ಸ್ಕಾರ್ಫ್ ತೊಟ್ಟ ಹುಡುಗಿಯೇ
ನಿನ್ನ ಕುರುಳ ಬಣ್ಣ ಯಾವುದು
ಉದ್ದವೆಷ್ಟು, ಹೆಣಿಗೆ ಎಂಥದ್ದು?
ದಿನ ನಾ ಹಿತ್ತಿದ ಬಸ್ಸನ್ನೇ ಹತ್ತುತಿ
ಕಾಕತಾಳೀಯವೆಂಬಂತೆ
ಒಮ್ಮೆಯಷ್ಟೇ ನನ್ನತ್ತ ತಿರುಗಿ ನೋಡುತಿ
ನಂತರ ಎಲ್ಲವೂ ಊಹಾಪೋಹಗಳೇ
ಆ ಗೋಜಲು ಮೊಗದಿಂದ ಇಣುಕುವ
ಮಂದಹಾಸವನ್ನ ತಡೆದು
ಏನ ಸಾಧಿಸಲು ಹೊರಟೆ?
ಫೋನಿನೊಟ್ಟಿಗೇ ನಿನ್ನ ನಿತ್ಯ ಹರಟೆ!
ಬೆರಳಿಗೊಂದೆಂಬಂತೆ ಬಿಡಿಸಿಕೊಂಡ
ಉಗುರುಬಣ್ಣ ಸಾರಿದೆ ತಾಳ್ಮೆ
ಸುಕ್ಕು ಹಿಡಿಸದೆ ದುಪಟ್ಟಾವನ್ನು
ಸರಿದೂಗುವುದು ನಿನ್ನ ಜಾಣ್ಮೆ
ಏನೇ ಸದ್ದಾದರೂ ಬೆಚ್ಚಿ ಬೀಳುತಿ
ಖಾಲಿ ಉಳಿದ ಸೀಟಿನ ಮೇಲೆ
ವಿನಾಕಾರಣ ಕೋಪಗೊಂಡಂತೆ
ಬೇಡಿಕೊಂಡರೂ ಕೂರದೆ ನಿಲ್ಲುತಿ
ಗುಟ್ಟುಗಳಿಂದಲೇ ಕಟ್ಟಿಕೊಂಡ ಕೋಟೆಯೊಳಗೆ
ಯಾರನ್ನು ಬರಮಾಡಿಕೊಳ್ಳುತಿ?
ಹೇಗೆ ಸತ್ಕರಿಸುತಿ?
ಯಾರನ್ನು ದಿಕ್ಕರಿಸುತಿ?
ಎಂಬ ಲೆಕ್ಕಾಕಾರಕ್ಕೆ ಬಿದ್ದು ತಲೆ ಚಿತ್ತಾಗಿದೆ
ಕಡೆಗೆ ಸೋಕಲಾದರೂ ಸಿಗಬಾರದೆಂದು
ಬಿಟ್ಟ ಬೆರಳಚ್ಚುಗಳನ್ನೂ ನಾಜೂಕಾಗಿ ಒರೆಸಿ
ಗಂಭೀರವಾಗಿ ಎದೆಯುಬ್ಬಿಸಿ
ದೀರ್ಘ ನಿಟ್ಟುಸಿರ ಬಿಟ್ಟು
ಬಸ್ಸಿನ ಮುಂಬಾಗಿಲೆಡೆಗೆ ಕ್ರಮಿಸುವಾಗ
ಎಲ್ಲೋ ದೂರ ಉಳಿದ ನಿಲ್ದಾಣ
ತಕ್ಷಣ ಹತ್ತಿರ ಬಂದಂತೆ
ಏನೋ ಮರೆತ ಹಾಗೆ ವಾರೆಗಣ್ಣಿನಿಂದ
ಸುತ್ತಲ ಆವರಣವ ಸಾರಿಸಿ
ಬಸ್ಸು ನಿಂತೊಡನೆ ಗಾಳಿಯಂತೆ ಇಳಿದು
ಮಾಯವಾದೆ, ಮತ್ತೆಂದೂ ಸಿಗಲಾರೆಯೆಂಬಂತೆ
ಇದಿಷ್ಟನ್ನು ಅರಗಿಸಿಕೊಳ್ಳುವ ಮೊದಲೇ
ಮತ್ತೊಂದು ದಿನ, ಮತ್ತೊಂದು ಪಯಣ, ಮತ್ತೊಂದು ಭೇಟಿ
ಯಾವುದೊಂದೂ ಬದಲಾಗದೆ
ಕೇವಲ ಸ್ಕಾರ್ಫಿನ ಬಣ್ಣ ಮಾತ್ರ ಹೊಸತು
ಅದೇ ಪ್ರಶ್ನೆ
ಕುರುಳ ಬಣ್ಣ ಯಾವುದು
ಉದ್ದವೆಷ್ಟು, ಹೆಣಿಗೆ ಎಂಥದ್ದು?
No comments:
Post a Comment