Friday, 21 December 2012

ಹೆಣ್ಣೇ!!!....... ಕವಿಯಾಗಿಸಿದೆ ನನ್ನ??


























ಬೆನ್ನುಡಿಯಾಗುವೆ ಏಕೆ ಬಾಲೆ?
ನನಗಿಲ್ಲ ಮುಂದೊಂದು, ಹಿಂದೊಂದು ಕಣ್ಣು
ಬರೆಯಿಸಿಕೊಳ್ಳಲು ನನಗಿಲ್ಲ ಚಿಂತೆ
ಬೇಸರ ಇಷ್ಟೇ, ಓದಲಾಗದಲ್ಲ ಅದನ್ನು !!

ಆಟವಾಡುವೆ ಸರಿ, ಬಾರಿ ಘಟಿ ನೀ
ಅದರಲ್ಲೂ, ಕಣ್ಣಾ-ಮುಚ್ಚಾಲೆಯಲಿ ಫಟಿಂಗಿಣಿ
ಕಟ್ಟಿರುವೆ ಬಟ್ಟೆಯ ಕಣ್ಮುಚ್ಚಿಸಿ ನನಗೆ
ಪರಿಣಿತ ನಾನಲ್ಲ, ಸೋಲುವುದು ಖಂಡಿತ, ಕೇಳೆ ತರುಣಿ!!

ಮೆಚ್ಚಿ ನಾ ಬರೆದ, ಒಂದೊಂದು ಪದವೂ
ಚುಚ್ಚು ನಿಂದನೆಯ ಹೊತ್ತು ಛೆಡಿಸಿವೆ ನನ್ನ
ನಿನ್ನ ನೆರಳೆನಾದರೂ ಸೋಕಿತೇ ಅದಕೆ,
ಹಾಗೆ ಸ್ವಭಾವಿಸಲು ಹೋಲುತ ನಿನ್ನ ??!!

ಹಾಗೊಮ್ಮೆ ಬಿಟ್ಟ ಗುರುತನ್ನೂ ಅಳಿಸಿ ಹಾಕುವೆ
ಯಾವುದೇ ಸೂಕ್ಷ್ಮ ಸುಳಿವನ್ನೂ ನೀಡದೆ
ಮೈ ತುಂಬ ಕಣ್ಣು, ಕಿವಿ, ಮೂಗನ್ನು ಇರಿಸಿದೆ
ಹೇಗಾದರೂ ನಿನ್ನ ಸ್ಪರ್ಶಿಸುವ ಸಲುವೇ

ಪಾದ ಕಿರು ಬೆರಳಿಗೆ, ಹೆಬ್ಬೆರಳ ಕಾಟ
ರಂಗೋಲಿ ಬಿಡಿಸಲಾರಂಬಿಸಲು ಪೀಕಲಾಟ
ಹಿಂಬಾಲಕನಾಗುವುದು ಅದಕಿಡದ ಮೀಸಲು
ಗಂಡಸ್ತಿಕೆಯ ಪ್ರಶ್ನಿಸುವ ಗೊಂದಲಾಟ

ಉದುರಿದೆ ಕೇಶ, ವಯಸ್ಸನು ಹೆಚ್ಚಿಸಿ
ಮುದುಡಿದೆ ಅದರವು ಮೌನವನು ಸೂಚಿಸಿ
ಸಂಕೋಚದ ಅಲೆಗಳು ಮನವ ತಟ್ಟಿವೆ
ತೀರದಲಿ ಗೀಚಿದ ಬಯಕೆಗಳ ಅಳಿಸಿ

ಇನ್ನಾದರು ತುಂಬು ಬಾ, ಮುನ್ನುಡಿಯ ಹಾಳೆ
ನಾನಾಗುವೆ ಫಲಕ,ನೀ ಪ್ರಣಯ ಶಾಲೆ
ಕೈಯ್ಯಾರೆ ತಿದ್ದು ನೀ ನನ್ನ ಮಡಿಲಕ್ಷರವ
ಕವಿಯೇ ನಾ, ನೀ ಮೆಚ್ಚುಗೆಯ ಕವಿತೆ ಮಾಲೆ......


                                               --ರತ್ನಸುತ

2 comments:

  1. ಚನ್ನಾಗಿದೆ ರತ್ನಸುತರೇ...
    ಇನ್ನಾದರು ತುಂಬು ಬಾ, ಮುನ್ನುಡಿಯ ಹಾಳೆ
    ನಾನಾಗುವೆ ಪಲಕ,ನೀ ಪ್ರಣಯ ಶಾಲೆ (ಫಲಕ ಅನ್ಸುತ್ತೆ)
    ಕೈಯ್ಯಾರೆ ತಿದ್ದು ನೀ ನನ್ನ ಮಡಿಲಕ್ಷರವ
    ಕವಿಯೇ ನಾ, ನೀ ಮೆಚ್ಚುಗೆಯ ಕವಿತೆ ಮಾಲೆ......

    ಬಹಳ ಸೊಗಸಾದ ಸಾಲುಗಳು.....ಒಂದು ಕಡೆ ಕಂಡಿತ ಅಂತ ಇದೆ...ಅಂದ್ರೆ ಕಾಣಿಸ್ತಾ ಎನ್ನುವುದಕ್ಕೆ ಸೂಚಕವೇ..???

    ReplyDelete
    Replies
    1. ಧನ್ಯವಾದ ಅಜಾದ್ ಸರ್!! :)"ಕಂಡಿತ" ಎಂಬುದು "for sure" ಎಂಬ ನನ್ನ ಕಲ್ಪನೆಯಾಗಿತ್ತು, ಆದರೆ "ಖಂಡಿತ" ಆಗಿರಬೇಕಿತ್ತು ಅನ್ಸುತ್ತೆ....
      ನಿಮ್ಮ ಸೂಚನೆಯಂತೆ ತಿದ್ದುಪಡಿ ಮಾಡುತ್ತೇನೆ, ನನ್ನ ಬೆಂಬಲ್ಕೆ ನಿಮ್ಮ ಸಲಹೆಗಳು ಹೀಗೆ ಮುಂದುವರೆಯಲಿ :)

      Delete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...