Saturday, 25 December 2021

ಹಿಮ ಸುರಿದು

ಹಿಮ ಸುರಿದು

ಎಲ್ಲವೂ ಸಮವೇ
ಎಲ್ಲವೂ ಸುಮವೇ

ನೆಲಕೆ ನಭದ 
ಬೇಶರತ್ತು ಶರಣಾಗತಿ
ಬೆಟ್ಟಕೂ, ಇರುವೆ ಗೂಡಿಗೂ
ಒಂದೇ ಸುಣ್ಣದ ಬಣ್ಣ
ದಿಬ್ಬಣಕೆ ಊರಿಗೂರೇ ಸಜ್ಜು

ಬಿಡಿ ಮಲ್ಲಿಗೆ ಕಿಟಕಿಯಲ್ಲಿ
ದಿಂಡು ಕಟ್ಟಿಕೊಂಡಂತೆ
ಬೆರಳ ನೇವರಿಸಿ ಬರಲು
ಕೊಂಡಿ ಕಳಚಿ ಉದುರಿತು

ಮಹಾರಾಜರ ಪಾದುಕೆಯಡಿ
ಖಾಲಿ ಉಳಿದ ಸ್ಥಾನಕ್ಕೆ
ಚಾವಣಿ ಸವಿದು ಬಿಟ್ಟ
ಬೆಣ್ಣೆ ಮುದ್ದೆಯ ಪರಿಹಾರ

ಸವೆದ ಜಾಡಿನ ಜಾಗದಲ್ಲಿ
ಹೊಸ ಹೆಜ್ಜೆ ಗುರುತು
ರಹಸ್ಯವೆಲ್ಲ ಬಟಾ ಬಯಲು
ಹಿಮ ಕರಗದ ಹೊರತು

ಮಧುಮಂಚದ ಸಿಂಗಾರ
ತುಂಬು ಚಂದಿರನ ಕಾವಲು
ರಸಮಯ ಹೊನಲಲ್ಲಿ
ಉನ್ಮಾದ ಉಮ್ಮಳಿಸಲು
ನೆಲದ ನೀಲಿ‌‌ ನಭಕೆ
ನಭದ ಹೊದಿಕೆ ನೆಲಕೆ
ಒಲವು ಅದಲು ಬದಲು 
ಖುಷಿಯ ಮೊಳಕೆ!

ಹಿಮವ ಮೆಟ್ಟಿದವರೆಲ್ಲ
ಜಾರಿ ಬಿದ್ದವರೇ
ಎಲ್ಲೋ ಕೆಲವರಷ್ಟೇ ದಾಟಿ
ಸುಖ ಉಂಡವರು
ತಳ ಹೊಕ್ಕವರು
ತುದಿಗಂಡವರು...

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...