ಸಿಂಗಲ್ ಬ್ಯಾಟರಿ ಹಾಕಲು ತಾನು
ತಿಂಗಳುಗಟ್ಟಲೇ ಓಡುವುದು
ಕಷ್ಟ ಪಟ್ಟು ಎಷ್ಟೇ ಓಡಲು
ಗೋಡೆಗೇ ಅಂಟಿ ಕೂರುವುದು
ಮೂರೇ ಮುಳ್ಳಿನ ಅಂತರದಲ್ಲಿ
ದಿನದ ಲೆಕ್ಕವ ತಿಳಿಸುವುದು
ಹನ್ನೆರಡನ್ನೆರಡರ ಪಾಳಿಯಲಿ
ಹಗಲು ರಾತ್ರಿ ದುಡಿಯುವುದು
ಕೆಟ್ಟರೂ ಅದು ಎರಡೊತ್ತಿನ ವೇಳೆಯ
ಕರಾರುವಾಕ್ಕು ತಿಳಿಸುವುದು
ತಾಸಿಗೆ ಮೂವತ್ತಾರು ನೂರು
ಕ್ಷಣಗಳು ರೋಚಕ ಅನಿಸುವುದು
ಎಲ್ಲಕೂ ಸಾಕ್ಷಿಯಾದರೂ ಅಲ್ಲಿ
ಯಾರ ಪರವೂ ನಿಲ್ಲದದು
ಲೋಕವೇ ಹತ್ತಿ ಉರಿಯುತಲಿದ್ದರೂ
ಕಾಯಕ ಮುಂದುವರಿಸುವುದು
ತಾತನ ಕಾಲದ ಗಡಿಯಾರವದು
ಒಮ್ಮೆಗೆ ನಿದ್ದೆಗೆ ಜಾರುವುದು
ಕೀಲಿ ಕೊಟ್ಟರೆ ಮತ್ತೆ ಚಿಗರೆಯ
ಧಾಟಿಯಲಿ ಚೇತರಿಸುವುದು
ರಿಮೋಟ್ ಚಾಲಿತ ಗೊಂಬೆಗಳೀಚೆಗೆ
ಕಂತು ಬ್ಯಾಟರಿ ನುಂಗುವುದು
ಈಗಲೂ ಸಿಂಗಲ್ ಬ್ಯಾಟರಿಯಲ್ಲೇ
ತೂಗು ಗಡಿಯಾರ ಓಡುವುದು..
ನಿಜ ಪಳಿಯುಳಿಕೆಗಳು ಬಳಕೆಗೆ ಸುಲಭ ಸಾಧನಗಳು.
ReplyDeleteಪ್ರತಿಮೆಗಳಾಗಲಿ - ಭಾವಾಂತರಗಳಾಗಲಿ...