Saturday, 19 May 2012

ಅಲೆಮಾರಿ ಅಲೆ

ಇಲ್ಲಿವರೆಗೆ ನಾನೆದ್ದರೆ, ಅಲೆಯೊಂದು ಏಳುತ್ತಿತ್ತು
ಸುತ್ತಲೂ ಸ್ಮಶಾಣ ಮೌನ ಮಾತ್ರವೇ ಕೇಳುತಿತ್ತು
ನೋಡಿ ಸುಮ್ಮನಾಗುತಿದ್ದೆ ಲೋಕವಿಷ್ಟೇ ಅಂದುಕೊಂಡು
ಆದರೂ ಸಣ್ಣ ಕೊತೂಹಲ ಮತ್ತೆ ಯತ್ನಿಸಿತ್ತು
 
ಎತ್ತರಕ್ಕೆ ಜಿಗಿದಾಗೆಲ್ಲ, ನಾನೇ ಎಲ್ಲರಿಗೂ ಮಿಗಿಲು
ಎಂಬ ಅಹಂ ಮೂಡದಿರಲು ನಾನೇನು ಕಲ್ಲಲ್ಲ
ಮತ್ತೆ ಇಳಿಜಾರಿದಾಗ ಎಲ್ಲರ ಸಮ ಆಗುತಿರಲು
ಸಂಕೊಚಕೆ ತಲೆ ಬಾಗಿಸಿ ನಾಚಿದ್ದು ಸುಳಲ್ಲ
 
ನಾ ನಗಿಸಿದಾಟಕ್ಕೆ ನಗೆ ಮೂಡಬೇಕೆನಿಸಿ
ಒತ್ತಾಯಕೆ ಲೋಕವನ್ನು ನಗಿಸುವಂತೆ ಮಾಡಿದೆ
ಎಲ್ಲ ನದಿ ದಾರಿಗೊಂದು ಕಡಲ ತುದಿ ಇದ್ದ ಹಾಗೆ
ನನ್ನ ಅಲ್ಪತನಕೂ ಕೊನೆಗೊಂದು ಗೋಡೆ ಬೇಕಿದೆ
 
ಆಗಾಗ ನನಗೂ ಮೈ ಭಾರವೆನಿಸುತಿತ್ತು
ಅನ್ಯರ ಜಿಗಿತಕ್ಕೆ ನನ್ನ ನಿರ್ಲಕ್ಷ್ಯವಿತ್ತು
ಅಲೆಯೆಬ್ಬಿಸಿ ಯುಗ ಕಳೆದರು ಅಲ್ಲೇ ಕೊಳೆಯುತ್ತಿದ್ದೆ
ಬದಲಿಗೆ ಹಿಂಬರುವ ಅಲೆಗೆ ಸ್ಪಂದಿಸಬಹುದಿತ್ತು
 
ಈಗ ಗೋಚರವಾಗಿದೆ ನನ್ನ ಅಸ್ತಿತ್ವ
ಅರಿತುಕೊಂಡೆ ಕಡಲೊಳಗಿನ ಪಯಣದ ಮಹತ್ವ
ತಿದ್ದುಕೊಂಡೆ ನನ್ನ ಬೆನ್ನ ನಾನೇ ತಟ್ಟಿಕೊಳ್ಳಲಾರೆ
ಎಲ್ಲವೂ ಕಾಲ ಕಲಿಸಿಕೊಟ್ಟ ಮಹತ್ವ
 
ಅರೆ ಬರೆ ಕನಸುಗಳಿಗೆ ಬೆಂಬಲ ಪರರ ಕನಸು
ನನ್ನ ಕನಸೂ ಕೂಡ ಚೆತರಿಸಿತು ಕೆಲವರ
ಅಲ್ಲಿ ಇಲ್ಲಿ ಅಲೆಯುತಿದ್ದೆ ಯಾವುದೋ ಹುಡುಕಾಟಕೆ
ಸುತ್ತಲೇ ಇತ್ತು ನನಗೆ ಸೂಕ್ತವಾದ ಪರಿಸರ
 
ಈಗ ಹಿಂಬರುವ ಅಲೆಗೆ ನನ್ನ ಸಹಕಾರವಿದೆ
ಮುಂದೆ ಎದ್ದೆ ಅಲೆಗೆ ನನ್ನ ಪೂರ್ಣ ಅಧಿಕಾರವಿದೆ
ಈಗ ಬೆಳೆಸೋ ಪಯಣದಲ್ಲಿ ವಿನೂತನ ಖುಷಿಯಿದೆ
ಇನ್ನು ತೀರ ತಲುಪೋ ಸರದಿ ನನ್ನದಾಗಬೇಕಿದೆ......
 
                                              --ರತ್ನಸುತ

No comments:

Post a Comment

ದೂರದಲ್ಲಿ ಯಾರೋ ನನ್ನ ಕೂಗಿದಂತಿದೆ

ದೂರದಲ್ಲಿ ಯಾರೋ ನನ್ನ ಕೂಗಿದಂತಿದೆ  ಹತ್ತಿರದಲ್ಲಿ ಬಂದು ಕೂತುಕೊಂಡ ಹಾಗಿದೆ  ಯಾವ ಮಾತಿಲ್ಲದೆ, ಮೌನವೇ ಸಾಗಿದೆ  ಹೋಗಿ ಬಂದು ನಿಲ್ಲಲಿಲ್ಲ  ಎಚ್ಚರಿಸಿ ಕೇಳಲಿಲ್ಲ ನನ್ನಂತ...