Friday, 20 February 2015

ನಿರ್ಗಮನ

ಕೊನೆಗೊಮ್ಮೆ ಕಣ್ಗಪ್ಪನು ಕಣ್ತುಂಬಿಸಿಕೊಳುವೆ
ಕಣ್ಣರಳಿಸಿ ತಲೆಯೆತ್ತಿ ಕಣ್ಣಾಲಿಯ ಬಿಡಿಸು
ಹನಿಯುತ್ತಿದೆ ಹಣೆಯೆಲ್ಲವೂ ಹೀಗಾಗಿದೆ ಇಂದೇ
ನಾವಿಬ್ಬರು ಬೇಟಿಯಾದದ್ದೇ ಒಂದು ಕನಸು

ಮಾತೆಲ್ಲವೂ ಮೊದಲಾಗುವ ಮೊದಲೇ ಕೊನೆಗೊಂಡು
ಬಿಟ್ಟಂತಿದೆ ನಮ್ಮಿಬ್ಬರ ಬಿಡದಂತೆ ಕಾಡಿ
ನಾಚುತ್ತಿವೆ ತುಂಟ ಕವಿತೆಗಳು ಹೊರ ಬರದೆ
ನನ್ನೆದೆಯಿಂದವಳೆದೆಗೆ ಉಸಿರುಗಟ್ಟಿ ಓಡಿ

ನಕ್ಕರೂ ತಾ ನಗದೆ ಹೋದದ್ದೇ ಕೆಡುಕು
ನನ್ನ ನಗುವು ಈಗ ಇನ್ನಷ್ಟು ಅರ್ಥಹೀನ
ಹೆಸರಿಟ್ಟು ಕರೆವಷ್ಟು ಸಲುಗೆ ಬೆಳೆಯಲಿಲ್ಲ
ತಪ್ಪಿತಸ್ಥೆ ಅವಳಾ? ಅಥವ ಬರೆ ನಾನಾ?

ಕೊನೆಗೊಂದು ಬೇಟಿ, ಅಲ್ಲೂ ಚಿರ ಶಾಂತಿ
ಗದ್ದಲ ಎದ್ದರೂ ಎದೆಯಲಿ ಬಿರುಕು ಮೂಡಲಿಲ್ಲ
ಮಗುವಿನಂತೆ ಬಿಗಿದಪ್ಪಿದ ಭಯದಲ್ಲಿ ಚೂರೂ
ಬದಲಾವಣೆಗಳ ಲಕ್ಷಣ ಕಾಣಸಿಗಲೇ ಇಲ್ಲ

ಹೋಗಿ ಬರುವೆ ಅಧಿತಿ, ಕೇಳದಿರು ಪಜೀತಿ
ವಿವರಿಸುತ್ತ ಕೂತರೆ ಜನ್ಮ ಸಾಲದು
ಹಣೆ ಬರಹಕೆ ನೀ ಸಿಗದೆ ದೂರಾಗಿದೆ ಅಕ್ಷರ
ತಲೆ ಸವರಿ ಹೇಳಿದರೂ ಹೃದಯ ಕೇಳದು!!

-- ರತ್ನಸುತ

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...