ಅದಾವ ಕನಸಿನ ಮೋಡ
ತೇಲಿ ಬಂದು ಕರಗುತಿದೆ
ಅದಾವ ತೀರದ ಹಾಡು
ಬೇಲಿ ದಾಟಿ ಗುನುಗುತಿದೆ
ಹಿತವಾಗಿ ಬೀಸುವ ತಂಗಾಳಿ
ಬಲವಾಗಿ ಎದೆಗೊಡೋ ಹೂವು
ಮಿತವಾಗಿ ಮಾಗಿದ ಹಣ್ಣಲೂ
ರುಚಿಗಟ್ಟಿ ನೀಗಿತು ಹಸಿವು
ಎಲ್ಲವೂ ಚಂದವೇ ಇಲ್ಲಿ
ಜೋಗುಳ ಹಾಡಿನ ರೀತಿ..
ಅದಾವ ರಾಗವ ಬಯಸಿ
ಬೊಂಬುಗಳ ಹಿಂಡು ನಿಮಿರಿದವು
ಅದಾವ ಸಂಗಮಕಾಗಿ
ಈ ಪುಟ್ಟ ಕಾಲುವೆಯ ಹರಿವು
ಸೆಳೆದಷ್ಟೂ ಬಣ್ಣದ ಮೆರಗು
ಕಣ್ಣಾಲಿ ತುಂಬುವ ಸರದಿ
ಬಿಗಿದಷ್ಟೂ ಎದೆಯಲಿ ಉಸಿರು
ಹೊರ ಉಕ್ಕುವುದು ಅಬ್ಬರದಿ
ಎಲ್ಲವೂ ಸಹಜವೇ ಇಲ್ಲಿ
ಮೇಘವು ಚಲಿಸುವ ರೀತಿ..
ಅದಾವ ಮಿಂಚಿನ ಚಿಲುಮೆ
ತಾರೆಗಳ ತಳಮಳವನಿಣುಕಿ
ಅದಾವ ಕಿಚ್ಚನು ಉರಿಸಿ
ಹೊಳಪ ಶಾಶ್ವತಗೊಳಿಸಿತೋ
ಇಬ್ಬನಿಯದು ಕ್ಷಣಿಕ ಮೋಹ
ಎಲೆದುದಿಗೆ ನಾಳೆ ಹೊಸ ಮುತ್ತು
ಕಂಬನಿಯು ಜಾರಿ ಬರಲು
ಬೇಡಿತು ಸಾಂತ್ವನದ ಸವಲತ್ತು
ಎಲ್ಲವೂ ಸಖ್ಯವೇ ಇಲ್ಲಿ
ನೆರಳು ವರಿಸುವ ರೀತಿ..
No comments:
Post a Comment