ಒಬ್ಬರ ಬಲಹೀನತೆ, ಮತ್ತೊಬ್ಬರಿಗೆ ಅಸ್ತ್ರ
ಒಬ್ಬನಿಗೆ ಶತ್ರು ಒಬ್ಬ, ಮತ್ತೊಬ್ಬನ ಮಿತ್ರ
ಒಬ್ಬನ ಮುರುಕಲು ಗುಡಿಸಲು,ಮತ್ತೊಬ್ಬನ ಛತ್ರ
ಅವನಿಗಿರದ ಪ್ರಶ್ನೆಗಳಿಗೆ, ಇವನಲ್ಲಿದೆ ಉತ್ರ
ಆಕಾರಕೆ ಬೆಲೆ ಕೊಟ್ಟವ ವಿಕಾರಿಯಾಗುವನು
ಅತಿಯಾಗಿ ಬಯಸುವವನೆ ಬಿಕಾರಿಯಾಗುವನು
ಇಟ್ಟ ಗುರಿಯ ಬೆನ್ನು ಹಟ್ಟುವವನೆ ಶಿಖಾರಿಯಾಗುವನು
ಭಾವನೆಗಳ ಲೆಕ್ಕಿಸುವವ ಸಂಸಾರಿಯಾಗುವನು
ಎಣಿಕೆಗೆ ಸಿಗುವ ಮೆಟ್ಟಿಲು ಎಳಿಗೆಗಾಗಲ್ಲ
ಮಾತಿನಲ್ಲೇ ಮುಗಿವ ಸ್ನೇಹ ಜೀವನಕಾಗಲ್ಲ
ಹೊಟ್ಟೆಗಾಗೆ ಉಣಿಸೋ ಹಾಲು ಎದೆಗೆ ಮೀಸಲಲ್ಲ
ಕಣ್ಣೀರನು ಒರೆಸಲಿಕ್ಕೆ ಕೈಗಳು ಬೇಕಿಲ್ಲ
ಮಿತವಾದ ಸಿಹಿಯ ಹೊತ್ತ ಮಿಟಾಯಿಗಿಲ್ಲ ಹೆಸರು
ನೀರು ಕೂಡ ಹಾದಿ ತಪ್ಪಿ ಆಗಬಹುದು ಕೆಸರು
ನಂಬಿದವನ ನಂಬಿಕೆಗಳೇ ನಾಳೆ ತೋರೋ ಉಸಿರು
ಬೇರು ಗಟ್ಟಿ ಊರಿದಾಗ ನಿಟ್ಟುಸಿರಿನ ತಳಿರು
ಬೆದರು ಬೊಂಬೆ ಕೂಡ ಬೆದರಿಸೋಕೆ ಜೀವ ತಾಳಿದೆ
ಸ್ತಬ್ಧ ಚಿತ್ರವಾದರೂನು ಹೊಸ ಕಣ್ಣ ಸೆಳೆದಿದೆ
ಹಳೆ ದಾರಿ ಅದೇ ತೀರ ತಲುಪಿಸುವುದಲ್ಲದೆ
ತಿರುವು ನೀಡಿದಾಗ ಹೊಸತು ಆಶ್ಚರ್ಯವ ನೀಡದೆ??
ಬಳಕೆಯಿಂದ ಕರಗಿ ಹೋದ ಬಳಪ ಧನ್ಯವಾಯಿತು
ತಿದ್ದಿ ತಿದ್ದಿ ಬರೆದ ಅಕ್ಷರವೇ ಅನ್ನವಾಯಿತು
ಆಕಳಿಕೆಯ ಗಾಳಿ ಅಮ್ಮನನ್ನು ನೆನಪು ಮಾಡಿತು
ಜೊತೆಗಿರುವ ಉಸಿರೇ ಅಮ್ಮನೆನಲು ಸುಮ್ಮನಾಯಿತು
ಹಾಲಿರದ ಗೆಜ್ಜಲನ್ನ ಗುದ್ದಿ, ಗುದ್ದಿ ತೆಗೆದರೆ
ಹಸಿದ ಕಾರುವ ಹಸಿವು ಕೊಂಚವಾದರೂ ನೀಗದೆ?
ಎಲ್ಲ ಮುಗಿಯಿತೆಂದುಕೊಂಡ ಮೇಲೂ ಹರಿವ ಮನಸಿಗೆ
ಹೀಗೆರಡು ಪದವ ಗೀಚಿಕೊಳಲು ಧಿಕ್ಕು ದೊರೆತಿದೆ.....
-- ರತ್ನಸುತ
No comments:
Post a Comment