಿದು 
ಪ್ರವಾಸಿಗರ ಮನಸಿನಾಳಕ್ಕೆ ಗಾಳ ಇಳಿಸಿ
ಹೊಟ್ಟೆ ತುಂಬಿಸಿಕೊಳ್ಳುವ ಚಾಲಾಕಿ ವರ್ತಕರು 

ಪ್ರಪಂಚದ ಮೂಲೆ ಮೂಲೆಯಿಂದ ದೋಚಿದ  
ಲೂಟಿಯನ್ನ ಎತ್ತರದ ಕೋಟೆಕೊತ್ತಲೊಳಗೆ ಹುದುಗಿಸಿ
ಗಾಜಿನ ಹೂಜಿಯಲ್ಲಿ ಪ್ರದರ್ಶನಕ್ಕಿಟ್ಟಾಗ 
ಕಣ್ಣು ಬಾಯಿ ಬಿಟ್ಟು ನೋಡುವವರ ಸಿಟ್ಟಿಗೆ  
ಸಿಗಬಾರದೆಂದೇ ಅಡಿಗಡಿಗೊಬ್ಬೊಬ್ಬ ಕೊತ್ವಾಲನು 

ಬೀದಿ ಬೀದಿಗಳಲ್ಲಿ ದೈತ್ಯ ಕಟ್ಟಡದ ಕೆಳಗೆ 
ನಿರಾಶ್ರಿತರ ಸಾಂಪ್ರದಾಯಿಕ ಭಿಕ್ಷಾಟನೆ 
"Please spare some change" 
ಒಂದೇ ಸಲಕ್ಕೆ  ಅರ್ಥವಾಗದಿದ್ದರೂ 
ಕರುಣಾಜನಕ ಕೊರಳಂತೂ ಚಿರಪರಿಚಿತ 

ಇಲ್ಲಿ ಸ್ಥಳೀಯ, ಪರಕೀಯರೆಂಬ ಬೇಧವಿಲ್ಲ 
ಸಂಕುಚಿತ ಮನಸ್ಥಿತಿಯಿಂದ ಹೊರಬರಲಾಗದವರು 
ವಾಸ್ತವಾಂಶವನ್ನ ಅರಗಿಸಿಕೊಳ್ಳಲಾಗದವರು ಮಾತ್ರ 
ಬಣ್ಣ, ಎತ್ತರ, ಸುತ್ತಳತೆಯ ಮಾಪನ ಹಿಡಿದು 
ತಮ್ಮವರಿಂದಲೇ ಉಚ್ಛಾಟನೆಗೊಳಪಡುತ್ತಾರೆ 

ಪಾದಚಾರಿ, ಸೈಕಲ್ ಹೊಡೆವವ, ಕೋಟಿಗೆ ಬಾಳುವ  
ವಾಹನ ಸವಾರನಿಗೂ ಸಮಾನ ಮಾನ್ಯತೆ 
ತಪ್ಪು ಯಾರಿಂದ ಆದರೂ ತಪ್ಪೇ  
ಮಂತ್ರಿ, ಕುತಂತ್ರಿಗಳ ಚೇಲಾಗಳಿಗೆ ಕಿಮ್ಮತ್ತಿಲ್ಲ 
ಪ್ರತಿಭಟನೆಗಳ ಪ್ರತಿರೋಧಿಸಲು ಪಿಸ್ತೂಲುಗಳಿಗೆ ತಾಕತ್ತಿಲ್ಲ 

ಹೊಸ ಪೀಳಿಗೆಗೆ ಅಸಲಿ ಇತಿಹಾಸದ ಅರಿವಿನ ಕೊರತೆ 
ಹಣ್ಣು ಮುದುಕರ ಊರುಗೋಲು, ಮಾತಲಿ ಮಮತೆ 
ಹೆಜ್ಜೆಜ್ಜೆಗೂ "Please", "Thank you", "Sorry"ಗಳ ರಗಳೆ  
ಅದೇ ಸಾಲಗೆ ಬೈಗುಳಗಳದ್ದೂ ಸರಣಿ ಸುರಿಮಳೆ 

ಕಿರಿದಾದವುಗಳ ಮೂಗಿನ ಕೆಳಗೆ ಸಾಗಿಬಿಟ್ಟು 
ದೈತ್ಯ ಹಡಗುಗಳಿಗೆ ತನ್ನ ರೆಕ್ಕೆ ತೆರೆದುಕೊಳ್ಳುವ ಸೇತುವೆ 
ದಂಡೆಯಲ್ಲಿ ನಾಗರೀಕತೆಯ ಕುರುಹು 
ಸದಾ ಹೊಸತನ ಸಾರುವ ಕೆಸರು ಮೆತ್ತಿದ ಜಲ 
ಅಮಾನುಷ ಚರಿತ್ರೆಯ ಎದೆಯಲ್ಲಿ ಬಚ್ಚಿಟ್ಟು 
ತಣ್ಣಗೆ ಹರಿದು ಉರುಟುಗಲ್ಲುಗಳ ತೀರಕೆ ಬಡಿದು 
ನೆತ್ತರ ಬದಲಿಗೆ ನಿರುತ್ತರದ ನಿಲುವು 
ಅಲ್ಲಲ್ಲಿ ಪಶ್ಚಾತಾಪದ ತಾಪ 
ಮಿಕ್ಕಂತೆಲ್ಲವೂ ಮಂಜಿನಂತೆ ಅಸ್ಪಷ್ಟ  

ಹಗಲು ಧ್ಯಾನಕ್ಕೆ ಕುಳಿತು, ರಾತ್ರಿ ಎಚ್ಚರಗೊಳ್ಳುವ ಶಹರ 
ಮಿಂಚು ದೀಪಗಳ ನಡುವೆ ನಿದ್ದೆಗೆಡಿಸುವ ನಗರ 
ಎತ್ತರದಲಿ ಹಸಿವ ನೀಗಿಸುವ ಸ್ಕೈ ಗಾರ್ಡನ್ಗಳು
ಆಳದಲಿ ಗುರಿ ಮುಟ್ಟಿಸುವ ರೈಲು ಮಾರ್ಗಗಳು 
ನಡುವೆ ನೆಲದ ಮೇಲೆ ಎಲ್ಲರನ್ನೂ ಆದರಿಸುವ  
ದೂರದ ಚಂದ್ರನಂತೆ ಭಾಸವಾದರೂ
ಹತ್ತಿರಕ್ಕೆ ಅದೇ ಸಹಜತೆ ಕಾಯ್ದುಕೊಳ್ಳುವ
ಲಂಡನ್, ಚಿನ್ನದ ಕುಂಡದಲ್ಲಿ ಅರಳಿದ ಸಾಮಾನ್ಯ ಹೂ... 

ಒಲವಾಗಿ ಹೋದ ಮೇಲೆ

ಒಲವಾಗಿ ಹೋದ ಮೇಲೆ 

ಮನದಾಸೆ ನಿನ್ನ ಮೇಲೆ
ನಿನ್ನತ್ತ ಸಾಗಿ ಬಂದೆ 
ಕಣ್ಣಲ್ಲಿ ತುಂಬಿಕೊಂಡೆ 
ಮಾಡುಲೇ ನಿನ್ನ ಗುಣಗಾನವೀಗ 
ನಿನ್ನ ಬಯಸಿ ಬಯಸಿ 
ನಿನ್ನ ನೆರಳ ಬಳಸಿ 
ಇನ್ನೂ ಸನಿಹವಾಗುತಿರುವೆ 

ಮುಗಿಯದ ಮಾತೊಂದಿದೆ
ಎದುರಿಗೆ ಬಾ ಮಲ್ಲಿಗೆ 
ಕದಿಯುವ ಹುನ್ನಾರಕೆ
ಸಿಲುಕಲಿ ಈ ಗುಂಡಿಗೆ
ಚಿತ್ತಾರ ಗೀಚಲು ಹೋಗಿ
ಸಿಕ್ಕಿಲ್ಲ ಯಾರಿಗೂ ನೀನು
ಕುಂಚಕ್ಕೆ ನಿನ್ನ ಮೇಲೆ ಕೋಪವಂತೆ 
ನಿನ್ನ ಬಯಸಿ ಬಯಸಿ 
ನಿನ್ನ ನೆರಳ ಬಳಸಿ 
ಇನ್ನೂ ಸನಿಹವಾಗುತಿರುವೆ 

ಸಡಗರದ ಸಂತೆಯೇ 
ಜರುಗಿದ ಹಾಗಾಗಿದೆ 
ಕುಸಿಯುವ ಕನಸಾದರೂ 
ನಲುಮೆಗೆ ರಂಗೇರಿದೆ 
ಬಚ್ಚಿಟ್ಟ ಬೆಟ್ಟದ ಹೂವ 
ನಿನ್ನತ್ತ ಚಾಚುವೆ ನೋಡು 
ಅಂದಕ್ಕೆ ನಿನ್ನ ಮೇಲೆ ಮೋಹವಂತೆ  
ನಿನ್ನ ಬಯಸಿ ಬಯಸಿ 
ನಿನ್ನ ನೆರಳ ಬಳಸಿ 
ಇನ್ನೂ ಸನಿಹವಾಗುತಿರುವೆ 

ಸ್ಕಾರ್ಫ್ ತೊಟ್ಟ ಹುಡುಗಿಯೇ

ಸ್ಕಾರ್ಫ್ ತೊಟ್ಟ ಹುಡುಗಿಯೇ

ನಿನ್ನ ಕುರುಳ ಬಣ್ಣ ಯಾವುದು
ಉದ್ದವೆಷ್ಟು, ಹೆಣಿಗೆ ಎಂಥದ್ದು?

ದಿನ ನಾ ಹಿತ್ತಿದ ಬಸ್ಸನ್ನೇ ಹತ್ತುತಿ
ಕಾಕತಾಳೀಯವೆಂಬಂತೆ
ಒಮ್ಮೆಯಷ್ಟೇ ನನ್ನತ್ತ ತಿರುಗಿ ನೋಡುತಿ
ನಂತರ ಎಲ್ಲವೂ ಊಹಾಪೋಹಗಳೇ 

ಆ ಗೋಜಲು ಮೊಗದಿಂದ ಇಣುಕುವ 
ಮಂದಹಾಸವನ್ನ ತಡೆದು 
ಏನ ಸಾಧಿಸಲು ಹೊರಟೆ?
ಫೋನಿನೊಟ್ಟಿಗೇ ನಿನ್ನ ನಿತ್ಯ ಹರಟೆ!

ಬೆರಳಿಗೊಂದೆಂಬಂತೆ ಬಿಡಿಸಿಕೊಂಡ 
ಉಗುರುಬಣ್ಣ ಸಾರಿದೆ ತಾಳ್ಮೆ 
ಸುಕ್ಕು ಹಿಡಿಸದೆ ದುಪಟ್ಟಾವನ್ನು 
ಸರಿದೂಗುವುದು ನಿನ್ನ ಜಾಣ್ಮೆ 

ಏನೇ ಸದ್ದಾದರೂ ಬೆಚ್ಚಿ ಬೀಳುತಿ 
ಖಾಲಿ ಉಳಿದ ಸೀಟಿನ ಮೇಲೆ 
ವಿನಾಕಾರಣ ಕೋಪಗೊಂಡಂತೆ 
ಬೇಡಿಕೊಂಡರೂ ಕೂರದೆ ನಿಲ್ಲುತಿ 

ಗುಟ್ಟುಗಳಿಂದಲೇ ಕಟ್ಟಿಕೊಂಡ ಕೋಟೆಯೊಳಗೆ 
ಯಾರನ್ನು ಬರಮಾಡಿಕೊಳ್ಳುತಿ?
ಹೇಗೆ ಸತ್ಕರಿಸುತಿ?
ಯಾರನ್ನು ದಿಕ್ಕರಿಸುತಿ?
ಎಂಬ ಲೆಕ್ಕಾಕಾರಕ್ಕೆ ಬಿದ್ದು ತಲೆ ಚಿತ್ತಾಗಿದೆ

ಕಡೆಗೆ ಸೋಕಲಾದರೂ ಸಿಗಬಾರದೆಂದು 
ಬಿಟ್ಟ ಬೆರಳಚ್ಚುಗಳನ್ನೂ ನಾಜೂಕಾಗಿ ಒರೆಸಿ 
ಗಂಭೀರವಾಗಿ ಎದೆಯುಬ್ಬಿಸಿ 
ದೀರ್ಘ ನಿಟ್ಟುಸಿರ ಬಿಟ್ಟು 
ಬಸ್ಸಿನ ಮುಂಬಾಗಿಲೆಡೆಗೆ ಕ್ರಮಿಸುವಾಗ 
ಎಲ್ಲೋ ದೂರ ಉಳಿದ ನಿಲ್ದಾಣ 
ತಕ್ಷಣ ಹತ್ತಿರ ಬಂದಂತೆ  

ಏನೋ ಮರೆತ ಹಾಗೆ ವಾರೆಗಣ್ಣಿನಿಂದ 
ಸುತ್ತಲ ಆವರಣವ ಸಾರಿಸಿ 
ಬಸ್ಸು ನಿಂತೊಡನೆ ಗಾಳಿಯಂತೆ ಇಳಿದು 
ಮಾಯವಾದೆ, ಮತ್ತೆಂದೂ ಸಿಗಲಾರೆಯೆಂಬಂತೆ 

ಇದಿಷ್ಟನ್ನು ಅರಗಿಸಿಕೊಳ್ಳುವ ಮೊದಲೇ 
ಮತ್ತೊಂದು ದಿನ, ಮತ್ತೊಂದು ಪಯಣ, ಮತ್ತೊಂದು ಭೇಟಿ 
ಯಾವುದೊಂದೂ ಬದಲಾಗದೆ 
ಕೇವಲ ಸ್ಕಾರ್ಫಿನ ಬಣ್ಣ ಮಾತ್ರ ಹೊಸತು  
ಅದೇ ಪ್ರಶ್ನೆ 
ಕುರುಳ ಬಣ್ಣ ಯಾವುದು
ಉದ್ದವೆಷ್ಟು, ಹೆಣಿಗೆ ಎಂಥದ್ದು?

ಬೇಗ ಕೂಡಿಟ್ಟುಕೋ

ಬೇಗ ಕೂಡಿಟ್ಟುಕೋ 

ನೂರು ಚೂರಾಗುವೆ 
ಹ್ಮ್ಮ್ 
ಮರೆತು ನೆನಪಿಟ್ಟುಕೋ 
ನೋಡು ದೂರಾಗುವೆ 
ಆನಂದವಾಗಿ ನಗುವ  
ಈ ನೋವಿಗೆ 
ಕೊಡಬೇಕೇ ಇನ್ನೂ ಒಂದು ಕಾರಣವನು!

ಸಾಗುತಿದೆ ಇದೇಕೋ ಈ ಸಮಯ 
ವಾಲಿರಲು ವಿಷಾದಕ್ಕೆ ಹೃದಯ 
ಸೋಲಿನಲೇ ಸುಮಾರಾರು ವಿಷಯ 
ಕಲಿಸುವುದು ಈ ಮಾಯಾವಿ ಪ್ರಣಯ 
ಸಾಗುತಿದೆ ಇದೇಕೋ ಈ ಸಮಯ 
ವಾಲಿರಲು ವಿಷಾದಕ್ಕೆ ಹೃದಯ 
ಸೋಲಿನಲೇ ಸುಮಾರಾರು ವಿಷಯ 
ಕಲಿಸುವುದು ಈ .. ಕಡು ಪ್ರೀತಿಯಾ?

ಓ.... ಓ.. 

ಜೊತೆಗಿರು ಏನಾದರೂ 
ಏನೇ ತಡೆ ಬಂದರೂ 
ಯಾರೇನೇ ಅಂದರೂ 
ಶಾಮೀಲು ಉಸಿರಾಗಿರು  
ನೀನಿಲ್ಲದೆ ಇರುಳಾಗಿದೆ 
ಕಂದೀಲಿನ ಸುತ್ತಲೂ 
ಕನಸಿನಲ್ಲೂ ಕಾರ್ಮೋಡ ಕವಿದು..  ಭಯವಾಗಿದೆ  

ಸಾಗುತಿದೆ ಇದೇಕೋ ಈ ಸಮಯ 
ವಾಲಿರಲು ವಿಷಾದಕ್ಕೆ ಹೃದಯ 
ಸೋಲಿನಲೇ ಸುಮಾರಾರು ವಿಷಯ 
ಕಲಿಸುವುದು ಈ ಮಾಯಾವಿ ಪ್ರಣಯ 
ಸಾಗುತಿದೆ ಇದೇಕೋ ಈ ಸಮಯ 
ವಾಲಿರಲು ವಿಷಾದಕ್ಕೆ ಹೃದಯ 
ಸೋಲಿನಲೇ ಸುಮಾರಾರು ವಿಷಯ 
ಕಲಿಸುವುದು ಈ .. ಕಡು ಪ್ರೀತಿಯಾ?

ಎಲ್ಲೆಲ್ಲೂ ನಿನ್ನದೇ ಹುಡುಕಾಟ

ಎಲ್ಲೆಲ್ಲೂ ನಿನ್ನದೇ ಹುಡುಕಾಟ

ಪ್ರೇಮ... ಪ್ರೇಮ..ಆಆ.. 
ನಿನ್ನಲ್ಲಿ ಹೇಳದ
ನನ್ನಲ್ಲೇ ಉಳಿದ
ನೂರಾರು ಭಾವನೆಗಳನ್ನು
ಹೇಗೆ ತಾಳಲಿ
ನೀನೆಲ್ಲೇ ಹೋದರೂ
ನೆರಳಂತೆ ಹಾಜರು
ಪ್ರೀತಿಯ ಹೇಳಲಾಗಲಿಲ್ಲ
ಏನು‌‌ ಮಾಡಲಿ
ಎಲ್ಲೆಲ್ಲೂ ನಿನ್ನದೇ ಹುಡುಕಾಟ
ಕಾಣದೇ ಪ್ರೇಮಿಯ ಪರದಾಟ 
ಕಣ್ಣ ನೀರಿನಂತೆ
ಜಾರಿ ಹೋದವಳೇ
ಕಣ್ಣ ನೀರಿನಂತೆ
ಜಾರಿ ಹೋದೆಯಾ.. 

ನಿಲ್ಲದ ಕಾದಾಟ
ಸೋಲೋ ಭಯ ತಂದಿದೆ
ಕೊಲ್ಲವ ನೋವೊಂದು 
ಬೆನ್ನ ಹಿಡಿದಂತಿದೆ
ತಯಾರಿಯ ನೀಡದೆಲೆ
ಕೈ ಮೀರಿ ಹೋದವಳೇ .. ಆ.. 
ಎಲ್ಲೆಲ್ಲೂ ನಿನ್ನದೇ ಹುಡುಕಾಟ
ಕಾಣದೇ ಪ್ರೇಮಿಯ ಪರದಾಟ 
ಕಣ್ಣ ನೀರಿನಂತೆ
ಜಾರಿ ಹೋದವಳೇ
ಕಣ್ಣ ನೀರಿನಂತೆ
ಜಾರಿ ಹೋದೆಯಾ.. 

ಸಮಯ ನಿಂತಂತೆ 
ನಿನ್ನ ಬರಮಾಡಿಕೊಳಲು 
ಪ್ರಣಯ ಕಳುವಾದ 
ಮಗುವು ನೀ ಬಾರದಿರಲು 
ಈ ದಾರಿಯ ತಿರುವಿನಲೂ 
ಆ ನಿನ್ನದೇ ನಗೆ ಹೊನಲು.. ಆ.. 
ಎಲ್ಲೆಲ್ಲೂ ನಿನ್ನದೇ ಹುಡುಕಾಟ
ಕಾಣದೇ ಪ್ರೇಮಿಯ ಪರದಾಟ 
ಕಣ್ಣ ನೀರಿನಂತೆ
ಜಾರಿ ಹೋದವಳೇ
ಕಣ್ಣ ನೀರಿನಂತೆ
ಜಾರಿ ಹೋದೆಯಾ.. 

ಬೆರಗಾದೆ ಈ ಕಣ್ಣಿಗೆ

ಬೆರಗಾದೆ ಈ ಕಣ್ಣಿಗೆ

ಒಂದ್ಚೂರು ಬೆಚ್ಚಗೆ ಮುಂಜಾವಿಗೆ
ನೆರವಾದೆ ನೀ ಹೂವಿಗೆ
ಬಿರಿದಂತೆ ಆ ಹೂ ನಗೆ

ಅಂದಾಜಿಗಿಂತ ನೀ ಅಂದ
ಅಂದಾಗ ಅಂಜುವೆ
ಮುಲಾಜಿನಲ್ಲಿ ನನ್ನಿರಿಸು   
ಪ್ರೀತಿಲಿ ಬೀಳುವೆ

ವಿಚಾರವೊಂದು ಹೀಗಿರಲು
ಒಳಗೇ ಪರದಾಡುತ
ಆದಷ್ಟೂ ದೂರ ನಾ ಇನ್ನೂ 
ಬಳಿಸಾರೋ ಇಂಗಿತ

ಸೆಳೆವಾಗ ಬಿಗಿ ಮೌನ
ಆವರಿಸಿ ಮಾತಲ್ಲಿ
ಆದೆ ತಲ್ಲೀನ ನಾನು

ಪಡೆವಾಗ ಮರು ಜೀವ
ಕಡೆಗೊಂದು ಮುತ್ತಲ್ಲಿ
ಮತ್ತು ಏರಲಿ ಇನ್ನೂ...

ಇಹ ರಾಜನ, ಇಳೆ ರಾಣಿಯ

ಇಹ ರಾಜನ, ಇಳೆ ರಾಣಿಯ 

ಜೊತೆಯಾಗಿಸಿದೆ ಬೆಳದಿಂಗಳು 
ದೂರವೇ, ದೂರುವೇ 
ತೀರಕೆ ಸೇರೆಯಾ 
ನಡು ರಾತ್ರಿಯಲಿ 
ಕದವು ತೆರೆದಿರಲು 
ಕಣ್ಣಿನಲಿ 
ಕನಸು ಅರಳಿರಲು 
ಅಲ್ಲಿ ಸಹ 
ಅವಳ ಮುದ್ದು ಮುಖ ಕಾಣುವುದು 
ಆ ನಗುವಿನಲಿ 
ಗೆಜ್ಜೆ ಪಲುಕು  
ಆ ಕೆನ್ನೆಯಲಿ 
ಚೆಂದ ಹೊಳಪು 
ಆ ತುಂಟ ನಡೆ 
ಹಿಡಿದು ಹೊರಟು ಮನ ತಣಿಯುವುದು 

ಎಚ್ಚರ ಕಳೆಯುವ ಕವಿತೆ

ಎಚ್ಚರ ಕಳೆಯುವ ಕವಿತೆ

ನೀ ಉತ್ತರವಿಲ್ಲದ ಒಗಟೇ
ಹತ್ತಿರವಾಗದೆ ದೂರ ಉಳಿದೆ
ನಂತರ ನೋವಲಿ ಬೆರೆತೆ
ಅಸಹನೆಯಲಿ ಪ್ರತಿ ಭಾರಿ
ನಗೆ ಬೀರಿ
ನಿನ್ನೊಲವಿನ ಸರಪಳಿ
ಸೀಳಿ ಬರುವೆ 
ತಿರುಗಿ ನಿನ್ನನೇ ಕೋರಿ 

ಓ... ಎಚ್ಚರ ಕಳೆಯುವ ಕವಿತೆ

ಚಂದವಾಗಿರೋ ಸೆರೆಮನೆಯಲಿ
ಬಂಧಿಯಾಗುವ ಅನುಭಾವವನು
ನೀಡಿದಂತೆ ಖುಷಿ ಒಳಗೊಳಗೇ.. ಆ..
ಆದರೂ ಅದು ಅತಿ ಭಯವನು
ನೀಡಿತು ನಿಜ ಮಗುವಿನ ಥರ 
ಆದೆ ನಾನು ಜೊತೆ ನೀನಿರದೆ..
ಒಂದೊಂದು ನಿಮಿಷವನೂ ಕಾದಿರಿಸಿ
ಮುಂದೆ ಸಾಗಲು ಬಿಟ್ಟಿರುವೆ
ನಡುದಾರಿಯಲ್ಲಿ ಕುರುಡಾಗಿಸುತ 
ಏಕೆ ತೊರೆದು ಹೋದೆ... 

ಲಲ್ಲಾಹಿ ಲಾಹಿ ಲಾಹಿ ಲಾಹಿಲಾ ಲೈ 
ಅಸಹನೆಯಲಿ ಪ್ರತಿ ಭಾರಿ
ನಗೆ ಬೀರಿ
ನಿನ್ನೊಲವಿನ ಸರಪಳಿ
ಸೀಳಿ ಬರುವೆ ತಿರುಗಿ ನಿನ್ನನೇ ಕೋರಿ 

ನಿಲ್ಲದೆ ಜಾರಿ ಹಿಂಗಿದೆ 
ಕಣ್ಣೀರಿದು ಚೂರಿ ಇರಿಯುತಲಿದೆ 
ಎದೆ ಭಾರವ ಹಗುರಿಸಲೆಂತೋ.. ಆ.. 
ಎಲ್ಲಿಯೂ ಗಮನ ಹರಿಸಲು 
ಬಿಡುತಿಲ್ಲ ಈ ಮನವು ನಿನ್ನದೇ 
ಗುಣಗಾನವನ್ನು ಮಾಡಿದೆ ಕುಳಿತು 
ಸಂಪೂರ್ಣವಾಗಿ ನಾ ಸೋತಿರುವೆ 
ಹಿಂಪಡೆದ ಮೇಲೆ ನೀ ಬೆಂಬಲವ 
ಸಂಗಾತಿಯಾಗುವ ಹಂಬಲಕೆ 
ಕೊಳ್ಳಿ ಇಟ್ಟು ಹೋದೆ.. 

ನಿನ್ನಿಂದಲೇ ನಾನು

ನಿನ್ನಿಂದಲೇ ನಾನು

ನಿನ್ನೊಂದಿಗೇ ನಾನು
ಶುಭಾರಂಭವೇ ಪ್ರೇಮವು
ಒಂದಾಗುವ ವೇಳೆ
ಮಿಂದಂತಿದೆ ಜೀವ 
ಬಿಗಿಯಾಗಲಿ ಬಂಧವು 
ಬೆರಗಾಗುವಂತೆ ಬಳಿಸಾರುತ 
ಬೆಳಗಿಸು ಬಾಳನು (೨)

ಗಮನ ಹರಿಸು 
ಮನದ ಪಿಸು ಮಾತು 
ಆಲಿಸದೆ ನೀನು 
ತಿಳಿಯುವೆ ಹೇಗೆ  
ಕಿರು ಕೋರಿಕೆ  
ಹೃದಯ ಕರೆವಾಗ 
ಜೊತೆಯಾಗುತ 
ಬೆಳಗಿಸು ಬಾಳನು 

ಹೊರಬರಲಾಗದೆ ಸಿಲುಕಿರುವೆ 
ಒಳಗೊಳಗೇನೋ  ಉಲ್ಲಾಸ 
ಸರಿಗಮ ಹಾಡಿನ ಸಾಲಿನಲಿ 
ಇರುವಂತೆ ನೀ ಆಗುವ ಭಾಸ 
ಓ ಜೀವವೇ, ಜೀವವೇ 
ಬಾ ಮೋಹಿಸು 
ಈ ಮೌನಿಯ ಕೂಡಲೇ ಮಾತಾಡಿಸು 
ಬೆಳಗಿಸು ಬಾಳನು (೨)
 
ಸಾಗೋ ಸಮಯವನು 
ಹೇಗೋ ಕೂಡಿಡುವೆನು 
ಎದುರಲಿ ನೀ ಕೂರಲು 
ತಾಕಿಸು ನೆರಳಿಗೆ 
ನಿನ್ನ ಆ ನೆರಳನು 
ಪಯಣವು ಸಾಗಿರಲು 
ಬೆರಗಾಗುವಂತೆ ಬಳಿಸಾರುತ 
ಬೆಳಗಿಸು ಬಾಳನು (೨)

ನೀನೇ ಬರೆದ ಬಿಳಿ ಹಾಳೆಯಲ್ಲಿ

ನೀನೇ ಬರೆದ ಬಿಳಿ ಹಾಳೆಯಲ್ಲಿ

ಮುಗಿಯದ ಸಾಲಿನಲ್ಲಿ
ಸರೆಯಾಗುವೆ
ನೀನೇ ಬರುವ ಪ್ರತಿ ಸಂಜೆಯಲ್ಲಿ
ಸಿಗುವ ನಗೋ ಹೂವಿನಲ್ಲಿ
ಎದುರಾಗು.. ಎದುರಾಗು
ನಿಧಾನವಾಗಿ ಮೂಡಿ ಬಂದ ಮಂದಹಾಸಕೆ
ಶಿಕಾರಿಯಂತೆ ಕಾದು ನಿಂತೆ ಲೂಟಿಗೆ
ತರಂಗದಲ್ಲಿ ತೇಲಿ ಬಂದ ಪ್ರೇಮ ದೋಣಿಗೆ
ಇದೋ, ಇದೋ ಹೊಸ ತೀರ ಸಿಕ್ಕಂತಿದೆ

ಎದೆಯ ಕದವ ತೆರೆಯೋ ಕೀಲಿ
ನಿನ್ನ ಬಳಿಯೇ ಇಹುದಂತೆ
ಕೈಯ್ಯ ಹಿಡಿದು ನಡೆಸು ಬೇಗ
ಕಾದೆ ನೋಡು ಮಗುವಂತೆ
ಸಿಕ್ಕಿನಲಿ ಸಿಕ್ಕಿಕೊಂಡೆ ಬಿಡುಗಡೆ ನಿನ್ನ ಕೈಯ್ಯಲೇ
ಸಕ್ಕರೆಯ ಗೊಂಬೆ ನೀನು ಬಿಟ್ಟು ಕೊಡಲಾರೆ ಚೆಲುವೆ
ಮಾತು ನಿಂತಾಗ, ಸಣ್ಣ ಹಾಡು
ಮೌನದಲ್ಲೇನೇ ಹಾಡಿ ನೋಡು
ಶ್ವಾಸ ಹಿಡಿವಷ್ಟು ದೂರದಲ್ಲಿ
ನಿಂತೆ ನೀನೊಮ್ಮೆ ತಿರುಗಿ ನೋಡು..

ಅದಾವ ಕನಸಿನ ಮೋಡ

ಅದಾವ ಕನಸಿನ ಮೋಡ

ತೇಲಿ ಬಂದು ಕರಗುತಿದೆ
ಅದಾವ ತೀರದ ಹಾಡು
ಬೇಲಿ ದಾಟಿ ಗುನುಗುತಿದೆ

ಹಿತವಾಗಿ ಬೀಸುವ ತಂಗಾಳಿ
ಬಲವಾಗಿ ಎದೆಗೊಡೋ ಹೂವು
ಮಿತವಾಗಿ ಮಾಗಿದ ಹಣ್ಣಲೂ
ರುಚಿಗಟ್ಟಿ ನೀಗಿತು ಹಸಿವು
ಎಲ್ಲವೂ ಚಂದವೇ ಇಲ್ಲಿ
ಜೋಗುಳ ಹಾಡಿನ ರೀತಿ..

ಅದಾವ ರಾಗವ ಬಯಸಿ
ಬೊಂಬುಗಳ ಹಿಂಡು ನಿಮಿರಿದವು
ಅದಾವ ಸಂಗಮಕಾಗಿ
ಈ‌ ಪುಟ್ಟ ಕಾಲುವೆಯ ಹರಿವು

ಸೆಳೆದಷ್ಟೂ ಬಣ್ಣದ ಮೆರಗು
ಕಣ್ಣಾಲಿ ತುಂಬುವ ಸರದಿ
ಬಿಗಿದಷ್ಟೂ ಎದೆಯಲಿ ಉಸಿರು
ಹೊರ ಉಕ್ಕುವುದು ಅಬ್ಬರದಿ
ಎಲ್ಲವೂ ಸಹಜವೇ ಇಲ್ಲಿ
ಮೇಘವು ಚಲಿಸುವ ರೀತಿ..

ಅದಾವ ಮಿಂಚಿನ ಚಿಲುಮೆ
ತಾರೆಗಳ ತಳಮಳವನಿಣುಕಿ
ಅದಾವ ಕಿಚ್ಚನು ಉರಿಸಿ
ಹೊಳಪ ಶಾಶ್ವತಗೊಳಿಸಿತೋ

ಇಬ್ಬನಿಯದು ಕ್ಷಣಿಕ ಮೋಹ
ಎಲೆದುದಿಗೆ ನಾಳೆ ಹೊಸ ಮುತ್ತು
ಕಂಬನಿಯು ಜಾರಿ ಬರಲು
ಬೇಡಿತು ಸಾಂತ್ವನದ ಸವಲತ್ತು
ಎಲ್ಲವೂ ಸಖ್ಯವೇ ಇಲ್ಲಿ
ನೆರಳು ವರಿಸುವ ರೀತಿ..

ಮೊದಲ ಭೇಟಿಲೇ ಮಾಡಿ ಹೋದೆ ಮೋಡಿಯ

ಮೊದಲ ಭೇಟಿಲೇ ಮಾಡಿ ಹೋದೆ ಮೋಡಿಯ

ನಗುವಲ್ಲೇ ಮೀಟುತ್ತ ನರ ನಾಡಿಯ
ಬರಗಾಲದಲ್ಲಿ ಮಳೆಯಂತೆ ಬಂದೆಯಾ
ಒಲವ ಚಿಗುರಾಗಿ ಮನದಿ ನಿಂತೆಯಾ
ಸಂಗಾತಿಯೇ ಮಾತಾಡದೇ
ಪ್ರೀತಿಯ ಕೋರಿಕೆ ಆಲಿಸು
ಓ ಪ್ರೇಮದ ಸಂಜೀವಿನಿ
ಪ್ರೇಮಿಯ ತೋಳಿಗೆ ಧಾವಿಸು

ಸೂಜಿಯಂಥ ನಿನ್ನ ಕಣ್ಣ ದಾಳಿಗೆ
ಗಾಜಿನಂತೆ ಗುಂಡಿಗೆ ಚೂರಾಗಿದೆ
ರಾಜಿಯಾಗಲೆಂದೇ ಸೋತ ವೇಳೆಗೆ
ಮಹಜರು ಮಾಡದೆ ಒಡುವೆ ಎಲ್ಲಿಗೆ?
ಮಾತಲ್ಲಿಯೇ ಮುದ್ದಾಡುತ
ಎಂದಿನ ಹಾಗೆಯೇ ಮೋಹಿಸು
ಓ ಪ್ರೇಮದ ಸಂಜೀವಿನಿ
ಪ್ರೇಮಿಯ ತೋಳಿಗೆ ಧಾವಿಸು 

ಪಾರಿಜಾತವೊಂದು ಹಾರಿ ತೆಕ್ಕೆಗೆ 
ನಿನ್ನ ಗುಟ್ಟನೊಂದ ಹಂಚಿಕೊಂಡಿದೆ 
ಅಂದಹಾಗೆ ನೀನು ಯಾವ ಊರಿನ
ಮಾಯಕನ್ನಿಕೆ? ಶಂಕೆ ಮೂಡಿದೆ
ಯಾರಲ್ಲಿಯೂ ನೀ ಹೇಳದೆ
ಮೆಲ್ಲನೆ ನನ್ನನು ರೂಪಿಸು
ಓ ಪ್ರೇಮದ ಸಂಜೀವಿನಿ
ಪ್ರೇಮಿಯ ತೋಳಿಗೆ ಧಾವಿಸು 

ಕಾಡುವುದೇ ರೂಢಿ ಆಯಿತೇನು

ಕಾಡುವುದೇ ರೂಢಿ ಆಯಿತೇನು

ದೂಡದಿರು ಅಭಿಲಾಷೆಯ
ಹೇಳುವುದೇನೋ ಹೇಳಾಯಿತೇನು
ಕೇಳಿಸಿಕೋ ಮನದಾಸೆಯ
ಕೈಯ್ಯ ಚಾಚಿ ನಿನ್ನ ಕೂಗುವೆ (೨)
ಈ ಯಾತನೆಯು ಅತಿಯಾಗಿ
ಯಾತನೆಯು ಅತಿಯಾಗಿ
ಕೈಯ್ಯ ಚಾಚಿ ನಿನ್ನ ಕೂಗುವೆ (೨)

ಕಾರಣವೇನೇ ನೀಡಿದರೂನು
ಬೇಗುದಿಗೆ ಪರಿಹಾರವೇ?
ಪ್ರೇಮದಲಿ ಸೆರೆಯಾಗಿ ನಾವು 
ದೂರವನು ದಹಿಸೋಣವೇ?
ಕೈಯ್ಯ ಚಾಚಿ ನಿನ್ನ ಕೂಗುವೆ (೨)
ಈ ಯಾತನೆಯು ಅತಿಯಾಗಿ
ಯಾತನೆಯು ಅತಿಯಾಗಿ
ಕೈಯ್ಯ ಚಾಚಿ ನಿನ್ನ ಕೂಗುವೆ (೨)

ಕಾಯುವೆನು ವಿಷಯಾಂತರಕಾಗಿ 
ಅಂತರವ ನೀ ಕಾಯುತಿರೆ
ಗಾಯವಿದೋ ಮಿತಿ ಮೀರಿದೆ ಮಾಗಿ 
ಸೋಲುಗಳೇ ಜೊತೆಯಾಗುತಿರೆ
ಕೈಯ್ಯ ಚಾಚಿ ನಿನ್ನ ಕೂಗುವೆ (೨)
ಈ ಯಾತನೆಯು ಅತಿಯಾಗಿ
ಯಾತನೆಯು ಅತಿಯಾಗಿ
ಕೈಯ್ಯ ಚಾಚಿ ನಿನ್ನ ಕೂಗುವೆ (೨)

ಅಲೆದಾಡುವೆ ಪ್ರತಿ ಗಳಿಗೆ

ಅಲೆದಾಡುವೆ ಪ್ರತಿ ಗಳಿಗೆ

ಅತಿಯಾದ ಒಲವಿನಲಿ
ಬಲೆಯಾಗಿಸಿ ಸೆರೆ ಹಿಡಿದೆ
ಸಿಹಿಯಾದ ನಗುವಿನಲಿ
ಸಂಗಾತಿ ನೀನೇ ಇನಿದನಿ ಬದುಕಿಗೆ
ಸಂಗಾತಿ ನೀನೇ ಇನಿದನಿ ನನಗೆ...

ಸಂಧಿಸುವೆ ದಿನ ಹೀಗೇ
ಉತ್ಸವಕೆ ಬರೋ ಹಾಗೆ
ಬಂಧಿಸು ನೀ ಹಿತವಾಗಿ
ಅನುರಾಗಿಯಾಗಿರುವೆ
ಬರೆದಾಗಿದೆ ಹೊಸ ಕವಿತೆ
ಪದವಿಲ್ಲದೆ ಕೊನೆಗೆ
ಬೆಳಗಾಗಿದೆ ಇದೋ ಹಣತೆ
ನಸುಕೆಲ್ಲಿದೆ ನಮಗೆ
ಸಂಗಾತಿ ನೀನೇ ಇನಿದನಿ ಬದುಕಿಗೆ
ಸಂಗಾತಿ ನೀನೇ ಇನಿದನಿ ನನಗೆ...

ಕಲ್ಲಾಗಿ ನಾ ನಿಲ್ಲಿವೆ ಆದಂತೆ ಪರಿಪಾಠ

ಕಲ್ಲಾಗಿ ನಾ ನಿಲ್ಲಿವೆ ಆದಂತೆ ಪರಿಪಾಠ

ಗಂಭೀರ ಉಸಿರಾಟಕೆ ನೆರವಾಗು ಸಂಗಾತಿ
ಮುಂಜಾವು ನಿನ್ನಿಂದಲೇ ಇಂಪಾದ ಸಂಗೀತ
ಸಂಚಾರ ಬೇಕಾಗಿದೆ ಜೊತೆಯಾಗು ಸಂಗಾತಿ
ಕಣ್ಣಲ್ಲೇ ಶಾಯಿ ಚಿಮ್ಮುತಿದೆ ಹಾಗೇ
ಆದಂತಿದೆ ಶಾಯರಿ
ಮಾತು ಮಾತಲ್ಲೇ ಲೂಟಿಯಾಗೋ ಹಾಗೆ
ಈ ನಿನ್ನಯ ವೈಖರಿ.. ಓ ಪ್ರೇಮವೇ..‌ ಓ ಪ್ರೇಮವೇ..

ಇರೋದೆಲ್ಲ ಒಂದೇ ರಾತ್ರಿ ಅನ್ನೋ ಹಾಗೆ ಏಕೋ
ಕನಸಲ್ಲೂ ನಿನ್ನ ಕೂಗುವೆ
ಬರೋ ದಾರಿಯಲ್ಲಿ ಕಂಡ ಹೂವಿಗೆಲ್ಲ ನಿನ್ನ
ಪರಿಚಯ ಮಾಡಿ ಸಾಗುವೆ
ಗಡಿಯಾರ ಮುಳ್ಳಿಗೂ
ಏಕಿಂಥ ಚಲ್ಲಾಟ
ಗಡಿ ಗೀಚಿ ಎದೆಯನ್ನು ಇರಿದಂತಿದೆ
ಆರಂಭ ರೋಮಾಂಚಕ ಬೆಳದಿಂಗಳ ಸಂತೆ
ಒಂದಾಗಿ ಎಣಿಸೋಣವಾ ತಾರೆಯನು ಸಂಗಾತಿ?
ಕಣ್ಣಲ್ಲೇ ಶಾಯಿ ಚಿಮ್ಮುತಿದೆ ಹಾಗೇ
ಗೀಚುತ್ತಲೇ ಶಾಯರಿ
ಮಾತು ಮಾತಲ್ಲೇ ಲೂಟಿ ಮಾಡುವಂತೆ
ಆ ನಿನ್ನಯ ವೈಖರಿ.. ಓ ಪ್ರೇಮವೇ..‌ ಓ ಪ್ರೇಮವೇ..

ಗಾಜಿನಂಥ ಕೆನ್ನೆ ಮೇಲೆ

ಗಾಜಿನಂಥ ಕೆನ್ನೆ ಮೇಲೆ

ಈಜಿ ಹೊರಟ ಕಂಬನಿ
ಮೋಜಿನಲ್ಲಿ ಗೀಚಿಕೊಂಡು 
ಚುಚ್ಚಿ ಹೋದ ಲೇಖನಿ 
ಬಾಳ ಕಥನದಲ್ಲಿ 
ತಿರುವು ಮುರುವು ನೂರು 
ನೆನಪ ಬುಟ್ಟಿಯಲ್ಲಿ 
ಮುಳ್ಳು ಸಹಿತ ಹೂವು 
ಯಾವ ದಿಕ್ಕಿನಲ್ಲಿ 
ನಗುವ ಕಾಣಲಿ 
ಯಾರ ಗುಂಗಿನಲ್ಲಿ 
ಅವಳ ಮರೆಯಲಿ 

ನೋವೂ ಕೂಡ ಮಾತನಾಡಬಹುದು 
ನಗುವು ಹಾಗೇ ಮೌನವಹಿಸಬಹುದು 
ಕಲ್ಲು ತಾನೇ ಕರಗಿ ಹೋಗಬಹುದು 
ನೀರು ಪ್ರಾಣವನ್ನೇ ಕಸಿಯಬಹುದು 
ಇಷ್ಟೆಲ್ಲಾ ಅರ್ಥವಾಗಲು 
ಬರಬೇಕಾಯಿತು ನೀ ನನ್ನ ಬಾಳಿಗೆ 
ಇನ್ನಷ್ಟು ಬೇಕು ಅಂದರೂ 
ಮಾಯವಾಗಿ ಹೋದೆ ನೀ ಮುಗುಳಾಚೆಗೆ 

ಹಿಮ ಸುರಿದು

ಹಿಮ ಸುರಿದು

ಎಲ್ಲವೂ ಸಮವೇ
ಎಲ್ಲವೂ ಸುಮವೇ

ನೆಲಕೆ ನಭದ 
ಬೇಶರತ್ತು ಶರಣಾಗತಿ
ಬೆಟ್ಟಕೂ, ಇರುವೆ ಗೂಡಿಗೂ
ಒಂದೇ ಸುಣ್ಣದ ಬಣ್ಣ
ದಿಬ್ಬಣಕೆ ಊರಿಗೂರೇ ಸಜ್ಜು

ಬಿಡಿ ಮಲ್ಲಿಗೆ ಕಿಟಕಿಯಲ್ಲಿ
ದಿಂಡು ಕಟ್ಟಿಕೊಂಡಂತೆ
ಬೆರಳ ನೇವರಿಸಿ ಬರಲು
ಕೊಂಡಿ ಕಳಚಿ ಉದುರಿತು

ಮಹಾರಾಜರ ಪಾದುಕೆಯಡಿ
ಖಾಲಿ ಉಳಿದ ಸ್ಥಾನಕ್ಕೆ
ಚಾವಣಿ ಸವಿದು ಬಿಟ್ಟ
ಬೆಣ್ಣೆ ಮುದ್ದೆಯ ಪರಿಹಾರ

ಸವೆದ ಜಾಡಿನ ಜಾಗದಲ್ಲಿ
ಹೊಸ ಹೆಜ್ಜೆ ಗುರುತು
ರಹಸ್ಯವೆಲ್ಲ ಬಟಾ ಬಯಲು
ಹಿಮ ಕರಗದ ಹೊರತು

ಮಧುಮಂಚದ ಸಿಂಗಾರ
ತುಂಬು ಚಂದಿರನ ಕಾವಲು
ರಸಮಯ ಹೊನಲಲ್ಲಿ
ಉನ್ಮಾದ ಉಮ್ಮಳಿಸಲು
ನೆಲದ ನೀಲಿ‌‌ ನಭಕೆ
ನಭದ ಹೊದಿಕೆ ನೆಲಕೆ
ಒಲವು ಅದಲು ಬದಲು 
ಖುಷಿಯ ಮೊಳಕೆ!

ಹಿಮವ ಮೆಟ್ಟಿದವರೆಲ್ಲ
ಜಾರಿ ಬಿದ್ದವರೇ
ಎಲ್ಲೋ ಕೆಲವರಷ್ಟೇ ದಾಟಿ
ಸುಖ ಉಂಡವರು
ತಳ ಹೊಕ್ಕವರು
ತುದಿಗಂಡವರು...

ಶರತ್ಕಾಲದ ಎಲೆಗಳು ಮಾಗಿ

ಶರತ್ಕಾಲದ ಎಲೆಗಳು ಮಾಗಿ 

ಉದುರಿ ಹಾದಿಯೆಲ್ಲ ಹಾಸಿಕೊಂಡಿವೆ 
ಕಾಲಿಟ್ಟಲ್ಲಿ ಕರುಕು ಮುರುಕು ಸದ್ದು 
ನಮ್ಮೊಡನೆ ಮಾತಿಗಿಳಿದಂತೆ

ಬಿಟ್ಟ ಮನೆ ಬೋಳು 
ತಲುಪಿದ್ದು ತಿಪ್ಪೆ 
ಅಡಿಯಲ್ಲಿ ಉಳಿದ ತೇವ 
ಮೇಲೆ ಮತ್ತೂ ಕಮರಿದ ಜೀವ 

ಹೂವು, ಎಲೆ, ಕಾಯಿ 
ಎಲ್ಲಕ್ಕೂ ಕ್ರಮೇಣ ನಿಶ್ಯಕ್ತಿ 
ಟೊಂಗೆ ಟೊಂಗೆಗೂ ಋಣ ಮುಕ್ತಿ
ಬಯಲೊಳು ಬೆತ್ತಲಾದಂತೆ 
ಸಮವಾದವು ಬಣ್ಣ ಭೇದವಿಲ್ಲದೆ 

ಗಾಳಿಗೆ ಹಾರಿದ ಮುಪ್ಪು 
ಕೂತರೆ ಕೊಳೆಯುವುದಷ್ಟೇ
ವಿರೂಪಗೊಂಡರೂ ಸರಿ  
ರೂಪಾಂತರಗೊಳ್ಳುತ್ತಲೇ ಸಾಗಿ 
ಜಾತ್ಯಾತೀತವಾಗುವುದು
ಮತ್ತಾವುದೋ ಬೇರಿಗೆ ಗುಟುಕಾಗಿ 

ಇಬ್ಬನಿ ಕಾಯಬೇಕು ಸಾಧ್ಯವಾದರೆ 
ತೊಟ್ಟು ಕಳಚಿದ ಹುಣ್ಣಿಗೆ 
ಸಿಕ್ಕಿ ತೂಗಬೇಕು, ಇಂಗಬೇಕು
ಅಷ್ಟಲ್ಲದೆ ಚಿಗುರಿಗೆ ಹಂಬಲಿಸುವ 
ತಾತ್ವಿಕತೆ ಒಲಿಯುವುದಿಲ್ಲ 

ಎಲ್ಲವೂ ಒಪ್ಪಿ 
ಮೈಯ್ಯ ಅಪ್ಪಿದವು
ಗಾಳಿ, ಮಳೆ, ಬಿಸಿಲು 
ಸಂಭೋಗ ಕ್ರಿಯೆ!

ಮುಂಬರುವ ಋತುವಿಗೆ  
ಎಲ್ಲವೂ ಮೈನೆರೆಯುತ್ತಾವೆ
ಎಲ್ಲವೂ ಹಿಂದಿನಂತೆ ಹೊಸತು
ಎಲ್ಲಕ್ಕೂ ಎಲ್ಲವೂ ಕಾರಣ 
ಸಾಕ್ಷಾತ್ಕಾರ ಅಂತಃಕರಣ 

ಸೌಂದರ್ಯ ಉಳಿಸಿಕೊಳ್ಳುವುದಲ್ಲ
ಸತ್ತು ಹುಟ್ಟುವುದು
ಕೊಟ್ಟು ಪಡೆಯುವುದು
ಬಿಟ್ಟು ಹಿಡಿಯುವುದು
ಮುಂದೆ ಸಾಗುವುದು...

ನಾ ನಿನ್ನನು ನೋಡಿದ ಕ್ಷಣದಲಿ

ನಾ ನಿನ್ನನು ನೋಡಿದ ಕ್ಷಣದಲಿ 

ಮರೆಯುವೆ ನನ್ನನೇ  
ನಿನ್ನಯ ನಗುವಲಿ 
ನಾ ಏನನೋ ಹೇಳುವ ಭರದಲ್ಲಿ 
ಸೋಲುವೆ ಹಾಗೆಯೇ 
ಹೇಳದೆ ಕೊನೆಯಲಿ 
ನೀಡಬೇಕಿದೆ ಹೃದಯವ ಬೇಗ 
ಎದುರಾಗಿ ಮೋಹಕ ಮಳೆಗರೆವಾಗ 
ನಿನಗೆಂದೇ ಈ ಸಾಲು 
ಬರೆದಿಡುವೆ ತುಸು ತಾಳು 
ಎದೆಯ ಗೂಡಿನ ಕಾಜಾಣವೇ 

ಹೆಚ್ಚು ಕಮ್ಮಿ ನಾನು ನೀನು
ಒಂದೇ ಎಂಬ ಭಾವನೆ
ಮೂಡುವುದು ಪ್ರೀತಿಯಲಿ
ಬೇಕು ಬೇಡ ಎಲ್ಲವನ್ನೂ 
ಹೇಳದೆಯೇ ಹಾಗೆಯೇ 
ಅರಿಯುವೆವು ಕಣ್ಣಿನಲೆ  
ಹಲವಾರು ತಿರುವುಗಳ 
ದಾಟುವುದೇ ಜೀವನ 
ಇಳಿಜಾರು ನಲಿವಿಗೆ 
ಏರು ಪೇರಿನ ದಾರಿಯೇ ಪ್ರೇರಣಾ 

ಅವ್ಳು ಪಳ್ಳಂತ ನಕ್ಳು

 ಅವ್ಳು ಪಳ್ಳಂತ ನಕ್ಳು

ಒಂದು ಭಾರಿ ಲುಕ್ಕು ಕೊಟ್ಳು
ಅವ್ಳು ಗುಲ್ಕನ್ನು ಬೆಣ್ಣೆ
ನಾನು ಹೇಳಿ ಕೇಳಿ ತಿಕ್ಲು
ಅವ್ಳು ಕಾಟನ್ ಕ್ಯಂಡಿ
ನಾನು ಲೋಕಲ್ ಬ್ರಾಂದಿ
ಜೋಡಿ ಆಗೋದು ಡೌಟಾಗಿದೆ

ಸಮಾಚಾರ ಮಾಮೂಲಿನೇ
ನಮ್ದು ದಿನ ಇದ್ದಿದ್ದೇನೇ
ನಮ್ ಹುಡುಗಿದು ಹಾಗೇನಲ್ಲ
ಹೊಗೋ ಕಡೆಯೆಲ್ಲನೂ ಸುರಿಯೋ ಸೋನೆ

ಕನ್ನಡಿ ಹಿಡಿದರೆ

ಕನ್ನಡಿ ಹಿಡಿದರೆ 

ನನ್ನ ಬಿಂಬವದು ಕನ್ನಡ 
ಮುನ್ನುಡಿ ಕೊಡುತಲೇ  
ಬಾಳ ಮುನ್ನಡೆಸೋ ಕನ್ನಡ 
ಕಂದನ ಅಳುವಿಗೆ 
ತಾಯಿ ಹಾಡುವ ಲಾಲಿ ಕನ್ನಡ
ತೀರದ ದಣಿವನು 
ನೀಗುವ ಸುಧೆ ಸವಿಗನ್ನಡ
ಹಸಿದ ಮನಸಿಗೆ
ಕೈ ತುತ್ತ ನೀಡಿ ಸಲಹುವ ನುಡಿಯಿದು ಕನ್ನಡ.. ಕನ್ನಡ.. ಕನ್ನಡ 

ಬಿದಿರನು ಕೊಳಲಾಗಿಸಿ
ರಾಗ ವರ್ಧಿಸುವ ಕನ್ನಡ 
ಉಸಿರನು ಒಳಗೊಂಡಿದೆ 
ಜೀವಕೆ ನವಿರು ಕನ್ನಡ 
ಅಧರಕೆ ಕೊಡುತಲೇ 
ವಿವಿಧ ಆಕಾರ

ಆರಂಭವೀಗಲೇ

ಆರಂಭವೀಗಲೇ  

ಈ ಪ್ರೀತಿಯೆಂಬ ಮಧುಶಾಲೆ 
ತೇಲಾಡುವಂತಿದೆ 
ನೀ ಕಣ್ಣಿನಲ್ಲಿ ನಗುವಾಗಲೇ 
ಓ ಪ್ರೇಮ ದೇವತೆ
ನಿನ್ನನ್ನು ಕುರಿತೇ 
ಹಾಡೋದು ಜೀವಕೆ ವಾಡಿಕೆ 
ನನ್ನಂತೆ ನಿನ್ನಲೂ 
ವ್ಯತ್ಯಾಸ ಕಂಡರೆ 
ಸಹಜ ಅದು ಬೇಡ ಅಂಜಿಕೆ .. 

ನಿನ್ನಷ್ಟು ಮುದ್ದಾಗಿ 
ಇನ್ನಾರೂ ಕಾಣದೇ 
ನಿನ್ನನ್ನೇ ಹೊಗಳೋ ದಾಸನಾಗುವೆ 
ಕಳ್ಳಾಟವಾಡುತ 
ಸುಳ್ಳನ್ನು ಹೇಳುವೆ 
ನೀ ನಂಬದಿರಲು ಸೋತು ನಗುವೆ 
ಎಲ್ಲಿಂದ ಬಂದೆ ನೀನು 
ಏನಾಗ ಬೇಕು ನೀನು 
ಎಲ್ಲಕ್ಕೂ ಉತ್ತರ ಪ್ರೀತಿ ನೀಡಿದೆ 
ಜೋರಾಗಿ ಕೂಗೋ ಆಸೆ 
ಒಂದಾಗಿ ಬಾಳೋ ಆಸೆ 
ನೀ ಬಂದು ಕನಸೂ ಪೂರ್ಣವಾಗಿದೆ.. ಚೆಲುವೆ.. 

ಆರಂಭವೀಗಲೇ  
ಈ ಪ್ರೀತಿಯೆಂಬ ಮಧುಶಾಲೆ 
ತೇಲಾಡುವಂತಿದೆ 
ನೀ ಕಣ್ಣಿನಲ್ಲಿ ನಗುವಾಗಲೇ 
ಓ ಪ್ರೇಮ ದೇವತೆ
ನಿನ್ನನ್ನು ಕುರಿತೇ 
ಹಾಡೋದು ಜೀವಕೆ ವಾಡಿಕೆ 
ನನ್ನಂತೆ ನಿನ್ನಲೂ 
ವ್ಯತ್ಯಾಸ ಕಂಡರೆ 
ಸಹಜ ಅದು ಬೇಡ ಹೆದರಿಕೆ .. 

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...