Saturday, 25 December 2021

ಶರತ್ಕಾಲದ ಎಲೆಗಳು ಮಾಗಿ

ಶರತ್ಕಾಲದ ಎಲೆಗಳು ಮಾಗಿ 

ಉದುರಿ ಹಾದಿಯೆಲ್ಲ ಹಾಸಿಕೊಂಡಿವೆ 
ಕಾಲಿಟ್ಟಲ್ಲಿ ಕರುಕು ಮುರುಕು ಸದ್ದು 
ನಮ್ಮೊಡನೆ ಮಾತಿಗಿಳಿದಂತೆ

ಬಿಟ್ಟ ಮನೆ ಬೋಳು 
ತಲುಪಿದ್ದು ತಿಪ್ಪೆ 
ಅಡಿಯಲ್ಲಿ ಉಳಿದ ತೇವ 
ಮೇಲೆ ಮತ್ತೂ ಕಮರಿದ ಜೀವ 

ಹೂವು, ಎಲೆ, ಕಾಯಿ 
ಎಲ್ಲಕ್ಕೂ ಕ್ರಮೇಣ ನಿಶ್ಯಕ್ತಿ 
ಟೊಂಗೆ ಟೊಂಗೆಗೂ ಋಣ ಮುಕ್ತಿ
ಬಯಲೊಳು ಬೆತ್ತಲಾದಂತೆ 
ಸಮವಾದವು ಬಣ್ಣ ಭೇದವಿಲ್ಲದೆ 

ಗಾಳಿಗೆ ಹಾರಿದ ಮುಪ್ಪು 
ಕೂತರೆ ಕೊಳೆಯುವುದಷ್ಟೇ
ವಿರೂಪಗೊಂಡರೂ ಸರಿ  
ರೂಪಾಂತರಗೊಳ್ಳುತ್ತಲೇ ಸಾಗಿ 
ಜಾತ್ಯಾತೀತವಾಗುವುದು
ಮತ್ತಾವುದೋ ಬೇರಿಗೆ ಗುಟುಕಾಗಿ 

ಇಬ್ಬನಿ ಕಾಯಬೇಕು ಸಾಧ್ಯವಾದರೆ 
ತೊಟ್ಟು ಕಳಚಿದ ಹುಣ್ಣಿಗೆ 
ಸಿಕ್ಕಿ ತೂಗಬೇಕು, ಇಂಗಬೇಕು
ಅಷ್ಟಲ್ಲದೆ ಚಿಗುರಿಗೆ ಹಂಬಲಿಸುವ 
ತಾತ್ವಿಕತೆ ಒಲಿಯುವುದಿಲ್ಲ 

ಎಲ್ಲವೂ ಒಪ್ಪಿ 
ಮೈಯ್ಯ ಅಪ್ಪಿದವು
ಗಾಳಿ, ಮಳೆ, ಬಿಸಿಲು 
ಸಂಭೋಗ ಕ್ರಿಯೆ!

ಮುಂಬರುವ ಋತುವಿಗೆ  
ಎಲ್ಲವೂ ಮೈನೆರೆಯುತ್ತಾವೆ
ಎಲ್ಲವೂ ಹಿಂದಿನಂತೆ ಹೊಸತು
ಎಲ್ಲಕ್ಕೂ ಎಲ್ಲವೂ ಕಾರಣ 
ಸಾಕ್ಷಾತ್ಕಾರ ಅಂತಃಕರಣ 

ಸೌಂದರ್ಯ ಉಳಿಸಿಕೊಳ್ಳುವುದಲ್ಲ
ಸತ್ತು ಹುಟ್ಟುವುದು
ಕೊಟ್ಟು ಪಡೆಯುವುದು
ಬಿಟ್ಟು ಹಿಡಿಯುವುದು
ಮುಂದೆ ಸಾಗುವುದು...

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...